ಪ್ರೀತಿಸಲು ಮತ್ತು ಸತ್ಕಾರ್ಯಗಳನ್ನು ಮಾಡಲು ಹುರಿದುಂಬಿಸುವುದು—ಹೇಗೆ?
“ನಾವು ಪ್ರೀತಿಸುವಂತೆ ಮತ್ತು ಸತ್ಕಾರ್ಯಗಳಿಗೆ ಹುರಿದುಂಬಿಸುವಂತೆ ಒಬ್ಬರನ್ನೊಬ್ಬರು ಪರಿಗಣಿಸೋಣ, . . . ಒಬ್ಬರನ್ನೊಬ್ಬರು ಉತ್ತೇಜಿಸುತ್ತಿರುವುದರಿಂದ ಮತ್ತು ಇನ್ನು ಹೆಚ್ಚಿನ ಕಾರಣವಾಗಿ, ಆ ದಿನವು ಸಮೀಪಿಸುತ್ತಿರುವುದನ್ನು ನೋಡುವಾಗ ಮಾಡೋಣ.”—ಇಬ್ರಿಯ 10:24, 25, NW.
1, 2. (ಎ) ಆರಂಭದ ಕ್ರೈಸ್ತರು ತಾವು ಒಟ್ಟಿಗೆ ಕೂಡಿಬರುವುದರಲ್ಲಿ ಸಾಂತ್ವನ ಮತ್ತು ಉತ್ತೇಜನವನ್ನು ಕಂಡುಕೊಳ್ಳುವುದು ಏಕೆ ಪ್ರಾಮುಖ್ಯವಾಗಿತ್ತು? (ಬಿ) ಪೌಲನ ಯಾವ ಸಲಹೆಯು ಒಟ್ಟಿಗೆ ಕೂಡಿಬರುವ ಅಗತ್ಯವನ್ನು ತಿಳಿಸಿತು?
ಅವರು ಗುಟ್ಟಾಗಿ ಸಂಧಿಸಿದರು, ಬೀಗಹಾಕಿ ಭದ್ರಪಡಿಸಲ್ಪಟ್ಟ ಬಾಗಿಲುಗಳ ಹಿಂದೆ ಒಟ್ಟಾಗಿ ಕೂಡಿಕೊಂಡಿದ್ದರು. ಹೊರಗೆ ಎಲ್ಲೆಡೆಯಲ್ಲೂ ಅಪಾಯವು ಹೊಂಚು ಹಾಕುತ್ತಾ ಇತ್ತು. ಅವರ ಮುಖಂಡನಾದ ಯೇಸುವು ಆಗ ತಾನೆ ಬಹಿರಂಗವಾಗಿ ಹತಿಸಲ್ಪಟ್ಟಿದ್ದನು, ಮತ್ತು ವಾಸ್ತವವಾಗಿ ತನ್ನೊಂದಿಗೆ ವರ್ತಿಸಿದ್ದಕ್ಕಿಂತ ಹೆಚ್ಚು ಉತ್ತಮವಾಗಿ ಅವರೊಂದಿಗೆ ವರ್ತಿಸಲಾಗುವುದಿಲ್ಲವೆಂದು ಆತನು ತನ್ನ ಹಿಂಬಾಲಕರನ್ನು ಎಚ್ಚರಿಸಿದ್ದನು. (ಯೋಹಾನ 15:20; 20:19) ಆದರೆ ಅವರು ತಮ್ಮ ಪ್ರಿಯ ಯೇಸುವಿನ ಕುರಿತು ಅಡಗಿಸಿದ ಸದ್ದಿನಲ್ಲಿ ಮಾತಾಡಿದಂತೆ, ಕನಿಷ್ಠ ಪಕ್ಷ ಒಟ್ಟಿಗೆ ಇದ್ದ ಸಂಗತಿಯು ಸುರಕ್ಷಿತವಾದ ಅನುಭವವನ್ನು ಅವರಿಗೆ ನೀಡಿದ್ದಿರಬೇಕು.
2 ವರ್ಷಗಳು ಗತಿಸಿದಂತೆ, ಕ್ರೈಸ್ತರು ಎಲ್ಲ ವಿಧದ ಪರೀಕ್ಷೆಗಳು ಮತ್ತು ಹಿಂಸೆಗಳನ್ನು ಎದುರಿಸಿದರು. ಆ ಪ್ರಥಮ ಶಿಷ್ಯರಂತೆ, ಒಟ್ಟಿಗೆ ಕೂಡಿಬರುವ ಮೂಲಕ ಅವರು ಸಾಂತ್ವನ ಮತ್ತು ಉತ್ತೇಜನವನ್ನು ಪಡೆದುಕೊಂಡರು. ಹೀಗೆ, ಅಪೊಸ್ತಲ ಪೌಲನು ಇಬ್ರಿಯ 10:24, 25, NW ರಲ್ಲಿ ಬರೆದದ್ದು: “ನಾವು ಪ್ರೀತಿಸುವಂತೆ ಮತ್ತು ಸತ್ಕಾರ್ಯಗಳಿಗೆ ಹುರಿದುಂಬಿಸುವಂತೆ ಒಬ್ಬರನ್ನೊಬ್ಬರು ಪರಿಗಣಿಸೋಣ. ಕೆಲವರ ವಾಡಿಕೆಯಂತೆ, ನಮ್ಮ ಕೂಡಿಬರುವಿಕೆಯನ್ನು ತೊರೆಯುತ್ತಿರುವುದರಿಂದ ಅಲ್ಲ, ಬದಲಾಗಿ ಒಬ್ಬರನ್ನೊಬ್ಬರು ಉತ್ತೇಜಿಸುತ್ತಿರುವುದರಿಂದ ಮಾಡೋಣ, ಮತ್ತು ಇನ್ನೂ ಹೆಚ್ಚಿನ ಕಾರಣವಾಗಿ, ಆ ದಿನವು ಸಮೀಪಿಸುತ್ತಿರುವುದನ್ನು ನೋಡುವಾಗ ಮಾಡೋಣ.”
3. ಇಬ್ರಿಯ 10:24, 25 ಕ್ರೈಸ್ತರು ಒಟ್ಟಿಗೆ ಕೂಡಿಬರಬೇಕೆಂಬ ಕೇವಲ ಒಂದು ಆಜೆಗ್ಞಿಂತಲೂ ಅಧಿಕ ಹೆಚ್ಚಿನದ್ದಾಗಿದೆ ಎಂದು ನೀವು ಹೇಗೆ ಹೇಳಸಾಧ್ಯವಿದೆ?
3 ಆ ಮಾತುಗಳು, ಒಟ್ಟಿಗೆ ಕೂಡಿಬರುವುದನ್ನು ಮುಂದುವರಿಸಲಿಕ್ಕಾಗಿರುವ ಒಂದು ಆಜೆಗ್ಞಿಂತಲೂ ಅಧಿಕ ಹೆಚ್ಚಿನವುಗಳಾಗಿವೆ. ಅವು ಎಲ್ಲ ಕ್ರೈಸ್ತ ಕೂಟಗಳಿಗೆ ಮತ್ತು ವಾಸ್ತವವಾಗಿ ಕ್ರೈಸ್ತರು ಒಟ್ಟಿಗೆ ಜತೆಗೂಡುವ ಯಾವುದೇ ಸಂದರ್ಭಕ್ಕಾಗಿ ದೈವಿಕವಾಗಿ ಪ್ರೇರಿತವಾದ ಒಂದು ಮಟ್ಟವನ್ನು ಕೊಡುತ್ತವೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು, ಯೆಹೋವನ ದಿನವು ಸಮೀಪಿಸುತ್ತಾ ಬರುತ್ತದೆ ಎಂದು ನಾವು ಸ್ಪಷ್ಟವಾಗಿಗಿ ನೋಡುವಾಗ, ನಮ್ಮ ಕೂಟಗಳು ಸುರಕ್ಷಿತವಾದ ಒಂದು ವಿಶ್ರಾಂತಿ ಸ್ಥಾನದೋಪಾದಿ, ಎಲ್ಲ ವಿಷಯಗಳಿಗೆ ಬಲ ಮತ್ತು ಉತ್ತೇಜನದ ಒಂದು ಮೂಲವಾಗಿರುವಂತೆ, ಈ ದುಷ್ಟ ವ್ಯವಸ್ಥೆಯ ಒತ್ತಡಗಳು ಮತ್ತು ಅಪಾಯಗಳು ಅವನ್ನು ಅತ್ಯಗತ್ಯವಾದವುಗಳನ್ನಾಗಿ ಮಾಡುತ್ತವೆ. ಇದನ್ನು ನಿಶ್ಚಿತವಾಗಿ ಮಾಡಲು ನಾವೇನು ಮಾಡಬಲ್ಲೆವು? ಒಳ್ಳೇದು ಮುಖ್ಯವಾದ ಮೂರು ಪ್ರಶ್ನೆಗಳನ್ನು ಕೇಳುವ ಮೂಲಕವಾಗಿ ನಾವು ಪೌಲನ ಮಾತುಗಳನ್ನು ಜಾಗರೂಕತೆಯಿಂದ ಪರೀಕ್ಷಿಸೋಣ: “ಒಬ್ಬರನ್ನೊಬ್ಬರು ಪರಿಗಣಿಸು” ವುದು ಎಂಬುದರ ಅರ್ಥವೇನು? ‘ಪ್ರೀತಿಸಲು ಮತ್ತು ಸತ್ಕಾರ್ಯಗಳನ್ನು ಮಾಡಲು ಒಬ್ಬರನ್ನೊಬ್ಬರು ಹುರಿದುಂಬಿಸು’ ವುದು ಎಂಬುದರ ಅರ್ಥವೇನು? ಕೊನೆಯದಾಗಿ, ಈ ಕಷ್ಟದ ಸಮಯಗಳಲ್ಲಿ ನಾವು ಹೇಗೆ ‘ಒಬ್ಬರನ್ನೊಬ್ಬರು ಉತ್ತೇಜಿಸ’ ಬಲ್ಲೆವು?
‘ಒಬ್ಬರನ್ನೊಬ್ಬರು ಪರಿಗಣಿಸಿರಿ’
4. “ಒಬ್ಬರನ್ನೊಬ್ಬರು ಪರಿಗಣಿಸು” ವುದು ಎಂಬುದರ ಅರ್ಥವೇನು?
4 “ಒಬ್ಬರನ್ನೊಬ್ಬರು ಪರಿಗಣಿಸು” ವಂತೆ ಪೌಲನು ಕ್ರೈಸ್ತರಿಗೆ ಪ್ರಚೋದಿಸಿದಾಗ, ಆತನು ಗ್ರೀಕ್ ಕ್ರಿಯಾಪದವಾದ ಕಾಟಾನೋಇಯೋ, “ಗ್ರಹಿಸುವುದು” ಎಂಬ ಸಾಮಾನ್ಯ ಶಬ್ದದ ಆಧಿಕ್ಯ ವಾಚಕ ರೂಪವನ್ನು ಉಪಯೋಗಿಸಿದನು. “ಒಂದು ವಸ್ತುವಿನ ಕಡೆಗೆ ಒಬ್ಬನ ಸಂಪೂರ್ಣ ಮನಸ್ಸನ್ನು ನಿರ್ದೇಶಿಸುವುದು” ಎಂಬುದು ಅದರ ಅರ್ಥವಾಗಿದೆ ಎಂದು ತಿಯೊಲಾಜಿಕಲ್ ಡಿಕ್ಷನರಿ ಆಫ್ ದ ನ್ಯೂ ಟೆಸ್ಟಮೆಂಟ್ ಹೇಳುತ್ತದೆ. ಡಬ್ಲ್ಯು. ಇ. ವೈನ್ಗನುಸಾರ, “ಸಂಪೂರ್ಣವಾಗಿ ಅರಿಯುವುದು, ಆಪ್ತವಾಗಿ ಪರಿಗಣಿಸುವುದು” ಎಂಬುದು ಸಹ ಅದರ ಅರ್ಥವಾಗಿರಬಲ್ಲದು. ಆದುದರಿಂದ ಕ್ರೈಸ್ತರು “ಒಬ್ಬರನ್ನೊಬ್ಬರು ಪರಿಗಣಿಸು” ವಾಗ, ಅವರು ಕೇವಲ ಹೊರನೋಟವನ್ನು ನೋಡುವುದಿಲ್ಲ, ಬದಲಾಗಿ ತಮ್ಮ ಎಲ್ಲ ಮನಶ್ಶಕ್ತಿಗಳನ್ನು ಅವರು ಅನ್ವಯಿಸುತ್ತಾರೆ ಮತ್ತು ಹೆಚ್ಚು ಆಳಕ್ಕೆ ನೋಡಲು ಪ್ರಯತ್ನಿಸುತ್ತಾರೆ.—ಹೋಲಿಸಿ ಇಬ್ರಿಯ 3:1.
5. ಒಬ್ಬ ವ್ಯಕ್ತಿಯ ಕುರಿತು ಸುಲಭವಾಗಿ ಗಮನಿಸದಿರಬಹುದಾದ ಕೆಲವು ಅಂಶಗಳು ಯಾವುವು, ಮತ್ತು ನಾವು ಅವುಗಳನ್ನು ಏಕೆ ಪರಿಗಣಿಸಬೇಕು?
5 ಒಬ್ಬನ ಅಥವಾ ಒಬ್ಬಳ ರೂಪ, ಕೆಲಸಗಳು, ಅಥವಾ ವ್ಯಕ್ತಿತ್ವದ ಕಡೆಗಿನ ಒಂದು ಹೊರಗಣ ನೋಟವು ಪ್ರಕಟಪಡಿಸಬಹುದಾದ ವಿಷಯಕ್ಕಿಂತಲೂ, ವ್ಯಕ್ತಿಯೊಬ್ಬನಿಗೆ ಅಧಿಕ ಹೆಚ್ಚಿನದ್ದು ಇದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕಾದ ಅಗತ್ಯವಿದೆ. (1 ಸಮುವೇಲ 16:7) ಅನೇಕ ವೇಳೆ ಮನಸ್ಸಿನ ಪ್ರಕೃತಿಯು ಒಬ್ಬನ ಆಳವಾದ ಅನಿಸಿಕೆಗಳನ್ನು ಅಥವಾ ಆನಂದಕರವಾದ ಒಂದು ಹಾಸ್ಯ ಪ್ರವೃತ್ತಿಯನ್ನು ಮರೆಮಾಚುತ್ತದೆ. ಅಲ್ಲದೆ, ಹಿನ್ನೆಲೆಗಳು ಸಹ ಬಹಳವಾಗಿ ಭಿನ್ನವಾಗಿರುತ್ತವೆ. ಕೆಲವರು ತಮ್ಮ ಜೀವಿತಗಳಲ್ಲಿ ಭೀಕರವಾದ ಕಠಿನ ಪರೀಕ್ಷೆಗಳನ್ನು ಅನುಭವಿಸಿರುತ್ತಾರೆ; ಇತರರು ನಾವು ಊಹಿಸಿಕೊಳ್ಳಲು ಕಷ್ಟಕರವಾಗಿ ಕಂಡುಕೊಳ್ಳಸಾಧ್ಯವಿರುವ ಸನ್ನಿವೇಶಗಳನ್ನು ಈಗಲೂ ಸಹಿಸಿಕೊಳ್ಳುತ್ತಿದ್ದಾರೆ. ವ್ಯಕ್ತಿಯ ಹಿನ್ನೆಲೆ ಅಥವಾ ಪರಿಸ್ಥಿತಿಗಳ ಕುರಿತು ನಾವು ಹೆಚ್ಚನ್ನು ತಿಳಿಯುವಾಗ, ಹಲವಾರು ಬಾರಿ ಒಬ್ಬ ಸಹೋದರ ಅಥವಾ ಸಹೋದರಿಯ ಯಾವುದೋ ಕೊಂಕು ವರ್ತನೆಯ ಕಡೆಗಿನ ನಮ್ಮ ಸಿಟ್ಟು ಕರಗಿಹೋಗುತ್ತದೆ.—ಜ್ಞಾನೋಕ್ತಿ 19:11.
6. ನಾವು ಒಬ್ಬರನ್ನೊಬ್ಬರು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಸಾಧ್ಯವಿರುವ ಕೆಲವು ವಿಧಗಳು ಯಾವುವು, ಮತ್ತು ಅದರಿಂದ ಯಾವ ಒಳಿತು ಫಲಿಸಬಲ್ಲದು?
6 ನಿಸ್ಸಂದೇಹವಾಗಿ, ಆಮಂತ್ರಿಸಲ್ಪಡದೆ ನಾವು, ಇನ್ನೊಬ್ಬರ ವೈಯಕ್ತಿಕ ವ್ಯವಹಾರಗಳಲ್ಲಿ ತಲೆಹಾಕಬೇಕು ಎಂಬುದು ಇದರ ಅರ್ಥವಲ್ಲ. (1 ಥೆಸಲೊನೀಕ 4:11) ಆದರೂ, ನಿಶ್ಚಯವಾಗಿ ನಾವು ಒಬ್ಬರು ಇನ್ನೊಬ್ಬರಲ್ಲಿ ವೈಯಕ್ತಿಕವಾದ ಆಸಕ್ತಿಯನ್ನು ತೋರಿಸಬಲ್ಲೆವು. ರಾಜ್ಯ ಸಭಾಗೃಹದಲ್ಲಿ ಕೇವಲ ಒಂದು ಅಭಿವಂದನೆಗಿಂತ ಹೆಚ್ಚಿನದ್ದು ಇದರಲ್ಲಿ ಒಳಗೂಡಿದೆ. ನೀವು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳಲು ಬಯಸುವ ಯಾರನ್ನಾದರೂ ಆರಿಸಿಕೊಂಡು, ಕೂಟದ ಮೊದಲು ಅಥವಾ ಕೂಟದ ಬಳಿಕ ಕೆಲವು ನಿಮಿಷಗಳ ಸಂಭಾಷಣೆ ಮಾಡಲಿಕ್ಕಾಗಿ ಗುರಿಯನ್ನು ಇಡಬಾರದೇಕೆ? ಒಬ್ಬರು ಅಥವಾ ಇಬ್ಬರು ಸ್ನೇಹಿತರನ್ನು ಸ್ವಲ್ಪ ಸರಳವಾದ ಉಪಾಹಾರಗಳಿಗಾಗಿ ನಿಮ್ಮ ಮನೆಗೆ ಆಮಂತ್ರಿಸುವ ಮೂಲಕ, “ಅತಿಥಿಸತ್ಕಾರವನ್ನು ಅಭ್ಯಾಸಿ” ಸುವುದು ಇನ್ನೂ ಪ್ರಯೋಜನಕರವಾಗಿರಸಾಧ್ಯವಿದೆ. (ರೋಮಾಪುರ 12:13) ಆಸಕ್ತಿಯನ್ನು ತೋರಿಸಿರಿ. ಕಿವಿಗೊಡಿರಿ. ವ್ಯಕ್ತಿಯೊಬ್ಬನು ಯೆಹೋವನನ್ನು ತಿಳಿಯಲು ಮತ್ತು ಪ್ರೀತಿಸಲು ಹೇಗೆ ಸಾಧ್ಯವಾಯಿತು ಎಂದು ಕೇಳುವುದು ತಾನೇ ಅಧಿಕವಾದುದನ್ನು ಹೊರಪಡಿಸಬಹುದು. ಆದರೂ, ಮನೆ-ಮನೆಯ ಶುಶ್ರೂಷೆಯಲ್ಲಿ ಜತೆಗೂಡಿ ಕೆಲಸಮಾಡುವ ಮೂಲಕವಾಗಿ ನೀವು ಇನ್ನೂ ಹೆಚ್ಚಿನ ವಿಷಯವನ್ನು ತಿಳಿಯಬಹುದು. ಅಂತಹ ವಿಧಗಳಲ್ಲಿ ಒಬ್ಬರನ್ನೊಬ್ಬರು ಪರಿಗಣಿಸುವುದು, ನಿಜವಾದ ಸಹಾನುಭೂತಿ, ಅಥವಾ ಅನುಕಂಪವನ್ನು ವಿಕಸಿಸಲು ನಮಗೆ ಸಹಾಯ ಮಾಡುವುದು.—ಫಿಲಿಪ್ಪಿ 2:4; 1 ಪೇತ್ರ 3:8.
‘ಒಬ್ಬರನ್ನೊಬ್ಬರು ಹುರಿದುಂಬಿಸಿರಿ’
7. (ಎ) ಯೇಸುವಿನ ಬೋಧನೆಯು ಜನರನ್ನು ಹೇಗೆ ಪ್ರಭಾವಿಸಿತು? (ಬಿ) ಆತನ ಬೋಧನೆಯನ್ನು ಅಷ್ಟು ಪ್ರೇರಕವಾಗಿ ಮಾಡಿದ್ದು ಯಾವುದು?
7 ನಾವು ಒಬ್ಬರನ್ನೊಬ್ಬರು ಪರಿಗಣಿಸುವಾಗ, ಹುರಿದುಂಬಿಸಲು, ಕ್ರಿಯೆಗೈಯಲಿಕ್ಕಾಗಿ ಒಬ್ಬರನ್ನೊಬ್ಬರು ಪ್ರಚೋದಿಸಲು, ನಾವು ಹೆಚ್ಚು ಉತ್ತಮವಾಗಿ ಸಿದ್ಧರಾಗಿರುತ್ತೇವೆ. ಈ ಸಂಬಂಧದಲ್ಲಿ ವಿಶೇಷವಾಗಿ ಕ್ರೈಸ್ತ ಹಿರಿಯರು ಪ್ರಮುಖವಾದ ಒಂದು ಪಾತ್ರವನ್ನು ವಹಿಸುತ್ತಾರೆ. ಯೇಸು ಸಾರ್ವಜನಿಕವಾಗಿ ಮಾತಾಡಿ ಮುಗಿಸಿದ ಒಂದು ಸಮಯದ ಕುರಿತಾಗಿ ನಾವು ಓದುವುದು: “ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು.” (ಮತ್ತಾಯ 7:28) ಇನ್ನೊಂದು ಸಂದರ್ಭದಲ್ಲಿ ಆತನನ್ನು ಬಂಧಿಸಲು ಕಳುಹಿಸಲ್ಪಟ್ಟ ಕೆಲವು ಸೈನಿಕರು ಸಹ “ಈ ಮನುಷ್ಯನು ಮಾತಾಡುವ ರೀತಿಯಲ್ಲಿ ಯಾರೂ ಎಂದೂ ಮಾತಾಡಿದ್ದಿಲ್ಲ” ಎಂದು ಹೇಳುತ್ತಾ ಯೇಸುವನ್ನು ಬಿಟ್ಟುಹೋದರು. (ಯೋಹಾನ 7:46) ಯೇಸುವಿನ ಬೋಧನೆಯನ್ನು ಅಷ್ಟು ಪ್ರೇರಕವಾಗಿ ಮಾಡಿದ್ದು ಯಾವುದು? ಭಾವಪರವಶತೆಯ ತೋರಿಸುವಿಕೆಗಳೊ? ಇಲ್ಲ; ಯೇಸು ಅಧಿಕಾರದಿಂದ ಮಾತಾಡಿದನು. ಆದರೂ, ತನ್ನ ಕೇಳುಗರ ಹೃದಯಗಳನ್ನು ತಲಪಲಿಕ್ಕಾಗಿ ಆತನು ಯಾವಾಗಲೂ ಗುರಿಯನ್ನಿಟ್ಟನು. ಏಕೆಂದರೆ ಆತನು ಜನರನ್ನು ಪರಿಗಣಿಸಿದನು, ಅವರನ್ನು ಹೇಗೆ ಪ್ರಚೋದಿಸಬೇಕೆಂಬುದನ್ನು ಆತನು ನಿಖರವಾಗಿ ತಿಳಿದಿದ್ದನು. ದೈನಂದಿನ ಜೀವನದ ನೈಜತೆಗಳನ್ನು ಪ್ರತಿಬಿಂಬಿಸಿದ ಸುವ್ಯಕ್ತವಾದ, ಸರಳ ದೃಷ್ಟಾಂತಗಳನ್ನು ಆತನು ಉಪಯೋಗಿಸಿದನು. (ಮತ್ತಾಯ 13:34) ತದ್ರೀತಿಯಲ್ಲಿ, ನಮ್ಮ ಕೂಟಗಳಲ್ಲಿ ನೇಮಕಗಳನ್ನು ಪೂರೈಸುವವರು, ಪ್ರಚೋದಿಸುವಂತಹ ಹೃತ್ಪೂರ್ವಕವಾದ, ಉತ್ಸುಕತೆಯ ನಿರೂಪಣೆಗಳನ್ನು ಕೊಡುವ ಮೂಲಕ ಯೇಸುವನ್ನು ಅನುಕರಿಸಬೇಕು. ಯೇಸುವಿನಂತೆ, ನಮ್ಮ ಸಭಿಕರಿಗೆ ತಕ್ಕದ್ದಾಗಿ ಹೊಂದಿಕೊಳ್ಳುವ ಮತ್ತು ಅವರ ಹೃದಯಗಳನ್ನು ತಲಪುವ ದೃಷ್ಟಾಂತಗಳನ್ನು ಕಂಡುಕೊಳ್ಳುವುದರಲ್ಲಿ ನಾವು ಶ್ರದ್ಧೆವಹಿಸಿಕೊಳ್ಳಬಲ್ಲೆವು.
8. ಯೇಸು ಮಾದರಿಯ ಮೂಲಕವಾಗಿ ಹೇಗೆ ಹುರಿದುಂಬಿಸಿದನು, ಮತ್ತು ಈ ವಿಷಯದಲ್ಲಿ ನಾವು ಆತನನ್ನು ಹೇಗೆ ಅನುಕರಿಸಬಹುದು?
8 ನಮ್ಮ ದೇವರ ಸೇವೆ ಮಾಡುವುದರಲ್ಲಿ, ಮಾದರಿಯ ಮೂಲಕ ನಾವೆಲ್ಲರು ಒಬ್ಬರನ್ನೊಬ್ಬರು ಹುರಿದುಂಬಿಸಬಹುದು. ನಿಶ್ಚಯವಾಗಿ ಯೇಸು ತನ್ನ ಕೇಳುಗರನ್ನು ಹುರಿದುಂಬಿಸಿದನು. ಕ್ರೈಸ್ತ ಶುಶ್ರೂಷೆಯ ಕೆಲಸವನ್ನು ಆತನು ಪ್ರೀತಿಸಿದನು ಮತ್ತು ಆ ಶುಶ್ರೂಷೆಯನ್ನು ಘನತೆಗೇರಿಸಿದನು. ಅದು ತನಗೆ ಆಹಾರದೋಪಾದಿ ಇತ್ತೆಂದು ಆತನು ಹೇಳಿದನು. (ಯೋಹಾನ 4:34; ರೋಮಾಪುರ 11:13) ಅಂತಹ ಉತ್ಸಾಹವು ಒಬ್ಬರಿಂದೊಬ್ಬರಿಗೆ ಹರಡಸಾಧ್ಯವಿದೆ. ತದ್ರೀತಿಯಲ್ಲಿ ಶುಶ್ರೂಷೆಯಲ್ಲಿ ನಿಮಗಿರುವ ಆನಂದವು ಇತರರಿಗೆ ಸುವ್ಯಕ್ತವಾಗುವಂತೆ ನೀವು ಆಸ್ಪದಕೊಡಬಲ್ಲಿರೊ? ಜಂಬಕೊಚ್ಚುವ ಒಂದು ನಡೆವಳಿಯನ್ನು ಜಾಗರೂಕತೆಯಿಂದ ದೂರಮಾಡುತ್ತಾ, ಸಭೆಯಲ್ಲಿರುವ ಇತರರೊಂದಿಗೆ ನಿಮ್ಮ ಒಳ್ಳೆಯ ಅನುಭವಗಳನ್ನು ಹಂಚಿಕೊಳ್ಳಿರಿ. ನಿಮ್ಮೊಂದಿಗೆ ಕೆಲಸ ಮಾಡುವಂತೆ ಇತರರನ್ನು ನೀವು ಆಮಂತ್ರಿಸುವಾಗ, ನಮ್ಮ ಮಹಾ ಸೃಷ್ಟಿಕರ್ತನಾದ ಯೆಹೋವನ ಕುರಿತು ಇತರರೊಂದಿಗೆ ಮಾತಾಡುವುದರಲ್ಲಿ ಅವರು ನಿಜವಾದ ಸಂತೋಷವನ್ನು ಕಂಡುಕೊಳ್ಳುವಂತೆ ನೀವು ಸಹಾಯ ಮಾಡಬಲ್ಲಿರೋ ಎಂಬುದನ್ನು ಅವಲೋಕಿಸಿರಿ.—ಜ್ಞಾನೋಕ್ತಿ 25:25.
9. (ಎ) ಇತರರನ್ನು ಹುರಿದುಂಬಿಸುವುದರ ಕುರಿತಾಗಿ ನಾವು ದೂರಮಾಡಲು ಬಯಸುವ ಕೆಲವು ವಿಧಗಳಾವುವು, ಮತ್ತು ಏಕೆ? (ಬಿ) ಯೆಹೋವನ ಸೇವೆಯಲ್ಲಿ ನಮ್ಮನ್ನು ನೀಡಿಕೊಳ್ಳಲು ಯಾವುದು ನಮ್ಮನ್ನು ಪ್ರಚೋದಿಸಬೇಕು?
9 ಆದರೂ, ಇತರರನ್ನು ತಪ್ಪಾದ ಮಾರ್ಗದಲ್ಲಿ ಪ್ರೇರೇಪಿಸದಂತೆ ಎಚ್ಚರಿಕೆಯಿಂದಿರಿ. ಉದಾಹರಣೆಗಾಗಿ, ನಾವು ಅಜಾಗರೂಕತೆಯಿಂದ, ತಾವು ಹೆಚ್ಚನ್ನು ಮಾಡುತ್ತಿಲ್ಲ ಎಂಬುದರ ಕುರಿತು ಅವರು ದೋಷಿ ಭಾವವನ್ನು ತಾಳುವಂತೆ ಮಾಡಬಹುದು. ಕ್ರೈಸ್ತ ಚಟುವಟಿಕೆಗಳಲ್ಲಿ ಹೆಚ್ಚು ಪ್ರಧಾನವಾದ ಒಂದು ಪಾಲನ್ನು ಹೊಂದಿರುವ ಇತರರೊಂದಿಗೆ ಅವರನ್ನು ಹೋಲಿಸುವ ಮೂಲಕವಾಗಿ ನಾವು ಉದ್ದೇಶಪೂರ್ವಕವಲ್ಲದೆ ಅವರನ್ನು ಅವಮಾನಗೊಳಿಸಬಹುದು, ಅಥವಾ ನಾವು ಕಠಿನವಾದ ಮಟ್ಟಗಳನ್ನೂ ಸ್ಥಾಪಿಸಿ, ಅವುಗಳನ್ನು ಮುಟ್ಟದವರನ್ನು ನಿಂದಿಸಬಹುದು. ಈ ವಿಧಾನಗಳಲ್ಲಿ ಯಾವುದಾದರೂ, ಕೆಲವರನ್ನು ಸ್ವಲ್ಪ ಸಮಯದ ವರೆಗೆ ಕಾರ್ಯನಡಿಸುವಂತೆ ಪ್ರೇರೇಪಿಸಬಹುದು, ಆದರೆ ಪೌಲನು ‘ದೋಷಿತನಕ್ಕೆ ಮತ್ತು ಸತ್ಕಾರ್ಯಗಳನ್ನು ಮಾಡಲು ಹುರಿದುಂಬಿಸಿರಿ’ ಎಂದು ಬರೆಯಲಿಲ್ಲ. ಇಲ್ಲ, ನಾವು ಪ್ರೀತಿ ಸಲು ಹುರಿದುಂಬಿಸಬೇಕು, ಆಗ ಕಾರ್ಯಗಳು ಒಂದು ಒಳ್ಳೆಯ ಉದ್ದೇಶದಿಂದ ಹಿಂಬಾಲಿಸುವುವು. ತಾನು ನಿರೀಕ್ಷಣೆಗಳನ್ನು ಸಂಪೂರ್ಣವಾಗಿ ಪೂರೈಸದಿರುವುದಾದರೆ, ತನ್ನ ಕುರಿತು ಸಭೆಯಲ್ಲಿರುವ ಇತರರು ಏನೆಂದು ಭಾವಿಸುವರು ಎಂಬುದರ ಕುರಿತಾದ ಪರಿಗಣನೆಯಿಂದ ಯಾರೊಬ್ಬರೂ ಪ್ರಧಾನವಾಗಿ ಪ್ರಚೋದಿಸಲ್ಪಡಬಾರದು.—ಹೋಲಿಸಿ 2 ಕೊರಿಂಥ 9:6, 7.
10. ಇತರರ ನಂಬಿಕೆಯ ವಿಷಯದಲ್ಲಿ ನಾವು ದೊರೆತನಮಾಡುವವರಲ್ಲ ಎಂಬುದನ್ನು ನಾವು ಏಕೆ ಜ್ಞಾಪಕದಲ್ಲಿಡಬೇಕು?
10 ಒಬ್ಬರನ್ನೊಬ್ಬರು ಹುರಿದುಂಬಿಸುವುದು ಅಂದರೆ ಒಬ್ಬರನ್ನೊಬ್ಬರು ನಿಯಂತ್ರಿಸುವುದು ಎಂದು ಅರ್ಥವಲ್ಲ. ತನ್ನ ಎಲ್ಲ ದೇವದತ್ತ ಅಧಿಕಾರಕ್ಕಾಗಿ, ಅಪೊಸ್ತಲ ಪೌಲನು ದೈನ್ಯದಿಂದ ಕೊರಿಂಥದ ಸಭೆಗೆ ಜ್ಞಾಪಕ ಹುಟ್ಟಿಸಿದ್ದು: ‘ನಿಮ್ಮ ನಂಬಿಕೆಯ ವಿಷಯದಲ್ಲಿ ನಾವು ದೊರೆತನಮಾಡುವವರಲ್ಲ.’ (2 ಕೊರಿಂಥ 1:24) ಯೆಹೋವನ ಸೇವೆಯಲ್ಲಿ ಇತರರು ಎಷ್ಟು ಅಧಿಕವಾದುದನ್ನು ಮಾಡಬೇಕು ಎಂದು ನಿರ್ಧರಿಸುವುದಾಗಲಿ, ಇತರ ವೈಯಕ್ತಿಕ ನಿರ್ಣಯಗಳಲ್ಲಿ ಅವರಿಗಾಗಿ ಅವರ ಮನಸ್ಸಾಕ್ಷಿಗಳನ್ನು ಕ್ರಮಪಡಿಸುವುದಾಗಲಿ, ನಮ್ಮ ಕರ್ತವ್ಯವಾಗಿಲ್ಲ ಎಂಬುದನ್ನು ನಾವು ಅವನಂತೆ ದೈನ್ಯದಿಂದ ಗ್ರಹಿಸುವುದಾದರೆ, “ಧರ್ಮವನ್ನು ಅತಿಯಾಗಿ ಆಚರಿ” ಸುವವರು, ಸಂತೋಷರಹಿತರು, ಕಠಿನರು, ನಕಾರಾತ್ಮಕರು, ಅಥವಾ ನಿಬಂಧನೆಯ ನಿರ್ದೇಶಕರೂ ಆಗಿ ಪರಿಣಮಿಸುವುದನ್ನು ನಾವು ತ್ಯಜಿಸುವೆವು. (ಪ್ರಸಂಗಿ 7:16) ಅಂತಹ ಗುಣಗಳು ಹುರಿದುಂಬಿಸುವುದಿಲ್ಲ; ಅವು ದಬ್ಬಾಳಿಕೆ ನಡೆಸುತ್ತವೆ.
11. ಇಸ್ರಾಯೇಲಿನ ಆರಾಧನ ಗುಡಾರದ ಕಟ್ಟುವಿಕೆಯ ದಿನಗಳಲ್ಲಿ ದಾನಗಳ ಕೊಡುವಿಕೆಯನ್ನು ಯಾವುದು ಪ್ರಚೋದಿಸಿತು, ಮತ್ತು ಅದು ನಮ್ಮ ದಿನದಲ್ಲಿ ಹೇಗೆ ಸತ್ಯವಾಗಿರಬಹುದು?
11 ಪುರಾತನ ಇಸ್ರಾಯೇಲಿನಲ್ಲಿ ಆರಾಧನ ಗುಡಾರದ ಕಟ್ಟುವಿಕೆಗಾಗಿ ದಾನಗಳು ಆವಶ್ಯಕವಾಗಿದ್ದಾಗ ಇದ್ದಂತಹದ್ದೇ ಆತ್ಮದಿಂದ, ಯೆಹೋವನ ಸೇವೆಯಲ್ಲಿ ಎಲ್ಲ ಪ್ರಯತ್ನಗಳು ಮಾಡಲ್ಪಡುವಂತೆ ನಾವು ಬಯಸುತ್ತೇವೆ. ವಿಮೋಚನಕಾಂಡ 35:21 ರಲ್ಲಿ ಹೇಳುವುದು: ‘ಯಾರಾರನ್ನು ಹೃದಯವು ಪ್ರೇರಿಸಿತೋ ಯಾರಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕೋಸ್ಕರ ಯೆಹೋವನಿಗೆ ಕಾಣಿಕೆಗಳನ್ನು ತಂದರು.’ ಬಾಹ್ಯ ಒತ್ತಡಗಳಿಂದ ಅವರು ಬಲಾತ್ಕರಿಸಲ್ಪಟ್ಟಿರಲ್ಲಿಲ ಬದಲಾಗಿ ಹೃದಯದಿಂದ, ತಮ್ಮೊಳಗಿದ್ದ ಭಾವಗಳಿಂದ ಪ್ರಚೋದಿಸಲ್ಪಟ್ಟಿದ್ದರು. ವಾಸ್ತವವಾಗಿ, ಇಲ್ಲಿ ಹೀಬ್ರು ಭಾಷೆಯು ಅಕ್ಷರಶಃ, “ಯಾರ ಹೃದಯವು ಅವನನ್ನು ಎತ್ತಿತೊ ಅಂತಹ ಪ್ರತಿಯೊಬ್ಬನು” ಆ ವಿಧದ ಕೊಡುಗೆಗಳನ್ನು ಕೊಟ್ಟನೆಂದು ಓದುತ್ತದೆ. (ಓರೆಅಕ್ಷರಗಳು ನಮ್ಮವು.) ಇಷ್ಟೇ ಅಲ್ಲದೆ, ನಾವೆಲ್ಲರು ಒಟ್ಟಿಗೆ ಇರುವಾಗ ಒಬ್ಬರು ಇನ್ನೊಬ್ಬರ ಹೃದಯಗಳನ್ನು ಮೇಲಕ್ಕೆತ್ತಲು ಪ್ರಯತ್ನ ಮಾಡೋಣ. ಅಗತ್ಯವಾಗಿರುವ ಬೇರೆ ವಿಷಯಗಳನ್ನು ಯೆಹೋವನ ಆತ್ಮವು ಮಾಡಬಲ್ಲದು.
‘ಒಬ್ಬರನ್ನೊಬ್ಬರು ಉತ್ತೇಜಿಸಿರಿ’
12. (ಎ) “ಉತ್ತೇಜಿಸು” ಎಂಬುದಾಗಿ ಭಾಷಾಂತರಿಸಲ್ಪಡುವ ಗ್ರೀಕ್ ಶಬ್ದದ ಕೆಲವು ಅರ್ಥಗಳು ಯಾವುವು? (ಬಿ) ಯೋಬನ ಸಂಗಾತಿಗಳು ಅವನನ್ನು ಉತ್ತೇಜಿಸಲು ಹೇಗೆ ತಪ್ಪಿಹೋದರು? (ಸಿ) ಒಬ್ಬರನ್ನೊಬ್ಬರು ತೀರ್ಪು ಮಾಡುವುದರಿಂದ ನಾವು ಏಕೆ ದೂರವಿರಬೇಕು?
12 ನಾವು ‘ಒಬ್ಬರನ್ನೊಬ್ಬರು ಉತ್ತೇಜಿಸ’ ಬೇಕು ಎಂದು ಪೌಲನು ಬರೆದಾಗ, ಪಾರಾಕಾಲೀಯೋ ಎಂಬ ಗ್ರೀಕ್ ಶಬ್ದದ ಒಂದು ರೂಪವನ್ನು ಆತನು ಉಪಯೋಗಿಸಿದನು. ಅದು ‘ಬಲಪಡಿಸುವುದು, ಸಂತೈಸುವುದು’ ಎಂಬರ್ಥವನ್ನೂ ಹೊಂದಿರಬಲ್ಲದು. ಗ್ರೀಕ್ ಸೆಪ್ಟ್ಯುಅಜಿಂಟ್ ವರ್ಷನ್ನಲ್ಲಿ, ಇದೇ ಶಬ್ದವು ಯೋಬ 29:25 ರಲ್ಲಿ ಉಪಯೋಗಿಸಲ್ಪಟ್ಟಿತು, ಅಲ್ಲಿ ಯೋಬನು ಶೋಕಿಸುವವರನ್ನು ಸಂತೈಸುವಾತನಾಗಿ ವಿವರಿಸಲ್ಪಟ್ಟನು. ಹಾಸ್ಯವ್ಯಂಗ್ಯವಾಗಿ, ಸ್ವತಃ ಯೋಬನು ಕಠಿನವಾದ ಪರೀಕ್ಷೆಯ ಕೆಳಗಿರುವಾಗ, ಅಂತಹ ಯಾವ ಉತ್ತೇಜನವನ್ನೂ ಅವನು ಪಡೆದುಕೊಳ್ಳಲಿಲ್ಲ. ಅವನ ಮೂವರು “ಸಾಂತ್ವನಕಾರರು” ಅವನಿಗೆ ತೀರ್ಪುಕೊಡುತ್ತಾ, ಉಪನ್ಯಾಸಗಳನ್ನು ಕೊಡುತ್ತಾ ಎಷ್ಟು ಕಾರ್ಯಮಗ್ನರಿದ್ದರೆಂದರೆ, ಅವನನ್ನು ಅರಿತುಕೊಳ್ಳಲು ಅಥವಾ ಅವನಿಗಾಗಿ ಅನುಕಂಪವನ್ನು ತೋರಿಸಲು ಅವರು ತಪ್ಪಿಹೋದರು. ವಾಸ್ತವವಾಗಿ, ಅವರು ಮಾಡಿದ ಎಲ್ಲ ಸಂಭಾಷಣೆಗಳಲ್ಲಿ ಒಮ್ಮೆಯಾದರೂ ಅವರು ಯೋಬನನ್ನು ಹೆಸರಿನಿಂದ ಕರೆಯಲಿಲ್ಲ. (ಹೋಲಿಸಿ ಯೋಬ 33:1, 31.) ಅವರು ಅವನನ್ನು ಒಬ್ಬ ವ್ಯಕ್ತಿಯೋಪಾದಿ ಕಾಣುವುದಕ್ಕಿಂತಲೂ ಹೆಚ್ಚಾಗಿ ಅವನನ್ನು ಒಂದು ಸಮಸ್ಯೆಯೋಪಾದಿ ಅವಲೋಕಿಸಿದರು ಎಂಬುದು ಸ್ಪಷ್ಟ. “ನೀವು ನನ್ನ ಸ್ಥಿತಿಯಲ್ಲಿ ಇದ್ದಿದ್ದರೆ” ಎಂದು ಆಶಾಭಂಗದಿಂದ ಯೋಬನು ಅವರನ್ನು ಖಂಡಿಸಿದರ್ದಲ್ಲಿ ಆಶ್ಚರ್ಯವೇನೂ ಇಲ್ಲ! (ಯೋಬ 16:4) ತದ್ರೀತಿಯಲ್ಲಿ ಇಂದು, ಯಾರನ್ನಾದರೂ ಉತ್ತೇಜಿಸಲು ನೀವು ಬಯಸುವುದಾದರೆ, ಸಹಾನುಭೂತಿಯನ್ನು ವ್ಯಕ್ತಪಡಿಸಿರಿ! ತೀರ್ಪು ಮಾಡಬೇಡಿರಿ. ರೋಮಾಪುರ 14:4 ಹೇಳುವಂತೆ, “ಮತ್ತೊಬ್ಬನ ಸೇವಕನ ವಿಷಯವಾಗಿ ತೀರ್ಪುಮಾಡುವದಕ್ಕೆ ನೀನು ಯಾರು? ಅವನು ನಿರ್ದೋಷಿಯಾಗಿ ನಿಂತರೂ ದೋಷಿಯಾಗಿ ಬಿದ್ದರೂ ಅದು ಅವನ ಯಜಮಾನನಿಗೇ ಸೇರಿದ್ದು. ಅವನು ನಿರ್ದೋಷಿಯಾಗಿ ನಿಲ್ಲಿಸಲ್ಪಡುವನು; ಅವನನ್ನು ನಿಲ್ಲಿಸುವದಕ್ಕೆ ಕರ್ತನು [“ಯೆಹೋವನು,” NW] ಶಕ್ತನಾಗಿದ್ದಾನೆ.”
13, 14. (ಎ) ಸಾಂತ್ವನಗೊಳಿಸಲಿಕ್ಕಾಗಿ ಯಾವ ಮೂಲಭೂತವಾದ ಸತ್ಯವನ್ನು ನಮ್ಮ ಸಹೋದರರು ಮತ್ತು ಸಹೋದರಿಯರಿಗೆ ನಾವು ಮನಗಾಣಿಸುವ ಅಗತ್ಯವಿದೆ? (ಬಿ) ದಾನಿಯೇಲನು ಒಬ್ಬ ದೇವದೂತನ ಮೂಲಕವಾಗಿ ಹೇಗೆ ಬಲಗೊಳಿಸಲ್ಪಟ್ಟನು?
13 ಪಾರಾಕಾಲೀಯೋ ಶಬ್ದದ ಒಂದು ರೂಪ ಮತ್ತು ಅದರ ಸಂಬಧಿತ ನಾಮಪದವು, 2 ಥೆಸಲೊನೀಕ 2:16, 17 ರಲ್ಲಿ “ಸಾಂತ್ವನ” ಎಂಬುದಾಗಿ ಭಾಷಾಂತರಿಸಲ್ಪಟ್ಟಿದೆ: “ನಮ್ಮನ್ನು ಪ್ರೀತಿಸಿ ನಮಗೆ ನಿತ್ಯವಾದ ಆದರಣೆ [“ಸಾಂತ್ವನ,” NW] ಯನ್ನೂ ಉತ್ತಮವಾದ ನಿರೀಕ್ಷೆಯನ್ನೂ ಕೃಪೆಯಿಂದ ಅನುಗ್ರಹಿಸಿದ ನಮ್ಮ ತಂದೆಯಾದ ದೇವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನೂ ನಿಮ್ಮ ಹೃದಯಗಳನ್ನು ಸಂತೈಸಿ ಸಕಲ ಸತ್ಕಾರ್ಯದಲ್ಲಿಯೂ ಸ್ವದ್ಯಾಕದಲ್ಲಿಯೂ ದೃಢಪಡಿಸಲಿ.” ಪೌಲನು, ನಮ್ಮ ಹೃದಯಗಳು ಸಾಂತ್ವನಗೊಳಿಸಲ್ಪಟ್ಟಿರುವ ವಿಚಾರವನ್ನು, ಯೆಹೋವನು ನಮ್ಮನ್ನು ಪ್ರೀತಿಸುತ್ತಾನೆ ಎಂಬ ಮೂಲಭೂತವಾದ ಸತ್ಯದೊಂದಿಗೆ ಜತೆಗೂಡಿಸುವುದನ್ನು ಗಮನಿಸಿರಿ. ಆದುದರಿಂದ ಪ್ರಾಮುಖ್ಯವಾದ ಆ ಸತ್ಯವನ್ನು ಪುಷ್ಟೀಕರಿಸುವ ಮೂಲಕವಾಗಿ ನಾವು ಒಬ್ಬರನ್ನೊಬ್ಬರು ಉತ್ತೇಜಿಸಬಹುದು ಮತ್ತು ಸಾಂತ್ವನಗೊಳಿಸಬಹುದು.
14 ಒಂದು ಸಂದರ್ಭದಲ್ಲಿ ಪ್ರವಾದಿಯಾದ ದಾನಿಯೇಲನು ಭಯಗೊಳಿಸುವ ಒಂದು ದರ್ಶನವನ್ನು ನೋಡಿದ ಬಳಿಕ ಎಷ್ಟು ಕ್ಷೇಭೆಗೊಳಿಸಲ್ಪಟ್ಟನೆಂದರೆ, ಆತನು ಹೇಳಿದ್ದು: “ನಾನು ಶಕ್ತಿಯನ್ನೆಲ್ಲಾ ಕಳಕೊಂಡೆನು, ನನ್ನ ಗಾಂಭೀರ್ಯವು ಹಾಳಾಯಿತು, ನಿತ್ರಾಣನಾದೆನು.” ಆತನು ದೇವರ ದೃಷ್ಟಿಯಲ್ಲಿ “ಅತಿಪ್ರಿಯ” ನಾಗಿದ್ದನೆಂದು ದಾನಿಯೇಲನಿಗೆ ಅನೇಕ ಬಾರಿ ಜ್ಞಾಪಿಸಿದ ಒಬ್ಬ ದೇವದೂತನನ್ನು ಯೆಹೋವನು ಕಳುಹಿಸಿದನು. ಫಲಿತಾಂಶವೇನು? ದಾನಿಯೇಲನು ದೇವದೂತನಿಗೆ ಹೇಳಿದ್ದು: ‘ನೀನು ನನ್ನನ್ನು ಬಲಗೊಳಿಸಿದ್ದೀ.’—ದಾನಿಯೇಲ 10:8, 11, 19.
15. ಹಿರಿಯರು ಮತ್ತು ಸಂಚರಣ ಮೇಲ್ವಿಚಾರಕರು ತಿದ್ದುಪಾಟಿನೊಂದಿಗೆ ಪ್ರಶಂಸೆಯನ್ನು ಹೇಗೆ ಸರಿದೂಗಿಸಬೇಕು?
15 ಹಾಗಾದರೆ, ಒಬ್ಬರನ್ನೊಬ್ಬರು ಉತ್ತೇಜಿಸಲಿಕ್ಕಾಗಿ ಇನ್ನೊಂದು ವಿಧಾನವು ಇಲ್ಲಿದೆ. ಅವರನ್ನು ಪ್ರಶಂಸಿಸಿರಿ! ವಿಮರ್ಶಾತ್ಮಕವಾದ, ನಿಷ್ಠುರವಾದ ಒಂದು ಮನೋಭಾವದೊಳಗೆ ಜಾರಿ ಹೋಗುವುದು ಬಹಳ ಸುಲಭ. ವಿಶೇಷವಾಗಿ ಹಿರಿಯರು ಮತ್ತು ಸಂಚರಣ ಮೇಲ್ವಿಚಾರಕರಿಂದ, ತಿದ್ದುಪಾಟು ಅಗತ್ಯವಾಗಿರಬಹುದಾದ ಸಮಯಗಳು ಇವೆ ಎಂಬುದು ಒಪ್ಪಿಕೊಳ್ಳಬೇಕಾದ ವಿಷಯ. ಆದರೆ ತಪ್ಪುಹುಡುಕುವ ಮನೋಭಾವದ ಬದಲಾಗಿ ಅವರು ಹೃತ್ಪೂರ್ವಕವಾದ ಉತ್ತೇಜನವನ್ನು ಕೊಡುವ ಕಾರಣದಿಂದ ಅವರು ಜ್ಞಾಪಿಸಿಕೊಳ್ಳಲ್ಪಡುವಲ್ಲಿ, ಅದು ಅವರಿಗೆ ಪ್ರಯೋಜನಕರವಾಗಿರಸಾಧ್ಯವಿದೆ.
16. (ಎ) ಖಿನ್ನರಾದವರನ್ನು ಉತ್ತೇಜಿಸುವಾಗ, ಅವರನ್ನು ಕೇವಲ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಿರೆಂದು ಪ್ರಚೋದಿಸುವುದು ಮಾತ್ರ ಅನೇಕ ವೇಳೆ ಸಾಕಾಗಲಾರದು ಏಕೆ? (ಬಿ) ಎಲೀಯನು ಖಿನ್ನನಾಗಿದ್ದಾಗ ಯೆಹೋವನು ಅವನಿಗೆ ಹೇಗೆ ಸಹಾಯ ಮಾಡಿದನು?
16 ನಿರ್ದಿಷ್ಟವಾಗಿ ಖಿನ್ನರಾಗಿರುವವರಿಗೆ ಉತ್ತೇಜನದ ಆವಶ್ಯಕತೆಯಿದೆ, ಮತ್ತು ವಿಶೇಷವಾಗಿ ನಾವು ಹಿರಿಯರಾಗಿರುವುದಾದರೆ, ಜೊತೆ ಕ್ರೈಸ್ತರೋಪಾದಿ ನಾವು ಸಹಾಯದ ಒಂದು ಮೂಲವಾಗಿರುವುದನ್ನು ಯೆಹೋವನು ನಮ್ಮಿಂದ ಅಪೇಕ್ಷಿಸುತ್ತಾನೆ. (ಜ್ಞಾನೋಕ್ತಿ 21:13) ನಾವೇನು ಮಾಡಬಲ್ಲೆವು? ಉತ್ತರವು, ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಿರಿ ಎಂದು ಅವರಿಗೆ ಹೇಳುವಷ್ಟು ಸರಳವಾಗಿ ಬಹುಶಃ ಇರಲಾರದು. ಏಕೆ? ಏಕೆಂದರೆ ಅವರ ಖಿನ್ನತೆಯು ಅವರು ಸಾಕಷ್ಟು ಸೇವೆಯನ್ನು ಮಾಡುತ್ತಿಲ್ಲದ ಕಾರಣದಿಂದಲೇ ಎಂಬುದನ್ನು ಅದು ಸೂಚಿಸಬಹುದು. ಸಾಮಾನ್ಯವಾಗಿ ಸನ್ನಿವೇಶವು ಅದಾಗಿರುವುದಿಲ್ಲ. ಪ್ರವಾದಿ ಎಲೀಯನು ಒಮ್ಮೆ ಎಷ್ಟು ಗಂಭೀರವಾಗಿ ಖಿನ್ನನಾಗಿದ್ದನೆಂದರೆ ಅವನು ಸಾಯಲು ಅಪೇಕ್ಷಿಸಿದನು; ಆದರೂ ಅವನು ಯೆಹೋವನಿಗೆ ತನ್ನ ಸೇವೆಯಲ್ಲಿ ವಿಪರೀತವಾಗಿ ಕಾರ್ಯಮಗ್ನನಾಗಿದ್ದಂತಹ ಒಂದು ಸಮಯದಲ್ಲಿ ಇದು ಸಂಭವಿಸಿತು. ಯೆಹೋವನು ಅವನೊಂದಿಗೆ ಹೇಗೆ ವ್ಯವಹರಿಸಿದನು? ಪ್ರಾಯೋಗಿಕವಾದ ಸಹಾಯವನ್ನು ಒದಗಿಸಲಿಕ್ಕಾಗಿ ಆತನು ಒಬ್ಬ ದೇವದೂತನನ್ನು ಕಳುಹಿಸಿದನು. ತನ್ನ ಎಲ್ಲ ಕೆಲಸವು ವ್ಯರ್ಥವಾಗಿ ಹೋಗಿದ್ದರಿಂದ ಮತ್ತು ತಾನು ಸಂಪೂರ್ಣವಾಗಿ ಒಂಟಿಯಾದುದರಿಂದ, ತಾನು ತನ್ನ ಮೃತ ಪಿತೃಗಳಷ್ಟೇ ಅಯೋಗ್ಯನೆಂಬ ಭಾವನೆಯು ತನಗಾಯಿತೆಂದು ತಿಳಿಸುವ ಮೂಲಕ ಎಲೀಯನು ತನ್ನ ಗಾಢವಾದ ಭಾವನೆಗಳನ್ನು ಯೆಹೋವನಿಗೆ ವ್ಯಕ್ತಪಡಿಸಿದನು. ಯೆಹೋವನು ಕಿವಿಗೊಟ್ಟನು ಮತ್ತು ತನ್ನ ಶಕ್ತಿಯ ಭಯಭಕ್ತಿ ಹುಟ್ಟಿಸುವ ಪ್ರದರ್ಶನಗಳಿಂದ ಮತ್ತು ನಿಶ್ಚಯವಾಗಿ ಅವನು ಒಂಟಿಯಾಗಿಲವ್ಲೆಂದು, ಹಾಗೂ ಅವನು ಆರಂಭಿಸಿದ್ದ ಕೆಲಸವು ಪೂರ್ಣಗೊಳಿಸಲ್ಪಡುವುದೆಂಬ ಆಶ್ವಾಸನೆಗಳಿಂದ ಅವನನ್ನು ಸಾಂತ್ವನಗೊಳಿಸಿದನು. ಕ್ರಮೇಣ ಅವನ ತರುವಾಯ ಪ್ರವಾದಿಯಾಗಿ ಬರುವವನಿಗೆ ತರಬೇತಿಯನ್ನು ಕೊಡಲಿಕ್ಕಾಗಿ ಒಬ್ಬ ಸಂಗಾತಿಯನ್ನು ಕೊಡುವೆನೆಂದು ಸಹ ಯೆಹೋವನು ಎಲೀಯನಿಗೆ ವಾಗ್ದಾನ ಮಾಡಿದನು.—1 ಅರಸು 19:1-21.
17. ತನ್ನನ್ನು ಅತಿಯಾಗಿ ಕೀಳು ಭಾವದಿಂದ ನೋಡಿಕೊಳ್ಳುವ ಒಬ್ಬರನ್ನು ಹಿರಿಯನು ಹೇಗೆ ಉತ್ತೇಜಿಸಬಹುದು?
17 ಎಷ್ಟು ಉತ್ತೇಜನಕರವಾಗಿದೆ! ನಮ್ಮ ನಡುವೆ ಭಾವನಾತ್ಮಕವಾಗಿ ಕ್ಷೋಭೆಗೊಳಗಾಗಿರುವವರನ್ನು ನಾವು ತದ್ರೀತಿಯಲ್ಲಿ ಉತ್ತೇಜಿಸೋಣ. ಕಿವಿಗೊಡುವ ಮೂಲಕವಾಗಿ ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿರಿ! (ಯಾಕೋಬ 1:19) ಅವರ ವೈಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಸರಿಹೊಂದಿಸಿದ ಶಾಸ್ತ್ರೀಯ ಸಾಂತ್ವನವನ್ನು ಒದಗಿಸಿರಿ. (ಜ್ಞಾನೋಕ್ತಿ 25:11; 1 ಥೆಸಲೊನೀಕ 5:14) ತಮ್ಮನ್ನು ಅತಿಯಾಗಿ ಕೀಳು ಭಾವದಿಂದ ನೋಡಿಕೊಳ್ಳುವವರನ್ನು ಉತ್ತೇಜಿಸಲಿಕ್ಕಾಗಿ, ಯೆಹೋವನು ಅವರನ್ನು ಪ್ರೀತಿಸುತ್ತಾನೆ ಮತ್ತು ಅಮೂಲ್ಯವೆಂದೆಣಿಸುತ್ತಾನೆ ಎಂಬ ಶಾಸ್ತ್ರೀಯ ಪುರಾವೆಯನ್ನು ಹಿರಿಯರು ದಯೆಯಿಂದ ಒದಗಿಸಬಹುದು.a ಅಯೋಗ್ಯರೆಂಬ ಭಾವನೆಯುಳ್ಳವರನ್ನು ಉತ್ತೇಜಿಸಲಿಕ್ಕಾಗಿ ಪ್ರಾಯಶ್ಚಿತವ್ತನ್ನು ಚರ್ಚಿಸುವುದು ಒಂದು ಪ್ರಬಲವಾದ ಸಾಧನವಾಗಿರಸಾಧ್ಯವಿದೆ. ಯಾವುದೋ ಗತ ಪಾಪದ ಕುರಿತು ದುಃಖ ಪಡುವಾತನಿಗೆ, ಅವನು ನಿಜವಾಗಿಯೂ ಪಶ್ಚಾತ್ತಾಪಪಟ್ಟಿರುವುದಾದರೆ ಮತ್ತು ಅಂತಹ ಯಾವುದೇ ಅಭ್ಯಾಸವನ್ನು ಸಂಪೂರ್ಣವಾಗಿ ತೊರೆದಿರುವುದಾದರೆ, ಪ್ರಾಯಶ್ಚಿತವ್ತು ಅವನನ್ನು ಶುದ್ಧಿಗೊಳಿಸಿದೆ ಎಂದು ತೋರಿಸಲ್ಪಡಬೇಕಾದ ಅಗತ್ಯವಿರಬಹುದು.—ಯೆಶಾಯ 1:18.
18. ಬಲಾತ್ಕಾರ ಸಂಭೋಗದಂತಹ, ಇನ್ನೊಬ್ಬನಿಗೆ ಆಹುತಿಯಾಗಿರುವ ಒಬ್ಬನನ್ನು ಉತ್ತೇಜಿಸಲಿಕ್ಕಾಗಿ ಪ್ರಾಯಶ್ಚಿತದ್ತ ಬೋಧನೆಯು ಹೇಗೆ ಉಪಯೋಗಿಸಲ್ಪಡಬೇಕು?
18 ನಿಸ್ಸಂದೇಹವಾಗಿ, ಆ ಬೋಧನೆಯನ್ನು ಸರಿಯಾಗಿ ಉಪಯೋಗಿಸಲಿಕ್ಕಾಗಿ ಹಿರಿಯನು ನಿರ್ದಿಷ್ಟ ಕೇಸಿಗೆ ಮನಸ್ಸುಕೊಡುವನು. ಒಂದು ಉದಾಹರಣೆಯನ್ನು ಪರಿಗಣಿಸಿರಿ: ಎಲ್ಲ ಪಾಪಗಳ ಪರಿಹಾರಕ್ಕಾಗಿ ಅಗತ್ಯವಾಗಿದ್ದ, ಮೋಶೆಯ ನಿಯಮಶಾಸ್ತ್ರದ ಪ್ರಾಣಿ ಯಜ್ಞಗಳಿಂದ ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞವು ಮುನ್ಚಿತ್ರಿಸಲ್ಪಟ್ಟಿತು. (ಯಾಜಕಕಾಂಡ 4:27, 28) ಆದರೂ, ಬಲಾತ್ಕಾರ ಸಂಭೋಗಕ್ಕೆ ಆಹುತಿಯಾಗುವವಳೊಬ್ಬಳು ಅಂತಹ ಒಂದು ಪಾಪ ನಿವೇದನೆಯನ್ನು ಮಾಡಬೇಕೆಂಬ ಯಾವುದೇ ನಿರ್ಬಂಧವಿರಲಿಲ್ಲ. ಅವರು ಅವಳನ್ನು ‘ಯಾವ ಶಿಕ್ಷೆಗೂ ಒಳಪಡಿಸಬಾರದು’ ಎಂದು ನಿಯಮಶಾಸ್ತ್ರವು ಹೇಳಿತ್ತು. (ಧರ್ಮೋಪದೇಶಕಾಂಡ 22:25-27) ಆದುದರಿಂದ ಇಂದು, ಒಬ್ಬ ಸಹೋದರಿಯು ಆಕ್ರಮಣ ಮಾಡಲ್ಪಟ್ಟು, ಬಲಾತ್ಕಾರ ಸಂಭೋಗಕ್ಕೀಡಾಗಿದ್ದರೆ ಮತ್ತು ಇದು ತಾನು ಅಯೋಗ್ಯಳು ಮತ್ತು ಅಶುದ್ಧಳು ಎಂದು ಅವಳು ಭಾವಿಸುವಂತೆ ಮಾಡಿದ್ದರೆ, ಆ ಪಾಪದಿಂದ ಅವಳನ್ನು ಶುದ್ಧಿಮಾಡಲಿಕ್ಕಾಗಿ ಪ್ರಾಯಶ್ಚಿತದ್ತ ಅಗತ್ಯದ ಕುರಿತು ಅವಳಿಗೆ ಒತ್ತಯಾಪಡಿಸುವುದು ಸೂಕ್ತವಾಗಿರುವುದೋ? ನಿಶ್ಚಯವಾಗಿ ಇಲ್ಲ. ಅತ್ಯಾಚಾರ ನಡೆಸಲ್ಪಟ್ಟಿರುವುದರಿಂದ ಅವಳು ಪಾಪ ಮಾಡಲಿಲ್ಲ. ಬಲಾತ್ಕಾರ ಸಂಭೋಗ ನಡೆಸಿದವನು ಪಾಪ ಮಾಡಿದ್ದವನಾಗಿದ್ದಾನೆ ಮತ್ತು ಅವನು ಶುದ್ಧಿಮಾಡಿಕೊಳ್ಳುವ ಆವಶ್ಯಕತೆಯಿದೆ. ಆದಾಗಲೂ, ಅವಳು ದೇವರ ದೃಷ್ಟಿಯಲ್ಲಿ ಬೇರೊಬ್ಬರ ಪಾಪದಿಂದ ಕಲುಷಿತಳಾಗಿಲ್ಲ ಬದಲಾಗಿ ಅವಳು ಯೆಹೋವನಿಗೆ ಅಮೂಲ್ಯಳಾಗಿದ್ದಾಳೆ ಮತ್ತು ಆತನ ಪ್ರೀತಿಯಲ್ಲಿ ಉಳಿಯುತ್ತಾಳೆ ಎಂಬುದಕ್ಕೆ, ಪ್ರಾಯಶ್ಚಿತವ್ತನ್ನು ಒದಗಿಸುವುದರಲ್ಲಿ ಯೆಹೋವನು ಮತ್ತು ಕ್ರಿಸ್ತನಿಂದ ತೋರಿಸಲ್ಪಟ್ಟ ಪ್ರೀತಿಯನ್ನು ಪುರಾವೆಯನ್ನಾಗಿ ಉಪಯೋಗಿಸಬಹುದಾಗಿದೆ.—ಹೋಲಿಸಿ ಮಾರ್ಕ 7:18-23; 1 ಯೋಹಾನ 4:16.
19. ನಮ್ಮ ಸಹೋದರರು ಮತ್ತು ಸಹೋದರಿಯರೊಂದಿಗಿನ ಎಲ್ಲ ಸಹವಾಸವು ಉತ್ತೇಜನಕರವಾಗಿರುವುದೆಂದು ನಾವು ಏಕೆ ನಿರೀಕ್ಷಿಸಬಾರದು, ಆದರೆ ನಮ್ಮ ದೃಢ ನಿಶ್ಚಯವೇನಾಗಿರಬೇಕು?
19 ಹೌದು, ಜೀವನದಲ್ಲಿ ವ್ಯಕ್ತಿಯೊಬ್ಬನ ಸನ್ನಿವೇಶವು ಹೇಗಿರುವುದಾದರೂ, ಯಾವುದೇ ವೇದನಾಭರಿತ ಪರಿಸ್ಥಿತಿಗಳು ಅವನ ಗತಕಾಲಕ್ಕೆ ಮಸಿ ಬಳಿದಿದ್ದರೂ, ಯೆಹೋವನ ಜನರ ಸಭೆಯಲ್ಲಿ ಅವನು ಉತ್ತೇಜನವನ್ನು ಕಂಡುಕೊಳ್ಳಲು ಶಕ್ತನಿರಬೇಕು. ಮತ್ತು ನಾವು ಒಟ್ಟಿಗೆ ಸಹವಾಸಿಸುವಾಗೆಲ್ಲ ನಮ್ಮಲ್ಲಿ ಪ್ರತಿಯೊಬ್ಬರು ಒಬ್ಬರನ್ನೊಬ್ಬರು ಪರಿಗಣಿಸಲು, ಒಬ್ಬರನ್ನೊಬ್ಬರು ಹುರಿದುಂಬಿಸಲು, ಮತ್ತು ಒಬ್ಬರನ್ನೊಬ್ಬರು ಉತ್ತೇಜಿಸಲು ವೈಯಕ್ತಿಕವಾಗಿ ಪ್ರಯತ್ನಿಸುವುದಾದರೆ, ಅವನು ಉತ್ತೇಜನವನ್ನು ಕಂಡುಕೊಳ್ಳುವನು. ಆದರೂ, ಅಪರಿಪೂರ್ಣರಾಗಿರುವುದರಿಂದ ನಾವೆಲ್ಲರು ಹಾಗೆ ಮಾಡಲು ಆಗಾಗ ತಪ್ಪುತ್ತೇವೆ. ಅನಿವಾರ್ಯವಾಗಿ, ನಾವು ಒಬ್ಬರನ್ನೊಬ್ಬರು ನಿರಾಶೆಗೊಳಿಸುತ್ತೇವೆ ಮತ್ತು ಆಗಾಗ ಒಬ್ಬರನ್ನೊಬ್ಬರು ನೋಯಿಸುತ್ತೇವೆ ಸಹ. ಈ ವಿಷಯದಲ್ಲಿ ಇನ್ನೊಬ್ಬರ ತಪ್ಪುವಿಕೆಗಳ ಮೇಲೆ ಕೇಂದ್ರೀಕರಿಸದಿರಲು ಪ್ರಯತ್ನಿಸಿರಿ. ನ್ಯೂನತೆಗಳ ಮೇಲೆ ನೀವು ಕೇಂದ್ರೀಕರಿಸುವುದಾದರೆ, ಸಭೆಯ ಕುರಿತು ವಿಪರೀತವಾಗಿ ತಪ್ಪನ್ನು ಕಂಡುಹಿಡಿಯುವವರಾಗಿ ಪರಿಣಮಿಸುವ ಅಪಾಯ ಸಂಭವವಿದೆ ಮತ್ತು ಯಾವುದರಿಂದ ದೂರವಿರುವಂತೆ ನಮಗೆ ಸಹಾಯ ಮಾಡಲಿಕ್ಕಾಗಿ ಪೌಲನು ಅಷ್ಟು ಕಾತುರದಿಂದಿದನ್ದೊ ಆ ಪಾಶದೊಳಗೆ ನಾವು ಬೀಳಲೂ ಬಹುದು, ಅದೇನಂದರೆ ನಮ್ಮ ಒಟ್ಟುಗೂಡುವಿಕೆಯನ್ನು ತೊರೆಯುವುದೇ. ಅದು ಎಂದಿಗೂ ಸಂಭವಿಸದಿರಲಿ! ಈ ಹಳೆಯ ವ್ಯವಸ್ಥೆಯ ಹಿಂದೆಂದಿಗಿಂತಲೂ ಹೆಚ್ಚು ಅಪಾಯಕರವಾಗಿ ಮತ್ತು ದಬ್ಬಾಳಿಕೆ ನಡೆಸುವಂತಹದ್ದಾಗಿ ಪರಿಣಮಿಸುವಾಗ, ಯೆಹೋವನ ದಿನವು ಸಮೀಪಿಸುವುದನ್ನು ನಾವು ನೋಡುವುದರಿಂದ ಇದನ್ನು ಮತ್ತಷ್ಟು ಮಾಡಲಿಕ್ಕಾಗಿ ಮತ್ತು ಕೂಟಗಳಲ್ಲಿ ನಮ್ಮ ಸಹವಾಸವನ್ನು ಆತ್ಮೋನ್ನತಿ ಮಾಡುವಂತಹದ್ದಾಗಿ ಮಾಡಲಿಕ್ಕಾಗಿ ನಮ್ಮಿಂದ ಸಾಧ್ಯವಿರುವುದನ್ನೆಲ್ಲಾ ಮಾಡಲು ದೃಢವಾಗಿ ನಿಶ್ಚಯಿಸೋಣ!
[ಅಧ್ಯಯನ ಪ್ರಶ್ನೆಗಳು]
a ಹಿರಿಯನೊಬ್ಬನು ಅಂತಹ ಒಬ್ಬ ವ್ಯಕ್ತಿಯೊಂದಿಗೆ ಕಾವಲಿನಬುರುಜು ಮತ್ತು ಎಚ್ಚರ!ದ ಉತ್ತೇಜನಕಾರಿ ಲೇಖನಗಳನ್ನು ಅಭ್ಯಸಿಸಲು ಆಯ್ದುಕೊಳ್ಳಬಹುದು—ಉದಾಹರಣೆಗಾಗಿ, “ಅನರ್ಹ ದಯೆಯಿಂದ ನೀವು ಪ್ರಯೋಜನ ಪಡೆದುಕೊಳ್ಳುವಿರೊ?” ಮತ್ತು “ಖಿನ್ನತೆಯ ವಿರುದ್ಧವಾದ ಕದನವನ್ನು ಜಯಿಸುವುದು.”—ದ ವಾಚ್ಟವರ್, ಫೆಬ್ರವರಿ 15 ಮತ್ತು ಮಾರ್ಚ್ 1, 1990.
ನೀವು ಹೇಗೆ ಉತ್ತರಿಸುವಿರಿ?
▫ ಈ ಕಡೆಯ ದಿವಸಗಳಲ್ಲಿ ನಮ್ಮ ಕೂಟಗಳು ಮತ್ತು ಸಹವಾಸವು ಉತ್ತೇಜನಕರವಾಗಿರುವುದು ಏಕೆ ಅತಿ ಮಹತ್ವದ್ದಾಗಿರುತ್ತದೆ?
▫ ಒಬ್ಬರನ್ನೊಬ್ಬರು ಪರಿಗಣಿಸುವುದು ಎಂಬುದರ ಅರ್ಥವೇನು?
▫ ಒಬ್ಬರನ್ನೊಬ್ಬರು ಹುರಿದುಂಬಿಸುವುದು ಎಂಬುದರ ಅರ್ಥವೇನು?
▫ ಒಬ್ಬರನ್ನೊಬ್ಬರು ಉತ್ತೇಜಿಸುವುದರಲ್ಲಿ ಏನು ಒಳಗೊಂಡಿರುತ್ತದೆ?
▫ ಖಿನ್ನರಾಗಿರುವವರು ಮತ್ತು ಎದೆಗುಂದಿದವರು ಹೇಗೆ ಉತ್ತೇಜಿಸಲ್ಪಡಬಹುದು?
[ಪುಟ 16 ರಲ್ಲಿರುವ ಚಿತ್ರ]
ಅತಿಥಿಸತ್ಕಾರವು ನಾವು ಒಬ್ಬರನ್ನೊಬ್ಬರು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವಂತೆ ಸಹಾಯ ಮಾಡುತ್ತದೆ
[ಪುಟ 18 ರಲ್ಲಿರುವ ಚಿತ್ರ]
ಎಲೀಯನು ಖಿನ್ನನಾಗಿದ್ದಾಗ, ಯೆಹೋವನು ದಯೆಯಿಂದ ಅವನನ್ನು ಸಂತೈಸಿದನು