ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕನು ನಾಸೀ ಸೆರೆಶಿಬಿರವನ್ನು ಪಾರಾದ ವಿಧ
ಜೋಸೆಫ್ ಹೀಸೀಗ ಅವರು ಹೇಳಿದಂತೆ
“ಏನು ಓದ್ತಾ ಇದ್ದೀರಿ?” ಎಂದು ನಾನು ಜೊತೆ ಸೆರೆವಾಸಿಯನ್ನು ಕೇಳಿದೆ. “ಬೈಬಲ್ ಓದುತ್ತಾ ಇದ್ದೇನೆ, ನಿನಗೆ ಬೇಕಾದರೆ ಕೊಡ್ತೇನೆ ಆದರೆ ಇಡೀ ವಾರ ಸಿಗುವ ರೊಟ್ಟಿ ನನಗೆ ಕೊಡಬೇಕು” ಎಂದನವನು.
ನಾನು ಮೋಸೆಲ್ ಎಂಬ ಶಹರದಲ್ಲಿ 1914, ಮಾರ್ಚ್ 1ರಂದು ಜನಿಸಿದೆ. ಆಗ ಆ ಶಹರವು ಜರ್ಮನಿಯ ಭಾಗವಾಗಿತ್ತು. 1918ರಲ್ಲಿ ಒಂದನೇ ಲೋಕ ಯುದ್ಧ ಕೊನೆಗೊಂಡ ಬಳಿಕ ಮೋಸೆಲ್ ಫ್ರಾನ್ಸ್ನ ಸ್ವಾಧೀನವಾಯಿತು. 1940ರಲ್ಲಿ ಅದು ಪುನಃ ಜರ್ಮನಿಯ ವಶವಾಯಿತು. 1945ರಲ್ಲಿ ಎರಡನೇ ಲೋಕ ಯುದ್ಧವು ಕೊನೆಗೊಂಡಾಗ ಅದು ಪುನಃ ಫ್ರಾನ್ಸ್ನ ಭಾಗವಾಯಿತು. ಪ್ರತಿಯೊಂದು ಬಾರಿಯೂ ನನ್ನ ರಾಷ್ಟ್ರೀಯತೆ ಬದಲಾಯಿತು. ಆದ್ದರಿಂದ ನಾನು ಫ್ರೆಂಚ್ ಮತ್ತು ಜರ್ಮನ್ ಎರಡೂ ಭಾಷೆಗಳನ್ನಾಡತೊಡಗಿದೆ.
ನನ್ನ ಹೆತ್ತವರು ನಿಷ್ಠೆಯ ಕ್ಯಾಥೊಲಿಕರು. ಪ್ರತಿ ರಾತ್ರಿ ಮಲಗುವ ಮುಂಚೆ ನಾವೆಲ್ಲರೂ ಮೊಣಕಾಲೂರಿ ಪ್ರಾರ್ಥಿಸುತ್ತಿದ್ದೆವು. ಭಾನುವಾರ ಮತ್ತು ರಾಷ್ಟ್ರೀಯ ರಜಾ ದಿನಗಳಂದು ನಾವು ಚರ್ಚ್ಗೆ ತಪ್ಪದೆ ಹಾಜರಾಗುತ್ತಿದ್ದೆವು. ನನ್ನ ಧರ್ಮದಲ್ಲಿ ನನಗೆ ತುಂಬ ಶ್ರದ್ಧೆ. ಕ್ಯಾಟಿಕಿಸಮ್ ಕ್ಲಾಸ್ಗೂ ಸೇರಿದ್ದೆ.
ಸಾಕ್ಷಿ ಕಾರ್ಯದಲ್ಲಿ ತಲ್ಲೀನ
1935ರಲ್ಲಿ ನನ್ನ ಹೆತ್ತವರನ್ನು ಇಬ್ಬರು ಸಾಕ್ಷಿಗಳು ಭೇಟಿಯಾದರು. ಒಂದನೇ ಲೋಕ ಯುದ್ಧದಲ್ಲಿ ಧರ್ಮದ ಪಾಲ್ಗೊಳ್ಳುವಿಕೆಯ ಕುರಿತು ಅವರು ಚರ್ಚಿಸಿದರು. ಬೈಬಲಿನಲ್ಲಿ ನನ್ನ ಆಸಕ್ತಿ ಚಿಗುರಿದ್ದು ಆ ಬಳಿಕವೇ. 1936ರಲ್ಲಿ ನಾನು ಪಾದ್ರಿಯ ಬಳಿ ಒಂದು ಬೈಬಲಿಗಾಗಿ ಕೇಳಿದೆ. ಅದನ್ನು ತಿಳುಕೊಳ್ಳಲು ನಾನು ದೇವತಾಶಾಸ್ತ್ರ ಕಲಿಯಬೇಕೆಂದರು ಪಾದ್ರಿ. ಹಾಗಿದ್ದರೂ ಇದು, ಬೈಬಲೊಂದನ್ನು ಪಡೆಯಬೇಕೆಂಬ ಮತ್ತು ಅದನ್ನು ಓದಬೇಕೆಂಬ ಅಪೇಕ್ಷೆಯನ್ನು ಇನ್ನಷ್ಟು ಹೆಚ್ಚಿಸಿತೇ ಹೊರತು ಕಡಿಮೆಗೊಳಿಸಲಿಲ್ಲ.
1937, ಜನವರಿಯಲ್ಲಿ ನನ್ನ ಸಹೋದ್ಯೋಗಿ ಆಲ್ಬೀನ್ ರಲವಿಟ್ಸ್ ಬೈಬಲಿನ ಬೋಧನೆಗಳ ಕುರಿತು ನನ್ನೊಂದಿಗೆ ಮಾತಾಡತೊಡಗಿದ. ಅವನು ಒಬ್ಬ ಸಾಕ್ಷಿಯಾಗಿದ್ದ. “ನಿನ್ನ ಬಳಿ ಬೈಬಲ್ ಇದೆಯೋ?” ಕೇಳಿದೆ ನಾನು. ಅವನ ಹತ್ತಿರ ಜರ್ಮನ್ ಎಲ್ಬರ್ಫೆಲ್ಡರ್ ಭಾಷಾಂತರದ ಬೈಬಲ್ ಪ್ರತಿಯೊಂದಿತ್ತು ಮತ್ತು ದೇವರ ಹೆಸರು ಯೆಹೋವ ಎಂದು ಅದರಿಂದಲೇ ನನಗೆ ತೋರಿಸಿದ. ನಂತರ ಆ ಬೈಬಲನ್ನು ಅವನು ನನಗೆ ಕೊಟ್ಟ. ನಾನದನ್ನು ಅತ್ಯಾಸಕ್ತಿಯಿಂದ ಓದಿದೆ. ಮತ್ತು ಟ್ಯಾನ್ವೀಲ್ ಎಂಬ ಪಕ್ಕದೂರಿನ ಸಾಕ್ಷಿಗಳ ಕೂಟಗಳಿಗೆ ಹಾಜರಾಗತೊಡಗಿದೆ.
1937ರ ಆಗಸ್ಟ್ನಲ್ಲಿ ನಾನು ಆಲ್ಬೀನ್ನೊಂದಿಗೆ ಪ್ಯಾರಿಸ್ನಲ್ಲಿ ನಡೆದ ಸಾಕ್ಷಿಗಳ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಹೋದೆ. ನಾನು ಮನೆ ಮನೆಗೆ ಸಾರಲು ಆರಂಭಿಸಿದ್ದು ಅಲ್ಲೇ. ಸ್ವಲ್ಪ ಸಮಯದಲ್ಲೇ ನನಗೆ ದೀಕ್ಷಾಸ್ನಾನವಾಯಿತು. 1939ರ ಆರಂಭದಲ್ಲಿ ನಾನು ಪಯನೀಯರನಾದೆ ಅಂದರೆ ಪೂರ್ಣ ಸಮಯ ಸಾರುವ ಕೆಲಸದಲ್ಲಿ ಪಾಲ್ಗೊಂಡೆ. ಮೆಟ್ಸ್ ಎಂಬ ನಗರಕ್ಕೆ ನನಗೆ ನೇಮಕ ಸಿಕ್ಕಿದ ನಂತರ ಜುಲೈ ತಿಂಗಳಿನಲ್ಲಿ ಯೆಹೋವನ ಸಾಕ್ಷಿಗಳ ಪ್ಯಾರಿಸ್ ಬ್ರಾಂಚ್ನಲ್ಲಿ ಸೇವೆಮಾಡುವ ಆಮಂತ್ರಣ ದೊರೆಯಿತು.
ಯುದ್ಧಕಾಲದ ಸಂಕಟಗಳು
ಬ್ರಾಂಚ್ನಲ್ಲಿ ನಾನು ಸೇವೆಮಾಡಿದ್ದು ಕೊಂಚ ಸಮಯ. ಏಕೆಂದರೆ 1939ರ ಆಗಸ್ಟ್ನಲ್ಲಿ ಫ್ರೆಂಚ್ ಸೈನ್ಯಕ್ಕೆ ಸೇರಲು ನನ್ನನ್ನು ಕರೆಯಲಾಯಿತು. ಯುದ್ಧದಲ್ಲಿ ನಾನು ಶುದ್ಧಾಂತಕರಣದಿಂದ ಭಾಗವಹಿಸಸಾಧ್ಯವಿರಲಿಲ್ಲ. ಆದ್ದರಿಂದ ನನ್ನನ್ನು ಸೆರೆಮನೆಗೆ ಹಾಕಲಾಯಿತು. 1940ರ ಮೇ ತಿಂಗಳಿನಲ್ಲಿ, ನಾನಿನ್ನೂ ಸೆರೆಯಲ್ಲಿದ್ದಾಗ ಜರ್ಮನಿ ಒಮ್ಮೆಲೆ ಫ್ರಾನ್ಸನ್ನು ಆಕ್ರಮಿಸಿ ಒಂದು ತಿಂಗಳೊಳಗೆ ಅದನ್ನು ವಶಪಡಿಸಿಕೊಂಡಿತು. ನಾನು ಪುನಃ ಜರ್ಮನ್ ನಾಗರಿಕನಾದೆ. ಜುಲೈಯಲ್ಲಿ ಸೆರೆಮನೆಯಿಂದ ಬಿಡುಗಡೆಯಾದಾಗ ನಾನು ಹೆತ್ತವರೊಂದಿಗೆ ವಾಸಿಸಲು ಮರಳಿದೆ.
ನಾವು ನಾಸೀ ಆಳ್ವಿಕೆಯ ಕೆಳಗೆ ಇದ್ದುದರಿಂದ ಬೈಬಲ್ ಅಧ್ಯಯನಕ್ಕಾಗಿ ಗುಪ್ತವಾಗಿ ಕೂಡಿಬರುತ್ತಿದ್ದೆವು. ಮರೀಸ್ ಅನಸಿಆಕ್ ಎಂಬ ಧೀರ ಕ್ರೈಸ್ತ ಸ್ತ್ರೀಯು ನಮಗೆ ಕಾವಲಿನಬುರುಜು ತಂದು ಕೊಡುತ್ತಿದ್ದಳು. ಆಕೆಯನ್ನು ನಾನು ಸಾಕ್ಷಿಯೊಬ್ಬನ ಬ್ರೆಡ್ ಅಂಗಡಿಯಲ್ಲಿ ಆಗಾಗ್ಗೆ ಭೇಟಿಯಾಗುತ್ತಿದ್ದೆ. 1941ರ ತನಕ ಜರ್ಮನಿಯಲ್ಲಿ ಸಾಕ್ಷಿಗಳಿಗೆ ಆಗುತ್ತಿದ್ದ ತೊಂದರೆಗಳಿಂದ ನಾನು ಹೇಗೂ ತಪ್ಪಿಸಿಕೊಂಡಿದ್ದೆ.
ಅನಂತರ ಒಂದು ದಿನ ಜರ್ಮನ್ ಗುಪ್ತ ಪೊಲೀಸ್ ನನ್ನನ್ನು ಹಿಡಿದನು. ಸಾಕ್ಷಿಗಳನ್ನು ನಿಷೇಧಿಸಲಾಗಿದೆ ಎಂದು ನನಗೆ ಸ್ಪಷ್ಟಪಡಿಸಿದ ಬಳಿಕ ‘ನೀನು ಇನ್ನೂ ಒಬ್ಬ ಯೆಹೋವನ ಸಾಕ್ಷಿಯಾಗಿರುವೆಯೋ’ ಎಂದು ಅವನು ಕೇಳಿದನು. ನಾನು “ಹೌದು” ಎಂದು ಹೇಳಿದಾಗ ನನ್ನನ್ನು ಎಳೆದುಕೊಂಡು ಹೋದನು. ಭಾವುಕತೆಯಿಂದ ಕಂಗೆಟ್ಟು ನನ್ನ ತಾಯಿ ಮೂರ್ಛೆಹೋದರು. ಇದನ್ನು ಕಂಡ ಆ ಜರ್ಮನ್ ಪೊಲೀಸ್ ನನ್ನ ತಾಯಿಯನ್ನು ನೋಡಿಕೊಳ್ಳುವಂತೆ ನನ್ನನ್ನು ಬಿಟ್ಟು ಹೋದ.
ನಾನು ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯಲ್ಲಿ ಮ್ಯಾನೇಜರನನ್ನು “ಹೈಲ್ ಹಿಟ್ಲರ್!” (ಹಿಟ್ಲರ್ಗೆ ಜಯ) ಎಂದು ಹೇಳಿ ನಾನು ವಂದಿಸಲಿಲ್ಲ. ನಾಸೀ ಪಕ್ಷದ ಸದಸ್ಯನಾಗಲು ಸಹ ನಾನು ನಿರಾಕರಿಸಿದೆ. ಆದುದರಿಂದ ಜರ್ಮನ್ ಪೊಲೀಸರು ನನ್ನನ್ನು ಬಂಧಿಸಿದರು. ವಿಚಾರಣೆಯ ಸಮಯದಲ್ಲಿ ನಾನು ನನ್ನ ಜೊತೆ ಸಾಕ್ಷಿಗಳ ಹೆಸರುಗಳನ್ನು ತಿಳಿಸಲು ನಿರಾಕರಿಸಿದೆ. ತನಿಖೆಗಾರರು ಪಿಸ್ತೂಲಿನ ಹಿಡಿಯಿಂದ ಜೋರಾಗಿ ನನ್ನ ತಲೆಗೆ ಹೊಡೆದರು. ನಾನು ಪ್ರಜ್ಞೆ ತಪ್ಪಿಬಿದ್ದೆ. 1942ರ ಸೆಪ್ಟೆಂಬರ್ 11ರಂದು ಮೆಟ್ಸ್ನ ನಾಸೀ ಕೋರ್ಟ್ನಲ್ಲಿ ಮೂರು ವರ್ಷಗಳ ಸೆರೆವಾಸವನ್ನು ವಿಧಿಸಲಾಯಿತು. ಕಾರಣ? “ಯೆಹೋವನ ಸಾಕ್ಷಿಗಳ ಮತ್ತು ಬೈಬಲ್ ವಿದ್ಯಾರ್ಥಿಗಳ ಪರವಾಗಿ ಪ್ರಚಾರಕಾರ್ಯ ನಡೆಸಿದ್ದಕ್ಕಾಗಿ.”
ಎರಡು ವಾರಗಳ ನಂತರ ನನ್ನನ್ನು ಮೆಟ್ಸ್ ಸೆರೆಮನೆಯಿಂದ ತೆಗೆದು ಕ್ರಮೇಣ ಸ್ವೈಬ್ರೂಕನ್ನಲ್ಲಿದ್ದ ಶ್ರಮಶಿಬಿರಕ್ಕೆ ಒಯ್ಯಲಾಯಿತು. ಅಲ್ಲಿ ನಾನು ರೈಲ್ವೆ ಕಾರ್ಮಿಕರ ತಂಡವನ್ನು ಸೇರಿದೆ. ನಾವು ರೈಲು ಮಾರ್ಗದಲ್ಲಿ ಭಾರ ಹಳಿಗಳನ್ನು ಬದಲಾಯಿಸಿ ಅವಕ್ಕೆ ಅಗುಳಿ ಹಾಕಿ ಜಲ್ಲಿ ಕಲ್ಲುಗಳನ್ನು ಮೇಲೆ ಹರಡಿಸಿದೆವು. ಇಂಥ ಮೈಮುರಿಯುವ ಕೆಲಸಕ್ಕಾಗಿ ನಮಗೆ ತಿನ್ನಲು ಸಿಕ್ಕಿದ್ದು ಬೆಳಿಗ್ಗೆ ಒಂದು ಲೋಟ ಕಾಫಿ ಮತ್ತು ಎರಡು ರೊಟ್ಟಿ ತುಂಡುಗಳು. ಮಧ್ಯಾಹ್ನ ಮತ್ತು ಸಂಜೆಗೆ ಒಂದು ಬಟ್ಟಲು ಸೂಪ್ ಅಷ್ಟೇ. ಅನಂತರ ನನ್ನನ್ನು ಸಮೀಪದ ಒಂದು ಊರಿಗೆ ಕಳುಹಿಸಲಾಯಿತು. ಅಲ್ಲಿ ನಾನು ಚಮ್ಮಾರ ಅಂಗಡಿಯಲ್ಲಿ ಕೆಲಸಮಾಡಿದೆ. ಕೆಲವು ತಿಂಗಳುಗಳ ಬಳಿಕ ನನ್ನನ್ನು ಸ್ವೈಬ್ರೂಕನ್ಗೆ ಪುನಃ ಕಳುಹಿಸಲಾಯಿತು. ಈ ಸಲ ನಾನು ಗದ್ದೆಯಲ್ಲಿ ಕೆಲಸಮಾಡಿದೆ.
ಬದುಕುವುದು ರೊಟ್ಟಿಯಿಂದ ಮಾತ್ರವಲ್ಲ
ಸೆರೆಮನೆಯಲ್ಲಿ ನೆದರ್ಲ್ಯಾಂಡ್ನ ಒಬ್ಬ ಯುವಕನು ನನ್ನ ಜೊತೆವಾಸಿಯಾಗಿದ್ದ. ಅವನ ಭಾಷೆಯನ್ನು ಸ್ವಲ್ಪಮಟ್ಟಿಗೆ ಮಾತಾಡಲು ಕಲಿಯುವ ಮೂಲಕ ನನ್ನ ನಂಬಿಕೆಗಳ ಬಗ್ಗೆ ಅವನಿಗೆ ತಿಳಿಸಿದೆ. ಅವನು ಆಧ್ಯಾತ್ಮಿಕವಾಗಿ ಎಷ್ಟು ಪ್ರಗತಿಮಾಡಿದನೆಂದರೆ ಸಮೀಪದ ನದಿಯೊಂದರಲ್ಲಿ ತನಗೆ ದೀಕ್ಷಾಸ್ನಾನ ಮಾಡಿಸುವಂತೆ ಕೇಳಿಕೊಂಡ. ನೀರಿನಿಂದ ಹೊರಗೆ ಬಂದಾಗ ಅವನು ನನ್ನನ್ನು ತಬ್ಬಿಕೊಂಡು, “ಜೋಸೆಫ್ ನಾನೀಗ ನಿನ್ನ ಸಹೋದರ!” ಎಂದು ಉದ್ಗರಿಸಿದ. ರೈಲು ಹಳಿಹಾಸುವ ಕೆಲಸಕ್ಕೆ ನಾನು ಪುನಃ ಹಿಂದೆ ಕಳುಹಿಸಲ್ಪಟ್ಟಾಗ ನಾವಿಬ್ಬರೂ ಬೇರೆ ಬೇರೆ ಆದೆವು.
ಈ ಸಲ ನನ್ನ ಜೊತೆ ಸೆರೆವಾಸಿಯಾಗಿದ್ದವನು ಜರ್ಮನಿಯವನು. ಒಂದು ಸಂಜೆ ಅವನು ಒಂದು ಚಿಕ್ಕ ಬೈಬಲನ್ನು ಓದುತ್ತಿದ್ದ! ಆರಂಭದಲ್ಲಿ ತಿಳಿಸಲಾದಂತೆ ಬೈಬಲಿಗೆ ಬದಲಾಗಿ ಒಂದು ವಾರದ ರೊಟ್ಟಿಯನ್ನು ಕೇಳಿಕೊಂಡ ವ್ಯಕ್ತಿ ಇವನೇ! “ಆಗಲಿ” ಎಂದೆ ನಾನು ಆ ಕೂಡಲೇ. ಆಗ ಒಂದು ವಾರ ನನ್ನ ಪಾಲಿನ ರೊಟ್ಟಿ ಕೊಟ್ಟುಬಿಡುವುದು ದೊಡ್ಡ ಸಂಗತಿಯಾಗಿದ್ದರೂ ನಾನು ಅದಕ್ಕಾಗಿ ವಿಷಾದಿಸಲೇ ಇಲ್ಲ. “ಮನುಷ್ಯನು ರೊಟ್ಟಿ ತಿಂದಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಬೇಕು” ಎಂಬ ಯೇಸುವಿನ ಮಾತಿನ ಅರ್ಥವನ್ನು ಕಲಿಯತೊಡಗಿದೆ.—ಮತ್ತಾಯ 4:4.
ಅಂತೂ ಒಂದು ಬೈಬಲ್ ಸಿಕ್ಕಿತು ಆದರೆ ಹೇಗೆ ಇಟ್ಟುಕೊಳ್ಳಲಿ ಎಂಬುದೇ ಪ್ರಶ್ನೆ. ಬೇರೆ ಸೆರೆವಾಸಿಗಳಿಗೆ ಬೈಬಲನ್ನು ಇಟ್ಟುಕೊಳ್ಳಲು ಅನುಮತಿಯಿತ್ತಾದರೂ ಸಾಕ್ಷಿಗಳಿಗೆ ಇರಲಿಲ್ಲ. ಆದ್ದರಿಂದ ರಾತ್ರಿಯಲ್ಲಿ ಗುಪ್ತವಾಗಿ ಹೊದಿಕೆಗಳ ಒಳಗಿಂದ ನಾನು ಓದುತ್ತಲಿದ್ದೆ. ಬೆಳಿಗ್ಗೆ ಅದನ್ನು ನನ್ನ ಶರ್ಟಿನೊಳಗೆ ಅಡಗಿಸಿಕೊಂಡು ಹೋಗುತ್ತಿದ್ದೆ. ಸೆರೆಮನೆಯಲ್ಲಿ ಇಡುತ್ತಿರಲಿಲ್ಲ. ಏಕೆಂದರೆ ಗಾರ್ಡ್ಸ್ ತಲಾಶು ಮಾಡುತ್ತಿದ್ದರು.
ಒಂದು ದಿನ ಹಾಜರಿ ತೆಗೆಯುವ ಸಮಯದಲ್ಲಿ ನಾನು ಬೈಬಲನ್ನು ಸೆರೆಮನೆಯಲ್ಲಿ ಬಿಟ್ಟು ಬಂದದ್ದು ನೆನಪಿಗೆ ಬಂತು. ಆ ಸಂಜೆ ನಾನು ಸೆರೆಮನೆಗೆ ಧಾವಿಸಿದೆ. ಆದರೆ ಬೈಬಲ್ ಕಾಣೆಯಾಗಿತ್ತು! ದೇವರಿಗೆ ಪ್ರಾರ್ಥಿಸಿದ ನಂತರ ನಾನು ಗಾರ್ಡ್ ಅನ್ನು ಭೇಟಿಯಾಗಿ ಯಾರೋ ನನ್ನ ಪುಸ್ತಕವನ್ನು ತಕ್ಕೊಂಡಿದ್ದಾರೆ, ನನಗದು ಬೇಕು ಎಂದೆ. ಅವನು ಹೆಚ್ಚು ಲಕ್ಷ್ಯಕೊಡಲಿಲ್ಲವಾದ್ದರಿಂದ ನನ್ನ ಬೈಬಲ್ ನನಗೆ ಸಿಕ್ಕಿತು. ಹೃದಯದಾಳದಿಂದ ನಾನು ಯೆಹೋವನಿಗೆ ಕೃತಜ್ಞತೆ ಹೇಳಿದೆ.
ಇನ್ನೊಂದು ಸಂದರ್ಭದಲ್ಲಿ ನಾನು ಸ್ನಾನಗೃಹಕ್ಕೆ ಹೋಗಿದ್ದೆ. ಬಟ್ಟೆ ತೆಗೆಯುವಾಗ ನನ್ನ ಶರ್ಟಿನೊಳಗಿದ್ದ ಬೈಬಲನ್ನು ಮೆಲ್ಲನೆ ಕೆಳಗೆ ಹಾಕಿದೆ. ಗಾರ್ಡ್ ನೋಡದಿದ್ದಾಗ ನಾನು ಅದನ್ನು ಶವರ್ನ ಆಚೆ ಬದಿಗೆ ದೂಡಿದೆ. ಅಲ್ಲಿ ಅದನ್ನು ಪಕ್ಕಕ್ಕೆ ಸರಿಸಿ ಬಚ್ಚಿಟ್ಟು ಸ್ನಾನಮಾಡಿದೆ. ಹೊರಬಂದಾಗ ಮತ್ತೆ ಅದೇ ರೀತಿ ಮಾಡಿ ಒಗೆದ ಬಟ್ಟೆಗಳ ರಾಶಿಯ ಕೆಳಗೆ ಬೈಬಲನ್ನು ನೂಕಿದೆ.
ಬಂಧಿವಾಸದ ಸಿಹಿಕಹಿಗಳು
1943ರ ಒಂದು ಬೆಳಗಾತ ಸೆರೆವಾಸಿಗಳೆಲ್ಲರೂ ಅಂಗಣದಲ್ಲಿ ಸಾಲಾಗಿ ನಿಂತಿದ್ದಾಗ ನಾನು ಯಾರನ್ನು ಕಂಡೆ ಗೊತ್ತಾ? ಆಲ್ಬೀನ್ನನ್ನು! ಅವನನ್ನು ಸಹ ಕೈದುಮಾಡಲಾಗಿತ್ತು. ಅವನು ನನ್ನ ಕಡೆ ನೋಡಿ ನಸುನಗೆ ಬೀರಿ, ಕೈಯನ್ನು ಎದೆಯ ಮೇಲಿರಿಸಿ ಸಹೋದರತ್ವವನ್ನು ಸೂಚಿಸಿದ. ಪತ್ರ ಬರೆಯುವುದಾಗಿ ಸನ್ನೆ ಮಾಡಿದ. ಮರುದಿನ ಅವನು ಹಾದು ಹೋಗುತ್ತಿದ್ದಾಗ ಒಂದು ಕಾಗದದ ತುಂಡನ್ನು ಕೆಳಗೆ ಹಾಕಿದ. ಆದರೆ ಗಾರ್ಡ್ ಅದನ್ನು ನೋಡಿ ಬಿಟ್ಟದ್ದರಿಂದ ನಮಗಿಬ್ಬರಿಗೂ ಎರಡು ವಾರದ ಏಕಾಂತ ಸೆರೆಮನೆ ವಾಸ ದೊರೆಯಿತು. ತಿನ್ನಲು ನಮಗೆ ದೊರೆತದ್ದು ಒಣ ರೊಟ್ಟಿ ಮತ್ತು ನೀರು ಮಾತ್ರ. ನಾವು ಹಲಗೆಗಳ ಮೇಲೆ ಮಲಗಿದೆವು, ಹೊದ್ದುಕೊಳ್ಳಲು ಏನೂ ಇರಲಿಲ್ಲ.
ಆ ಬಳಿಕ ನನ್ನನ್ನು ಸೀಬರ್ಗ್ ಸೆರೆಮನೆಗೆ ಸ್ಥಳಾಂತರಿಸಲಾಯಿತು. ನಾನಾಗ ಲೋಹದಂಗಡಿಯಲ್ಲಿ ಕೆಲಸ ಮಾಡಿದೆ. ತುಂಬ ದಣಿಸುವ ಕೆಲಸ ಆದರೆ ಊಟ ಮಾತ್ರ ಸ್ವಲ್ಪವೇ. ರಾತ್ರಿಯಲ್ಲಿ ನನಗೆ ಕೇಕ್ಸ್, ಹಣ್ಣು ರಸಭಕ್ಷ್ಯಗಳ ಕನಸು ಬೀಳುತ್ತಿತ್ತು. ಆದರೆ ಏಳುವಾಗ ಹೊಟ್ಟೆ ಹಸಿವಿನಿಂದ ಚುರ್ ಚುರ್ ಎನ್ನುತ್ತಿತ್ತು. ಗಂಟಲು ಒಣಗಿ ಹೋಗಿರುತ್ತಿತ್ತು. ನನ್ನ ತೂಕವು ಕೇವಲ 45 ಕೆ.ಜಿ.ಗೆ ಇಳಿದಿತ್ತು. ನನ್ನ ಚಿಕ್ಕ ಬೈಬಲನ್ನು ಮಾತ್ರ ನಾನು ಬಿಡದೆ ಪ್ರತಿದಿನ ಓದುತ್ತಿದ್ದೆ. ನನ್ನ ಬದುಕಿನ ಆಶಾಕಿರಣ ಇದ್ದದ್ದು ಅದರಲ್ಲೇ.
ಕೊನೆಗೂ ಬಿಡುಗಡೆ!
1945ರ ಏಪ್ರಿಲ್ನಲ್ಲಿ ಒಂದು ಮುಂಜಾನೆ ಒಮ್ಮೆಲೆ ಗಾರ್ಡ್ಗಳು ಸೆರೆಮನೆಯಿಂದ ಪಲಾಯನಗೈದರು. ಬಾಗಿಲು ಅಗಲವಾಗಿ ತೆರೆದಿದ್ದವು. ನನಗೆ ಬಿಡುಗಡೆಯಾಗಿತ್ತು! ಆದರೆ ಮೊದಲಾಗಿ ಆಸ್ಪತ್ರೆಯಲ್ಲಿ ಸ್ವಲ್ಪ ಸಮಯ ಕಳೆಯಬೇಕಿತ್ತು. ಮೇ ತಿಂಗಳೊಳಗಾಗಿ ನಾನು ನನ್ನ ಹೆತ್ತವರ ಮನೆಗೆ ಬಂದು ಮುಟ್ಟಿದೆ. ನನ್ನನ್ನು ಮತ್ತೇ ನೋಡುವರೆಂಬ ಆಸೆಯನ್ನೇ ಅವರು ಬಿಟ್ಟುಬಿಟ್ಟಿದ್ದರು. ನನ್ನನ್ನು ಕಂಡಾಗ ಅಮ್ಮಗೆ ಆನಂದದಿಂದ ಕಣ್ಣೀರು ಉಕ್ಕಿಬಂತು. ಅನಂತರ ಸ್ವಲ್ಪ ಸಮಯದಲ್ಲೇ ನನ್ನ ಅಪ್ಪಅಮ್ಮ ತೀರಿಕೊಂಡದ್ದು ದುಃಖಕರ.
ಟ್ಯಾನ್ವೀಲ್ ಸಭೆಯೊಂದಿಗೆ ನಾನು ಪುನಃ ಸಂಪರ್ಕಮಾಡಿದೆ. ನನ್ನ ಆಧ್ಯಾತ್ಮಿಕ ಕುಟುಂಬವನ್ನು ಇನ್ನೊಮ್ಮೆ ನೋಡುವುದು ಎಷ್ಟು ಹರ್ಷಕರವಾಗಿತ್ತು. ಅನೇಕ ಸಂಕಟಗಳ ಮಧ್ಯೆಯೂ ಅವರು ನಂಬಿಗಸ್ತರಾಗಿ ಉಳಿದದ್ದನ್ನು ಕಾಣುವುದು ಅದೆಷ್ಟು ಸಂತೋಷ! ನನ್ನ ಪ್ರಿಯ ಮಿತ್ರ ಆಲ್ಬೀನ್ ಸಹ ಜರ್ಮನಿಯ ರೇಗನ್ಸ್ಬರ್ಗ್ನಲ್ಲಿ ತೀರಿಕೊಂಡನು. ನನ್ನ ಚಿಕ್ಕಪ್ಪನ ಮಗ ಷಾನ್ ಹೀಸೀಗ ಸಾಕ್ಷಿಯಾಗಿದ್ದನೆಂದೂ ಮಿಲಿಟರಿ ಸೇವೆಗೆ ಸೇರಲು ಮಾಡಿದ ಶುದ್ಧಾಂತಕರಣದ ಆಕ್ಷೇಪಕ್ಕಾಗಿ ಅವನನ್ನು ಗಲ್ಲಿಗೇರಿಸಲಾಯಿತೆಂದೂ ನಂತರ ನನಗೆ ತಿಳಿದುಬಂತು. ಪ್ಯಾರಿಸ್ ಬ್ರಾಂಚ್ನಲ್ಲಿ ನನ್ನೊಂದಿಗೆ ಕೆಲಸಮಾಡಿದ ಷಾನ್ ಕೆರ್ರಾ ಸಹ ಜರ್ಮನ್ ಶ್ರಮಶಿಬಿರದಲ್ಲಿ ಐದು ವರ್ಷಗಳ ಶಿಕ್ಷೆಯನ್ನು ಅನುಭವಿಸಿದನು.a
ಮೆಟ್ಸ್ ಊರಿನಲ್ಲಿ ನಾನು ಬೇಗನೆ ಸಾರುವ ಕೆಲಸವನ್ನು ಆರಂಭಿಸಿದೆ. ಆ ಸಮಯದಲ್ಲಿ ನಾನು ಆಗಿಂದಾಗ್ಗೆ ಮಿಂಸಾನೀ ಕುಟುಂಬವನ್ನು ಭೇಟಿಯಾಗುತ್ತಿದ್ದೆ. ಅವರ ಮಗಳು ಟೀನಾ ನವೆಂಬರ್ 2, 1946ರಲ್ಲಿ ದೀಕ್ಷಾಸ್ನಾನ ಪಡೆದಿದ್ದಳು. ಆಕೆ ಹುರುಪಿನ ಶುಶ್ರೂಷಕಳು ಮತ್ತು ಗುಣರೂಪದಲ್ಲಿ ಚೆಲುವೆ. ಡಿಸೆಂಬರ್ 13, 1947ರಲ್ಲಿ ನಾವು ಮದುವೆಯಾದೆವು. ಸೆಪ್ಟೆಂಬರ್ 1967ರಲ್ಲಿ ಟೀನಾ ಪೂರ್ಣಸಮಯ ಸಾರುವ ಕೆಲಸವನ್ನು ಆರಂಭಿಸಿದಳು. ಜೂನ್ 2003ರಲ್ಲಿ ತನ್ನ ಮರಣದ ತನಕ ಆಕೆ ಆ ಸೇವೆಯನ್ನು ಮಾಡಿದಳು. ಟೀನಾಳ ಅಗಲಿಕೆಯು ನನಗೆ ತುಂಬ ವ್ಯಸನವನ್ನು ತಂದಿದೆ.
ಈಗ ನನ್ನ 90ಕ್ಕೂ ಹೆಚ್ಚು ಪ್ರಾಯದಲ್ಲಿ ದೇವರ ವಾಕ್ಯ ನನಗೆ ಸಂಕಟಗಳನ್ನು ಎದುರಿಸಿ ಜಯಿಸಲು ಯಾವಾಗಲೂ ಬಲವನ್ನು ಕೊಟ್ಟಿದೆ ಎಂಬುದನ್ನು ಮನಗಂಡಿದ್ದೇನೆ. ಕೆಲವೊಮ್ಮೆ ನಾನು ಬರಿ ಹೊಟ್ಟೆಯಲ್ಲಿ ಮಲಗುತ್ತಿದ್ದೆ. ಆದರೆ ಯಾವಾಗಲೂ ದೇವರ ವಾಕ್ಯದಿಂದ ನನ್ನ ಹೃದಮನಗಳನ್ನು ತುಂಬಿಸುತ್ತಿದ್ದೆ. ಯೆಹೋವನು ನನ್ನನ್ನು ಸುದೃಢನಾಗಿ ಮಾಡಿದ್ದಾನೆ. ಆತನ “ನುಡಿಯು ನನ್ನನ್ನು ಚೈತನ್ಯಗೊಳಿಸುತ್ತದೆ.”—ಕೀರ್ತನೆ 119:50. (w09 3/1)
[ಪಾದಟಿಪ್ಪಣಿ]
a ಷಾನ್ ಕೆರ್ರಾನ ಜೀವನಕಥೆಗಾಗಿ 1989, ಅಕ್ಟೋಬರ್ 1ರ ಕಾವಲಿನಬುರುಜುವಿನ (ಇಂಗ್ಲಿಷ್) ಪುಟ 22-26 ನೋಡಿ.
[ಪುಟ 23ರಲ್ಲಿರುವ ಚಿತ್ರ]
ನನ್ನ ಪ್ರಿಯ ಮಿತ್ರ ಆಲ್ಬೀನ್ ರಲವಿಟ್ಸ್
[ಪುಟ 23ರಲ್ಲಿರುವ ಚಿತ್ರ]
ಮರೀಸ್ ಅನಸಿಆಕ್
[ಪುಟ 24ರಲ್ಲಿರುವ ಚಿತ್ರ]
ಇಡೀ ವಾರದ ಬ್ರೆಡ್ ಕೊಟ್ಟು ಪಡೆದ ಬೈಬಲ್
[ಪುಟ 25ರಲ್ಲಿರುವ ಚಿತ್ರ]
1946ರಲ್ಲಿ, ನಿಶ್ಚಿತ ವಧು ಟೀನಾಳೊಂದಿಗೆ
[ಪುಟ 25ರಲ್ಲಿರುವ ಚಿತ್ರ]
ಷಾನ್ ಕೆರ್ರಾ ತನ್ನ ಪತ್ನಿ ಟಿಟಿಕಾಳೊಂದಿಗೆ