ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w21 ಜುಲೈ ಪು. 20-25
  • ನಿಮ್ಮ ಸೇವೆಯಲ್ಲಿ ಖುಷಿಪಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಸೇವೆಯಲ್ಲಿ ಖುಷಿಪಡಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಹೆತ್ತವರು ಮತ್ತು ಗಂಡ-ಹೆಂಡತಿ
  • ಹಿರಿಯರು ಮತ್ತು ಸಹೋದರ-ಸಹೋದರಿಯರು
  • ಆಗದಿರೋ ಗುರಿಗಳನ್ನ ಇಡಬೇಡಿ
  • ನಿಮ್ಮ ಕೈಲಾದ ಸೇವೆ ಮಾಡ್ತಾ ಇರಿ
  • ತನುಮನದಿಂದ ಯೆಹೋವನ ಸೇವೆ ಮಾಡಿ ಖುಷಿಯಾಗಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ನಿಮ್ಮ ಪ್ರೀತಿನ ಅವ್ರಿಗೆ ತಿಳಿಸಿ
    ಅನುಭವಗಳು
  • ನಂಬಿಗಸ್ತ ಕ್ರೈಸ್ತ ಸ್ತ್ರೀಯರು—ದೇವರ ಅಮೂಲ್ಯ ಆರಾಧಕರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಯುವಜನರೇ, ದೀಕ್ಷಾಸ್ನಾನ ಆದಮೇಲೂ ಆಧ್ಯಾತ್ಮಿಕವಾಗಿ ಬೆಳಿತಾ ಇರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
w21 ಜುಲೈ ಪು. 20-25

ಅಧ್ಯಯನ ಲೇಖನ 29

ನಿಮ್ಮ ಸೇವೆಯಲ್ಲಿ ಖುಷಿಪಡಿ

“ಪ್ರತಿಯೊಬ್ಬನು . . . ಬೇರೆಯವ್ರ ಜೊತೆ ತನ್ನನ್ನ ಹೋಲಿಸ್ಕೊಳ್ಳೋ ಬದ್ಲು ತನ್ನ ಕೆಲಸದ ಬಗ್ಗೆ ಮಾತ್ರ ಖುಷಿಪಡ್ತಾನೆ.”—ಗಲಾ. 6:4.

ಗೀತೆ 29 ಸಮಗ್ರತೆಯ ಮಾರ್ಗದಲ್ಲಿ ನಡೆಯುವುದು

ಕಿರುನೋಟa

1. ಯೆಹೋವ ದೇವರು ನಮ್ಮನ್ನ ಬೇರೆಯವರ ಜೊತೆ ಯಾಕೆ ಹೋಲಿಸಲ್ಲ?

ವಿಶ್ವದಲ್ಲಿರೋ ಎಲ್ಲವನ್ನ ಯೆಹೋವ ದೇವರು ಒಂದೇ ತರ ಸೃಷ್ಟಿ ಮಾಡಿಲ್ಲ. ಮನುಷ್ಯರನ್ನೂ ಬೇರೆಬೇರೆ ತರ ಸೃಷ್ಟಿ ಮಾಡಿದ್ದಾನೆ. ಹಾಗಾಗಿ ಒಬ್ಬರನ್ನ ಇನ್ನೊಬ್ಬರ ಜೊತೆ ಯೆಹೋವ ದೇವರು ಹೋಲಿಸಲ್ಲ. ಆತನು ನಮ್ಮ ಹೃದಯ ನೋಡ್ತಾನೆ. (1 ಸಮು. 16:7) ನಮ್ಮಿಂದ ಏನು ಮಾಡೋಕೆ ಆಗುತ್ತೆ, ಏನು ಮಾಡೋಕೆ ಆಗಲ್ಲ, ನಾವು ಹೇಗೆ ಬೆಳೆದು ಬಂದಿದ್ದೀವಿ ಅಂತನೂ ನೋಡ್ತಾನೆ. ಹಾಗಾಗಿ ನಮ್ಮಿಂದ ಆಗದೆ ಇರೋದನ್ನ ಯಾವತ್ತೂ ಕೇಳಲ್ಲ. ನಾವು ಯೆಹೋವ ನಮ್ಮನ್ನ ಹೇಗೆ ನೋಡ್ತಾನೋ ಹಾಗೇ ನೋಡೋಕೆ ಕಲಿಬೇಕು. ಆಗ ನಮಗೆ ‘ನಮ್ಮ ಬಗ್ಗೆ ಸರಿಯಾದ ಭಾವನೆ ಇರುತ್ತೆ.’ ನಾವು ಅಹಂಕಾರನೂ ಪಡಲ್ಲ, ನಾವು ನಾಲಾಯಕ್ಕು ಅಂತನೂ ಅಂದುಕೊಳ್ಳಲ್ಲ.—ರೋಮ. 12:3.

2. ಬೇರೆಯವರ ಜೊತೆ ನಮ್ಮನ್ನ ಹೋಲಿಸಿಕೊಂಡಾಗ ಏನಾಗುತ್ತೆ?

2 ಯೆಹೋವನ ಸೇವೆಯನ್ನ ಚೆನ್ನಾಗಿ ಮಾಡ್ತಿರೋ ಸಹೋದರ ಸಹೋದರಿಯರನ್ನ ನೋಡಿ ನಾವು ತುಂಬ ಕಲಿಬಹುದು. ಆಗ ನಮಗೆ ಚೆನ್ನಾಗಿ ಸೇವೆ ಮಾಡೋಕೆ ಆಗುತ್ತೆ. (ಇಬ್ರಿ. 13:7; ಫಿಲಿ. 3:17) ಹಾಗಂತ ನಮ್ಮನ್ನ ಬೇರೆಯವರ ಜೊತೆ ಹೋಲಿಸಿಕೊಂಡು ಅಳೆಯಬಾರದು. ಈ ರೀತಿ ಅಳೆಯೋದ್ರಿಂದ ಅವರ ಮೇಲೆ ನಮಗೆ ಹೊಟ್ಟೆಕಿಚ್ಚು ಆಗಬಹುದು ಅಥವಾ ನಾವು ಯಾವುದಕ್ಕೂ ಪ್ರಯೋಜನ ಇಲ್ಲ ಅಂತ ನಮಗೆ ಅನಿಸಬಹುದು. ಆಗ ನಾವು ಅವರ ಮೇಲೆ ಪೈಪೋಟಿಗೆ ಇಳಿದುಬಿಡ್ತೀವಿ, ಇದ್ರಿಂದ ಸಭೆಯಲ್ಲಿರೋ ಒಗ್ಗಟ್ಟು ಒಡೆದುಹೋಗುತ್ತೆ ಅಂತ ಹಿಂದಿನ ಲೇಖನದಲ್ಲಿ ಕಲಿತ್ವಿ. “ಪ್ರತಿಯೊಬ್ಬನು ಅವನು ಮಾಡಿದ ಕೆಲಸವನ್ನ ಚೆನ್ನಾಗಿ ಪರೀಕ್ಷಿಸ್ಕೊಳ್ಳಲಿ. ಆಗ ಅವನು ಬೇರೆಯವ್ರ ಜೊತೆ ತನ್ನನ್ನ ಹೋಲಿಸ್ಕೊಳ್ಳೋ ಬದ್ಲು ತನ್ನ ಕೆಲಸದ ಬಗ್ಗೆ ಮಾತ್ರ ಖುಷಿಪಡ್ತಾನೆ” ಅಂತ ಯೆಹೋವ ದೇವರು ಪ್ರೀತಿಯಿಂದ ಬುದ್ಧಿ ಹೇಳಿದ್ದಾರೆ.—ಗಲಾ. 6:4.

3. ಯೆಹೋವ ದೇವರಿಗೋಸ್ಕರ ನೀವು ಮಾಡಿರೋ ಯಾವ ವಿಷಯದಿಂದ ನಿಮಗೆ ತುಂಬ ಖುಷಿ ಸಿಕ್ಕಿದೆ?

3 ಯೆಹೋವ ದೇವರಿಗೋಸ್ಕರ ಏನೆಲ್ಲ ಮಾಡಿದ್ದೀರೋ ಅದನ್ನ ನೋಡಿ ನೀವು ಖುಷಿಪಡಬೇಕು ಅಂತ ದೇವರು ಇಷ್ಟಪಡ್ತಾನೆ. ಉದಾಹರಣೆಗೆ, ನೀವು ಬೈಬಲಿಂದ ಯೆಹೋವನ ಬಗ್ಗೆ ಕಲಿತಾಗ ದೀಕ್ಷಾಸ್ನಾನ ತಗೋಬೇಕು ಅನ್ನೋ ಗುರಿ ಇಟ್ರಿ. ದೇವರ ಮೇಲೆ ಪ್ರೀತಿ ಜಾಸ್ತಿಯಾದಾಗ ದೀಕ್ಷಾಸ್ನಾನ ತಗೊಂಡ್ರಿ. ನೀವು ಇಷ್ಟಕ್ಕೇ ನಿಲ್ಲಿಸಲಿಲ್ಲ. ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡ್ತಾ ಯೆಹೋವನ ಮೇಲಿರೋ ಪ್ರೀತಿಯನ್ನ ಇನ್ನೂ ಜಾಸ್ತಿ ಮಾಡಿಕೊಂಡ್ರಿ. ಮನಸ್ಸು ಬಿಚ್ಚಿ ಪ್ರಾರ್ಥನೆ ಮಾಡ್ತಾ ದೇವರಿಗೆ ಇನ್ನೂ ಹತ್ರ ಆದ್ರಿ. (ಕೀರ್ತ. 141:2) ಬೇರೆಬೇರೆ ಸಾಧನಗಳನ್ನ ಬಳಸಿ ಸಿಹಿಸುದ್ದಿ ಸಾರೋಕೆ, ಜನರಿಗೆ ಇಷ್ಟ ಆಗೋ ತರ ಮಾತಾಡೋಕೆ ಕಲಿತ್ರಿ. ಯೆಹೋವನ ಸಹಾಯದಿಂದ ಒಬ್ಬ ಒಳ್ಳೇ ಗಂಡ, ಹೆಂಡತಿ ಅಥವಾ ಹೆತ್ತವರು ಆಗಿದ್ದೀರಿ. ನೀವು ಯೆಹೋವನ ಸೇವೆಯಲ್ಲಿ ಇಷ್ಟೆಲ್ಲ ಪ್ರಗತಿ ಮಾಡಿದ್ದನ್ನ ನೋಡಿ ನಿಮಗೆ ಖುಷಿ ಆಗಲ್ವಾ?

4. ಈ ಲೇಖನದಲ್ಲಿ ನಾವೇನು ಕಲಿತೀವಿ?

4 ನಾವು ಬೇರೆಯವರಿಗೆ ಸಹಾಯ ಮಾಡಿದ್ರೆ ಅವರೂ ನಮ್ಮ ತರ ಯೆಹೋವನ ಸೇವೆಯಲ್ಲಿ ಖುಷಿ ಪಡಕೊಳ್ತಾರೆ. ಬೇರೆಯವರ ಜೊತೆ ತಮ್ಮನ್ನ ಹೋಲಿಸಿಕೊಳ್ಳಲ್ಲ. ಈ ವಿಷ್ಯದಲ್ಲಿ ಹೆತ್ತವರು ಮಕ್ಕಳಿಗೆ ಹೇಗೆ ಸಹಾಯ ಮಾಡಬಹುದು? ಗಂಡ-ಹೆಂಡತಿ ಒಬ್ಬರಿಗೊಬ್ಬರು ಹೇಗೆ ಸಹಾಯ ಮಾಡಬಹುದು? ಸಭೆಯಲ್ಲಿ ಹಿರಿಯರು ಮತ್ತು ಸಹೋದರ-ಸಹೋದರಿಯರು ಹೇಗೆ ಸಹಾಯ ಮಾಡಬಹುದು? ನಮ್ಮ ಸಾಮರ್ಥ್ಯಕ್ಕೆ, ಸನ್ನಿವೇಶಕ್ಕೆ ತಕ್ಕ ಹಾಗೆ ಗುರಿಗಳನ್ನ ಇಡೋಕೆ ಯಾವ ಬೈಬಲ್‌ ತತ್ವಗಳು ಸಹಾಯ ಮಾಡುತ್ತೆ? ಅಂತ ಈ ಲೇಖನದಲ್ಲಿ ಕಲಿಯೋಣ.

ಹೆತ್ತವರು ಮತ್ತು ಗಂಡ-ಹೆಂಡತಿ

ಅಪ್ಪ-ಅಮ್ಮ ಮಕ್ಕಳ ಜೊತೆ ಕೂತು ನೋಹನ ನಾವೆ ಮಾಡಿದ್ದಾರೆ. ಪಕ್ಕದಲ್ಲಿ ಪ್ರಾಣಿಗಳ ಚಿಕ್ಕಚಿಕ್ಕ ಗೊಂಬೆಗಳಿವೆ.

ಹೆತ್ತವರೇ, ಒಂದೊಂದು ಮಗುನೂ ತನ್ನ ಕೈಯಿಂದ ಆಗೋದನ್ನ ಮಾಡುವಾಗ ಬೆನ್ನು ತಟ್ಟಿ (ಪ್ಯಾರ 5-6 ನೋಡಿ)d

5. ಎಫೆಸ 6:4ರ ಪ್ರಕಾರ ಹೆತ್ತವರು ಏನು ಮಾಡಬಾರದು?

5 ಹೆತ್ತವರು ತಮ್ಮ ಮಕ್ಕಳನ್ನ ಬೇರೆ ಮಕ್ಕಳ ಜೊತೆ ಹೋಲಿಸಿ ಮಾತಾಡಬಾರದು. ಮಕ್ಕಳಿಂದ ಆಗದೆ ಇರೋದನ್ನ ಮಾಡೋಕೆ ಹೇಳಬಾರದು. ಯಾಕಂದ್ರೆ ಮಕ್ಕಳ ಆತ್ಮವಿಶ್ವಾಸ ಕಡಿಮೆ ಆಗುತ್ತೆ. (ಎಫೆಸ 6:4 ಓದಿ.) ಅದು ಎಷ್ಟು ನಿಜ ಅಂತ ಸಚಿಕೋb ಅನ್ನೋ ಸಹೋದರಿಯ ಅನುಭವದಿಂದ ಗೊತ್ತಾಗುತ್ತೆ. ಅವರು ಹೀಗೆ ಹೇಳ್ತಾರೆ: “ನಾನು ಕ್ಲಾಸಲ್ಲಿ ಬೇರೆ ಮಕ್ಕಳಿಗಿಂತ ಜಾಸ್ತಿ ಮಾರ್ಕ್ಸ್‌ ತೆಗಿಬೇಕು ಅಂತ ನಮ್ಮ ಟೀಚರ್ಸ್‌ ಹೇಳ್ತಿದ್ರು. ಅದೇ ತರ ಅಮ್ಮನೂ ನಾನು ನೂರಕ್ಕೆ ನೂರು ಮಾರ್ಕ್ಸ್‌ ತಗೋಬೇಕು ಅಂತ ಇಷ್ಟಪಡ್ತಿದ್ರು. ನಾನು ಹಾಗೆ ಮಾಡಿದ್ರೆ ಸತ್ಯದಲ್ಲಿ ಇಲ್ಲದಿರೋ ನಮ್ಮ ತಂದೆಗೆ ಮತ್ತು ಸ್ಕೂಲಲ್ಲಿರೋ ಟೀಚರ್ಸ್‌ಗೆ ಯೆಹೋವನ ಸಾಕ್ಷಿಗಳ ಬಗ್ಗೆ ಒಳ್ಳೇ ಅಭಿಪ್ರಾಯ ಬರುತ್ತೆ ಅಂತ ಹೇಳ್ತಿದ್ರು. ಅವರು ಹೇಳಿದ್ದನ್ನ ಮಾಡೋಕೆ ತುಂಬ ಕಷ್ಟ ಆಗ್ತಿತ್ತು. ನಂಗೆ ಈಗ್ಲೂ ಆತ್ಮವಿಶ್ವಾಸ ಕಡಿಮೆನೇ. ನಾನು ಎಷ್ಟು ಚೆನ್ನಾಗಿ ಸೇವೆ ಮಾಡಿದ್ರೂ ಯೆಹೋವ ದೇವರಿಗೆ ಅಷ್ಟು ಸಾಕಾಗಲ್ವೆನೋ ಅಂತ ನನಗೆ ಅನಿಸುತ್ತೆ.”

6. ಕೀರ್ತನೆ 131:1, 2ರಲ್ಲಿ ಅಪ್ಪಅಮ್ಮಂದಿರಿಗೆ ಯಾವ ಪಾಠ ಇದೆ?

6 ಕೀರ್ತನೆ 131:1, 2 ಓದಿ. ಈ ವಚನಗಳಲ್ಲಿ ಹೆತ್ತವರಿಗೆ ಒಂದು ಒಳ್ಳೇ ಪಾಠ ಇದೆ. ರಾಜ ದಾವೀದನಿಗೆ ದೀನತೆ ಇತ್ತು, ತನ್ನ ಇತಿಮಿತಿಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ “ದೊಡ್ಡದೊಡ್ಡ ಸಾಹಸ ಮಾಡಬೇಕು ಅನ್ನೋ ಅತಿಯಾಸೆ” ಅವನಿಗೆ ಇರಲಿಲ್ಲ. ತನ್ನ ಕೈಯಲ್ಲಿ ಆಗದಿರೋ ಕೆಲಸಗಳನ್ನು ಮಾಡೋಕೂ ಹೋಗಲಿಲ್ಲ. ಇದ್ರಿಂದ ಅವನು ‘ಸಮಾಧಾನವಾಗಿ ಇದ್ದ.’ ಅಪ್ಪಅಮ್ಮಂದಿರು ದಾವೀದನಿಂದ ಏನು ಕಲಿಬಹುದು? ಅವರ ವಿಷಯದಲ್ಲಿ ಮತ್ತು ಮಕ್ಕಳ ವಿಷಯದಲ್ಲಿ ದೀನತೆಯಿಂದ ಇರಬೇಕು, ಇತಿಮಿತಿಗಳನ್ನ ಅರ್ಥ ಮಾಡಿಕೊಳ್ಳಬೇಕು. ಇವರ ಕೈಯಲ್ಲಿ ಆಗದಿರೋ ವಿಷಯಗಳನ್ನ ಮಾಡೋಕೆ ಹೋಗಬಾರದು, ಮಕ್ಕಳ ಕೈಯಲ್ಲಿ ಮಾಡೋಕೆ ಆಗದಿರೋದನ್ನ ಕೇಳಬಾರದು. ತಮ್ಮ ಮಕ್ಕಳಿಂದ ಏನು ಮಾಡೋಕೆ ಆಗುತ್ತೆ, ಏನು ಮಾಡೋಕೆ ಆಗಲ್ಲ ಅನ್ನೋದನ್ನ ತಿಳುಕೊಂಡು ಅದಕ್ಕೆ ತಕ್ಕ ಹಾಗೆ ಗುರಿಗಳನ್ನ ಇಡೋಕೆ ಸಹಾಯ ಮಾಡಬೇಕು. ಮರೀನಾ ಅನ್ನೋ ಸಹೋದರಿ ಏನು ಹೇಳ್ತಾರೆ ನೋಡಿ. “ನಮ್ಮ ಅಮ್ಮ ಯಾವತ್ತೂ ನನ್ನನ್ನ ನನ್ನ ಅಣ್ಣ-ತಮ್ಮಂದಿರ ಜೊತೆ ಹೋಲಿಸ್ತಾ ಇರಲಿಲ್ಲ. ‘ಎಲ್ಲರಿಗೂ ಬೇರೆಬೇರೆ ಸಾಮರ್ಥ್ಯಗಳು ಇರುತ್ತೆ. ಎಲ್ಲರೂ ಯೆಹೋವ ದೇವರಿಗೆ ಬೇಕು’ ಅಂತ ಹೇಳಿಕೊಡುತ್ತಿದ್ರು. ಹಾಗಾಗಿ ನಾನು ಬೇರೆಯವರ ಜೊತೆ ಹೋಲಿಸಿಕೊಳ್ಳೋಕೆ ಹೋಗಲ್ಲ.”

7-8. ಹೆಂಡತಿ ಮೇಲೆ ಗೌರವ ಇದೆ ಅಂತ ಗಂಡ ಹೇಗೆ ತೋರಿಸಬಹುದು?

7 ಹೆಂಡತಿಗೆ ಗಂಡ ಗೌರವ ಕೊಡಬೇಕು. (1 ಪೇತ್ರ 3:7) ಹೇಗೆ? ತನ್ನ ಜೀವನದಲ್ಲಿ ಅವಳು ಎಷ್ಟು ಮುಖ್ಯ ಅಂತ ತೋರಿಸಿಕೊಡಬೇಕು. ಅವಳಿಂದ ಮಾಡೋಕೆ ಆಗದೆ ಇರೋದನ್ನ ಅವನು ಕೇಳಬಾರದು. ಬೇರೆ ಹೆಂಗಸರ ಜೊತೆ ಅವಳನ್ನ ಹೋಲಿಸಬಾರದು. ಯಾಕಂದ್ರೆ ಅವಳಿಗೆ ಬೇಜಾರಾಗುತ್ತೆ. ಅವಳ ಆತ್ಮವಿಶ್ವಾಸ ಕಡಿಮೆ ಆಗುತ್ತೆ. ಸಹೋದರಿ ರೋಜ ಅವರ ಅನುಭವ ನೋಡಿ. ಅವರ ಗಂಡ ಸತ್ಯದಲ್ಲಿ ಇರಲಿಲ್ಲ. ಆ ಸಹೋದರಿಯನ್ನ ಯಾವಾಗಲೂ ಬೇರೆ ಹೆಂಗಸರ ಜೊತೆ ಹೋಲಿಸಿ ಮಾತಾಡ್ತಿದ್ರು. ಚುಚ್ಚು ಮಾತುಗಳಿಂದ ರೋಜ ಅವರ ಆತ್ಮವಿಶ್ವಾಸ ನೆಲಕಚ್ಚಿಬಿಟ್ಟಿತ್ತು. “ನನ್ನ ಆತ್ಮವಿಶ್ವಾಸ ಕಮ್ಮಿ ಆದಾಗೆಲ್ಲ ಯೆಹೋವ ದೇವರು ನನ್ನನ್ನ ಅಮೂಲ್ಯವಾಗಿ ನೋಡ್ತಾರೆ ಅಂತ ನೆನಪಿಸಿಕೊಳ್ತಾ ಇರ್ತಿನಿ” ಅಂತ ರೋಜ ಹೇಳ್ತಾರೆ. ನೋಡಿದ್ರಾ, ಗಂಡಂದಿರು ಹೆಂಡತಿಯರಿಗೆ ಗೌರವ ಕೊಡಬೇಕು. ಇಲ್ಲಾಂದ್ರೆ ಗಂಡ-ಹೆಂಡತಿ ಸಂಬಂಧನೂ ಹಾಳಾಗುತ್ತೆ, ಯೆಹೋವನ ಸ್ನೇಹನೂ ಕಳಕೊಳ್ಳಬೇಕಾಗುತ್ತೆ.c

8 ಹೆಂಡತಿ ಮೇಲೆ ಗಂಡನಿಗೆ ಗೌರವ ಇದ್ರೆ ‘ನಾನು ನಿನ್ನನ್ನ ತುಂಬ ಪ್ರೀತಿಸ್ತೀನಿ’ ಅಂತ ಹೇಳ್ತಾನೆ ಮತ್ತು ಅವಳ ಬಗ್ಗೆ ಬೇರೆಯವರ ಹತ್ರ ಒಳ್ಳೇದನ್ನ ಹೇಳ್ತಾನೆ, ಹೊಗಳ್ತಾನೆ. (ಜ್ಞಾನೋ. 31:28) ಕತ್ರೀನ ಅವರ ಗಂಡ ಇದಕ್ಕೊಂದು ಒಳ್ಳೇ ಉದಾಹರಣೆ. ಹಿಂದಿನ ಲೇಖನದಲ್ಲಿ ಕಲಿತ ಹಾಗೆ ಕತ್ರೀನಗೆ ‘ನಾನು ಯಾವುದಕ್ಕೂ ಪ್ರಯೋಜನ ಇಲ್ಲ’ ಅನ್ನೋ ಭಾವನೆ ಇತ್ತು. ಚಿಕ್ಕವಯಸ್ಸಲ್ಲಿ ಅಮ್ಮ ಅವರನ್ನ ಬೇರೆ ಹುಡುಗಿಯರ ಜೊತೆ, ಅವರ ಫ್ರೆಂಡ್ಸ್‌ ಜೊತೆ ಹೋಲಿಸ್ತಿದ್ರು. ಇದ್ರಿಂದ ಕತ್ರೀನ ಬೇರೆಯವರ ಜೊತೆ ಹೋಲಿಸಿಕೊಂಡು ತನ್ನನ್ನೇ ಅಳೆಯುತ್ತಿದ್ರು. ಅವರು ಸತ್ಯಕ್ಕೆ ಬಂದ ಮೇಲೂ ಹೀಗೇ ಮಾಡ್ತಿದ್ರು. ಆದ್ರೆ ಈ ತರ ಹೋಲಿಸಿಕೊಳ್ಳೋದನ್ನ ಬಿಟ್ಟುಬಿಡೋಕೆ, ಆತ್ಮವಿಶ್ವಾಸ ಬೆಳೆಸಿಕೊಳ್ಳೋಕೆ ಅವರ ಗಂಡ ಸಹಾಯ ಮಾಡಿದ್ರು. “ನನ್ನ ಗಂಡ ನನ್ನನ್ನ ಪ್ರೀತಿಸ್ತಾರೆ. ನಾನು ಮಾಡೋ ಪ್ರತಿಯೊಂದು ವಿಷ್ಯಕ್ಕೂ ನನ್ನನ್ನ ಹೊಗಳ್ತಾರೆ, ನನಗೋಸ್ಕರ ಪ್ರಾರ್ಥನೆ ಮಾಡ್ತಾರೆ. ಯೆಹೋವ ದೇವರ ಗುಣಗಳನ್ನ ನನಗೆ ನೆನಪಿಸಿ ನಾನು ಸರಿಯಾದ ರೀತಿಯಲ್ಲಿ ಯೋಚನೆ ಮಾಡೋಕೆ ಸಹಾಯ ಮಾಡ್ತಾರೆ” ಅಂತಾರೆ ಕತ್ರೀನ.

ಹಿರಿಯರು ಮತ್ತು ಸಹೋದರ-ಸಹೋದರಿಯರು

9-10. ಹೋಲಿಸಿಕೊಳ್ಳೋ ಸ್ವಭಾವ ಬಿಟ್ಟುಬಿಡೋಕೆ ಒಬ್ಬ ಸಹೋದರಿಗೆ ಹಿರಿಯರು ಹೇಗೆ ಸಹಾಯ ಮಾಡಿದ್ರು?

9 ಬೇರೆಯವರ ಜೊತೆ ಹೋಲಿಸಿಕೊಳ್ಳದೇ ಇರೋಕೆ ಸಹೋದರ-ಸಹೋದರಿಯರಿಗೆ ಹಿರಿಯರು ಹೇಗೆ ಸಹಾಯ ಮಾಡಬಹುದು? ನಾವು ಸಹೋದರಿ ಹರಿಣಿ ಅನುಭವ ನೋಡೋಣ. ಅವರನ್ನ ಚಿಕ್ಕವಯಸ್ಸಲ್ಲಿ ಯಾರೂ ಹೊಗಳುತ್ತಾನೇ ಇರಲಿಲ್ಲವಂತೆ. “ನಾನು ತುಂಬ ಚಿಕ್ಕವಯಸ್ಸಿಂದಾನೇ ಬೇರೆಯವರ ಜೊತೆ ನನ್ನನ್ನ ಹೋಲಿಸಿಕೊಳ್ಳೋಕೆ ಶುರು ಮಾಡಿಕೊಂಡಿದ್ದೆ. ಜೊತೆಗೆ ನಾಚಿಕೆ ಸ್ವಭಾವನೂ ತುಂಬಾ ಇತ್ತು. ಅದಕ್ಕೇ ಬೇರೆ ಮಕ್ಕಳ ಮುಂದೆ ನಾನು ಏನೇನೂ ಅಲ್ಲ ಅಂತ ಅನಿಸ್ತಿತ್ತು” ಅಂತ ಸಹೋದರಿ ಹೇಳ್ತಾರೆ. ಅವರು ಸತ್ಯ ಕಲಿತ ಮೇಲೂ ಬೇರೆಯವರ ಜೊತೆ ತಮ್ಮನ್ನ ಹೋಲಿಸಿಕೊಳ್ತಾನೇ ಇದ್ರು. ಹಾಗಾಗಿ ಅವರಿಂದ ಸಭೆಗೆ ಏನೂ ಪ್ರಯೋಜನ ಇಲ್ಲ ಅನ್ನೋ ಭಾವನೆ ಮನಸ್ಸಲ್ಲಿ ಕೂತುಬಿಟ್ಟಿತ್ತು. ಆದ್ರೆ ಈಗ ಅವರು ಖುಷಿಖುಷಿಯಾಗಿ ಪಯನೀಯರ್‌ ಸೇವೆ ಮಾಡ್ತಿದ್ದಾರೆ. ಬೇರೆಯವರ ಜೊತೆ ಹೋಲಿಸಿಕೊಳ್ಳೋದನ್ನ ಬಿಟ್ಟುಬಿಡೋಕೆ ಹರಿಣಿಗೆ ಯಾರು ಸಹಾಯ ಮಾಡಿದ್ರು?

10 ಹಿರಿಯರು ಸಹಾಯ ಮಾಡಿದ್ರು. ಹಿರಿಯರು ಹರಿಣಿಗೆ ಆತ್ಮವಿಶ್ವಾಸ ತುಂಬಿಸ್ತಿದ್ರು. ಸಭೆಗೆ ಅವರು ಒಳ್ಳೇ ಮಾದರಿ ಅಂತ ಹೇಳಿ ಹೊಗಳ್ತಿದ್ರು. ಸಹೋದರಿ ಹೀಗೆ ಹೇಳ್ತಾರೆ: “ಸಭೆಯಲ್ಲಿ ಕೆಲವು ಸಹೋದರಿಯರನ್ನ ಪ್ರೋತ್ಸಾಹಿಸೋಕೆ ಹಿರಿಯರು ನನಗೆ ಹೇಳ್ತಿದ್ರು. ಅವರನ್ನ ಪ್ರೋತ್ಸಾಹಿಸಿದ ಮೇಲೆ ನನಗೆ ಒಂಥರಾ ಖುಷಿ ಆಗ್ತಿತ್ತು. ಅಷ್ಟೇ ಅಲ್ಲ, ಆ ಸಹೋದರಿಯರನ್ನ ಪ್ರೋತ್ಸಾಹಿಸಿದ್ದಕ್ಕೆ ಹಿರಿಯರು ನನಗೆ ಥ್ಯಾಂಕ್ಸ್‌ ಹೇಳ್ತಿದ್ರು. ಆಮೇಲೆ 1 ಥೆಸಲೊನೀಕ 1:2, 3ನ್ನ ನನಗೆ ಓದಿ ಹೇಳಿದ್ರು. ಆಗ ನನಗೆ ತುಂಬ ಖುಷಿ ಆಯ್ತು. ಕುರುಬರ ತರ ತುಂಬ ಕಾಳಜಿ ತೋರಿಸೋ ಹಿರಿಯರಿಗೆ ನಾನು ಎಷ್ಟು ಥ್ಯಾಂಕ್ಸ್‌ ಹೇಳಿದ್ರೂ ಸಾಕಾಗಲ್ಲ. ಯೆಹೋವ ದೇವರ ಸಂಘಟನೆಗೆ ನನ್ನಿಂದನೂ ಪ್ರಯೋಜನ ಇದೆ ಅಂತ ಅರ್ಥ ಮಾಡಿಕೊಂಡಿದ್ದೀನಿ.”

11. ಯೆಶಾಯ 57:15ರಲ್ಲಿ ಹೇಳಿರೋ ಜಜ್ಜಿಹೋದ ಮತ್ತು ದೀನ ಮನಸ್ಸಿರೋ ಸಹೋದರರಿಗೆ ನಾವು ಹೇಗೆ ಸಹಾಯ ಮಾಡಬಹುದು?

11 ಯೆಶಾಯ 57:15 ಓದಿ. ಯೆಹೋವ ದೇವರು ‘ಜಜ್ಜಿ ಹೋಗಿರೋ, ದೀನಮನಸ್ಸು ಇರೋ’ ಜನರ ಕಾಳಜಿ ವಹಿಸ್ತಾರೆ. ಅಂಥ ಸಹೋದರ-ಸಹೋದರಿಯರಿಗೆ ಹಿರಿಯರು ಮಾತ್ರ ಅಲ್ಲ ನಾವೂ ಸಹಾಯ ಮಾಡಬೇಕು. ನಾವು ಎರಡು ರೀತಿಯಲ್ಲಿ ಸಹಾಯ ಮಾಡಬೇಕು. ಒಂದು, ಅವರ ಮೇಲೆ ಪ್ರೀತಿ ಇದೆ ಅಂತ ನಮ್ಮ ನಡೆನುಡಿಯಲ್ಲಿ ತೋರಿಸಬೇಕು. ನಾವು ತೋರಿಸೋ ಪ್ರೀತಿಯಲ್ಲಿ ಅವರಿಗೆ ಯೆಹೋವ ದೇವರ ಪ್ರೀತಿ ಕಾಣಬೇಕು. (ಜ್ಞಾನೋ. 19:17) ಇನ್ನೊಂದು, ನಾವು ದೀನತೆಯಿಂದ ಇರಬೇಕು. ನಮ್ಮ ಬಗ್ಗೆ ಕೊಚ್ಚಿಕೊಳ್ಳಬಾರದು. ಯಾಕಂದ್ರೆ ಸಹೋದರ ಸಹೋದರಿಯರಿಗೆ ನಮ್ಮ ಮೇಲೆ ಹೊಟ್ಟೆಕಿಚ್ಚು ಆಗಬಹುದು. ನಮ್ಮಲ್ಲಿರೋ ಸಾಮರ್ಥ್ಯವನ್ನ, ಜ್ಞಾನವನ್ನ ಬೇರೆಯವರಿಗೆ ಹುರಿದುಂಬಿಸೋಕೆ ಉಪಯೋಗಿಸಬೇಕು.—1 ಪೇತ್ರ 4:10, 11.

ಬೆಂಕಿ ಸುತ್ತ ಯೇಸು ಮತ್ತು ಕೆಲವು ಶಿಷ್ಯರು ಕೂತಿದ್ದಾರೆ. ಒಬ್ಬ ಶಿಷ್ಯ ಕೊಳಲು ಊದುತ್ತಿರುವಾಗ ಉಳಿದಿರುವವರು ಚಪ್ಪಾಳೆ ತಟ್ಟುತ್ತಾ ಹಾಡುತ್ತಾ ಇದ್ದಾರೆ.

ಯೇಸುಗೆ ತಾನು ಬೇರೆಯವರಿಗಿಂತ ಶ್ರೇಷ್ಠ ಅನ್ನೋ ಭಾವನೆ ಇರಲಿಲ್ಲ. ಹಾಗಾಗಿ ಶಿಷ್ಯರು ಆತನ ಜೊತೆ ಇರೋಕೆ ಇಷ್ಟಪಡ್ತಿದ್ರು. ಆತನಿಗೂ ಅವರ ಜೊತೆ ಇರೋಕೆ ಇಷ್ಟ ಆಗ್ತಿತ್ತು (ಪ್ಯಾರ 12 ನೋಡಿ)

12. ಸಾಮಾನ್ಯ ಜನರಿಗೆ ಯಾಕೆ ಯೇಸು ಕಂಡ್ರೆ ತುಂಬ ಇಷ್ಟ ಇತ್ತು? (ಮುಖಪುಟ ಚಿತ್ರ ನೋಡಿ.)

12 ಬೇರೆಯವರ ಜೊತೆ ಹೇಗೆ ನಡಕೊಳ್ಳಬೇಕು ಅಂತ ನಾವು ಯೇಸುವಿಂದಾನೂ ಕಲಿಬಹುದು. ಭೂಮಿಯಲ್ಲಿ ಯಾರಿಗೂ ಇಲ್ಲದಷ್ಟು ಜ್ಞಾನ, ಸಾಮರ್ಥ್ಯ ಆತನಿಗಿತ್ತು. ಆತ ಒಬ್ಬ ದೊಡ್ಡ ವ್ಯಕ್ತಿ. ಆದ್ರೂ “ಮೃದುಸ್ವಭಾವ, ದೀನಮನಸ್ಸು” ಇತ್ತು. (ಮತ್ತಾ. 11:28-30) ತನಗಿದ್ದ ಜ್ಞಾನ, ಬುದ್ಧಿವಂತಿಕೆಯನ್ನ ಜನರ ಮುಂದೆ ತೋರಿಸಿಕೊಳ್ಳಲಿಲ್ಲ. ಜನರಿಗೆ ಅರ್ಥ ಆಗೋ ತರ ಕಲಿಸ್ತಿದ್ರು. ಆತನು ಹೇಳ್ತಿದ್ದ ಉದಾಹರಣೆಗಳು ಜನರ ಮನಸ್ಸು ನಾಟುತ್ತಿತ್ತು. (ಲೂಕ 10:21) ಜನರು ದೇವರ ದೃಷ್ಟಿಯಲ್ಲಿ ಯಾವುದಕ್ಕೂ ಬೇಡವಾದವರು ಅನ್ನೋ ಭಾವನೆನ ಅವತ್ತಿನ ಧರ್ಮಗುರುಗಳು ಬರಿಸುತ್ತಿದ್ರು. ಆದ್ರೆ ಯೇಸು ಹಾಗೆ ಮಾಡ್ತಾ ಇರಲಿಲ್ಲ. (ಯೋಹಾ. 6:37) ಸಾಮಾನ್ಯ ಜನರಿಗೆ ತುಂಬ ಗೌರವ ಕೊಡ್ತಿದ್ರು.

13. ಯೇಸು ತನ್ನ ಶಿಷ್ಯರನ್ನ ಅರ್ಥ ಮಾಡಿಕೊಂಡು ಅವರ ಜೊತೆ ಹೇಗೆ ನಡಕೊಂಡ್ರು?

13 ಯೇಸುಗೆ ತುಂಬ ಪ್ರೀತಿ ಮತ್ತು ಅರ್ಥಮಾಡಿಕೊಳ್ಳೋ ಗುಣ ಇತ್ತು. ಇದು ಆತನು ಶಿಷ್ಯರ ಜೊತೆ ನಡಕೊಂಡ ರೀತಿಯಿಂದ ಗೊತ್ತಾಗುತ್ತೆ. ಎಲ್ಲಾ ಶಿಷ್ಯರಿಗೂ ಒಂದೇ ರೀತಿಯ ಸಾಮರ್ಥ್ಯ ಇಲ್ಲ, ಅವರ ಸನ್ನಿವೇಶಗಳು ಬೇರೆಬೇರೆ. ಹಾಗಾಗಿ ಎಲ್ಲಾ ಶಿಷ್ಯರಿಗೂ ಒಂದೇ ತರ ಕೆಲಸ ಮಾಡೋಕೆ ಆಗಲ್ಲ, ಸೇವೆ ಮಾಡೋಕೆ ಆಗಲ್ಲ ಅಂತ ಯೇಸುಗೆ ಗೊತ್ತಿತ್ತು. ಅವರ ಕೈಲಾದಷ್ಟು ಸೇವೆ ಮಾಡಿದಾಗ ಯೇಸು ಖುಷಿಪಟ್ರು, ಮೆಚ್ಚಿಕೊಂಡ್ರು. ಇದನ್ನ ತಲಾಂತುಗಳ ಬಗ್ಗೆ ಯೇಸು ಕೊಟ್ಟ ಉದಾಹರಣೆಯಲ್ಲಿ ನೋಡಬಹುದು. ಆ ಉದಾಹರಣೆಯಲ್ಲಿ ಯಜಮಾನ ಮೂರು ಸೇವಕರಿಗೆ ‘ಅವ್ರ ಸಾಮರ್ಥ್ಯಕ್ಕೆ ತಕ್ಕಂತೆ ಕೆಲಸ ಕೊಟ್ಟ.’ ಅದ್ರಲ್ಲಿ ಇಬ್ಬರು ಕಷ್ಟಪಟ್ಟು ಕೆಲಸ ಮಾಡಿದ್ರು. ಅವರಲ್ಲಿ ಒಬ್ಬ ಇನ್ನೊಬ್ಬನಿಗಿಂತ ಜಾಸ್ತಿ ಸಂಪಾದನೆ ಮಾಡಿದ. ಆದ್ರೂ ಯಜಮಾನ ಇಬ್ಬರನ್ನೂ ಸಮಾನವಾಗಿ ಹೊಗಳಿದ. “ಶಭಾಷ್‌, ನೀನು ಒಳ್ಳೇ ಆಳು, ನಂಬಿಗಸ್ತ ಆಳು!” ಅಂತ ಹೇಳಿದ.—ಮತ್ತಾ. 25:14-23.

14. ಯೇಸು ತರ ನಾವೂ ಬೇರೆಯವರ ಜೊತೆ ಹೇಗೆ ನಡಕೊಳ್ಳಬೇಕು?

14 ಯೇಸು ನಮ್ಮನ್ನೂ ಪ್ರೀತಿಸ್ತಾರೆ, ಅರ್ಥ ಮಾಡಿಕೊಳ್ತಾರೆ. ನಮ್ಮ ಸಾಮರ್ಥ್ಯಗಳು, ಪರಿಸ್ಥಿತಿಗಳು ಬೇರೆಬೇರೆ ಅಂತ ಯೇಸುಗೆ ಚೆನ್ನಾಗಿ ಗೊತ್ತು. ಅದಕ್ಕೆ ತಕ್ಕ ಹಾಗೆ ನಮ್ಮ ಕೈಯಲ್ಲಿ ಆದಷ್ಟು ಸೇವೆ ಮಾಡುವಾಗ ಯೇಸು ಅದನ್ನ ಮೆಚ್ಚಿಕೊಳ್ತಾರೆ. ನಾವೂ ಬೇರೆಯವರ ಜೊತೆ ಯೇಸು ತರಾನೇ ನಡಕೊಳ್ಳಬೇಕು. ಒಬ್ಬ ಸಹೋದರ ಅಥವಾ ಸಹೋದರಿಗೆ ಬೇರೆಯವರಷ್ಟು ಸೇವೆ ಮಾಡೋಕೆ ಆಗದೆ ಇರಬಹುದು. ಹಾಗಂತ ಅವರು ಯಾವುದಕ್ಕೂ ಪ್ರಯೋಜನ ಇಲ್ಲ ಅಂತ ಅವರಿಗೆ ಅನಿಸೋ ತರ ನಾವು ನಡಕೊಳ್ಳಬಾರದು. ಬದಲಿಗೆ ಅವರ ಕೈಯಿಂದ ಆಗುವಷ್ಟು ಸೇವೆಯನ್ನ ಮಾಡ್ತಾ ಇರೋದ್ರಿಂದ ನಾವು ಅವರನ್ನ ಹೊಗಳಬೇಕು.

ಆಗದಿರೋ ಗುರಿಗಳನ್ನ ಇಡಬೇಡಿ

ಕೊಲಾಜ್‌: 1. ಒಬ್ಬ ಸಹೋದರಿ ಕ್ಯಾಲೆಂಡರ್‌ ನೋಡ್ತಾ ಇದ್ದಾರೆ. ಪಕ್ಕದಲ್ಲಿ ಅವರ ಪುಟಾಣಿ ಮಗ ಆಟ ಆಡುತ್ತಿದ್ದಾನೆ. 2. ಆ ಸಹೋದರಿ ಇನ್ನೊಬ್ಬ ಸಹೋದರಿ ಜೊತೆ ಸೇವೆ ಮಾಡ್ತಿದ್ದಾರೆ. ಆ ಪುಟಾಣಿ ಮಗನ ಕೈಯಲ್ಲಿ ಕರಪತ್ರ ಇದೆ.

ನಿಮ್ಮಿಂದ ಮಾಡೋಕೆ ಆಗೋ ಗುರಿಯಿಟ್ಟು ಮುಟ್ಟಿ ಖುಷಿಯಾಗಿರಿ (ಪ್ಯಾರ 15-16 ನೋಡಿ)e

15-16. ಮಯೂರಿ ಅನ್ನೋ ಸಹೋದರಿಗೆ ಹೇಗೆ ಖುಷಿ ಸಿಕ್ತು?

15 ಯೆಹೋವ ದೇವರ ಸೇವೇಲಿ ಗುರಿಗಳನ್ನ ಇಟ್ಟು ಮುಟ್ಟಿದಾಗ ನಮಗೆ ಜೀವನದಲ್ಲಿ ಖುಷಿ ಇರುತ್ತೆ. ಆದ್ರೆ ಒಂದು ವಿಷ್ಯ ಮನಸ್ಸಲ್ಲಿ ಇಡಬೇಕು. ಬೇರೆಯವರು ಏನು ಮಾಡ್ತಿದ್ದಾರೆ ಅಂತ ನೋಡಿ ಅಲ್ಲ, ನಮ್ಮ ಕೈಯಲ್ಲಿ ಎಷ್ಟಾಗುತ್ತೆ ಅಂತ ಯೋಚನೆ ಮಾಡಿ ಗುರಿ ಇಡಬೇಕು. ಹಾಗೆ ಮಾಡಿದಾಗ ನಮಗೆ ಬೇಜಾರಾಗಲ್ಲ. ನಮ್ಮಿಂದ ಏನೂ ಪ್ರಯೋಜನ ಇಲ್ಲ ಅಂತ ಅನಿಸಲ್ಲ. (ಲೂಕ 14:28) ಮಯೂರಿ ಅನ್ನೋ ಪಯನೀಯರ್‌ ಸಹೋದರಿಯ ಉದಾಹರಣೆ ನೋಡಿ.

16 ಮಯೂರಿಯ ಅಪ್ಪ ಸತ್ಯದಲ್ಲಿ ಇರಲಿಲ್ಲ. ಅವರು ಅವಳನ್ನ ಅವಳ ತಂಗಿ-ತಮ್ಮನ ಜೊತೆ, ಅವಳ ಕ್ಲಾಸ್‌ಮೇಟುಗಳ ಜೊತೆ ಯಾವಾಗಲೂ ಹೋಲಿಸ್ತಿದ್ರು. ಆಗ ಅವಳಿಗೆ ತುಂಬ ಅವಮಾನ ಆಗ್ತಿತ್ತು. ‘ನಾನು ಯಾವುದಕ್ಕೂ ಪ್ರಯೋಜನ ಇಲ್ಲ ಅಂತ ಅನಿಸ್ತಿತ್ತು’ ಅಂತ ಸಹೋದರಿ ಹೇಳ್ತಾಳೆ. ಆದ್ರೆ ಬೆಳಿತಾ ಬೆಳಿತಾ ಸಹೋದರಿಗೆ ಸ್ವಲ್ಪ ಆತ್ಮವಿಶ್ವಾಸ ಬಂತು. ಅದು ಹೇಗೆ ಅಂತ ಅವಳೇ ಹೇಳ್ತಾಳೆ. “ನಾನು ಪ್ರತಿದಿನ ಬೈಬಲ್‌ ಓದುತ್ತಿದ್ದೆ. ಬೈಬಲ್‌ ಓದುವಾಗೆಲ್ಲ ಯೆಹೋವ ದೇವರು ನನ್ನನ್ನ ತುಂಬ ಪ್ರೀತಿಸ್ತಾರೆ ಅಂತ ಗೊತ್ತಾಗ್ತಿತ್ತು. ಆಗ ನನ್ನ ಮನಸ್ಸಿಗೆ ನೆಮ್ಮದಿ ಸಿಗ್ತಿತ್ತು, ಸಮಾಧಾನ ಆಗ್ತಿತ್ತು.” ಇದರ ಜೊತೆಗೆ ಆ ಸಹೋದರಿ ತನ್ನ ಕೈಯಿಂದ ಮಾಡೋಕೆ ಆಗೋ ಕೆಲವು ಗುರಿಗಳನ್ನ ಇಡ್ತಿದ್ರು. ಆಮೇಲೆ ಅದನ್ನ ಮುಟ್ಟೋಕೆ ದೇವರ ಹತ್ರ ಸಹಾಯ ಕೇಳ್ತಿದ್ರು. ಅದನ್ನ ಮುಟ್ಟಿದಾಗ ಯೆಹೋವ ದೇವರಿಗೋಸ್ಕರ ತನ್ನ ಕೈಲಾದಷ್ಟು ಸೇವೆ ಮಾಡಿದೆ ಅಂತ ಖುಷಿಪಟ್ರು.

ನಿಮ್ಮ ಕೈಲಾದ ಸೇವೆ ಮಾಡ್ತಾ ಇರಿ

17. (ಎ) ‘ನಮ್ಮ ಯೋಚನೆ ಮತ್ತು ನಡತೆಯನ್ನ ಬದಲಾಯಿಸಿಕೊಳ್ತಾ ಇರೋಕೆ’ ನಾವು ಏನು ಮಾಡಬೇಕು? (ಬಿ) ಹಾಗೆ ಮಾಡಿದ್ರೆ ನಮಗೆ ಏನು ಪ್ರಯೋಜನ ಆಗುತ್ತೆ?

17 ನಮ್ಮ ಬಗ್ಗೆ ಕೀಳಾಗಿರೋ ಅಭಿಪ್ರಾಯಗಳನ್ನ ಯೋಚನೆಗಳನ್ನ ನಮ್ಮಿಂದ ಅಷ್ಟು ಸುಲಭವಾಗಿ ತೆಗೆದುಹಾಕೋಕೆ ಆಗಲ್ಲ. ಅದಕ್ಕೆ ಯೆಹೋವ ದೇವರು “ನಿಮ್ಮ ಯೋಚ್ನೆ ಮತ್ತು ನಡತೆಯನ್ನ ಬದಲಾಯಿಸ್ಕೊಳ್ತಾ ಇರಬೇಕು” ಅಂತ ಹೇಳಿದ್ದಾರೆ. (ಎಫೆ. 4:23, 24) ಅದಕ್ಕೆ ನಾವು ಪ್ರಾರ್ಥನೆ ಮಾಡಬೇಕು, ಬೈಬಲ್‌ ಓದಬೇಕು, ಧ್ಯಾನಿಸಬೇಕು. ‘ಇದನ್ನೆಲ್ಲ ಮಾಡ್ತಾ ಇರೋಕೆ ಶಕ್ತಿ ಕೊಡಪ್ಪಾ’ ಅಂತ ದೇವರ ಹತ್ರ ಕೇಳಬೇಕು. ಆಗ ಬೇರೆಯವರ ಜೊತೆ ಹೋಲಿಸಿಕೊಳ್ಳೋ ಸ್ವಭಾವ ಬಿಟ್ಟುಬಿಡೋಕೆ ಪವಿತ್ರ ಶಕ್ತಿ ನಮಗೆ ಸಹಾಯ ಮಾಡುತ್ತೆ. ಅಷ್ಟೇ ಅಲ್ಲ ನಮ್ಮ ಮನಸ್ಸಲ್ಲಿ ಅಹಂಕಾರ ಅಥವಾ ಅಸೂಯೆ ಅನ್ನೋ ಗುಣಗಳಿದ್ರೆ ಅದನ್ನ ಕಂಡುಹಿಡಿದು ತಕ್ಷಣ ಅದನ್ನ ಕಿತ್ತು ಹಾಕೋಕೆ ಯೆಹೋವ ದೇವರು ಸಹಾಯ ಮಾಡ್ತಾರೆ.

18. ಎರಡನೇ ಪೂರ್ವಕಾಲವೃತ್ತಾಂತ 6:29, 30 ಓದಿದಾಗ ನಮಗೆ ಯಾವ ಸಮಾಧಾನ ಸಿಗುತ್ತೆ?

18 ಎರಡನೇ ಪೂರ್ವಕಾಲವೃತ್ತಾಂತ 6:29, 30 ಓದಿ. ಯೆಹೋವ ದೇವರಿಗೆ ನಮ್ಮ ಮನಸ್ಸಲ್ಲಿ ಏನಿದೆ ಅಂತ ಗೊತ್ತು. ಒಂದು ಕಡೆ ಲೋಕದ ಒತ್ತಡ ಇದ್ರೆ, ಇನ್ನೊಂದು ಕಡೆ ಅಪರಿಪೂರ್ಣತೆ ಇದೆ. ಇವುಗಳ ವಿರುದ್ಧ ಹೋರಾಡೋಕೆ ನಾವೆಷ್ಟು ಕಷ್ಟಪಡ್ತಾ ಇದ್ದೀವಿ ಅಂತಾನೂ ದೇವರಿಗೆ ಗೊತ್ತು. ನಾವು ಸೋತುಹೋಗದೆ ಹೋರಾಡ್ತಾ ಇರೋದನ್ನ ನೋಡುವಾಗ ಯೆಹೋವ ದೇವರಿಗೆ ನಮ್ಮ ಮೇಲಿರೋ ಪ್ರೀತಿ ಇನ್ನೂ ಜಾಸ್ತಿ ಆಗುತ್ತೆ.

19. ಯೆಹೋವ ದೇವರು ನಮ್ಮನ್ನ ಎಷ್ಟು ಪ್ರೀತಿಸ್ತಾರೆ?

19 ಅಮ್ಮ ತನ್ನ ಕಂದಮ್ಮನ್ನ ಹೇಗೆ ಪ್ರೀತಿಸ್ತಾಳೋ ಹಾಗೇ ಯೆಹೋವ ಅಪ್ಪ ನಮ್ಮನ್ನ ತುಂಬ ಪ್ರೀತಿಸ್ತಾರೆ. (ಯೆಶಾ. 49:15) ಇದನ್ನ ಅರ್ಥ ಮಾಡಿಕೊಳ್ಳೋಕೆ ರೇಚೆಲ್‌ ಅನ್ನೋ ಸಹೋದರಿಯ ಅನುಭವ ಕೇಳಿ. “ನನ್ನ ಮಗಳು ಸ್ಟೆಫನಿ ದಿನ ತುಂಬೋ ಮುಂಚೆನೇ ಹುಟ್ಟಿಬಿಟ್ಟಳು. ಅವಳ ಪುಟ್ಟಪುಟ್ಟ ಕೈಕಾಲುಗಳನ್ನ ನೋಡ್ತಾ ಇದ್ರೆ ನನ್ನ ಕರುಳೇ ಕಿತ್ತುಬರುತ್ತಿತ್ತು. ಅವಳು ಒಂದು ತಿಂಗಳು ಹಾಸ್ಪಿಟಲಲ್ಲಿ ಇನ್‌ಕ್ಯುಬೇಟರ್‌ನಲ್ಲೇ ಇದ್ದಳು. ಆದ್ರೂ ಪ್ರತಿದಿನ ಅವಳನ್ನ ಎತ್ತಿಕೊಳ್ಳೋಕೆ ಡಾಕ್ಟರ್‌ ನನಗೆ ಹೇಳ್ತಿದ್ರು. ಇದ್ರಿಂದ ನಾನೂ ನನ್ನ ಮಗಳೂ ಒಬ್ಬರನ್ನೊಬ್ಬರು ಬಿಟ್ಟಿರೋಕೆ ಆಗದಷ್ಟು ಪ್ರೀತಿ ಬೆಳೀತು. ಈಗ ನನ್ನ ಮಗಳಿಗೆ 6 ವರ್ಷ. ಬೇರೆ ಮಕ್ಕಳಿಗಿಂತ ಅವಳ ಬೆಳವಣಿಗೆ ಸ್ವಲ್ಪ ಕಡಿಮೆನೇ. ಆದ್ರೂ ನನಗೆ ನನ್ನ ಮಗಳಂದ್ರೆ ತುಂಬ ಇಷ್ಟ. ಯಾಕಂದ್ರೆ ಅವಳು ಬದುಕೋಕೆ ತುಂಬ ಕಷ್ಟಪಟ್ಟಿದ್ದಾಳೆ ಮತ್ತು ನನ್ನ ಜೀವನದಲ್ಲಿ ಯಾರಿಂದಾನೂ ತರೋಕೆ ಆಗದಷ್ಟು ಖುಷಿ ತಂದುಕೊಟ್ಟಿದ್ದಾಳೆ” ಅಂತ ರೇಚೆಲ್‌ ಹೇಳ್ತಾರೆ. ಎಷ್ಟೇ ಕಷ್ಟ ಇದ್ರೂ ಯೆಹೋವ ದೇವರಿಗೋಸ್ಕರ ನಮ್ಮ ಕೈಲಾದ ಸೇವೆ ಮಾಡೋದನ್ನ ಯೆಹೋವ ದೇವರು ನೋಡ್ತಿದ್ದಾರೆ. ಅವರಿಗೆ ನಮ್ಮ ಮೇಲೆ ಪ್ರೀತಿ ಉಕ್ಕಿ ಬರ್ತಿದೆ.

20. ಯೆಹೋವ ದೇವರ ಸೇವಕರಾಗಿರೋ ನೀವು ಯಾಕೆ ಖುಷಿಪಡಬೇಕು?

20 ಯೆಹೋವನ ಸೇವೆ ಮಾಡ್ತಿರೋ ನೀವೆಲ್ಲರೂ ಒಂದೊಂದು ಮುತ್ತಿನ ತರ. ಯೆಹೋವ ದೇವರ ದೃಷ್ಟಿಯಲ್ಲಿ ನಿಮ್ಮೆಲ್ಲರಿಗೂ ಒಂದೊಂದು ಶ್ರೇಷ್ಠವಾದ ಬೆಲೆ ಇದೆ. ಬೇರೆಯವರ ಜೊತೆ ನಿಮ್ಮನ್ನ ಹೋಲಿಸಿ ‘ಅವರಿಗಿಂತ ನಿಮಗೆ ಬೆಲೆ ಜಾಸ್ತಿ’ ಅಂತ ದೇವರು ನಿಮ್ಮನ್ನ ಆರಿಸಿಕೊಂಡಿಲ್ಲ. ನಿಮ್ಮ ಹೃದಯ ನೋಡಿ ಆರಿಸಿಕೊಂಡಿದ್ದಾರೆ. ಅಂದ್ರೆ ನಿಮ್ಮಲ್ಲಿ ದೀನತೆ ಇದೆ, ಆತನಿಂದ ಕಲಿಯೋ ಮನಸ್ಸಿದೆ ಅಂತ ಆರಿಸಿಕೊಂಡಿದ್ದಾರೆ. (ಕೀರ್ತ. 25:9) ನಿಮಗೆ ‘ಒಳ್ಳೇ ಮನಸ್ಸು, ಒಳ್ಳೇ ಹೃದಯ’ ಇದೆ ಅನ್ನೋದಕ್ಕೆ ನೀವು ತೋರಿಸ್ತಾ ಇರೋ ತಾಳ್ಮೆ ನಂಬಿಕೆನೇ ಸಾಕ್ಷಿ. (ಲೂಕ 8:15) ಯೆಹೋವ ದೇವರಿಗೋಸ್ಕರ ನಿಮ್ಮ ಕೈಯಲ್ಲಿ ಆಗೋದನ್ನೆಲ್ಲ ಮಾಡುವಾಗ ಅದನ್ನ ದೇವರು ಮೆಚ್ಚಿಕೊಳ್ತಾರೆ. ಹಾಗಾಗಿ ನಿಮ್ಮ ಕೈಯಲ್ಲಿ ಆಗೋದನ್ನೆಲ್ಲ ಮಾಡಿ, ಆಗ ‘ನಿಮ್ಮ ಕೆಲಸದ ಬಗ್ಗೆ ಖುಷಿಪಡ್ತೀರ.’

ನಿಮ್ಮ ಉತ್ತರವೇನು?

  • ಮಕ್ಕಳು ತಮ್ಮ ಕೈಯಿಂದ ಆಗೋ ಸೇವೆ ಮಾಡೋಕೆ ಅಪ್ಪ-ಅಮ್ಮ ಹೇಗೆ ಸಹಾಯ ಮಾಡಬಹುದು?

  • ಸಹೋದರ ಸಹೋದರಿಯರು ಸಭೆಗೆ ಬೇಕು ಅಂತ ಹಿರಿಯರು ಹೇಗೆ ಅರ್ಥ ಮಾಡಿಸಬಹುದು?

  • ನಮ್ಮ ಸೇವೇಲಿ ನಾವು ಯಾಕೆ ಖುಷಿ ಪಡಬೇಕು?

ಗೀತೆ 60 ಆತನು ನಿನ್ನನ್ನು ಬಲಪಡಿಸುವನು

a ಯೆಹೋವ ದೇವರು ಯಾವತ್ತೂ ನಮ್ಮನ್ನು ಬೇರೆಯವರ ಜೊತೆ ಹೋಲಿಸಿ ನೋಡಲ್ಲ. ಆದ್ರೆ ನಾವು ಹಾಗೆ ಮಾಡಿಬಿಡ್ತೀವಿ. ಆಮೇಲೆ ‘ನಾನು ಯಾವುದಕ್ಕೂ ಲಾಯಕ್ಕಿಲ್ಲ’ ಅಂತ ಬೇಜಾರ್‌ ಮಾಡಿಕೊಳ್ತೀವಿ. ಹಾಗಾಗಿ ಬೇರೆಯವರ ಜೊತೆ ನಮ್ಮನ್ನ ಹೋಲಿಸಿಕೊಳ್ಳೋದ್ರಿಂದ ಏನೆಲ್ಲಾ ಆಗುತ್ತೆ ಅಂತ ಈ ಲೇಖನದಲ್ಲಿ ಕಲಿಯೋಣ. ನಮ್ಮ ಕುಟುಂಬದವರನ್ನ, ಸಭೆಯವರನ್ನ ಯೆಹೋವ ದೇವರು ಅಮೂಲ್ಯವಾಗಿ ನೋಡ್ತಾನೆ. ಅವರೂ ತಮ್ಮ ಬಗ್ಗೆ ಅದೇ ಭಾವನೆ ಬೆಳೆಸಿಕೊಳ್ಳೋಕೆ ನಾವು ಹೇಗೆ ಸಹಾಯ ಮಾಡಬಹುದು ಅಂತನೂ ನೋಡೋಣ.

b ಹೆಸರು ಬದಲಾಗಿದೆ.

c ಈ ವಿಷ್ಯಗಳನ್ನ ಗಂಡಂದಿರು ಮಾತ್ರ ಅಲ್ಲ ಹೆಂಡತಿಯರೂ ಪಾಲಿಸಬೇಕು.

d ಚಿತ್ರ ವಿವರಣೆ: ಕುಟುಂಬ ಆರಾಧನೆಯಲ್ಲಿ ನೋಹನ ನಾವೆ ಕಟ್ಟೋಕೆ ಒಂದೊಂದು ಮಗು ಒಂದೊಂದು ತರ ಸಹಾಯ ಮಾಡ್ತಿದೆ. ಅದನ್ನ ಅಪ್ಪಅಮ್ಮ ನೋಡಿ ಖುಷಿಪಡ್ತಿದ್ದಾರೆ.

e ಚಿತ್ರ ವಿವರಣೆ: ಸಹೋದರಿ ಒಬ್ಬರೇ ತನ್ನ ಚಿಕ್ಕ ಮಗುನ ಸಾಕ್ತಾ ಇದ್ದಾರೆ. ಈ ಪರಿಸ್ಥಿತಿಯಲ್ಲಿ ಆಕ್ಸಿಲಿಯರಿ ಪಯನೀಯರಿಂಗ್‌ ಮಾಡೋಕೆ ಆಗುತ್ತಾ ಅಂತ ಶೆಡ್ಯೂಲ್‌ ಮಾಡಿ ನೋಡ್ತಿದ್ದಾರೆ. ಆಮೇಲೆ ತನ್ನ ಗುರಿ ಮುಟ್ಟಿ ಖುಷಿಯಾಗಿ ಇದ್ದಾರೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ