ಬೈಬಲಿನ ದೃಷ್ಟಿಕೋನ
ಪರದೈಸ್
ಏನಿದು ಪರದೈಸ್!?
ಜನರು ಏನು ಹೇಳುತ್ತಾರೆ? ಕೆಲವು ಜನರ ಪ್ರಕಾರ ಪರದೈಸ್ ಅನ್ನೋದು ಉದ್ಯಾನದಂಥ ಪರಿಸ್ಥಿತಿ. ಜನರು ದುಃಖ ನೋವಿಲ್ಲದೆ ಸುಖವಾಗಿ ಶಾಶ್ವತ ಬಾಳುತ್ತಾರೆ. ಕೈತುಂಬ ಕೆಲಸ ಇರುತ್ತೆ ಸಂತೃಪ್ತಿ ಇರುತ್ತೆ ಅನ್ನುತ್ತಾರೆ. ಆದರೆ ಇನ್ನು ಕೆಲವರು ನೆನಸುತ್ತಾರೆ ಪರದೈಸ್ ಅನ್ನೋದೆಲ್ಲ ಸುಳ್ಳು ಬರೀ ಕಟ್ಟು ಕಥೆ ಅಂತ.
ಬೈಬಲ್ ಏನು ಹೇಳುತ್ತೆ? ದೇವರು ಮನುಷ್ಯರನ್ನು ಸೃಷ್ಟಿಸಿ ಅವರನ್ನು ಇರಿಸಿದ ಸ್ಥಳವನ್ನು “ಪರದೈಸ್” ಎಂದು ಹೇಳಲಾಗುತ್ತೆ. (ಆದಿಕಾಂಡ 2:7-15) ಆ ತೋಟ ನಿಜವಾಗ್ಲೂ ಇತ್ತು ಅಂತ ಬೈಬಲ್ ಹೇಳುತ್ತೆ. ದೇವರು ಸೃಷ್ಟಿಸಿದ ಆ ಮನುಷ್ಯರು ಆ ತೋಟದಲ್ಲಿ ಜೀವಿಸುವವರೆಗೂ ಕಾಯಿಲೆ ಮರಣ ಅನ್ನೋದು ಅವರ ಹತ್ತಿರ ಸುಳಿದಿರಲಿಲ್ಲ. (ಆದಿಕಾಂಡ 1:27, 28) ಆ ದಂಪತಿ ದೇವರ ಮಾತನ್ನು ಕೇಳದೇ ಹೋದದ್ದರಿಂದ ಆ ಪರದೈಸ್ ಬೀಡನ್ನು ಕಳಕೊಂಡರು. ಆದರೆ ಇಡೀ ಭೂಮಿ ಆ ಪರದೈಸ್ ತರ ಮಾರ್ಪಡಲಿದೆ ಮತ್ತು ಮಾನವರು ಅದರಲ್ಲಿ ಶಾಶ್ವತವಾಗಿ ಬದುಕಿ ಬಾಳುವರೆಂದು ಬೈಬಲ್ ಭವಿಷ್ಯ ನುಡಿಯುತ್ತೆ.
ಇದು ನಿಮಗೆ ಮಹತ್ವದ್ದೇಕೆ? ದೇವರಿಗೆ ತನ್ನ ಭಕ್ತರ ಮೇಲೆ ಅಪಾರ ಪ್ರೀತಿಯಿದೆ. ಅಂಥ ದೇವರು ತನ್ನ ಭಕ್ತರಿಗೆ ಪರದೈಸ್‌ನಲ್ಲಿ ಸುಖನೆಮ್ಮದಿಯಿಂದ ಶಾಶ್ವತ ಬದುಕುವ ಆಶೀರ್ವಾದವನ್ನು ಕೊಟ್ಟೇ ಕೊಡುತ್ತಾನೆ. ಆ ಆಶೀರ್ವಾದವನ್ನು ಪಡೆಯಲು ಏನು ಮಾಡಬೇಕು ಅಂತ ಕೂಡ ತಿಳಿಸುತ್ತಾನೆ. ತಿಳಿಸಿದ್ದಾನೆ ಸಹ. ದೇವಜ್ಞಾನ ಪಡೆದುಕೊಂಡು ಆತನು ಹೇಳುವುದನ್ನೆಲ್ಲ ಜೀವನದಲ್ಲಿ ಅಳವಡಿಸಿಕೊಂಡರೆ ದೇವರ ಅನುಗ್ರಹ ಪಡೆಯಬಹುದು ಅಂತ ಬೈಬಲ್ ತಿಳಿಸುತ್ತೆ.—ಯೋಹಾನ 17:3; 1 ಯೋಹಾನ 5:3.
“ಯೆಹೋವ ದೇವರು . . . ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದನು.”—ಆದಿಕಾಂಡ 2:8.
ಪರದೈಸ್ ಎಲ್ಲಿದೆ?
“ದೇವರ ಗುಡಾರವು ಮಾನವಕುಲದೊಂದಿಗೆ ಇದೆ . . . ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ.”—ಪ್ರಕಟನೆ 21:3, 4.
ಜನರು ಏನು ಹೇಳುತ್ತಾರೆ? ಪರದೈಸ್ ಸ್ವರ್ಗದಲ್ಲಿದೆ ಅನ್ನೋದು ಕೆಲವರ ನಂಬಿಕೆ. ಇಲ್ಲ ಪರದೈಸ್ ಭವಿಷ್ಯದಲ್ಲಿ ಭೂಮಿಯ ಮೇಲೆ ಸ್ಥಾಪಿಸಲ್ಪಡಲಿದೆ ಅನ್ನೋದು ಇನ್ನು ಕೆಲವರ ವಾದ.
ಬೈಬಲ್ ಏನು ಹೇಳುತ್ತೆ? ದೇವರು ಮನುಷ್ಯರಿಗೋಸ್ಕರ ಪರದೈಸ್ ಅನ್ನು ಸೃಷ್ಟಿಸಿದ್ದೇ ಭೂಮಿ ಮೇಲೆ. ಭೂಮಿಯೇ ಮಾನವರ ಶಾಶ್ವತ ನೆಲೆ ಅಂತ ದೇವರು ನಿರ್ಣಯಿಸಿದ್ದನು. ಅನಂತ ಕಾಲ ಬಾಳಿಕೆ ಬರುವಂತೆ ದೇವರು ನಮ್ಮ ಈ ಭೂಗ್ರಹವನ್ನು ನಿರ್ಮಿಸಿದ್ದಾನೆಂದು ಬೈಬಲ್ ಹೇಳುತ್ತೆ. (ಕೀರ್ತನೆ 104:5) “ಪರಲೋಕವು ಯೆಹೋವನದು; ಭೂಲೋಕವನ್ನು ನರಸಂತಾನಕ್ಕೆ ಕೊಟ್ಟಿದ್ದಾನೆ” ಎನ್ನುತ್ತೆ ಬೈಬಲ್.—ಕೀರ್ತನೆ 115:16.
ಪರದೈಸ್ ಭೂಮಿ ಮೇಲೇ ಬರುತ್ತೆ ಅಂತ ಬೈಬಲ್ ಯಾಕೆ ಹೇಳುತ್ತಿದೆ ಅಂತ ಇದರಿಂದ ಗೊತ್ತಾಗುತ್ತೆ. ಅಲ್ಲಿ ಸಾವೇ ಇಲ್ಲದ ಬದುಕನ್ನು ದೇವರು ಮನುಷ್ಯರಿಗೆ ಕರುಣಿಸುವನು. ಅಲ್ಲಿ ಶಾಂತಿ-ಸಮಾಧಾನಕ್ಕೆ ಕೊರತೆನೇ ಇರಲ್ಲ. ನೋವು ನರಳಾಟದ ಮಾತೇ ಇರಲ್ಲ. ಜನರೆಲ್ಲರೂ ಭೂಗ್ರಹದ ಸೊಬಗನ್ನು ಕ್ಷಣಕ್ಷಣಕ್ಕೂ ಆನಂದಿಸುತ್ತಿರುವರು.—ಯೆಶಾಯ 65:21-23.
ಪರದೈಸಲ್ಲಿ ಯಾರು ಜೀವಿಸುವರು?
“ನೀತಿವಂತರೋ [ಭೂಮಿಯನ್ನು] ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29.
ಜನರು ಏನು ಹೇಳುತ್ತಾರೆ? ಒಳ್ಳೆ ಜನರು ಮಾತ್ರ ಪರದೈಸಲ್ಲಿ ಜೀವಿಸುವರು ಅಂತ ಅನೇಕ ಧರ್ಮಗಳು ಬೋಧಿಸುತ್ತವೆ. ಆದರೆ ಈ “ಒಳ್ಳೇದು” ಅನ್ನೋದರಲ್ಲಿ ತುಂಬ ಗಲಿಬಿಲಿ ಇದೆ. ಕೇವಲ ಧಾರ್ಮಿಕ ಆಚರಣೆಗಳನ್ನು ಮಾಡುವವರು ಮತ್ತು ಪ್ರಾರ್ಥನೆಯನ್ನು ಕಂಠಪಾಠ ಮಾಡಿ ಇಡೀ ದಿನ ಅದನ್ನು ಜಪ ಮಾಡುವವರೇ ಒಳ್ಳೇಯವರು ಅನ್ನೋದು ಕೆಲವರ ಅಭಿಪ್ರಾಯ.
ಬೈಬಲ್ ಏನು ಹೇಳುತ್ತೆ? “ನೀತಿವಂತ” ಜನರು ಪರದೈಸಲ್ಲಿ ಜೀವಿಸುವರೆಂದು ಬೈಬಲ್ ಬೋಧಿಸುತ್ತೆ. ದೇವರು ಯಾರನ್ನು ನೀತಿವಂತರೆಂದು ಪರಿಗಣಿಸುತ್ತಾನೆ? ದೇವರ ಇಷ್ಟವನ್ನು ಮಾಡದೇ ಬರೀ ಧಾರ್ಮಿಕ ಆಚರಣೆಗಳನ್ನು ಮಾಡುತ್ತಿರುವವರನ್ನು ದೇವರು ಎಂದಿಗೂ ನೀತಿವಂತರೆಂದು ಪರಿಗಣಿಸುವುದಿಲ್ಲ. “[ಯೆಹೋವ ದೇವರು] ವಿಧೇಯತ್ವಕ್ಕೆ ಮೆಚ್ಚುವಷ್ಟು ಯಜ್ಞಹೋಮಗಳಿಗೆ ಮೆಚ್ಚುತ್ತಾನೋ? ಯಜ್ಞವನ್ನರ್ಪಿಸುವದಕ್ಕಿಂತ ಮಾತುಕೇಳುವದು ಉತ್ತಮವಾಗಿದೆ” ಅಂತ ಬೈಬಲ್ ಹೇಳುತ್ತೆ. (1 ಸಮುವೇಲ 15:22) ಸರಳವಾಗಿ ಹೇಳುವುದಾದರೆ, ಬೈಬಲಿನಲ್ಲಿ ಕೊಟ್ಟಿರುವ ದೇವರ ಆಜ್ಞೆಗಳನ್ನು ಪಾಲಿಸುವವರೇ ನೀತಿವಂತರು. ಇವರು ಮಾತ್ರ ಪರದೈಸಲ್ಲಿ ಅನಂತ ಕಾಲ ಜೀವಿಸುವರು.
ನೀವು ಏನು ಮಾಡಬೇಕು? ಬರೀ ಧಾರ್ಮಿಕ ಆಚರಣೆಗಳನ್ನು ಮಾಡುತ್ತಿದ್ದರೆ ದೇವರ ಆಜ್ಞೆಗಳನ್ನು ಪಾಲಿಸಿದಂತೆ ಆಗಲ್ಲ. ನಿಮ್ಮ ಪ್ರತಿಯೊಂದು ನಡೆನುಡಿ ದೇವರಿಗೆ ಒಂದೋ ಸಂತೋಷ ತರುತ್ತೆ ಇಲ್ಲವೇ ದುಃಖ ತರುತ್ತೆ. ನೀವು ದೇವರಿಗೆ ಸಂತೋಷ ತರುವ ರೀತಿಯಲ್ಲಿ ಹೇಗೆ ನಡೆದುಕೊಳ್ಳುವುದು ಅನ್ನುವುದನ್ನು ತಿಳಿದುಕೊಳ್ಳಲು ಬೈಬಲನ್ನು ಚೆನ್ನಾಗಿ ಓದಬೇಕು. ಆತನನ್ನು ಮೆಚ್ಚಿಸುವ ರೀತಿಯಲ್ಲಿ ನಡೆಯಲು ನಮ್ಮಿಂದ ಸಾಧ್ಯ. “ಆತನ ಆಜ್ಞೆಗಳು ಭಾರವಾದವುಗಳಲ್ಲ” ಅಂತ ಬೈಬಲ್ ಹೇಳುತ್ತೆ. (1 ಯೋಹಾನ 5:3) ದೇವರ ಮಾತನ್ನು ಪಾಲಿಸುವವರಿಗೆ ಪರದೈಸನ್ನು ಪ್ರವೇಶಿಸುವ ಆಶೀರ್ವಾದ ಕೊಡಲು ದೇವರು ತುದಿಗಾಲಲ್ಲಿ ನಿಂತಿದ್ದಾನೆ. ◼ (g13-E 01)
[ಪುಟ 14ರಲ್ಲಿರುವ ಚಿತ್ರ]