ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಸತ್ತ ಮೇಲೆ ಏನಾಗುತ್ತದೆ?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
    • ಅಧ್ಯಾಯ 6

      ಸತ್ತ ಮೇಲೆ ಏನಾಗುತ್ತದೆ?

      1-3. (ಎ) ಸಾವಿನ ಕುರಿತು ಜನರಿಗೆ ಯಾವೆಲ್ಲ ಪ್ರಶ್ನೆಗಳು ಬರುತ್ತವೆ? (ಬಿ) ಈ ಪ್ರಶ್ನೆಗಳಿಗೆ ಬೇರೆಬೇರೆ ಧರ್ಮದವರು ಯಾವ ಬೇರೆಬೇರೆ ಉತ್ತರ ಕೊಡುತ್ತಾರೆ?

      ‘ಮರಣವೇ ಇಲ್ಲದ’ ಕಾಲ ಬರಲಿದೆ ಎಂದು ದೇವರು ಬೈಬಲಿನಲ್ಲಿ ಮಾತುಕೊಟ್ಟಿದ್ದಾನೆ. (ಪ್ರಕಟನೆ 21:4) ಯೇಸು ನಮಗಾಗಿ ತನ್ನ ಜೀವ ಕೊಟ್ಟದ್ದರಿಂದ ಮುಂದೆ ನಮಗೆ ಸಾವೇ ಇಲ್ಲದ ಜೀವನ ಸಿಗಲಿದೆ ಎಂದು ಕಲಿತೆವು. ಆದರೆ ಸಾವು ಅನ್ನುವುದು ಈಗಲೂ ಇರುವುದರಿಂದ, ‘ಸತ್ತ ಮೇಲೆ ನಿಜವಾಗಿಯೂ ಏನಾಗುತ್ತದೆ?’ ಎನ್ನುವ ಪ್ರಶ್ನೆ ನಮಗೆ ಬರುತ್ತದೆ.—ಪ್ರಸಂಗಿ 9:5.

      2 ನಮ್ಮ ಕುಟುಂಬದವರು, ಸ್ನೇಹಿತರು ಯಾರಾದರೂ ತೀರಿಹೋದರಂತೂ ಈ ಪ್ರಶ್ನೆ ನಮ್ಮನ್ನು ತುಂಬ ಕಾಡುತ್ತದೆ, ಉತ್ತರ ಬೇಕೇ ಬೇಕು ಅಂತ ಅನಿಸುತ್ತದೆ. ಅಷ್ಟೇ ಅಲ್ಲ, ‘ಅವರು ಈಗ ಎಲ್ಲಿದ್ದಾರೆ? ನಮ್ಮನ್ನು ನೋಡುತ್ತಾ ಇದ್ದಾರಾ? ನಮಗೆ ಸಹಾಯ ಮಾಡುತ್ತಾರಾ? ಅವರನ್ನು ಮತ್ತೆ ನೋಡಲು ಆಗುತ್ತಾ?’ ಎನ್ನುವ ಪ್ರಶ್ನೆಗಳೂ ನಮ್ಮ ಮನಸ್ಸಿಗೆ ಬರುತ್ತವೆ.

      3 ಈ ಪ್ರಶ್ನೆಗಳಿಗೆ ಒಂದೊಂದು ಧರ್ಮದವರು ಒಂದೊಂದು ರೀತಿ ಉತ್ತರ ಕೊಡುತ್ತಾರೆ. ಒಳ್ಳೆಯವರಾದರೆ ಸ್ವರ್ಗಕ್ಕೆ ಹೋಗುತ್ತಾರೆ, ಕೆಟ್ಟವರಾದರೆ ನರಕಕ್ಕೆ ಹೋಗುತ್ತಾರೆ ಅಂತ ಕೆಲವರು ಹೇಳುತ್ತಾರೆ. ಇನ್ನು ಕೆಲವರು, ಸತ್ತವರು ಆತ್ಮವಾಗಿ ಈಗಾಗಲೇ ತೀರಿಹೋಗಿರುವ ತಮ್ಮ ಕುಟುಂಬದವರ ಆತ್ಮಗಳೊಂದಿಗೆ ಜೀವಿಸುತ್ತಾರೆ ಎಂದು ಹೇಳುತ್ತಾರೆ. ಮತ್ತೆ ಕೆಲವರು, ಸತ್ತವರಿಗೆ ಇನ್ನೊಂದು ಜನ್ಮ ಸಿಗುತ್ತದೆ, ಆಗ ಅವರು ಮನುಷ್ಯರಾಗಿ ಹುಟ್ಟಬಹುದು ಇಲ್ಲವೆ ಪ್ರಾಣಿಗಳಾಗಿ ಹುಟ್ಟಬಹುದು, ಇದು ಅವರು ಮಾಡಿದ ಪಾಪಪುಣ್ಯದ ಮೇಲೆ ಹೊಂದಿಕೊಂಡಿದೆ ಎಂದು ಹೇಳುತ್ತಾರೆ.

      4. ಸಾವಿನ ಕುರಿತು ಯಾವ ಒಂದು ವಿಷಯವನ್ನು ಹೆಚ್ಚಿನ ಧರ್ಮದವರು ಒಪ್ಪಿಕೊಳ್ಳುತ್ತಾರೆ?

      4 ಬೇರೆಬೇರೆ ಧರ್ಮದವರ ನಂಬಿಕೆ ಬೇರೆಬೇರೆ ಆಗಿದ್ದರೂ ಒಂದು ವಿಷಯವನ್ನು ಅವರೆಲ್ಲರೂ ಒಪ್ಪಿಕೊಳ್ಳುತ್ತಾರೆ. ನಾವು ಸತ್ತರೂ ನಮ್ಮಲ್ಲಿರುವ ಆತ್ಮ ಸಾಯುವುದಿಲ್ಲ, ಅದು ಬದುಕಿರುತ್ತದೆ ಎಂದು ಅವರು ನಂಬುತ್ತಾರೆ. ಇದರ ಬಗ್ಗೆ ನಿಮಗೇನು ಅನಿಸುತ್ತದೆ?

      ಸತ್ತ ಮೇಲೆ ನಾವು ಎಲ್ಲಿಗೆ ಹೋಗುತ್ತೇವೆ?

      5, 6. ಸತ್ತ ಮೇಲೆ ನಮಗೆ ಏನಾಗುತ್ತದೆ?

      5 ಸತ್ತ ಮೇಲೆ ನಮಗೆ ಏನಾಗುತ್ತದೆ ಎಂದು ನಮ್ಮ ದೇವರಾದ ಯೆಹೋವನಿಗೆ ಚೆನ್ನಾಗಿ ಗೊತ್ತು. ಒಬ್ಬ ವ್ಯಕ್ತಿ ಸತ್ತಾಗ ಅವನ ಜೀವನ ಅಲ್ಲಿಗೆ ಮುಗಿದುಹೋಗುತ್ತದೆ ಎಂದು ಆತನು ಹೇಳಿದ್ದಾನೆ. ಇದರರ್ಥ ಸತ್ತ ಮೇಲೆ ಅವನಿಗೆ ಯಾವುದೇ ಭಾವನೆಗಳಾಗಲಿ, ನೆನಪುಗಳಾಗಲಿ ಇರುವುದಿಲ್ಲ.a ಇದಲ್ಲದೆ ಸತ್ತ ವ್ಯಕ್ತಿಗೆ ನೋಡಲು, ಕೇಳಿಸಿಕೊಳ್ಳಲು ಆಗುವುದಿಲ್ಲ. ಯೋಚಿಸಲು ಸಹ ಆಗುವುದಿಲ್ಲ.

      6 ‘ಸತ್ತವರಿಗೆ ಯಾವ ತಿಳುವಳಿಕೆಯೂ ಇಲ್ಲ,’ ಸತ್ತವರು ಯಾರನ್ನೂ ಪ್ರೀತಿಸಲಿಕ್ಕಾಗಲಿ ದ್ವೇಷಿಸಲಿಕ್ಕಾಗಲಿ ಆಗುವುದಿಲ್ಲ. ‘ಲೋಕದೊಳಗೆ ನಡೆಯುವ ಯಾವ ಕೆಲಸದಲ್ಲಿಯೂ ಅವರಿಗೆ ಪಾಲಿಲ್ಲ’ ಎಂದು ಬೈಬಲಿನಲ್ಲಿದೆ. (ಪ್ರಸಂಗಿ 9:5, 6 ಓದಿ.) ವ್ಯಕ್ತಿಯೊಬ್ಬನು ಸತ್ತಾಗ ಅವನ “ಸಂಕಲ್ಪಗಳೆಲ್ಲಾ” ಅಂದರೆ ಆಲೋಚನೆಗಳೆಲ್ಲ ಹಾಳಾಗುತ್ತವೆ ಎಂದು ಕೀರ್ತನೆ 146:4 ತಿಳಿಸುತ್ತದೆ.

      ಸಾವಿನ ಬಗ್ಗೆ ಯೇಸು ಹೇಳಿದ ಸತ್ಯ

      ಒಂದು ದಂಪತಿ ತೋಟದಲ್ಲಿ ಕೂತು ಹೂವನ್ನು ನೋಡಿ ಸೃಷ್ಟಿಕರ್ತನನ್ನು ಹೊಗಳುತ್ತಿರುವುದು

      ಯೆಹೋವನು ಮನುಷ್ಯರನ್ನು ಭೂಮಿಯ ಮೇಲೆ ಸದಾಕಾಲ ಜೀವಿಸಬೇಕೆಂದು ಸೃಷ್ಟಿಸಿದನು

      7. ಸಾವನ್ನು ಯೇಸು ಯಾವುದಕ್ಕೆ ಹೋಲಿಸಿದನು?

      7 ಯೇಸುವಿನ ಆಪ್ತ ಸ್ನೇಹಿತ ಲಾಜರನು ಸತ್ತಾಗ ಯೇಸು ತನ್ನ ಶಿಷ್ಯರಿಗೆ ‘ನಮ್ಮ ಮಿತ್ರನಾದ ಲಾಜರನು ನಿದ್ರೆಮಾಡುತ್ತಿದ್ದಾನೆ’ ಎಂದು ಹೇಳಿದನು. ಇದರರ್ಥ ಲಾಜರ ವಿಶ್ರಾಂತಿ ಮಾಡುತ್ತಿದ್ದನು ಎಂದಾಗಿರಲಿಲ್ಲ. ಬದಲಿಗೆ ‘ಲಾಜರನು ಸತ್ತುಹೋಗಿದ್ದನು’ ಎಂದಾಗಿತ್ತು. (ಯೋಹಾನ 11:11-14, ಸತ್ಯವೇದ ಬೈಬಲ್‌) ಇಲ್ಲಿ ಯೇಸು ಸಾವನ್ನು ನಿದ್ದೆಗೆ ಹೋಲಿಸಿದನು. ಯೇಸು ಲಾಜರನ ಬಗ್ಗೆ ಹೇಳುವಾಗ ಅವನು ಸ್ವರ್ಗಕ್ಕೆ ಹೋಗಿದ್ದಾನೆ ಅಂತಾಗಲಿ, ನರಕದಲ್ಲಿ ನರಳುತ್ತಿದ್ದಾನೆ ಅಂತಾಗಲಿ ಅಥವಾ ಆತ್ಮವಾಗಿ ಪೂರ್ವಜರ ಬಳಿ ಹೋಗಿದ್ದಾನೆ ಅಂತಾಗಲಿ ಹೇಳಲಿಲ್ಲ. ಲಾಜರನಿಗೆ ಪುನರ್ಜನ್ಮವಿದೆ, ಆಗ ಮನುಷ್ಯನಾಗಿ ಅಥವಾ ಪ್ರಾಣಿಯಾಗಿ ಹುಟ್ಟಿ ಬರುತ್ತಾನೆ ಎಂದು ಸಹ ಆತನು ಹೇಳಲಿಲ್ಲ. ಬದಲಿಗೆ ಯೇಸುವಿನ ಮಾತಿನ ಅರ್ಥ, ಲಾಜರನು ಗಾಢ ನಿದ್ರೆ ಮಾಡುತ್ತಿದ್ದಾನೆ ಎಂದಾಗಿತ್ತು. ಬೈಬಲಿನಲ್ಲಿರುವ ಬೇರೆ ಕೆಲವು ವಚನಗಳು ಸಹ ಸಾವನ್ನು ಗಾಢ ನಿದ್ರೆಗೆ ಹೋಲಿಸುತ್ತವೆ. ಉದಾಹರಣೆಗೆ, ಸ್ತೆಫನ ಎಂಬ ದೇವಭಕ್ತನ ಕೊಲೆಯ ಬಗ್ಗೆ ತಿಳಿಸುವಾಗ ಅವನು “ಮರಣದಲ್ಲಿ ನಿದ್ರೆಹೋದನು” ಎಂದು ಹೇಳಲಾಗಿದೆ. (ಅಪೊಸ್ತಲರ ಕಾರ್ಯಗಳು 7:60) ಅಪೊಸ್ತಲ ಪೌಲನು ಸಹ ಕೆಲವು ಕ್ರೈಸ್ತರ ಬಗ್ಗೆ ಮಾತಾಡುತ್ತಾ ಅವರು “ಮರಣದಲ್ಲಿ ನಿದ್ರೆಹೋಗಿದ್ದಾರೆ” ಎಂದು ಹೇಳಿದನು.—1 ಕೊರಿಂಥ 15:6.

      8. ನಾವು ಸಾಯಬೇಕೆಂದು ದೇವರು ನಮ್ಮನ್ನು ಸೃಷ್ಟಿಮಾಡಲಿಲ್ಲ ಅಂತ ನಮಗೆ ಹೇಗೆ ಗೊತ್ತು?

      8 ಆದಾಮ ಮತ್ತು ಹವ್ವಳನ್ನು ಸೃಷ್ಟಿಸುವಾಗ ಅವರು ಸ್ವಲ್ಪ ಕಾಲ ಬದುಕಿ ಆಮೇಲೆ ಸತ್ತು ಹೋಗಬೇಕು ಎಂದು ದೇವರು ಬಯಸಿದನಾ? ಇಲ್ಲ. ಅವರಿಗೆ ಒಳ್ಳೇ ಆರೋಗ್ಯ ಇರಬೇಕು, ಅವರು ಸಾವಿಲ್ಲದೆ ಸದಾಕಾಲ ಜೀವಿಸಬೇಕು ಎಂದು ದೇವರು ಬಯಸಿದನು. ಆ ಬಯಕೆಯನ್ನು ಅವರಲ್ಲೂ ಇಟ್ಟನು. (ಪ್ರಸಂಗಿ 3:11) ಯೋಚಿಸಿ, ತಮ್ಮ ಮಕ್ಕಳು ಕಾಯಿಲೆ ಬಿದ್ದು ತಮ್ಮ ಕಣ್ಣಮುಂದೆ ಸಾಯಬೇಕು ಅಂತ ಯಾವ ಹೆತ್ತವರಾದರೂ ಬಯಸುತ್ತಾರಾ? ಇಲ್ಲ. ಅದೇರೀತಿ ನಾವು ಸಾಯಬೇಕೆಂದು ಯೆಹೋವ ದೇವರು ಬಯಸುವುದಿಲ್ಲ. ಹಾಗೆಂದ ಮೇಲೆ ಸಾವು ಅನ್ನುವುದು ಹೇಗೆ ಬಂತು?

      ನಾವೇಕೆ ಸಾಯುತ್ತೇವೆ?

      9. ಯೆಹೋವನ ಆಜ್ಞೆಯನ್ನು ಪಾಲಿಸುವುದು ಆದಾಮ ಮತ್ತು ಹವ್ವಳಿಗೆ ಕಷ್ಟವಾಗಿತ್ತಾ? ವಿವರಿಸಿ.

      9 ಏದೆನ್‌ ತೋಟದಲ್ಲಿ ಯೆಹೋವ ದೇವರು ಆದಾಮನಿಗೆ ಈ ಆಜ್ಞೆಯನ್ನು ಕೊಟ್ಟನು: “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು; ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.” (ಆದಿಕಾಂಡ 2:9, 16, 17) ಯೆಹೋವ ದೇವರು ಕೊಟ್ಟ ಆ ಸ್ಪಷ್ಟ ಆಜ್ಞೆಯನ್ನು ಪಾಲಿಸುವುದು ಆದಾಮ ಹವ್ವರಿಗೆ ಕಷ್ಟದ ಕೆಲಸವಾಗಿರಲಿಲ್ಲ. ಯಾವುದು ಸರಿ ಯಾವುದು ತಪ್ಪೆಂದು ಅವರಿಗೆ ಹೇಳುವ ಸಂಪೂರ್ಣ ಹಕ್ಕು ಯೆಹೋವ ದೇವರಿಗಿತ್ತು. ಅವರು ದೇವರ ಮಾತನ್ನು ಕೇಳಿದ್ದರೆ ಆತನ ಅಧಿಕಾರಕ್ಕೆ ಗೌರವ ತೋರಿಸಿದಂತೆ ಆಗುತ್ತಿತ್ತು ಮತ್ತು ತಮಗೆ ಬೇಕಾಗಿದ್ದ ಎಲ್ಲವನ್ನು ಕೊಟ್ಟಂಥ ಯೆಹೋವ ದೇವರಿಗೆ ಕೃತಜ್ಞತೆ ತೋರಿಸಿದಂತೆ ಆಗುತ್ತಿತ್ತು.

      10, 11. (ಎ) ಆದಾಮ ಮತ್ತು ಹವ್ವಳಿಗೆ ಸೈತಾನನು ಹೇಗೆ ಮೋಸಮಾಡಿದ? (ಬಿ) ಅವರು ಮಾಡಿದ ತಪ್ಪಿಗೆ ಕ್ಷಮೆ ಇತ್ತಾ? ವಿವರಿಸಿ.

      10 ದುಃಖದ ವಿಷಯ ಏನೆಂದರೆ ಆದಾಮ ಮತ್ತು ಹವ್ವ ದೇವರಿಗೆ ಅವಿಧೇಯರಾಗುವ ಆಯ್ಕೆ ಮಾಡಿದರು. ಸೈತಾನನು ಹವ್ವಳಿಗೆ: “ಏನವ್ವಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನೂ ನೀವು ತಿನ್ನಬಾರದೆಂದು ದೇವರು ಅಪ್ಪಣೆಕೊಟ್ಟಿರುವದು ನಿಜವೋ” ಎಂದು ಕೇಳಿದನು. ಅದಕ್ಕೆ ಹವ್ವಳು “ತೋಟದಲ್ಲಿರುವ ಮರಗಳ ಹಣ್ಣುಗಳನ್ನು ನಾವು ತಿನ್ನಬಹುದು; ಆದರೆ ತೋಟದ ಮಧ್ಯದಲ್ಲಿರುವ ಈ ಮರದ ಫಲದ ವಿಷಯವಾಗಿ—ಇದನ್ನು ತಿನ್ನಲೂ ಕೂಡದು, ಮುಟ್ಟಲೂ ಕೂಡದು; ತಿಂದರೆ ಸಾಯುವಿರಿ ಎಂದು ದೇವರು ಹೇಳಿದ್ದಾನೆ” ಅಂದಳು.—ಆದಿಕಾಂಡ 3:1-3.

      11 ನಂತರ ಸೈತಾನನು, “ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ” ಎಂದು ಹೇಳಿದನು. (ಆದಿಕಾಂಡ 3:4-6) ಯಾಕೆಂದರೆ ಯಾವುದು ಸರಿ ಯಾವುದು ತಪ್ಪು ಎಂದು ತಾನೇ ನಿರ್ಣಯಿಸಬಹುದು ಎಂದು ಹವ್ವಳು ಯೋಚಿಸುವಂತೆ ಮಾಡುವುದೇ ಸೈತಾನನ ಗುರಿಯಾಗಿತ್ತು. ಅಲ್ಲದೆ, ‘ದೇವರ ಮಾತು ಮೀರಿ ನೀವು ಹಣ್ಣನ್ನು ತಿಂದರೂ ಸಾಯುವುದಿಲ್ಲ’ ಎಂದು ಅವನು ಹವ್ವಳಿಗೆ ಸುಳ್ಳು ಸಹ ಹೇಳಿದನು. ಆಗ ಅವಳು ಹಣ್ಣನ್ನು ತಿಂದಳು, ತನ್ನ ಗಂಡನಿಗೂ ಕೊಟ್ಟಳು. ಆ ಹಣ್ಣನ್ನು ತಿನ್ನಬಾರದೆಂದು ದೇವರು ಹೇಳಿದ್ದಾನೆ ಅಂತ ಅವರಿಗೆ ಚೆನ್ನಾಗಿ ಗೊತ್ತಿತ್ತು. ಆದರೂ ಅವರು ಆ ಹಣ್ಣನ್ನು ತಿಂದರು. ಹೀಗೆ ಅವರು ದೇವರ ಸ್ಪಷ್ಟವಾದ, ಸುಲಭವಾದ ಆಜ್ಞೆಯನ್ನು ಮುರಿದರು. ತಮ್ಮ ತಂದೆಯಾಗಿದ್ದ ಯೆಹೋವ ದೇವರು ತೋರಿಸಿದ ಅಪಾರ ಪ್ರೀತಿಯನ್ನು ಮರೆತು ಆತನಿಗೆ ಅಗೌರವವನ್ನು ತೋರಿಸಿದರು. ಅವರು ಮಾಡಿದ ಆ ತಪ್ಪಿಗೆ ಕ್ಷಮೆ ಅನ್ನುವುದೇ ಇರಲಿಲ್ಲ.

      12. ಆದಾಮ ಮತ್ತು ಹವ್ವ ದೇವರಿಗೆ ತಿರುಗಿಬಿದ್ದ ಬಗ್ಗೆ ಯೋಚಿಸುವಾಗ ನಮಗೆ ಯಾಕೆ ಬೇಜಾರಾಗುತ್ತದೆ?

      12 ಸೃಷ್ಟಿಕರ್ತ ದೇವರಿಗೆ ಆದಾಮ ಮತ್ತು ಹವ್ವ ಸ್ವಲ್ಪವೂ ಗೌರವ ತೋರಿಸದಿದ್ದ ಬಗ್ಗೆ ಯೋಚಿಸುವಾಗ ನಮಗೆಷ್ಟು ಬೇಜಾರು ಆಗುತ್ತದೆ ಅಲ್ವಾ? ಯೋಚಿಸಿ, ಅಪ್ಪಅಮ್ಮ ಕಷ್ಟಪಟ್ಟು ದುಡಿದು ಮಗ ಮತ್ತು ಮಗಳನ್ನು ಬೆಳೆಸಿರುತ್ತಾರೆ. ಮುಂದೊಂದು ದಿನ ಅದೇ ಮಕ್ಕಳು ಅವರ ಮಾತು ಕೇಳದೆ ತಿರುಗಿಬಿದ್ದರೆ ಆ ಅಪ್ಪಅಮ್ಮನಿಗೆ ಹೇಗೆ ಅನಿಸುತ್ತದೆ? ಹೃದಯ ಒಡೆದು ಹೋಗುತ್ತದೆ ತಾನೆ?

      ಆದಾಮನ ಸೃಷ್ಟಿಯಾದಾಗ

      ಆದಾಮನು ಮಣ್ಣಿನಿಂದ ಬಂದನು, ಮಣ್ಣಿಗೇ ಹೋದನು

      13. ‘ನೀನು ಪುನಃ ಮಣ್ಣಿಗೆ ಸೇರುತ್ತೀ’ ಎಂದು ಯೆಹೋವನು ಹೇಳಿದ್ದರ ಅರ್ಥವೇನಾಗಿತ್ತು?

      13 ಆದಾಮ ಮತ್ತು ಹವ್ವ ದೇವರ ಮಾತನ್ನು ಮೀರಿದ ಕ್ಷಣವೇ ಸದಾಕಾಲ ಜೀವಿಸುವ ಸೌಭಾಗ್ಯವನ್ನು ಕಳೆದುಕೊಂಡರು. ಯೆಹೋವ ದೇವರು ಆದಾಮನಿಗೆ, ‘ನೀನು ಮಣ್ಣೇ; ಪುನಃ ಮಣ್ಣಿಗೆ ಸೇರುತ್ತೀ’ ಎಂದು ಹೇಳಿದನು. (ಆದಿಕಾಂಡ 3:19 ಓದಿ.) ಅದರರ್ಥ ಆದಾಮನು ಮತ್ತೆ ಮಣ್ಣಾಗಲಿದ್ದನು. ಅವನನ್ನು ಸೃಷ್ಟಿಸಿಯೇ ಇಲ್ಲವೇನೋ ಅನ್ನುವಂಥ ರೀತಿಯಲ್ಲಿ ಆಗಲಿದ್ದನು. (ಆದಿಕಾಂಡ 2:7) ಆದಾಮನು ಪಾಪ ಮಾಡಿದ ನಂತರ ಸತ್ತು ಹೋದನು, ಅವನ ಜೀವನ ಅಲ್ಲಿಗೇ ಮುಗಿದು ಹೋಯಿತು.

      14. ನಾವೇಕೆ ಸಾಯುತ್ತೇವೆ?

      14 ಒಂದುವೇಳೆ ಆದಾಮ ಮತ್ತು ಹವ್ವ ದೇವರ ಮಾತು ಕೇಳಿರುತ್ತಿದ್ದರೆ ಈಗಲೂ ಬದುಕಿರುತ್ತಿದ್ದರು. ಆದರೆ ಅವರು ದೇವರಿಗೆ ಅವಿಧೇಯರಾದರು. ದೇವರ ವಿರುದ್ಧ ಪಾಪಮಾಡಿದರು. ಈ ಕಾರಣದಿಂದ ಕೊನೆಗೆ ಸತ್ತು ಹೋದರು. ಅವರ ಪಾಪ ರೋಗದಂತೆ ನಮಗೂ ಬಂತು. ನಾವೆಲ್ಲರೂ ಪಾಪಿಗಳಾಗಿ ಹುಟ್ಟಿದೆವು. ಹಾಗಾಗಿ ನಾವೂ ಸಾಯುತ್ತೇವೆ. (ರೋಮನ್ನರಿಗೆ 5:12) ಆದರೆ ಮನುಷ್ಯರಿಗೆ ಸಾವು ಬರಲಿ ಎಂದು ದೇವರು ಯಾವತ್ತೂ ಬಯಸಿರಲಿಲ್ಲ. ಹಾಗಾಗಿಯೇ ಸಾವನ್ನು ಬೈಬಲಿನಲ್ಲಿ “ಶತ್ರು” ಎಂದು ಕರೆಯಲಾಗಿದೆ.—1 ಕೊರಿಂಥ 15:26.

      ಸುಳ್ಳು ನಂಬಿಕೆಗಳಿಂದ ಬಿಡುಗಡೆ

      15. ಸಾವಿನ ಕುರಿತಾದ ಸತ್ಯ ನಮ್ಮನ್ನು ಯಾವೆಲ್ಲ ಸುಳ್ಳು ನಂಬಿಕೆಗಳಿಂದ ಬಿಡಿಸುತ್ತದೆ?

      15 ಸತ್ತಾಗ ಏನಾಗುತ್ತದೆ ಎನ್ನುವುದರ ಬಗ್ಗೆ ಅನೇಕ ಸುಳ್ಳು ನಂಬಿಕೆಗಳಿವೆ. ಸಾವಿನ ಕುರಿತು ಸತ್ಯ ತಿಳಿದುಕೊಂಡಾಗ ಆ ಎಲ್ಲ ಸುಳ್ಳು ನಂಬಿಕೆಗಳಿಂದ ನಮಗೆ ಬಿಡುಗಡೆ ಸಿಗುತ್ತದೆ. ಸತ್ತವರು ಯಾವುದೇ ರೀತಿಯ ನೋವು ದುಃಖ ಅನುಭವಿಸುವುದಿಲ್ಲ ಎಂದು ಬೈಬಲ್‌ ಕಲಿಸುತ್ತದೆ. ಸತ್ತವರೊಂದಿಗೆ ನಾವಾಗಲಿ ನಮ್ಮೊಂದಿಗೆ ಸತ್ತವರಾಗಲಿ ಮಾತಾಡಲು ಆಗುವುದಿಲ್ಲ. ಅವರು ನಮಗೆ, ನಾವು ಅವರಿಗೆ ಸಹಾಯ ಮಾಡಲು ಆಗುವುದಿಲ್ಲ. ಅವರು ದೆವ್ವವಾಗಿ ನಮಗೆ ಕಾಟವನ್ನೂ ಕೊಡುವುದಿಲ್ಲ. ಹಾಗಾಗಿ ನಾವು ಅವರಿಗೆ ಹೆದರುವ ಅವಶ್ಯಕತೆಯಿಲ್ಲ. ಆದರೆ ಅನೇಕ ಧರ್ಮಗಳವರು ಇದಕ್ಕೆ ವಿರುದ್ಧವಾದ ವಿಷಯವನ್ನು ಕಲಿಸುತ್ತಾರೆ. ಸತ್ತವರು ಎಲ್ಲೋ ಬದುಕಿರುತ್ತಾರೆ, ಧರ್ಮಗುರುಗಳಿಗೆ ದುಡ್ಡು ಕೊಟ್ಟರೆ ಸತ್ತವರ ಆತ್ಮಕ್ಕೆ ಶಾಂತಿ ಮಾಡಿಸುತ್ತಾರೆ ಅಂತ ಹೇಳುತ್ತಾರೆ. ಆದರೆ ಸತ್ಯ ಏನೆಂದು ನಾವು ತಿಳಿದುಕೊಂಡಾಗ ಇಂಥ ಸುಳ್ಳುಗಳಿಂದ ಮೋಸ ಹೋಗುವುದಿಲ್ಲ.

      16. ಸತ್ತವರ ಬಗ್ಗೆ ಅನೇಕ ಧರ್ಮಗಳವರು ಯಾವ ಸುಳ್ಳನ್ನು ಕಲಿಸುತ್ತಾರೆ?

      16 ಸೈತಾನನು ಸುಳ್ಳು ಧರ್ಮಗಳನ್ನು ಬಳಸಿ ಸತ್ತವರ ಕುರಿತು ನಮಗೆ ಸುಳ್ಳು ಹೇಳುತ್ತಾನೆ. ಉದಾಹರಣೆಗೆ, ನಾವು ಸತ್ತರೂ ನಮ್ಮಲ್ಲಿರುವ ಆತ್ಮ ಸಾಯುವುದಿಲ್ಲ, ಅದು ಬದುಕಿರುತ್ತದೆ ಅಂತ ಕೆಲವು ಧರ್ಮಗಳಲ್ಲಿ ಕಲಿಸುತ್ತಾರೆ. ಸತ್ತವರ ಬಗ್ಗೆ ನಿಮ್ಮ ಧರ್ಮದಲ್ಲಿ ಕಲಿಸುವಂಥ ವಿಷಯಗಳು ಮತ್ತು ಬೈಬಲಿನಲ್ಲಿ ಹೇಳುವಂಥ ವಿಷಯಗಳು ಒಂದೇ ಆಗಿವೆಯಾ? ಜನರನ್ನು ಹೇಗಾದರೂ ಮಾಡಿ ಯೆಹೋವ ದೇವರಿಂದ ದೂರ ಮಾಡಬೇಕೆನ್ನುವುದೇ ಸೈತಾನನ ಉದ್ದೇಶ. ಹಾಗಾಗಿ ಅವನು ಇಂಥ ಸುಳ್ಳುಗಳನ್ನು ಹೇಳುತ್ತಾನೆ.

      17. ಕೆಟ್ಟ ಜನರನ್ನು ನರಕದಲ್ಲಿ ನಿತ್ಯಕ್ಕೂ ಸುಡಲಾಗುತ್ತದೆ ಎಂದು ಹೇಳಿದರೆ ದೇವರಿಗೆ ಅವಮಾನ ಮಾಡಿದಂತೆ. ಯಾಕೆ?

      17 ಸತ್ತವರ ಬಗ್ಗೆ ಕೆಲವು ಧರ್ಮಗಳಲ್ಲಿ ಕಲಿಸುವ ವಿಷಯಗಳನ್ನು ಕೇಳಿಸಿಕೊಳ್ಳುವಾಗಲೇ ಭಯವಾಗುತ್ತದೆ. ಉದಾಹರಣೆಗೆ, ಕೆಟ್ಟ ಜನರು ಸತ್ತ ಮೇಲೆ ನರಕಕ್ಕೆ ಹೋಗುತ್ತಾರೆ, ಅಲ್ಲಿ ಅವರನ್ನು ನಿತ್ಯಕ್ಕೂ ಬೆಂಕಿಯಲ್ಲಿ ಸುಡುತ್ತಾ ಚಿತ್ರಹಿಂಸೆ ಕೊಡಲಾಗುತ್ತದೆ ಎಂದು ಕಲಿಸುತ್ತಾರೆ. ಯೋಚಿಸಿ, ಈ ಸುಳ್ಳಿನಿಂದ ದೇವರಿಗೆಷ್ಟು ಅವಮಾನ ಆಗಬಹುದು! ಜನರು ಈ ರೀತಿ ನರಳುವಂತೆ ಆತನು ಖಂಡಿತ ಬಿಡುವುದಿಲ್ಲ. (1 ಯೋಹಾನ 4:8 ಓದಿ.) ಯಾರಾದರೂ ತಮ್ಮ ಮಗು ತಪ್ಪು ಮಾಡಿದ್ದಕ್ಕಾಗಿ ಅದರ ಕೈಯನ್ನು ಬೆಂಕಿಯಲ್ಲಿ ಸುಟ್ಟರೆ ನಿಮಗೆ ಹೇಗೆ ಅನಿಸುತ್ತದೆ? ಹಾಗೆ ಮಾಡುವವರು ಎಂಥ ಕ್ರೂರಿ ಎಂದು ಅನಿಸುತ್ತದಲ್ವಾ? ನೀವು ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಇಷ್ಟಪಡುತ್ತೀರಾ? ಇಲ್ಲ ತಾನೆ. ನಾವು ಯೆಹೋವ ದೇವರ ಬಗ್ಗೆ ಇದೇರೀತಿ ಯೋಚಿಸಬೇಕಂತ ಸೈತಾನನ ಬಯಕೆ.

      18. ಸತ್ತವರಿಗೆ ನಾವು ಹೆದರುವ ಅವಶ್ಯಕತೆ ಇಲ್ಲ ಯಾಕೆ?

      18 ಸತ್ತವರು ದೆವ್ವ ಆಗುತ್ತಾರೆ ಎಂದು ಕೆಲವು ಧರ್ಮಗಳಲ್ಲಿ ಕಲಿಸುತ್ತಾರೆ. ಅಷ್ಟೇ ಅಲ್ಲ, ಆ ದೆವ್ವಗಳು ನಮಗೆ ಸಹಾಯಮಾಡುವ ಸ್ನೇಹಿತರಾಗಬಹುದು ಅಥವಾ ನಮ್ಮ ಕಡು ಶತ್ರುಗಳಾಗಬಹುದು ಹಾಗಾಗಿ ಆ ದೆವ್ವಗಳಿಗೆ ಗೌರವ ಕೊಡಬೇಕು ಮತ್ತು ಹೆದರಬೇಕು ಎಂದು ಸಹ ಹೇಳುತ್ತಾರೆ. ಈ ಸುಳ್ಳನ್ನು ನಂಬಿ ಅನೇಕರು ಸತ್ತವರಿಗೆ ಹೆದರುತ್ತಾರೆ. ಹಾಗಾಗಿ ಯೆಹೋವನನ್ನು ಬಿಟ್ಟು ಸತ್ತವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ ಮತ್ತು ಅವರಿಗೆ ಆರಾಧನೆ ಸಹ ಮಾಡುತ್ತಾರೆ. ಆದರೆ, ಈಗಾಗಲೇ ನಾವು ಕಲಿತಂತೆ ಸತ್ತವರಿಗೆ ಯಾವುದೇ ಪ್ರಜ್ಞೆಯಾಗಲಿ ಭಾವನೆಯಾಗಲಿ ಇಲ್ಲ. ಹಾಗಾಗಿ ನಾವು ಅವರಿಗೆ ಹೆದರುವ ಅವಶ್ಯಕತೆಯೇ ಇಲ್ಲ. ನಾವು ಮೆಚ್ಚಿಸಬೇಕಾಗಿರುವುದು ಮತ್ತು ಆರಾಧಿಸಬೇಕಾಗಿರುವುದು ಯೆಹೋವನನ್ನು ಮಾತ್ರ. ಯಾಕೆಂದರೆ ಆತನೇ ನಮ್ಮ ಸೃಷ್ಟಿಕರ್ತ. ಆತನೇ ನಿಜವಾದ ದೇವರು.—ಪ್ರಕಟನೆ 4:11.

      19. ಸಾವಿನ ಕುರಿತಾದ ಸತ್ಯ ತಿಳಿದುಕೊಂಡರೆ ನಮಗೆ ಯಾವೆಲ್ಲ ಪ್ರಯೋಜನಗಳಿವೆ?

      19 ಸಾವಿನ ಕುರಿತಾದ ಸತ್ಯವನ್ನು ನಾವು ತಿಳಿದುಕೊಂಡರೆ ಧರ್ಮಗಳು ಹೇಳುವ ಇಂಥ ಸುಳ್ಳುಗಳಿಂದ ನಮಗೆ ಬಿಡುಗಡೆ ಸಿಗುತ್ತದೆ. ಅಷ್ಟೇ ಅಲ್ಲ, ನಮ್ಮ ಜೀವನದ ಬಗ್ಗೆ ಮತ್ತು ಭವಿಷ್ಯತ್ತಿನ ಬಗ್ಗೆ ಯೆಹೋವ ದೇವರು ಕೊಟ್ಟಿರುವ ಮಾತನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯವಾಗುತ್ತದೆ.

      20. ಮುಂದಿನ ಅಧ್ಯಾಯದಲ್ಲಿ ನಾವು ಏನನ್ನು ಕಲಿಯಲಿದ್ದೇವೆ?

      20 ದೇವಭಕ್ತನಾಗಿದ್ದ ಯೋಬ ಎಂಬ ವ್ಯಕ್ತಿ ತುಂಬ ವರ್ಷಗಳ ಹಿಂದೆ ಈ ಪ್ರಶ್ನೆಯನ್ನು ಕೇಳಿದನು, ‘ಮನುಷ್ಯನು ಸತ್ತು ಪುನಃ ಬದುಕುವನೇ?’ (ಯೋಬ 14:14) ಈ ಪ್ರಶ್ನೆಗೆ ದೇವರು ಬೈಬಲಿನಲ್ಲಿ ಕೊಟ್ಟಿರುವ ಉತ್ತರವನ್ನು ನೋಡುವಾಗ ನಮಗೆ ನಿಜಕ್ಕೂ ಖುಷಿಯಾಗುತ್ತದೆ. ಸತ್ತು ಹೋಗಿರುವ ಜನರು ನಿಜವಾಗಿಯೂ ಮತ್ತೆ ಬದುಕಿ ಬರಲು ಸಾಧ್ಯನಾ? ಇದಕ್ಕೆ ಉತ್ತರವನ್ನು ನಾವು ಮುಂದಿನ ಅಧ್ಯಾಯದಲ್ಲಿ ನೋಡೋಣ.

      a ಒಬ್ಬನು ಸತ್ತ ಮೇಲೆ ಅವನ ಆತ್ಮ ಬದುಕಿ ಉಳಿಯುತ್ತದೆ ಅಂತ ಕೆಲವರು ನಂಬುತ್ತಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಟಿಪ್ಪಣಿ 17⁠ನ್ನು ನೋಡಿ.

      ನಾನೇನು ಕಲಿತೆ?

      1: ಒಬ್ಬ ವ್ಯಕ್ತಿ ಸತ್ತಾಗ ಅವನ ಜೀವನ ಅಲ್ಲಿಗೆ ಮುಗಿಯುತ್ತದೆ

      “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ.”—ಪ್ರಸಂಗಿ 9:5

      ಸತ್ತ ಮೇಲೆ ನಮಗೆ ಏನಾಗುತ್ತದೆ?

      • ಕೀರ್ತನೆ 146:3, 4; ಪ್ರಸಂಗಿ 9:6

        ಸತ್ತಮೇಲೆ ನೋಡಲು, ಕೇಳಿಸಿಕೊಳ್ಳಲು, ಯೋಚಿಸಲು ಆಗುವುದಿಲ್ಲ.

      • ಯೋಹಾನ 11:11-14

        ಯೇಸು ಸಾವನ್ನು ನಿದ್ದೆಗೆ ಹೋಲಿಸಿದನು.

      2: ಮನುಷ್ಯರು ಸಾಯುವುದು ಯೆಹೋವನ ಇಷ್ಟವಾಗಿರಲಿಲ್ಲ

      “ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ಮಾತ್ರ ತಿನ್ನಬಾರದು; ತಿಂದ ದಿನ ಸತ್ತೇ ಹೋಗುವಿ.”—ಆದಿಕಾಂಡ 2:17

      ನಾವೇಕೆ ಸಾಯುತ್ತೇವೆ?

      • ಆದಿಕಾಂಡ 3:1-6

        ‘ನೀವು ಹಣ್ಣನ್ನು ತಿಂದರೂ ಸಾಯುವುದಿಲ್ಲ’ ಎಂದು ಸೈತಾನ ಹವ್ವಳಿಗೆ ಸುಳ್ಳು ಹೇಳಿದ. ಅವನ ಮಾತುಕೇಳಿ ಆದಾಮಹವ್ವ ಪಾಪ ಮಾಡಿದರು. ಅದರಿಂದಾಗಿ ಸತ್ತರು.

      • ಆದಿಕಾಂಡ 3:19

        ಆದಾಮನು ಸತ್ತನು, ಅಲ್ಲಿಗೇ ಅವನ ಜೀವನ ಮುಗಿಯಿತು.

      • ರೋಮನ್ನರಿಗೆ 5:12

        ಅವರ ಪಾಪ ರೋಗದಂತೆ ನಮಗೂ ಬಂತು. ಹಾಗಾಗಿ ನಾವೆಲ್ಲರೂ ಪಾಪಿಗಳಾಗಿ ಹುಟ್ಟಿದೆವು ಮತ್ತು ನಾವೂ ಸಾಯುತ್ತೇವೆ.

      • 1 ಕೊರಿಂಥ 15:26

        ಬೈಬಲ್‌ ಸಾವನ್ನು “ಶತ್ರು” ಎನ್ನುತ್ತದೆ.

      3: ಸಾವಿನ ಕುರಿತಾದ ಸತ್ಯವು ಸುಳ್ಳು ನಂಬಿಕೆಗಳಿಂದ ಬಿಡಿಸುತ್ತದೆ

      “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ? ಹಾಗಾಗುವದಾದರೆ ನನಗೆ ಬಿಡುಗಡೆಯಾಗುವವರೆಗೆ ನನ್ನ ವಾಯಿದೆಯ ದಿನಗಳಲ್ಲೆಲ್ಲಾ ಕಾದುಕೊಂಡಿರುವೆನು.”—ಯೋಬ 14:14

      ಸಾವಿನ ಕುರಿತು ಸತ್ಯ ತಿಳಿದುಕೊಳ್ಳುವುದಕ್ಕೂ ಸುಳ್ಳು ನಂಬಿಕೆಗಳಿಂದ ಬಿಡುಗಡೆ ಸಿಗುವುದಕ್ಕೂ ಏನು ಸಂಬಂಧ?

      • 1 ಯೋಹಾನ 4:8

        ಸತ್ತವರನ್ನು ನಿತ್ಯಕ್ಕೂ ಬೆಂಕಿಯಲ್ಲಿ ಸುಡುತ್ತಾ ನರಕದಲ್ಲಿ ಚಿತ್ರಹಿಂಸೆ ಕೊಡಲಾಗುತ್ತದೆ ಎನ್ನುವ ಸುಳ್ಳಿನಿಂದ ದೇವರಿಗೆ ಅವಮಾನ ಆಗುತ್ತದೆ. ಜನರು ಈ ರೀತಿ ನರಳುವಂತೆ ಆತನು ಖಂಡಿತ ಬಿಡುವುದಿಲ್ಲ.

      • ಪ್ರಕಟನೆ 4:11

        ಅನೇಕರು ಸತ್ತವರಿಗೆ ಹೆದರಿ ಅವರನ್ನು ಮೆಚ್ಚಿಸಲು ಪ್ರಯತ್ನಿಸುತ್ತಾರೆ. ಅವರ ಆರಾಧನೆ ಸಹ ಮಾಡುತ್ತಾರೆ. ನಾವು ಮೆಚ್ಚಿಸಬೇಕಾಗಿರುವುದು, ಆರಾಧಿಸಬೇಕಾಗಿರುವುದು ಯೆಹೋವನನ್ನು ಮಾತ್ರ. ಯಾಕೆಂದರೆ ಆತನೇ ನಮ್ಮ ಸೃಷ್ಟಿಕರ್ತ. ಆತನೇ ನಿಜವಾದ ದೇವರು.

  • ಸತ್ತವರನ್ನು ಮತ್ತೆ ನೋಡಬಹುದಾ?
    ಬೈಬಲ್‌ ನಮಗೆ ಏನು ಕಲಿಸುತ್ತದೆ?
    • ಅಧ್ಯಾಯ 7

      ಸತ್ತವರನ್ನು ಮತ್ತೆ ನೋಡಬಹುದಾ?

      1-3. (ಎ) ನಾವೆಲ್ಲರೂ ಯಾವುದರ ಬಂಧಿಗಳಾಗಿದ್ದೇವೆ? (ಬಿ) ಅದರಿಂದ ನಮ್ಮನ್ನು ಯೆಹೋವನು ಹೇಗೆ ಬಿಡಿಸುತ್ತಾನೆ?

      ಯೋಚಿಸಿ, ನೀವು ಮಾಡಿರದ ಒಂದು ತಪ್ಪಿಗೆ ನಿಮ್ಮ ಇಡೀ ಜೀವನವನ್ನು ನೀವು ಜೈಲಿನಲ್ಲೇ ಕಳೆಯಬೇಕಾಗಿದೆ. ಆ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನಿಮಗೆ ಅವಕಾಶವೇ ಇಲ್ಲ. ‘ಜೀವನವೇ ಮುಗಿದುಹೋಯಿತು, ಬೇರೆ ದಾರಿಯೇ ಇಲ್ಲ’ ಎಂದು ನಿಮಗೆ ಅನಿಸುತ್ತದೆ. ಇಂಥ ಪರಿಸ್ಥಿತಿಯಲ್ಲಿ, ನಿಮ್ಮನ್ನು ಬಿಡಿಸಲು ಒಬ್ಬ ವ್ಯಕ್ತಿಗೆ ಅಧಿಕಾರವಿದೆ ಅಂತ ನಿಮಗೆ ಗೊತ್ತಾಗುತ್ತದೆ. ಅಷ್ಟೇ ಅಲ್ಲ ನಿಮ್ಮನ್ನು ಜೈಲಿನಿಂದ ಬಿಡಿಸುತ್ತೇನೆಂದು ಅವನು ಮಾತುಕೊಟ್ಟಿದ್ದಾನೆಂದು ಸಹ ನಿಮಗೆ ತಿಳಿಯುತ್ತದೆ. ಆಗ ನಿಮಗೆ ಹೇಗೆ ಅನಿಸುತ್ತದೆ?

      2 ನಾವೆಲ್ಲರೂ ಸಾವಿನ ಸೆರೆಯಲ್ಲಿ ಬಂಧಿಗಳಾಗಿದ್ದೇವೆ. ಏನೇ ಮಾಡಿದರೂ ಸಾವಿನಿಂದ ಬಿಡಿಸಿಕೊಳ್ಳಲು ನಮ್ಮಿಂದ ಆಗುವುದಿಲ್ಲ. ಆದರೆ ಯೆಹೋವ ದೇವರಿಗೆ ನಮ್ಮನ್ನು ಸಾವಿನಿಂದ ಬಿಡಿಸುವ ಶಕ್ತಿಯಿದೆ. ಅಷ್ಟೇ ಅಲ್ಲ, ‘ಮರಣವನ್ನು ಕೊನೆಯ ಶತ್ರುವಾಗಿ ನಿರ್ಮೂಲ ಮಾಡುತ್ತೇನೆಂದು’ ಸಹ ಆತನು ಮಾತು ಕೊಟ್ಟಿದ್ದಾನೆ.—1 ಕೊರಿಂಥ 15:26.

      3 ದೇವರು ಕೊಟ್ಟ ಈ ಮಾತಿನಿಂದ ನಮಗೆ ಎಷ್ಟು ನೆಮ್ಮದಿ ಅನಿಸುತ್ತದಲ್ವಾ? ಸಾಯುತ್ತೇವೆಂಬ ಭಯವೇ ನಮಗೆ ಇರುವುದಿಲ್ಲ. ಆದರೆ ಈಗಾಗಲೇ ಸತ್ತಿರುವವರ ಬಗ್ಗೆ ಏನು? ಅವರನ್ನು ಸಹ ಯೆಹೋವನು “ಪುನರುತ್ಥಾನ” ಮಾಡುತ್ತಾನೆ ಅಂದರೆ ಅವರನ್ನು ಪುನಃ ಜೀವಂತಗೊಳಿಸುತ್ತಾನೆ. ‘ಮೃತರಾದ ಜನರು ಬದುಕುವರು’ ಎಂದು ಆತನು ಬೈಬಲಿನಲ್ಲಿ ಮಾತು ಸಹ ಕೊಟ್ಟಿದ್ದಾನೆ. (ಯೆಶಾಯ 26:19) ತೀರಿಹೋಗಿರುವ ನಿಮ್ಮ ಆಪ್ತರು, ಸ್ನೇಹಿತರು ಮತ್ತೆ ಜೀವ ಪಡೆದು ಬಂದಾಗ ನಿಮಗೆಷ್ಟು ಖುಷಿಯಾಗಬಹುದು ಎಂದು ಸ್ವಲ್ಪ ಊಹಿಸಿ ನೋಡಿ!

      ನೀವು ತುಂಬ ಪ್ರೀತಿಸುವವರು ತೀರಿಕೊಂಡಾಗ

      4. (ಎ) ಕುಟುಂಬದವರಲ್ಲಿ ಅಥವಾ ಸ್ನೇಹಿತರಲ್ಲಿ ಯಾರಾದರೂ ತೀರಿಕೊಂಡಾಗ ಯಾವುದು ನಮಗೆ ಸಾಂತ್ವನ ಕೊಡುತ್ತದೆ? (ಬಿ) ಯೇಸುವಿನ ಆಪ್ತ ಸ್ನೇಹಿತರಲ್ಲಿ ಕೆಲವರ ಹೆಸರನ್ನು ಹೇಳಿ.

      4 ಕುಟುಂಬದವರಲ್ಲಿ ಅಥವಾ ಸ್ನೇಹಿತರಲ್ಲಿ ಯಾರಾದರೂ ತೀರಿಕೊಂಡಾಗ ನಮಗಾಗುವ ದುಃಖ ಸಂಕಟವನ್ನು ಮಾತಿನಲ್ಲಿ ಹೇಳಲು ಆಗುವುದಿಲ್ಲ. ಅವರು ನಮ್ಮೊಟ್ಟಿಗೇ ಇರಬೇಕು ಎಂದು ಅನಿಸಿದರೂ ನಾವು ಅವರಿಗೆ ಪುನಃ ಜೀವ ಕೊಡಲು ಆಗುವುದಿಲ್ಲ. ಸಾವಿನ ಮುಂದೆ ನಾವು ಸೋತು ಹೋಗುತ್ತೇವೆ. ಆದರೆ ಬೈಬಲಿನಲ್ಲಿ ಹೇಳಿರುವುದನ್ನು ಓದುವಾಗ ನಮಗೆ ತುಂಬ ಸಾಂತ್ವನ ಸಿಗುತ್ತದೆ. (2 ಕೊರಿಂಥ 1:3, 4 ಓದಿ.) ಅದಕ್ಕೊಂದು ಉದಾಹರಣೆ ನೋಡೋಣ. ತೀರಿಹೋಗಿರುವ ನಮ್ಮ ಪ್ರೀತಿಯ ಜನರಿಗೆ ಪುನಃ ಜೀವ ಕೊಡಲು ಯೆಹೋವ ದೇವರಿಗೂ ಯೇಸುವಿಗೂ ಎಷ್ಟು ಆಸೆಯಿದೆ ಎಂದು ಈ ಉದಾಹರಣೆಯಿಂದ ಗೊತ್ತಾಗುತ್ತದೆ. ಯೇಸು ಭೂಮಿಯಲ್ಲಿದ್ದಾಗ ಲಾಜರನನ್ನು ಮತ್ತು ಅವನ ಸಹೋದರಿಯರನ್ನು ಆಗಾಗ ಭೇಟಿ ಮಾಡುತ್ತಿದ್ದನು. ಅವರು ಯೇಸುವಿನ ಆಪ್ತ ಸ್ನೇಹಿತರಾಗಿದ್ದರು. ‘ಯೇಸುವಿಗೆ ಮಾರ್ಥ, ಮರಿಯ ಮತ್ತು ಲಾಜರನ ಮೇಲೆ ಪ್ರೀತಿ ಇತ್ತು’ ಎಂದು ಬೈಬಲಿನಲ್ಲಿದೆ.—ಯೋಹಾನ 11:3-5.

      5, 6. (ಎ) ಲಾಜರನ ಕುಟುಂಬದವರು, ಸ್ನೇಹಿತರು ಅಳುತ್ತಿದ್ದಾಗ ಯೇಸುವಿಗೆ ಹೇಗನಿಸಿತು? (ಬಿ) ಇದರಿಂದ ನಮಗೆ ಹೇಗೆ ಸಾಂತ್ವನ ಸಿಗುತ್ತದೆ?

      5 ಒಂದು ದಿನ ಲಾಜರನು ತೀರಿಹೋದನು. ಹಾಗಾಗಿ ಮಾರ್ಥ ಮತ್ತು ಮರಿಯಳನ್ನು ಸಮಾಧಾನ ಮಾಡಲು ಯೇಸು ಅವರ ಊರಿಗೆ ಹೊರಟನು. ಯೇಸು ಇನ್ನೂ ಊರ ಹೊರಗೆ ಇರುವಾಗಲೇ ಆತನು ಬರುತ್ತಿದ್ದಾನೆಂಬ ಸುದ್ದಿ ಮಾರ್ಥಳ ಕಿವಿಗೆ ಬಿತ್ತು. ಆಗ ಅವಳು ಯೇಸುವನ್ನು ನೋಡಲು ಹೋದಳು. ಆತನನ್ನು ನೋಡಿ ಮಾರ್ಥಳಿಗೆ ಒಂದು ಕಡೆ ಸಂತೋಷವಾದರೆ ಇನ್ನೊಂದು ಕಡೆ, ಯೇಸು ತಡವಾಗಿ ಬಂದದ್ದರಿಂದ ಇನ್ನೇನು ಮಾಡಲು ಆಗುವುದಿಲ್ಲ, ಪರಿಸ್ಥಿತಿ ಕೈಮೀರಿ ಹೋಗಿದೆ ಎಂಬ ದುಃಖ. ಹಾಗಾಗಿ ಅವಳು ಯೇಸುವಿಗೆ “ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದು ಹೇಳಿದಳು. ನಂತರ ಯೇಸುವನ್ನು ನೋಡಲು ಮರಿಯಳು ಬಂದಳು. ಅವಳು ಅಳುತ್ತಿದ್ದಳು. ಎಲ್ಲರೂ ಅಳುವುದನ್ನು ನೋಡಿ ಯೇಸುವಿಗೆ ದುಃಖವಾಯಿತು. ಆತನೂ ಅತ್ತುಬಿಟ್ಟನು. (ಯೋಹಾನ 11:21, 33, 35) ನಾವು ಪ್ರೀತಿಸುವ ಜನರು ತೀರಿಹೋದಾಗ ನಮಗೆ ಆಗುವಂಥ ದುಃಖ-ನೋವು ಯೇಸುವಿಗೂ ಆಯಿತು.

      6 ಯೇಸುವಿನಲ್ಲಿ ಯೆಹೋವನಲ್ಲಿದ್ದ ಗುಣಗಳೇ ಇದ್ದವು. (ಯೋಹಾನ 14:9) ಹಾಗಾಗಿ ಯಾರಾದರೂ ತೀರಿಹೋದಾಗ ಯೇಸುವಿನಂತೆಯೇ ಯೆಹೋವ ದೇವರಿಗೂ ಖಂಡಿತ ದುಃಖ ಆಗುತ್ತದೆ. ಮರಣವನ್ನೇ ಇಲ್ಲದಂತೆ ಮಾಡುವ ಶಕ್ತಿ ಯೆಹೋವ ದೇವರಿಗೆ ಇರುವುದರಿಂದ ಆತನು ಮರಣವನ್ನು ಬೇಗನೆ ತೆಗೆದುಹಾಕಲಿದ್ದಾನೆ. ಇದು ನಮಗೆ ತುಂಬ ಸಾಂತ್ವನ ಕೊಡುತ್ತದೆ.

      “ಲಾಜರನೇ, ಹೊರಗೆ ಬಾ”

      7, 8. (ಎ) ಗವಿಗೆ ಮುಚ್ಚಿದ್ದ ಕಲ್ಲನ್ನು ತೆಗೆಯುವುದು ಬೇಡವೆಂದು ಮಾರ್ಥಳಿಗೆ ಯಾಕೆ ಅನಿಸಿತು? (ಬಿ) ಆಮೇಲೆ ಯೇಸು ಏನು ಮಾಡಿದನು?

      7 ಲಾಜರನ ದೇಹವನ್ನಿಟ್ಟಿದ್ದ ಸ್ಥಳಕ್ಕೆ ಯೇಸು ಬಂದನು. ಲಾಜರನನ್ನು ಒಂದು ಗವಿಯಲ್ಲಿಟ್ಟು ಅದರ ಮುಂಭಾಗವನ್ನು ದೊಡ್ಡ ಕಲ್ಲಿನಿಂದ ಮುಚ್ಚಲಾಗಿತ್ತು. “ಆ ಕಲ್ಲನ್ನು ತೆಗೆದುಹಾಕಿರಿ” ಎಂದು ಯೇಸು ಹೇಳಿದನು. ಆದರೆ ಲಾಜರನನ್ನು ಸಮಾಧಿ ಮಾಡಿ ಈಗಾಗಲೇ ನಾಲ್ಕು ದಿನಗಳಾಗಿದ್ದರಿಂದ ಕಲ್ಲನ್ನು ತೆಗೆಯುವುದು ಬೇಡವೆಂದು ಮಾರ್ಥಳಿಗೆ ಅನಿಸಿತು. (ಯೋಹಾನ 11:39) ಕಲ್ಲನ್ನು ತೆಗೆದ ಮೇಲೆ ಯೇಸು ಏನು ಮಾಡುತ್ತಾನೆ ಎನ್ನುವುದು ಸಹ ಅವಳಿಗೆ ಗೊತ್ತಿರಲಿಲ್ಲ.

      ಯೇಸು ಲಾಜರನನ್ನು ಪುನರುತ್ಥಾನ ಮಾಡಿದಾಗ, ಅವನ ಕುಟುಂಬದವರಿಗೆ ಮತ್ತು ಸ್ನೇಹಿತರಿಗೆ ತುಂಬಾ ಸಂತೋಷವಾಯಿತು

      ಲಾಜರನ ಪುನರುತ್ಥಾನವಾದಾಗ ಅವನ ಕುಟುಂಬದವರಿಗೆ, ಸ್ನೇಹಿತರಿಗೆ ಎಷ್ಟು ಸಂತೋಷವಾಗಿರಬೇಕು ಊಹಿಸಿ!—ಯೋಹಾನ 11:38-44

      8 ಕಲ್ಲನ್ನು ತೆಗೆದ ಮೇಲೆ ಯೇಸು ಲಾಜರನಿಗೆ “ಹೊರಗೆ ಬಾ” ಎಂದು ಹೇಳಿದನು. ಅದರ ನಂತರ ಆದದ್ದನ್ನು ನೋಡಿದಾಗ ಮಾರ್ಥ ಮತ್ತು ಮರಿಯಳಿಗೆ ತಮ್ಮ ಕಣ್ಣುಗಳನ್ನೇ ನಂಬಲಾಗಲಿಲ್ಲ. ಏಕೆಂದರೆ “ಸತ್ತಿದ್ದ ಆ ಮನುಷ್ಯನು ಹೊರಗೆ ಬಂದನು; ಅವನ ಕೈಕಾಲುಗಳನ್ನು ಹೊದಿಕೆಗಳಿಂದ ಕಟ್ಟಲಾಗಿತ್ತು.” (ಯೋಹಾನ 11:43, 44) ಲಾಜರನಿಗೆ ಪುನಃ ಜೀವ ಬಂತು. ಅವನು ಪುನಃ ತನ್ನ ಕುಟುಂಬದ ಮತ್ತು ಸ್ನೇಹಿತರ ಜೊತೆಸೇರಿದನು. ಅವರು ಈಗ ಅವನನ್ನು ಮುಟ್ಟಲು, ಅಪ್ಪಿಕೊಳ್ಳಲು ಆಗುತ್ತಿತ್ತು. ಅವನೊಂದಿಗೆ ಮಾತಾಡಲು ಸಹ ಆಗುತ್ತಿತ್ತು. ಇದೊಂದು ದೊಡ್ಡ ಅದ್ಭುತವಾಗಿತ್ತು!

      “ಹುಡುಗಿ, ಎದ್ದೇಳು!”

      9, 10. (ಎ) ಸತ್ತವರನ್ನು ಪುನರುತ್ಥಾನ ಮಾಡುವ ಶಕ್ತಿಯನ್ನು ಯೇಸುವಿಗೆ ಯಾರು ಕೊಟ್ಟರು? (ಬಿ) ಪುನರುತ್ಥಾನದ ಘಟನೆಗಳನ್ನು ಓದುವುದರಿಂದ ನಮಗೇನು ಪ್ರಯೋಜನವಿದೆ?

      9 ಯೇಸು ತನ್ನ ಸ್ವಂತ ಶಕ್ತಿಯಿಂದ ಪುನರುತ್ಥಾನ ಮಾಡುತ್ತಿದ್ದನಾ? ಇಲ್ಲ. ಅದು ಹೇಗೆ ಗೊತ್ತಾಗುತ್ತದೆ? ಲಾಜರನನ್ನು ಪುನರುತ್ಥಾನ ಮಾಡುವ ಮೊದಲು ಯೇಸು ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದನು. ಆಗ ಯೆಹೋವ ದೇವರು ಆತನಿಗೆ ಶಕ್ತಿ ಕೊಟ್ಟನು. (ಯೋಹಾನ 11:41, 42 ಓದಿ.) ಬೈಬಲಿನಲ್ಲಿ ಲಾಜರನ ಪುನರುತ್ಥಾನದ ಬಗ್ಗೆ ಮಾತ್ರವಲ್ಲ, ಬೇರೆ ಅನೇಕರ ಪುನರುತ್ಥಾನದ ಬಗ್ಗೆ ಸಹ ಹೇಳಲಾಗಿದೆ. ಅದರಲ್ಲಿ ಒಂದು, 12 ವರ್ಷದ ಪುಟ್ಟ ಹುಡುಗಿಯನ್ನು ಯೇಸು ಪುನರುತ್ಥಾನ ಮಾಡಿದ್ದು. ಆ ಹುಡುಗಿಗೆ ತುಂಬ ಹುಷಾರಿರಲಿಲ್ಲ. ತಂದೆತಾಯಿಗೆ ಅವಳು ಒಬ್ಬಳೇ ಮಗಳು. ಮಗಳನ್ನು ಹೇಗಾದರೂ ಉಳಿಸಿಕೊಳ್ಳಬೇಕೆಂದು ಅಪ್ಪ ಯಾಯೀರನು ಯೇಸುವಿನ ಬಳಿ ಬರುತ್ತಾನೆ. ತನ್ನ ಮಗಳನ್ನು ಗುಣ ಮಾಡಬೇಕೆಂದು ಅಂಗಲಾಚುತ್ತಾನೆ. ಅವನು ಯೇಸುವಿನ ಹತ್ತಿರ ಮಾತಾಡುತ್ತಿರುವಾಗಲೇ ಕೆಲವು ಪುರುಷರು ಬಂದು, “ನಿನ್ನ ಮಗಳು ತೀರಿಹೋದಳು; ಇನ್ನು ಬೋಧಕನಿಗೆ ತೊಂದರೆ ಕೊಡಬೇಡ” ಎಂದು ಹೇಳುತ್ತಾರೆ. ಆಗ ಯೇಸು ಅವನಿಗೆ, “ಭಯಪಡಬೇಡ, ನಂಬಿಕೆ ಮಾತ್ರ ಇರಲಿ; ಅವಳು ಬದುಕುವಳು” ಎನ್ನುತ್ತಾನೆ. ನಂತರ ಯೇಸು ಯಾಯೀರನ ಜೊತೆ ಅವನ ಮನೆಗೆ ಹೋಗುತ್ತಾನೆ. ಅಲ್ಲಿ ಎಲ್ಲರು ಅಳುತ್ತಿರುವುದನ್ನು ನೋಡಿ ಯೇಸು ಅವರಿಗೆ “ಅಳುವುದನ್ನು ನಿಲ್ಲಿಸಿ. ಅವಳು ಸತ್ತಿಲ್ಲ, ನಿದ್ರೆಮಾಡುತ್ತಿದ್ದಾಳೆ” ಎಂದು ಹೇಳುತ್ತಾನೆ. ಯೇಸು ಏನು ಹೇಳುತ್ತಿದ್ದಾನೆಂದು ಆ ಹುಡುಗಿಯ ಅಪ್ಪಅಮ್ಮನಿಗೆ ಅರ್ಥವಾಗಿರಲಿಕ್ಕಿಲ್ಲ. ನಂತರ ಯೇಸು ಎಲ್ಲರಿಗೆ ಮನೆಯಿಂದ ಹೊರಗೆ ಹೋಗುವಂತೆ ಹೇಳಿ, ಅಪ್ಪಅಮ್ಮನನ್ನು ಕರೆದುಕೊಂಡು ಹುಡುಗಿಯನ್ನು ಮಲಗಿಸಿದ ಕೋಣೆಗೆ ಹೋಗುತ್ತಾನೆ. ಅವಳ ಕೈಯನ್ನು ಮೃದುವಾಗಿ ಹಿಡಿದು, “ಹುಡುಗಿ, ಎದ್ದೇಳು!” ಎನ್ನುತ್ತಾನೆ. ತಕ್ಷಣ ಅವಳು ಎದ್ದು ಕೂತುಕೊಳ್ಳುತ್ತಾಳೆ, ನಡೆಯಲು ಆರಂಭಿಸುತ್ತಾಳೆ! ಇದನ್ನು ನೋಡಿ ಅವಳ ಅಪ್ಪಅಮ್ಮನಿಗೆ ಹೇಗಾಗಿರಬೇಕು ಯೋಚಿಸಿ! ಸಂತೋಷದಿಂದ ಅತ್ತೇ ಬಿಟ್ಟಿರಬೇಕು! (ಮಾರ್ಕ 5:22-24, 35-42; ಲೂಕ 8:49-56) ಆ ದಿನದಿಂದ ಅವರು ತಮ್ಮ ಪುಟ್ಟ ಮಗಳನ್ನು ನೋಡಿದಾಗೆಲ್ಲ ಯೆಹೋವ ದೇವರು ಯೇಸುವಿನ ಮೂಲಕ ತಮಗೆ ಮಾಡಿದ ಈ ಮಹಾ ಉಪಕಾರವನ್ನು ಖಂಡಿತ ನೆನಸಿಕೊಂಡಿರಬೇಕು.a

      10 ಯೇಸು ಯಾರನ್ನು ಪುನರುತ್ಥಾನ ಮಾಡಿದನೋ ಅವರೆಲ್ಲ ಕಾಲಾನಂತರ ತೀರಿಹೋದರು ಎನ್ನುವುದೇನೋ ನಿಜ. ಆದರೆ ಅವರ ಬಗ್ಗೆ ಓದುವುದರಿಂದ ನಮಗೆ ಪ್ರಯೋಜನವಿದೆ. ನಮ್ಮ ಪ್ರಿಯ ಜನರು ಸತ್ತರೂ ದೇವರು ಅವರಿಗೆ ಜೀವ ಕೊಡುತ್ತಾನೆ ಎಂಬ ಭರವಸೆ ಇದರಿಂದ ಸಿಗುತ್ತದೆ. ಸತ್ತವರಿಗೆ ಪುನಃ ಜೀವ ಕೊಡಬೇಕೆಂದು ದೇವರು ಇಷ್ಟಪಡುತ್ತಾನೆ. ಆ ಇಷ್ಟದಂತೆ ಆತನು ಬೇಗನೆ ಮಾಡಲಿದ್ದಾನೆ.

      ಪುನರುತ್ಥಾನದ ಘಟನೆಗಳಿಂದ ನಾವು ಕಲಿಯುವ ಪಾಠಗಳು

      ಪೇತ್ರನು ದೊರ್ಕಳನ್ನು ಪುನರುತ್ಥಾನ ಮಾಡುತ್ತಿರುವಾಗ ಅಲ್ಲಿದ್ದ ಜನರು ಅದನ್ನು ನೋಡುತ್ತಿದ್ದಾರೆ

      ಅಪೊಸ್ತಲ ಪೇತ್ರನು ದೊರ್ಕಳನ್ನು ಪುನರುತ್ಥಾನ ಮಾಡಿದನು.—ಅಪೊಸ್ತಲರ ಕಾರ್ಯಗಳು 9:36-42

      ಎಲೀಯನು ವಿಧವೆಯ ಮಗನನ್ನು ಪುನರುತ್ಥಾನ ಮಾಡುತ್ತಾನೆ, ಆಕೆ ತನ್ನ ಮಗನನ್ನು ಸಂತೋಷದಿಂದ ಅಪ್ಪಿಕೊಳ್ಳುತ್ತಾಳೆ

      ಎಲೀಯನು ವಿಧವೆಯ ಮಗನನ್ನು ಪುನರುತ್ಥಾನ ಮಾಡಿದನು.—1 ಅರಸುಗಳು 17:17-24

      11. ಪ್ರಸಂಗಿ 9:5⁠ರಲ್ಲಿರುವ ವಿಷಯ ಸತ್ಯವೆಂದು ಲಾಜರನ ಘಟನೆಯಿಂದ ಹೇಗೆ ಗೊತ್ತಾಗುತ್ತದೆ?

      11 “ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. ಲಾಜರನ ವಿಷಯದಲ್ಲೂ ಇದು ಸತ್ಯ. (ಪ್ರಸಂಗಿ 9:5) ತೀರಿಹೋಗಿದ್ದ ಲಾಜರನು ಯೇಸು ಹೇಳಿದಂತೆಯೇ ಗಾಢ ನಿದ್ರೆಯಲ್ಲಿದ್ದಂತೆ ಇದ್ದನು. (ಯೋಹಾನ 11:11) ಸಮಾಧಿಯಲ್ಲಿದ್ದಾಗ ಅವನಿಗೆ “ಯಾವ ತಿಳುವಳಿಕೆಯೂ” ಇರಲಿಲ್ಲ.

      12. ಲಾಜರನನ್ನು ನಿಜವಾಗಿಯೂ ಪುನರುತ್ಥಾನ ಮಾಡಲಾಗಿತ್ತು ಎಂದು ನಾವು ಹೇಗೆ ಹೇಳಬಹುದು?

      12 ಲಾಜರನ ಪುನರುತ್ಥಾನವನ್ನು ಅನೇಕ ಮಂದಿ ನೋಡಿದರು. ಯೇಸುವೇ ಈ ಅದ್ಭುತವನ್ನು ಮಾಡಿದನೆಂದು ಆತನ ವಿರೋಧಿಗಳಿಗೂ ಗೊತ್ತಿತ್ತು. ಲಾಜರನು ಜೀವಂತವಾಗಿ ಇದ್ದದ್ದೇ ಅವನ ಪುನರುತ್ಥಾನವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿತ್ತು. (ಯೋಹಾನ 11:47) ಅಷ್ಟೇ ಅಲ್ಲ, ಪುನರುತ್ಥಾನ ಆಗಿದ್ದ ಲಾಜರನನ್ನು ನೋಡಲು ಅನೇಕ ಜನರು ಹೋದರು. ಅವನನ್ನು ನೋಡಿದ ಮೇಲೆ ದೇವರೇ ಯೇಸುವನ್ನು ಕಳುಹಿಸಿದ್ದಾನೆ ಎಂದು ನಂಬಿದರು. ಇದನ್ನು ನೋಡಿ ಯೇಸುವಿನ ವಿರೋಧಿಗಳಿಗೆ ಸಹಿಸಲಾಗಲಿಲ್ಲ. ಹಾಗಾಗಿ ಅವರು ಯೇಸುವನ್ನು ಮತ್ತು ಲಾಜರನನ್ನು ಕೊಲ್ಲಬೇಕೆಂದು ಕಾಯುತ್ತಿದ್ದರು.—ಯೋಹಾನ 11:53; 12:9-11.

      13. ಸತ್ತವರನ್ನು ಯೆಹೋವನು ಪುನರುತ್ಥಾನ ಮಾಡುತ್ತಾನೆಂದು ನಾವು ಹೇಗೆ ನಂಬಬಹುದು?

      13 “ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ” ಪುನರುತ್ಥಾನವಾಗುವರು ಎಂದು ಯೇಸು ಹೇಳಿದ್ದಾನೆ. (ಯೋಹಾನ 5:28) ಇದರರ್ಥ ಯಾರನ್ನೆಲ್ಲಾ ಯೆಹೋವ ದೇವರು ಪುನರುತ್ಥಾನ ಮಾಡಬೇಕೆಂದಿದ್ದಾನೋ ಅವರನ್ನೆಲ್ಲ ತನ್ನ ಸ್ಮರಣೆಯಲ್ಲಿ ಅಂದರೆ ನೆನಪಿನಲ್ಲಿ ಇಟ್ಟುಕೊಳ್ಳುತ್ತಾನೆ. ಒಬ್ಬ ವ್ಯಕ್ತಿಯನ್ನು ಪುನರುತ್ಥಾನ ಮಾಡಬೇಕೆಂದರೆ ಯೆಹೋವನಿಗೆ ಅವನ ಬಗ್ಗೆ ಪ್ರತಿಯೊಂದು ವಿಷಯ ಗೊತ್ತಿರಬೇಕು. ಇದು ಯೆಹೋವನಿಗೆ ಸಾಧ್ಯನಾ? ಆಕಾಶದಲ್ಲಿ ಕೋಟಿಗಟ್ಟಲೆ ನಕ್ಷತ್ರಗಳಿವೆ. ಅಂಥ ಒಂದೊಂದು ನಕ್ಷತ್ರವನ್ನು ಸಹ ಯೆಹೋವನು ಹೆಸರಿಡಿದು ಕರೆಯುತ್ತಾನೆಂದು ಬೈಬಲ್‌ ತಿಳಿಸುತ್ತದೆ. (ಯೆಶಾಯ 40:26 ಓದಿ.) ಒಂದೊಂದು ನಕ್ಷತ್ರದ ಹೆಸರನ್ನು ನೆನಪಿಟ್ಟುಕೊಳ್ಳುವ ಯೆಹೋವನಿಗೆ ತಾನು ಪುನರುತ್ಥಾನ ಮಾಡಲು ಬಯಸುವ ಜನರ ಬಗ್ಗೆ ನೆನಪಿಟ್ಟುಕೊಳ್ಳುವುದು ಕಷ್ಟನಾ? ಖಂಡಿತ ಇಲ್ಲ. ಅಷ್ಟೇ ಅಲ್ಲ, ಪ್ರತಿಯೊಂದನ್ನು ಸೃಷ್ಟಿ ಮಾಡಿದವನು ಯೆಹೋವ ದೇವರೇ ಆಗಿರುವುದರಿಂದ ಸತ್ತವರಿಗೆ ಪುನಃ ಜೀವ ಕೊಡುವ ಶಕ್ತಿ ಆತನಿಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.

      14, 15. ಯೋಬನ ಮಾತುಗಳಿಂದ ಪುನರುತ್ಥಾನದ ಬಗ್ಗೆ ನಾವೇನನ್ನು ಕಲಿಯಬಹುದು?

      14 “ಒಬ್ಬ ಮನುಷ್ಯನು ಸತ್ತು ಪುನಃ ಬದುಕಾನೇ?” ಎಂಬ ಪ್ರಶ್ನೆ ನಂಬಿಗಸ್ತ ವ್ಯಕ್ತಿಯಾಗಿದ್ದ ಯೋಬನಿಗೆ ಇತ್ತು. ನಂತರ ಅವನೇ ಯೆಹೋವನಿಗೆ “ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು” ಎಂದನು. ಇದರಿಂದ ಯೋಬನಿಗೆ ಪುನರುತ್ಥಾನದಲ್ಲಿ ನಂಬಿಕೆಯಿತ್ತು ಎಂದು ಗೊತ್ತಾಗುತ್ತದೆ. ಸತ್ತವರನ್ನು ಪುನರುತ್ಥಾನ ಮಾಡಲು ಯೆಹೋವನು ಕಾತರದಿಂದ ಕಾಯುತ್ತಿದ್ದಾನೆಂದು ಯೋಬನಿಗೆ ಚೆನ್ನಾಗಿ ಗೊತ್ತಿತ್ತು.—ಯೋಬ 14:14, 15.

      15 ಹಾಗಾದರೆ ನಾವು ಸತ್ತರೆ ನಮಗೂ ಪುನರುತ್ಥಾನ ಆಗುತ್ತದೆ. ಈ ವಿಷಯ ಕೇಳಿ ನಮಗೆ ತುಂಬಾ ಖುಷಿ ಆಗುತ್ತದೆ. ಆದರೆ ‘ಈಗಾಗಲೇ ತೀರಿಹೋಗಿರುವ ನಮ್ಮ ಕುಟುಂಬದವರಿಗೆ ಮತ್ತು ನಮ್ಮ ಸ್ನೇಹಿತರಿಗೆ ಸಹ ಪುನರುತ್ಥಾನ ಆಗುತ್ತದಾ?’ ಎಂದು ನೀವು ಯೋಚಿಸುತ್ತಿರಬಹುದು. ಈಗಾಗಲೇ ತೀರಿಹೋದವರಿಗೂ ಪುನಃ ಜೀವಕೊಡಲು ಯೆಹೋವನು ಇಷ್ಟಪಡುತ್ತಾನೆ. ಇದನ್ನು ತಿಳಿದು ನಮಗೆ ಇನ್ನೂ ಖುಷಿಯಾಗುತ್ತದೆ ಅಲ್ವಾ? ಆದರೆ ಸತ್ತವರಲ್ಲಿ ಯಾರಿಗೆಲ್ಲಾ ಪುನರುತ್ಥಾನ ಆಗುತ್ತದೆ ಮತ್ತು ಪುನರುತ್ಥಾನದ ನಂತರ ಅವರು ಎಲ್ಲಿ ಜೀವಿಸುತ್ತಾರೆ ಎಂದು ತಿಳಿದುಕೊಳ್ಳೋಣ.

      ‘ಅವರು ಆತನ ಸ್ವರವನ್ನು ಕೇಳಿ ಹೊರಗೆ ಬರುವರು’

      16. ಮುಂದೆ ಪುನರುತ್ಥಾನವಾಗಿ ಭೂಮಿಯ ಮೇಲೆ ಜೀವಿಸುವವರಿಗೆ ಎಂಥ ಜೀವನ ಸಿಗಲಿದೆ?

      16 ಈಗಾಗಲೇ ನಾವು ನೋಡಿದಂತೆ, ಈ ಹಿಂದೆ ಸತ್ತು ಪುನರುತ್ಥಾನ ಆದಂಥ ಜನರು ಇದೇ ಭೂಮಿಯ ಮೇಲೆ ತಮ್ಮ ಕುಟುಂಬದವರೊಂದಿಗೆ ಮತ್ತು ಸ್ನೇಹಿತರೊಂದಿಗೆ ಪುನಃ ಜೊತೆಸೇರಿದರು. ಮುಂದೆ ಸಹ ಅನೇಕರ ಪುನರುತ್ಥಾನ ಆಗಲಿದೆ. ಅವು ಹಿಂದೆ ನಡೆದ ಪುನರುತ್ಥಾನಗಳಿಗಿಂತ ಉತ್ತಮವಾಗಿರುತ್ತವೆ. ಯಾಕೆಂದರೆ, ಮುಂದೆ ಪುನರುತ್ಥಾನ ಆಗುವವರಿಗೆ ಭೂಮಿಯ ಮೇಲೆ ಸಾವೇ ಇಲ್ಲದೆ ಶಾಶ್ವತವಾಗಿ ಜೀವಿಸುವ ಅವಕಾಶ ಸಿಗಲಿದೆ. ಅಲ್ಲದೇ, ಆಗ ಭೂಮಿಯ ಮೇಲೆ ಇರುವ ಪರಿಸ್ಥಿತಿ ತುಂಬ ಬದಲಾಗಿರುತ್ತದೆ. ಯುದ್ಧಗಳಾಗಲಿ, ಪಾತಕಗಳಾಗಲಿ, ಆರೋಗ್ಯ ಸಮಸ್ಯೆಗಳಾಗಲಿ ಇರುವುದಿಲ್ಲ.

      17. ಯಾರಿಗೆಲ್ಲ ಪುನರುತ್ಥಾನ ಆಗುತ್ತದೆ?

      17 ಯಾರಿಗೆಲ್ಲಾ ಪುನರುತ್ಥಾನ ಆಗುತ್ತದೆ? ‘ಸ್ಮರಣೆಯ ಸಮಾಧಿಗಳಲ್ಲಿ ಇರುವವರೆಲ್ಲರೂ ತನ್ನ ಸ್ವರವನ್ನು ಕೇಳಿ ಹೊರಗೆ ಬರುವರು’ ಎಂದು ಯೇಸು ಹೇಳಿದನು. (ಯೋಹಾನ 5:28, 29) “ಸಮುದ್ರವು ತನ್ನೊಳಗಿದ್ದ ಸತ್ತವರನ್ನು ಒಪ್ಪಿಸಿತು; ಮೃತ್ಯು ಮತ್ತು ಹೇಡೀಸ್‌ [ಸಮಾಧಿ] ತಮ್ಮೊಳಗಿದ್ದ ಸತ್ತವರನ್ನು ಒಪ್ಪಿಸಿದವು” ಎಂದು ಪ್ರಕಟನೆ 20:13 ತಿಳಿಸುತ್ತದೆ. ಕೋಟ್ಯಂತರ ಜನರು ಪುನಃ ಜೀವಿಸಲಿದ್ದಾರೆ ಎಂದು ಇದರಿಂದ ಗೊತ್ತಾಗುತ್ತದೆ. ಅಪೊಸ್ತಲ ಪೌಲನು “ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವಾಗುವುದೆಂದು” ಹೇಳಿದನು. (ಅಪೊಸ್ತಲರ ಕಾರ್ಯಗಳು 24:15 ಓದಿ.) ಆತನ ಈ ಮಾತಿನ ಅರ್ಥವೇನಾಗಿತ್ತು?

      ತೀರಿಹೋಗಿರುವವರು ಪರದೈಸಿನಲ್ಲಿ ಪುನರುತ್ಥಾನವಾಗಿ ಬರುವಾಗ ತಮ್ಮ ಪ್ರಿಯ ಜನರ ಜೊತೆಸೇರಿ ಜೀವಿಸುತ್ತಾರೆ

      ಸತ್ತವರು ಪುನರುತ್ಥಾನವಾಗಿ ಪರದೈಸಿನಲ್ಲಿ ತಮ್ಮ ಪ್ರೀತಿಯ ಜನರ ಜೊತೆ ಜೀವಿಸುತ್ತಾರೆ

      18. ಪುನರುತ್ಥಾನವಾಗುವ “ನೀತಿವಂತರ” ಗುಂಪಿನಲ್ಲಿ ಯಾರೆಲ್ಲ ಸೇರಿದ್ದಾರೆ?

      18 ಯೇಸು ಭೂಮಿಗೆ ಬರುವ ಮುಂಚೆ ಜೀವಿಸಿದ್ದ ಯೆಹೋವನ ನಂಬಿಗಸ್ತ ಸೇವಕರು ಈ ‘ನೀತಿವಂತರ’ ಗುಂಪಿನಲ್ಲಿ ಸೇರಿದ್ದಾರೆ. ಉದಾಹರಣೆಗೆ, ನೋಹ, ಅಬ್ರಹಾಮ, ಸಾರ, ಮೋಶೆ, ರೂತಳು ಮತ್ತು ಎಸ್ತೇರಳು. ಇವರೆಲ್ಲರೂ ಪುನರುತ್ಥಾನವಾಗಿ ಇದೇ ಭೂಮಿಯಲ್ಲಿ ಜೀವಿಸಲಿದ್ದಾರೆ. ಇಂಥ ಸ್ತ್ರೀ, ಪುರುಷರಲ್ಲಿ ಕೆಲವರ ಬಗ್ಗೆ ಇಬ್ರಿಯ 11 ನೇ ಅಧ್ಯಾಯದಲ್ಲಿ ನೀವು ಓದಬಹುದು. ಆದರೆ ನಮ್ಮ ದಿನಗಳಲ್ಲಿರುವ ಯೆಹೋವನ ನಂಬಿಗಸ್ತ ಸೇವಕರ ಬಗ್ಗೆ ಏನು? ಅವರು ಸಹ “ನೀತಿವಂತರ” ಗುಂಪಿಗೆ ಸೇರುತ್ತಾರೆ. ಒಂದುವೇಳೆ ಅವರು ತೀರಿಹೋದರೆ ಅವರಿಗೂ ಪುನರುತ್ಥಾನವಾಗುತ್ತದೆ.

      19. (ಎ) ‘ಅನೀತಿವಂತರ’ ಗುಂಪಿನಲ್ಲಿ ಯಾರಿದ್ದಾರೆ? (ಬಿ) ಯೆಹೋವ ದೇವರು ಅವರಿಗೆ ಯಾವ ಅವಕಾಶ ಕೊಡುತ್ತಾನೆ?

      19 ಯೆಹೋವ ದೇವರ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಗದ ಕೋಟ್ಯಂತರ ಜನರು ‘ಅನೀತಿವಂತರ’ ಗುಂಪಿನಲ್ಲಿ ಸೇರಿದ್ದಾರೆ. ಅವರಲ್ಲಿ ಎಷ್ಟೋ ಜನರು ತೀರಿಹೋಗಿರುವುದಾದರೂ ಯೆಹೋವ ದೇವರು ಅವರನ್ನು ಮರೆತಿಲ್ಲ. ಹಾಗಾಗಿ, ಅವರನ್ನೂ ಸಹ ಪುನರುತ್ಥಾನ ಮಾಡುತ್ತಾನೆ ಮತ್ತು ಅವರಿಗೆ ಆತನ ಬಗ್ಗೆ ಕಲಿಯುವ, ಆತನ ಆರಾಧಕರಾಗುವ ಅವಕಾಶ ಕೊಡುತ್ತಾನೆ.

      20. ಕೆಲವರಿಗೆ ಪುನರುತ್ಥಾನ ಆಗುವುದಿಲ್ಲ ಯಾಕೆ?

      20 ಹಾಗಾದರೆ ತೀರಿಹೋಗಿರುವ ಎಲ್ಲರಿಗೂ ಪುನರುತ್ಥಾನ ಆಗುತ್ತದಾ? ಇಲ್ಲ. ಕೆಲವರಿಗೆ ಪುನರುತ್ಥಾನ ಆಗುವುದಿಲ್ಲ ಎಂದು ಯೇಸು ಹೇಳಿದನು. (ಲೂಕ 12:5) ಒಬ್ಬ ವ್ಯಕ್ತಿಯನ್ನು ಪುನರುತ್ಥಾನ ಮಾಡಬೇಕಾ, ಬೇಡವಾ ಎಂದು ಯಾರು ನಿರ್ಣಯ ಮಾಡುತ್ತಾರೆ? ಈ ವಿಷಯದಲ್ಲಿ ಮಹಾ ನ್ಯಾಯಾಧೀಶನಾದ ಯೆಹೋವ ದೇವರದ್ದೇ ಅಂತಿಮ ನಿರ್ಣಯ. ಆದರೆ ‘ಜೀವಿತರಿಗೂ ಸತ್ತವರಿಗೂ ನ್ಯಾಯಾಧಿಪತಿಯಾಗಿರುವ’ ಅಧಿಕಾರವನ್ನು ಆತನು ಯೇಸುವಿಗೆ ಕೊಟ್ಟಿದ್ದಾನೆ. (ಅಪೊಸ್ತಲರ ಕಾರ್ಯಗಳು 10:42) ಒಬ್ಬ ದುಷ್ಟ ವ್ಯಕ್ತಿ ತನ್ನ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಅವನು ಪುನರುತ್ಥಾನಕ್ಕೆ ಯೋಗ್ಯನಲ್ಲ ಎಂದು ಯೇಸು ತೀರ್ಪು ಮಾಡುತ್ತಾನೆ.—ಟಿಪ್ಪಣಿ 18⁠ನ್ನು ನೋಡಿ.

      ಸ್ವರ್ಗಕ್ಕೆ ಹೋಗುವವರು

      21, 22. (ಎ) ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುವುದು ಎಂದರೇನು? (ಬಿ) ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋದವರಲ್ಲಿ ಮೊದಲನೆಯವನು ಯಾರು?

      21 ಕೆಲವು ಜನರು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂದು ಸಹ ಬೈಬಲ್‌ ಕಲಿಸುತ್ತದೆ. ಹೀಗೆ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುವ ಜನರಿಗೆ ದೇವರು ಮಾನವ ದೇಹವನ್ನು ಕೊಡುವುದಿಲ್ಲ. ಬದಲಿಗೆ ಕಣ್ಣಿಗೆ ಕಾಣದ ಆತ್ಮಿಕ ದೇಹವನ್ನು ಕೊಡುತ್ತಾನೆ.

      22 ಈ ರೀತಿಯ ಪುನರುತ್ಥಾನ ಆದವರಲ್ಲಿ ಯೇಸುವೇ ಮೊದಲನೆಯವನು. (ಯೋಹಾನ 3:13) ಆತನು ಸತ್ತು ಮೂರು ದಿನಗಳಾದ ನಂತರ ಯೆಹೋವ ದೇವರು ಆತನಿಗೆ ಪುನಃ ಜೀವಕೊಟ್ಟನು. (ಕೀರ್ತನೆ 16:10; ಅಪೊಸ್ತಲರ ಕಾರ್ಯಗಳು 13:34, 35) ಆಗ ಆತನಿಗೆ ಮಾನವ ದೇಹವನ್ನು ಕೊಡಲಿಲ್ಲ. ಹಾಗಾಗಿಯೇ ಅಪೊಸ್ತಲ ಪೇತ್ರನು, ಯೇಸು “ಶರೀರದಲ್ಲಿ ಕೊಲ್ಲಲ್ಪಟ್ಟನು, ಆದರೆ ಆತ್ಮಜೀವಿಯಾಗಿ ಬದುಕುವಂತೆ ಮಾಡಲ್ಪಟ್ಟನು” ಎಂದು ಬರೆದನು. (1 ಪೇತ್ರ 3:18) ಯೇಸು ಒಬ್ಬ ಬಲಿಷ್ಠ ಆತ್ಮಜೀವಿಯಾಗಿ ಪುನರುತ್ಥಾನವಾದನು! (1 ಕೊರಿಂಥ 15:3-6) ಆದರೆ, ಹೀಗೆ ಆತ್ಮಜೀವಿಯಾಗಿ ಪುನರುತ್ಥಾನ ಆದವನು ಯೇಸು ಒಬ್ಬನೇ ಅಲ್ಲ ಎಂದು ಬೈಬಲ್‌ ಹೇಳುತ್ತದೆ.

      23, 24. (ಎ) ಯೇಸು ಯಾರನ್ನು ‘ಚಿಕ್ಕ ಹಿಂಡು’ ಎಂದು ಕರೆದನು? (ಬಿ) ಅವರ ಸಂಖ್ಯೆ ಎಷ್ಟು?

      23 ಯೇಸು ಸಾಯುವ ಸ್ವಲ್ಪ ಮುಂಚೆ ತನ್ನ ಶಿಷ್ಯರಿಗೆ “ನಾನು ನಿಮಗೋಸ್ಕರ ಒಂದು ಸ್ಥಳವನ್ನು ಸಿದ್ಧಪಡಿಸಲು ಹೋಗುತ್ತಿದ್ದೇನೆ” ಎಂದು ಹೇಳಿದನು. (ಯೋಹಾನ 14:2) ಇದರಿಂದ, ಆತನ ಹಿಂಬಾಲಕರಲ್ಲೂ ಕೆಲವರು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂದು ನಮಗೆ ಗೊತ್ತಾಗುತ್ತದೆ. ಆದರೆ ಎಷ್ಟು ಜನರು ಹೋಗುತ್ತಾರೆ? ಯೇಸು ಅವರನ್ನು ‘ಚಿಕ್ಕ ಹಿಂಡು’ ಎಂದು ಕರೆದಿರುವುದರಿಂದ ಅವರು ಸ್ವಲ್ಪವೇ ಮಂದಿಯಾಗಿರಬೇಕು. (ಲೂಕ 12:32) ಅಪೊಸ್ತಲ ಯೋಹಾನನು, ಯೇಸು “ಚೀಯೋನ್‌ ಪರ್ವತದ ಮೇಲೆ ನಿಂತಿರುವುದನ್ನು ನಾನು ನೋಡಿದೆನು; ಅವನೊಂದಿಗೆ ಒಂದು ಲಕ್ಷ ನಲ್ವತ್ತನಾಲ್ಕು ಸಾವಿರ ಮಂದಿ ಇದ್ದರು” ಎಂದು ಬರೆದನು. ಅವರ ಸಂಖ್ಯೆ 1,44,000 ಎಂದು ಇದರಿಂದ ಗೊತ್ತಾಗುತ್ತದೆ.—ಪ್ರಕಟನೆ 14:1.

      24 ಈ 1,44,000 ಮಂದಿಯನ್ನು ದೇವರು ಯಾವಾಗ ಪುನರುತ್ಥಾನ ಮಾಡುತ್ತಾನೆ? ಯೇಸು ಸ್ವರ್ಗದಲ್ಲಿ ಆಳಲು ಶುರುಮಾಡಿದ ಮೇಲೆ ಇವರ ಪುನರುತ್ಥಾನ ಆರಂಭವಾಗುತ್ತದೆ ಎಂದು ಬೈಬಲ್‌ ತಿಳಿಸುತ್ತದೆ. (1 ಕೊರಿಂಥ 15:23) ಈಗಾಗಲೇ ಯೇಸು ಸ್ವರ್ಗದಲ್ಲಿ ಆಳಲು ಶುರುಮಾಡಿದ್ದಾನೆ. ಹಾಗಾಗಿ 1,44,000 ಮಂದಿಯಲ್ಲಿ ಅನೇಕರು ಈಗಾಗಲೇ ಪುನರುತ್ಥಾನವಾಗಿ ಸ್ವರ್ಗದಲ್ಲಿದ್ದಾರೆ. ಅವರಲ್ಲಿ ಉಳಿದವರು ತೀರಿಹೋದ ತಕ್ಷಣ ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುತ್ತಾರೆ. ಇವರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಪುನರುತ್ಥಾನವಾದ ಮೇಲೆ ಸುಂದರ ತೋಟವಾಗಲಿರುವ ಇದೇ ಭೂಮಿಯ ಮೇಲೆ ಜೀವಿಸಲಿದ್ದಾರೆ.

      25. ಮುಂದಿನ ಅಧ್ಯಾಯದಲ್ಲಿ ನಾವೇನನ್ನು ಕಲಿಯಲಿದ್ದೇವೆ?

      25 ಸಾವಿನ ಸೆರೆಯಲ್ಲಿರುವ ಅನೇಕರನ್ನು ಯೆಹೋವ ದೇವರು ಬಿಡಿಸಲಿದ್ದಾನೆ. ಸಾವು ಅನ್ನುವುದೇ ಇಲ್ಲದೆ ಹೋಗಲಿದೆ! (ಯೆಶಾಯ 25:8 ಓದಿ.) ಆದರೆ ಯಾರು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುತ್ತಾರೋ ಅವರು ಅಲ್ಲಿ ಹೋಗಿ ಏನು ಮಾಡುತ್ತಾರೆ? ಅವರು ಯೇಸುವಿನೊಂದಿಗೆ ದೇವರ ರಾಜ್ಯದ ರಾಜರಾಗಿ ಆಳುತ್ತಾರೆ ಎಂದು ಬೈಬಲ್‌ ವಿವರಿಸುತ್ತದೆ. ದೇವರ ರಾಜ್ಯ ಎಂದರೇನು? ಇದರ ಬಗ್ಗೆ ನಾವು ಮುಂದಿನ ಅಧ್ಯಾಯದಲ್ಲಿ ನೋಡೋಣ.

      a ಇನ್ನೂ ಅನೇಕ ಪುನರುತ್ಥಾನಗಳ ಬಗ್ಗೆ ಬೈಬಲಿನಲ್ಲಿದೆ. ಅದರಲ್ಲಿ ಚಿಕ್ಕವರು, ದೊಡ್ಡವರು, ಪುರುಷರು, ಸ್ತ್ರೀಯರು, ಇಸ್ರಾಯೇಲ್ಯರು, ವಿದೇಶೀಯರು ಇದ್ದಾರೆ. ಆ ಘಟನೆಗಳ ಬಗ್ಗೆ ಮುಂದೆ ಕೊಟ್ಟಿರುವ ವಚನಗಳಲ್ಲಿ ಓದಿ: 1 ಅರಸುಗಳು 17:17-24; 2 ಅರಸುಗಳು 4:32-37; 13:20, 21; ಮತ್ತಾಯ 28:5-7; ಲೂಕ 7:11-17; 8:40-56; ಅಪೊಸ್ತಲರ ಕಾರ್ಯಗಳು 9:36-42; 20:7-12.

      ನಾನೇನು ಕಲಿತೆ?

      1: ಯೆಹೋವನು ಮರಣವನ್ನು ತೆಗೆದುಹಾಕುತ್ತಾನೆ

      “ಕೊನೆಯ ಶತ್ರುವಾಗಿ ಮರಣವು ನಿರ್ಮೂಲಮಾಡಲ್ಪಡಬೇಕು.”—1 ಕೊರಿಂಥ 15:26

      ಯಾರಾದರೂ ತೀರಿಹೋದಾಗ ನಾವು ಆ ದುಃಖದಿಂದ ಹೊರಬರಲು ಬೈಬಲಿನಲ್ಲಿ ಯಾವ ಸಾಂತ್ವನ ಇದೆ?

      • 2 ಕೊರಿಂಥ 1:3, 4

        ನಮ್ಮ ಆಪ್ತರು ತೀರಿಹೋದರೆ ನಮಗೆ ತುಂಬ ದುಃಖವಾಗುತ್ತದೆ. ಸಾವಿನ ಮುಂದೆ ಸೋತು ಹೋಗುತ್ತೇವೆ. ಆದರೆ ಬೈಬಲಿನಲ್ಲಿರುವ ವಿಷಯಗಳು ನಮಗೆ ನೆಮ್ಮದಿ ಕೊಡುತ್ತವೆ.

      • ಯೆಶಾಯ 25:8; 26:19

        ಮರಣವೇ ಇಲ್ಲದಂತೆ ಮಾಡುವ ಶಕ್ತಿ ಯೆಹೋವನಿಗಿದೆ. ಮಾತ್ರವಲ್ಲ, ತೀರಿಹೋಗಿರುವವರಿಗೆ ಪುನಃ ಜೀವ ಕೊಡುವ ಶಕ್ತಿ ಸಹ ಆತನಿಗಿದೆ.

      2: ಪುನರುತ್ಥಾನ ಖಂಡಿತ ಆಗುತ್ತದೆ

      “ಹುಡುಗಿ, ಎದ್ದೇಳು!”—ಲೂಕ 8:54

      ಪುನರುತ್ಥಾನವನ್ನು ನಂಬಲು ನಮಗೆ ಯಾವ ಕಾರಣಗಳಿವೆ?

      • ಯೋಹಾನ 11:1-44

        ಯೇಸು ಲಾಜರನನ್ನು ಪುನರುತ್ಥಾನ ಮಾಡಿದನು.

      • ಮಾರ್ಕ 5:22-24, 35-42

        ಯೇಸು ಚಿಕ್ಕ ಹುಡುಗಿಯನ್ನು ಪುನರುತ್ಥಾನ ಮಾಡಿದನು.

      • ಯೋಹಾನ 11:41, 42

        ಯೆಹೋವನ ಶಕ್ತಿಯಿಂದ ಯೇಸು ಪುನರುತ್ಥಾನ ಮಾಡಿದನು.

      • ಯೋಹಾನ 12:9-11

        ಯೇಸು ಸತ್ತವರನ್ನು ಪುನರುತ್ಥಾನ ಮಾಡಿದ್ದನ್ನು ಅನೇಕರು ನೋಡಿದರು. ಯೇಸುವಿಗೆ ಆ ಶಕ್ತಿ ಇತ್ತೆಂದು ಆತನ ವೈರಿಗಳಿಗೂ ಗೊತ್ತಿತ್ತು.

      3: ಯೆಹೋವನು ಕೋಟ್ಯಂತರ ಜನರನ್ನು ಪುನರುತ್ಥಾನ ಮಾಡಲಿದ್ದಾನೆ

      “ನೀನು ಕರೆದರೆ ಉತ್ತರಕೊಡುವೆನು, ನೀನು ಸೃಷ್ಟಿಸಿದ ನನ್ನ ಮೇಲೆ ನಿನಗೆ ಹಂಬಲಿಕೆ ಹುಟ್ಟೀತು.”—ಯೋಬ 14:13-15

      ಯಾರಿಗೆಲ್ಲ ಪುನರುತ್ಥಾನ ಆಗುತ್ತದೆ?

      • ಯೋಹಾನ 5:28, 29

        ಯಾರನ್ನೆಲ್ಲಾ ಯೆಹೋವನು ಪುನರುತ್ಥಾನ ಮಾಡಲಿದ್ದಾನೋ ಅವರನ್ನೆಲ್ಲ ನೆನಪಿನಲ್ಲಿಡುತ್ತಾನೆ.

      • ಅಪೊಸ್ತಲರ ಕಾರ್ಯಗಳು 24:15

        ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನ ಆಗುತ್ತದೆ.

      • ಯೆಶಾಯ 40:26

        ಒಂದೊಂದು ನಕ್ಷತ್ರವನ್ನೂ ಹೆಸರೆತ್ತಿ ಕರೆಯುವ ಯೆಹೋವನಿಗೆ ತಾನು ಪುನರುತ್ಥಾನ ಮಾಡಲಿರುವವರ ಬಗ್ಗೆ ಪ್ರತಿಯೊಂದನ್ನು ನೆನಪಿನಲ್ಲಿಡುವುದು ಕಷ್ಟವಲ್ಲ.

      4: ಕೆಲವರು ಪುನರುತ್ಥಾನವಾಗಿ ಸ್ವರ್ಗಕ್ಕೆ ಹೋಗುತ್ತಾರೆ

      “ನಾನು ನಿಮಗೋಸ್ಕರ ಒಂದು ಸ್ಥಳವನ್ನು ಸಿದ್ಧಪಡಿಸಲು ಹೋಗುತ್ತಿದ್ದೇನೆ.”—ಯೋಹಾನ 14:2

      ಯಾರೆಲ್ಲ ಪುನರುತ್ಥಾನವಾದ ಮೇಲೆ ಸ್ವರ್ಗಕ್ಕೆ ಹೋಗುತ್ತಾರೆ?

      • 1 ಪೇತ್ರ 3:18

        ಪುನರುತ್ಥಾನವಾಗಿ ಮೊದಲು ಸ್ವರ್ಗಕ್ಕೆ ಹೋದವನು ಯೇಸು.

      • ಲೂಕ 12:32

        ಕೆಲವರು ಮಾತ್ರ ಪುನರುತ್ಥಾನವಾಗಿ

        ಸ್ವರ್ಗಕ್ಕೆ ಹೋಗುತ್ತಾರೆ ಎಂದು ಯೇಸು ಹೇಳಿದನು.

      • ಪ್ರಕಟನೆ 14:1

        ಯೆಹೋವನು 1,44,000 ಜನರನ್ನು ಸ್ವರ್ಗದ ಜೀವನಕ್ಕಾಗಿ ಆರಿಸಿದ್ದಾನೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ