ನಮ್ಮ ಸಂಗ್ರಹಾಲಯ
ನ್ಯೂಜಿಲೆಂಡ್ನಲ್ಲಿರೋ ಯೆಹೋವನ ಸಾಕ್ಷಿಗಳು ಅಪಾಯಕಾರಿಗಳಾ? ಅಮಾಯಕರಾ?
1940 ಅಕ್ಟೋಬರ್ 21 ರಂದು ನ್ಯೂಜಿಲೆಂಡ್ನಲ್ಲಿರುವ ಯೆಹೋವನ ಸಾಕ್ಷಿಗಳನ್ನ ಸಾರ್ವಜನಿಕರಿಗೆ ತೊಂದರೆ ಕೊಡುವ ಒಂದು ಸಂಘಟನೆ ಅಂತ ಅಲ್ಲಿನ ಸರ್ಕಾರ ಆರೋಪ ಹೊರಿಸಿತು. ಆದ್ರೆ ಸರ್ಕಾರದಿಂದ ಎಷ್ಟೇ ವಿರೋಧ ಬಂದ್ರೂ ಅವ್ರು ಭಯಪಡ್ಲಿಲ್ಲ. ಉದಾಹರಣೆಗೆ ಕೂಟಗಳಿಗೆ ಹೋದ್ರೆ ಅಧಿಕಾರಿಗಳು ತಮ್ಮನ್ನ ರೇಡ್ ಮಾಡಬಹುದು ಅಥವಾ ಅರೆಸ್ಟ್ ಮಾಡಬಹುದು ಅಂತ ಗೊತ್ತಿದ್ರೂ ಸಹೋದರರು ಆರಾಧನೆಗೆ ಸೇರಿಬರ್ತಿದ್ರು.
ಮೇರಿ ಅನ್ನೋ ಸಹೋದರಿಯ ಗಂಡನಾದ ಆ್ಯಂಡಿ ಕ್ಲ್ಯಾರ್ಕ್ ಬಗ್ಗೆ ನೋಡಿ. ಅವ್ರು ಸತ್ಯದಲ್ಲಿ ಇರ್ಲಿಲ್ಲ. ಸರ್ಕಾರ ಸಾಕ್ಷಿಗಳ ಮೇಲೆ ನಿಷೇಧ ತಂದಾಗಲೂ ತನ್ನ ಹೆಂಡತಿ ತಪ್ಪದೇ ಕೂಟಗಳಿಗೆ ಹೋಗ್ತಿರೋದನ್ನ ಗಮನಿಸಿದ್ರು. ಆಗ ತನ್ನ ಹೆಂಡತಿನೂ ಅರೆಸ್ಟಾಗಬಹುದು ಅನ್ನೋ ಭಯ ಅವ್ರನ್ನ ಕಾಡಿತು. ಹಾಗಾಗಿ ಅವ್ರೂ ಹೆಂಡತಿಯ ಜೊತೆ ಕೂಟಗಳಿಗೆ ಹೋಗೋಕೆ ಶುರುಮಾಡಿದ್ರು. ಆದ್ರೆ ಮುಂಚೆ ಅವ್ರು ಕೂಟಗಳಿಗೆ ಹೋಗ್ತಿರಲಿಲ್ಲ. ಆ್ಯಂಡಿ ತನ್ನ ಹೆಂಡತಿಗೆ, “ಅಧಿಕಾರಿಗಳು ನಿನ್ನನ್ನ ಅರೆಸ್ಟ್ ಮಾಡಿದ್ರೆ ನನ್ನನ್ನೂ ಅರೆಸ್ಟ್ ಮಾಡಬೇಕಾಗುತ್ತೆ.” ಅಂತ ಹೇಳಿದ್ರು. ಅವತ್ತಿಂದ ಸಭಾಕೂಟಕ್ಕೆ ತಪ್ಪದೆ ಹೋಗುತ್ತಿದ್ದ ಆ್ಯಂಡಿ ಕೂಡಲೇ ದೀಕ್ಷಾಸ್ನಾನ ತಗೊಂಡು ಯೆಹೋವನ ಸಾಕ್ಷಿಯಾದ್ರು. ಎರಡನೇ ಲೋಕ ಯುದ್ಧದಲ್ಲಿ ಎಷ್ಟೇ ಹಿಂಸೆಯನ್ನ ಅನುಭವಿಸಿದ್ರೂ ನ್ಯೂಜಿಲೆಂಡಿನ ಅನೇಕ ಸಾಕ್ಷಿಗಳು ಆರಾಧನೆಯ ವಿಷಯದಲ್ಲಿ ದೃಢ ತೀರ್ಮಾನ ತೆಗೆದುಕೊಂಡಿದ್ರು. ಅವ್ರಲ್ಲಿ ಸಹೋದರಿ ಮೇರಿ ಕೂಡ ಒಬ್ಬರು.
ಸೆರೆಯಲ್ಲೂ ಸಿಹಿಸುದ್ದಿ
78 ವರ್ಷದ ಸಹೋದರ ಜಾನ್ ಮರೇ ಮನೆ ಮನೆ ಸೇವೆ ಮಾಡ್ತಿದ್ದಾಗ ಪೊಲೀಸರು ಅವ್ರನ್ನ ಹಿಡಿದ್ರು. ಸಾರ್ವಜನಿಕರಿಗೆ ತೊಂದ್ರೆ ಕೊಡುವ ಸಂಘಟನೆಯ ಭಾಗ ಅಂತ ಕೋರ್ಟ್ ಅವ್ರ ಮೇಲೆ ಆರೋಪ ಹೊರಿಸ್ತು. ಹೀಗೆ ತುಂಬ ಸಾಕ್ಷಿಗಳನ್ನ ಕೋರ್ಟ್ ಮುಂದೆ ತರಲಾಯ್ತು. ಕೆಲವರಿಗೆ ದಂಡ ವಿಧಿಸಿದ್ರು, ಇನ್ನೂ ಕೆಲವ್ರಿಗೆ 3 ತಿಂಗಳು ಸೆರೆವಾಸವನ್ನ ವಿಧಿಸಿದ್ರು.
ಯೆಹೋವನ ಸಾಕ್ಷಿಗಳು ತಮ್ಮ ಬೈಬಲ್ ಶಿಕ್ಷಿತ ಮನಸ್ಸಾಕ್ಷಿ ಒಪ್ಪದೇ ಇದ್ದ ಕಾರಣ ಮಿಲಿಟರಿಗೆ ಸೇರಿಕೊಳ್ಳಲಿಲ್ಲ. (ಯೆಶಾಯ 2:4) ಹಾಗಾಗಿ 2 ನೇ ಲೋಕ ಯುದ್ಧದ ಸಮಯದಲ್ಲಿ ಸೈನ್ಯಕ್ಕೆ ಸೇರಬೇಕು ಅಂತ ಒತ್ತಾಯ ಮಾಡಿದಾಗ ನಮ್ಮ ಸಹೋದರರು ತುಂಬ ಕಷ್ಟವನ್ನ ಅನುಭವಿಸಬೇಕಾಯ್ತು. ಹೀಗೆ ಸೈನ್ಯಕ್ಕೆ ಸೇರದೇ ಇದ್ದ 80 ಸಹೋದರರನ್ನ ಸೆರೆಶಿಬಿರಕ್ಕೆ ಕಳುಹಿಸಲಾಯ್ತು. ಯುದ್ಧ ಮುಗಿಯೋ ತನಕ ಅವ್ರು ಅಲ್ಲೇ ಇರಬೇಕಾಯ್ತು. ಅಲ್ಲಿನ ಅಧಿಕಾರಿಗಳು ಸಹೋದರರ ಜೊತೆ ತುಂಬ ಕ್ರೂರವಾಗಿ ನಡೆದುಕೊಳ್ತಿದ್ರು. ಅಷ್ಟೇ ಅಲ್ಲ, ಅಲ್ಲಿ ವಿಪರೀತ ಚಳಿ ಕೂಡ ಇತ್ತು. ಇಷ್ಟೆಲ್ಲಾ ಆದ್ರೂ ನಮ್ಮ ಸಹೋದರರು ಖುಷಿ ಖುಷಿಯಾಗಿ ಯೆಹೋವನ ಆರಾಧನೆ ಮಾಡ್ತಿದ್ರು.
ಸೆರೆ ಶಿಬಿರದಲ್ಲಿದ್ದ ಸಾಕ್ಷಿಗಳು ಕೂಡಲೇ ಕೂಟಗಳನ್ನ ನಡೆಸೋಕೆ ಶುರುಮಾಡಿದ್ರು. ಅವ್ರು ಅಲ್ಲಿ ಕ್ಷೇತ್ರಸೇವಾ ಕೂಟವನ್ನ ಏರ್ಪಡಿಸ್ತಿದ್ರು. ಸೆರೆಯಲ್ಲೇ ಬೈಬಲ್ ಸತ್ಯ ಕಲಿತ ಕೆಲವ್ರು ದೀಕ್ಷಾಸ್ನಾನ ಪಡ್ಕೊಂಡ್ರು. ಅಲ್ಲಿ ಸಮ್ಮೇಳನವನ್ನ ನಡೆಸೋಕೆ ಕೂಡ ಅವ್ರಿಗೆ ಅನುಮತಿ ಸಿಕ್ತು. ಆದ್ರೆ ಅವ್ರ ಜೊತೆ ಒಬ್ಬ ಗಾರ್ಡ್ ಇರಬೇಕಿತ್ತು.
ಸೆರಶಿಬಿರದಲ್ಲಿರೋ ಸಾಕ್ಷಿಗಳು ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯನ್ನ ನಡೆಸ್ತಿದ್ದಾರೆ.
ನಾವು ಈಗಾಗಲೇ ನೋಡಿದ ಅನುಭವದಲ್ಲಿದ್ದ ಮೇರಿ ಮತ್ತು ಆ್ಯಂಡಿ ಅವರ ಮಗ ಬ್ರೂಸ್ ಹೀಗೆ ಹೇಳ್ತಾರೆ: “ನಾನು ಸೆರೆಶಿಬಿರದಲ್ಲಿ ಇದ್ದಿದ್ರಿಂದ ನನ್ನ ಆಧ್ಯಾತ್ಮಿಕ ಬೆಳವಣಿಗೆಗೆ ತುಂಬ ಸಹಾಯ ಆಯ್ತು. ಅಲ್ಲಿದ್ದ ಅನುಭವಸ್ಥ ಸಹೋದರರ ಜೊತೆ ಒಳ್ಳೇ ಚರ್ಚೆಗಳನ್ನ ನಡೆಸೋಕಾಯ್ತು. ಹಾಗಾಗಿ ಅವರ ಅನುಭವ ಮತ್ತು ಜ್ಞಾನದಿಂದ ನಂಗೆ ತುಂಬ ಕಲಿಯೋಕಾಯ್ತು.”
1944 ರಲ್ಲಿ ಅಲ್ಲಿನ ಸರ್ಕಾರ ಯೆಹೋವನ ಸಾಕ್ಷಿಗಳನ್ನ ಜೈಲಿನಿಂದ ಬಿಡುಗಡೆ ಮಾಡೋಕೆ ತೀರ್ಮಾನಿಸಿತು. ಆದ್ರೆ ಅದಕ್ಕೆ ಮಿಲಿಟರಿ ಅಧಿಕಾರಿಗಳು ಒಪ್ಪಲಿಲ್ಲ. ಯಾಕಂದ್ರೆ ‘ಯೆಹೋವನ ಸಾಕ್ಷಿಗಳನ್ನ ಬಿಡುಗಡೆ ಮಾಡಿದ್ರೆ ಅವ್ರು ತಮ್ಮ ನಂಬಿಕೆ ಬಗ್ಗೆ ಬೇರೆಯವ್ರ ಹತ್ತಿರ ಮಾತಾಡ್ತಾರೆ’ ಅನ್ನೋದು ಅವರ ವಾದವಾಗಿತ್ತು. ಆ ವರದಿ ಹೀಗೆ ಹೇಳುತ್ತೆ: “ಯೆಹೋವನ ಸಾಕ್ಷಿಗಳನ್ನ ಯಾವತ್ತೂ ಬದಲಾಯಿಸೋಕೆ ಆಗಲ್ಲ. ಜೈಲಲ್ಲಿ ಹಾಕಿದ್ರೆ ಸ್ವಲ್ಪ ಮಟ್ಟಿಗಾದ್ರೂ ಅವ್ರು ತಮ್ಮ ನಂಬಿಕೆ ಬಗ್ಗೆ ಬೇರೆಯವ್ರ ಹತ್ತಿರ ಹೇಳೋದನ್ನ ತಡೆಯಬಹುದು.”
ಯೆಹೋವನ ಸಾಕ್ಷಿಗಳು ಅಪಾಯಕಾರಿಗಳಲ್ಲ
ಯೆಹೋವನ ಸಾಕ್ಷಿಗಳನ್ನ ನಿಷೇಧಿಸಿದಾಗ ಅವರ ಬಗ್ಗೆ ಸಾರ್ವಜನಿಕರಿಗೆ ತುಂಬ ಕುತೂಹಲ ಹುಟ್ಟಿತು. ಸ್ವಲ್ಪದರಲ್ಲೇ ಯೆಹೋವನ ಸಾಕ್ಷಿಗಳು ಸಾರ್ವಜನಿಕರಿಗೆ ಅಪಾಯಕಾರಿಗಳಲ್ಲ ಅಂತ ತುಂಬ ಜನರಿಗೆ ಗೊತ್ತಾಯ್ತು. ಸಾಕ್ಷಿಗಳು ತುಂಬ ಅಮಾಯಕರು, ಶಾಂತಿಶೀಲ ಕ್ರೈಸ್ತರು ಅಂತ ಅವರು ಅರ್ಥಮಾಡಿಕೊಂಡ್ರು. ಹಾಗಾಗಿ 1939 ರಲ್ಲಿ 320 ಮಂದಿಯಿದ್ದ ಯೆಹೋವನ ಸಾಕ್ಷಿಗಳ ಸಂಖ್ಯೆ 1945 ರಷ್ಟಕ್ಕೆ 536 ಏರಿತು!
ಸಮಯ ಕಳೀತಿದ್ದಂತೆ ಕೆಲವು ಅಧಿಕಾರಿಗಳಿಗೆ ಯೆಹೋವನ ಸಾಕ್ಷಿಗಳ ಮೇಲೆ ಹಾಕಲಾದ ನಿಷೇಧ ಅನ್ಯಾಯವಾಗಿದೆ ಅಂತ ಅರ್ಥವಾಯ್ತು. ಒಬ್ಬ ಸಹೋದರ ಸಿಹಿಸುದ್ದಿ ಸಾರಿದ್ದರ ಬಗ್ಗೆ ಇದ್ದ ಕೇಸನ್ನ ವಿಚಾರಣೆ ಮಾಡ್ತಿದ್ದ ನ್ಯಾಯಾಧೀಶ ಹೀಗೆ ಹೇಳಿದ್ರು: “ಬೈಬಲನ್ನ ವಿತರಿಸುವುದು ತಪ್ಪು ಅಂತ ನಂಗೆ ಅನಿಸ್ತಿಲ್ಲ. ಅಷ್ಟೇ ಅಲ್ಲ, ಅದು ಕಾನೂನು ಬಾಹಿರ ಕೆಲಸನೂ ಅಲ್ಲ.” ಹೀಗೆ ಅವ್ರು ಆ ಕೇಸನ್ನ ತಳ್ಳಿಹಾಕಿದ್ರು.
ಲೋಕ ಯುದ್ಧ ಕೊನೆಯಾದಾಗ ಯೆಹೋವನ ಸಾಕ್ಷಿಗಳ ಮೇಲಿದ್ದ ನಿಷೇಧವನ್ನ ಹಿಂತೆಗೆಯಲಾಯ್ತು. ಸಾಕ್ಷಿಗಳು ಹೊಸ ಹುರುಪಿನಿಂದ ತಮ್ಮ ನೆರೆಯವರ ಹತ್ತಿರ ದೇವರ ಸರ್ಕಾರದ ಬಗ್ಗೆ ಸಿಹಿಸುದ್ದಿಯನ್ನ ಸಾರೋಕೆ ಶುರುಮಾಡಿದ್ರು. ಹೇಗೆ ಸಾರಬೇಕು ಅನ್ನೋ ನಿರ್ದೇಶನ ಇರೋ ಒಂದು ಪತ್ರವನ್ನ 1945 ರಲ್ಲಿ ಬ್ರಾಂಚ್ ಆಫೀಸ್ ನ್ಯೂಜಿಲೆಂಡಿನ ಎಲ್ಲಾ ಸಭೆಗಳಿಗೆ ಕಳುಹಿಸಿತು. ಅದ್ರಲ್ಲಿ ಹೀಗಿತ್ತು: “ನಾವು ಜಾಣತನದಿಂದ, ಸ್ನೇಹಭಾವದಿಂದ, ಪ್ರೀತಿಯಿಂದ ಸಾರೋಣ. ಜನರು ತುಂಬ ವರ್ಷಗಳಿಂದ ತಮ್ಮ ನಂಬಿಕೆಯನ್ನ ಪ್ರಾಮಾಣಿಕವಾಗಿ ಆಚರಿಸ್ತಾ ಬಂದಿದ್ದಾರೆ ಅನ್ನೋದನ್ನ ಮರೆಯಬೇಡಿ. ಅವ್ರಲ್ಲಿ ಅನೇಕರು ಯೆಹೋವನ ಕುರಿಗಳಾಗಿರೋದ್ರಿಂದ ಅವರನ್ನ ಪ್ರೀತಿಯಿಂದ ಯೆಹೋವನ ಮತ್ತು ಆತನ ಸರ್ಕಾರದ ಕಡೆಗೆ ಸೆಳೆಯೋಣ. ಹಾಗಾಗಿ ನಂಬಿಕೆಯ ಬಗ್ಗೆ ಇರೋ ಬಿಸಿಬಿಸಿ ಚರ್ಚೆಗಳನ್ನ ಮಾಡೋದು ಬೇಡ.”
ಇವತ್ತು ನ್ಯೂಜಿಲೆಂಡಿನಲ್ಲಿರುವ ಯೆಹೋವನ ಸಾಕ್ಷಿಗಳು ಅಲ್ಲಿನ ಸ್ಥಳೀಯ ಜನರಿಗೆ ಮತ್ತು ಟೂರಿಸ್ಟ್ಗಳಿಗೆ ಸಿಹಿಸುದ್ದಿಯನ್ನ ಸಾರುತ್ತಿದ್ದಾರೆ. ಒಂದಿನ ತುರಾನಿ ಅನ್ನೋ ಸ್ಥಳದಲ್ಲಿ 4 ಜನ ಸಾಕ್ಷಿಗಳು ಕೆಲವೇ ತಾಸುಗಳಲ್ಲಿ 17 ದೇಶಗಳಿಂದ ಬಂದ 67 ಟೂರಿಸ್ಟ್ಗಳಿಗೆ ಸಿಹಿಸುದ್ದಿಯನ್ನ ಸಾರಿದ್ರು.
ಯೆಹೋವನ ಸಾಕ್ಷಿಗಳು ಶಾಂತಿಶೀಲ ಜನರು, ಅಮಾಯಕರು, ದೇವಭಕ್ತ ಕ್ರೈಸ್ತರು ಅಂತ ನ್ಯೂಜಿಲೆಂಡಿನ ಜನರಿಗೆ ಗೊತ್ತಾಯ್ತು. ಹಾಗಾಗಿ ಅಲ್ಲಿ ಪ್ರತಿವರ್ಷ ನೂರಾರು ಜನರು ಯೆಹೋವನ ಸಾಕ್ಷಿಗಳಾಗಿ ದೀಕ್ಷಾಸ್ನಾನ ಪಡೆದುಕೊಳ್ತಿದ್ದಾರೆ. 2019 ರಷ್ಟಕ್ಕೆ 14,000ಕ್ಕಿಂತ ಹೆಚ್ಚು ಸಾಕ್ಷಿಗಳು ಯೆಹೋವ ದೇವರನ್ನ ಖುಷಿ ಖುಷಿಯಿಂದ ಆರಾಧಿಸ್ತಿದ್ದಾರೆ.