-
ರಾಹಾಬ ಗೂಢಚಾರರನ್ನು ಅಡಗಿಸಿಟ್ಟಳುಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 30
ರಾಹಾಬ ಗೂಢಚಾರರನ್ನು ಅಡಗಿಸಿಟ್ಟಳು
ಇಸ್ರಾಯೇಲ್ಯ ಗೂಢಚಾರರು ಯೆರಿಕೋ ಪಟ್ಟಣಕ್ಕೆ ಹೋದಾಗ ರಾಹಾಬ ಎಂಬ ಸ್ತ್ರೀಯ ಮನೆಯಲ್ಲಿ ಉಳಿದುಕೊಂಡರು. ಈ ವಿಷಯ ಯೆರಿಕೋವಿನ ರಾಜನಿಗೆ ಗೊತ್ತಾಯಿತು. ಆಗ ಅವನು ತನ್ನ ಸೈನಿಕರನ್ನು ರಾಹಾಬಳ ಮನೆಗೆ ಕಳುಹಿಸಿದ. ಆದರೆ ರಾಹಾಬಳು ಆ ಇಬ್ಬರು ಗೂಢಚಾರರನ್ನು ಮನೆಯ ಚಾವಣಿ ಮೇಲೆ ಬಚ್ಚಿಟ್ಟಿದ್ದಳು. ಬಂದ ಸೈನಿಕರನ್ನು ಬೇರೆ ದಾರಿಯಲ್ಲಿ ಕಳುಹಿಸಿದಳು. ಅವರು ಹೋದ ಮೇಲೆ ಅವಳು ಗೂಢಚಾರರಿಗೆ ‘ನಾನು ನಿಮಗೆ ಸಹಾಯ ಮಾಡುತ್ತೇನೆ ಏಕೆಂದರೆ ಯೆಹೋವನು ನಿಮ್ಮ ಕಡೆ ಇದ್ದಾನೆ ಮತ್ತು ನೀವು ಈ ದೇಶವನ್ನು ವಶ ಮಾಡಿಕೊಳ್ಳುತ್ತೀರ ಎಂದು ನನಗೆ ಗೊತ್ತು. ದಯವಿಟ್ಟು ನನ್ನ ಕುಟುಂಬವನ್ನು ಕಾಪಾಡುತ್ತೀರೆಂದು ನನಗೆ ಮಾತುಕೊಡಿ’ ಎಂದಳು.
ಆಗ ಆ ಗೂಢಚಾರರು ರಾಹಾಬಳಿಗೆ ‘ನಿನ್ನ ಮನೆಯ ಒಳಗಿರುವ ಯಾರಿಗೂ ಯಾವುದೇ ಹಾನಿ ಆಗುವುದಿಲ್ಲ ಎಂದು ನಾವು ಮಾತು ಕೊಡುತ್ತೇವೆ’ ಅಂದರು. ಅಲ್ಲದೇ, ‘ನಿನ್ನ ಮನೆಯ ಕಿಟಕಿಗೆ ಒಂದು ಕೆಂಪು ಹಗ್ಗವನ್ನು ಕಟ್ಟು. ಆಗ ನಿನ್ನ ಕುಟುಂಬವು ರಕ್ಷಿಸಲ್ಪಡುವುದು’ ಎಂದು ಹೇಳಿದರು.
ರಾಹಾಬಳು ಕಿಟಕಿಗೆ ಒಂದು ಹಗ್ಗ ಕಟ್ಟಿ ಆ ಗೂಢಚಾರರು ಕೆಳಗೆ ಇಳಿಯಲು ಸಹಾಯ ಮಾಡಿದಳು. ಅವರು ಮೂರು ದಿನ ಬೆಟ್ಟದಲ್ಲಿ ಅಡಗಿಕೊಂಡ ನಂತರ ಯೆಹೋಶುವನ ಹತ್ತಿರ ಹೋದರು. ಇದಾದ ಮೇಲೆ ಇಸ್ರಾಯೇಲ್ಯರು ಯೋರ್ದನ್ ನದಿಯನ್ನು ದಾಟಿ ಯೆರಿಕೋ ಪಟ್ಟಣವನ್ನು ವಶಮಾಡಿಕೊಳ್ಳಲು ಸಿದ್ಧರಾದರು. ಇಸ್ರಾಯೇಲ್ಯರು ವಶಮಾಡಿಕೊಂಡ ಮೊದಲ ಪಟ್ಟಣ ಇದಾಗಿತ್ತು. ಯೆಹೋವನು ಇಸ್ರಾಯೇಲ್ಯರಿಗೆ ದಿನಕ್ಕೊಂದು ಸಾರಿ ಆ ಪಟ್ಟಣದ ಸುತ್ತ ಸುತ್ತಬೇಕು. ಈ ತರ ಆರು ದಿನ ಸುತ್ತಬೇಕು ಎಂದು ಹೇಳಿದನು. ಏಳನೇ ದಿನ ಅವರು ಆ ಪಟ್ಟಣವನ್ನು ಏಳು ಬಾರಿ ಸುತ್ತು ಹಾಕಿದರು. ನಂತರ ಪುರೋಹಿತರು ಕೊಂಬುಗಳನ್ನು ಊದಿದರು. ಸೈನಿಕರು ತಮ್ಮಿಂದ ಎಷ್ಟು ಆಗುತ್ತೋ ಅಷ್ಟು ಜೋರಾಗಿ ಕೂಗಿದರು. ಆಗ ಆ ಪಟ್ಟಣದ ಗೋಡೆಗಳು ಕುಸಿದು ಬಿದ್ದು ನೆಲ ಸಮವಾದವು! ಆದರೆ ಗೋಡೆಯ ಮೇಲೆ ಇದ್ದ ರಾಹಾಬಳ ಮನೆಗೆ ಮಾತ್ರ ಏನೂ ಆಗಲಿಲ್ಲ. ಹೀಗೆ ರಾಹಾಬ ಮತ್ತು ಅವಳ ಕುಟುಂಬ ರಕ್ಷಿಸಲ್ಪಟ್ಟಿತು. ಇದಕ್ಕೆ ಕಾರಣ ಅವಳು ಯೆಹೋವನಲ್ಲಿ ಭರವಸೆಯಿಟ್ಟಿದ್ದಳು.
“ಅದೇ ತರ, ವೇಶ್ಯೆ ಆಗಿದ್ದ ರಾಹಾಬ್ ಅವಳ ಒಳ್ಳೇ ಕೆಲಸಗಳಿಂದ ನೀತಿವಂತಳು ಅಂತ ತೋರಿಸ್ಕೊಟ್ಟಳು. ಅವಳು ಗೂಡಚಾರರಿಗೆ ಸಹಾಯ ಮಾಡಿದಳು. ಅವ್ರನ್ನ ಬೇರೆ ದಾರಿಯಲ್ಲಿ ಕಳಿಸ್ಕೊಟ್ಟಳು.”—ಯಾಕೋಬ 2:25
-
-
ಯೆಹೋಶುವ ಮತ್ತು ಗಿಬ್ಯೋನ್ಯರುಬೈಬಲ್ ನಮಗೆ ಕಲಿಸುವ ಪಾಠಗಳು
-
-
ಪಾಠ 31
ಯೆಹೋಶುವ ಮತ್ತು ಗಿಬ್ಯೋನ್ಯರು
ಯೆರಿಕೋ ಪಟ್ಟಣದ ಸುದ್ದಿ ಕಾನಾನಿನ ಬೇರೆ ಜನಾಂಗಗಳಿಗೆ ಹಬ್ಬಿತು. ಅಲ್ಲಿನ ರಾಜರು ಒಟ್ಟಿಗೆ ಸೇರಿ ಇಸ್ರಾಯೇಲ್ಯರ ಮೇಲೆ ಯುದ್ಧ ಮಾಡಲು ತೀರ್ಮಾನ ಮಾಡಿದರು. ಆದರೆ ಗಿಬ್ಯೋನ್ಯರ ಯೋಚನೆಯೇ ಬೇರೆ ಆಗಿತ್ತು. ಅವರು ಹರಿದು ಹೋದ ಬಟ್ಟೆಗಳನ್ನು ಹಾಕಿಕೊಂಡು ಯೆಹೋಶುವನ ಹತ್ತಿರ ಬಂದು ‘ನಾವು ದೂರದ ದೇಶದಿಂದ ಬಂದಿದ್ದೀವಿ. ನಾವು ಯೆಹೋವನ ಬಗ್ಗೆ ಮತ್ತು ಆತನು ನಿಮಗಾಗಿ ಈಜಿಪ್ಟಿನಲ್ಲಿ ಹಾಗೂ ಮೋವಾಬ್‌ನಲ್ಲಿ ಮಾಡಿದ್ದೆಲ್ಲವನ್ನು ಕೇಳಿದ್ದೀವಿ. ನೀವು ನಮ್ಮ ವಿರುದ್ಧ ಯುದ್ಧ ಮಾಡಲ್ಲ ಎಂದು ಮಾತು ಕೊಡಿ. ನಾವು ನಿಮ್ಮ ದಾಸರಾಗ್ತೀವಿ’ ಅಂದರು.
ಯೆಹೋಶುವ ಅವರ ಮಾತನ್ನು ನಂಬಿ ಯುದ್ಧ ಮಾಡದಿರಲು ಒಪ್ಪಿದ. ಮೂರು ದಿನ ಆದ ಮೇಲೆ ಅವರು ದೂರದ ದೇಶದವರಲ್ಲ, ಕಾನಾನ್ ದೇಶದವರೇ ಎಂದು ಗೊತ್ತಾಯಿತು. ಆಗ ಯೆಹೋಶುವನು ಗಿಬ್ಯೋನ್ಯರಿಗೆ ‘ನೀವು ಯಾಕೆ ನಮಗೆ ಸುಳ್ಳು ಹೇಳಿದಿರಿ?’ ಎಂದು ಕೇಳಿದ. ಅದಕ್ಕೆ ಅವರು ‘ನಮಗೆ ತುಂಬ ಭಯ ಆಗಿತ್ತು! ನಿಮ್ಮ ದೇವರಾದ ಯೆಹೋವನು ನಿಮಗಾಗಿ ಯುದ್ಧ ಮಾಡುತ್ತಿದ್ದಾನೆ ಎಂದು ನಮಗೆ ಗೊತ್ತು. ದಯವಿಟ್ಟು ನಮ್ಮನ್ನು ಕೊಲ್ಲಬೇಡಿ’ ಎಂದು ಉತ್ತರ ಕೊಟ್ಟರು. ಯೆಹೋಶುವನು ಕೊಟ್ಟ ಮಾತಿನಂತೆ ನಡೆದುಕೊಂಡನು ಮತ್ತು ಅವರನ್ನು ಕೊಲ್ಲಲಿಲ್ಲ.
ಇದಾದ ಸ್ವಲ್ಪ ಸಮಯದಲ್ಲೇ ಕಾನಾನಿನ ಐದು ರಾಜರು ಮತ್ತು ಅವರ ಸೈನ್ಯ ಗಿಬ್ಯೋನ್ಯರಿಗೆ ಬೆದರಿಕೆ ಹಾಕಿತು. ಯೆಹೋಶುವ ಮತ್ತು ಅವನ ಸೈನ್ಯ ಗಿಬ್ಯೋನ್ಯರನ್ನು ಕಾಪಾಡಲು ರಾತ್ರಿಯಿಡೀ ನಡೆದರು. ಮಾರನೇ ದಿನ ಬೆಳಗ್ಗೆ ಯುದ್ಧ ಶುರು ಆಯಿತು. ಕಾನಾನ್ಯರು ದಿಕ್ಕಾಪಾಲಾಗಿ ಓಡಿಹೋಗಲು ಆರಂಭಿಸಿದರು. ಅವರು ಹೋದಲ್ಲೆಲ್ಲಾ ಯೆಹೋವನು ಅವರ ಮೇಲೆ ದೊಡ್ಡ ಆಲಿಕಲ್ಲು ಮಳೆ ಸುರಿಸಿದನು. ಆಮೇಲೆ ಸೂರ್ಯನು ಚಲಿಸದೆ ಹಾಗೇ ನಿಲ್ಲುವಂತೆ ಮಾಡಲು ಯೆಹೋಶುವ ಯೆಹೋವನನ್ನು ಬೇಡಿಕೊಂಡ. ಈ ಹಿಂದೆ ನಡೆದಿರದ ವಿಷಯವನ್ನು ಅಂದರೆ ಯಾವತ್ತೂ ಕದಲದ ಸೂರ್ಯನು ಒಂದೇ ಕಡೆ ನಿಲ್ಲುವಂತೆ ಯೆಹೋಶುವನು ಯಾಕೆ ಕೇಳಿಕೊಂಡ? ಯಾಕೆಂದರೆ ಯೆಹೋಶುವನಿಗೆ ಯೆಹೋವನ ಮೇಲೆ ಭರವಸೆ ಇತ್ತು. ಇಸ್ರಾಯೇಲ್ಯರು ಕಾನಾನಿನ ರಾಜರನ್ನು ಹಾಗೂ ಅವರ ಸೈನಿಕರನ್ನು ಸೋಲಿಸುವ ತನಕ ಒಂದು ಇಡೀ ದಿನ ಸೂರ್ಯ ಮುಳುಗಲೇ ಇಲ್ಲ.
“ನಿಮ್ಮ ಮಾತು ಹೌದು ಅಂದ್ರೆ ಹೌದು, ಇಲ್ಲ ಅಂದ್ರೆ ಇಲ್ಲ ಅಂತಿರಲಿ. ಇದಕ್ಕಿಂತ ಬೇರೆ ಏನೇ ಬಂದ್ರೂ ಅದು ಸೈತಾನನಿಂದ ಬಂದಿರುತ್ತೆ.”—ಮತ್ತಾಯ 5:37
-