ದೇವರ ಸರ್ಕಾರದ ಆಳ್ವಿಕೆ ಭೂಮಿಗೆ ಯಾವಾಗ ಬರುತ್ತೆ?
ದೇವರ ಸರ್ಕಾರ ಭೂಮಿನಾ ಯಾವಾಗ ಆಳೋಕೆ ಶುರುಮಾಡುತ್ತೆ ಅಂತ ಕೆಲವು ಹಿಂಬಾಲಕರು ಯೇಸುನಾ ಕೇಳಿದ್ರು. ಯೇಸು ಅದರ ನಿರ್ದಿಷ್ಟ ಸಮಯದ ಬಗ್ಗೆ ತಿಳಿಸಲಿಲ್ಲ. (ಅಪೊಸ್ತಲರ ಕಾರ್ಯಗಳು 1:6, 7) ಬದಲಿಗೆ ಭೂಮಿಯಲ್ಲಿ ಕೆಲವು ಘಟನೆಗಳು ನಡೆಯೋದನ್ನು ನೋಡುವಾಗ “ದೇವರ ರಾಜ್ಯವು ಹತ್ತಿರದಲ್ಲಿದೆ” ಅನ್ನೋದನ್ನ ತಿಳುಕೊಳ್ಳಬಹುದು ಅಂತ ಹೇಳಿದ.—ಲೂಕ 21:31.
ಯೇಸು ತಿಳಿಸಿದ ಘಟನೆಗಳು
ಒಬ್ಬ ವ್ಯಕ್ತಿನಾ ಗುರುತಿಸೋಕೆ ಬೆರಳಚ್ಚು (fingerprint) ಸಹಾಯ ಮಾಡುತ್ತೆ. ಈ ಬೆರಳಚ್ಚಿನ ತರ ದೇವರ ಸರ್ಕಾರದ ಆಳ್ವಿಕೆ ಭೂಮಿಗೆ ಯಾವಾಗ ಬರುತ್ತೆ ಅಂತ ತಿಳುಕೊಳ್ಳೋಕೆ ಯೇಸು ಒಂದು “ಗುರುತು” ಕೊಟ್ಟಿದ್ದಾನೆ. ಹೇಗೆ ಹಲವು ರೇಖೆಗಳು ಸೇರಿ ಒಂದು ಬೆರಳಚ್ಚು ಆಗುತ್ತೋ ಹಾಗೇ ಯೇಸು ಹೇಳಿದ ಮುಂದಿನ ಘಟನೆಗಳು ದೇವರ ಆಳ್ವಿಕೆ ಭೂಮಿಗೆ ಬರುವ ಗುರುತಾಗಿದೆ. “ಜನಾಂಗಕ್ಕೆ ವಿರುದ್ಧವಾಗಿ ಜನಾಂಗವೂ ರಾಜ್ಯಕ್ಕೆ ವಿರುದ್ಧವಾಗಿ ರಾಜ್ಯವೂ ಏಳುವವು; ಮಹಾ ಭೂಕಂಪಗಳಾಗುವವು; ಒಂದರ ನಂತರ ಇನ್ನೊಂದು ಸ್ಥಳದಲ್ಲಿ ಅಂಟುರೋಗಗಳೂ ಆಹಾರದ ಕೊರತೆಗಳೂ ಇರುವವು.” (ಲೂಕ 21:10, 11) ಈ ಘಟನೆಗಳು ಇಸವಿ 1914 ರಿಂದ ಲೋಕದ ಎಲ್ಲಾ ಕಡೆ ಜಾಸ್ತಿ ಆದವು. ಅದಕ್ಕೆ ಕೆಲವು ಆಧಾರಗಳನ್ನು ನೋಡೋಣ.
1. ಯುದ್ಧ
1914ನ್ನ ಇತಿಹಾಸನೇ ಬದಲಾಯಿಸಿದ ಇಸವಿ ಅಂತ ಕೆಲವು ಇತಿಹಾಸಗಾರರು ಕರೀತಾರೆ. ಯಾಕಂದ್ರೆ ಒಂದನೇ ಮಹಾಯುದ್ಧ ಶುರು ಆಗಿದ್ದು 1914 ರಲ್ಲೇ. ಇಂಥ ದೊಡ್ಡ ಯುದ್ಧ ಇತಿಹಾಸದಲ್ಲಿ ಯಾವತ್ತೂ ಆಗಿರಲಿಲ್ಲ. ಆ ಯುದ್ಧದಲ್ಲಿ ಟ್ಯಾಂಕರ್, ಯುದ್ಧ ವಿಮಾನ, ಬಾಂಬ್, ಮಶೀನ್ ಗನ್, ವಿಷಕಾರಿ ಅನಿಲ ಮತ್ತು ಇನ್ನು ಕೆಲವು ಅಪಾಯಕಾರಿ ಶಸ್ತ್ರಗಳನ್ನ ಮೊಟ್ಟಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲಾಯಿತು. ಇದರ ಹಿಂದೆನೇ ಎರಡನೇ ಮಹಾಯುದ್ಧನೂ ಶುರು ಆಯಿತು. ಅದರಲ್ಲಿ ಅಣು ಬಾಂಬ್ಗಳನ್ನೂ ಬಳಸಿದ್ರು. ಈ ಯುದ್ಧಗಳಿಂದ ಲಕ್ಷಾಂತರ ಜನರ ಪ್ರಾಣ ಹೋಯ್ತು. 1914 ರಿಂದ ಇಂದಿನವರೆಗೂ ಒಂದಲ್ಲ ಒಂದು ಕಡೆ ಯುದ್ಧಗಳು ನಡಿತಾನೇ ಇವೆ ಮತ್ತು ಪ್ರತಿ ವರ್ಷ ಸಾವಿರಾರು ಜನ ಸಾಯ್ತಾನೇ ಇದ್ದಾರೆ.
2. ಭೂಕಂಪ
ಪ್ರತಿ ವರ್ಷ “ಬೃಹತ್ ಪ್ರಮಾಣದ ಹಾನಿ” ಉಂಟುಮಾಡುವ ಸುಮಾರು ನೂರರಷ್ಟು ಭೂಕಂಪಗಳು ಆಗುತ್ತೆ ಅಂತ ಬ್ರಿಟಾನಿಕಾ ಅಕಾಡೆಮಿಕ್ ಪುಸ್ತಕ ಹೇಳುತ್ತೆ. “ಇಸವಿ 1900 ರಿಂದ ವರದಿಗಳನ್ನು ನೋಡೋದಾದ್ರೆ ಪ್ರತಿವರ್ಷ ಸುಮಾರು 16 ದೊಡ್ಡ ಭೂಕಂಪಗಳು ಆಗಿದೆ” ಅಂತ ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆಯ ವರದಿ ತಿಳಿಸುತ್ತೆ. ಭೂಕಂಪಗಳು ಮೊದಲಿದ್ದಷ್ಟೇ ಇದೆ ಆದ್ರೆ ಇದನ್ನು ಕಂಡುಹಿಡಿಯಲು ಹೊಸ-ಹೊಸ ವಿಧಾನಗಳು ಬಂದಿರೋದ್ರಿಂದ ಭೂಕಂಪಗಳು ಜಾಸ್ತಿ ಅನಿಸ್ತಿದೆ ಅಷ್ಟೇ ಅಂತ ಕೆಲವರು ನೆನೆಸುತ್ತಾರೆ. ಆದ್ರೆ ನಿಜ ಏನಂದ್ರೆ 1914 ರಿಂದ ಭೂಕಂಪಗಳಿಂದ ಆಗುತ್ತಿರೋ ಕಷ್ಟ ಮತ್ತು ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗ್ತಾನೆ ಇದೆ.
3. ಆಹಾರದ ಕೊರತೆ
ಯುದ್ಧ, ಭ್ರಷ್ಟಾಚಾರ, ಆರ್ಥಿಕ ಸಮಸ್ಯೆ, ಮತ್ತು ಬೆಳೆ ಹಾಳಾಗೋದ್ರಿಂದ ಆಹಾರದ ಕೊರತೆ ಜಾಸ್ತಿ ಆಗುತ್ತಿದೆ. ದ ವರ್ಲ್ಡ್ ಫುಡ್ ಪ್ರೋಗ್ರಾಮ್ನ “2018 ರ ಮರು ಪರಿಶೀಲನೆ” ಪ್ರಕಾರ “ಇಡೀ ಲೋಕದಲ್ಲಿ 82 ಕೋಟಿ 10 ಲಕ್ಷ ಜನರಿಗೆ ಹೊಟ್ಟೆ ತುಂಬ ಊಟ ಇಲ್ಲದೆ ಹೋದರೆ ಇನ್ನೂ 12 ಕೋಟಿ 40 ಲಕ್ಷದಷ್ಟು ಜನರಿಗೆ ಊಟಾನೇ ಸಿಗುತ್ತಾ ಇಲ್ಲ.” ಪೌಷ್ಟಿಕ ಆಹಾರ ಸಿಗದೇ ಇರೋದ್ರಿಂದ ಪ್ರತಿವರ್ಷ ಸುಮಾರು 31 ಲಕ್ಷದಷ್ಟು ಮಕ್ಕಳು ಸಾಯುತ್ತಿದ್ದಾರೆ. ಅಂದ್ರೆ ಪ್ರತಿವರ್ಷ ಸಾಯೋ ಮಕ್ಕಳಲ್ಲಿ ಅರ್ಧದಷ್ಟು ಮಕ್ಕಳು ಆಹಾರದ ಕೊರತೆಯಿಂದಲೇ ಸಾಯುತ್ತಿದ್ದಾರೆ.
4. ಕಾಯಿಲೆ ಮತ್ತು ಅಂಟುರೋಗ
“2001 ರಿಂದ ಹೊಸ ಹೊಸ ಅಂಟುರೋಗಗಳು ಹುಟ್ಟುತ್ತಾ ಇವೆ. ಒಂದು ಕಡೆ ಕಾಲರಾ, ಪ್ಲೇಗ್ ಮತ್ತು ಎಲ್ಲೊ ಫೀವರ್ಗಳಂಥ ರೋಗಗಳು ಮತ್ತೆ ಬರುತ್ತಾ ಇದ್ದರೆ ಇನ್ನೊಂದು ಕಡೆ ಸಾರ್ಸ್ (SARS), ಎಚ್1ಎನ್1, ಮರ್ಸ್ (MERS), ಎಬೋಲಾ ಮತ್ತು ಝೀಕಗಳಂಥ ಹೊಸ ಹೊಸ ಕಾಯಿಲೆಗಳು ಹುಟ್ಟುತ್ತಾ ಇವೆ” ಅಂತ ವಿಶ್ವ ಆರೋಗ್ಯ ಸಂಸ್ಥೆಯ ಒಂದು ಪತ್ರಿಕೆ ಹೇಳುತ್ತೆ. ಅದರಲ್ಲೂ ಕೋವಿಡ್-19 ಅಂಟುರೋಗ ಇತ್ತೀಚಿಗೆ ರಾರಾಜಿಸ್ತು. ವಿಜ್ಞಾನ ಎಷ್ಟೇ ಮುಂದುವರಿದ್ರೂ ಎಲ್ಲಾ ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯೋದು ಒಂದು ಕನಸಾಗೇ ಉಳಿದಿದೆ.
5. ಲೋಕದ ಎಲ್ಲಾ ಕಡೆ ಸಾರುವ ಕೆಲಸ
ಲೋಕದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ರೂ ಯೇಸು ಹೇಳಿದ ಇನ್ನೊಂದು ಒಳ್ಳೇ ಘಟನೆನೂ ನಡೀತಿದೆ. ಯೇಸು ಹೇಳಿದ್ದು “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” (ಮತ್ತಾಯ 24:14) ಬೇರೆ ಬೇರೆ ದೇಶಗಳಿಗೆ ಸೇರಿದ 80 ಲಕ್ಷಕ್ಕಿಂತ ಹೆಚ್ಚು ಜನರು ದೇವರ ಸರ್ಕಾರದ ಸಿಹಿಸುದ್ದಿಯನ್ನ ಸುಮಾರು 240 ದೇಶಗಳಲ್ಲಿ ಸಾವಿರಾರು ಭಾಷೆಗಳಲ್ಲಿ ಸಾರುತ್ತಿದ್ದಾರೆ. ಮಾನವ ಇತಿಹಾಸದಲ್ಲೇ ಇದೊಂದು ದೊಡ್ಡ ಮೈಲಿಗಲ್ಲು.
ಯೇಸು ಹೇಳಿದ ಘಟನೆಗಳಿಂದ ಏನು ಗೊತ್ತಾಗುತ್ತೆ?
ಯೇಸು ಹೇಳಿದ ಘಟನೆಗಳು ಇವತ್ತು ನಮ್ಮ ಕಣ್ಣು ಮುಂದೆ ನಡಿತಾ ಇರೋದ್ರಲ್ಲಿ ಎರಡು ಮಾತಿಲ್ಲ. ಇದ್ರಿಂದ ನಮಗೇನು ಗೊತ್ತಾಗುತ್ತೆ? ಯೇಸು ಹೇಳಿದ ಹಾಗೆ “ಈ ಸಂಗತಿಗಳು ಸಂಭವಿಸುತ್ತಿರುವುದನ್ನು . . . ನೋಡುವಾಗ ದೇವರ ರಾಜ್ಯವು ಹತ್ತಿರದಲ್ಲಿದೆ” ಅಂತ ಗೊತ್ತಾಗುತ್ತೆ.—ಲೂಕ 21:31.
ಬಲುಬೇಗನೆ ದೇವರ ಸರ್ಕಾರ ಭೂಮಿನಾ ದೇವರ ಇಷ್ಟದಂತೆ ಮಾರ್ಪಡಿಸುತ್ತೆ
ಯೇಸು ಕೊಟ್ಟ ಗುರುತು ಮತ್ತು ಬೈಬಲ್ನಲ್ಲಿ ಇರೋ ವಿವರಗಳನ್ನು ನೋಡಿದ್ರೆ 1914 ರಲ್ಲಿ ದೇವರು ತನ್ನ ಸರ್ಕಾರನಾ ಸ್ವರ್ಗದಲ್ಲಿ ಸ್ಥಾಪಿಸಿದನು ಅಂತ ಗೊತ್ತಾಗುತ್ತೆ.a ಅದಕ್ಕೆ ನಾಯಕನಾಗಿ ತನ್ನ ಮಗ ಯೇಸು ಕ್ರಿಸ್ತನನ್ನು ನೇಮಿಸಿದ್ದಾನೆ. (ಕೀರ್ತನೆ 2:2, 4-9) ದೇವರ ಸರ್ಕಾರ ಭೂಮಿಯನ್ನು ಆಳಲು ಶುರುಮಾಡಿದಾಗ ಎಲ್ಲಾ ಮಾನವ ಸರ್ಕಾರಗಳನ್ನ ತೆಗೆದುಹಾಕುತ್ತೆ. ಅಷ್ಟೇ ಅಲ್ಲ ದೇವರ ಇಷ್ಟದಂತೆ ಈ ಭೂಮಿಯನ್ನು ಸುಂದರ ತೋಟದಂತೆ ಮಾಡಿ ಮಾನವರು ಅದರಲ್ಲಿ ಶಾಶ್ವತವಾಗಿ ಜೀವಿಸುವಂತೆ ಮಾಡುತ್ತೆ.
“ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ” ಎಂಬ ಲಕ್ಷಾಂತರ ಜನರ ಪ್ರಾರ್ಥನೆಗೆ ಬಲುಬೇಗನೆ ಉತ್ತರ ಸಿಗಲಿಕ್ಕಿದೆ. (ಮತ್ತಾಯ 6:10) 1914 ರಲ್ಲಿ ಸ್ಥಾಪಿತವಾದ ದೇವರ ಸರ್ಕಾರ ಏನೆಲ್ಲಾ ಮಾಡಿದೆ? ಆ ಸರ್ಕಾರ ಭೂಮಿನಾ ಆಳುವಾಗ ಜೀವನ ಹೇಗಿರುತ್ತೆ? ನೋಡೋಣ.
a 1914 ರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದಲ್ಲಿ ಪಾಠ 32 ನೋಡಿ. ಈ ಪುಸ್ತಕ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.