ಬೆಲೆ ಏರಿಕೆಯ ಬರೆಗೆ ಔಷಧಿ!
ಉದಾರತೆ ತೋರಿಸಿ
‘ನಾನು, ಬೆಲೆ ಏರಿಕೆಯಿಂದ ಜೇಬು ಖಾಲಿ ಆಗ್ತಿದೆ ಅಂತ ತಲೆ ಕೆಡಿಸ್ಕೊಳ್ತಾ ಇದ್ರೆ, ಉದಾರವಾಗಿ ಕೊಡಿ ಅಂತ ಹೇಳ್ತೀರಲ್ಲ’ ಅಂತ ನಿಮಗೆ ಅನಿಸಬಹುದು. ಉದಾರತೆ ತೋರಿಸಿದ್ರೆ ಹಣ ಉಳಿಸೋಕಾಗಲ್ಲ ಅಂತ ಅಂದ್ಕೊಬೇಡಿ. ನೀವು ಹಣನ ಉಳಿಸ್ತಾ ಉದಾರತೆನೂ ತೋರಿಸಬಹುದು. ನೀವು ಉದಾರವಾಗಿ ಕೊಟ್ರೆ ಹಣಕಾಸಿನ ಸಮಸ್ಯೆನ ಚೆನ್ನಾಗಿ ನಿಭಾಯಿಸೋಕೆ ಕಲಿತೀರ.
ಇದ್ರ ಬಗ್ಗೆ ಯಾಕೆ ತಿಳ್ಕೊಬೇಕು?
ಚಿಕ್ಕ ಚಿಕ್ಕ ವಿಷ್ಯದಲ್ಲೂ ಉದಾರತೆ ತೋರಿಸಿದ್ರೆ ನಾವು ಖುಷಿಯಾಗಿ ಇರ್ತೀವಿ. ನಮ್ಮೊಳಗೆ ಒಂಥರ ತೃಪ್ತಿ ಇರುತ್ತೆ. ನಾವು ಉದಾರವಾಗಿ ಬೇರೆಯವ್ರಿಗೆ ಕೊಡೋದ್ರಿಂದ ನಮ್ಮ ಆರೋಗ್ಯ ಮತ್ತು ಮನಸ್ಸು ತುಂಬ ಚೆನ್ನಾಗಿರುತ್ತೆ ಅಂತ ಕೆಲವು ಡಾಕ್ಟರ್ಗಳು ಹೇಳಿದ್ದಾರೆ. ಉದಾಹರಣೆಗೆ ಚಿಂತೆ, ಒತ್ತಡ, ಬಿಪಿ ಮತ್ತು ನೋವು ಕಮ್ಮಿ ಆಗುತ್ತೆ. ಕಣ್ತುಂಬ ನಿದ್ದೆನೂ ಬರುತ್ತೆ.
ನಾವು ಬೇರೆಯವ್ರಿಗೆ ಸಹಾಯ ಮಾಡಿದ್ರೆ, ನಮಗೆ ಸಹಾಯ ಬೇಕಾದಾಗ ಅದನ್ನ ಪಡ್ಕೊಳ್ಳೋಕೆ ನಾವು ನಾಚಿಕೆಪಡಲ್ಲ. ಇಂಗ್ಲೆಂಡ್ನಲ್ಲಿರೋ ಹಾವರ್ಡ್ ಅನ್ನೋ ವ್ಯಕ್ತಿ ಏನ್ ಹೇಳ್ತಾನೆ ನೋಡಿ, “ನಾನೂ ನನ್ನ ಹೆಂಡತಿ, ಬೇರೆಯವ್ರಿಗೆ ಸಹಾಯ ಮಾಡೋಕೆ, ಉದಾರತೆ ತೋರಿಸೋಕೆ ದಾರಿ ಹುಡುಕ್ತಾ ಇರ್ತೀವಿ. ಇದ್ರಿಂದ ನಮಗೆ ಸಹಾಯ ಬೇಕಾದಾಗ ಅದನ್ನ ಪಡ್ಕೊಳ್ಳೋಕೆ ನಮಗೆ ನಾಚಿಕೆ ಅಥವಾ ಮುಜುಗರ ಆಗಲ್ಲ.” ಉದಾರತೆ ತೋರಿಸೋ ಜನ ಬೇರೆಯವರು ನಮಗೆ ಏನಾದ್ರೂ ಕೊಡ್ಲಿ ಅಂತ ಕಾಯ್ತ ಕೂರಲ್ಲ ನಿಜ. ಉದಾರತೆ ತೋರಿಸೋದ್ರಿಂದ ಅವ್ರನ್ನ ಮನಸಾರೆ ಇಷ್ಟ ಪಡೋ ನಿಜ ಸ್ನೇಹಿತರು ಸಿಗ್ತಾರೆ. ಈ ಸ್ನೇಹಿತರು ಕಷ್ಟ ಕಾಲದಲ್ಲಿ ಅವ್ರ ಕೈ ಹಿಡಿತಾರೆ.
ನೀವೇನು ಮಾಡಬಹುದು?
ನಿಮ್ಮ ಹತ್ರ ಇರೋದನ್ನ ಹಂಚ್ಕೊಳ್ಳಿ. ‘ನನ್ನ ಹತ್ರ ಇರೋದೇ ಸ್ವಲ್ಪ’ ಅಂತ ಅನಿಸಿದ್ರೂ ನಿಮತ್ರ ಇರೋದನ್ನ ಬೇರೆಯವ್ರ ಹತ್ರ ಹಂಚ್ಕೊಳ್ಳಿ. ಅದು ಸಿಂಪಲ್ ಊಟ ಆಗಿದ್ರೂ ಪರ್ವಾಗಿಲ್ಲ. ಡಂಕನ್ ಮತ್ತು ಅವನ ಕುಟುಂಬ ಬಡವರು, ಇವರು ಉಗಾಂಡ ದೇಶದಲ್ಲಿದ್ದಾರೆ. ಆದ್ರೂ ಉದಾರತೆ ತೋರಿಸೋದ್ರಲ್ಲಿ ಎತ್ತಿದ ಕೈ! ಡಂಕನ್ ಹೇಳೋದು, “ಪ್ರತಿ ಭಾನುವಾರ, ನಾನು ಮತ್ತು ನನ್ನ ಹೆಂಡ್ತಿ ಯಾರನ್ನಾದ್ರೂ ನಮ್ಮ ಮನೆಗೆ ಕರೀತೀವಿ. ಅವ್ರ ಜೊತೆ ಕೂತು ಏನಾದ್ರೂ ಊಟ ಮಾಡ್ತೀವಿ. ಹೀಗೆ ಚೆನ್ನಾಗಿ ಸಮಯ ಕಳೀತೀವಿ.”
ಆದ್ರೆ ಒಂದು ಕಿವಿಮಾತು, ನೀವು ಇರೋದನ್ನೆಲ್ಲ ಕೊಟ್ಟುಬಿಟ್ಟು ನಿಮ್ಮ ಕುಟುಂಬಕ್ಕೆ ಏನೂ ಇಲ್ಲದಂತೆ ಮಾಡಿಬಿಡಬಾರದು.—ಯೋಬ 17:5.
ಹೀಗೆ ಮಾಡಿ ನೋಡಿ: ಊಟ ಮಾಡೋಕೆ ಅಥವಾ ಟೀ ಕಾಫಿಗೆ ಅಂತ ಯಾರನ್ನಾದ್ರೂ ಕರೀರಿ. ನೀವು ಬಳಸದ ವಸ್ತುಗಳಿದ್ರೆ ಅದನ್ನ ನಿಮ್ಮ ಸ್ನೇಹಿತರಿಗೆ ಅಥವಾ ಅಕ್ಕಪಕ್ಕದವ್ರಿಗೆ ಕೊಡಿ. ಅವ್ರಿಗೆ ಅದ್ರ ಅಗತ್ಯ ಇರಬಹುದು.
ನೀವು ಇನ್ನೇನು ಕೊಡಬಹುದು ಗೊತ್ತಾ? ಏನಾದ್ರೂ ಕೊಡಬೇಕಂದ್ರೆ ಕಾಸು ಖರ್ಚಾಗುತ್ತೆ ಅಂತ ಅಂದ್ಕೊಬೇಡಿ. ಒಂದು ರೂಪಾಯಿನೂ ಖರ್ಚು ಮಾಡದೆ ಬೆಸ್ಟ್ ಗಿಫ್ಟ್ ಕೊಡಬಹುದು. ಅದೇ ನೀವು ಕೊಡೋ ಸಮಯ ಮತ್ತು ತೋರಿಸೋ ಪ್ರೀತಿ! ಇದನ್ನ ಜನ ತುಂಬ ಮೆಚ್ಕೊತ್ತಾರೆ. ನೀವು ಅವ್ರ ಹತ್ರ ಪ್ರೀತಿಯಿಂದ ಬಾಯ್ತುಂಬ ಮಾತಾಡಿ. ಅವ್ರಂದ್ರೆ ನಿಮಗೆ ಯಾಕೆ ಇಷ್ಟ ಮತ್ತು ಅವ್ರನ್ನ ನೀವು ಯಾಕೆ ಪ್ರೀತಿಸ್ತೀರ ಅಂತೆಲ್ಲ ಹೇಳಿ.
ಹೀಗೆ ಮಾಡಿ ನೋಡಿ: ಕಷ್ಟದಲ್ಲಿ ಇರೋರಿಗೆ ಅಡುಗೆ ಮಾಡ್ಕೊಡಿ ಅಥವಾ ಅವ್ರ ಮನೆ ಕೆಲಸದಲ್ಲಿ ಕೈ ಜೋಡಿಸಿ. ಅವ್ರ ಮನೆ ರಿಪೇರಿ ಮಾಡೋಕೆ ಅಥವಾ ಬಿಲ್ ಕಟ್ಟೋಕೆ ಸಹಾಯ ಮಾಡಿ. ನಿಮ್ಮ ಫ್ರೆಂಡ್ಸ್ನ ನೀವು ಆಗಾಗ ಭೇಟಿ ಮಾಡದಿದ್ರೂ ಅವ್ರಿಗೆ ಒಂದು ಫೋನ್ ಮಾಡಿ ಅಥವಾ ಮೆಸೇಜ್ ಕಳಿಸಿ, ಅವ್ರನ್ನ ನೆನಪಿಸ್ಕೊಳ್ತಿದ್ದೀರ ಅಂತ ಹೇಳಿ. ಈ ತರ ಮಾಡಿದ್ರೆ ‘ಅರೇ, ನಾನು ದೂರ ಇದ್ರೂ ನನ್ನನ್ನ ನೆನಪಿಸ್ಕೊಳ್ತಿದ್ದಾರಲ್ಲ’ ಅಂತ ಅವ್ರಿಗೆ ನಿಮ್ಮ ಬಗ್ಗೆ ಖುಷಿ ಆಗುತ್ತೆ.
ನೆನಪಿಡಿ, ನೀವು ಉದಾರವಾಗಿ ಕೊಡೋಕೆ ಕಲಿತ್ರೆ ಖುಷಿ ನಿಮ್ಮನ್ನ ಹುಡುಕ್ಕೊಂಡು ಬರುತ್ತೆ!