ಸಲಹೆ 5 ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ಪ್ರೇರೇಪಿಸಿ
“ಪ್ರತಿಯೊಬ್ಬ ಜಾಣನು ತನ್ನ ಕೆಲಸವನ್ನು ತಿಳುವಳಿಕೆಯಿಂದ ನಡಿಸುವನು.” (ಜ್ಞಾನೋಕ್ತಿ 13:16) ಆರೋಗ್ಯದ ಬಗ್ಗೆ ನಿಮಗೆ ಮೂಲಭೂತ ಮಾಹಿತಿ ಇರುವುದು, ನಿಮ್ಮ ಹಾಗೂ ನಿಮ್ಮ ಕುಟುಂಬದ ಆರೋಗ್ಯವನ್ನು ಉತ್ತಮಗೊಳಿಸಲು ಬೇಕಾದ ಹೊಂದಾಣಿಕೆಗಳನ್ನು ಮಾಡಲು ನಿಮ್ಮನ್ನು ಸನ್ನದ್ಧಗೊಳಿಸುವುದು, ಪ್ರೇರಿಸುವುದು ಸಹ.
❍ ಕಲಿಯುತ್ತಾ ಇರಿ. ಅನೇಕ ದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ಆರೋಗ್ಯಕ್ಕೆ ಸಂಬಂಧಪಟ್ಟ ವಿವಿಧ ವಿಷಯಗಳ ಬಗ್ಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಾಹಿತ್ಯವನ್ನೂ ವಿತರಿಸುತ್ತವೆ. ಇವುಗಳ ಸದುಪಯೋಗ ಮಾಡಿ. ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸಲು ಹಾಗೂ ಅದನ್ನು ಅಪಾಯಕ್ಕೀಡು ಮಾಡದಿರಲು ಇರುವ ಸರಳ ಮಾರ್ಗಗಳ ಕುರಿತು ಕಲಿಯಿರಿ. ಮುಕ್ತ ಮನಸ್ಸಿನವರಾಗಿದ್ದು, ಅಗತ್ಯ ಹೊಂದಾಣಿಕೆಗಳನ್ನು ಮಾಡಲು ಸಿದ್ಧರಾಗಿರಿ.
ನೀವು ಕಲಿಯುವ, ರೂಢಿಸಿಕೊಳ್ಳುವ ಒಳ್ಳೇ ಅಭ್ಯಾಸಗಳು ನಿಮ್ಮ ಮಕ್ಕಳಿಗೂ ಮುಂದೆ ಅವರ ಮಕ್ಕಳಿಗೂ ಪ್ರಯೋಜನ ತರುವವು. ಪೌಷ್ಟಿಕ ಆಹಾರ, ಸ್ವಚ್ಛತೆ, ನಿದ್ರೆ, ವ್ಯಾಯಾಮ, ರೋಗ ತಡೆಗಟ್ಟುವಿಕೆಯ ವಿಷಯದಲ್ಲಿ ಹೆತ್ತವರು ಒಳ್ಳೇ ಮಾದರಿ ಇಡುವಾಗ ಮಕ್ಕಳಿಗೆ ಪ್ರಯೋಜನವಾಗುವುದು.—ಜ್ಞಾನೋಕ್ತಿ 22:6.
❍ ಇನ್ನೇನು ಅಗತ್ಯ? ಆರೋಗ್ಯಕರ ಜೀವನಶೈಲಿಯನ್ನು ಆರಂಭಿಸಿ ಕಾಪಾಡಿಕೊಳ್ಳಲು ಸ್ವಹಿತಚಿಂತನೆಗಿಂತ ಹೆಚ್ಚಿನದ್ದು ಬೇಕು. ದೀರ್ಘಕಾಲದಿಂದ ಇರುವ ದುಶ್ಚಟಗಳನ್ನು ನಿಲ್ಲಿಸುವುದು ತುಂಬ ಕಷ್ಟ ಎನಿಸಬಹುದಲ್ಲದೆ ಸುಲಭ ಹೊಂದಾಣಿಕೆಗಳನ್ನು ಮಾಡಲಿಕ್ಕಾಗಿಯೂ ಬಲವಾದ ಪ್ರೇರೇಪಣೆ ಅವಶ್ಯವಾದೀತು. ಗಂಭೀರ ಕಾಯಿಲೆ ಹಾಗೂ ಮರಣದ ಅಪಾಯವಿದ್ದರೂ ಕೆಲವರು ತಮಗೆ ಒಳ್ಳೇದೆಂದು ಗೊತ್ತಿರುವ ವಿಷಯಗಳನ್ನೂ ಮಾಡದಿರಬಹುದು. ಅದನ್ನು ಮಾಡಲು ಅವರಿಗೆ ಯಾವುದು ಪ್ರೇರಿಸುವುದು? ನಮ್ಮೆಲ್ಲರಂತೆ ಅಂಥವರೂ ತಮ್ಮ ಜೀವನಕ್ಕಿರುವ ಹೆಚ್ಚು ಉನ್ನತವಾದ ಉದ್ದೇಶ ಇಲ್ಲವೆ ಗುರಿಯನ್ನು ಮನಸ್ಸಿನಲ್ಲಿಡತಕ್ಕದು.
ಆರೋಗ್ಯವಂತರೂ ಸುದೃಢರೂ ಆಗಿದ್ದರೆ ಮಾತ್ರ ವಿವಾಹಸಂಗಾತಿಗಳು ಪರಸ್ಪರರಿಗೆ ನೆರವಾಗುವುದನ್ನು ಮುಂದುವರಿಸಬಹುದು, ಹೆತ್ತವರು ತಮ್ಮ ಮಕ್ಕಳಿಗೆ ಆಸರೆಯನ್ನೂ ತರಬೇತಿಯನ್ನೂ ಕೊಡುತ್ತಾ ಇರಬಹುದು, ಬೆಳೆದಿರುವ ಮಕ್ಕಳು ವೃದ್ಧ ಸಂಬಂಧಿಕರನ್ನು ನೋಡಿಕೊಳ್ಳಲು ಶಕ್ತರಾಗಬಹುದು. ಇದಕ್ಕೆ ಕೂಡಿಸಿ ಸಮಾಜಕ್ಕೆ ಭಾರವಾಗಿರುವ ಬದಲು ವರವಾಗಿರಬೇಕೆಂಬ ಉದಾತ್ತ ಅಪೇಕ್ಷೆಯೂ ಇರಬೇಕು. ಇವೆಲ್ಲದಕ್ಕೂ ಬೇರೆಯವರ ಕಡೆಗೆ ನಮ್ಮಲ್ಲಿ ಪ್ರೀತಿಕಳಕಳಿ ಇರಬೇಕು.
ಆರೋಗ್ಯವನ್ನು ಕಾಪಾಡಿಕೊಳ್ಳಲು ಇನ್ನೂ ಹೆಚ್ಚು ಬಲವಾದ ಪ್ರೇರೇಪಣೆ ಸಿಗುವುದು ನಮ್ಮ ನಿರ್ಮಾಣಿಕನ ಕಡೆಗಿನ ಕೃತಜ್ಞತಾಭಾವ ಹಾಗೂ ಭಕ್ತಿಯಿಂದ. ದೇವರನ್ನು ನಂಬುವವರು ಆತನು ಕೊಟ್ಟಿರುವ ಜೀವವೆಂಬ ಅಮೂಲ್ಯ ವರದಾನವನ್ನು ಕಾಪಾಡಲು ಬಯಸುತ್ತಾರೆ. (ಕೀರ್ತನೆ 36:9) ನಾವು ಆರೋಗ್ಯವಂತರಾಗಿದ್ದರೆ ಹೆಚ್ಚು ಸಕ್ರಿಯವಾಗಿ ದೇವರ ಸೇವೆಮಾಡಬಲ್ಲೆವು. ನಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಲು ಇದಕ್ಕಿಂತ ಹೆಚ್ಚು ಉನ್ನತವಾದ ಇಲ್ಲವೆ ಬಲವಾದ ಪ್ರೇರೇಪಣೆ ಬೇಕೇ? (g11-E 03)
[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]
ಆರೋಗ್ಯಕರ ಜೀವನಶೈಲಿಯ ಪ್ರಯೋಜನಗಳನ್ನು ಆನಂದಿಸಿರಿ