ಪಾಠ 6
ಹೊಸ ಲೋಕಕ್ಕೆ ಕಾಲಿಟ್ಟ ಎಂಟು ಜನ
ಕೊನೆಗೂ ನೋಹ, ಅವನ ಕುಟುಂಬ ಮತ್ತು ಪ್ರಾಣಿಗಳು ಹಡಗಿನ ಒಳಗೆ ಹೋದರು. ಯೆಹೋವ ದೇವರು ಹಡಗಿನ ಬಾಗಿಲನ್ನು ಗಟ್ಟಿಯಾಗಿ ಮುಚ್ಚಿದನು. ನಂತರ ಧೋ ಅಂತ ಮಳೆ ಸುರಿಯಲು ಆರಂಭವಾಯಿತು. ಮಳೆಯ ಆರ್ಭಟಕ್ಕೆ ಭೂಮಿಯಲ್ಲಿ ನೀರು ತುಂಬಿ ಹಡಗು ತೇಲಲು ಶುರು ಆಯಿತು. ಎಲ್ಲಿ ನೋಡಿದ್ರು ಬರೀ ನೀರು! ಹಡಗು ಹೊರಗಿದ್ದವರೆಲ್ಲಾ ತಮ್ಮ ಪ್ರಾಣಗಳನ್ನು ಕಳೆದುಕೊಂಡರು. ಆದರೆ ನೋಹ ಮತ್ತು ಅವನ ಕುಟುಂಬ ಮಾತ್ರ ಹಡಗಲ್ಲಿ ಸುರಕ್ಷಿತವಾಗಿತ್ತು. ಅವರು ‘ಅಬ್ಬಾ! ಯೆಹೋವ ದೇವರ ಮಾತು ಕೇಳಿದ್ದು ಒಳ್ಳೇದಾಯಿತು’ ಎಂದು ಅಂದುಕೊಂಡಿರಬಹುದು.
40 ದಿನ ಹಗಲು ರಾತ್ರಿ ಧಾರಾಕಾರವಾಗಿ ಸುರಿದ ಮಳೆ ಕೊನೆಗೂ ನಿಂತಿತು. ದಿನದಿಂದ ದಿನಕ್ಕೆ ಭೂಮಿ ಮೇಲಿದ್ದ ನೀರು ಕಡಿಮೆಯಾಗುತ್ತಾ ಹೋಯಿತು. ಒಂದಿನ ಹಡಗು ಬೆಟ್ಟದ ಮೇಲೆ ಬಂದು ನಿಂತಿತು. ಆದರೆ ಭೂಮಿ ಮೇಲೆ ನೀರು ಇನ್ನೂ ಇದ್ದಿದ್ದರಿಂದ ನೋಹನ ಕುಟುಂಬ ಹಡಗೊಳಗೇ ಇರಬೇಕಾಯಿತು.
ತಿಂಗಳುಗಳು ಕಳೆದಂತೆ ನೀರು ಕಡಿಮೆಯಾಯಿತು. ಒಂದು ವರ್ಷಕ್ಕಿಂತ ಹೆಚ್ಚು ಸಮಯ ನೋಹನ ಕುಟುಂಬ ಹಡಗಿನ ಒಳಗೇ ಇತ್ತು. ಆಮೇಲೆ ಯೆಹೋವ ದೇವರು ನೋಹನಿಗೆ ಹಡಗಿಂದ ಹೊರಗೆ ಬರುವಂತೆ ಹೇಳಿದನು. ಆಹಾ! ನೋಹನ ಕುಟುಂಬಕ್ಕೆ ಒಂದು ಹೊಸ ಲೋಕಕ್ಕೆ ಕಾಲಿಟ್ಟ ಅನುಭವ ಆಯಿತು. ಹಡಗಿಂದ ಹೊರಬಂದ ನಂತರ ತಮ್ಮನ್ನು ಕಾಪಾಡಿದ್ದಕ್ಕಾಗಿ ಅವರು ಯೆಹೋವನಿಗೆ ಉಪಕಾರ ಹೇಳಿ ಬಲಿಯನ್ನ ಕೊಟ್ಟರು.
ಆ ಬಲಿಯನ್ನ ಯೆಹೋವನು ಮೆಚ್ಚಿದನು. ಭೂಮಿಯ ಮೇಲಿರುವ ಎಲ್ಲವನ್ನು ಇನ್ನೆಂದಿಗೂ ನೀರಿನಿಂದ ನಾಶ ಮಾಡುವುದಿಲ್ಲ ಎಂದು ಮಾತು ಕೊಟ್ಟನು. ಇದಕ್ಕೆ ಸಾಕ್ಷಿಯಾಗಿ ಆಕಾಶದಲ್ಲಿ ಮೊದಲ ಮಳೆಬಿಲ್ಲು ಕಾಣುವಂತೆ ಮಾಡಿದನು. ನೀವು ಬಣ್ಣಬಣ್ಣದ ಮಳೆಬಿಲ್ಲನ್ನ ನೋಡಿದ್ದೀರಿ ತಾನೇ?
ಆಮೇಲೆ ಯೆಹೋವ ದೇವರು ನೋಹ ಮತ್ತು ಅವನ ಕುಟುಂಬದವರಿಗೆ ಮಕ್ಕಳನ್ನು ಪಡೆದು ಭೂಮಿಯಲ್ಲಿ ತುಂಬಿಕೊಳ್ಳಲು ಹೇಳಿದನು.
‘ನೋಹ ಹಡಗೊಳಗೆ ಹೋಗಿ ಪ್ರಳಯ ಬಂದು ಅವ್ರನ್ನೆಲ್ಲ ಕೊಚ್ಕೊಂಡು ಹೋಗೋ ತನಕ ಅವರು ತಲೆ ಕೆಡಿಸ್ಕೊಳ್ಳಲಿಲ್ಲ.’—ಮತ್ತಾಯ 24:38, 39