ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು? (ಭಾಗ 1)
    ಕಾವಲಿನಬುರುಜು—2015 | ಜನವರಿ 1
    • ದೇವರ ರಾಜ್ಯದ ಬಗ್ಗೆ ಚರ್ಚೆ ಮಾಡುತ್ತಿರುವ ಕುಮಾರ್‌ ಮತ್ತು ಜಾನ್‌

      ಹೀಗೊಂದು ಸಂಭಾಷಣೆ

      ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು?—ಭಾಗ 1

      ಈ ಮುಂದಿನ ಸಂಭಾಷಣೆ ಯೆಹೋವನ ಸಾಕ್ಷಿಯೊಬ್ಬರ ಮತ್ತು ಬೈಬಲಿನ ಬಗ್ಗೆ ಆಸಕ್ತಿಯಿರುವ ವ್ಯಕ್ತಿಯ ನಡುವೆ ನಡೆಯುವ ಮಾದರಿ ಸಂಭಾಷಣೆಯಾಗಿದೆ. ಯೆಹೋವನ ಸಾಕ್ಷಿಯಾಗಿರುವ ಕುಮಾರ್‌ ಎಂಬವರು ಜಾನ್‌ ಎಂಬ ವ್ಯಕ್ತಿಯ ಮನೆಗೆ ಬೈಬಲ್‌ ಬಗ್ಗೆ ಚರ್ಚಿಸಲು ಬಂದಿದ್ದಾರೆ ಎಂದು ಊಹಿಸೋಣ.

      ಅರ್ಥಮಾಡಿಕೊಳ್ಳಲು ‘ಹುಡುಕುತ್ತಾ ಇರಿ’

      ಕುಮಾರ್‌: ನಿಮ್ಮ ಜೊತೆ ಬೈಬಲ್‌ ಅಧ್ಯಯನ ಮಾಡೋಕೆ ನನಗಂತೂ ತುಂಬ ಇಷ್ಟ.a ಹೋದ ಸಲ ನಾವು ಚರ್ಚೆ ಮಾಡುವಾಗ ನೀವೊಂದು ಪ್ರಶ್ನೆ ಕೇಳಿದ್ರಿ. 1914⁠ರಲ್ಲೇ ದೇವರ ರಾಜ್ಯದ ಆಳ್ವಿಕೆ ಆರಂಭವಾಗಿದೆ ಎಂದು ಯೆಹೋವನ ಸಾಕ್ಷಿಗಳು ಯಾಕೆ ನಂಬುತ್ತಾರೆ ಅಂತ, ಅಲ್ವಾ?

      ಜಾನ್‌: ಹೌದು, ನೀವೊಂದು ಪುಸ್ತಕ ಕೊಟ್ಟಿದ್ರಲ್ಲ, ಅದರಲ್ಲಿ ದೇವರ ರಾಜ್ಯದ ಆಳ್ವಿಕೆ 1914⁠ರಲ್ಲಿ ಪ್ರಾರಂಭವಾಗಿದೆ ಅಂತ ಇತ್ತು! ಇದೇನು ಹೊಸದಾಗಿದೆಯಲ್ಲಾ ಅಂತ ಅಂದುಕೊಂಡೆ. ನೀವು ಹೇಳುತ್ತೀರ ನಿಮ್ಮ ಎಲ್ಲ ನಂಬಿಕೆಗಳೂ ಬೈಬಲ್‌ ಆಧರಿತವಾಗಿವೆ ಅಂತ. ನಿಜಾನಾ ಅದು?

      ಕುಮಾರ್‌: ಹೌದು ನಿಜ, ನಮ್ಮ ನಂಬಿಕೆಗಳೆಲ್ಲ ಬೈಬಲ್‌ ಆಧರಿತವಾಗಿವೆ.

      ಜಾನ್‌: ಆದರೆ ನಾನು ಇಡೀ ಬೈಬಲ್‌ ಓದಿದ್ದೀನಿ, ಯಾವತ್ತೂ 1914 ಇಸವಿ ಬಗ್ಗೆ ಓದಿದ್ದು ನೆನಪಿಲ್ಲ. ಆನ್‌ಲೈನ್‌ ಬೈಬಲ್‌ನಲ್ಲೂ 1914 ಅಂತ ಟೈಪ್‌ ಮಾಡಿ ಹುಡುಕಿದೆ, ಆದರೆ ಏನೂ ಬರಲಿಲ್ಲ.

      ಕುಮಾರ್‌: ಹಾಗಾದರೆ ನೀವು ಇಡೀ ಬೈಬಲ್‌ನ ಓದಿದ್ದೀರಿ. ಇದರಿಂದ ನಿಮಗೆ ಬೈಬಲ್‌ ಅಂದ್ರೆ ಎಷ್ಟು ಇಷ್ಟ ಅಂತ ಗೊತ್ತಾಗುತ್ತೆ.

      ಜಾನ್‌: ಹೌದು, ನಂಗೆ ತುಂಬ ಇಷ್ಟ, ನನ್ನ ಪ್ರಕಾರ ಅಂಥ ಪುಸ್ತಕ ಬೇರೆ ಯಾವುದೂ ಇಲ್ಲ.

      ಕುಮಾರ್‌: ನಾನೂ ಆ ಮಾತನ್ನು ಒಪ್ಪಿಕೊಳ್ತೀನಿ. ಮತ್ತೆ, ನಿಮ್ಮ ಪ್ರಶ್ನೆಗಳಿಗೆ ಬೈಬಲ್‌ನಿಂದ ಉತ್ತರ ಹುಡುಕಲು ಪ್ರಯತ್ನಿಸುತ್ತಿರೋದು ನಿಜಕ್ಕೂ ಒಳ್ಳೇದೆ. ಯಾಕೆಂದ್ರೆ, ವಿಷಯಗಳನ್ನು ಅರ್ಥಮಾಡಿಕೊಳ್ಳಲು ‘ಹುಡುಕುತ್ತಾ ಇರಿ’ ಅಂತ ಸ್ವತಃ ಬೈಬಲೇ ಹೇಳುತ್ತದೆ.b ಈ ವಿಷಯದಲ್ಲಿ ನೀವು ಸಾಕಷ್ಟು ಪ್ರಯತ್ನ ಮಾಡುತ್ತೀದ್ದೀರಲ್ಲ, ನಿಮ್ಮನ್ನು ಶ್ಲಾಘಿಸಲೇಬೇಕು.

      ಜಾನ್‌: ಥ್ಯಾಂಕ್ಸ್‌, ಹೀಗೆ ಯಾವಾಗಲೂ ವಿಷಯಗಳನ್ನು ಕಲಿಯಬೇಕು ಅಂತ ನಂಗಿಷ್ಟ. ನಾವು ಬೈಬಲ್‌ ಚರ್ಚೆ ಮಾಡುತ್ತೀವಲ್ವ, ಆ ಪುಸ್ತಕದಲ್ಲಿ 1914⁠ರ ಬಗ್ಗೆ ವಿವರಿಸಿರುವುದನ್ನು ಓದಿದೆ. ಅದರಲ್ಲಿ ಒಬ್ಬ ರಾಜನು ಕಂಡ ಕನಸಿನ ಬಗ್ಗೆ ತಿಳಿಸುತ್ತದೆ. ಆ ಕನಸಲ್ಲಿ ಒಂದು ದೊಡ್ಡ ಮರವನ್ನು ಕಡಿಯಲಾಯಿತು, ಆದರೆ ಆ ಮರ ಮತ್ತೆ ಬೆಳೆಯಿತು ಅಂತೇನೋ ಇತ್ತು.

      ಕುಮಾರ್‌: ಹ್ಞಾಂ, ಹೌದು. ಅದೊಂದು ಪ್ರವಾದನೆ. ದಾನಿಯೇಲ ಪುಸ್ತಕದ 4ನೇ ಅಧ್ಯಾಯದಲ್ಲಿದೆ. ಬಾಬೆಲಿನ ರಾಜನಾಗಿದ್ದ ನೆಬೂಕದ್ನೆಚ್ಚರನಿಗೆ ಬಂದ ಕನಸಿನ ಬಗ್ಗೆ ಅದರಲ್ಲಿದೆ.

      ಜಾನ್‌: ಕರೆಕ್ಟ್‌, ಅದೇ. ನಾನು ಆ ಪ್ರವಾದನೇನ ಮತ್ತೆ ಮತ್ತೆ ಓದಿದೆ. ಆದರೆ ಇದಕ್ಕೂ, ದೇವರ ರಾಜ್ಯಕ್ಕೂ, 1914ನೇ ಇಸವಿಗೂ ಏನು ಸಂಬಂಧ ಅಂತ ಒಂಚೂರು ಅರ್ಥ ಆಗ್ಲಿಲ್ಲ.

      ಕುಮಾರ್‌: ನಿಮಗೆ ಗೊತ್ತಾ? ಈ ಪ್ರವಾದನೆಯನ್ನು ದೇವರಿಂದ ಪ್ರೇರಿತನಾಗಿ ಬರೆದ ಪ್ರವಾದಿ ದಾನಿಯೇಲನಿಗೇ ಇದರ ಸಂಪೂರ್ಣ ಅರ್ಥ ಗೊತ್ತಿರಲಿಲ್ಲ!

      ಜಾನ್‌: ನಿಜವಾಗಲೂ?

      ಕುಮಾರ್‌: ಹೌದು. ಹಾಗಂತ ಸ್ವತಃ ದಾನಿಯೇಲನೇ ಹೇಳಿದ್ದಾನೆ, ದಾನಿಯೇಲ ಪುಸ್ತಕದ 12:8 ನೋಡಿ. ಆ ವಚನದಲ್ಲಿ, “ನನಗೆ ಕೇಳಿಸಿದರೂ ಅರ್ಥವಾಗಲಿಲ್ಲ” ಅಂತ ಹೇಳಿದ್ದಾನೆ.

      ಜಾನ್‌: ಹಾಗಾದ್ರೆ ಇದನ್ನು ಅರ್ಥ ಮಾಡಿಕೊಳ್ಳೋಕೆ ಆಗದಿರೋದು ನನಗೊಬ್ಬನಿಗೇ ಅಲ್ಲ ಅಂತಾಯ್ತು. ಅಬ್ಬ! ಈಗ ಸ್ವಲ್ಪ ಸಮಾಧಾನ ಆಯ್ತಪ್ಪಾ.

      ಕುಮಾರ್‌: ದಾನಿಯೇಲನಿಗೆ ಯಾಕೆ ಅರ್ಥ ಆಗಿರಲಿಲ್ಲ ಅಂದ್ರೆ, ಅವನು ಬರೆದ ಪ್ರವಾದನೆಗಳನ್ನು ಆ ಸಮಯದಲ್ಲೇ ಮನುಷ್ಯರು ಅರ್ಥ ಮಾಡಿಕೊಳ್ಳಬೇಕು ಅನ್ನೋದು ದೇವರ ಚಿತ್ತ ಆಗಿರಲಿಲ್ಲ. ಆದರೆ, ಇಂದು ಆ ಪ್ರವಾದನೆಗಳ ಅರ್ಥವನ್ನು ತಿಳಿದುಕೊಳ್ಳಲು ಸಾಧ್ಯ.

      ಜಾನ್‌: ಹೌದಾ, ಅದು ಹೇಗೆ?

      ಕುಮಾರ್‌: ದಾನಿಯೇಲ ಪುಸ್ತಕದ 12:9ನೇ ವಚನ ನೋಡಿ: “ಈ ಮಾತುಗಳು ಅಂತ್ಯಕಾಲದವರೆಗೆ ಮುಚ್ಚಲ್ಪಟ್ಟು ಮುದ್ರಿತವಾಗಿವೆ” ಅಂತ ಅದು ಹೇಳುತ್ತೆ. ಹಾಗಿರೋದ್ರಿಂದ ಆ ಎಲ್ಲ ಪ್ರವಾದನೆಗಳು ದೀರ್ಘ ಸಮಯದ ನಂತರವೇ ಅಂದ್ರೆ ‘ಅಂತ್ಯಕಾಲದಲ್ಲಿ’ ಮಾತ್ರ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿತ್ತು. ಮತ್ತೆ, ನಾವು ಜೀವಿಸುತ್ತಿರುವ ಸಮಯವೇ ಅಂತ್ಯಕಾಲ. ಇದಕ್ಕಿರುವ ಆಧಾರವನ್ನು ಇನ್ನು ಸ್ವಲ್ಪ ದಿನದಲ್ಲೇ ನಮ್ಮ ಬೈಬಲ್‌ ಅಧ್ಯಯನದಲ್ಲಿ ಕಲಿಯಲಿದ್ದೇವೆ.c

      ಜಾನ್‌: ದಾನಿಯೇಲ ಪುಸ್ತಕದಲ್ಲಿರುವ ಪ್ರವಾದನೆಯ ಬಗ್ಗೆ ನಂಗೆ ಸ್ವಲ್ಪ ವಿವರಿಸ್ತೀರಾ?

      ಕುಮಾರ್‌: ನನ್ನ ಕೈಲಾದಷ್ಟು ವಿವರಿಸ್ತೀನಿ.

      ನೆಬೂಕದ್ನೆಚ್ಚರ ಕಂಡ ಕನಸು

      ಕುಮಾರ್‌: ಇದನ್ನು ವಿವರಿಸೋದಕ್ಕಿಂತ ಮುಂಚೆ, ನೆಬೂಕದ್ನೆಚ್ಚರನು ಕನಸಿನಲ್ಲಿ ಏನು ನೋಡಿದನೋ ಅದನ್ನು ಸ್ವಲ್ಪ ಗಮನಿಸೋಣ. ಆಮೇಲೆ ಅದರ ಅರ್ಥ ಏನೆಂದು ತಿಳಿದುಕೊಳ್ಳೋಣ.

      ಜಾನ್‌: ಆಯ್ತು.

      ಒಂದು ಬೃಹತ್‌ ಮರವನ್ನು ರಾಜ ನೆಬೂಕದ್ನೆಚ್ಚರ ತನ್ನ ಕನಸಿನಲ್ಲಿ ನೋಡುತ್ತಿರುವುದು

      ಕುಮಾರ್‌: ನೆಬೂಕದ್ನೆಚ್ಚರನು ಕನಸಿನಲ್ಲಿ ತುಂಬ ಎತ್ತರದ ಒಂದು ಮರ ನೋಡಿದನು. ಅದರ ತುದಿ ಆಕಾಶವನ್ನು ಮುಟ್ಟುತ್ತಿತ್ತು. ನಂತರ ‘ಆ ಮರವನ್ನು ಕಡಿಯಿರಿ, ಆದರೆ ಆ ಮರದ ಬುಡದ ಮೋಟನ್ನು ಹಾಗೆಯೇ ಬಿಡಿ. ಏಳು ಕಾಲಗಳಾದ ಮೇಲೆ ಮತ್ತೆ ಆ ಮರ ಬೆಳೆಯುತ್ತದೆ’ ಎಂದು ದೇವದೂತನೊಬ್ಬನು ಹೇಳಿದ್ದನ್ನು ಅವನು ಕೇಳಿಸಿಕೊಂಡನು.d ಮೊದಲು, ಈ ಪ್ರವಾದನೆ ರಾಜನಾಗಿದ್ದ ನೆಬೂಕದ್ನೆಚ್ಚರನ ಜೀವನದಲ್ಲೇ ನೆರವೇರಿತು. ಅವನೊಬ್ಬ ಪ್ರಖ್ಯಾತ ರಾಜನಾಗಿದ್ದರಿಂದ ಆಕಾಶವನ್ನು ಮುಟ್ಟುತ್ತಿದ್ದ ಆ ದೊಡ್ಡ ಮರಕ್ಕೆ ಅವನನ್ನು ಹೋಲಿಸಬಹುದು. ಆ ಮರ ಏಳು ವರ್ಷ ಬೆಳೆಯದಂತೆ ಹೇಗೆ ಬಿಡಲಾಯಿತೋ ಅದೇ ರೀತಿ ಆ ರಾಜನು ಏಳು ವರ್ಷ ಅಧಿಕಾರದಲ್ಲಿರಲಿಲ್ಲ. ಯಾಕೆ ಅಂತ ನಿಮಗೆ ಗೊತ್ತಾ?

      ಜಾನ್‌: ಗೊತ್ತಿಲ್ಲ.

      ಕುಮಾರ್‌: ನೆಬೂಕದ್ನೆಚ್ಚರನಿಗೆ ಏಳು ವರುಷ ಬುದ್ಧಿ ಭ್ರಮಣೆ ಆಗಿತ್ತು ಅಂತ ಬೈಬಲ್‌ ಹೇಳುತ್ತದೆ. ಆ ಸಮಯದಲ್ಲಿ ರಾಜನಾಗಿ ಆಳಲು ಅವನ ಕೈಯಲ್ಲಿ ಆಗಲಿಲ್ಲ. ಆದರೆ ಏಳು ವರುಷಗಳಾದ ನಂತರ ಅವನು ಸರಿಹೋದನು ಮತ್ತು ಪುನಃ ತನ್ನ ಆಳ್ವಿಕೆಯನ್ನು ಪ್ರಾರಂಭಿಸಿದನು.e

      ಜಾನ್‌: ನೀವು ಇಲ್ಲೀವರೆಗೂ ಹೇಳಿದ್ದು ನಂಗೆ ಅರ್ಥ ಆಯ್ತು. ಆದರೆ ದೇವರ ರಾಜ್ಯ ಮತ್ತು 1914ನೇ ಇಸವಿಗೂ ನೀವು ಹೇಳಿದ ವಿಷಯಕ್ಕೂ ಏನು ಸಂಬಂಧ?

      ಕುಮಾರ್‌: ಸಂಬಂಧ ಇದೆ, ಅದು ಹೇಗೆ ಅಂತ ವಿವರಿಸ್ತೀನಿ. ಈ ಪ್ರವಾದನೆ ಎರಡು ಬಾರಿ ನೆರವೇರಿತು. ಮೊದಲನೆಯದಾಗಿ ರಾಜ ನೆಬೂಕದ್ನೆಚ್ಚರನ ಆಳ್ವಿಕೆ ಸ್ವಲ್ಪ ಸಮಯ ನಿಂತುಹೋದಾಗ ಮತ್ತು ಎರಡನೆಯದಾಗಿ ದೇವರ ಆಳ್ವಿಕೆ ನಿಂತುಹೋದಾಗ ನೆರವೇರಿತು. ಹಾಗಾಗಿ ಈ ಪ್ರವಾದನೆಯ ಎರಡನೆಯ ನೆರವೇರಿಕೆ ದೇವರ ರಾಜ್ಯಕ್ಕೆ ಸಂಬಂಧಪಟ್ಟಿದೆ.

      ಜಾನ್‌: ಈ ಪ್ರವಾದನೆಗೆ ಎರಡನೆಯ ನೆರವೇರಿಕೆ ಇದೆ ಅಂತ ಹೇಗೆ ಹೇಳ್ತೀರಾ?

      ಕುಮಾರ್‌: ಹೇಗೆಂದರೆ ಪ್ರವಾದನೆಯೇ ಈ ವಿಷಯದ ಬಗ್ಗೆ ಸೂಚನೆ ಕೊಡುತ್ತದೆ. ದಾನಿಯೇಲ 4:17⁠ರಲ್ಲಿ ‘ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ ಅದರ ಆಳಿಕೆಯನ್ನು ತನಗೆ ಬೇಕಾದವರಿಗೆ ಒಪ್ಪಿಸಿ ಕನಿಷ್ಠರನ್ನೂ ಅದರ ಮೇಲೆ ನೇಮಿಸುತ್ತಾನೆಂಬದು ಜೀವಂತರಿಗೆ ತಿಳಿದು ಬರಬೇಕು’ ಎಂದು ತಿಳಿಸಲಾಗಿದೆ. ಇಲ್ಲಿ “ಮನುಷ್ಯರ ರಾಜ್ಯದಲ್ಲಿ” ಅನ್ನೋ ಪದವನ್ನು ಗಮನಿಸಿದ್ರಾ?

      ಜಾನ್‌: ಹೌದು ಗಮನಿಸಿದೆ, “ಪರಾತ್ಪರನು ಮನುಷ್ಯರ ರಾಜ್ಯದಲ್ಲಿ ರಾಜನಾಗಿ” ಅಂತ ಅದು ಹೇಳುತ್ತೆ.

      ಕುಮಾರ್‌: ಕರೆಕ್ಟ್‌. ಆ “ಪರಾತ್ಪರನು” ಯಾರಿರಬಹುದು ಅಂತ ನಿಮಗನಿಸುತ್ತದೆ?

      ಜಾನ್‌: ದೇವರೇ ಆಗಿರಬಹುದು.

      ಕುಮಾರ್‌: ಸರಿಯಾಗಿ ಹೇಳಿದ್ರಿ. ಆದ್ದರಿಂದನೇ, ಈ ಪ್ರವಾದನೆಯಲ್ಲಿ ಕೇವಲ ನೆಬೂಕದ್ನೆಚ್ಚರನ ಆಳ್ವಿಕೆ ಮಾತ್ರ ಅಲ್ಲ ಬದಲಿಗೆ “ಮನುಷ್ಯರ ರಾಜ್ಯ” ಅಂದ್ರೆ ಮಾನವಕುಲದ ಮೇಲಿನ ದೇವರ ಆಳ್ವಿಕೆ ಸಹ ಒಳಗೂಡಿದೆ ಅಂತ ಹೇಳಬಹುದು. ಆದರೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಪ್ರವಾದನೆಗೆ ಮುಂಚೆ ಮತ್ತು ನಂತರ ಇರುವ ಕೆಲವು ವಿಷಯಗಳನ್ನು ನಾವು ಚೆನ್ನಾಗಿ ತಿಳಿದುಕೊಳ್ಳಬೇಕು.

      ಜಾನ್‌: ಅಂದ್ರೆ?

      ದಾನಿಯೇಲ ಪುಸ್ತಕದ ಮುಖ್ಯ ವಿಷಯ

      ಕುಮಾರ್‌: ಈ ದಾನಿಯೇಲ ಪುಸ್ತಕದಲ್ಲಿ ಒಂದು ಮುಖ್ಯ ವಿಷಯದ ಬಗ್ಗೆ ಅನೇಕ ಬಾರಿ ಉಲ್ಲೇಖಿಸಲಾಗಿದೆ. ದೇವರು ತನ್ನ ಮಗನಾದ ಯೇಸುವಿನ ಮೂಲಕ ತನ್ನ ರಾಜ್ಯವನ್ನು ಸ್ಥಾಪಿಸುತ್ತಾನೆ ಎನ್ನುವುದೇ ಆ ಮುಖ್ಯ ವಿಷಯ. ಉದಾಹರಣೆಗೆ, ದಾನಿಯೇಲ ಪುಸ್ತಕದ 2ನೇ ಅಧ್ಯಾಯದ 44ನೇ ವಚನದಲ್ಲಿ ಇದರ ಬಗ್ಗೆ ತಿಳಿಸಲಾಗಿದೆ. ದಯವಿಟ್ಟು ಆ ವಚನ ಓದ್ತೀರಾ?

      ಜಾನ್‌: ಹ್ಞಾಂ! ಓದ್ತೀನಿ. “ಆ ರಾಜರ ಕಾಲದಲ್ಲಿ ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು, ಅದರ ಪ್ರಾಬಲ್ಯವು ಬೇರೆ ಜನಾಂಗಕ್ಕೆ ಕದಲಿಹೋಗದು, ಆ ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.”

      ಕುಮಾರ್‌: ಓದಿದ್ದಕ್ಕೆ ಥ್ಯಾಂಕ್ಸ್‌ ಜಾನ್‌. ಈ ವಚನ ದೇವರ ರಾಜ್ಯದ ಬಗ್ಗೆ ತಿಳಿಸುತ್ತದಲ್ವಾ?

      ಜಾನ್‌: ಏನೋ ಸರಿಯಾಗಿ ಗೊತ್ತಾಗುತ್ತಿಲ್ಲ.

      ಕುಮಾರ್‌: ಅಲ್ಲಿ ಈ ರಾಜ್ಯ “ಶಾಶ್ವತವಾಗಿ ನಿಲ್ಲುವುದು” ಅಂತ ತಿಳಿಸಿರುವುದನ್ನು ನೀವು ಗಮನಿಸಬಹುದು. ದೇವರ ರಾಜ್ಯ ಬಿಟ್ಟು ಬೇರೆ ಯಾವುದೇ ಮಾನವ ಸರ್ಕಾರಗಳು ಶಾಶ್ವತವಾಗಿ ಇರುತ್ತವೆ ಅಂತ ಹೇಳೋದಕ್ಕೆ ಸಾಧ್ಯನೇ ಇಲ್ಲ, ಅಲ್ವಾ?

      ಜಾನ್‌: ಸಾಧ್ಯ ಇಲ್ಲ ಅನಿಸುತ್ತೆ.

      ಕುಮಾರ್‌: ದೇವರ ರಾಜ್ಯದ ಬಗ್ಗೆ ತಿಳಿಸುವ ಇನ್ನೊಂದು ಪ್ರವಾದನೆ ಇದೇ ದಾನಿಯೇಲ ಪುಸ್ತಕದಲ್ಲಿದೆ. ದಾನಿಯೇಲ 7:13, 14⁠ರಲ್ಲಿ ಆ ಪ್ರವಾದನೆಯನ್ನು ದಾಖಲಿಸಲಾಗಿದೆ. ಭವಿಷ್ಯದಲ್ಲಿ ಆಳುವ ರಾಜನ ಬಗ್ಗೆ ಅದು ವಿವರಿಸುತ್ತದೆ: “ಸಕಲಜನಾಂಗಕುಲಭಾಷೆಗಳವರು ಅವನನ್ನು ಸೇವಿಸಲೆಂದು ಅವನಿಗೆ ದೊರೆತನವೂ ಘನತೆಯೂ ರಾಜ್ಯವೂ ಕೊಡೋಣವಾದವು; ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.” ನಾವು ಮಾತಾಡುತ್ತಿರುವ ವಿಷಯಕ್ಕೂ ಈ ಪ್ರವಾದನೆಗೂ ಯಾವ ಸಂಬಂಧ ಇದೆ?

      ಜಾನ್‌: ಇದು ಕೂಡ ರಾಜ್ಯದ ಬಗ್ಗೆ ಮಾತಾಡ್ತಾ ಇದೆ ಅಲ್ವಾ?

      ಕುಮಾರ್‌: ಕರೆಕ್ಟ್‌. ಮತ್ತೆ ಅದು ಯಾವುದೋ ರಾಜ್ಯದ ಬಗ್ಗೆ ಮಾತಾಡುತ್ತಿಲ್ಲ. ಗಮನಿಸಿ, ಅದು ಹೇಳುತ್ತೆ ಆ ರಾಜ್ಯಕ್ಕೆ ‘ಸಕಲಜನಾಂಗಕುಲಭಾಷೆಗಳವರ’ ಮೇಲೆ ಅಧಿಕಾರ ಇರುತ್ತದೆ. ಇನ್ನೊಂದು ರೀತಿಯಲ್ಲಿ, ಆ ರಾಜ್ಯ ಇಡೀ ಮಾನವಕುಲವನ್ನೇ ಆಳುತ್ತದೆ ಅಂತ ಹೇಳಬಹುದು.

      ಜಾನ್‌: ನೀವು ಹೇಳಿದ್ದು ನಿಜ, ಈ ವಚನಕ್ಕೆ ಇಷ್ಟೊಂದು ಅರ್ಥ ಇದೆ ಅಂತ ಗೊತ್ತಿರಲಿಲ್ಲ.

      ಕುಮಾರ್‌: ಮುಂದೆ ಆ ವಚನ ಏನು ಹೇಳುತ್ತದೆ ಅಂತ ಗಮನಿಸಿದ್ರಾ? “ಅವನ ಆಳಿಕೆಯು ಅಂತ್ಯವಿಲ್ಲದ್ದು, ಶಾಶ್ವತವಾದದ್ದು; ಅವನ ರಾಜ್ಯವು ಎಂದಿಗೂ ಅಳಿಯದು.” ಈ ಮಾತು ದಾನಿಯೇಲ 2:44⁠ರಲ್ಲಿದ್ದ ಪ್ರವಾದನೆ ಥರಾನೇ ಇದೆ ಅಂತ ಅನಿಸಲ್ವಾ?

      ಜಾನ್‌: ಹೌದು.

      ಕುಮಾರ್‌: ನಾವು ಇಲ್ಲಿಯವರೆಗೂ ಮಾಡಿದ ಚರ್ಚೆ ಬಗ್ಗೆ ಸ್ವಲ್ಪ ನೋಡೋಣ. ‘ಪರಾತ್ಪರನು ಅಂದರೆ ದೇವರು, ಮನುಷ್ಯರ ರಾಜ್ಯದಲ್ಲಿ ರಾಜನು’ ಎನ್ನುವುದನ್ನು ಜನರು ತಿಳಿದುಕೊಳ್ಳಬೇಕೆಂದು ದಾನಿಯೇಲ ಪುಸ್ತಕದ ಅಧ್ಯಾಯ 4⁠ರಲ್ಲಿ ಈ ಪ್ರವಾದನೆಯನ್ನು ದಾಖಲಿಸಲಾಯಿತು. ಹಾಗಾಗಿ ಈ ಪ್ರವಾದನೆಯು ಮೊದಲು ನೆಬೂಕದ್ನೆಚ್ಚರನಲ್ಲಿ ನೆರವೇರಿದರೂ ಅದರ ಎರಡನೇ ಮತ್ತು ಪ್ರಾಮುಖ್ಯವಾದ ನೆರವೇರಿಕೆ ಭವಿಷ್ಯದಲ್ಲಿ ಆಗಲಿತ್ತು ಎನ್ನುವುದನ್ನು ಸೂಚಿಸುತ್ತದೆ. ಮತ್ತು ದಾನಿಯೇಲ ಪುಸ್ತಕದಿಡೀ ದೇವರು ತನ್ನ ಮಗನ ಮೂಲಕ ತನ್ನ ರಾಜ್ಯವನ್ನು ಸ್ಥಾಪಿಸುವ ಪ್ರವಾದನೆಗಳ ಬಗ್ಗೆ ಇರುವುದನ್ನು ನಾವು ನೋಡಿದೆವು. ಈ ಎಲ್ಲ ವಿಷಯಗಳಿಂದ ದಾನಿಯೇಲ 4ನೇ ಅಧ್ಯಾಯಕ್ಕೂ ದೇವರ ರಾಜ್ಯಕ್ಕೂ ಸಂಬಂಧ ಇದೆ ಅಂತ ಅನಿಸುತ್ತದಲ್ವಾ?

      ಜಾನ್‌: ಅದೇನೋ ಸರಿ. ಆದರೆ ಈ 1914 ಎಲ್ಲಿಂದ ಬಂತು ಅನ್ನೋದೇ ಗೊತ್ತಾಗಲಿಲ್ಲ?

      “ಏಳು ಕಾಲಗಳು ಕಳೆಯಲಿ”

      ಕುಮಾರ್‌: ನೆಬೂಕದ್ನೆಚ್ಚರನ ಬಗ್ಗೆ ಮತ್ತೆ ನೋಡೋಣ. ಆ ಪ್ರವಾದನೆಯಲ್ಲಿದ್ದ ಮರ ರಾಜ ನೆಬೂಕದ್ನೆಚ್ಚರನನ್ನು ಪ್ರತಿನಿಧಿಸುತ್ತಿತ್ತು. ಆ ಮರ ಕಡಿದು ಏಳು ವರ್ಷಗಳು ಹಾಗೆ ಬಿಟ್ಟಿದ್ದು ಅವನಿಗೆ ಏಳು ವರ್ಷ ಬುದ್ಧಿ ಭ್ರಮಣೆ ಆಗಿ ಅವನ ಆಳ್ವಿಕೆಯು ನಿಂತುಹೋಗಿದ್ದಕ್ಕೆ ಸೂಚಿಸುತ್ತದೆ. ನೆಬೂಕದ್ನೆಚ್ಚರನು ಗುಣವಾಗಿ ರಾಜನಾದಾಗ ಆ ಏಳು ವರ್ಷ ಮುಕ್ತಾಯಗೊಂಡಿತು. ಆ ಪ್ರವಾದನೆಯ ಎರಡನೆಯ ನೆರವೇರಿಕೆ ದೇವರ ಆಳ್ವಿಕೆ ನಿಂತುಹೋದಾಗ ಸಂಭವಿಸುತ್ತದೆ ಎಂದು ಕಲಿತಿದ್ದೆವು. ಆದರೆ ಇದಕ್ಕೆ ಕಾರಣ ದೇವರಲ್ಲಿ ಏನೋ ಬಲಹೀನತೆ ಇತ್ತು ಅಂತಲ್ಲ.

      ಜಾನ್‌: ಅಂದ್ರೆ?

      ಕುಮಾರ್‌: ಬೈಬಲಿನ ಸಮಯದಲ್ಲಿ, ಯೆರೂಸಲೇಮನ್ನು ಆಳುತ್ತಿದ್ದ ಇಸ್ರಾಯೇಲ್‌ ರಾಜರು “ಯೆಹೋವನ ಸಿಂಹಾಸನದಲ್ಲಿ” ಕುಳಿತಿದ್ದಾರೆಂದು ಪರಿಗಣಿಸಲಾಗುತ್ತಿತ್ತು.f ಅವರು ದೇವರನ್ನು ಪ್ರತಿನಿಧಿಸುತ್ತಾ ಆತನ ಜನರನ್ನು ಆಳುತ್ತಿದ್ದರು. ಹಾಗಾಗಿ, ಆ ರಾಜರ ಆಳ್ವಿಕೆ ದೇವರ ಆಳ್ವಿಕೆಯನ್ನು ಸೂಚಿಸುತ್ತಿತ್ತು. ಆದರೆ ಸ್ವಲ್ಪ ಸಮಯದಲ್ಲೇ ಹೆಚ್ಚಿನ ರಾಜರು ದೇವರಿಗೆ ಅವಿಧೇಯರಾದರು ಜೊತೆಗೆ ಪ್ರಜೆಗಳು ಅವರ ಮಾದರಿಯನ್ನೇ ಅನುಸರಿಸಿದರು. ಇಸ್ರಾಯೇಲ್ಯರು ತೋರಿಸಿದ ಅವಿಧೇಯತೆಯಿಂದಾಗಿ ಕ್ರಿ.ಪೂ. 607⁠ರಲ್ಲಿ ಬಾಬೆಲಿನವರು ಅವರ ಮೇಲೆ ಆಕ್ರಮಣ ಮಾಡುವಂತೆ ದೇವರು ಅನುಮತಿಸಿದನು. ಆ ಸಮಯದಿಂದ ಯೆಹೋವನನ್ನು ಪ್ರತಿನಿಧಿಸುತ್ತಿದ್ದ ರಾಜರು ಆಳ್ವಿಕೆ ಮಾಡದಿದ್ದ ಕಾರಣ, ದೇವರ ಆಳ್ವಿಕೆ ಸ್ವಲ್ಪ ಸಮಯಕ್ಕೆ ನಿಂತುಹೋಯಿತು. ಈ ವಿಷಯ ನಿಮಗೀಗ ಅರ್ಥ ಆಗಿರಬೇಕಲ್ವಾ?

      ಜಾನ್‌: ಹ್ಞಾಂ ಅರ್ಥ ಆಯ್ತು.

      ಕುಮಾರ್‌: ಕ್ರಿ.ಪೂ. 607⁠ರಲ್ಲಿ ದೇವರ ಆಳ್ವಿಕೆ ನಿಂತುಹೋದದ್ದರಿಂದ ಆ ಇಸವಿ ಏಳು ಕಾಲಗಳ ಪ್ರಾರಂಭ ಬಿಂದುವಾಗಿತ್ತು. ಆದರೆ ದೇವರು ಏಳು ಕಾಲಗಳ ಕೊನೆಯಲ್ಲಿ ಒಬ್ಬ ಹೊಸ ರಾಜನನ್ನು ನೇಮಿಸಿದನು. ಆದರೆ ಈ ಬಾರಿ ಆ ಹೊಸ ರಾಜ ಸ್ವರ್ಗದಲ್ಲಿ ಇದ್ದಂಥವನು. ಇದಾದ ಮೇಲೆ ದಾನಿಯೇಲ ಪುಸ್ತಕದಲ್ಲಿರುವ ಇತರ ಪ್ರವಾದನೆಗಳು ನೆರವೇರಲಿವೆ. ಆದರೆ ಪ್ರಶ್ನೆ, ಈ ಏಳು ಕಾಲಗಳು ಯಾವಾಗ ಕೊನೆಯಾಗುತ್ತೆ? ಈ ಪ್ರಶ್ನೆಗೆ ಉತ್ತರ ಗೊತ್ತಾದರೆ ದೇವರ ರಾಜ್ಯದ ಆಳ್ವಿಕೆ ಮತ್ತೆ ಯಾವಾಗಿಂದ ಪ್ರಾರಂಭವಾಯಿತು ಅನ್ನೋದು ಕೂಡ ನಮಗೆ ಗೊತ್ತಾಗುತ್ತೆ.

      ಜಾನ್‌: ಹಾಗಾದರೆ ಆ ಏಳು ಕಾಲ ಕೊನೆಯಾಗೋದು 1914⁠ರಲ್ಲಾ?

      ಕುಮಾರ್‌: ಕರೆಕ್ಟಾಗಿ ಹೇಳಿದ್ರಿ.

      ಜಾನ್‌: ಅದೇ ವರ್ಷ ಅಂತ ಹೇಗೆ ಹೇಳಕ್ಕಾಗುತ್ತೆ?

      ಕುಮಾರ್‌: ಯೇಸು ಭೂಮಿಯಲ್ಲಿ ಜೀವಿಸುವಾಗ ಆ ಏಳು ಕಾಲಗಳು ಇನ್ನೂ ಮುಗಿದಿರಲಿಲ್ಲ ಎಂದು ಸ್ವತಃ ಆತನೇ ಹೇಳಿದನು.g ಹಾಗಾಗಿ ಆ ಏಳು ಕಾಲಗಳು ದೀರ್ಘ ಸಮಯವಾಗಿತ್ತೇ ಹೊರತು ಕೇವಲ ಏಳು ವರ್ಷಗಳಾಗಿರಲಿಲ್ಲ. ಆ ದೀರ್ಘ ಸಮಯ ಯೇಸು ಬರುವ ಎಷ್ಟೋ ಸಮಯದ ಮುಂಚೆಯೇ ಪ್ರಾರಂಭವಾಗಿತ್ತು ಮತ್ತು ಆತನು ಸ್ವರ್ಗಕ್ಕೆ ಹೋದ ಮೇಲೂ ಮುಂದುವರಿದಿತ್ತು. ‘ಅಂತ್ಯಕಾಲದವರೆಗೂ’ ದಾನಿಯೇಲನ ಪ್ರವಾದನೆಯಲ್ಲಿದ್ದ ಸಂಪೂರ್ಣ ಅರ್ಥವನ್ನು ಗ್ರಹಿಸಲು ಸಾಧ್ಯವಾಗಲಿಲ್ಲ ಎನ್ನುವುದನ್ನು ನಾವು ಮಾತಾಡಿದ್ದು ನಿಮಗೆ ನೆನಪಿರಬಹುದು.h ಅದರಂತೆಯೇ, 19ನೇ ಶತಮಾನದ ಕೊನೆಯ ವರ್ಷಗಳಲ್ಲಿ ಬೈಬಲನ್ನು ಓದುತ್ತಿದ್ದ ಕೆಲವು ಯಥಾರ್ಥ ಜನರು ಈ ಪ್ರವಾದನೆ ಮತ್ತು ಇನ್ನಿತರ ಪ್ರವಾದನೆಗಳನ್ನು ಆಳವಾಗಿ ಪರೀಕ್ಷಿಸಲು ಪ್ರಾರಂಭಿಸಿದರು. ಆ ಏಳು ವರ್ಷಗಳು 1914⁠ರಲ್ಲೇ ಕೊನೆಗೊಳ್ಳಲಿದೆ ಎಂದು ಆಗ ತಿಳಿದುಕೊಂಡರು. ಜೊತೆಗೆ, 1914ರಿಂದ ನಡೆದ ಮಹತ್ತರ ಘಟನೆಗಳು ಅದೇ ವರ್ಷದಲ್ಲಿ ದೇವರ ಆಳ್ವಿಕೆ ಆರಂಭವಾಯಿತು ಎನ್ನುವುದನ್ನು ಸೂಚಿಸಿದವು. ಆದ್ದರಿಂದ ಈ ಪ್ರಪಂಚಕ್ಕೆ ಕಡೇ ದಿನಗಳು ಅಥವಾ ಅಂತ್ಯಕಾಲ ಶುರುವಾಗಿದ್ದು ಈ ಇಸವಿಯಿಂದಲೇ. ತುಂಬ ಹೇಳಿಬಿಟ್ಟೆ ಅನಿಸುತ್ತೆ. ಇದನ್ನೆಲ್ಲ ಇನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳೋಕೆ ನಿಮಗೆ ಸ್ವಲ್ಪ ಸಮಯ ಬೇಕಲ್ವ?

      ಜಾನ್‌: ಹೌದು. ಖಂಡಿತ ಬೇಕು. ಅದಕ್ಕೆ ನಾನು ಇದನ್ನು ಇನ್ನೊಂದು ಸಾರಿ ಓದುತ್ತೇನೆ.

      ಕುಮಾರ್‌: ನೀವೇನು ಚಿಂತೆ ಮಾಡಬೇಡಿ. ನಂಗೂ ಈ ಪ್ರವಾದನೆಗಳನ್ನು ಮತ್ತು ಅವುಗಳ ನೆರವೇರಿಕೆಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಸಮಯ ಹಿಡಿಯಿತು. ಆದರೆ ಈ ಚರ್ಚೆ, ದೇವರ ರಾಜ್ಯದ ಬಗ್ಗೆ ಯೆಹೋವನ ಸಾಕ್ಷಿಗಳು ಇಟ್ಟಿರುವ ನಂಬಿಕೆ ಬೈಬಲ್‌ ಆಧರಿತವಾಗಿದೆ ಅನ್ನೋದನ್ನು ತಿಳಿದುಕೊಳ್ಳೋಕೆ ನಿಮಗೆ ಸಹಾಯ ಮಾಡಿತು ಅಂತ ಅಂದುಕೊಳ್ಳುತ್ತೇನೆ.

      ಜಾನ್‌: ತುಂಬನೇ ಸಹಾಯ ಮಾಡಿತು. ನಾನು ಯಾವುದೇ ಪ್ರಶ್ನೆ ಕೇಳಿದಾಗಲೂ ನಿಮ್ಮ ನಂಬಿಕೆಯನ್ನು ವಿವರಿಸಲು ನೀವು ಬೈಬಲನ್ನು ಉಪಯೋಗಿಸುವುದು ನಂಗೆ ತುಂಬ ಇಷ್ಟ ಆಗುತ್ತೆ.

      ಕುಮಾರ್‌: ನಿಮಗೂ ಅದೇ ಥರ ಬೈಬಲನ್ನು ಉಪಯೋಗಿಸಬೇಕಂತ ಇಷ್ಟ ಅಲ್ವಾ? ನಾನು ಆಗಲೇ ಹೇಳಿದ ಹಾಗೆ ಒಂದೇ ಸಲಕ್ಕೆ ಎಲ್ಲ ವಿಷಯಗಳನ್ನು ಕಲಿಯಲು ಕಷ್ಟ ಆಗುತ್ತೆ. ನಾವು ಈಗಾಗಲೇ ಏಳು ಕಾಲಗಳು ದೇವರ ರಾಜ್ಯಕ್ಕೂ ಅನ್ವಯಿಸುತ್ತೆ ಮತ್ತು ಅದು ಕ್ರಿ.ಪೂ. 607ರಿಂದ ಪ್ರಾರಂಭವಾಗಿದೆ ಅನ್ನೋದನ್ನು ಚರ್ಚೆ ಮಾಡಿದೆವು. ಆದರೆ ಆ ಸಮಯಾವಧಿ ಕರೆಕ್ಟಾಗಿ 1914⁠ಕ್ಕೆನೇ ಕೊನೆಯಾಯಿತು ಅಂತ ಹೇಗೆ ಹೇಳಬಹುದು ಅನ್ನುವಂಥ ಕೆಲವು ಪ್ರಶ್ನೆಗಳು ನಿಮಗಿರಬಹುದು. ಅದನ್ನೂ ಚರ್ಚಿಸಬೇಕಲ್ವಾ?i

      ಜಾನ್‌: ಹೌದು, ಅದರ ಬಗ್ಗೇನೂ ನಾನೂ ತಿಳಿದುಕೊಳ್ಳಬೇಕು.

      ಕುಮಾರ್‌: ಆ ಏಳು ವರ್ಷಗಳ ನಿರ್ದಿಷ್ಟ ಸಮಾಯಾವಧಿಯನ್ನು ಬೈಬಲ್‌ ನಮಗೆ ತಿಳಿಸುತ್ತದೆ. ನಾನು ಮುಂದಿನ ಸಲ ಬಂದಾಗ ಅದರ ಬಗ್ಗೆ ಚರ್ಚೆ ಮಾಡೋಣ್ವಾ?j

      ಜಾನ್‌: ಹ್ಞಾಂ, ಮಾಡೋಣ. ▪ (w14-E 10/01)

      ಬೈಬಲಿನಲ್ಲಿರುವ ಯಾವುದಾದರೂ ವಿಷಯವನ್ನು ಕಲಿಯಲು ನಿಮಗೆ ಆಸಕ್ತಿಯಿದೆಯಾ? ಯೆಹೋವನ ಸಾಕ್ಷಿಗಳ ನಂಬಿಕೆಗಳೇನು ಅಥವಾ ಅವರ ಆಚಾರ-ವಿಚಾರಗಳೇನು ಎನ್ನುವುದರ ಬಗ್ಗೆ ಕುತೂಹಲವಿದೆಯಾ? ಈ ವಿಷಯಗಳನ್ನು ತಿಳಿದುಕೊಳ್ಳಲು ನಿಮಗೆ ಇಷ್ಟವಿದ್ದರೆ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ. ಅವರು ನಿಮಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತಾರೆ.

      a ಬೈಬಲ್‌ ಅಧ್ಯಯನ ಎಂದರೆ ಬೈಬಲ್‌ ಬಗ್ಗೆ ಕಲಿಯಲು ಆಸಕ್ತಿ ಇರುವವರ ಜೊತೆ ಯೆಹೋವನ ಸಾಕ್ಷಿಗಳು ಮಾಡುವ ಬೈಬಲ್‌ ಆಧರಿತ ಚರ್ಚೆಯಾಗಿದೆ. ಈ ಅಧ್ಯಯನದಲ್ಲಿ ಬೈಬಲ್‌ ಬಗ್ಗೆ ಒಂದೊಂದೇ ವಿಷಯಗಳನ್ನು ಹಂತಹಂತವಾಗಿ ಚರ್ಚಿಸಲಾಗುತ್ತದೆ.

      b ಜ್ಞಾನೋಕ್ತಿ 2:3-5.

      c ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 9⁠ನೇ ಅಧ್ಯಾಯ ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. www.jw.orgನಲ್ಲೂ ಲಭ್ಯ.

      d ದಾನಿಯೇಲ 4:13-17

      e ದಾನಿಯೇಲ 4:20-36

      f 1 ಪೂರ್ವಕಾಲವೃತ್ತಾಂತ 29:23.

      g ತನ್ನ ಪ್ರವಾದನೆಯಲ್ಲಿ ಯೇಸು ಹೀಗೆ ಹೇಳುತ್ತಾನೆ: “ಅನ್ಯಜನಾಂಗಗಳ ನೇಮಿತ ಕಾಲಗಳು ತೀರುವ ತನಕ ಯೆರೂಸಲೇಮ್‌ ಪಟ್ಟಣವು [ಅಂದರೆ ದೇವರ ಆಳ್ವಿಕೆ] ಅನ್ಯಜನಾಂಗಗಳಿಂದ ತುಳಿದಾಡಲ್ಪಡುವುದು.” (ಲೂಕ 21:24) ಇನ್ನೊಂದರ್ಥದಲ್ಲಿ ದೇವರ ಆಳ್ವಿಕೆ ನಿಂತುಹೋದ ಸಮಯಾವಧಿಯು ಯೇಸುವಿನ ಸಮಯದಲ್ಲಿಯೂ ಇತ್ತು ಮತ್ತು ಅದು ಕಡೇ ದಿನಗಳವರೆಗೂ ಮುಂದುವರಿಯಲಿತ್ತು.

      h ದಾನಿಯೇಲ 12:9.

      i ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಪುಟ 215ರಿಂದ 218⁠ನ್ನು ನೋಡಿ. www.jw.orgನಲ್ಲೂ ಇದು ಲಭ್ಯವಿದೆ.

      j ಮುಂದಿನ ಸಂಚಿಕೆಯಲ್ಲಿ ಏಳು ಕಾಲಗಳ ನಿರ್ದಿಷ್ಟ ಸಮಯಾವಧಿಯ ಬಗ್ಗೆ ಬೆಳಕು ಚೆಲ್ಲುವ ಬೈಬಲ್‌ ವಚನಗಳನ್ನು ನೋಡಲಿದ್ದೇವೆ.

  • ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು? (ಭಾಗ 2)
    ಕಾವಲಿನಬುರುಜು—2015 | ಏಪ್ರಿಲ್‌ 1
    • ಕುಮಾರ್‌ರನ್ನು ತಮ್ಮ ಮನೆಗೆ ಸ್ವಾಗತಿಸುತ್ತಿರುವ ಜಾನ್‌

      ಹೀಗೊಂದು ಸಂಭಾಷಣೆ

      ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು?—ಭಾಗ 2

      ಈ ಸಂಭಾಷಣೆ ಯೆಹೋವನ ಸಾಕ್ಷಿಗಳಲ್ಲೊಬ್ಬರ ಮತ್ತು ಬೈಬಲಿನ ಬಗ್ಗೆ ಆಸಕ್ತಿಯಿರುವ ಒಬ್ಬ ವ್ಯಕ್ತಿಯ ನಡುವಿನ ಮಾದರಿ ಸಂಭಾಷಣೆಯಾಗಿದೆ. ಯೆಹೋವನ ಸಾಕ್ಷಿಯಾದ ಕುಮಾರ್‌, ಜಾನ್‌ ಎಂಬವರ ಮನೆಗೆ ಬೈಬಲ್‌ ಅಧ್ಯಯನ ಮಾಡಲು ಪುನಃ ಬಂದಿದ್ದಾರೆ ಎಂದು ಊಹಿಸೋಣ.

      ನೆಬೂಕದ್ನೆಚ್ಚರನು ಕಂಡ ಕನಸು—ಹಿಂದಿನ ಭೇಟಿಯಲ್ಲಾದ ಸಂಭಾಷಣೆಯ ಪುನರವಲೋಕನ

      ಕುಮಾರ್‌: ನಮಸ್ಕಾರ ಜಾನ್‌, ಹೇಗಿದ್ದೀರಾ?

      ಜಾನ್‌: ನಾನು ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಾ?

      ಕುಮಾರ್‌: ನಾನೂ ಚೆನ್ನಾಗಿದ್ದೇನೆ. ನಿಮ್ಮ ಜೊತೆ ಬೈಬಲ್‌ ಅಧ್ಯಯನa ಮಾಡೋಕೆ ನಂಗೆ ತುಂಬ ಇಷ್ಟ ಆಗುತ್ತೆ. ಹೋದ ಸಲ, ದೇವರ ರಾಜ್ಯದ ಆಳ್ವಿಕೆ 1914⁠ರಲ್ಲೇ ಆರಂಭವಾಯಿತು ಅಂತ ಯೆಹೋವನ ಸಾಕ್ಷಿಗಳು ಯಾಕೆ ನಂಬುತ್ತಾರೆ ಅನ್ನೋದರ ಬಗ್ಗೆ ಚರ್ಚೆ ಮಾಡಿದ್ವಿ.b ಹಾಗೆ ಚರ್ಚೆ ಮಾಡುವಾಗ, ದೇವರ ರಾಜ್ಯಕ್ಕೆ ಸಂಬಂಧಪಟ್ಟಂತೆ ದಾನಿಯೇಲ ಪುಸ್ತಕದ 4ನೇ ಅಧ್ಯಾಯದಲ್ಲಿರುವ ಪ್ರವಾದನೆಯಿಂದ ಒಂದು ಪ್ರಾಮುಖ್ಯ ಆಧಾರವನ್ನು ನಾವು ನೋಡಿದ್ವಿ. ನಿಮಗೆ ಅದು ನೆನಪಿದೆಯಾ?

      ಜಾನ್‌: ಹೌದು ನೆನಪಿದೆ. ಆ ಅಧ್ಯಾಯದಲ್ಲಿ ನೆಬೂಕದ್ನೆಚ್ಚರ ಎಂಬ ರಾಜ ಒಂದು ದೊಡ್ಡ ಮರದ ಕನಸು ಕಾಣುವುದರ ಬಗ್ಗೆ ನೋಡಿದ್ವಿ.

      ಕುಮಾರ್‌: ಸರಿಯಾಗಿ ಹೇಳಿದ್ರಿ. ನೆಬೂಕದ್ನೆಚ್ಚರ ಒಂದು ದೊಡ್ಡ ಮರವನ್ನು ಕನಸಿನಲ್ಲಿ ನೋಡಿದನು. ಆ ಮರದ ತುದಿ ಆಕಾಶವನ್ನು ಮುಟ್ಟುತ್ತಿತ್ತು. ನಂತರ ದೇವದೂತನೊಬ್ಬನು ಬಂದು ‘ಆ ಮರವನ್ನು ಕಡಿಯಿರಿ, ಆದರೆ ಆ ಮರದ ಬುಡದ ಮೋಟನ್ನು ಹಾಗೆಯೇ ಬಿಡಿ. ಏಳು ಕಾಲಗಳಾದ ಮೇಲೆ ಮತ್ತೆ ಆ ಮರ ಬೆಳೆಯುತ್ತದೆ’ ಎಂದು ಹೇಳುವುದನ್ನು ನೆಬೂಕದ್ನೆಚ್ಚರನು ಕನಸಿನಲ್ಲಿ ಕೇಳಿಸಿಕೊಂಡನು.c ಇದೊಂದು ಪ್ರವಾದನೆಯಾಗಿತ್ತು. ಈ ಪ್ರವಾದನೆಗೆ ಯಾಕೆ ಎರಡು ನೆರವೇರಿಕೆಗಳಿವೆ ಅನ್ನೋದನ್ನು ಸಹ ಕಲಿತಿದ್ದೆವು. ಪ್ರವಾದನೆಯ ಮೊದಲ ನೆರವೇರಿಕೆ ಏನಾಗಿತ್ತು ಅನ್ನೋದು ನಿಮಗೆ ನೆನಪಿದೆಯಾ?

      ಜಾನ್‌: ನೆಬೂಕದ್ನೆಚ್ಚರನ ವಿಷಯದಲ್ಲೇ ಅದು ನೆರವೇರಿತು. ಏಳು ವರ್ಷ ಅವನಿಗೆ ಬುದ್ಧಿ ಭ್ರಮಣೆ ಆಗಿತ್ತು.

      ಕುಮಾರ್‌: ಕರೆಕ್ಟ್‌. ಏಳು ವರ್ಷ ನೆಬೂಕದ್ನೆಚ್ಚರನಿಗೆ ಬುದ್ಧಿ ಭ್ರಮಣೆ ಆಯ್ತು. ಹಾಗಾಗಿ ಅವನ ಆಳ್ವಿಕೆ ಸ್ಥಗಿತಗೊಂಡಿತು. ಆದರೆ ಆ ಪ್ರವಾದನೆಯ ಎರಡನೆಯ ನೆರವೇರಿಕೆಯಲ್ಲಿ ದೇವರ ಆಳ್ವಿಕೆ ಏಳು ಕಾಲಗಳು ಸ್ಥಗಿತಗೊಂಡಿತು. ನಾವೀಗಾಗಲೇ ನೋಡಿದಂತೆ ಕ್ರಿ.ಪೂ. 607⁠ರಲ್ಲಿ ಯೆರೂಸಲೇಮ್‌ ಪಟ್ಟಣ ನಾಶವಾದಾಗ ಆ ಏಳು ಕಾಲಗಳು ಪ್ರಾರಂಭವಾಯಿತು. ಆ ಸಮಯದಿಂದ ಭೂಮಿಯ ಮೇಲೆ ಯೆಹೋವನ ಆಳ್ವಿಕೆಯನ್ನು ಪ್ರತಿನಿಧಿಸುತ್ತಿದ್ದ ರಾಜರೇ ಇರಲಿಲ್ಲ. ಆದರೆ ಆ ಏಳು ಕಾಲಗಳ ಅಂತ್ಯದಲ್ಲಿ ತನ್ನ ಜನರಿಗಾಗಿ ಯೆಹೋವನು ಒಬ್ಬ ಹೊಸ ರಾಜನನ್ನು ನೇಮಿಸಲಿದ್ದನು. ಆ ರಾಜನು ಸ್ವರ್ಗದವನು. ಇನ್ನೊಂದು ರೀತಿ ಹೇಳಬೇಕೆಂದರೆ, ಏಳು ಕಾಲಗಳ ಅಂತ್ಯದಲ್ಲಿ ದೇವರ ಸ್ವರ್ಗೀಯ ಸರ್ಕಾರದ ಆಳ್ವಿಕೆ ಪ್ರಾರಂಭವಾಗಲಿತ್ತು. ಈಗಾಗಲೇ ಏಳು ಕಾಲಗಳು ಯಾವಾಗ ಪ್ರಾರಂಭವಾಯಿತು ಅನ್ನೋದನ್ನು ನಾವು ನೋಡಿದ್ದೇವೆ. ಏಳು ಕಾಲಗಳ ಸಮಯಾವಧಿ ಎಷ್ಟು ದೀರ್ಘವಾಗಿತ್ತು ಅನ್ನೋದು ಗೊತ್ತಾದರೆ ದೇವರ ರಾಜ್ಯದ ಆಳ್ವಿಕೆ ಯಾವ ವರ್ಷದಲ್ಲಿ ಪ್ರಾರಂಭವಾಯಿತು ಅನ್ನೋದನ್ನೂ ನಾವು ಕಲಿಯಬಹುದು. ಇಷ್ಟರವರೆಗೂ ಹೇಳಿದ್ದು ನಿಮಗೆ ಅರ್ಥ ಆಗಿದೆ ಅಂತ ಅಂದುಕೊಳ್ಳುತ್ತೇನೆ.

      ಜಾನ್‌: ಹ್ಞಾಂ! ಚೆನ್ನಾಗಿ ಅರ್ಥ ಆಯ್ತು.

      ಕುಮಾರ್‌: ಗುಡ್‌. ಹಾಗಾದರೆ ಇವತ್ತು ಆ ಏಳು ಕಾಲಗಳು ಎಷ್ಟು ದೀರ್ಘವಾಗಿತ್ತು ಅನ್ನೋದನ್ನು ನೋಡೋಣ. ನಾನು ಇದರ ಬಗ್ಗೆ ಏನು ಕಲಿತಿದ್ದೇನೋ ಆ ಅಂಶಗಳನ್ನು ನನಗೆ ಗೊತ್ತಿರುವಷ್ಟು ವಿವರಿಸ್ತೇನೆ.

      ಜಾನ್‌: ಆಯ್ತು.

      ಏಳು ಕಾಲಗಳ ಅಂತ್ಯ—ಕಡೇ ದಿವಸಗಳ ಆರಂಭ

      ಕುಮಾರ್‌: ನೆಬೂಕದ್ನೆಚ್ಚರನಿಗೆ ಸಂಬಂಧಪಟ್ಟ ಮೊದಲ ನೆರವೇರಿಕೆಯಲ್ಲಿ ಆ ಏಳು ಕಾಲಗಳು ಅಕ್ಷರಶಃ ಏಳು ವರ್ಷಗಳಾಗಿದ್ದವು. ಆದರೆ ದೇವರ ರಾಜ್ಯಕ್ಕೆ ಸಂಬಂಧಪಟ್ಟ ಎರಡನೇ ನೆರವೇರಿಕೆಯಲ್ಲಿ ಆ ಏಳು ಕಾಲಗಳು ಅಕ್ಷರಶಃ ಏಳು ವರ್ಷಗಳಾಗಿರಲಿಲ್ಲ, ಬದಲಿಗೆ ಅದು ಇನ್ನೂ ಹೆಚ್ಚು ದೀರ್ಘವಾಗಿತ್ತು.

      ಜಾನ್‌: ಇನ್ನೂ ಹೆಚ್ಚು ದೀರ್ಘವಾಗಿತ್ತು ಅಂತ ಹೇಗೆ ಹೇಳುತ್ತೀರಾ?

      ಕುಮಾರ್‌: ನಿಮಗೆ ನೆನಪಿದ್ಯಾ, ಯೆರೂಸಲೇಮ್‌ ಪಟ್ಟಣ ಕ್ರಿ.ಪೂ. 607⁠ರಲ್ಲಿ ನಾಶವಾದಾಗ ಏಳು ಕಾಲಗಳು ಪ್ರಾರಂಭವಾದವು. ಏಳು ಕಾಲಗಳನ್ನು ಏಳು ವರ್ಷಗಳಂತ ಅಂದುಕೊಂಡರೆ ಅದು ಕ್ರಿ.ಪೂ. 607ರಿಂದ ಕ್ರಿ.ಪೂ. 600⁠ಕ್ಕೆ ಬಂದು ನಿಲ್ಲುತ್ತೆ. ಆದರೆ ಆ ವರ್ಷದಲ್ಲಿ ದೇವರ ಆಳ್ವಿಕೆಗೆ ಸಂಬಂಧಪಟ್ಟ ಯಾವುದೇ ಪ್ರಾಮುಖ್ಯ ಘಟನೆಗಳು ಸಂಭವಿಸಲಿಲ್ಲ. ಅಷ್ಟೇ ಅಲ್ಲದೇ, ಯೇಸು ಭೂಮಿಯ ಮೇಲಿದ್ದಾಗಲೂ ಆ ಏಳು ಕಾಲಗಳು ಇನ್ನೂ ಮುಗಿದಿರಲಿಲ್ಲ ಅನ್ನೋದನ್ನು ನಾವು ಹೋದ ಸಲ ಕಲಿತಿದ್ದೆವು.

      ಜಾನ್‌: ಹ್ಞಾಂ ಹೌದು, ನನಗೆ ಈಗ ನೆನಪಾಯಿತು.

      ಕುಮಾರ್‌: ಹಾಗಾಗಿ, ಆ ಏಳು ಕಾಲಗಳು ಏಳು ವರ್ಷಗಳಾಗಿರಲಿಲ್ಲ ಬದಲಿಗೆ ಅವು ಸ್ವಲ್ಪ ದೀರ್ಘವಾಗಿದ್ದವು ಅಂತ ಹೇಳಬಹುದು.

      ಜಾನ್‌: ಹಾಗಾದರೆ, ಅವು ಎಷ್ಟು ದೀರ್ಘವಾಗಿದ್ದವು?

      ಕುಮಾರ್‌: ಇದನ್ನು ತಿಳಿದುಕೊಳ್ಳೋಕೆ, ನಾವು ಬೈಬಲಿನ ಕೊನೇ ಪುಸ್ತಕವಾದ ಪ್ರಕಟನೆಯನ್ನು ನೋಡಬೇಕು. ಆ ಪುಸ್ತಕದಲ್ಲಿರುವ ವಿಷಯಗಳಿಗೂ ದಾನಿಯೇಲ ಪುಸ್ತಕದಲ್ಲಿರುವ ವಿಷಯಗಳಿಗೂ ಸಾಕಷ್ಟು ಹೋಲಿಕೆಗಳಿವೆ. ಪ್ರಕಟನೆ ಪುಸ್ತಕ ಮೂರುವರೆ ಕಾಲಗಳು 1,260 ದಿನಗಳಿಗೆ ಸಮ ಎಂದು ಹೇಳುತ್ತದೆ.d ಹಾಗಾದರೆ, ಏಳು ಕಾಲಗಳು 2,520 ದಿನಗಳಾಗುತ್ತವೆ. ಇದು ನಿಮಗೆ ಅರ್ಥ ಆಯ್ತಾ?

      ಕುಮಾರ್‌ ಮತ್ತು ಜಾನ್‌ ಬೈಬಲ್‌ ಚರ್ಚೆ ಮಾಡುತ್ತಿದ್ದಾರೆ

      ಜಾನ್‌: ಹ್ಞಾಂ ಅರ್ಥ ಆಯ್ತು. ಆದರೆ ಈ ವಿಷಯದಿಂದ ದೇವರ ರಾಜ್ಯದ ಆಳ್ವಿಕೆ 1914⁠ರಲ್ಲೇ ಶುರುವಾಯಿತು ಅಂತ ಹೇಗೆ ಹೇಳಬಹುದು ಅನ್ನೋದು ಅರ್ಥ ಆಗಲಿಲ್ಲ.

      ಕುಮಾರ್‌: ಅದರ ಬಗ್ಗೆ ನಾವೀಗ ನೋಡೋಣ. ಬೈಬಲಿನ ಕೆಲವೊಂದು ಪ್ರವಾದನೆಗಳಲ್ಲಿರುವ ಒಂದು ದಿನ ಒಂದು ವರ್ಷಕ್ಕೆ ಸಮವಾಗಿದೆ.e ಅದೇ ವಿಷಯವನ್ನು ಈ ಪ್ರವಾದನೆಗೂ ಅನ್ವಯಿಸುವುದಾದರೆ ಏಳು ಕಾಲಗಳು 2,520 ವರ್ಷಗಳಿಗೆ ಸಮವಾಗುತ್ತವೆ. ಕ್ರಿ.ಪೂ. 607ರಿಂದ 2,520 ವರ್ಷಗಳನ್ನು ಎಣಿಸುತ್ತಾ ಬಂದರೆ ಅದು ಇಸವಿ 1914⁠ಕ್ಕೆ ಬಂದು ನಿಲ್ಲುತ್ತೆ.f ಹೀಗೆ 1914⁠ಕ್ಕೆ ಏಳು ಕಾಲಗಳು ಅಂತ್ಯವಾದವು ಮತ್ತು ಯೇಸು ದೇವರ ರಾಜ್ಯದ ರಾಜನಾಗಿ ಆಳಲು ಪ್ರಾರಂಭಿಸಿದನು ಅಂತ ಹೇಳಬಹುದು. ಇನ್ನೊಂದು ಆಸಕ್ತಿಕರ ವಿಷಯವೇನೆಂದರೆ ಬೈಬಲ್‌ನಲ್ಲಿ ಮುಂಚೆನೇ ದಾಖಲಿಸಲಾದ ಕೆಲವೊಂದು ಸಂಗತಿಗಳು 1914⁠ರಲ್ಲಿ ಪ್ರಪಂಚದಲ್ಲೆಲ್ಲ ನಡೆದವು.

      ಜಾನ್‌: 1914⁠ರಲ್ಲಿ ಏನಾಯ್ತು?

      ಕುಮಾರ್‌: ಮತ್ತಾಯ 24:7⁠ರಲ್ಲಿ ಯೇಸು ಹೇಳಿರುವ ಮಾತನ್ನು ಗಮನಿಸಿದರೆ ಏನಾಯ್ತು ಅಂತ ನಮಗೆ ಗೊತ್ತಾಗುತ್ತೆ. ಯಾವಾಗ ತಾನು ಆಳ್ವಿಕೆಯನ್ನು ಪ್ರಾರಂಭಿಸುತ್ತೇನೆ ಅನ್ನೋದನ್ನು ವಿವರಿಸುತ್ತಾ ಯೇಸು ಹೀಗೆ ಹೇಳುತ್ತಾನೆ: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಆಹಾರದ ಕೊರತೆಯೂ ಭೂಕಂಪಗಳೂ ಆಗುವವು.” ಗಮನಿಸಿದ್ರಾ, ಯೇಸು ಆಳ್ವಿಕೆ ಪ್ರಾರಂಭಿಸುವಾಗ ಆಹಾರದ ಅಭಾವ ಇರುತ್ತೆ, ಅಲ್ಲಲ್ಲಿ ಭೂಕಂಪಗಳಾಗುತ್ತವೆ ಅನ್ನೋದನ್ನು ಅವನು ಮುಂತಿಳಿಸಿದನು. ಕಳೆದ ನೂರು ವರ್ಷಗಳಿಂದ ಇಂಥ ಕಷ್ಟಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ನಿಜ ತಾನೇ?

      ಜಾನ್‌: ನಿಜ.

      ಕುಮಾರ್‌: ಈ ವಚನದಲ್ಲಿ, ತಾನು ರಾಜನಾಗಿ ಬರುವಾಗ ಯುದ್ಧಗಳು ಸಹ ಸಂಭವಿಸುತ್ತವೆ ಅಂತ ಯೇಸು ತಿಳಿಸಿದ್ದಾನೆ. ಪ್ರಕಟನೆ ಪುಸ್ತಕವು ಕೂಡ ಕೇವಲ ಕೆಲವು ಕಡೆಗಳಲ್ಲಿ ಮಾತ್ರ ಯುದ್ಧಗಳಾಗುತ್ತವೆ ಅಂತಲ್ಲ ಬದಲಿಗೆ ಲೋಕದಲ್ಲೆಲ್ಲ ಯುದ್ಧಗಳು ಆಗುತ್ತವೆ ಅಂತ ತಿಳಿಸಿತು.g ಮೊದಲ ಮಹಾಯುದ್ಧ ಯಾವ ವರ್ಷದಲ್ಲಿ ಶುರುವಾಯಿತು ಅಂತ ನಿಮಗೆ ಗೊತ್ತಾ?

      ಜಾನ್‌: 1914⁠ರಲ್ಲೇ ತಾನೇ? ಯೇಸು ಆಳ್ವಿಕೆ ಆರಂಭಿಸಿದ ಅಂತ ನೀವು ಏನು ಹೇಳುತ್ತಿದ್ದೀರೋ ಅದೇ 1914⁠ರಲ್ಲಿ ಮೊದಲ ಮಹಾಯುದ್ಧ ನಡೀತಲ್ವ! ನಾನು ಯಾವತ್ತೂ ಇದರ ಬಗ್ಗೆ ಯೋಚನೆಯೇ ಮಾಡಿರಲಿಲ್ಲ.

      ಕುಮಾರ್‌: ಏಳು ಕಾಲಗಳ ಬಗ್ಗೆ ಇರುವ ಪ್ರವಾದನೆ ಮತ್ತು ಕಡೇ ದಿವಸಗಳ ಬಗ್ಗೆ ಇರುವ ಪ್ರವಾದನೆಗಳನ್ನು ಒಂದಕ್ಕೊಂದು ಜೋಡಿಸಿದಾಗ ನಮಗೆ ಸ್ಪಷ್ಟವಾದ ಚಿತ್ರಣ ಸಿಗುತ್ತೆ. ಹೀಗೆ 1914⁠ರಲ್ಲಿ ದೇವರ ರಾಜ್ಯಕ್ಕೆ ಯೇಸು ರಾಜನಾದನು ಮತ್ತು ಅದೇ ವರ್ಷದಲ್ಲಿ ಕಡೇ ದಿವಸಗಳು ಪ್ರಾರಂಭವಾದವು ಅನ್ನೋ ಇತ್ಯರ್ಥಕ್ಕೆ ಯೆಹೋವನ ಸಾಕ್ಷಿಗಳು ಬಂದಿದ್ದಾರೆ.h

      ಜಾನ್‌: ನಂಗೆ ಇದೆಲ್ಲ ವಿಷಯಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲು ಇನ್ನೂ ಸ್ವಲ್ಪ ಸಮಯ ಬೇಕು.

      ಕುಮಾರ್‌: ನೀವು ಹೇಳಿದ್ದು ಸತ್ಯ. ನಂಗೂ ಸಹ ಇದನ್ನೆಲ್ಲ ಅರ್ಥ ಮಾಡಿಕೊಳ್ಳಲು ತುಂಬ ಸಮಯ ಹಿಡೀತು. 1914 ಅನ್ನೋ ಇಸವಿ ಬೈಬಲಿನಲ್ಲಿ ಕೊಟ್ಟಿಲ್ಲ ನಿಜ. ಆದರೂ ಅದೇ ವರ್ಷದಲ್ಲಿ ದೇವರ ರಾಜ್ಯದ ಆಳ್ವಿಕೆ ಪ್ರಾರಂಭವಾಯಿತು ಎಂಬ ಯೆಹೋವನ ಸಾಕ್ಷಿಗಳ ನಂಬಿಕೆ ಬೈಬಲ್‌ ಆಧರಿತವಾಗಿದೆ ಎಂದು ನಮ್ಮ ಈ ಚರ್ಚೆಯಿಂದ ನಿಮಗೆ ಅರ್ಥ ಆಗಿರಬಹುದು.

      ಜಾನ್‌: ಹ್ಞಾಂ ಅರ್ಥ ಆಯ್ತು. ಏನೇ ಕೇಳಿದರೂ, ನಿಮ್ಮ ಮನಸ್ಸಿಗೆ ಬಂದಿದ್ದನ್ನು ಹೇಳದೆ ಅದನ್ನು ಬೈಬಲಿನಿಂದ ತೋರಿಸುತ್ತೀರ. ಅದು ನಂಗೆ ತುಂಬ ಇಷ್ಟ ಆಗುತ್ತೆ. ಆದರೆ ನಂಗೊಂದು ಪ್ರಶ್ನೆ. 1914⁠ರಲ್ಲೇ ಯೇಸು ರಾಜನಾಗಿ ಸ್ವರ್ಗದಿಂದ ಆಳ್ವಿಕೆ ಮಾಡುತ್ತಾನೆ ಅಂತ ದೇವರು ಬೈಬಲಿನಲ್ಲಿ ನೇರವಾಗಿ ಹೇಳಬಹುದಿತ್ತಲ್ವಾ? ಯಾಕೆ ಹೇಳಲಿಲ್ಲ?

      ಕುಮಾರ್‌: ಒಳ್ಳೇ ಪ್ರಶ್ನೆ ಕೇಳಿದ್ರಿ ಜಾನ್‌. ಹಾಗೆ ಇನ್ನೂ ಕೆಲವು ವಿಷಯಗಳನ್ನು ಬೈಬಲಿನಲ್ಲಿ ಸುಲಭವಾಗಿ ಅರ್ಥ ಆಗುವಂಥ ರೀತಿಯಲ್ಲಿ ಬರೆದಿಲ್ಲ. ಯಾಕೆ ಆ ರೀತಿಯಲ್ಲಿ ಬರೆಸಲಿಲ್ಲ ಅಂತ ಮುಂದಿನ ಭೇಟಿಯಲ್ಲಿ ನಾವು ಮಾತಾಡಬಹುದು.

      ಜಾನ್‌: ಸರಿ. ಮಾತಾಡೋಣ. ▪ (w14-E 11/01)

      ಬೈಬಲಿನಲ್ಲಿರುವ ಯಾವುದಾದರೂ ವಿಷಯವನ್ನು ಕಲಿಯಲು ನಿಮಗೆ ಆಸಕ್ತಿಯಿದೆಯಾ? ಯೆಹೋವನ ಸಾಕ್ಷಿಗಳ ನಂಬಿಕೆಗಳೇನು ಅಥವಾ ಅವರ ಆಚಾರ-ವಿಚಾರಗಳೇನು ಎನ್ನುವುದರ ಬಗ್ಗೆ ಕುತೂಹಲವಿದೆಯಾ? ಈ ವಿಷಯಗಳನ್ನು ತಿಳಿದುಕೊಳ್ಳಲು ನಿಮಗೆ ಇಷ್ಟವಿದ್ದರೆ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ. ಅವರು ನಿಮಗೆ ಹೆಚ್ಚಿನ ಮಾಹಿತಿಯನ್ನು ತಿಳಿಸುತ್ತಾರೆ.

      ನೆಬೂಕದ್ನೆಚ್ಚರನು ಕಂಡ ಕನಸಿಗೆ ಸಂಬಂಧಪಟ್ಟ ಸಮಯಾವಧಿ ಮತ್ತು ಘಟನೆಗಳನ್ನು ತೋರಿಸುತ್ತಿರುವ ಚಾರ್ಟ್‌

      a ಬೈಬಲ್‌ ಅಧ್ಯಯನ ಎಂದರೆ ಬೈಬಲ್‌ ಬಗ್ಗೆ ಕಲಿಯಲು ಆಸಕ್ತಿ ಇರುವವರ ಜೊತೆ ಯೆಹೋವನ ಸಾಕ್ಷಿಗಳು ಮಾಡುವ ಬೈಬಲ್‌ ಆಧರಿತ ಚರ್ಚೆಯಾಗಿದೆ. ಈ ಅಧ್ಯಯನದಲ್ಲಿ ಬೈಬಲ್‌ನಲ್ಲಿರುವ ವಿಷಯಗಳನ್ನು ಹಂತ ಹಂತವಾಗಿ ಚರ್ಚಿಸಲಾಗುತ್ತದೆ.

      b ಈ ಪತ್ರಿಕೆಯ ಜನವರಿ-ಮಾರ್ಚ್‌ 2015⁠ರ ಸಂಚಿಕೆಯಲ್ಲಿರುವ “ದೇವರ ರಾಜ್ಯದ ಆಳ್ವಿಕೆ ಯಾವಾಗ ಆರಂಭವಾಯಿತು?—ಭಾಗ 1” ಎಂಬ ಲೇಖನ ನೋಡಿ.

      c ದಾನಿಯೇಲ 4:23-25.

      d ಪ್ರಕಟನೆ 12:6, 14 ನೋಡಿ.

      e ಅರಣ್ಯಕಾಂಡ 14:34; ಯೆಹೆಜ್ಕೇಲ 4:6.

      f “ನೆಬೂಕದ್ನೆಚ್ಚರನು ನೋಡಿದ ಮರದ ಕನಸು” ಎಂಬ ಚಾರ್ಟ್‌ ನೋಡಿ.

      g ಪ್ರಕಟನೆ 6:4.

      h ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 9 ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. www.jw.org ವೆಬ್‌ಸೈಟ್‌ನಲ್ಲೂ ಲಭ್ಯ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ