ತಮ್ಮ ಹೆತ್ತವರಿಗೆ ಒಂದು ವಿಶೇಷ ಪತ್ರ
ಇಬ್ಬರು ಹದಿವಯಸ್ಕ ಹುಡುಗಿಯರು ಇತ್ತೀಚೆಗೆ ತಮ್ಮ ಹೆತ್ತವರಿಗೆ ಗಣ್ಯತೆಯನ್ನು ಸೂಚಿಸುತ್ತಾ ಒಂದು ಪತ್ರವನ್ನು ಬರೆದರು. ಅವುಗಳ ಕೆಲವೊಂದು ತುಣುಕುಗಳು ಇಲ್ಲಿವೆ:
ಪ್ರೀತಿಯ ಅಪ್ಪ ಪೆಪೆ ಮತ್ತು ಅಮ್ಮ ಬೀತೇಂಟಾರಿಗೆ,
ಹಾಂ, ವಿಷಯವನ್ನು ಎಲ್ಲಿಂದ ಆರಂಭಿಸುವುದು? ನಮಗೆ ಹೇಳಲಿಕ್ಕೆ ಅನೇಕ ವಿಷಯಗಳಿವೆ ಆದರೆ, ಅವುಗಳನ್ನು ಕೆಲವೊಂದು ಪದಗಳಲ್ಲಿ ಹೇಳುವುದು ಕಷ್ಟಕರ. ನಾವು ನಿಮ್ಮೊಡನೆ ಕಳೆದ 17 ವರ್ಷಗಳ ಮತ್ತು 15 ವರ್ಷಗಳ ಜೀವಿತಕ್ಕಾಗಿ ನಿಮಗೆ ಧನ್ಯವಾದವನ್ನು ಅರ್ಪಿಸಲು ಇಷ್ಟಪಡುತ್ತೇವೆ. ಈ ವರ್ಷಗಳಲ್ಲೆಲ್ಲ ನೀವು ನಮ್ಮ ಬಗ್ಗೆ ತುಂಬ ಕಾಳಜಿಯನ್ನು ವಹಿಸಿದ್ದೀರಿ ಮತ್ತು ಮಮತೆಯ ಮಹಾಪೂರವನ್ನೇ ಹರಿಸಿದ್ದೀರಿ.
ನಿಮ್ಮ ಅಭಿಪ್ರಾಯಗಳು, ನಿಯಮಗಳು ನಮಗೆ ಯಾವಾಗಲೂ ತಿಳಿದಿದ್ದವು. ಕೆಲವೊಮ್ಮೆ ನಾವು ಹೀಗೆ ಯೋಚಿಸುತ್ತಿದ್ದೆವು, ನಾವು ಏಕೆ ನಿಗದಿತ ಸಮಯಕ್ಕೆ ಮನೆಗೆ ಹಿಂದಿರುಗಬೇಕು? ಆದರೆ ಯಾರ ಮನೆಯಲ್ಲಿ ನಿಗದಿತ ಸಮಯವನ್ನು ಇಟ್ಟಿರಲಿಲ್ಲವೋ ಆ ಮನೆಯ ಯುವ ಜನರ ಜೀವನದ ಮೇಲೆ ಉಂಟಾದ ದುಷ್ಪರಿಣಾಮಗಳನ್ನು ನೋಡಿದ ಮೇಲೆ, ಆ ನಿಯಮಗಳ ಕಾರಣದಿಂದಲೇ ನಾವು ಸಂರಕ್ಷಿಸಲ್ಪಟ್ಟಿದ್ದೇವೆ ಎಂಬುದನ್ನು ನಾವು ಈಗ ಅರಿತಿದ್ದೇವೆ.
ಸಮಂಜಸವಾದ ಕಾರಣಗಳನ್ನು ಹೊರತುಪಡಿಸಿ, ಪ್ರತಿಯೊಂದು ಕೂಟಕ್ಕೂ ರಾಜ್ಯ ಸಭಾಗೃಹಕ್ಕೆ ತಪ್ಪದೇ ಹೋಗುವುದು ಅಷ್ಟುಮಾತ್ರವಲ್ಲದೆ, ಭಾನುವಾರಗಳಂದು ನಮ್ಮೊಂದಿಗೆ ಸಾರುವುದರಲ್ಲಿ ನೀವು ಇಟ್ಟ ಮಾದರಿ ನಿಜವಾಗಿಯೂ ಶ್ಲಾಘನೀಯವಾದುದು. ಭಾನುವಾರದ ಬೆಳಗ್ಗೆ ನಾವು ಕ್ಷೇತ್ರ ಸೇವೆಗೆ ಹೋಗಬೇಕೋ ಇಲ್ಲವೋ ಎಂಬ ಪ್ರಶ್ನೆಯು ಉದ್ಭವಿಸುತ್ತಲೇ ಇರಲಿಲ್ಲ. ಅದಕ್ಕೆ ಬದಲಾಗಿ ನಾವು ಸೇವೆಗೆ ಹೋಗುತ್ತೇವೆ ಎಂಬುದು ನಮಗೆ ಚೆನ್ನಾಗಿ ಗೊತ್ತಿತ್ತು.
ಇತರರಿಗೆ ಅತಿಥಿಸತ್ಕಾರವನ್ನು ತೋರಿಸುವುದರಲ್ಲಿಯೂ ನೀವು ಉತ್ತಮ ಮಾದರಿಯನ್ನಿಟ್ಟಿದ್ದೀರಿ. ನಮ್ಮ ಮನೆಗೆ ಅನೇಕರು ಬಂದುಹೋದಾಗ, ಅವರನ್ನು ನೀವು ಅತ್ಯಾದರದಿಂದ ಉಪಚರಿಸಿದ್ದೀರಿ. ಇವುಗಳನ್ನು ನಾವು ನಮ್ಮ ಕಣ್ಣಾರೆ ನೋಡಿದ್ದೇವೆ ಮತ್ತು ಇಷ್ಟೊಂದು ಒಳ್ಳೆಯ ಹೆತ್ತವರನ್ನು ಪಡೆದಿರುವುದಕ್ಕಾಗಿ ನಾವು ಧನ್ಯರು.
ನೀವು ನಮ್ಮನ್ನು ಅರ್ಥಮಾಡಿಕೊಂಡಿರುವಷ್ಟು ಹೆಚ್ಚಾಗಿ ಇನ್ಯಾರೂ ಅರ್ಥಮಾಡಿಕೊಳ್ಳಸಾಧ್ಯವಿಲ್ಲ. ನೀವು ನಮ್ಮ ಆಪ್ತ ಮಿತ್ರರಾಗಿದ್ದೀರಿ. ಮತ್ತು ನಮಗೆ ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿದೆ.
ಕೊನೆಯದಾಗಿ ನಾವು ನಿಮ್ಮನ್ನು ತುಂಬ ಪ್ರೀತಿಸುತ್ತೇವೆ ಎಂದು ಹೇಳಲು ಬಯಸುತ್ತೇವೆ. ನಮ್ಮನ್ನು ಈ ಭೂಮಿಗೆ ತಂದವರು ನೀವೇ ಮತ್ತು ನಿಮ್ಮ ಸ್ಥಾನವನ್ನು ಇನ್ಯಾರೂ ತೆಗೆದುಕೊಳ್ಳಸಾಧ್ಯವಿಲ್ಲ. ಯಾವುದಾದರೂ ರೀತಿಯಲ್ಲಿ ಪುನಃ ಒಮ್ಮೆ ನಮ್ಮ ಹೆತ್ತವರನ್ನು ಮತ್ತು ಜೀವಿತದ ಮಾರ್ಗವನ್ನು ಆರಿಸಿಕೊಳ್ಳುವ ಅವಕಾಶವು ನಮಗೆ ಸಿಕ್ಕುವಲ್ಲಿ, ನಾವು ನಿಮ್ಮನ್ನೇ ಆರಿಸಿಕೊಳ್ಳುವೆವು ಮತ್ತು ಈಗ ಜೀವಿಸುತ್ತಿರುವ ಜೀವನಕ್ರಮವನ್ನೇ ಅನುಸರಿಸುವೆವು ಎಂಬುದರಲ್ಲಿ ಎರಡು ಮಾತಿಲ್ಲ.
ಸಿಹಿಮುತ್ತುಗಳೊಂದಿಗೆ, ನಿಮ್ಮ ಪುತ್ರಿಯರಾದ,
ಎಸ್ಮೆರಾಲ್ಡಾ ಮತ್ತು ಯೋಲಾಂಡ