ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಬೈಬಲ್ ಸಹಾಯ ಮಾಡುತ್ತದಾ? ಬೈಬಲ್ ಹೇಳಿಕೆಗಳನ್ನು ಮತ್ತು ಕುಟುಂಬದಲ್ಲಿ ಶಾಂತಿ ಕಾಪಾಡಿಕೊಂಡ ಕೆಲವರ ಹೇಳಿಕೆಗಳನ್ನು ಮುಂದೆ ಕೊಡಲಾಗಿದೆ. ಅವೆರಡನ್ನೂ ಹೋಲಿಸಿ ನೋಡಿ. ಜಗಳವನ್ನು ತಡೆಯಲು, ಶಾಂತಿಯನ್ನು ಕಾಪಾಡಿಕೊಳ್ಳಲು, ಸಂಬಂಧಗಳು ಮುರಿಯದಂತೆ ನೋಡಿಕೊಳ್ಳಲು ಇವುಗಳಲ್ಲಿ ಯಾವ ಅಂಶ ನಿಮಗೆ ಸಹಾಯ ಮಾಡಬಹುದೆಂದು ಯೋಚಿಸಿ.
ಶಾಂತಿಯನ್ನು ಕಾಪಾಡಿಕೊಳ್ಳಲು ಬೈಬಲ್ ಸಲಹೆಗಳು
ಸಂಗಾತಿಗೆ ಪ್ರಾಮುಖ್ಯತೆ ಕೊಡಿ.
“ಕಲಹಶೀಲ ಮನೋಭಾವದಿಂದಾಗಲಿ ಒಣಹೆಮ್ಮೆಯಿಂದಾಗಲಿ ಯಾವುದನ್ನೂ ಮಾಡದೆ, ದೀನಮನಸ್ಸಿನಿಂದ ಇತರರನ್ನು ನಿಮಗಿಂತಲೂ ಶ್ರೇಷ್ಠರೆಂದು ಎಣಿಸಿರಿ. ನಿಮ್ಮ ಸ್ವಂತ ವಿಷಯಗಳಲ್ಲಿ ವೈಯಕ್ತಿಕ ಆಸಕ್ತಿಯನ್ನು ವಹಿಸುತ್ತಾ ಅದರ ಮೇಲೆಯೇ ದೃಷ್ಟಿಯನ್ನಿಟ್ಟಿರುವ ಬದಲಿಗೆ ಇತರರ ವಿಷಯಗಳಲ್ಲಿಯೂ ವೈಯಕ್ತಿಕ ಆಸಕ್ತಿಯನ್ನು ತೋರಿಸುವವರಾಗಿರಿ.”—ಫಿಲಿಪ್ಪಿ 2:3, 4.
“ಬೇರೆಲ್ಲರಿಗಿಂತಲೂ ನಮಗಿಂತಲೂ ನಮ್ಮ ಸಂಗಾತಿಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು ಒಳ್ಳೇದು.”—ಮದುವೆಯಾಗಿ 19 ವರ್ಷ, ಸಿ.ಪಿ.
ಮುಕ್ತ ಮನಸ್ಸಿನಿಂದ ಕಿವಿಗೊಡಿ.
“ಆಕ್ರಮಣಶೀಲರಾಗಿರದೆ ನ್ಯಾಯಸಮ್ಮತರೂ ಎಲ್ಲ ಮನುಷ್ಯರ ಕಡೆಗೆ ಪೂರ್ಣ ಸೌಮ್ಯಭಾವವನ್ನು ತೋರಿಸುವವರೂ ಆಗಿರುವಂತೆ ಅವರಿಗೆ ಜ್ಞಾಪಕಹುಟ್ಟಿಸುತ್ತಾ ಇರು.”—ತೀತ 3:1, 2.
“ನಾವು ಜಗಳ ಆಡೋ ಥರ ಉತ್ತರಿಸದಿದ್ದರೆ ಎಷ್ಟೋ ಸಮಸ್ಯೆಗಳನ್ನು ತಡೆಯಬಹುದು. ಮನಸ್ಸಿನಲ್ಲಿ ಮೊದಲೇ ಯಾವುದೇ ಅಭಿಪ್ರಾಯವನ್ನು ಇಟ್ಟುಕೊಳ್ಳದಿರುವುದು, ಸಂಗಾತಿಯ ಅಭಿಪ್ರಾಯವನ್ನು ಗೌರವದಿಂದ ಕೇಳಿಸಿಕೊಳ್ಳುವುದು ಎರಡೂ ಪ್ರಾಮುಖ್ಯ. ಸಂಗಾತಿ ಹೇಳುವ ವಿಷಯ ಇಷ್ಟವಾಗದಿದ್ದರೂ ಇದನ್ನು ಮಾಡಬೇಕು.”—ಮದುವೆಯಾಗಿ 20 ವರ್ಷ, ಪಿ.ಪಿ.
“ಜಗಳ ಸರ್ವೇ ಸಾಮಾನ್ಯ. ಆದರೆ ಅದರ ಪರಿಣಾಮ, ನಾವು ನಡೆದುಕೊಳ್ಳುವ ರೀತಿಯ ಮೇಲೆ ಅವಲಂಭಿಸಿರುತ್ತೆ. ಹಾಗಾಗಿ, ತಾಳ್ಮೆ ತೋರಿಸಲೇಬೇಕು. ಆಗಲೇ ಸಮಸ್ಯೆಗಳು ಸರಿಹೋಗೋದು.”—ಮದುವೆಯಾಗಿ 27 ವರ್ಷ, ಜಿ.ಎ.
ಬಯ್ಯಬೇಡಿ, ಹೊಡೆಯಬೇಡಿ.
“ಕ್ರೋಧ, ಕೋಪ, ಕೆಟ್ಟತನ, ನಿಂದಾತ್ಮಕ ಮಾತು ಮತ್ತು ನಿಮ್ಮ ಬಾಯಿಂದ ಹೊರಡುವ ಅಶ್ಲೀಲವಾದ ಮಾತು ಇವುಗಳೆಲ್ಲವನ್ನು ನಿಮ್ಮಿಂದ ತೊಲಗಿಸಿಬಿಡಿರಿ.”—ಕೊಲೊಸ್ಸೆ 3:8.
“ನನ್ನ ಗಂಡ ಸ್ವ-ನಿಯಂತ್ರಣ ತೋರಿಸುವಾಗ ತುಂಬ ಖುಷಿಯಾಗುತ್ತೆ. ಅವರು ನನ್ನ ಮೇಲೆ ಕೂಗಾಡಿದ್ದಾಗಲಿ, ನನಗೆ ಅವಮಾನ ಮಾಡಿದ್ದಾಗಲಿ ಇಲ್ಲವೇ ಇಲ್ಲ, ಯಾವಾಗಲೂ ಸಮಾಧಾನದಿಂದಿರುತ್ತಾರೆ.”—ಮದುವೆಯಾಗಿ 20 ವರ್ಷ, ಬಿ.ಡಿ.
ಕ್ಷಮಿಸಲು ಮತ್ತು ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಳ್ಳಲು ತಡಮಾಡಬೇಡಿ
“ಒತ್ತಡದಲ್ಲಿರುವಾಗ ಸಮಾಧಾನದಿಂದಿರುವುದು ತುಂಬಾ ಕಷ್ಟ. ಆಗ ನಾವು ನಮ್ಮ ಸಂಗಾತಿಗೆ ನೋವಾಗುವ ರೀತಿಯಲ್ಲಿ ನಡೆದುಕೊಳ್ಳಬಹುದು, ಮಾತಾಡಬಹುದು. ಅಂಥ ಸಮಯದಲ್ಲಿ ಒಬ್ಬರನ್ನೊಬ್ಬರು ಕ್ಷಮಿಸುವುದು ಉತ್ತಮ. ಕ್ಷಮಿಸದಿದ್ದರೆ ಸುಖೀ ಸಂಸಾರ ಅಸಾಧ್ಯ.”—ಮದುವೆಯಾಗಿ 34 ವರ್ಷ, ಎ.ಬಿ.
ನಿಸ್ವಾರ್ಥದಿಂದ ಕೊಡುವ ಮತ್ತು ಹಂಚಿಕೊಳ್ಳುವ ರೂಢಿ ಮಾಡಿಕೊಳ್ಳಿ.
“ಕೊಡುವುದನ್ನು ರೂಢಿಮಾಡಿಕೊಳ್ಳಿರಿ, ಆಗ ಜನರು ನಿಮಗೆ ಕೊಡುವರು . . . ನೀವು ಅಳೆಯುತ್ತಿರುವ ಅಳತೆಯಿಂದಲೇ ಅವರು ನಿಮಗೆ ಅಳೆದುಕೊಡುವರು.”—ಲೂಕ 6:38.
“ನನಗೆ ಯಾವಾಗ ಖುಷಿ ಆಗುತ್ತೆ ಅಂತ ನನ್ನ ಗಂಡನಿಗೆ ಗೊತ್ತು. ಅದಕ್ಕೇ, ನನಗೆ ಗೊತ್ತಿಲ್ಲದೆನೇ ಏನಾದ್ರೊಂದು ಕೊಡುತ್ತಿರುತ್ತಾರೆ ಅಥವಾ ಮಾಡುತ್ತಿರುತ್ತಾರೆ. ಆಗ ನಾನು ಸಹ, ‘ಇವರನ್ನು ಹೇಗೆ ಖುಷಿಪಡಿಸ್ಲಿ?’ ಅಂತ ಯೋಚಿಸುತ್ತೇನೆ. ಹೀಗೆ ನಾವು ತುಂಬ ಸಂತೋಷಪಟ್ಟಿದ್ದೇವೆ, ಈಗಲೂ ಪಡುತ್ತಿದ್ದೇವೆ.”—ಮದುವೆಯಾಗಿ 44 ವರ್ಷ, ಹೆಚ್.ಕೆ.
ಶಾಂತಿ ಕಾಪಾಡಿಕೊಳ್ಳುವ ಪ್ರಯತ್ನವನ್ನು ನಿಲ್ಲಿಸಬೇಡಿ
ತಮ್ಮ ಮನೆಯನ್ನು ಶಾಂತಿಯ ಧಾಮವನ್ನಾಗಿ ಮಾಡಲು ಅಗತ್ಯವಾದ ಗುಣಗಳನ್ನು ಬೈಬಲಿನ ಸಹಾಯದಿಂದ ಬೆಳೆಸಿಕೊಂಡ ಕೆಲವರನ್ನು ಎಚ್ಚರ! ಪತ್ರಿಕೆ ಸಂದರ್ಶನ ಮಾಡಿತು. ಹೀಗೆ ಸಹಾಯ ಪಡೆದವರು ಇನ್ನೂ ಲಕ್ಷಾಂತರ ಮಂದಿಯಿದ್ದಾರೆ.a ಶಾಂತಿಯನ್ನು ಕಾಪಾಡಿಕೊಳ್ಳಲು ಕುಟುಂಬದ ಪ್ರತಿಯೊಬ್ಬರು ಸಹಕರಿಸಿದೇ ಇದ್ದರೂ ಅದಕ್ಕಾಗಿ ತಾವು ಮಾಡುವ ಪ್ರಯತ್ನ ವ್ಯರ್ಥವಲ್ಲ ಎನ್ನುವುದು ಅವರ ಅನುಭವ. ಯಾಕೆಂದರೆ, ಬೈಬಲ್ ಹೇಳುವಂತೆ, “ಹಿತೋಪದೇಶಕರ [ಸಮಾಧಾನದಿಂದ ಇರುವವರ, NW] ಮನಸ್ಸಿನಲ್ಲಿ ಉಲ್ಲಾಸ.”—ಜ್ಞಾನೋಕ್ತಿ 12:20. ◼ (g15-E 12)