ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಸಭೆಯಲ್ಲಿ ಹಿರಿಯರ ಜವಾಬ್ದಾರಿ ಏನು?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 15

      ಸಭೆಯಲ್ಲಿ ಹಿರಿಯರ ಜವಾಬ್ದಾರಿ ಏನು?

      ಹಿರಿಯರು ಸಭೆಯ ಸದಸ್ಯರೊಂದಿಗೆ ಮಾತಾಡುತ್ತಿರುವುದು

      ಫಿನ್‌ಲೆಂಡ್‌

      ಹಿರಿಯರೊಬ್ಬರು ಸಭೆಗೆ ಬೋಧಿಸುತ್ತಿರುವುದು

      ಬೈಬಲ್‌ ಉಪದೇಶ

      ಹಿರಿಯರು ಸಭೆಯ ಒಂದು ಕುಟುಂಬವನ್ನು ಪ್ರೋತ್ಸಾಹಿಸುತ್ತಿರುವುದು

      ಪರಿಪಾಲನಾ ಭೇಟಿ

      ಹಿರಿಯರು ಸೇವೆಯಲ್ಲಿ ಭಾಗವಹಿಸುತ್ತಿರುವುದು

      ಸುವಾರ್ತೆ ಸಾರುವಿಕೆ

      ಸಂಬಳಕ್ಕೆ ದುಡಿಯುವ ಪಾದ್ರಿಯನ್ನು ನೀವು ನಮ್ಮ ಸಭೆಯಲ್ಲಿ ಕಾಣಲಾರಿರಿ. ಏಕೆಂದರೆ, ಕ್ರೈಸ್ತ ಸಭೆ ಆರಂಭವಾದಾಗ ಇದ್ದ ನಮೂನೆಯನ್ನು ನಾವು ಅನುಕರಿಸುತ್ತೇವೆ. ನಮ್ಮಲ್ಲಿ ನಿಸ್ವಾರ್ಥದಿಂದ ದುಡಿಯುವ ಅರ್ಹ ಮೇಲ್ವಿಚಾರಕರಿದ್ದಾರೆ. ಅವರು ಪ್ರೀತಿಯಿಂದ ಸಭೆಯ ಪರಿಪಾಲನೆ ಮಾಡುತ್ತಾರೆ. (ಅಪೊಸ್ತಲರ ಕಾರ್ಯಗಳು 20:28) ‘ಹಿರಿಯರು’ ಎಂದು ಕರೆಯಲಾಗುವ ಅವರು ದೇವರೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿರುವ ಪುರುಷರಾಗಿದ್ದಾರೆ. ಅವರು “ಅಪ್ರಾಮಾಣಿಕ ಲಾಭದ ಮೇಲಣ ಪ್ರೀತಿಯಿಂದಲ್ಲ, ಸಿದ್ಧಮನಸ್ಸಿನಿಂದ” ಇಚ್ಛಾಪೂರ್ವಕವಾಗಿ ಸಭೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. (1 ಪೇತ್ರ 5:1-3) ಸಭೆಯಲ್ಲಿ ಅವರು ಯಾವ ರೀತಿಯ ಜವಾಬ್ದಾರಿ ನಿರ್ವಹಿಸುತ್ತಾರೆ?

      ನಮ್ಮನ್ನು ಕಾಪಾಡಿ ಸಲಹುತ್ತಾರೆ. ದೇವರೊಂದಿಗಿನ ಆಪ್ತ ಬಾಂಧವ್ಯ ಕಾಪಾಡಿಕೊಳ್ಳುವಂತೆ ಸಭೆಯಲ್ಲಿರುವವರನ್ನು ಹಿರಿಯರು ಮಾರ್ಗದರ್ಶಿಸುತ್ತಾರೆ. ಈ ಭಾರಿ ಜವಾಬ್ದಾರಿ ನೀಡಿದ್ದು ದೇವರು ಎನ್ನುವುದನ್ನು ಸದಾ ಮನಸ್ಸಲ್ಲಿ ಇಟ್ಟುಕೊಳ್ಳುವ ಅವರು ಸಭೆಯವರ ಮೇಲೆ ಅಧಿಕಾರ ಚಲಾಯಿಸದೆ ಹಿತಾಸಕ್ತಿ ತೋರಿಸಿ ಸಂತೋಷ ಹೆಚ್ಚಿಸುತ್ತಾರೆ. (2 ಕೊರಿಂಥ 1:24) ಅಪಾರ ಪ್ರೀತಿ ಮಮತೆಯುಳ್ಳ ಕುರುಬನು ಪ್ರತಿಯೊಂದು ಕುರಿಯ ಯೋಗಕ್ಷೇಮ ನೋಡಿಕೊಳ್ಳುವಂತೆ ಹಿರಿಯರು ಸಭೆಯ ಪ್ರತಿಯೊಬ್ಬ ಸದಸ್ಯರನ್ನು ಚೆನ್ನಾಗಿ ಪರಿಚಯ ಮಾಡಿಕೊಂಡು ಕಾಳಜಿ ತೋರಿಸುತ್ತಾರೆ.—ಜ್ಞಾನೋಕ್ತಿ 27:23.

      ದೇವರ ಇಷ್ಟವನ್ನು ಮಾಡಲು ಕಲಿಸುತ್ತಾರೆ. ದೇವರ ಮೇಲಿನ ನಮ್ಮ ನಂಬಿಕೆ ಗಾಢವಾಗುವಂತೆ ಹಿರಿಯರು ಪ್ರತಿವಾರ ಸಭಾ ಕೂಟಗಳಲ್ಲಿ ಬೈಬಲ್‌ ಉಪದೇಶ ನೀಡುತ್ತಾರೆ. (ಅಪೊಸ್ತಲರ ಕಾರ್ಯಗಳು 15:32) ಅರ್ಪಣಾ ಭಾವದ ಈ ಸಹೋದರರು ಸುವಾರ್ತೆ ಸಾರುವ ಕೆಲಸದಲ್ಲಿ ಮುಂದಾಳತ್ವ ವಹಿಸುತ್ತಾರೆ. ನಮ್ಮೊಂದಿಗೆ ಸೇವೆಗೆ ಬರುತ್ತಾರೆ. ಸುವಾರ್ತೆ ಸಾರುವ ಬೇರೆ ಬೇರೆ ವಿಧಾನಗಳನ್ನು ಕಲಿಸುತ್ತಾರೆ.

      ವ್ಯಕ್ತಿಗತವಾಗಿ ಕಾಳಜಿ ವಹಿಸಿ ಪ್ರೋತ್ಸಾಹಿಸುತ್ತಾರೆ. ಯೆಹೋವ ದೇವರೊಂದಿಗೆ ಸದಾ ಆಪ್ತವಾಗಿರುವಂತೆ ಹಿರಿಯರು ಒಬ್ಬೊಬ್ಬರಿಗೂ ವೈಯಕ್ತಿಕ ನೆರವು ನೀಡುತ್ತಾರೆ. ರಾಜ್ಯ ಸಭಾಗೃಹದಲ್ಲಿ ಅಥವಾ ಮನೆಯಲ್ಲಿ ನಮ್ಮೊಂದಿಗೆ ಸಮಯ ವ್ಯಯಿಸಿ ಬೈಬಲಿನಿಂದ ಸಲಹೆ ಸಾಂತ್ವನ ಕೊಟ್ಟು ಪ್ರೋತ್ಸಾಹಿಸುತ್ತಾರೆ.—ಯಾಕೋಬ 5:14, 15.

      ಸಭಾ ಜವಾಬ್ದಾರಿಗಳು ಮಾತ್ರವಲ್ಲದೆ ಅವರು ತಮ್ಮ ಸಮಯ ಗಮನವನ್ನು ಉದ್ಯೋಗಕ್ಕೂ ಕುಟುಂಬಕ್ಕೂ ನೀಡಬೇಕಾಗುತ್ತದೆ. ಇವೆಲ್ಲದರ ಮಧ್ಯೆ ನಮ್ಮ ಹಿತಾಸಕ್ತಿಗಾಗಿ ದುಡಿಯುವ ಈ ಸಹೋದರರು ಅಭಿನಂದನಾರ್ಹರು.—1 ಥೆಸಲೊನೀಕ 5:12, 13.

      • ಸಭೆಯಲ್ಲಿ ಹಿರಿಯರ ಜವಾಬ್ದಾರಿಗಳೇನು?

      • ಯಾವೆಲ್ಲ ವಿಧಗಳಲ್ಲಿ ಹಿರಿಯರು ನಮಗೆ ವ್ಯಕ್ತಿಗತ ಕಾಳಜಿ ತೋರಿಸುತ್ತಾರೆ?

      ಇನ್ನಷ್ಟು ತಿಳಿಯಲು . . .

      ಹಿರಿಯರಾಗಲು ಮತ್ತು ಶುಶ್ರೂಷಾ ಸೇವಕರಾಗಲು ಅರ್ಹತೆಗಳೇನು? ಉತ್ತರಕ್ಕಾಗಿ 1 ತಿಮೊಥೆಯ 3:1-10, 12; ತೀತ 1:5-9 ವಚನಗಳನ್ನು ಓದಿ.

  • ಸಹಾಯಕ ಸೇವಕರ ಜವಾಬ್ದಾರಿ ಏನು?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 16

      ಸಹಾಯಕ ಸೇವಕರ ಜವಾಬ್ದಾರಿ ಏನು?

      ಸಹಾಯಕ ಸೇವಕ ಸಾಹಿತ್ಯ ವಿತರಣೆಯಲ್ಲಿ ಸಹಾಯ ಮಾಡುತ್ತಿರುವುದು

      ಮಯನ್ಮಾರ್‌

      ಸಹಾಯಕ ಸೇವಕ ಆಧ್ಯಾತ್ಮಿಕ ಭಾಷಣ ನೀಡುತ್ತಿರುವುದು

      ಸಭಾ ಕೂಟ

      ಸಹಾಯಕ ಸೇವಕ ಕೂಟ ನಡೆಸುತ್ತಿರುವುದು

      ಕ್ಷೇತ್ರ ಸೇವಾ ಗುಂಪು

      ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಸಹಾಯಕ ಸೇವಕ ಕೆಲಸ ಮಾಡುತ್ತಿರುವುದು

      ರಾಜ್ಯ ಸಭಾಗೃಹದ ಶುಚಿ ಕಾರ್ಯ

      ಸಭೆಯ ಜವಾಬ್ದಾರಿಗಳನ್ನು ಅರ್ಹ ಸಹೋದರರು ನೋಡಿಕೊಳ್ಳಬೇಕು ಅಂತ ಬೈಬಲ್‌ ತಿಳಿಸುತ್ತದೆ. ಅವರಲ್ಲಿ ಕೆಲವರು ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿದರೆ ಇನ್ನು ಕೆಲವರು ಸಹಾಯಕ ಸೇವಕರಾಗಿ ಸೇವೆ ಸಲ್ಲಿಸುತ್ತಾರೆ. (ಫಿಲಿಪ್ಪಿ 1:1) ಹೀಗೆ ಪ್ರತಿಯೊಂದು ಸಭೆಯಲ್ಲಿ ಮೇಲ್ವಿಚಾರಕರಾಗಿ ಹಿರಿಯರು ಹಾಗೂ ಅವರಿಗೆ ಸಹಾಯಕರಾಗಿ ಸಹಾಯಕ ಸೇವಕರು ಇರುತ್ತಾರೆ. ಸಹಾಯಕ ಸೇವಕರ ಜವಾಬ್ದಾರಿಗಳೇನು?

      ಸಭಾ ಹಿರಿಯರಿಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಾರೆ. ಸಹಾಯಕ ಸೇವಕರು ದೇವಭಕ್ತ ಸಹೋದರರು. ವಿಶ್ವಾಸಪಾತ್ರರಾದ ಇವರು ಹಿರಿಯರು ಕೊಡುವ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಸಭಾ ಹಿರಿಯರು ಬೋಧಿಸುವ ಮತ್ತು ಪರಿಪಾಲನೆ ಮಾಡುವ ಕೆಲಸಕ್ಕೆ ಹೆಚ್ಚು ಗಮನ ನೀಡುವಾಗ ಸಹಾಯಕ ಸೇವಕರು ಇತರ ಏರ್ಪಾಡುಗಳನ್ನು ನೋಡಿಕೊಳ್ಳುತ್ತಾರೆ. ಯುವಕರಿಂದ ವಯೋವೃದ್ಧರ ವರೆಗೆ ಇರುವ ಈ ಸೇವಕರು ಹಿರಿಯರಿಗೆ ಸಹಾಯಕರಾಗಿ ಸಭೆಗೆ ಸಲ್ಲಿಸುವ ಸೇವೆ ತುಂಬ ಅಮೂಲ್ಯವಾಗಿದೆ.

      ಸಭೆಗೆ ಬಹು ಉಪಯುಕ್ತ ಸೇವೆ ಸಲ್ಲಿಸುತ್ತಾರೆ. ಕೆಲವು ಸಹಾಯಕ ಸೇವಕರನ್ನು ಅಟೆಂಡೆಂಟ್‌ ಆಗಿ ನೇಮಿಸಲಾಗುತ್ತದೆ. ಸಭೆಗೆ ಬರುವವರನ್ನು ಅವರು ಸ್ವಾಗತಿಸಿ ಆಸನ ವ್ಯವಸ್ಥೆ ಮಾಡಿಕೊಡುತ್ತಾರೆ. ಇನ್ನಿತರ ಸಹಾಯಕ ಸೇವಕರು ಧ್ವನಿ ಉಪಕರಣ, ಸಾಹಿತ್ಯ ವಿತರಣೆ, ಸಭೆಯ ಅಕೌಂಟ್ಸ್‌ ಮುಂತಾದವನ್ನು ನೋಡಿಕೊಳ್ಳುತ್ತಾರೆ. ಯಾರ್ಯಾರು ಯಾವ್ಯಾವ ಪ್ರದೇಶದಲ್ಲಿ ಸುವಾರ್ತೆ ಸಾರಬೇಕೆಂದು ನೇಮಿಸುವ ಕೆಲಸವನ್ನು ಅವರು ನಿರ್ವಹಿಸುತ್ತಾರೆ. ರಾಜ್ಯ ಸಭಾಗೃಹದ ದುರಸ್ತಿ ಕಾರ್ಯಗಳನ್ನು ನೋಡಿಕೊಂಡು ಸುಸ್ಥಿತಿಯಲ್ಲಿ ಇಡುತ್ತಾರೆ. ವೃದ್ಧರಿಗೆ ನೆರವು ನೀಡುವಂತೆಯೂ ಹಿರಿಯರು ಅವರನ್ನು ಕೇಳಿಕೊಳ್ಳುತ್ತಾರೆ. ಈ ಎಲ್ಲಾ ಜವಾಬ್ದಾರಿಯನ್ನು ಸಿದ್ಧ ಮನಸ್ಸಿನಿಂದ ಮಾಡುವ ಅವರು ಸಭೆಯ ಶ್ಲಾಘನೆಗೆ ಪಾತ್ರರು.—1 ತಿಮೊಥೆಯ 3:13.

      ಇತರರಿಗೆ ಆದರ್ಶರಾಗಿರುತ್ತಾರೆ. ಒಳ್ಳೆಯ ಗುಣ ನಡತೆ ಅರ್ಹತೆಗಳಿರುವ ಸಹೋದರರನ್ನೇ ಸಹಾಯಕ ಸೇವಕರಾಗಿ ನೇಮಿಸಲಾಗುತ್ತದೆ. ಸಭಾ ಕೂಟಗಳಲ್ಲಿ ಅವರು ಉತ್ತಮವಾಗಿ ಕಾರ್ಯಕ್ರಮ ನಡೆಸಿಕೊಟ್ಟು ದೇವರಲ್ಲಿನ ನಮ್ಮ ನಂಬಿಕೆಯನ್ನು ಹೆಚ್ಚಿಸುತ್ತಾರೆ. ಸುವಾರ್ತೆ ಸಾರುವ ಕೆಲಸದಲ್ಲಿ ಮುಂದಾಳತ್ವ ವಹಿಸುತ್ತಾ ಅವರಿಡುವ ಮಾದರಿ ನಮ್ಮಲ್ಲಿ ಹುರುಪು ಹುಮ್ಮಸ್ಸನ್ನು ಹೆಚ್ಚಿಸುತ್ತದೆ. ಹಿರಿಯರಿಗೆ ಸಹಕಾರ ನೀಡಿ ಸಭೆಯಲ್ಲಿ ಒಗ್ಗಟ್ಟು ಸಂತೋಷದ ವಾತಾವರಣ ಸೃಷ್ಟಿಸುತ್ತಾರೆ. (ಎಫೆಸ 4:16) ಹೀಗೆ ಇನ್ನಷ್ಟು ಪ್ರಗತಿ ಮಾಡಿ ಹಿರಿಯರಾಗಿ ನೇಮಕಗೊಳ್ಳುತ್ತಾರೆ.

      • ಸಹಾಯಕ ಸೇವಕರಾಗುವವರು ಯಾವ ರೀತಿಯ ವ್ಯಕ್ತಿಗಳಾಗಿರಬೇಕು?

      • ಸಹಾಯಕ ಸೇವಕರು ಸಭೆಯಲ್ಲಿ ಯಾವ ಉಪಯುಕ್ತ ಸೇವೆ ಸಲ್ಲಿಸುತ್ತಾರೆ?

      ಇನ್ನಷ್ಟು ತಿಳಿಯಲು . . .

      ಪ್ರತಿಬಾರಿ ಸಭೆಗೆ ಹೋಗುವಾಗ ಕನಿಷ್ಠ ಪಕ್ಷ ಒಬ್ಬ ಹಿರಿಯರನ್ನು ಅಥವಾ ಸಹಾಯಕ ಸೇವಕರನ್ನು ಪರಿಚಯ ಮಾಡಿಕೊಳ್ಳಿ. ಹೀಗೆ ಎಲ್ಲಾ ಹಿರಿಯರ, ಸಹಾಯಕ ಸೇವಕರ ಮತ್ತವರ ಕುಟುಂಬದ ಪರಿಚಯ ನಿಮ್ಮದಾಗುತ್ತೆ.

  • ಸಂಚರಣ ಮೇಲ್ವಿಚಾರಕರು ನಮಗೆ ಯಾವ ನೆರವು ನೀಡುತ್ತಾರೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 17

      ಸಂಚರಣ ಮೇಲ್ವಿಚಾರಕರು ನಮಗೆ ಯಾವ ನೆರವು ನೀಡುತ್ತಾರೆ?

      ಸರ್ಕಿಟ್‌ ಮೇಲ್ವಿಚಾರಕರು ಮತ್ತವರ ಪತ್ನಿ

      ಮಲಾವಿ

      ಸರ್ಕಿಟ್‌ ಮೇಲ್ವಿಚಾರಕರು ಕ್ಷೇತ್ರ ಸೇವಾ ಕೂಟವನ್ನು ನಡೆಸುತ್ತಿರುವುದು

      ಕ್ಷೇತ್ರ ಸೇವಾ ಗುಂಪು

      ಸರ್ಕಿಟ್‌ ಮೇಲ್ವಿಚಾರಕರು ಸೇವೆಯಲ್ಲಿ ಭಾಗವಹಿಸುತ್ತಿರುವುದು

      ಸುವಾರ್ತೆ ಸಾರುವಿಕೆ

      ಸಭಾ ಹಿರಿಯರೊಂದಿಗೆ ಸರ್ಕಿಟ್‌ ಮೇಲ್ವಿಚಾರಕರು ಕೂಟ ಮಾಡುತ್ತಿದ್ದಾರೆ

      ಹಿರಿಯರ ಕೂಟ

      ಬೈಬಲ್‌ನಲ್ಲಿ ಅಪೊಸ್ತಲ ಪೌಲ ಹಾಗೂ ಬಾರ್ನಬರ ಬಗ್ಗೆ ಬಹಳಷ್ಟು ಬಾರಿ ಪ್ರಸ್ತಾಪವಿದೆ. ಇವರಿಬ್ಬರು ಸಂಚರಣ ಮೇಲ್ವಿಚಾರಕರಾಗಿ ಸೇವೆ ಮಾಡುತ್ತಾ ಸಭೆಗಳನ್ನು ಭೇಟಿ ಮಾಡಿದರೆಂದು ಅದು ತಿಳಿಸುತ್ತದೆ. ಅವರ ಉದ್ದೇಶ? ಪೌಲನೇ ಅದನ್ನು ಹೇಳಿದ್ದಾನೆ. “ಪ್ರತಿಯೊಂದು ಊರಿಗೆ ಪುನಃ ಹೋಗಿ ಅಲ್ಲಿರುವ ಸಹೋದರರನ್ನು ಭೇಟಿಮಾಡಿ ಅವರು ಹೇಗಿದ್ದಾರೆಂದು” ನೋಡಲು ಬಯಸುತ್ತೇನೆ ಎಂದು ತಿಳಿಸಿದನು. ಅಂದರೆ ಪೌಲ ಬಾರ್ನಬರಿಗೆ ಸಭೆಯಲ್ಲಿದ್ದ ಸಹೋದರರ ಮೇಲೆ ಬಹಳ ಪ್ರೀತಿ ಕಳಕಳಿ ಇತ್ತು. ಆ ಕಾರಣದಿಂದಲೇ ಅವರನ್ನು ಆಧ್ಯಾತ್ಮಿಕವಾಗಿ ಪ್ರೋತ್ಸಾಹಿಸಲು ಭೇಟಿ ನೀಡುತ್ತಿದ್ದರು. ಇದಕ್ಕಾಗಿ ಕೆಲವೊಮ್ಮೆ ನೂರಾರು ಮೈಲು ಕ್ರಮಿಸುತ್ತಿದ್ದರು. (ಅಪೊಸ್ತಲರ ಕಾರ್ಯಗಳು 15:36) ಇಂದಿನ ಸಂಚರಣ ಮೇಲ್ವಿಚಾರಕರು ಸಹ ಅದೇ ಕೆಲಸವನ್ನು ಮಾಡುತ್ತಿದ್ದಾರೆ.

      ಸ್ಫೂರ್ತಿ ನೀಡುತ್ತಾರೆ. ಪ್ರತಿಯೊಬ್ಬ ಸಂಚರಣ ಮೇಲ್ವಿಚಾರಕರು ಸುಮಾರು ಇಪ್ಪತ್ತು ಸಭೆಗಳನ್ನು ಭೇಟಿ ಮಾಡುತ್ತಾರೆ. ಈ ಸಭೆಗಳ ಗುಂಪನ್ನು ಒಂದು ಸರ್ಕಿಟ್‌ ಎಂದು ಕರೆಯಲಾಗುತ್ತದೆ. ಸಂಚರಣ ಮೇಲ್ವಿಚಾರಕರು ತಮ್ಮ ಸರ್ಕಿಟ್‌ ಕೆಳಗೆ ಬರುವ ಸಭೆಗಳನ್ನು ವರ್ಷಕ್ಕೆ ಎರಡಾವರ್ತಿ ಭೇಟಿ ಮಾಡಿ ಒಂದೊಂದು ಸಭೆಯೊಂದಿಗೆ ಒಂದೊಂದು ವಾರ ವ್ಯಯಿಸುತ್ತಾರೆ. ಈ ಮೇಲ್ವಿಚಾರಕರು ಮತ್ತು ಅವರ ಪತ್ನಿಯರು ತಮ್ಮ ಜ್ಞಾನ ಅನುಭವದಿಂದ ನಮ್ಮನ್ನು ಬಹಳವಾಗಿ ಪ್ರೋತ್ಸಾಹಿಸುತ್ತಾರೆ. ಆಬಾಲವೃದ್ಧರೆನ್ನದೆ ಸಭೆಯಲ್ಲಿರುವ ಎಲ್ಲರ ಪರಿಚಯ ಮಾಡಿಕೊಳ್ಳುತ್ತಾರೆ. ಕ್ಷೇತ್ರ ಸೇವೆಯ ಕಾರ್ಯಚಟುವಟಿಕೆಯಲ್ಲಿ ನಮ್ಮೊಂದಿಗೆ ಜೊತೆಗೂಡುತ್ತಾರೆ. ಈ ಮೇಲ್ವಿಚಾರಕರು ಹಿರಿಯರೊಂದಿಗೆ ಪರಿಪಾಲನಾ ಭೇಟಿಗೆ ಹೋಗುತ್ತಾರೆ. ಸಭಾ ಕೂಟ ಹಾಗೂ ಸಮ್ಮೇಳನಗಳಲ್ಲಿ ಹುರಿದುಂಬಿಸುವ ಭಾಷಣ ನೀಡಿ ಸ್ಫೂರ್ತಿ ತುಂಬುತ್ತಾರೆ.—ಅಪೊಸ್ತಲರ ಕಾರ್ಯಗಳು 15:35.

      ಹಿತಾಸಕ್ತಿ ತೋರಿಸುತ್ತಾರೆ. ಸಂಚರಣ ಮೇಲ್ವಿಚಾರಕರಿಗೆ ಸಭೆಯ ಆಧ್ಯಾತ್ಮಿಕ ಸ್ಥಿತಿಗತಿ ಬಗ್ಗೆ ತೀವ್ರ ಅಭಿರುಚಿ ಇದೆ. ಹಿರಿಯರು ಮತ್ತು ಶುಶ್ರೂಷಾ ಸೇವಕರೊಂದಿಗೆ ಸಭೆ ಸೇರಿ ಸಭಾ ಜವಾಬ್ದಾರಿಗಳನ್ನು ನಿರ್ವಹಿಸಲು ಬೇಕಾದ ಉಪಯುಕ್ತ ಸಲಹೆಗಳನ್ನು ನೀಡುತ್ತಾರೆ. ಹಾಗೆಯೇ ಸಭೆಯ ಪ್ರಗತಿಯನ್ನು ಪರಿಶೀಲಿಸುತ್ತಾರೆ. ಸುವಾರ್ತೆ ಸಾರುವುದರಲ್ಲಿ ಯಶಸ್ಸು ಕಾಣಲು ಪಯನೀಯರರಿಗೆ ಸಹಾಯ ಮಾಡುತ್ತಾರೆ. ಸಭೆಗೆ ಹೊಸದಾಗಿ ಬರುವವರ ಪರಿಚಯ ಮಾಡಿಕೊಂಡು ಅವರ ಆಧ್ಯಾತ್ಮಿಕ ಪ್ರಗತಿಯನ್ನು ತಿಳಿಯಲು ಆಸಕ್ತರಾಗಿರುತ್ತಾರೆ. ಈ ಪ್ರೀತಿಯ ಮೇಲ್ವಿಚಾರಕರು ನಮ್ಮ “ಹಿತಾಸಕ್ತಿಗಾಗಿರುವ ಜೊತೆ ಕೆಲಸಗಾರ”ರಾಗಿದ್ದು ದೇವರ ಸೇವೆಗೆ ತಮ್ಮನ್ನು ನೀಡಿಕೊಂಡಿದ್ದಾರೆ. (2 ಕೊರಿಂಥ 8:23) ಅವರ ನಂಬಿಕೆ ಭಕ್ತಿ ಅನುಕರಣಾಯೋಗ್ಯ.—ಇಬ್ರಿಯ 13:7.

      • ಸಂಚರಣ ಮೇಲ್ವಿಚಾರಕರು ಸಭೆಗಳಿಗೆ ಭೇಟಿ ನೀಡುವ ಉದ್ದೇಶವೇನು?

      • ಅವರ ಭೇಟಿಯಿಂದ ನೀವು ಯಾವ ಪ್ರಯೋಜನ ಪಡೆಯುವಿರಿ?

      ಇನ್ನಷ್ಟು ತಿಳಿಯಲು . . .

      ಸಂಚರಣ ಮೇಲ್ವಿಚಾರಕರ ಭೇಟಿಯ ದಿನಾಂಕವನ್ನು ಕ್ಯಾಲೆಂಡರ್‌ನಲ್ಲಿ ಗುರುತು ಹಾಕಿ. ಆ ವಾರದಲ್ಲಿ ಸಭಾ ಕೂಟಗಳಿಗೆ ಹಾಜರಾಗಿ ಅವರ ಭಾಷಣಗಳನ್ನು ಆಲಿಸಿ. ಅವರನ್ನು ಅಥವಾ ಅವರ ಪತ್ನಿಯನ್ನು ಬೈಬಲ್‌ ಕಲಿಕೆಗೆ ಆಮಂತ್ರಿಸುವಂತೆ ನಿಮ್ಮ ಬೈಬಲ್‌ ಟೀಚರ್‌ಗೆ ಹೇಳಿ. ಹೀಗೆ ಅವರ ಇನ್ನಷ್ಟು ಪರಿಚಯ ಮಾಡಿಕೊಳ್ಳಿ.

  • ವಿಪತ್ತಿನ ಸಮಯದಲ್ಲಿ ನಾವು ಹೇಗೆ ಸ್ಪಂದಿಸುತ್ತೇವೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 18

      ವಿಪತ್ತಿನ ಸಮಯದಲ್ಲಿ ನಾವು ಹೇಗೆ ಸ್ಪಂದಿಸುತ್ತೇವೆ?

      ಡೊಮಿನಿಕನ್‌ ಗಣರಾಜ್ಯದಲ್ಲಿ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹಂಚುತ್ತಿರುವ ಯೆಹೋವನ ಸಾಕ್ಷಿಗಳು

      ಡೊಮಿನಿಕನ್‌ ಗಣರಾಜ್ಯ

      ಜಪಾನಿನಲ್ಲಿ ರಾಜ್ಯ ಸಭಾಗೃಹವನ್ನು ನಿರ್ಮಿಸುತ್ತಿರುವ ಸ್ವಯಂ ಸೇವಕರು

      ಜಪಾನ್‌

      ಹೈಟಿಯಲ್ಲಿ ನೈಸರ್ಗಿಕ ವಿಪತ್ತಿಗೆ ಗುರಿಯಾದ ಒಬ್ಬರನ್ನು ಯೆಹೋವನ ಸಾಕ್ಷಿಯೊಬ್ಬರು ಸಂತೈಸುತ್ತಿರುವುದು

      ಹೈಟಿ

      ವಿಪತ್ತು ಎಲ್ಲೇ ಸಂಭವಿಸಲಿ ಯೆಹೋವನ ಸಾಕ್ಷಿಗಳು ತಕ್ಷಣ ಪರಿಹಾರ ಕಾರ್ಯದಲ್ಲಿ ತೊಡಗಿ ಸಂತ್ರಸ್ತ ಸೋದರ ಸೋದರಿಯರಿಗೆ ನೆರವು ನೀಡುತ್ತಾರೆ. ನಮ್ಮಲ್ಲಿ ಪರಸ್ಪರ ನಿಜವಾದ ಪ್ರೀತಿ ಇದೆ ಎನ್ನುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ. (ಯೋಹಾನ 13:34, 35; 1 ಯೋಹಾನ 3:17, 18) ವಿಪತ್ತಿನ ಸಮಯದಲ್ಲಿ ನಾವು ಪರಸ್ಪರ ಹೇಗೆ ನೆರವಾಗುತ್ತೇವೆ?

      ಹಣಕಾಸಿನ ನೆರವು ನೀಡುತ್ತೇವೆ. ಒಂದನೇ ಶತಮಾನದಲ್ಲಿ ಯೂದಾಯ ಎಂಬಲ್ಲಿ ದೊಡ್ಡ ಕ್ಷಾಮ ಉಂಟಾದಾಗ ಅಂತಿಯೋಕ್ಯದಲ್ಲಿದ್ದ ಕ್ರೈಸ್ತರು ತಮ್ಮ ಆ ಸಹೋದರರಿಗೆ ಹಣಕಾಸಿನ ನೆರವು ನೀಡಿದರು. (ಅಪೊಸ್ತಲರ ಕಾರ್ಯಗಳು 11:27-30) ಅದೇ ರೀತಿ ನಮ್ಮ ಸಹೋದರರು ಎಲ್ಲೇ ಇರಲಿ ವಿಪತ್ತಿಗೆ ಗುರಿಯಾಗಿದ್ದಾರೆ ಎಂದು ಕೇಳಿದೊಡನೆ ನಾವು ನಮ್ಮ ಸಭೆಯ ಮುಖಾಂತರ ಪರಿಹಾರ ಸಾಮಗ್ರಿ ಕಳುಹಿಸಿ ಅವರ ಕೊರತೆ ನೀಗಿಸಲು ನೆರವಾಗುತ್ತೇವೆ.—2 ಕೊರಿಂಥ 8:13-15.

      ಉಪಯುಕ್ತ ನೆರವು ನೀಡುತ್ತೇವೆ. ವಿಪತ್ತು ಸಂಭವಿಸುವಲ್ಲಿ ಹಿರಿಯರು ಕೂಡಲೇ ಆ ಪ್ರದೇಶದಲ್ಲಿರುವ ಸೋದರ ಸೋದರಿಯರೆಲ್ಲ ಸುರಕ್ಷಿತರಾಗಿದ್ದಾರಾ ಎಂದು ಖಚಿತಪಡಿಸಿಕೊಳ್ಳುತ್ತಾರೆ. ವಿಪತ್ತು ಪರಿಹಾರ ಕಮಿಟಿಯು ಆಹಾರ, ಕುಡಿಯುವ ನೀರು, ಬಟ್ಟೆಬರೆ, ಸೂರು ಹಾಗೂ ವೈದ್ಯಕೀಯ ನೆರವು ಒದಗಿಸಲು ಏರ್ಪಾಡು ಮಾಡುತ್ತದೆ. ಯೆಹೋವನ ಸಾಕ್ಷಿಗಳು ಸ್ವಂತ ವೆಚ್ಚದಲ್ಲಿ ಆ ಪ್ರದೇಶಗಳಿಗೆ ಹೋಗಿ ಪರಿಹಾರ ಕಾರ್ಯದಲ್ಲಿ ತೊಡಗುತ್ತಾರೆ. ಮನೆಗಳನ್ನು ರಾಜ್ಯ ಸಭಾಗೃಹಗಳನ್ನು ದುರಸ್ತಿ ಮಾಡುತ್ತಾರೆ. ಒಗ್ಗಟ್ಟು ಸಹಕಾರದಿಂದ ಕೆಲಸ ಮಾಡುವುದು ಹೇಗೆಂದು ನಮ್ಮ ಸಂಘಟನೆ ನಮಗೆ ಕಲಿಸಿರುವುದರಿಂದ ವಿಪತ್ತಿನ ಸಮಯದಲ್ಲಿ ತಕ್ಷಣವೇ ಪರಿಹಾರ ಕಾರ್ಯಕ್ಕಿಳಿಯಲು ಸುಲಭ. “ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವ” ಸಹೋದರರಿಗೆ ಮಾತ್ರವಲ್ಲ ನಾವು ಬೇರೆ ಧರ್ಮದವರಿಗೂ ಸಹಾಯಹಸ್ತ ಚಾಚುತ್ತೇವೆ.—ಗಲಾತ್ಯ 6:10.

      ಆಧ್ಯಾತ್ಮ ಹಾಗೂ ಭಾವನಾತ್ಮ ನೆರವು ನೀಡುತ್ತೇವೆ. ವಿಪತ್ತಿಗೆ ತುತ್ತಾಗಿರುವವರ ಮನವು ಸಾಂತ್ವನ ನೆಮ್ಮದಿಗೆ ಹಾತೊರೆಯುತ್ತಿರುತ್ತದೆ. ಯೆಹೋವ ದೇವರು “ಸಕಲ ಸಾಂತ್ವನ” ಒದಗಿಸುವ ದೇವರಾಗಿದ್ದಾನೆ. ನಮಗೆ ಬೇಕಾದ ಮನೋಬಲವನ್ನು ಆತನು ಒದಗಿಸುತ್ತಾನೆ. (2 ಕೊರಿಂಥ 1:3, 4) ಹಾಗಾಗಿ ಸಂತ್ರಸ್ತರಿಗೆ ನಾವು ಬೈಬಲಿನಿಂದ ದೇವರ ಸಾಂತ್ವನದ ನುಡಿಗಳನ್ನು ತಿಳಿಸುತ್ತೇವೆ. ಕಷ್ಟನೋವನ್ನು ಉಂಟುಮಾಡುವ ಎಲ್ಲಾ ವಿಷಯಗಳನ್ನು ದೇವರ ರಾಜ್ಯ ಶೀಘ್ರದಲ್ಲೇ ಇಲ್ಲವಾಗಿಸುತ್ತದೆ ಎಂಬ ಸತ್ಯವನ್ನು ತಿಳಿಸುತ್ತೇವೆ.—ಪ್ರಕಟನೆ 21:4.

      • ತಕ್ಷಣವೇ ಪರಿಹಾರ ಕಾರ್ಯಕ್ಕಿಳಿಯಲು ಯೆಹೋವನ ಸಾಕ್ಷಿಗಳಿಂದ ಹೇಗೆ ಸಾಧ್ಯವಾಗಿದೆ?

      • ಸಂತ್ರಸ್ತರಿಗೆ ಹೇಗೆ ಸಾಂತ್ವನ ನೀಡುತ್ತೇವೆ?

  • ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ಯಾರು?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 19

      ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ಯಾರು?

      ಯೇಸು ತನ್ನ ಶಿಷ್ಯರ ಹತ್ತಿರ ಮಾತಾಡುತ್ತಿದ್ದಾನೆ
      ಬೈಬಲ್‌ ಆಧರಿತವಾದ ಪುಸ್ತಕವನ್ನು ಯೆಹೋವನ ಸಾಕ್ಷಿಯೊಬ್ಬರು ಅಧ್ಯಯನ ಮಾಡುತ್ತಿದ್ದಾರೆ

      ಆಧ್ಯಾತ್ಮಿಕ ಆಹಾರದ ಪ್ರಯೋಜನ ಅಪಾರ

      ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಇಬ್ಬರು ಸದಸ್ಯರು

      ಯೇಸು ತಾನು ಸಾವನ್ನಪ್ಪುವ ಕೆಲವು ದಿನಗಳ ಮುಂಚೆ ಪೇತ್ರ, ಯಾಕೋಬ, ಯೋಹಾನ ಮತ್ತು ಅಂದ್ರೆಯ ಎಂಬ ತನ್ನ ನಾಲ್ವರು ಶಿಷ್ಯರ ಜೊತೆ ಮಾತುಕತೆ ನಡೆಸಿದನು. ಅವರಿಗೆ ದುಷ್ಟ ಲೋಕದ ಅಂತ್ಯ ಯಾವಾಗ ಎಂದು ಸೂಚನೆ ನೀಡುವಾಗ ಒಂದು ಪ್ರಶ್ನೆ ಕೇಳಿದನು. “ತನ್ನ ಮನೆಯವರಿಗೆ ತಕ್ಕ ಸಮಯಕ್ಕೆ ಆಹಾರವನ್ನು ಕೊಡಲಿಕ್ಕಾಗಿ ಯಜಮಾನನು ನೇಮಿಸಿದ ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳು ನಿಜವಾಗಿಯೂ ಯಾರು?” (ಮತ್ತಾಯ 24:3, 45; ಮಾರ್ಕ 13:3, 4) ಅದು ಕೇವಲ ಪ್ರಶ್ನೆ ಆಗಿರಲಿಲ್ಲ. ಯಜಮಾನನಾದ ಯೇಸು ನೀಡಿದ ಭರವಸೆಯಾಗಿತ್ತು. ಕಡೇದಿವಸಗಳಲ್ಲಿ ತನ್ನ ಅನುಯಾಯಿಗಳಿಗೆ ಆಧ್ಯಾತ್ಮಿಕ ಆಹಾರ ಒದಗಿಸಲು ಕೆಲವರನ್ನು ನೇಮಿಸುವುದಾಗಿ ಯೇಸು ಹೇಳಿದನು. ಅವರನ್ನೇ “ಆಳು” ಎಂದನು. ಆ “ಆಳು” ಯಾರು?

      ಯೇಸುವಿನ ಅಭಿಷಿಕ್ತ ಹಿಂಬಾಲಕರ ಒಂದು ಚಿಕ್ಕ ಗುಂಪು. ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ ಈ ‘ಆಳಾಗಿ’ ಕಾರ್ಯನಿರ್ವಹಿಸುತ್ತಿದೆ. ಈ ಆಳು ಸಹಆರಾಧಕರಿಗೆ ಆಧ್ಯಾತ್ಮಿಕ ಆಹಾರ ಒದಗಿಸುವುದರಲ್ಲಿ ಕ್ರಿಯಾಶೀಲ. ನಮ್ಮ ಪಾಲಿನ ಆಧ್ಯಾತ್ಮಿಕ ಆಹಾರವನ್ನು ತಕ್ಕ ಸಮಯಕ್ಕೆ ಹೇರಳವಾಗಿ ಅಳೆದುಕೊಡುವುದರಿಂದ ನಾವು ಸದಾ ಆ ಆಳಿನ ಮೇಲೆ ಅವಲಂಬಿತರು.—ಲೂಕ 12:42.

      ದೇವರ ಭೂಪರಿವಾರವನ್ನು ನೋಡಿಕೊಳ್ಳುತ್ತದೆ. (1 ತಿಮೊಥೆಯ 3:15) ಯೆಹೋವ ದೇವರ ಸಂಘಟನೆಯ ಭೂ ವ್ಯವಹಾರಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಯೇಸು ಈ ನಂಬಿಗಸ್ತ ಆಳಿಗೆ ಒಪ್ಪಿಸಿದ್ದಾನೆ. ಸುವಾರ್ತೆ ಸಾರುವ ಕೆಲಸ, ಸಭೆಯ ಮೂಲಕ ನಮಗೆ ಉಪದೇಶ ನೀಡುವ ಕಾರ್ಯ ಹಾಗೂ ಸಂಘಟನೆಯ ಎಲ್ಲಾ ಆಸ್ತಿಪಾಸ್ತಿಗಳ ಉಸ್ತುವಾರಿಯನ್ನು ಆಳು ನೋಡಿಕೊಳ್ಳುತ್ತದೆ. ಹೀಗೆ ಇಂದು ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳು ನಮಗೆ ಬೇಕಾದ ಆಧ್ಯಾತ್ಮಿಕ ಆಹಾರವನ್ನು ಸಾಹಿತ್ಯ, ಸಭಾ ಕೂಟ, ಸಮ್ಮೇಳನಗಳ ಮುಖೇನ ಸಮಯಕ್ಕೆ ಸರಿಯಾಗಿ ಒದಗಿಸುತ್ತಿದೆ.

      ಈ ಆಳು ನಿಜವಾಗಲೂ ನಂಬಿಗಸ್ತ. ಏಕೆಂದರೆ ಬೈಬಲ್‌ ಹೇಳುವುದನ್ನು ಹಾಗೂ ಸುವಾರ್ತೆ ಸಾರುವುದನ್ನು ನಿಷ್ಠೆಯಿಂದ ಮಾಡುತ್ತದೆ. ಅದೇ ರೀತಿ ವಿವೇಚನೆಯುಳ್ಳ ಆಳು. ಏಕೆಂದರೆ ಕ್ರಿಸ್ತನು ಅವರ ವಶಕ್ಕೆ ಒಪ್ಪಿಸಿರುವ ಸಕಲವನ್ನೂ ಜಾಣ್ಮೆಯಿಂದ ನಿರ್ವಹಿಸಿ ನೋಡಿಕೊಳ್ಳುತ್ತದೆ. (ಅಪೊಸ್ತಲರ ಕಾರ್ಯಗಳು 10:42) ಈ ಆಳು ಮಾಡುತ್ತಿರುವ ಕೆಲಸವನ್ನು ದೇವರು ಆಶೀರ್ವದಿಸಿ ಹೇರಳ ಆಧ್ಯಾತ್ಮಿಕ ಆಹಾರ ಒದಗಿಸಲು ಸಹಾಯ ಮಾಡುತ್ತಿದ್ದಾನೆ.—ಯೆಶಾಯ 60:22; 65:13.

      • ತನ್ನ ಅನುಯಾಯಿಗಳಿಗೆ ಆಧ್ಯಾತ್ಮಿಕ ಆಹಾರ ಒದಗಿಸಲು ಯೇಸು ಯಾರನ್ನು ನೇಮಿಸಿದನು?

      • ಈ ಆಳನ್ನು ನಂಬಿಗಸ್ತನೂ ವಿವೇಚನೆಯುಳ್ಳವನೂ ಎಂದು ಹೇಳುವುದೇಕೆ?

  • ಆಡಳಿತ ಮಂಡಲಿಯ ಕಾರ್ಯವೇನು?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 20

      ಆಡಳಿತ ಮಂಡಲಿಯ ಕಾರ್ಯವೇನು?

      ಒಂದನೇ ಶತಮಾನದ ಆಡಳಿತ ಮಂಡಲಿ

      ಒಂದನೇ ಶತಮಾನದ ಆಡಳಿತ ಮಂಡಲಿ

      ಒಂದನೇ ಶತಮಾನದ ಕ್ರೈಸ್ತರು ಆಡಳಿತ ಮಂಡಲಿಯಿಂದ ಬಂದ ಪತ್ರವನ್ನು ಓದುತ್ತಿದ್ದಾರೆ

      ಆಡಳಿತ ಮಂಡಲಿಯ ಪತ್ರವನ್ನು ಸಭೆಯಲ್ಲಿ ಓದುತ್ತಿರುವುದು

      ಒಂದನೇ ಶತಮಾನದಲ್ಲಿ, “ಯೆರೂಸಲೇಮಿನಲ್ಲಿದ್ದ ಅಪೊಸ್ತಲರ ಮತ್ತು ಹಿರೀಪುರುಷರ” ಒಂದು ಚಿಕ್ಕ ಗುಂಪು ಆಡಳಿತ ಮಂಡಲಿಯಾಗಿ ಕಾರ್ಯನಿರ್ವಹಿಸಿತು. ಆ ಸಮಯದಲ್ಲಿದ್ದ ಸಭೆಗಳಲ್ಲಿ ಅಭಿಷಿಕ್ತರೇ ಇದ್ದರಾದರೂ ಅವರೆಲ್ಲರ ಪರವಾಗಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದದ್ದು ಆಡಳಿತ ಮಂಡಲಿ. (ಅಪೊಸ್ತಲರ ಕಾರ್ಯಗಳು 15:2) ಆಡಳಿತ ಮಂಡಲಿಯ ಸಹೋದರರು ಬೈಬಲನ್ನು ಪರಿಶೀಲಿಸಿ, ಚರ್ಚಿಸಿ, ದೇವರ ಪವಿತ್ರಾತ್ಮ ಶಕ್ತಿಯ ಮಾರ್ಗದರ್ಶನೆ ಏನೆಂದು ಕಂಡುಕೊಂಡು ಒಮ್ಮತದ ನಿರ್ಣಯ ತೆಗೆದುಕೊಳ್ಳುತ್ತಿದ್ದರು. (ಅಪೊಸ್ತಲರ ಕಾರ್ಯಗಳು 15:25) ಅದೇ ನಮೂನೆಯನ್ನು ಇಂದು ಸಹ ಅನುಕರಿಸಲಾಗುತ್ತಿದೆ.

      ದೇವರು ತನ್ನ ಇಷ್ಟವನ್ನು ನೆರವೇರಿಸಲು ಆಡಳಿತ ಮಂಡಲಿಯನ್ನು ಉಪಯೋಗಿಸುತ್ತಾನೆ. ಆಡಳಿತ ಮಂಡಲಿಯ ಸಹೋದರರು ದೇವರ ವಾಕ್ಯವಾದ ಬೈಬಲಿಗೆ ಬಹಳ ಮಹತ್ವ ನೀಡುತ್ತಾರೆ. ಅವರು ಆಧ್ಯಾತ್ಮ ವಿಷಯಗಳನ್ನು ನಿರ್ವಹಿಸುವುದರಲ್ಲಿ ಪ್ರವೀಣರಾಗಿದ್ದಾರೆ. ಭೂವ್ಯಾಪಕವಾಗಿ ಹರಡಿಕೊಂಡಿರುವ ಸಹೋದರರ ಬಳಗದ ಅಗತ್ಯಗಳನ್ನು ಪೂರೈಸುವ ಸಲುವಾಗಿ ನಿರ್ಣಯಗಳನ್ನು ತೆಗೆದುಕೊಳ್ಳಲು ಪ್ರತಿವಾರ ಸಭೆಸೇರುತ್ತಾರೆ. ಒಂದನೇ ಶತಮಾನದಲ್ಲಿದ್ದ ಪ್ರಕಾರವೇ ಇಂದು ಸಹ ಬೈಬಲ್‌ ಸಲಹೆಗಳನ್ನು ಪತ್ರಗಳ ಮೂಲಕ ಅಥವಾ ಸಂಚರಣ ಮೇಲ್ವಿಚಾರಕರ ಹಾಗೂ ಮತ್ತಿತರರ ಮೂಲಕ ಸಭೆಗಳಿಗೆ ತಿಳಿಸುತ್ತಾರೆ. ದೇವಜನರು ಏಕಮನಸ್ಸಿನಿಂದ ಕ್ರಿಯೆಗೈಯುತ್ತಾ ಐಕ್ಯರಾಗಿರಲು ಇದು ನೆರವಾಗುತ್ತದೆ. (ಅಪೊಸ್ತಲರ ಕಾರ್ಯಗಳು 16:4, 5) ಆಡಳಿತ ಮಂಡಲಿ ಆಧ್ಯಾತ್ಮಿಕ ಆಹಾರವನ್ನು ಸಿದ್ಧಗೊಳಿಸುವ ಉಸ್ತುವಾರಿ ವಹಿಸುತ್ತದೆ. ದೇವರ ರಾಜ್ಯದ ಸಂದೇಶವನ್ನು ಸಾರಲು ಆದ್ಯತೆ ನೀಡುವಂತೆ ಸಭೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಹಿರಿಯರ ಮತ್ತು ಶುಶ್ರೂಷಾ ಸೇವಕರ ನೇಮಕಾತಿಯ ಉಸ್ತುವಾರಿಯನ್ನು ಸಹ ನೋಡಿಕೊಳ್ಳುತ್ತದೆ.

      ಪವಿತ್ರಾತ್ಮದ ಮಾರ್ಗದರ್ಶನೆಗೆ ಅನುಸಾರವಾಗಿ ಕಾರ್ಯನಿರ್ವಹಿಸುತ್ತದೆ. ಆಡಳಿತ ಮಂಡಲಿಯ ಸಹೋದರರು ಪ್ರತಿಯೊಂದು ಕಾರ್ಯವನ್ನು ವಿಶ್ವಪರಮಾಧಿಕಾರಿ ಯೆಹೋವ ದೇವರ ಹಾಗೂ ಸಭೆಯ ಶಿರಸ್ಸಾಗಿರುವ ಯೇಸುವಿನ ಮಾರ್ಗದರ್ಶನೆಯ ಮೇರೆಗೆ ಮಾಡುತ್ತಾರೆ. (1 ಕೊರಿಂಥ 11:3; ಎಫೆಸ 5:23) ಆಡಳಿತ ಮಂಡಲಿಯ ಸಹೋದರರು ತಮ್ಮನ್ನು ದೇವಜನರ ನಾಯಕರೆಂದು ಭಾವಿಸುವುದಿಲ್ಲ. ಉಳಿದ ಅಭಿಷಿಕ್ತ ಸಹೋದರರೊಂದಿಗೆ ಜೊತೆಗೂಡಿ ಇವರು ಸಹ ಕುರಿಮರಿ ಯೇಸು ಎಲ್ಲಿ ಹೋದರೂ “ಅವನನ್ನು ಹಿಂಬಾಲಿಸುತ್ತಾ ಹೋಗುತ್ತಾರೆ.” (ಪ್ರಕಟನೆ 14:4) ಆಡಳಿತ ಮಂಡಲಿಗಾಗಿ ನಾವು ಮಾಡುವ ಪ್ರಾರ್ಥನೆಗಳಿಗೆ ಆ ಮಂಡಲಿಯ ಸಹೋದರರು ಸದಾ ಕೃತಜ್ಞರು.

      • ಒಂದನೇ ಶತಮಾನದ ಆಡಳಿತ ಮಂಡಲಿಯ ಸದಸ್ಯರು ಯಾರಾಗಿದ್ದರು?

      • ಆಡಳಿತ ಮಂಡಲಿ ಇಂದು ದೇವರ ಮಾರ್ಗದರ್ಶನೆ ಪಡೆದುಕೊಳ್ಳುವ ವಿಧವನ್ನು ವಿವರಿಸಿ.

      ಇನ್ನಷ್ಟು ತಿಳಿಯಲು . . .

      ಒಂದನೇ ಶತಮಾನದ ಆಡಳಿತ ಮಂಡಲಿ ಬೈಬಲ್‌ ಹಾಗೂ ಪವಿತ್ರಾತ್ಮದ ನೆರವಿನಿಂದ ಸಮಸ್ಯೆಯೊಂದನ್ನು ಹೇಗೆ ಬಗೆಹರಿಸಿತು ಎಂಬ ಸ್ವಾರಸ್ಯಕರ ವಿವರಗಳನ್ನು ಅಪೊಸ್ತಲರ ಕಾರ್ಯಗಳು 15⁠ನೇ ಅಧ್ಯಾಯದ 1⁠ರಿಂದ 35 ವಚನಗಳನ್ನು ಓದಿ ತಿಳಿದುಕೊಳ್ಳಿ.

  • “ಬೆತೆಲ್‌” ಅಂದರೇನು?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 21

      “ಬೆತೆಲ್‌” ಅಂದರೇನು?

      ಬೆತೆಲಿನ ಕಲಾ ವಿಭಾಗದಲ್ಲಿ ಇಬ್ಬರು ಯೆಹೋವನ ಸಾಕ್ಷಿಗಳು ಕೆಲಸ ಮಾಡುತ್ತಿದ್ದಾರೆ

      ಕಲಾ ವಿಭಾಗ, ಅಮೆರಿಕ

      ಒಬ್ಬ ಯೆಹೋವನ ಸಾಕ್ಷಿ ಜರ್ಮನಿಯ ಬೆತೆಲಿನ ಮುದ್ರಣಾಲಯದಲ್ಲಿ ಕೆಲಸ ಮಾಡುತ್ತಿರುವುದು

      ಜರ್ಮನಿ

      ಒಬ್ಬ ಯೆಹೋವನ ಸಾಕ್ಷಿ ಕೀನ್ಯದ ಬೆತೆಲಿನ ಲಾಂಡ್ರಿಯಲ್ಲಿ ಕೆಲಸ ಮಾಡುತ್ತಿರುವುದು

      ಕೀನ್ಯ

      ಕೊಲೊಂಬಿಯಾದ ಬೆತೆಲಿನಲ್ಲಿ ಊಟಕ್ಕೆ ಸಿದ್ಧ ಮಾಡುತ್ತಿದ್ದಾರೆ

      ಕೊಲಂಬಿಯ

      ಬೆತೆಲ್‌ ಎನ್ನುವುದು ಹೀಬ್ರು ಭಾಷೆಯ ಪದವಾಗಿದ್ದು “ದೇವರ ಮನೆ” ಎಂದು ಅರ್ಥ. (ಆದಿಕಾಂಡ 28:17, 19) ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸುಗಳನ್ನು ಬೆತೆಲ್‌ ಎಂದು ಕರೆಯಲಾಗುತ್ತದೆ. ಅದು ಆಯಾ ದೇಶಗಳಲ್ಲಿ ಸುವಾರ್ತೆ ಸಾರುವ ಕೆಲಸದ ಜವಾಬ್ದಾರಿ ವಹಿಸುತ್ತದೆ. ನಮ್ಮ ಕೇಂದ್ರ ಕಾರ್ಯಾಲಯ ಅಮೆರಿಕದ ನ್ಯೂ ಯಾರ್ಕ್‌ನಲ್ಲಿದೆ. ಅಲ್ಲಿಂದ ಆಡಳಿತ ಮಂಡಲಿ ಭೂಮಿಯಾದ್ಯಂತ ಇರುವ ಬ್ರಾಂಚ್‌ ಆಫೀಸ್‌ಗಳ ಉಸ್ತುವಾರಿ ಮಾಡುತ್ತದೆ. ಬೆತೆಲ್‌ನಲ್ಲಿ ಸೇವೆ ಮಾಡುತ್ತಿರುವವರನ್ನು ಬೆತೆಲ್‌ ಕುಟುಂಬದವರು ಎಂದು ಕರೆಯಲಾಗುತ್ತದೆ. ಅವರೆಲ್ಲರೂ ಬೇರೆಬೇರೆ ಹಿನ್ನೆಲೆಗಳಿಂದ ಬಂದಿರುವುದಾದರೂ ಒಂದೇ ಕುಟುಂಬದವರಂತೆ ಪ್ರೀತಿ ವಾತ್ಸಲ್ಯ ಐಕ್ಯತೆಯಿಂದ ಇರುತ್ತಾರೆ. ಒಗ್ಗಟ್ಟಿನಿಂದ ಕೆಲಸ ಮಾಡುತ್ತಾರೆ. ಊಟದ ವೇಳೆಯಲ್ಲಿ ಒಟ್ಟುಗೂಡಿ ಆನಂದಿಸುತ್ತಾರೆ. ಬೈಬಲ್‌ ವಿಷಯಗಳನ್ನು ಜೊತೆಗೂಡಿ ಕಲಿಯುತ್ತಾರೆ.—ಕೀರ್ತನೆ 133:1.

      ಬೆತೆಲ್‌ ಎನ್ನುವುದು ಅಪೂರ್ವ ಸ್ಥಳವಾಗಿದ್ದು ತ್ಯಾಗಮಯ ಜೀವನ ಎದ್ದುಕಾಣುತ್ತದೆ. ಬೆತೆಲ್‌ನಲ್ಲಿ ಸೇವೆ ಮಾಡುವವರು ದೇವರ ಇಷ್ಟವನ್ನು ಮಾಡಲು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. (ಮತ್ತಾಯ 6:33) ಖರ್ಚಿಗಾಗಿ ಸ್ವಲ್ಪ ಹಣ ಕೊಡಲಾಗುತ್ತದೆ ವಿನಾ ಅವರಿಗೆ ಸಂಬಳವೆನ್ನುವುದು ಇರುವುದಿಲ್ಲ. ಆದರೆ ಊಟ ವಸತಿ ಮುಂತಾದ ಏರ್ಪಾಡು ಇದೆ. ಅವರಿಗೆ ನಾನಾ ಕೆಲಸಗಳನ್ನು ವಹಿಸಲಾಗುತ್ತದೆ. ಆಫೀಸ್‌, ಅಡುಗೆಮನೆ, ಉಪಹಾರ ಕೊಠಡಿ, ಮುದ್ರಣಾಲಯ, ಬಟ್ಟೆ ಒಗೆಯುವ ವಿಭಾಗ, ದುರಸ್ತಿಕಾರ್ಯ, ಶುಚಿಕಾರ್ಯ ಹೀಗೆ ಎಲ್ಲಾ ಕೆಲಸ ಸಮಾನವೆಂದು ಭಾವಿಸಿ ಮಾಡುತ್ತಾರೆ.

      ಸುವಾರ್ತೆ ಸಾರುವ ಕಾರ್ಯಚಟುವಟಿಕೆಯ ಕೇಂದ್ರಸ್ಥಾನ. ಬೆತೆಲ್‌ನ ಮುಖ್ಯ ಗುರಿ ಬೈಬಲ್‌ ಸತ್ಯಗಳನ್ನು ಆದಷ್ಟು ಜನರಿಗೆ ಮುಟ್ಟಿಸುವುದು. ಉದಾಹರಣೆಗೆ ಈ ಕಿರುಹೊತ್ತಗೆಯನ್ನು ತೆಗೆದುಕೊಳ್ಳಿ. ಆಡಳಿತ ಮಂಡಲಿಯ ಮಾರ್ಗದರ್ಶನದಡಿಯಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ರಚಿಸಲಾದ ಇದನ್ನು ಭೂಮಿಯಾದ್ಯಂತ ಇರುವ ನೂರಾರು ಅನುವಾದಕರಿಗೆ ಕಂಪ್ಯೂಟರ್‌ಗಳ ಮೂಲಕ ರವಾನಿಸಲಾಯಿತು. ಆಯಾ ಭಾಷೆಗೆ ಅನುವಾದಗೊಂಡ ನಂತರ ಬೆತೆಲ್‌ ಮುದ್ರಣಾಲಯದಲ್ಲಿ ಅಚ್ಚಾಗಿ 1,10,000ಕ್ಕೂ ಹೆಚ್ಚು ಸಭೆಗಳಿಗೆ ಕಳುಹಿಸಲಾಯಿತು. ಈ ಕಾರ್ಯದಲ್ಲಿ ಹೆಜ್ಜೆ ಹೆಜ್ಜೆಗೂ ಬೆತೆಲ್‌ ಕುಟುಂಬದವರು ಆಸ್ಥೆ ವಹಿಸಿ ಸುವಾರ್ತೆ ಸಾರುವ ಅತೀ ತುರ್ತಿನ ಕೆಲಸಕ್ಕೆ ಬೆಂಬಲ ನೀಡಿದ್ದಾರೆ. —ಮಾರ್ಕ 13:10.

      • ಬೆತೆಲ್‌ನಲ್ಲಿ ಯಾರು ಸೇವೆ ಸಲ್ಲಿಸುತ್ತಾರೆ ಮತ್ತು ಅವರಿಗೆ ಯಾವ ಸೌಲಭ್ಯ ಒದಗಿಸಲಾಗುತ್ತದೆ?

      • ಯಾವ ತುರ್ತಿನ ಕೆಲಸಕ್ಕೆ ಬೆತೆಲ್‌ ಬೆಂಬಲ ನೀಡುತ್ತದೆ?

  • ಬ್ರಾಂಚ್‌ ಆಫೀಸ್‌ನಲ್ಲಿ ಏನೆಲ್ಲ ಕೆಲಸಕಾರ್ಯ ನಡೆಯುತ್ತದೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 22

      ಬ್ರಾಂಚ್‌ ಆಫೀಸ್‌ನಲ್ಲಿ ಏನೆಲ್ಲ ಕೆಲಸಕಾರ್ಯ ನಡೆಯುತ್ತದೆ?

      ಸಾಲೊಮನ್‌ ದ್ವೀಪಗಳ ಬ್ರಾಂಚ್‌ ಆಫೀಸಿನಲ್ಲಿ ಕೆಲವರು ಕೆಲಸಕಾರ್ಯಗಳನ್ನು ಸಂಘಟಿಸುತ್ತಿರುವುದು

      ಸಾಲೊಮನ್‌ ದ್ವೀಪಗಳು

      ಕೆನಡದ ಬ್ರಾಂಚ್‌ ಆಫೀನಲ್ಲಿ ಒಬ್ಬ ಯೆಹೋವನ ಸಾಕ್ಷಿ ಕೆಲಸಮಾಡುತ್ತಿರುವುದು

      ಕೆನಡ

      ಸಾಹಿತ್ಯ ರವಾನೆಯ ಟ್ರಕ್‌

      ದಕ್ಷಿಣ ಆಫ್ರಿಕ

      ಬೆತೆಲ್‌ ಕುಟುಂಬದ ಸದಸ್ಯರು ಬ್ರಾಂಚ್‌ ಆಫೀಸ್‌ನಲ್ಲಿ ಅನುವಾದ, ಮುದ್ರಣ, ಸಾಹಿತ್ಯ ರವಾನೆ, ಆಡಿಯೋ ವಿಡಿಯೋ ಮುಂತಾದ ನಾನಾ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಅವರು ಸಲ್ಲಿಸುವ ಸೇವೆ ಆ ಬ್ರಾಂಚ್‌ ಆಫೀಸ್‌ನ ವ್ಯಾಪ್ತಿಯಲ್ಲಿ ಜರುಗುವ ಸುವಾರ್ತೆ ಸಾರುವ ಕೆಲಸಕ್ಕೆ ಬೆಂಬಲ ನೀಡುತ್ತದೆ.

      ಬ್ರಾಂಚ್‌ ಕಮಿಟಿಯ ಉಸ್ತುವಾರಿ. ಆಯಾ ಬ್ರಾಂಚ್‌ ಆಫೀಸ್‌ನ ಉಸ್ತುವಾರಿಯನ್ನು ಆಡಳಿತ ಮಂಡಲಿಯು ಬ್ರಾಂಚ್‌ ಕಮಿಟಿಗೆ ವಹಿಸುತ್ತದೆ. ಬ್ರಾಂಚ್‌ ಕಮಿಟಿಯಲ್ಲಿ ಮೂವರು ಅಥವಾ ಹೆಚ್ಚು ಸಮರ್ಥ ಹಿರಿಯರು ಇರುತ್ತಾರೆ. ಈ ಕಮಿಟಿ ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಂದು ದೇಶದಲ್ಲಿನ ಸುವಾರ್ತೆ ಸಾರುವ ಕೆಲಸದ ಪ್ರಗತಿ ಹಾಗೂ ಉದ್ಭವಿಸುವ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಲಿಗೆ ಆಗಿಂದಾಗ್ಗೆ ವರದಿ ನೀಡುತ್ತದೆ. ಮುಂಬರುವ ಸಾಹಿತ್ಯ, ಸಭಾ ಕೂಟ ಹಾಗೂ ಸಮ್ಮೇಳನಗಳಲ್ಲಿ ಯಾವ ವಿಷಯಗಳನ್ನು ಒದಗಿಸಬೇಕೆಂದು ನಿರ್ಧರಿಸಲು ಆಡಳಿತ ಮಂಡಲಿಗೆ ಈ ವರದಿ ನೆರವಾಗುತ್ತದೆ. ಬ್ರಾಂಚ್‌ಗಳಿಗೆ ಭೇಟಿ ನೀಡಿ ಬ್ರಾಂಚ್‌ ಕಮಿಟಿಗಳಿಗೆ ಸಲಹೆಸೂಚನೆ ನೀಡಲು ಆಡಳಿತ ಮಂಡಲಿ ಪ್ರತಿನಿಧಿಗಳನ್ನು ಕಳುಹಿಸುತ್ತದೆ. (ಜ್ಞಾನೋಕ್ತಿ 11:14) ಮುಖ್ಯಕಾರ್ಯಾಲಯದ ಪ್ರತಿನಿಧಿ ಎಂದು ಕರೆಯಲಾಗುವ ಇವರು ಬ್ರಾಂಚ್‌ ವ್ಯಾಪ್ತಿಯಲ್ಲಿರುವ ಪ್ರಚಾರಕರ ಹುಮ್ಮಸ್ಸು ಹೆಚ್ಚಿಸುವ ವಿಶೇಷ ಕಾರ್ಯಕ್ರಮದಲ್ಲಿ ಭಾಷಣ ಸಹ ನೀಡುತ್ತಾರೆ.

      ಸಭೆಗಳಿಗೆ ನೆರವು. ಬ್ರಾಂಚ್‌ ಆಫೀಸ್‌ನಲ್ಲಿರುವ ಜವಾಬ್ದಾರಿಯುತ ಸಹೋದರರು ಹೊಸ ಸಭೆಯ ಸ್ಥಾಪನೆಗೆ ಅನುಮತಿ ನೀಡುತ್ತಾರೆ. ಪಯನೀಯರರು, ಮಿಷನರಿಗಳು ಹಾಗೂ ಸರ್ಕಿಟ್‌ ಮೇಲ್ವಿಚಾರಕರ ಚಟುವಟಿಕೆಗೆ ಸಂಬಂಧಿಸಿದಂತೆ ಮಾರ್ಗದರ್ಶನೆ ನೀಡುತ್ತಾರೆ. ಸಮ್ಮೇಳನ ಹಾಗೂ ಅಧಿವೇಶನಗಳನ್ನು ಏರ್ಪಡಿಸುತ್ತಾರೆ. ಹೊಸ ರಾಜ್ಯ ಸಭಾಗೃಹಗಳನ್ನು ಕಟ್ಟುವ ಕೆಲಸವನ್ನು ನೋಡಿಕೊಳ್ಳುತ್ತಾರೆ. ಸಮಯಕ್ಕೆ ಸರಿಯಾಗಿ ಸಭೆಗಳಿಗೆ ಸಾಹಿತ್ಯ ರವಾನೆ ಆಗುತ್ತಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಬ್ರಾಂಚ್‌ ಆಫೀಸ್‌ನಲ್ಲಿ ನಡೆಯುವ ಪ್ರತಿಯೊಂದು ಕಾರ್ಯವು ಸುವಾರ್ತೆ ಸಾರುವ ಕೆಲಸ ಸುಗಮವಾಗಿ ನಡೆಯಲು ನೆರವಾಗುತ್ತದೆ.—1 ಕೊರಿಂಥ 14:33, 40.

      • ಬ್ರಾಂಚ್‌ ಕಮಿಟಿಗಳು ಆಡಳಿತ ಮಂಡಲಿಗೆ ಯಾವೆಲ್ಲ ವಿಧದಲ್ಲಿ ನೆರವು ನೀಡುತ್ತವೆ?

      • ಜವಾಬ್ದಾರಿಯುತ ಸಹೋದರರು ಯಾವೆಲ್ಲ ಕೆಲಸಕಾರ್ಯಗಳನ್ನು ನೋಡಿಕೊಳ್ಳುತ್ತಾರೆ?

      ಇನ್ನಷ್ಟು ತಿಳಿಯಲು . . .

      ಬ್ರಾಂಚ್‌ ಆಫೀಸ್‌ ಅನ್ನು ನೋಡಲು ಸರ್ವರಿಗೂ ಸ್ವಾಗತವಿದೆ. ಅಲ್ಲಿ ನಡೆಯುವ ಕೆಲಸ ಕಾರ್ಯಗಳನ್ನು ಸೋಮವಾರದಿಂದ ಶುಕ್ರವಾರದ ವರೆಗೆ ಸಂದರ್ಶಕರಿಗೆ ತೋರಿಸುವ ಏರ್ಪಾಡಿದೆ. ನೀವೊಮ್ಮೆ ಭೇಟಿ ನೀಡುವಂತೆ ಆಮಂತ್ರಿಸುತ್ತೇವೆ. ಸಂದರ್ಶಿಸುವಾಗ ಸಭಾ ಕೂಟಗಳಿಗೆ ಧರಿಸುವಂಥ ರೀತಿಯ ಉಡುಪನ್ನು ಧರಿಸಿಕೊಳ್ಳಿ. ಬೆತೆಲ್‌ ಸಂದರ್ಶನ ದೇವರ ಮೇಲೆ ನೀವಿಟ್ಟಿರುವ ನಂಬಿಕೆಯನ್ನು ಪುಷ್ಟೀಕರಿಸುವುದರಲ್ಲಿ ಸಂದೇಹವಿಲ್ಲ.

  • ನಮ್ಮ ಸಾಹಿತ್ಯದ ರಚನೆ ಹಾಗೂ ಅನುವಾದವನ್ನು ಹೇಗೆ ಮಾಡಲಾಗುತ್ತದೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 23

      ನಮ್ಮ ಸಾಹಿತ್ಯದ ರಚನೆ ಹಾಗೂ ಅನುವಾದವನ್ನು ಹೇಗೆ ಮಾಡಲಾಗುತ್ತದೆ?

      ಅಮೆರಿಕದಲ್ಲಿರುವ ರೈಟಿಂಗ್‌ ಡಿಪಾರ್ಟ್‌ಮಂಟ್‌ನಲ್ಲಿ ಒಬ್ಬರು ಕೆಲಸಮಾಡುತ್ತಿರುವ ದೃಶ್ಯ

      ರೈಟಿಂಗ್‌ ಡಿಪಾರ್ಟ್‌ಮಂಟ್‌, ಅಮೆರಿಕ

      ದಕ್ಷಿಣ ಕೊರಿಯದದಲ್ಲಿ ಕೆಲಸಮಾಡುತ್ತಿರುವ ಅನುವಾದಕರು

      ದಕ್ಷಿಣ ಕೊರಿಯ

      ಯೆಹೋವನ ಸಾಕ್ಷಿಗಳಿಂದ ಪ್ರಕಾಶನಗೊಂಡ ಪುಸ್ತಕವೊಂದನ್ನು ಅರ್ಮೇನಿಯದ ಒಬ್ಬ ವ್ಯಕ್ತಿ ಕೈಯಲ್ಲಿ ಹಿಡಿದುಕೊಂಡಿದ್ದಾರೆ

      ಅರ್ಮೇನಿಯ

      ಬುರುಂಡಿಯ ಹುಡುಗಿಯೊಬ್ಬಳು ಯೆಹೋವನ ಸಾಕ್ಷಿಗಳಿಂದ ಪ್ರಕಟಗೊಂಡ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದುಕೊಂಡಿರುವುದು

      ಬುರುಂಡಿ

      ಶ್ರೀಲಂಕದಲ್ಲಿ ಮಹಿಳೆಯೊಬ್ಬರು ಯೆಹೋವನ ಸಾಕ್ಷಿಗಳು ಹೊರತಂದ ಪತ್ರಿಕೆಗಳನ್ನು ಕೈಯಲ್ಲಿ ಹಿಡಿದುಕೊಂಡಿರುವ ದೃಶ್ಯ

      ಶ್ರೀಲಂಕ

      “ಸಕಲ ಕುಲ ಜನಾಂಗ ಭಾಷೆ ಮತ್ತು ಪ್ರಜೆಗಳಿಗೂ” ಸುವಾರ್ತೆಯನ್ನು ತಿಳಿಸುವ ಸಲುವಾಗಿ ನಾವು ಸುಮಾರು 750 ಭಾಷೆಗಳಲ್ಲಿ ಸಾಹಿತ್ಯ ಪ್ರಕಟಿಸುತ್ತೇವೆ. (ಪ್ರಕಟನೆ 14:6) ಅತಿ ದೊಡ್ಡ ಸವಾಲಿನ ಈ ಕೆಲಸವನ್ನು ಸಾಧಿಸಲು ನಮ್ಮಿಂದ ಸಾಧ್ಯವಾಗಿದ್ದು ಹೇಗೆ? ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಬರಹಗಾರರ ಮತ್ತು ಸಿದ್ಧಮನಸ್ಸಿನ ಅನುವಾದಕರ ಗುಂಪು ಅವಿರತವಾಗಿ ದುಡಿಯುತ್ತಿದ್ದಾರೆ. ಇವರೆಲ್ಲರೂ ಯೆಹೋವನ ಸಾಕ್ಷಿಗಳು.

      ಲೇಖನಗಳನ್ನು ಇಂಗ್ಲಿಷ್‌ ಭಾಷೆಯಲ್ಲಿ ಸಿದ್ಧಗೊಳಿಸಲಾಗುತ್ತದೆ. ನಮ್ಮ ಕೇಂದ್ರ ಕಾರ್ಯಾಲಯದಲ್ಲಿ ರೈಟಿಂಗ್‌ ಡಿಪಾರ್ಟ್‌ಮಂಟ್‌ ಎಂಬ ವಿಭಾಗವಿದ್ದು ಆಡಳಿತ ಮಂಡಲಿಯ ಉಸ್ತುವಾರಿಯ ಕೆಳಗೆ ಕಾರ್ಯನಿರ್ವಹಿಸುತ್ತದೆ. ಈ ಡಿಪಾರ್ಟ್‌ಮಂಟ್‌ ನಮ್ಮ ಕೇಂದ್ರ ಕಾರ್ಯಾಲಯ ಹಾಗೂ ಕೆಲವು ಬ್ರಾಂಚ್‌ ಆಫೀಸುಗಳಲ್ಲಿರುವ ಲೇಖಕರಿಗೆ ಸಾಹಿತ್ಯ ರಚಿಸುವಂತೆ ನಿರ್ದೇಶನ ನೀಡಿ ಕಾರ್ಯಯೋಜನೆ ರೂಪಿಸುತ್ತದೆ. ನಮ್ಮಲ್ಲಿ ಪ್ರಪಂಚದ ನಾನಾ ಕಡೆಗಳ ಲೇಖಕರು ಇರುವುದರಿಂದ ವೈವಿಧ್ಯಮಯ ಸಂಸ್ಕೃತಿಗಳನ್ನು ಬಿಂಬಿಸುವಂಥ ಲೇಖನಗಳನ್ನು ಪ್ರಕಟಿಸಲು ಸಾಧ್ಯವಾಗುತ್ತದೆ. ಹೀಗೆ ಅಂತಾರಾಷ್ಟ್ರೀಯವಾಗಿ ಓದುಗರ ಮನಮುಟ್ಟಲು ಸಾಧ್ಯವಾಗಿದೆ.

      ಲೇಖನಗಳನ್ನು ಅನುವಾದಕರಿಗೆ ಕಳುಹಿಸಲಾಗುತ್ತದೆ. ಲೇಖನಗಳನ್ನು ಬರೆದು ಪರಿಷ್ಕರಿಸಿ ಸಿದ್ಧಪಡಿಸಿದ ಮೇಲೆ ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಅನುವಾದಕರ ತಂಡಗಳಿಗೆ ಕಳುಹಿಸಲಾಗುತ್ತದೆ. ಪ್ರಪಂಚದಾದ್ಯಂತವಿರುವ ಬೇರೆ ಬೇರೆ ಭಾಷೆಯ ಅನುವಾದಕರು ಅದನ್ನು ಭಾಷಾಂತರಿಸಿ, ತಿದ್ದಿ ಸಮಗ್ರ ರೂಪ ನೀಡುತ್ತಾರೆ. ಅವರು ಸರಿಯಾದ ಪದಗಳನ್ನು “ಹುಡುಕಿ ಆರಿಸಿ” ಇಂಗ್ಲಿಷ್‌ ಭಾಷೆಯ ಭಾವಾರ್ಥವನ್ನು ತಮ್ಮ ತಮ್ಮ ಪ್ರಾದೇಶಿಕ ಭಾಷೆಗಳಿಗೆ ಅನುವಾದಿಸಲು ಶ್ರಮ ಹಾಕುತ್ತಾರೆ.—ಪ್ರಸಂಗಿ 12:10.

      ಕಂಪ್ಯೂಟರ್‌ ಕೆಲಸದ ವೇಗವನ್ನು ಹೆಚ್ಚಿಸುತ್ತದೆ. ಲೇಖಕರ ಮತ್ತು ಅನುವಾದಕರ ಕೆಲಸವನ್ನು ಒಂದು ಕಂಪ್ಯೂಟರ್‌ ಮಾಡಸಾಧ್ಯವಿಲ್ಲ. ಆದರೆ ಗಣಕೀಕೃತ ಪದಕೋಶದಂಥ ಉಪಯುಕ್ತ ಕಂಪ್ಯೂಟರ್‌ ಸಾಧನ ಹಾಗೂ ಪ್ರೋಗ್ರಾಮ್‌ಗಳು ಕೆಲಸದ ವೇಗವನ್ನು ಹೆಚ್ಚಿಸಲು ನೆರವಾಗುತ್ತವೆ. ಯೆಹೋವನ ಸಾಕ್ಷಿಗಳೇ ಆವಿಷ್ಕರಿಸಿದ ‘ಮಲ್ಟಿ ಎಲೆಕ್ಟ್ರಾನಿಕ್‌ ಪಬ್ಲಿಷಿಂಗ್‌ ಸಿಸ್ಟಮ್‌’ (MEPS) ಎಂಬ ಪ್ರೋಗ್ರಾಮ್‌ ನೂರಾರು ಭಾಷೆಗಳ ಲಿಪಿಗಳನ್ನಲ್ಲದೆ ಚಿತ್ರಗಳ ಜೋಡಣೆಗೂ ಸಹಾಯಕಾರಿಯಾಗಿದ್ದು ಮುದ್ರಣ ತೀರ ಸುಲಭವಾಗಿದೆ.

      ಕೇವಲ ಕೆಲವೇ ಸಾವಿರ ಮಂದಿ ಮಾತಾಡುವ ಭಾಷೆಯಲ್ಲಿಯೂ ನಮ್ಮ ಸಾಹಿತ್ಯ ಮುದ್ರಣಗೊಳ್ಳುತ್ತಿದೆ. ನಾವೇಕೆ ಇಷ್ಟೆಲ್ಲಾ ಪ್ರಯತ್ನ ಶ್ರಮ ಹಾಕುತ್ತೇವೆ? ಏಕೆಂದರೆ, “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎನ್ನುವುದು ಯೆಹೋವ ದೇವರ ಇಷ್ಟವಾಗಿದೆ.—1 ತಿಮೊಥೆಯ 2:3, 4.

      • ನಮ್ಮ ಸಾಹಿತ್ಯವನ್ನು ಹೇಗೆ ಸಿದ್ಧಪಡಿಸಲಾಗುತ್ತದೆ?

      • ನಮ್ಮ ಸಾಹಿತ್ಯವನ್ನು ನೂರಾರು ಭಾಷೆಗಳಿಗೆ ಅನುವಾದಿಸುವ ಉದ್ದೇಶವೇನು?

  • ನಮ್ಮ ಲೋಕವ್ಯಾಪಕ ಕೆಲಸಕ್ಕೆ ಹಣಕಾಸು ಎಲ್ಲಿಂದ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 24

      ನಮ್ಮ ಲೋಕವ್ಯಾಪಕ ಕೆಲಸಕ್ಕೆ ಹಣಕಾಸು ಎಲ್ಲಿಂದ?

      ಒಬ್ಬ ವ್ಯಕ್ತಿ ಸ್ವಇಚ್ಛೆಯಿಂದ ಕಾಣಿಕೆ ಹಾಕುತ್ತಿದ್ದಾನೆ
      ಸುವಾರ್ತೆ ಸಾರುತ್ತಿರುವ ಯೆಹೋವನ ಸಾಕ್ಷಿಗಳು

      ನೇಪಾಳ

      ಟೋಗೊ ದೇಶದಲ್ಲಿ ಸಭಾಗೃಹವನ್ನು ಕಟ್ಟಿದ ಸ್ವಯಂಸೇವಕರು

      ಟೋಗೊ

      ಬ್ರಿಟನಿನ ಬ್ರಾಂಚ್‌ ಆಫೀಸಿನಲ್ಲಿ ಕೆಲಸಮಾಡುತ್ತಿರುವ ಸ್ವಯಂಸೇವಕರು

      ಬ್ರಿಟನ್‌

      ನಮ್ಮ ಸಂಘಟನೆ ಪ್ರತಿವರ್ಷ ಕೋಟ್ಯಂತರ ಬೈಬಲ್‌ಗಳನ್ನು ಹಾಗೂ ಇತರ ಸಾಹಿತ್ಯವನ್ನು ಮುದ್ರಿಸಿ ಉಚಿತವಾಗಿ ವಿತರಿಸುತ್ತದೆ. ರಾಜ್ಯ ಸಭಾಗೃಹಗಳನ್ನು ಹಾಗೂ ಬ್ರಾಂಚ್‌ ಆಫೀಸ್‌ಗಳನ್ನು ನಿರ್ಮಿಸುತ್ತದೆ. ಸಾವಿರಾರು ಬೆತೆಲ್‌ ಸೇವಕರ ಹಾಗೂ ಮಿಷನರಿಗಳ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತದೆ. ವಿಪತ್ತು ಪರಿಹಾರಕಾರ್ಯ ಕೈಗೊಳ್ಳುತ್ತದೆ. ಇದಕ್ಕೆಲ್ಲ ಹಣ ಎಲ್ಲಿಂದ ಬರುತ್ತೆ ಎಂದು ನೀವು ಯೋಚಿಸಬಹುದು.

      ಹಣ ವಸೂಲಿ ಮಾಡುವುದಿಲ್ಲ. ಭೂವ್ಯಾಪಕವಾಗಿ ಸುವಾರ್ತೆ ಸಾರುವ ನಮ್ಮ ಕೆಲಸಕ್ಕೆ ತುಂಬ ಹಣ ಖರ್ಚಾಗುವುದಾದರೂ ನಾವು ಹಣ ವಸೂಲಿ ಮಾಡುವುದಿಲ್ಲ. ನಮ್ಮ ಕೆಲಸ ಕಾರ್ಯಗಳನ್ನು ಯೆಹೋವ ದೇವರು ಬೆಂಬಲಿಸುತ್ತಾನೆ, ನಾವು ಯಾವತ್ತೂ “ನೆರವಿಗಾಗಿ ಮಾನವರ ಮುಂದೆ ಕೈ ಚಾಚುವುದಿಲ್ಲ” ಎಂದು ನೂರು ವರ್ಷಗಳ ಹಿಂದೆಯೇ ಕಾವಲಿನಬುರುಜು ಪತ್ರಿಕೆಯ ಎರಡನೇ ಸಂಚಿಕೆ ತಿಳಿಸಿತು. ಅದು ಇವತ್ತಿಗೂ ನಿಜವಾಗಿದೆ.—ಮತ್ತಾಯ 10:8.

      ನಮ್ಮ ಕಾರ್ಯ ಸ್ವಯಂಪ್ರೇರಿತ ದೇಣಿಗೆಗಳಿಂದ ನಡೆಯುತ್ತದೆ. ತುಂಬಾ ಜನರು ನಮ್ಮ ಬೈಬಲ್‌ ಶಿಕ್ಷಣ ಕಾರ್ಯವನ್ನು ಮೆಚ್ಚಿ ದೇಣಿಗೆ ನೀಡುತ್ತಾರೆ. ಯೆಹೋವನ ಸಾಕ್ಷಿಗಳು ಸಹ ತಮ್ಮ ಸಮಯ, ಶಕ್ತಿ-ಸಾಮರ್ಥ್ಯ, ಸಂಪನ್ಮೂಲಗಳನ್ನು ದೇವರ ಕೆಲಸಕ್ಕಾಗಿ ಧಾರೆಯೆರೆಯುತ್ತಾರೆ. (1 ಪೂರ್ವಕಾಲವೃತ್ತಾಂತ 29:9) ನಮ್ಮ ರಾಜ್ಯ ಸಭಾಗೃಹಗಳಲ್ಲಿ, ಸಮ್ಮೇಳನಗಳಲ್ಲಿ ಹಾಗೂ ಅಧಿವೇಶನಗಳಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಇಡಲಾಗಿರುತ್ತದೆ. ಮನಸ್ಸಾರೆ ಕಾಣಿಕೆ ನೀಡಲು ಬಯಸುವವರು ಹಣವನ್ನು ಹಾಕಬಹುದು. jw.org ವೆಬ್‌ಸೈಟ್‌ ಮೂಲಕ ಸಹ ಕಾಣಿಕೆ ಹಾಕಬಹುದು. ಕಾಣಿಕೆ ಹಾಕುವ ಎಲ್ಲರೂ ಶ್ರೀಮಂತರಾಗಿರುವುದಿಲ್ಲ. ಹೆಚ್ಚಿನವರು ಯೇಸು ಉದಾಹರಿಸಿದ ವಿಧವೆಯಂತೆ ಇದ್ದಾರೆ. ಆಕೆ ತೀರಾ ಬಡವಳಾಗಿದ್ದರೂ ತನ್ನಲ್ಲಿದ್ದ ಎರಡು ಚಿಕ್ಕ ನಾಣ್ಯಗಳನ್ನು ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಹಾಕಿ ದೇವಭಕ್ತಿ ಮೆರೆದಳು. (ಲೂಕ 21:1-4) ನಮ್ಮ ಕೆಲಸಕ್ಕೆ ಆರ್ಥಿಕ ಬೆಂಬಲ ನೀಡಲಿಚ್ಛಿಸುವವರು ತಮ್ಮ “ಹೃದಯದಲ್ಲಿ ನಿರ್ಣಯಿಸಿಕೊಂಡಿರುವ ಪ್ರಕಾರ” ದೇಣಿಗೆ ನೀಡಬಹುದು.—1 ಕೊರಿಂಥ 16:2; 2 ಕೊರಿಂಥ 9:7.

      ಅನೇಕ ಜನರು ತಮ್ಮ “ಆದಾಯದಿಂದ” ಯೆಹೋವ ದೇವರನ್ನು ಸನ್ಮಾನಿಸಲು ಮುಂದೆ ಬರುತ್ತಾರೆ. ಯೆಹೋವ ದೇವರು ಅವರ ಹೃದಯಗಳನ್ನು ಪ್ರೇರಿಸಿ ಸುವಾರ್ತೆ ಸಾರುವ ಕೆಲಸ ನಿಲ್ಲದೆ ಮುಂದುವರಿಯುವಂತೆ ನೋಡಿಕೊಳ್ಳುತ್ತಾನೆ ಎಂಬ ಭರವಸೆ ನಮಗಿದೆ.—ಜ್ಞಾನೋಕ್ತಿ 3:9.

      • ಬೇರೆ ಧಾರ್ಮಿಕ ಸಂಸ್ಥೆಗಳಿಗಿಂತ ನಮ್ಮ ಸಂಘಟನೆ ಹೇಗೆ ಭಿನ್ನವಾಗಿದೆ?

      • ದೇಣಿಗೆಗಳನ್ನು ಯಾವ ಕಾರ್ಯಗಳಿಗಾಗಿ ಬಳಸಲಾಗುತ್ತದೆ?

  • ರಾಜ್ಯ ಸಭಾಗೃಹಗಳನ್ನು ಏಕೆ ಮತ್ತು ಹೇಗೆ ನಿರ್ಮಿಸಲಾಗುತ್ತದೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 25

      ರಾಜ್ಯ ಸಭಾಗೃಹಗಳನ್ನು ಏಕೆ ಮತ್ತು ಹೇಗೆ ನಿರ್ಮಿಸಲಾಗುತ್ತದೆ?

      ಬೊಲಿವಿಯದಲ್ಲಿ ರಾಜ್ಯ ಸಭಾಗೃಹ ನಿರ್ಮಾಣಕಾರ್ಯದಲ್ಲಿ ನಿರತರಾಗಿರುವ ಸ್ವಯಂಸೇವಕರು

      ಬೊಲಿವಿಯ

      ನೈಜೀರಿಯದ ಒಂದು ಸಭಾಗೃಹವನ್ನು ಕೆಡವಿ ಹೊಸದನ್ನು ಕಟ್ಟುವ ಮುಂಚೆ ತೆಗೆದ ಫೋಟೋ
      ನೈಜೀರಿಯದಲ್ಲಿ ಕಟ್ಟಲಾದ ಒಂದು ಹೊಸ ಸಭಾಗೃಹ

      ನೈಜೀರಿಯದ ಒಂದು ಸಭಾಗೃಹ ಮೊದಲು ಮತ್ತು ಈಗ

      ಟಹೀಟಿಯಲ್ಲಿ ಸಭಾಗೃಹ ಕಟ್ಟುತ್ತಿರುವ ದೃಶ್ಯ

      ಟಹೀಟಿ

      ಬೈಬಲಿನಲ್ಲಿರುವ ಹಾಗೂ ಯೇಸು ಬೋಧಿಸಿದ ಮುಖ್ಯ ವಿಚಾರ ದೇವರ ರಾಜ್ಯ. ಅದೇ ವಿಚಾರವನ್ನು ನಮ್ಮ ಸಭಾಕೂಟಗಳಲ್ಲಿ ಬೋಧಿಸಲಾಗುತ್ತದೆ. ಹಾಗಾಗಿ ಆ ಸ್ಥಳಕ್ಕೆ ರಾಜ್ಯ ಸಭಾಗೃಹ ಎಂದು ಹೆಸರು.—ಲೂಕ 8:1.

      ರಾಜ್ಯ ಸಭಾಗೃಹ ಸತ್ಯಾರಾಧನೆಯ ಕೇಂದ್ರ. ದೇವರ ರಾಜ್ಯದ ಬಗ್ಗೆ ಸುವಾರ್ತೆ ಸಾರುವ ಕಾರ್ಯ ಸಂಘಟನೆಗೊಳ್ಳುವುದು ರಾಜ್ಯ ಸಭಾಗೃಹದಲ್ಲಿ. (ಮತ್ತಾಯ 24:14) ರಾಜ್ಯ ಸಭಾಗೃಹಗಳು ಗಾತ್ರ ವಿನ್ಯಾಸದಲ್ಲಿ ವಿಭಿನ್ನವಾಗಿದ್ದು ಅನೇಕ ಪ್ರದೇಶಗಳಲ್ಲಿ ಒಂದಕ್ಕಿಂತ ಹೆಚ್ಚು ಸಭೆಗಳು ಆರಾಧನೆಗಾಗಿ ಬಳಸುತ್ತವೆ. ಸಭೆಗಳ ಸಂಖ್ಯೆ ದಿನೇದಿನೇ ಅಧಿಕವಾಗುತ್ತಿರುವ ಕಾರಣ ಇತ್ತೀಚಿನ ವರ್ಷಗಳಲ್ಲಿ ಸಾವಿರಾರು ರಾಜ್ಯ ಸಭಾಗೃಹಗಳನ್ನು ಕಟ್ಟಲಾಗಿದೆ. ದಿನವೊಂದಕ್ಕೆ ಸರಾಸರಿ ಐದು ರಾಜ್ಯ ಸಭಾಗೃಹಗಳು ನಿರ್ಮಾಣವಾಗುತ್ತಿವೆ! ಇಷ್ಟು ತ್ವರಿತಗತಿಯಲ್ಲಿ ನಿರ್ಮಾಣಕಾರ್ಯ ಸಾಧ್ಯವಾಗುತ್ತಿರುವುದು ಹೇಗೆ?—ಮತ್ತಾಯ 19:26.

      ಕೇಂದ್ರೀಕೃತ ಹಣಕಾಸು ಯೋಜನೆ. ಸಂಗ್ರಹವಾಗುವ ಕಾಣಿಕೆ ಹಣವನ್ನು ಸಭೆಗಳು ಬ್ರಾಂಚ್‌ ಆಫೀಸಿಗೆ ಕಳುಹಿಸುತ್ತವೆ. ಆ ಹಣವನ್ನು ಹೊಸ ರಾಜ್ಯ ಸಭಾಗೃಹ ಕಟ್ಟಲು ಅಥವಾ ಹಳೇ ಕಟ್ಟಡವನ್ನು ನವೀಕರಿಸಲು ಹಣಕಾಸಿನ ಅಗತ್ಯವಿರುವ ಸಭೆಗಳಿಗೆ ನೀಡಲು ಆಗುತ್ತದೆ.

      ಸ್ವಯಂಸೇವಕರಿಂದ ನಿರ್ಮಾಣ. ಅನೇಕ ದೇಶಗಳಲ್ಲಿ ರಾಜ್ಯ ಸಭಾಗೃಹ ನಿರ್ಮಾಣಿಕರ ತಂಡಗಳು ಇರುತ್ತವೆ. ಈ ನಿರ್ಮಾಣ ತಂಡಗಳು ಒಂದು ರಾಜ್ಯ ಸಭಾಗೃಹ ನಿರ್ಮಾಣವಾದ ನಂತರ ಮತ್ತೊಂದರ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳುತ್ತವೆ. ಹೀಗೆ ಬೇರೆ ಬೇರೆ ಪ್ರದೇಶಗಳಲ್ಲಿ ನಿರ್ಮಾಣ ಕೆಲಸ ಮಾಡುತ್ತಾ ಅಲ್ಲಿನ ಯೆಹೋವನ ಸಾಕ್ಷಿಗಳಿಗೆ ತಮ್ಮ ರಾಜ್ಯ ಸಭಾಗೃಹವನ್ನು ಕಟ್ಟಲು ನೆರವಾಗುತ್ತವೆ. ಇನ್ನು ಕೆಲವು ದೇಶಗಳಲ್ಲಿ ನಿರ್ಮಾಣ ಕಾಮಗಾರಿಯ ಉಸ್ತುವಾರಿ ವಹಿಸುವಂತೆ ಅರ್ಹ ಸಾಕ್ಷಿಗಳನ್ನು ನೇಮಿಸಲಾಗುತ್ತದೆ. ನಿರ್ಮಾಣದ ಪ್ರತಿಯೊಂದು ಸ್ಥಳದಲ್ಲಿ ಕುಶಲಕರ್ಮಿಗಳು ಸ್ವಯಂಸೇವಕರಾಗಿ ದುಡಿಯುತ್ತಾರಾದರೂ ಬಹುಪಾಲು ಕೆಲಸವನ್ನು ಸ್ಥಳೀಯ ಸಭೆಯವರೇ ಸ್ವಯಂಸೇವಕರಾಗಿ ಮಾಡಿ ಮುಗಿಸುತ್ತಾರೆ. ಯೆಹೋವ ದೇವರ ಪವಿತ್ರಾತ್ಮ ಶಕ್ತಿಯ ಸಹಾಯದಿಂದ ಹಾಗೂ ಆತನ ಜನರ ಅವಿರತ ಶ್ರಮದಿಂದ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಸಾಗಿ ಪೂರ್ಣಗೊಳ್ಳುತ್ತದೆ.—ಕೀರ್ತನೆ 127:1; ಕೊಲೊಸ್ಸೆ 3:23.

      • ನಮ್ಮ ಆರಾಧನೆಯ ಸ್ಥಳಕ್ಕೆ ರಾಜ್ಯ ಸಭಾಗೃಹ ಎಂಬ ಹೆಸರಿರುವುದೇಕೆ?

      • ಪ್ರಪಂಚದಾದ್ಯಂತ ತ್ವರಿತಗತಿಯಲ್ಲಿ ರಾಜ್ಯ ಸಭಾಗೃಹ ನಿರ್ಮಾಣ ಸಾಧ್ಯವಾಗುತ್ತಿರುವುದು ಹೇಗೆ?

  • ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಹೇಗೆ ನೆರವಾಗುವಿರಿ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 26

      ರಾಜ್ಯ ಸಭಾಗೃಹವನ್ನು ಸುಸ್ಥಿತಿಯಲ್ಲಿಡಲು ಹೇಗೆ ನೆರವಾಗುವಿರಿ?

      ಎಸ್ಟೋನಿಯದಲ್ಲಿ ಯೆಹೋವನ ಸಾಕ್ಷಿಗಳು ರಾಜ್ಯ ಸಭಾಗೃಹವನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯ

      ಎಸ್ಟೋನಿಯ

      ಜಿಂಬಾಬ್ವೆಯಲ್ಲಿ ಯೆಹೋವನ ಸಾಕ್ಷಿಗಳು ರಾಜ್ಯ ಸಭಾಗೃಹವನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯ

      ಜಿಂಬಾಬ್ವೆ

      ಮಂಗೋಲಿಯದ ರಾಜ್ಯ ಸಭಾಗೃಹವೊಂದರಲ್ಲಿ ಒಬ್ಬ ಯೆಹೋವನ ಸಾಕ್ಷಿ ರಿಪೇರಿ ಕೆಲಸ ಮಾಡುತ್ತಿರುವ ದೃಶ್ಯ

      ಮಂಗೋಲಿಯ

      ಪೋರ್ಟರಿಕೊದಲ್ಲಿ ರಾಜ್ಯ ಸಭಾಗೃಹವೊಂದಕ್ಕೆ ಯೆಹೋವನ ಸಾಕ್ಷಿಯೊಬ್ಬರು ಸುಣ್ಣ ಬಳಿಯುತ್ತಿರುವ ದೃಶ್ಯ

      ಪೋರ್ಟರಿಕೊ

      ಯೆಹೋವನ ಸಾಕ್ಷಿಗಳ ಪ್ರತಿಯೊಂದು ರಾಜ್ಯ ಸಭಾಗೃಹ ಯೆಹೋವ ದೇವರ ನಾಮವನ್ನು ಹೊತ್ತಿದೆ. ಆದ್ದರಿಂದ, ಆ ಕಟ್ಟಡವನ್ನು ಕಾಲಕಾಲಕ್ಕೆ ದುರಸ್ತಿ ಮಾಡಿ ಸದಾ ನೀಟಾಗಿ ಇಡುವುದು ನಮ್ಮ ಆರಾಧನೆಯ ಭಾಗ. ಶುಚಿಕಾರ್ಯ ಹಾಗೂ ದುರಸ್ತಿ ಕೆಲಸದಲ್ಲಿ ಎಲ್ಲರೂ ಕೈ ಜೋಡಿಸಬಹುದು.

      ಸಭಾ ಕೂಟದ ನಂತರ ಸ್ವಚ್ಛಗೊಳಿಸುವಿಕೆ. ಪ್ರತಿ ಸಲ ಸಭಾ ಕೂಟ ಮುಗಿದ ನಂತರ ಸೋದರ ಸೋದರಿಯರು ರಾಜ್ಯ ಸಭಾಗೃಹವನ್ನು ಶುಚಿಗೊಳಿಸುತ್ತಾರೆ. ಅದಲ್ಲದೆ ವಾರಕ್ಕೊಮ್ಮೆ ಕೂಲಂಕಷವಾಗಿ ಶುಚಿಗೊಳಿಸಲಾಗುತ್ತದೆ. ಒಬ್ಬ ಸಭಾ ಹಿರಿಯ ಅಥವಾ ಶುಶ್ರೂಷಾ ಸೇವಕ ಶುಚಿಕಾರ್ಯಗಳ ಪಟ್ಟಿಮಾಡಿ ಮೇಲುಸ್ತುವಾರಿ ವಹಿಸುತ್ತಾರೆ. ನೆಲ ಗುಡಿಸುವುದು, ಒರೆಸುವುದು, ಧೂಳು ಜಾಡಿಸುವುದು, ಕುರ್ಚಿ ಜೋಡಿಸುವುದು, ಶೌಚಾಲಯಗಳನ್ನು ಶುಚಿಮಾಡಿ ರೋಗಾಣು ಮುಕ್ತಗೊಳಿಸುವುದು, ಕಿಟಕಿ ಬಾಗಿಲು ಕನ್ನಡಿಗಳನ್ನು ಒರೆಸುವುದು, ಕಸ ವಿಲೇವಾರಿ, ಅಂಗಳವನ್ನು ಶುಚಿ ಮಾಡುವುದು ಹೀಗೆ ನಾನಾ ಕೆಲಸಗಳನ್ನು ಸಭಾ ಸದಸ್ಯರು ಸ್ವಯಂ ಮುಂದೆ ಬಂದು ಮಾಡುತ್ತಾರೆ. ವರ್ಷಕ್ಕೊಮ್ಮೆ ಎಲ್ಲರೂ ಸೇರಿ ಹೆಚ್ಚುವರಿ ಶುಚಿಕಾರ್ಯದಲ್ಲಿ ಒಳಗೂಡುತ್ತಾರೆ. ನಮ್ಮ ಮಕ್ಕಳಿಗೂ ಚಿಕ್ಕಪುಟ್ಟ ಕೆಲಸ ವಹಿಸುತ್ತೇವೆ. ಹೀಗೆ ಅವರಲ್ಲಿ ಆರಾಧನಾ ಸ್ಥಳದ ಬಗ್ಗೆ ಗೌರವಭಾವ ಬೆಳೆಸುತ್ತೇವೆ.—ಪ್ರಸಂಗಿ 5:1.

      ದುರಸ್ತಿ ಕಾರ್ಯ. ವರ್ಷಕ್ಕೊಮ್ಮೆ ರಾಜ್ಯ ಸಭಾಗೃಹದ ಒಳಗೆ ಹೊರಗೆ ಪರೀಕ್ಷಿಸಲಾಗುತ್ತದೆ. ಕಟ್ಟಡವನ್ನು ಸುಸ್ಥಿತಿಯಲ್ಲಿಡಲು ನಿಯತವಾಗಿ ಏನೆಲ್ಲ ದುರಸ್ತಿ ಕಾರ್ಯವನ್ನು ಮಾಡಬೇಕೆಂದು ನಿರ್ಧರಿಸಲು ಇದು ನೆರವಾಗುತ್ತದೆ. ಹೀಗೆ ದೊಡ್ಡ ಪ್ರಮಾಣದ ದುರಸ್ತಿ ಖರ್ಚು ಬಾರದಂತೆ ನೋಡಿಕೊಳ್ಳಲಾಗುತ್ತದೆ. (2 ಪೂರ್ವಕಾಲವೃತ್ತಾಂತ 24:13; 34:11) ನೀಟಾಗಿ ಸುಸ್ಥಿತಿಯಲ್ಲಿರುವ ರಾಜ್ಯ ಸಭಾಗೃಹ ದೇವಾರಾಧನೆಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ದುರಸ್ತಿ ಮತ್ತು ಶುಚಿ ಕಾರ್ಯದಲ್ಲಿ ಕೈ ಜೋಡಿಸುವುದು ಯೆಹೋವ ದೇವರ ಮೇಲೆ ಮತ್ತು ಆತನ ಆರಾಧನೆಯ ಸ್ಥಳದ ಬಗ್ಗೆ ನಮಗೆ ಅತೀವ ಪ್ರೀತಿಯಿದೆ ಎಂದು ತೋರಿಸುತ್ತದೆ. (ಕೀರ್ತನೆ 122:1) ಮಾತ್ರವಲ್ಲ ನೆರೆಹೊರೆಯವರಲ್ಲಿ ಸತ್ಯಾರಾಧನೆಯ ಬಗ್ಗೆ ಗೌರವಭಾವ ಮೂಡಿಸುತ್ತದೆ.—2 ಕೊರಿಂಥ 6:3.

      • ನಮ್ಮ ಆರಾಧನೆಯ ಸ್ಥಳವನ್ನು ನಾವು ಹೇಗೆ ವೀಕ್ಷಿಸಬೇಕು?

      • ರಾಜ್ಯ ಸಭಾಗೃಹವನ್ನು ಶುಚಿಮಾಡಲು ಯಾವ ಏರ್ಪಾಡಿದೆ?

  • ರಾಜ್ಯ ಸಭಾಗೃಹ ಗ್ರಂಥಾಲಯದ ಅನುಕೂಲಗಳೇನು?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 27

      ರಾಜ್ಯ ಸಭಾಗೃಹ ಗ್ರಂಥಾಲಯದ ಅನುಕೂಲಗಳೇನು?

      ಒಬ್ಬ ವ್ಯಕ್ತಿ ಸಭಾಗೃಹದ ಗ್ರಂಥಾಲಯವನ್ನು ಸದುಪಯೋಗಿಸುತ್ತಿದ್ದಾನೆ

      ಇಸ್ರೇಲ್‌

      ಸಂಶೋಧನೆ ಮಾಡುವುದು ಹೇಗೆ ಅಂತ ಒಬ್ಬ ಯೆಹೋವನ ಸಾಕ್ಷಿ ಹುಡುಗನೊಬ್ಬನಿಗೆ ಹೇಳಿಕೊಡುತ್ತಿದ್ದಾರೆ

      ಚೆಕ್‌ ಗಣರಾಜ್ಯ

      ಒಬ್ಬ ಚಿಕ್ಕ ಹುಡುಗಿ ಗೀತೆ ಪುಸ್ತಕದಲ್ಲಿ ತನ್ನ ಹೆಸರನ್ನು ಬರೆಯುತ್ತಿದ್ದಾಳೆ

      ಬೆನಿನ್‌

      ಒಬ್ಬ ವ್ಯಕ್ತಿ ಕಂಪ್ಯೂಟರಿನಲ್ಲಿ ವಾಚ್‌ಟವರ್‌ ಲೈಬ್ರೆರಿಯನ್ನು ಬಳಸುತ್ತಿದ್ದಾನೆ

      ಕೇಮನ್‌ ದ್ವೀಪಗಳು

      ಬೈಬಲ್‌ನಲ್ಲಿರುವ ವಿಷಯಗಳ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಲು ಆಸೆಯೇ? ಬೈಬಲ್‌ನ ಯಾವುದಾದರೂ ಒಂದು ವಚನ, ಒಬ್ಬ ವ್ಯಕ್ತಿ ಅಥವಾ ಸ್ಥಳದ ಬಗ್ಗೆ ಹೆಚ್ಚು ವಿವರ ತಿಳಿದುಕೊಳ್ಳಬೇಕೇ? ಸಮಸ್ಯೆಯೊಂದನ್ನು ನಿಭಾಯಿಸಲು ಬೈಬಲ್‌ನಿಂದ ಸಲಹೆಸೂಚನೆ ಪಡೆಯಲು ಇಷ್ಟವಿದೆಯೇ? ಹಾಗಾದರೆ ನಮ್ಮ ರಾಜ್ಯ ಸಭಾಗೃಹ ಗ್ರಂಥಾಲಯ ನಿಮಗೆ ನೆರವಾಗುವುದು.

      ಸಂಶೋಧನೆಗೆ ಅನುಕೂಲ ಸಾಧನಗಳು. ಯೆಹೋವನ ಸಾಕ್ಷಿಗಳ ಎಲ್ಲ ಸಾಹಿತ್ಯ ನಿಮ್ಮಲ್ಲಿ ಇಲ್ಲದಿರಬಹುದು. ಆದರೆ ರಾಜ್ಯ ಸಭಾಗೃಹದ ಗ್ರಂಥಾಲಯದಲ್ಲಿ ನಿಮ್ಮ ಭಾಷೆಯ ಇತ್ತೀಚಿನ ಪ್ರತಿಯೊಂದು ಸಾಹಿತ್ಯ ಲಭ್ಯವಿದೆ. ಅಲ್ಲದೆ ಬೈಬಲಿನ ವಿವಿಧ ಭಾಷಾಂತರಗಳು, ಪದಕೋಶಗಳು ಹಾಗೂ ಇನ್ನಿತರ ಉಪಯುಕ್ತ ಪುಸ್ತಕಗಳು ಅಲ್ಲಿವೆ. ಅವುಗಳನ್ನು ನೀವು ಸಭಾ ಕೂಟಗಳ ಮುನ್ನ ಅಥವಾ ನಂತರ ಉಪಯೋಗಿಸಬಹುದು. ಸಭಾಗೃಹದಲ್ಲಿ ಕಂಪ್ಯೂಟರ್‌ ಇರುವಲ್ಲಿ ವಾಚ್‌ಟವರ್‌ ಲೈಬ್ರರಿ ಎಂಬ ಪ್ರೋಗ್ರಾಮ್‌ ಅನ್ನು ಸಹ ನೀವು ಬಳಸಿಕೊಳ್ಳಬಹುದು. ಅದರಲ್ಲಿ ನಮ್ಮ ಸಾಹಿತ್ಯದ ಭಂಡಾರವೇ ಇದ್ದು ನಿಮಗೆ ಬೇಕಾದ ವಿಷಯ, ಪದ ಅಥವಾ ವಚನದ ಬಗ್ಗೆ ಸಂಶೋಧನೆ ಮಾಡುವುದು ಅತೀ ಸುಲಭ.

      ಜೀವನ ಮತ್ತು ಸೇವೆ ಕೂಟದ ವಿದ್ಯಾರ್ಥಿಗಳಿಗೆ ಉಪಯುಕ್ತ. ನೀವು ನೇಮಕವನ್ನು ತಯಾರಿಸುವಾಗ ರಾಜ್ಯ ಸಭಾಗೃಹದಲ್ಲಿರುವ ಗ್ರಂಥಾಲಯದ ಪ್ರಯೋಜನ ಪಡೆದುಕೊಳ್ಳಬಹುದು. ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕರು ಗ್ರಂಥಾಲಯದ ಉಸ್ತುವಾರಿ ಮಾಡುತ್ತಾರೆ. ಪ್ರಕಟಗೊಳ್ಳುವ ಪ್ರತಿಯೊಂದು ಸಾಹಿತ್ಯ ಗ್ರಂಥಾಲಯಕ್ಕೆ ಸೇರ್ಪಡೆಯಾಗುತ್ತಿದೆ ಹಾಗೂ ಸುಸ್ಥಿತಿಯಲ್ಲಿ ಇಡಲಾಗಿದೆ ಎನ್ನುವುದನ್ನು ಅವರು ಖಚಿತಪಡಿಸಿ ಕೊಳ್ಳುತ್ತಾರೆ. ಬೇಕಾದ ಮಾಹಿತಿಯನ್ನು ಸಂಗ್ರಹಿಸುವುದು ಹೇಗೆಂದು ಅವರು ಇಲ್ಲವೇ ನಿಮ್ಮ ಬೈಬಲ್‌ ಟೀಚರ್‌ ನಿಮಗೆ ತೋರಿಸುವರು. ಗ್ರಂಥಾಲಯದ ಪುಸ್ತಕಗಳನ್ನು ರಾಜ್ಯ ಸಭಾಗೃಹದಿಂದ ತೆಗೆದುಕೊಂಡು ಹೋಗಲು ಅನುಮತಿಯಿಲ್ಲ. ಗ್ರಂಥಾಲಯದ ಪುಸ್ತಕಗಳಲ್ಲಿ ಬರೆಯುವುದಾಗಲಿ ಗುರುತು ಹಾಕುವುದಾಗಲಿ ಮಾಡದೆ ಜೋಪಾನವಾಗಿ ಬಳಸಬೇಕು.

      “ದೈವಜ್ಞಾನವನ್ನು” ನಿಕ್ಷೇಪದಂತೆ ಹುಡುಕಬೇಕೆಂದು ಬೈಬಲ್‌ ತಿಳಿಸುತ್ತದೆ. (ಜ್ಞಾನೋಕ್ತಿ 2:1-5) ಆ ರೀತಿ ಹುಡುಕಲು ರಾಜ್ಯ ಸಭಾಗೃಹದ ಗ್ರಂಥಾಲಯ ನಿಮಗೆ ನೆರವಾಗುತ್ತದೆ.

      • ರಾಜ್ಯ ಸಭಾಗೃಹ ಗ್ರಂಥಾಲಯದಲ್ಲಿ ಯಾವೆಲ್ಲ ಸೌಲಭ್ಯವಿದೆ?

      • ಗ್ರಂಥಾಲಯವನ್ನು ಸದುಪಯೋಗಿಸಲು ನಿಮಗೆ ಯಾರು ನೆರವು ನೀಡುವರು?

      ಇನ್ನಷ್ಟು ತಿಳಿಯಲು . . .

      ಮನೆಯಲ್ಲಿಯೇ ನಿಮ್ಮ ಉಪಯೋಗಕ್ಕಾಗಿ ಪುಟ್ಟ ಗ್ರಂಥಾಲಯ ಮಾಡಿಕೊಳ್ಳಿ. ಸಭೆಯ ಸಾಹಿತ್ಯ ವಿಭಾಗದಲ್ಲಿ ಅನೇಕ ಪುಸ್ತಕಗಳು ಲಭ್ಯವಿರುತ್ತವೆ. ಅವುಗಳನ್ನು ಪಡೆಯಲು ನಿಮ್ಮ ಬೈಬಲ್‌ ಟೀಚರ್‌ ಬಳಿ ಮಾತಾಡಿ.

  • ನಮ್ಮ ವೆಬ್‌ಸೈಟ್‌ನಲ್ಲಿ ಏನೇನಿದೆ?
    ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ?
    • ಅಧ್ಯಾಯ 28

      ನಮ್ಮ ವೆಬ್‌ಸೈಟ್‌ನಲ್ಲಿ ಏನೇನಿದೆ?

      ಮಹಿಳೆಯೊಬ್ಬಳು ಲ್ಯಾಪ್‌ಟಾಪಿನಲ್ಲಿ ಸಂಶೋಧನೆ ಮಾಡುತ್ತಿರುವುದು

      ಫ್ರಾನ್ಸ್‌

      ಒಂದು ಕುಟುಂಬ ಕಂಪ್ಯೂಟರ್‌ ಬಳಸುತ್ತಿದ್ದಾರೆ

      ಪೋಲೆಂಡ್‌

      ಆನ್‌ಲೈನ್‌ನಲ್ಲಿ ಸನ್ನೆಬಾಷೆಯ ವಿಡಿಯೊವನ್ನು ವೀಕ್ಷಿಸುತ್ತಿರುವ ಮಹಿಳೆ

      ರಷ್ಯ

      ಯೇಸು ತನ್ನ ಅನುಯಾಯಿಗಳಿಗೆ ಹೀಗೆ ಹೇಳಿದನು, “ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ಮಹಿಮೆಯನ್ನು ಸಲ್ಲಿಸುವರು.” (ಮತ್ತಾಯ 5:16) ಆ ನಿಟ್ಟಿನಲ್ಲಿ ನಾವು ನವನವೀನ ತಂತ್ರಜ್ಞಾನವನ್ನು ಸಹ ಉಪಯೋಗಿಸುತ್ತೇವೆ. ಇಂಟರ್‌ನೆಟ್‌ ಅದರಲ್ಲೊಂದು. jw.org ನಮ್ಮ ಅಧಿಕೃತ ವೆಬ್‌ಸೈಟ್‌. ಯೆಹೋವನ ಸಾಕ್ಷಿಗಳಾದ ನಮ್ಮ ನಂಬಿಕೆ, ಕಾರ್ಯಚಟುವಟಿಕೆ ಮುಂತಾದ ಅನೇಕ ಮಾಹಿತಿ ಅದರಲ್ಲಿ ಲಭ್ಯ. ನಮ್ಮ ವೆಬ್‌ಸೈಟ್‌ನ ವೈಶಿಷ್ಟ್ಯಗಳೇನು?

      ನಿಮ್ಮ ಪ್ರಶ್ನೆಗಳಿಗೆ ಬೈಬಲ್‌ ನೀಡುವ ಉತ್ತರ ಅದರಲ್ಲಿದೆ. ಜನರ ಮನಸ್ಸನ್ನು ಸದಾ ಕಾಡುವ ಪ್ರಶ್ನೆಗಳಿಗೆ ಅಲ್ಲಿ ಸೂಕ್ತ ಉತ್ತರ ಸಿಗುತ್ತದೆ. ಉದಾಹರಣೆಗೆ, ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಮತ್ತು ಸತ್ತವರು ಮತ್ತೆ ಬದುಕಿ ಬರುತ್ತಾರಾ? ಎಂಬ ಕರಪತ್ರ ನಮ್ಮ ವೆಬ್‌ಸೈಟ್‌ನಲ್ಲಿ 600ಕ್ಕೂ ಹೆಚ್ಚು ಭಾಷೆಗಳಲ್ಲಿ ಲಭ್ಯ. ನೂತನ ಲೋಕ ಭಾಷಾಂತರ ಬೈಬಲ್‌ ಸಹ 130ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಲಭ್ಯ. ಅಲ್ಲದೆ ಬೈಬಲ್‌ ಕಲಿಕೆಗೆ ನೆರವಾಗುವ ಬಹಳ ಪುಸ್ತಕಗಳು ಅದರಲ್ಲಿವೆ. ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕ ಅವುಗಳಲ್ಲಿ ಒಂದು. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಇತ್ತೀಚಿನ ಸಂಚಿಕೆಗಳೂ ಆ ಸೈಟ್‌ನಲ್ಲಿವೆ. ಇವನ್ನೆಲ್ಲ ನೀವು ವೆಬ್‌ಸೈಟ್‌ನಲ್ಲಿ ಓದಬಹುದು. ಆಡಿಯೋಗಳನ್ನು ಆಲಿಸಬಹುದು. ಬೇಕಿದ್ದಲ್ಲಿ ಅವುಗಳನ್ನು MP3, PDF ಅಥವಾ EPUB ಫಾರ್ಮ್ಯಾಟ್‌ಗಳಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಬೈಬಲ್‌ ವಿಷಯಗಳನ್ನು ತಿಳಿಯಲು ಇಚ್ಛಿಸುವ ಜನರಿಗೆ ಅವರ ಭಾಷೆಯಲ್ಲಿ ಕೆಲವೊಂದು ಮಾಹಿತಿಯನ್ನು ಮುದ್ರಿಸಿ ಕೊಡಬಹುದು. ಹಲವಾರು ಸನ್ನೆ ಭಾಷೆಗಳ ವಿಡಿಯೋ ಪ್ರಕಾಶನಗಳೂ ಲಭ್ಯ. ಬೈಬಲ್‌ ನಾಟಕಗಳು, ನಾಟಕ ರೂಪದ ಬೈಬಲ್‌ ವಾಚನಗಳು ಮತ್ತು ಇಂಪಾದ ಸಂಗೀತಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಬಿಡುವಿನ ಸಮಯದಲ್ಲಿ ಸವಿಯಬಹುದು.

      ಯೆಹೋವನ ಸಾಕ್ಷಿಗಳಿಗೆ ಸಂಬಂಧಿಸಿದ ಸತ್ಯ ವರದಿಗಳು ಅದರಲ್ಲಿವೆ. ನಾವು ಹಮ್ಮಿಕೊಂಡ ಕಾರ್ಯಕ್ರಮ, ಭೂವ್ಯಾಪಕವಾಗಿ ಸುವಾರ್ತೆ ಸಾರುವ ಕೆಲಸದ ಪ್ರಗತಿ, ವಿಪತ್ತಿನ ಸಂದರ್ಭದಲ್ಲಿ ಕೈಗೊಂಡ ಪರಿಹಾರ ಕಾರ್ಯ ಇತ್ಯಾದಿ ವರದಿಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ಓದಬಹುದು. ಮುಂದೆ ನಡೆಯಲಿರುವ ಅಧಿವೇಶನಗಳ ವಿವರ ಮತ್ತು ನಮ್ಮ ಬ್ರಾಂಚ್‌ ಆಫೀಸ್‌ಗಳ ವಿಳಾಸ ಸಹ ಅಲ್ಲಿದೆ.

      ಹೀಗೆ ಭೂಮಿಯ ಮೂಲೆಮೂಲೆಗೂ ಸತ್ಯದ ಬೆಳಕನ್ನು ಪ್ರಕಾಶಿಸಲು ಸಾಧ್ಯವಾಗುತ್ತಿದೆ. ಭೂಪಟದ ಯಾವುದೋ ಮೂಲೆಯಲ್ಲಿರುವ ಅಂಟಾರ್ಟಿಕ್‌ ಖಂಡದ ಜನರು ಸಹ ನಮ್ಮ ವೆಬ್‌ಸೈಟ್‌ನ ಪ್ರಯೋಜನ ಪಡೆಯುತ್ತಿದ್ದಾರೆ. “ಯೆಹೋವನ ವಾಕ್ಯವು ತ್ವರಿತವಾಗಿ ಹಬ್ಬುತ್ತಾ” ಪ್ರಪಂಚದಾದ್ಯಂತ ಇರುವ ಎಲ್ಲ ಜನರಿಗೆ ತಿಳಿದು ಆತನ ನಾಮ ಮಹಿಮೆಗೊಳ್ಳಲಿ ಎನ್ನುವುದೇ ನಮ್ಮ ಪ್ರಾರ್ಥನೆ.—2 ಥೆಸಲೊನೀಕ 3:1.

      • ಬೈಬಲ್‌ ಸತ್ಯವನ್ನು ಕಲಿಯಲು ಜನರಿಗೆ jw.org ವೆಬ್‌ಸೈಟ್‌ ಹೇಗೆ ನೆರವಾಗುತ್ತಿದೆ?

      • ನಮ್ಮ ವೆಬ್‌ಸೈಟ್‌ನಲ್ಲಿ ಯಾವ ಮಾಹಿತಿಯನ್ನು ಜಾಲಾಡಲು ಇಷ್ಟಪಡುತ್ತೀರಿ?

      ಎಚ್ಚರ ವಹಿಸಿ:

      ನಮ್ಮ ಸಂಘಟನೆಯ ಬಗ್ಗೆ ಸುಳ್ಳು ಸುಳ್ಳು ಮಾಹಿತಿಯನ್ನು ಹಬ್ಬಿಸಲೆಂದೇ ವಿರೋಧಿಗಳು ಕೆಲವು ಇಂಟರ್‌ನೆಟ್‌ ಸೈಟ್‌ಗಳನ್ನು ತೆರೆದಿದ್ದಾರೆ. ಅವರ ಉದ್ದೇಶ ಯೆಹೋವ ದೇವರಿಂದ ಜನರನ್ನು ದೂರ ಕೊಂಡೊಯ್ಯುವುದೇ. ಅಂಥ ವೆಬ್‌ಸೈಟ್‌ಗಳ ಬಗ್ಗೆ ನಾವು ಎಚ್ಚರ ವಹಿಸಬೇಕು.—ಕೀರ್ತನೆ 1:1; 26:4; ರೋಮನ್ನರಿಗೆ 16:17.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ