ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • be ಪು. 9-ಪು. 12 ಪ್ಯಾ. 4
  • ದೇವರ ವಾಕ್ಯದಲ್ಲಿ ಆನಂದವನ್ನು ಪಡೆದುಕೊಳ್ಳಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ವಾಕ್ಯದಲ್ಲಿ ಆನಂದವನ್ನು ಪಡೆದುಕೊಳ್ಳಿರಿ
  • ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೆಹೋವನು ಮಾತಾಡುವಾಗ ಕಿವಿಗೊಡಿರಿ
  • ಬೈಬಲನ್ನು ದಿನಾಲೂ ಓದಿರಿ
  • ದೇವರ ವಾಕ್ಯವನ್ನು ಪೂರ್ಣವಾಗಿ ಓದಿರಿ
  • ದೈನಿಕ ಬೈಬಲ್‌ ವಾಚನದಿಂದ ಪ್ರಯೋಜನ ಪಡೆಯುವುದು
    ಕಾವಲಿನಬುರುಜು—1995
  • ವಾಚನದಲ್ಲಿ ಶ್ರದ್ಧೆಯಿಂದ ನಿಮ್ಮನ್ನೇ ನಿರತರಾಗಿಸಿಕೊಳ್ಳಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ಪ್ರಯೋಜನಕರ ಹಾಗೂ ಆನಂದದಾಯಕವಾದ ಬೈಬಲ್‌ ವಾಚನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ಬೈಬಲನ್ನ ಚೆನ್ನಾಗಿ ಅರ್ಥಮಾಡಿಕೊಳ್ಳೋದು ಹೇಗೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
be ಪು. 9-ಪು. 12 ಪ್ಯಾ. 4

ದೇವರ ವಾಕ್ಯದಲ್ಲಿ ಆನಂದವನ್ನು ಪಡೆದುಕೊಳ್ಳಿರಿ

“ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವ” ಮನುಷ್ಯನು ಧನ್ಯನು. ಅಂತಹ ಮನುಷ್ಯನು ದೇವರ ವಾಕ್ಯವನ್ನು, “ಹಗಲಿರುಳು” ಧ್ಯಾನಿಸುತ್ತಾನೆ. (ಕೀರ್ತ. 1:1, 2) ನೀವು ಅಂತಹ ಆನಂದವನ್ನು ಅನುಭವಿಸುತ್ತೀರೋ? ದೇವರ ವಾಕ್ಯವು ತರುವ ಸಂತೋಷವನ್ನು ನೀವು ಹೇಗೆ ವರ್ಧಿಸಬಲ್ಲಿರಿ?

ಯೆಹೋವನು ಮಾತಾಡುವಾಗ ಕಿವಿಗೊಡಿರಿ

ಕೇವಲ ಪದಗಳನ್ನು ಓದಬೇಡಿ. ನೀವು ಓದುತ್ತಿರುವ ವಿಷಯದ ಸನ್ನಿವೇಶಗಳನ್ನು ಮನದಲ್ಲೇ ಚಿತ್ರಿಸಿಕೊಳ್ಳಿ. ಉಲ್ಲೇಖಿಸಿರುವ ವ್ಯಕ್ತಿಗಳ ಸ್ವರಗಳನ್ನು ಕಲ್ಪಿಸಿಕೊಳ್ಳಿ. ಬೈಬಲಿನ ಆರಂಭದ ಅಧ್ಯಾಯಗಳನ್ನು ಓದುವಾಗ, ಭೂಮಿಯನ್ನು ಮನುಷ್ಯನಿಗೆ ಯೋಗ್ಯವಾಗಿರುವಂತೆ ಮಾರ್ಪಡಿಸುವುದರಲ್ಲಿ ಏನೆಲ್ಲ ಮಾಡಲಾಯಿತೆಂಬುದನ್ನು ಯೆಹೋವನು ತಾನೇ ಹಂತಹಂತವಾಗಿ ತಿಳಿಸುವುದನ್ನು ಕೇಳಿಸಿಕೊಳ್ಳಿರಿ. ಪ್ರಥಮ ಮಾನವರನ್ನು ಅಸ್ತಿತ್ವಕ್ಕೆ ತರುವ ಸಮಯ ಬಂದಿದೆಯೆಂದು ಆತನು ಕುಶಲ ಶಿಲ್ಪಿಯಾದ ತನ್ನ ಪುತ್ರನಿಗೆ ಹೇಳುವುದನ್ನು ಆಲಿಸಿರಿ. ಆದಾಮಹವ್ವರ ದಂಗೆಯನ್ನು, ದೇವರು ಅವರಿಗೆ ನೀಡುವ ನ್ಯಾಯತೀರ್ಪನ್ನು ಮತ್ತು ಬಳಿಕ ಆತನು ಅವರನ್ನು ಪರದೈಸಿನಿಂದ ಹೊರದೊಬ್ಬುವ ದೃಶ್ಯವನ್ನು ಚಿತ್ರಿಸಿಕೊಳ್ಳಿ. (ಆದಿಕಾಂಡ, 1-3ನೆಯ ಅಧ್ಯಾಯಗಳು) ಮಾನವಕುಲಕ್ಕಾಗಿ ತನ್ನ ಜೀವವನ್ನು ಒಪ್ಪಿಸಿಕೊಡಲಿಕ್ಕಾಗಿ ದೇವರಿಂದ ಕಳುಹಿಸಲ್ಪಟ್ಟವನಾದ ಯೇಸು ಕ್ರಿಸ್ತನನ್ನು, ಪ್ರಿಯನಾಗಿರುವ ದೇವಕುಮಾರನಾಗಿ ಗುರುತಿಸುವ ಆಕಾಶವಾಣಿಯ ಕುರಿತು ನೀವು ಓದುವಾಗ ಆಗುವ ಭಯಾಶ್ಚರ್ಯಗಳನ್ನು ಅನುಭವಿಸಿರಿ. (ಮತ್ತಾ. 3:16, 17) “ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ” ಎಂದು ಯೆಹೋವನು ಹೇಳಿದಾಗ ಅಪೊಸ್ತಲ ಯೋಹಾನನು ತೋರಿಸಿದ ಪ್ರತಿಕ್ರಿಯೆಯನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ. (ಪ್ರಕ. 21:5) ದೇವರ ವಾಕ್ಯದ ಈ ರೀತಿಯ ವಾಚನವು ಆನಂದದಾಯಕವಾದ ಅನುಭವವಾಗಿರಸಾಧ್ಯವಿದೆ ಎಂಬುದಂತೂ ಖಂಡಿತ!

ಪ್ರೇರಿತ ದಾಖಲೆಯನ್ನು ನೀವು ಓದುತ್ತ ಮುಂದುವರಿಯುವಲ್ಲಿ, ಯೆಹೋವನು ಘನ ಗಾಂಭೀರ್ಯವುಳ್ಳವನೂ ಭಯಾಶ್ಚರ್ಯ ಪ್ರೇರಕನೂ ಆಗಿರುವ ವ್ಯಕ್ತಿಯಾಗಿದ್ದಾನೆ ಎಂಬುದನ್ನು ನೀವು ತಿಳಿದುಕೊಳ್ಳುವಿರಿ. ನಮ್ಮನ್ನು ಪ್ರೀತಿಸುವ, ನಮ್ಮೊಂದಿಗೆ ಕರುಣೆಯಿಂದ ವ್ಯವಹರಿಸುವ, ತನ್ನ ಚಿತ್ತವನ್ನು ಮಾಡಲು ದೈನ್ಯದಿಂದ ಪ್ರಯತ್ನಿಸುವಾಗ ನಮಗೆ ಸಹಾಯಮಾಡುವ ಮತ್ತು ನಾವು ಮಾಡುವ ಸಕಲ ವಿಷಯಗಳಲ್ಲಿ ಹೇಗೆ ಜಯಪ್ರದರಾಗುವುದು ಎಂಬುದನ್ನು ನಮಗೆ ತೋರಿಸುವ ಆ ವ್ಯಕ್ತಿಯ ಕಡೆಗೆ ನಾವು ಬಲವಾಗಿ ಸೆಳೆಯಲ್ಪಡುವೆವು.—ಯೆಹೋ. 1:8; ಕೀರ್ತ. 8:1; ಯೆಶಾ. 41:10.

ನೀವು ಬೈಬಲನ್ನು ಓದುವುದರಲ್ಲಿ ಎಷ್ಟು ಹೆಚ್ಚು ಸಮಯವನ್ನು ವ್ಯಯಿಸುತ್ತೀರೋ, ನಿಮಗಾಗಿರುವ ದೇವರ ಚಿತ್ತದ ಕುರಿತಾದ ಜ್ಞಾನದಲ್ಲಿ ನೀವು ಬೆಳೆಯುತ್ತಾ ಹೋದಂತೆ ನಿಮ್ಮ ಸಂತೃಪ್ತಿಯೂ ಅಷ್ಟೇ ಹೆಚ್ಚಾಗುವುದು. ಆದರೆ ಆನಂದವು ಅದನ್ನೂ ಮೀರಿಹೋಗುತ್ತದೆ. ಸಮಸ್ಯೆಗಳನ್ನು ವಿವೇಕದಿಂದ ನಿಭಾಯಿಸಲು ನಿಮಗೆ ಬೇಕಾಗಿರುವ ಸಹಾಯವನ್ನು ನಿಮ್ಮ ವಾಚನವು ಒದಗಿಸುವಾಗ, “ನಿನ್ನ ಕಟ್ಟಳೆಗಳು ಮಹತ್ವವುಳ್ಳವುಗಳೇ; ಪೂರ್ಣಹೃದಯದಿಂದ ಅವುಗಳನ್ನು ಕೈಕೊಳ್ಳುತ್ತೇನೆ,” ಎಂದು ಹೇಳಿದ ಕೀರ್ತನೆಗಾರನ ಅನಿಸಿಕೆ ನಿಮಗಾಗುವುದು. (ಕೀರ್ತ. 119:129) ನಿಮ್ಮ ಆಲೋಚನೆ ಮತ್ತು ಬಯಕೆಗಳನ್ನು ದೈವಿಕ ರೀತಿಯಲ್ಲಿ ರೂಪಿಸಲು ಸಹಾಯಮಾಡುವ ಮೂಲತತ್ತ್ವಗಳನ್ನು ಶಾಸ್ತ್ರವಚನಗಳಿಂದ ವಿವೇಚಿಸಿ ತಿಳಿದುಕೊಳ್ಳುವಾಗಲೂ ನೀವು ಹರ್ಷಿಸುವಿರಿ.—ಯೆಶಾ. 55:8, 9.

ನಮ್ಮನ್ನು ಹಾನಿಯಿಂದ ರಕ್ಷಿಸಿ ಸರಿಯಾದ ಮಾರ್ಗವನ್ನು ತೋರಿಸುವ ನೈತಿಕ ಮಾರ್ಗದರ್ಶನವನ್ನು ಬೈಬಲು ನಮಗೆ ಒದಗಿಸುತ್ತದೆ. ನಾವು ಅದನ್ನು ಓದುವಾಗ, ಅಪರಿಪೂರ್ಣ ಶರೀರದಾಶೆಗಳಿಗೆ ನಾವು ನಮ್ಮನ್ನು ಒಪ್ಪಿಸಿಕೊಡುವಾಗ ನಮಗೆ ಉಂಟಾಗುವ ಸಮಸ್ಯೆಗಳನ್ನು ತಿಳಿದಿರುವಂಥ ಒಬ್ಬ ತಂದೆ ಯೆಹೋವನಾಗಿದ್ದಾನೆ ಎಂಬುದು ನಮಗೆ ತಿಳಿದುಬರುತ್ತದೆ. ತನ್ನ ಉನ್ನತ ನೈತಿಕ ಮಟ್ಟಗಳನ್ನು ಧಿಕ್ಕರಿಸುವವರಿಗೆ ಅನಿವಾರ್ಯವಾಗಿ ಬಂದೇ ಬರುವ ಭಯಂಕರ ಪರಿಣಾಮಗಳನ್ನು ನಾವು ಅನುಭವಿಸುವಂತೆ ಆತನು ಬಯಸುವುದಿಲ್ಲ. ಆತನು ನಮ್ಮ ವಿಷಯದಲ್ಲಿ ಚಿಂತೆ ತೋರಿಸಿ, ನಾವು ಅತ್ಯುತ್ತಮವಾದ ಜೀವನವನ್ನು ಅನುಭವಿಸುವಂತೆ ಬಯಸುತ್ತಾನೆ. ಆತನ ವಾಕ್ಯದ ವಾಚನವು, ಆತನು ನಮ್ಮ ದೇವರೂ ಸ್ವರ್ಗೀಯ ತಂದೆಯೂ ಆಗಿರುವುದು ನಮಗೆ ಎಷ್ಟು ಆಶೀರ್ವಾದದಾಯಕವಾದ ವಿಷಯವಾಗಿದೆ ಎಂಬುದನ್ನು ನಾವು ಹೆಚ್ಚು ಪೂರ್ಣವಾಗಿ ಗಣ್ಯಮಾಡಲು ನಮಗೆ ಸಹಾಯ ನೀಡುತ್ತದೆ.

ಬೈಬಲನ್ನು ದಿನಾಲೂ ಓದಿರಿ

ದೇವರ ವಾಕ್ಯವನ್ನು ದಿನಾಲೂ ಓದುವವನ ಕುರಿತು, “ಅವನ ಕಾರ್ಯವೆಲ್ಲವೂ ಸಫಲವಾಗುವದು” ಎಂದು ಕೀರ್ತನೆಗಾರನು ಹೇಳಿದನು. (ಕೀರ್ತ. 1:3) ಹೌದು, ನಮ್ಮಲ್ಲಿ ಅಪರಿಪೂರ್ಣತೆಗಳಿದ್ದರೂ, ನಾವು ಸೈತಾನನ ದುಷ್ಟ ವಿಷಯಗಳ ವ್ಯವಸ್ಥೆಯಲ್ಲಿ ಜೀವಿಸುತ್ತಿರುವುದಾದರೂ, ಪಿಶಾಚನು ನಮ್ಮನ್ನು ನುಂಗಿಬಿಡಲು ಪ್ರಯತ್ನಿಸುತ್ತಿರುವುದಾದರೂ, ದೇವರ ವಾಕ್ಯದ ಕ್ರಮವಾದ ವಾಚನ ಮತ್ತು ಅನ್ವಯಿಸಿಕೊಳ್ಳುವಿಕೆಯು, ಯೆಹೋವನಿಗೂ ನಮಗೂ ಇರುವ ಸಂಬಂಧದಲ್ಲಿ ಒಳಗೂಡಿರುವ ಎಲ್ಲ ವಿಷಯಗಳಲ್ಲಿಯೂ ನಾವು ಜಯಪ್ರದರಾಗುವಂತೆ ನಮ್ಮನ್ನು ಶಕ್ತರಾಗಿಸುವುದು.

ಈ ಹಳೆಯ ವ್ಯವಸ್ಥೆಯ ಒತ್ತಡವು ನಮ್ಮ ಮೇಲಿರುವುದರಿಂದ, ಸೃಷ್ಟಿಕರ್ತನ ಆಲೋಚನೆಗಳನ್ನು ಪ್ರತಿ ದಿನ ಕೇವಲ ಕೆಲವೇ ಅಮೂಲ್ಯ ಕ್ಷಣಗಳ ವರೆಗೆ ಹೀರಿಕೊಳ್ಳುವುದಾದರೂ, ಅದು ನಮಗೆ ಸಾಕಷ್ಟು ಬಲವನ್ನು ನೀಡಬಲ್ಲದು. ತಮ್ಮ ನಂಬಿಕೆಯ ಕಾರಣದಿಂದ ಸೆರೆಮನೆಗೆ ಹಾಕಲ್ಪಟ್ಟ ಕೆಲವರಿಗೆ, ವಾರ್ತಾ ಪತ್ರಿಕೆಗಳ ಲೇಖನಗಳಲ್ಲಿ ಅಲ್ಲಿಯೊ ಇಲ್ಲಿಯೊ ಕಂಡುಬರುತ್ತಿದ್ದ ವಚನಗಳು ಮಾತ್ರ ಓದಲು ದೊರೆಯುತ್ತಿದ್ದವು. ಅವರು ಅವುಗಳನ್ನು ಸಂಗ್ರಹಿಸಿಕೊಂಡು, ಬಾಯಿಪಾಠ ಮಾಡಿ, ಅವುಗಳ ಕುರಿತು ಮನನ ಮಾಡಿದರು. ಅವರು ತಮ್ಮ ಸನ್ನಿವೇಶಗಳು ಅನುಮತಿಸುವ ಹಾಗೆ, ದೇವರ ವಾಕ್ಯದ ಜ್ಞಾನವನ್ನು ಪಡೆದುಕೊಂಡ ಕಾರಣ ಯೆಹೋವನು ಅವರ ಪ್ರಯತ್ನಗಳನ್ನು ಆಶೀರ್ವದಿಸಿದನು. (ಯೋಹಾ. 17:3) ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಅದಕ್ಕಿಂತ ಎಷ್ಟೋ ಹೆಚ್ಚಿನ ಸ್ವಾತಂತ್ರ್ಯವಿದೆ. ದಿನಕ್ಕೊಂದಾವರ್ತಿ ಅವಸರವಸರದಿಂದ ಒಂದು ವಚನವನ್ನು ಓದುವುದು ತಾನೇ ಯಾವುದೋ ಅದ್ಭುತ ಪರಿಣಾಮವನ್ನು ಉಂಟುಮಾಡಲಿದೆಯೆಂದು ನಾವು ತೀರ್ಮಾನಿಸಬಾರದು. ಆದರೆ ನಾವು ಪ್ರತಿದಿನ ಬೈಬಲಿನ ಒಂದು ಭಾಗವನ್ನು ಓದಲು, ಅದರ ಕುರಿತು ಯೋಚಿಸಲು ಮತ್ತು ಅದನ್ನು ನಮ್ಮ ಜೀವಿತಗಳಲ್ಲಿ ಕಾರ್ಯರೂಪಕ್ಕೆ ಹಾಕಲು ಸಾಧ್ಯವಾಗುವಂತೆ ನಮ್ಮ ಆದ್ಯತೆಗಳನ್ನು ಹೊಂದಿಸಿಕೊಳ್ಳುವಲ್ಲಿ, ಆಶೀರ್ವಾದಗಳು ನಮ್ಮದಾಗಿರುವವು.

ನಾವು ಎಷ್ಟೇ ಉತ್ತಮವಾಗಿ ಯೋಜನೆಗಳನ್ನು ಮಾಡಿದರೂ ಅದಕ್ಕೆ ಭಂಗ ಬರುವ ಸಾಧ್ಯತೆಯಂತೂ ಇದ್ದೇ ಇರುತ್ತದೆ. ಹಾಗಾಗುವಾಗ, ನಿಜವಾಗಿಯೂ ಮಹತ್ವವುಳ್ಳ ವಿಷಯಗಳಿಗೆ ನಾವು ಆದ್ಯತೆಯನ್ನು ಕೊಡುತ್ತೇವೆ. ಉದಾಹರಣೆಗೆ, ನಾವು ಬೇಕುಬೇಕೆಂದೇ ಒಂದೆರಡು ದಿನ ನೀರು ಕುಡಿಯುವುದನ್ನು ಬಿಟ್ಟುಬಿಡುವುದಿಲ್ಲ. ಹಾಗೆಯೇ, ನಮ್ಮ ದೈನಂದಿನ ಜೀವಿತಗಳಲ್ಲಿ ಯಾವುದೇ ಸನ್ನಿವೇಶವು ಬರಲಿ, ಸತ್ಯಜಲದಿಂದ ನಮ್ಮನ್ನು ಚೈತನ್ಯಗೊಳಿಸಿಕೊಳ್ಳಲು ಸ್ವಲ್ಪ ಸಮಯವನ್ನು ನಾವು ತೆಗೆದುಕೊಳ್ಳಬೇಕು.—ಅ. ಕೃ. 17:11.

ದೇವರ ವಾಕ್ಯವನ್ನು ಪೂರ್ಣವಾಗಿ ಓದಿರಿ

ನೀವು ವೈಯಕ್ತಿಕವಾಗಿ ಇಡೀ ಬೈಬಲನ್ನು ಓದಿದ್ದೀರೊ? ಕೆಲವರಿಗೆ ಆದಿಕಾಂಡದಿಂದ ಹಿಡಿದು ಪ್ರಕಟನೆಯ ತನಕ ಓದಿ ಮುಗಿಸುವುದು, ತೀರ ದೊಡ್ಡ ವಿಷಯವಾಗಿ ಕಾಣುತ್ತದೆ. ಆದುದರಿಂದ ಇಡೀ ಬೈಬಲನ್ನು ಓದಲು ಬಯಸಿದ ಅನೇಕರು ಪ್ರಥಮವಾಗಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳನ್ನು ಓದುವ ಮೂಲಕ ಆರಂಭಿಸಿದರು. ಏಕೆ? ಪ್ರಾಯಶಃ, ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯಲು ಪ್ರಯತ್ನಿಸಿದ ಅವರಿಗೆ ಆ ಬೈಬಲ್‌ ಪುಸ್ತಕಗಳು ಹೇಗೆ ವೈಯಕ್ತಿಕವಾಗಿ ಅನ್ವಯಿಸುತ್ತವೆಂಬುದನ್ನು ಹೆಚ್ಚು ಸುಲಭವಾಗಿ ನೋಡಸಾಧ್ಯವಿದ್ದ ಕಾರಣ ಅವರು ಹಾಗೆ ಮಾಡಿರಬಹುದು. ಇಲ್ಲವೆ, ಪ್ರಾಯಶಃ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳು ಓದಲು ಕಡಿಮೆಯಾಗಿರುವ ಭಾಗವಾಗಿರುವುದರಿಂದ, ಅಂದರೆ ಇಡೀ ಬೈಬಲಿನ ಕಾಲು ಭಾಗಕ್ಕಿಂತ ತುಸು ಹೆಚ್ಚಾಗಿರುವ ಕಾರಣದಿಂದ ಅವರು ಅದನ್ನು ಓದತೊಡಗಿದ್ದಿರಬಹುದು. ಆದರೆ ಆ 27 ಪುಸ್ತಕಗಳನ್ನು ಓದಿ ಮುಗಿಸಿದ ಬಳಿಕ, ಅವರು ಹೀಬ್ರು ಶಾಸ್ತ್ರಗಳ 39 ಪುಸ್ತಕಗಳ ಕಡೆಗೆ ಗಮನ ಹರಿಸಿದರು ಮತ್ತು ಅವುಗಳನ್ನು ಓದಿ ಆನಂದಿಸಿದರು. ಹೀಗೆ, ಹೀಬ್ರು ಶಾಸ್ತ್ರಗಳನ್ನು ಓದಿ ಮುಗಿಸುವಷ್ಟರಲ್ಲಿ, ಅವರು ಕ್ರಮದ ಬೈಬಲ್‌ ವಾಚನದ ಒಂದು ನಮೂನೆಯನ್ನೇ ಸ್ಥಾಪಿಸಿದ್ದರು. ಆದುದರಿಂದ ಅವರು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳನ್ನು ಎರಡನೆಯ ಬಾರಿ ಓದತೊಡಗಿದರು ಮತ್ತು ಇದುವರೆಗೆ ಅದನ್ನು ನಿಲ್ಲಿಸಿಲ್ಲ. ಹೀಗೆ, ನೀವೂ ದೇವರ ವಾಕ್ಯವನ್ನು ದಿನಾಲೂ ಓದುವುದನ್ನು ನಿಮ್ಮ ಜೀವನ ಪರ್ಯಂತದ ಅಭ್ಯಾಸವನ್ನಾಗಿ ಮಾಡಿಕೊಳ್ಳಿರಿ.

ನಿಮ್ಮ ಕುಟುಂಬದಲ್ಲಿ ಇಲ್ಲವೆ ಸಭೆಯಲ್ಲಿ ಓದು ಬಾರದಂಥವರು ಅಥವಾ ದೃಷ್ಟಿದೋಷವುಳ್ಳವರು ಯಾರಾದರೂ ಇದ್ದಾರೊ? ಆ ವ್ಯಕ್ತಿಗಾಗಿ ಕ್ರಮವಾಗಿ ಬೈಬಲನ್ನು ಓದಲು ನೀವು ಸಿದ್ಧರಾಗಿದ್ದೀರೆಂದು ಏಕೆ ಹೇಳಬಾರದು? ಇದರಿಂದ ನೀವು ಪ್ರಯೋಜನ ಪಡೆಯುವುದಲ್ಲದೆ, ಆ ವ್ಯಕ್ತಿಯು ತಾನು ಕೇಳಿಸಿಕೊಳ್ಳುವ ವಿಷಯವನ್ನು ಮನನ ಮಾಡಿ ತನ್ನ ಜೀವನದಲ್ಲಿ ಅನ್ವಯಿಸಿಕೊಳ್ಳುವಾಗ, ಅವನೂ ಪ್ರಯೋಜನ ಪಡೆಯುವನು.—ಪ್ರಕ. 1:3.

ಸಕಾಲದಲ್ಲಿ, ನಿಮ್ಮ ಬೈಬಲ್‌ ವಾಚನದ ಸಂಬಂಧದಲ್ಲಿ ನೀವು ವಿಶೇಷ ಯೋಜನೆಗಳನ್ನು ಮಾಡಲು ಬಯಸಬಹುದು. ಇವುಗಳಲ್ಲಿ ಕೆಲವು, ಬೈಬಲಿನ ಬೇರೆ ಬೇರೆ ಭಾಗಗಳ ಮಧ್ಯೆ ಇರುವ ಸಂಬಂಧದ ವಿಷಯದಲ್ಲಿ ನಿಮ್ಮ ಗಣ್ಯತೆಯನ್ನು ಹೆಚ್ಚಿಸಬಲ್ಲವು. ನಿಮ್ಮ ಬೈಬಲಿನಲ್ಲಿ ಮಾರ್ಜಿನಲ್‌ ರೆಫರೆನ್ಸಸ್‌ (ಅಂಚು ಟಿಪ್ಪಣಿಗಳು) ಇರುವಲ್ಲಿ, ಇವು ನಿಮ್ಮನ್ನು ಐತಿಹಾಸಿಕ ವಿವರಗಳಿಗೆ ಹಾಗೂ ಸಮಾನಾಂತರ ವೃತ್ತಾಂತಗಳಿಗೆ ನಡೆಸಬಹುದು. ಇವು, ವಿವಿಧ ಕೀರ್ತನೆಗಳನ್ನು ಬರೆಯುವಂತೆ ಹಾಗೂ ಯೇಸು ಕ್ರಿಸ್ತನ ಅಪೊಸ್ತಲರು ಪತ್ರಗಳನ್ನು ಬರೆಯುವಂತೆ ನಡೆಸಿದ ಪರಿಸ್ಥಿತಿಗಳನ್ನು ನೀವು ವಿವೇಚಿಸಿ ತಿಳಿಯುವಂತೆ ನಿಮಗೆ ಸಹಾಯಮಾಡಬಹುದು. ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌) ಪುಸ್ತಕವು, ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಜನರು, ಸ್ಥಳಗಳು ಮತ್ತು ಗುಣಗಳ ವಿಷಯದಲ್ಲಿ ಧಾರಾಳವಾದ ಹಿನ್ನೆಲೆ ಮಾಹಿತಿಯನ್ನು ಒದಗಿಸುತ್ತದೆ. ಚಾರ್ಟ್‌ಗಳು ಬೈಬಲ್‌ ಪ್ರವಾದನೆಗಳ ನೆರವೇರಿಕೆಗೆ ಗಮನ ಸೆಳೆದು, ಯಾವ ಅರಸರು ಮತ್ತು ಪ್ರವಾದಿಗಳು ಸಮಕಾಲೀನರಾಗಿದ್ದರೆಂಬುದನ್ನು ತೋರಿಸಿ, ಅನೇಕ ಬೈಬಲ್‌ ಘಟನೆಗಳ ಅಂದಾಜಿನ ತಾರೀಖುಗಳನ್ನು ಕೊಡುತ್ತವೆ.

ನೀವು ಕಲಿತ ವಿಷಯವನ್ನು ಮನನ ಮಾಡುವಾಗ, ದೇವಜನರ ಮಧ್ಯೆ ಕೆಲವು ನಿರ್ದಿಷ್ಟ ಪರಿಸ್ಥಿತಿಗಳು ಏಕೆ ಬೆಳೆದುಬಂದವೆಂಬುದು ನಿಮಗೆ ತಿಳಿದುಬರುವುದು. ಯೆಹೋವನು ತನ್ನ ಜನರೊಂದಿಗೆ ಏಕೆ ಆ ರೀತಿಯಲ್ಲಿ ವ್ಯವಹರಿಸಿದನು ಎಂಬುದಕ್ಕಿರುವ ಕಾರಣವನ್ನು ನೀವು ಕಂಡುಕೊಳ್ಳುವಿರಿ. ಯೆಹೋವನು ಸರಕಾರಗಳ, ಜನರ ಮತ್ತು ಒಬ್ಬೊಬ್ಬರ ವರ್ತನೆಗಳನ್ನು ಹೇಗೆ ತೂಗಿ ನೋಡುತ್ತಾನೆಂಬುದು ನಿಮಗೆ ಕಂಡುಬರುವುದು. ಇದು ಆತನ ಆಲೋಚನೆಯ ಸಂಬಂಧದಲ್ಲಿ ಹೆಚ್ಚಿನ ಅಂತರ್‌ದೃಷ್ಟಿಯನ್ನು ನಿಮಗೆ ಕೊಡುವುದು.

ಬೈಬಲಿನ ಘಟನೆಗಳು ನಡೆದ ಪ್ರದೇಶವನ್ನು ನೀವು ಮನಸ್ಸಿನಲ್ಲೇ ಚಿತ್ರಿಸಿಕೊಳ್ಳುವಾಗ, ಬೈಬಲ್‌ ಇತಿಹಾಸವು ನಿಮಗೆ ಹೆಚ್ಚು ಆಸಕ್ತಿಕರವಾಗಿ ಪರಿಣಮಿಸುವುದು. ಬೈಬಲ್‌ ದೇಶಗಳ ಭೂಪಟಗಳು, ಆ ಪ್ರದೇಶವು ಹೇಗಿತ್ತೆಂಬುದನ್ನೂ ಸ್ಥಳಗಳ ಮಧ್ಯೆ ಇರುವ ಅಂತರಗಳನ್ನೂ ತಿಳಿಸುತ್ತವೆ. ಉದಾಹರಣೆಗೆ, ಇಸ್ರಾಯೇಲ್ಯರು ಕೆಂಪು ಸಮುದ್ರವನ್ನು ಹೆಚ್ಚುಕಡಿಮೆ ಎಲ್ಲಿ ದಾಟಿದರು? ವಾಗ್ದಾನ ದೇಶದ ಗಾತ್ರವು ಎಷ್ಟಾಗಿತ್ತು? ಯೇಸು ತನ್ನ ಭೂಶುಶ್ರೂಷೆಯನ್ನು ನಡೆಸಿದಾಗ ಎಷ್ಟು ದೂರ ನಡೆದನು? ಪೌಲನು ತನ್ನ ಪ್ರತಿಯೊಂದು ಮಿಷನೆರಿ ಪ್ರಯಾಣದಲ್ಲಿ ಯಾವ ದೃಶ್ಯಗಳನ್ನು ನೋಡಿದನು? ಭೂಪಟಗಳೂ ಭೌಗೋಳಿಕ ವರ್ಣನೆಗಳೂ ನಮ್ಮ ವಾಚನವನ್ನು ಸಜೀವಗೊಳಿಸುವಂಥ ವಿವರಣೆಗಳನ್ನು ತಿಳಿಯಪಡಿಸುತ್ತವೆ. ಬೈಬಲ್‌ ದೇಶಗಳ ಭೂಪಟಗಳನ್ನು ನೀವು ಎಲ್ಲಿ ಕಂಡುಕೊಳ್ಳುವಿರಿ? ಇವುಗಳಲ್ಲಿ ಕೆಲವು ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ (ಇಂಗ್ಲಿಷ್‌) ಬೈಬಲಿನಲ್ಲಿ ಕಂಡುಬರುತ್ತವೆ. ಒಳನೋಟ (ಇಂಗ್ಲಿಷ್‌) ಪುಸ್ತಕದ ಸಂಪುಟಗಳಲ್ಲಿ ಸುಮಾರು 70 ಭೂಪಟಗಳಿದ್ದು, ಒಂದನೆಯ ಸಂಪುಟದ ಅಂತ್ಯಭಾಗದಲ್ಲಿ ಒಂದು ಮ್ಯಾಪ್‌ ಇಂಡೆಕ್ಸ್‌ ಕೂಡ ಇದೆ. ಬೇರೆ ಭೂಪಟಗಳನ್ನು ಕಂಡುಹಿಡಿಯಲು ವಾಚ್‌ ಟವರ್‌ ಪ್ರಕಾಶನಗಳ ವಿಷಯಸೂಚಿ (ಇಂಗ್ಲಿಷ್‌) ಅನ್ನು ಉಪಯೋಗಿಸಿರಿ. ಈ ಪುಸ್ತಕಗಳು ನಿಮಗೆ ಅರ್ಥವಾಗುವಂಥ ಒಂದು ಭಾಷೆಯಲ್ಲಿ ಲಭ್ಯವಿರದಿದ್ದಲ್ಲಿ, ನಿಮ್ಮ ಬೈಬಲ್‌ ವಾಚನದಲ್ಲಿ ನಿಮಗೆ ಸಹಾಯವಾಗುವಂತೆ, ಕಾವಲಿನಬುರುಜು ಪತ್ರಿಕೆಯಲ್ಲಿ ಪ್ರಕಾಶಿಸಲ್ಪಡುವ ಭೂಪಟಗಳನ್ನು ಉಪಯೋಗಿಸಿರಿ.

ಹೀಬ್ರು ಶಾಸ್ತ್ರಗಳಲ್ಲಿ ಅರಸನಾದ ದಾವೀದನು, “ದೇವರೇ, ನಿನ್ನ ಸಂಕಲ್ಪಗಳು ನನ್ನ ಎಣಿಕೆಯಲ್ಲಿ ಎಷ್ಟೋ ಗೌರವವಾಗಿವೆ; ಅವುಗಳ ಒಟ್ಟು ಅಸಂಖ್ಯವಾಗಿದೆ” ಎಂದು ಹೇಳಿ ಯೆಹೋವನನ್ನು ಶ್ಲಾಘಿಸಿದನು. (ಕೀರ್ತ. 139:17) ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಅಪೊಸ್ತಲ ಪೌಲನು ಯೆಹೋವನನ್ನು, “ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವಜ್ಞಾನವೆಂಬ ಪ್ರಕಾಶವು ಅನೇಕರಿಗೆ ಉಂಟಾಗುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು” ಎಂದು ಹೇಳಿ ಸ್ತುತಿಸಿದನು. (2 ಕೊರಿಂ. 4:6) ದಾವೀದ ಮತ್ತು ಪೌಲರ ಜೀವನಗಳ ಮಧ್ಯೆ ಶತಮಾನಗಳ ಅಂತರವಿದ್ದರೂ, ಅವರಿಬ್ಬರೂ ದೇವರ ವಾಕ್ಯದಲ್ಲಿ ಆನಂದಿಸಿದರು. ಹಾಗೆಯೇ, ತನ್ನ ಪ್ರೇರಿತ ವಾಕ್ಯದ ಪುಟಗಳಲ್ಲಿ ಯೆಹೋವನು ನಿಮಗೆ ಕೊಟ್ಟಿರುವ ಸರ್ವವನ್ನೂ ಓದಲು ಸಮಯವನ್ನು ತೆಗೆದುಕೊಳ್ಳುವಲ್ಲಿ, ನೀವು ಸಹ ದೇವರ ವಾಕ್ಯದಲ್ಲಿ ಆನಂದಿಸುವಿರಿ.

ದೈನಂದಿನ ಬೈಬಲ್‌ ವಾಚನದಲ್ಲಿ ಯಶಸ್ಸನ್ನು ಪಡೆಯಿರಿ

ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಕೊಡಲ್ಪಡುವ ಶಿಕ್ಷಣದಲ್ಲಿ ದೊಡ್ಡ ಭಾಗವು, ಬೈಬಲ್‌ ವಾಚನ ಕಾರ್ಯಕ್ರಮದ ಸುತ್ತಲೂ ಕೇಂದ್ರೀಕರಿಸಲ್ಪಟ್ಟಿದೆ. ಇದರಲ್ಲಿ ಭಾಗವಹಿಸುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ಪ್ರತಿ ವಾರ ವೈಯಕ್ತಿಕ ವಾಚನಕ್ಕಾಗಿ ಹಾಗೂ ಶಾಲಾ ಚರ್ಚೆಗಾಗಿ ಬೈಬಲಿನ ಒಂದು ಚಿಕ್ಕ ಭಾಗವನ್ನು ಶೆಡ್ಯೂಲ್‌ ಮಾಡಲಾಗಿದೆ. ಇದು ಪ್ರಗತಿಪರವಾಗಿ ನೀವು ಇಡೀ ಬೈಬಲನ್ನು ಓದಿ ಮುಗಿಸುವಂತೆ ಮಾಡುವುದು.

ದೈನಂದಿನ ಬೈಬಲ್‌ ವಾಚನವನ್ನು ನಿಮ್ಮ ಜೀವನದ ಭಾಗವಾಗಿ ಮಾಡಿಕೊಳ್ಳಲಿಕ್ಕಾಗಿ, ಅದಕ್ಕೊಂದು ಕ್ರಮಬದ್ಧವಾದ ಸಮಯವನ್ನು ಬದಿಗಿಡಿರಿ. ಅದು ಪ್ರಾಯಶಃ ಮುಂಜಾನೆಯೊ, ಮಧ್ಯಾಹ್ನವೊ, ರಾತ್ರಿಯೂಟದ ಸಮಯದಲ್ಲೊ ಇಲ್ಲವೆ ಮಲಗುವ ಮೊದಲೊ ಆಗಿರಬಲ್ಲದು. ನಿಮಗೆ ದಿನದಲ್ಲಿ ಯಾವಾಗ ಸಮಯ ಸಿಗುತ್ತದೊ ಆಗ ಮಾತ್ರ ಅದರ ಚಿಕ್ಕ ಚಿಕ್ಕ ಭಾಗಗಳನ್ನು ಓದುವಲ್ಲಿ ಕ್ರಮಬದ್ಧತೆಯಿರದು.

ನೀವು ಕುಟುಂಬದ ತಲೆಯಾಗಿರುವಲ್ಲಿ, ಕುಟುಂಬದ ಸದಸ್ಯರು ಒಳ್ಳೆಯ ನಿಯತಕ್ರಮವನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಲು ವೈಯಕ್ತಿಕ ಆಸಕ್ತಿಯನ್ನು ತೋರಿಸಿರಿ. ಕುಟುಂಬವಾಗಿ ಬೈಬಲನ್ನು ಓದುವುದರಿಂದ, ಕುಟುಂಬದ ಸದಸ್ಯರೂ ವೈಯಕ್ತಿಕವಾಗಿ ದೈನಂದಿನ ಬೈಬಲ್‌ ವಾಚನವನ್ನು ಮಾಡುವಂತೆ ಪ್ರೋತ್ಸಾಹಿಸಲ್ಪಡಬಹುದು.

ಬೈಬಲನ್ನು ಪ್ರತಿದಿನ ಓದಬೇಕಾದರೆ ಸ್ವಶಿಸ್ತು ಅಗತ್ಯ. ಅದನ್ನು ಮಾಡುವ ಅಪೇಕ್ಷೆಯೊಂದಿಗೆ ನೀವು ಹುಟ್ಟುವುದಿಲ್ಲ. ಇದಕ್ಕಾಗಿ ನೀವು ದೇವರ ವಾಕ್ಯಕ್ಕಾಗಿ “ಹಂಬಲವನ್ನು ಬೆಳೆಸಿಕೊಳ್ಳುವ” ಅಗತ್ಯವಿದೆ. (1 ಪೇತ್ರ 2:2, NW) ಆ ರೂಢಿಯನ್ನು ನೀವು ಬೆಳೆಸಿಕೊಳ್ಳುವಾಗ, ನಿಮ್ಮ ಆತ್ಮಿಕ ಹಸಿವೆಯು ಹೆಚ್ಚುವುದು. ಬಳಿಕ, ಯೆಹೋವನು ನಮಗೆ ಲಭ್ಯಗೊಳಿಸಿರುವ ಆತ್ಮಿಕ ಐಶ್ವರ್ಯಗಳ ತಿಳಿವಳಿಕೆ ಮತ್ತು ಗಣ್ಯತೆಯನ್ನು ಆಳಗೊಳಿಸಲಿಕ್ಕಾಗಿ, ಬೈಬಲ್‌ ವಾಚನ ಮತ್ತು ಅಧ್ಯಯನದ ವಿಶೇಷ ಯೋಜನೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ಅಧ್ಯಯನ ಕ್ಷೇತ್ರವನ್ನು ವಿಸ್ತರಿಸಬೇಕು ಎಂಬ ಬಯಕೆಯು ನಿಮ್ಮಲ್ಲಿ ಹುಟ್ಟುತ್ತದೆ ಎಂಬುದನ್ನು ನೀವು ಕಂಡುಕೊಳ್ಳುವಿರಿ.

ನೀವು ಬೈಬಲನ್ನು ಓದುವಾಗ, ನೀವು ಓದಿದಂಥ ವಿಷಯಗಳ ಅರ್ಥದ ಕುರಿತು, ಅಂದರೆ ಅದು ಯೆಹೋವನ ಕುರಿತು ನಿಮಗೆ ಏನನ್ನು ತಿಳಿಸುತ್ತದೆ, ಅದು ನಿಮ್ಮ ಜೀವನವನ್ನು ಹೇಗೆ ಪ್ರಯೋಜನಕರವಾಗಿ ಪ್ರಭಾವಿಸಬಲ್ಲದು ಮತ್ತು ನೀವು ಅದನ್ನು ಇತರರ ಸಹಾಯಾರ್ಥವಾಗಿ ಹೇಗೆ ಉಪಯೋಗಿಸಬಲ್ಲಿರಿ ಎಂಬುದರ ಕುರಿತು ಯೋಚಿಸಲು ಸಮಯವನ್ನು ತೆಗೆದುಕೊಳ್ಳಿರಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ