ಯೇಸು ತನ್ನ ಕುರಿತು ಏನು ಕಲಿಸಿದನು?
“ಯೇಸುವಿಗೆ ತಾನು ಯಾರು, ಎಲ್ಲಿಂದ ಬಂದಿದ್ದೇನೆ, ಈ ಭೂಮಿಗೆ ಬಂದದ್ದೇಕೆ, ಭವಿಷ್ಯದಲ್ಲಿ ತನಗೇನು ಕಾದಿದೆ ಎಂಬವುಗಳ ಬಗ್ಗೆ ಎಳ್ಳಷ್ಟು ಸಂದೇಹವಿರಲಿಲ್ಲ.”—ಲೇಖಕ ಹರ್ಬಟ್ ಲಾಕ್ಯರ್.
ನಾವು ಯೇಸುವಿನ ಬೋಧನೆಗಳನ್ನು ಸ್ವೀಕರಿಸಿ ನಂಬಿಕೆಯಿಡುವ ಮುನ್ನ ಆತನ ಕುರಿತು ಕೆಲವು ವಿಷಯಗಳನ್ನು ತಿಳಿಯುವುದು ಅಗತ್ಯ. ಯೇಸು ನಿಜವಾಗಿಯೂ ಯಾರು? ಎಲ್ಲಿಂದ ಬಂದವನು? ಆತನ ಜೀವನದ ಉದ್ದೇಶವೇನಾಗಿತ್ತು? ಉತ್ತರಗಳಿಗಾಗಿ ಬೈಬಲಿನ ಮತ್ತಾಯ, ಮಾರ್ಕ, ಲೂಕ, ಯೋಹಾನ ಎಂಬ ಸುವಾರ್ತಾ ಪುಸ್ತಕಗಳಲ್ಲಿರುವ ಯೇಸುವಿನ ಸ್ವಂತ ಮಾತುಗಳನ್ನೇ ಆಲಿಸೋಣ.
ಯೇಸು ಭೂಮಿಯಲ್ಲಿ ಹುಟ್ಟುವ ಮುಂಚೆ ಅಸ್ತಿತ್ವದಲ್ಲಿದ್ದನು. ಯೇಸು ಒಮ್ಮೆ ಅಂದದ್ದು: “ಅಬ್ರಹಾಮನು ಅಸ್ತಿತ್ವಕ್ಕೆ ಬರುವುದಕ್ಕಿಂತ ಮುಂಚಿನಿಂದಲೇ ನಾನು ಇದ್ದೆನು.” (ಯೋಹಾನ 8:58) ದೇವಭಕ್ತ ಅಬ್ರಹಾಮನು ಜೀವಿಸಿದ್ದು ಯೇಸು ಹುಟ್ಟುವುದಕ್ಕೆ ಸುಮಾರು 2,000 ವರ್ಷಗಳಿಗೂ ಹಿಂದೆ. ಆದರೆ ಯೇಸು ಅವನಿಗಿಂತಲೂ ಮುಂಚೆಯೇ ಜೀವಿಸಿದ್ದನು. ಎಲ್ಲಿ? ಯೇಸುವೇ ವಿವರಿಸಿದ್ದು: “ನಾನು . . . ಸ್ವರ್ಗದಿಂದ ಇಳಿದುಬಂದಿದ್ದೇನೆ.”—ಯೋಹಾನ 6:38.
ದೇವರ ಮಗ. ಯೆಹೋವ ದೇವರಿಗೆ ಸ್ವರ್ಗದಲ್ಲಿ ಅನೇಕಾನೇಕ ಪುತ್ರರಿದ್ದಾರೆ, ಇವರು ದೇವದೂತರು. ಆದರೆ ಯೇಸು ಇವರೆಲ್ಲರಿಗಿಂತ ವಿಶಿಷ್ಟನು. “ದೇವರ ಏಕೈಕಜಾತ ಪುತ್ರ” ಎಂದು ಯೇಸು ತನಗೆ ಸೂಚಿಸಿ ಹೇಳಿದನು. (ಯೋಹಾನ 3:18) ಇದರರ್ಥ ದೇವರಿಂದ ನೇರವಾಗಿ ಸೃಷ್ಟಿಸಲ್ಪಟ್ಟವನು ಯೇಸು ಮಾತ್ರ ಎಂದೇ. ಬೇರೆಲ್ಲವನ್ನು ದೇವರು ತನ್ನ ಈ ಏಕೈಕಜಾತ ಅಂದರೆ ಒಬ್ಬನೇ ಮಗನ ಮೂಲಕ ಸೃಷ್ಟಿಸಿದನು.—ಕೊಲೊಸ್ಸೆ 1:16.
“ಮನುಷ್ಯಕುಮಾರ.” ಯೇಸು ತನಗೆ ಸೂಚಿಸುವಾಗ ಬೇರಾವುದೇ ಅಭಿವ್ಯಕ್ತಿಗಿಂತ “ಮನುಷ್ಯಕುಮಾರ” ಎಂಬ ಅಭಿವ್ಯಕ್ತಿಯನ್ನು ಹೆಚ್ಚಾಗಿ ಬಳಸಿದನು. (ಮತ್ತಾಯ 8:20) ಈ ಮೂಲಕ, ತಾನು ಮಾನವ ದೇಹ ಧರಿಸಿ ಬಂದಿರುವ ದೇವದೂತನಾಗಲಿ ಅವತಾರವೆತ್ತಿ ಬಂದ ದೇವರಾಗಲಿ ಅಲ್ಲವೆಂದು ತೋರಿಸಿಕೊಟ್ಟನು. ಆತನು ಪೂರ್ಣವಾಗಿ ಒಬ್ಬ ಮಾನವನಾಗಿದ್ದನು. ದೇವರು ತನ್ನ ಪವಿತ್ರಾತ್ಮದ ಮೂಲಕ ಸ್ವರ್ಗದಿಂದ ತನ್ನ ಮಗನ ಜೀವವನ್ನು ಭೂಮಿಯಲ್ಲಿ ಕನ್ಯೆ ಮರಿಯಳ ಗರ್ಭಕ್ಕೆ ವರ್ಗಾಯಿಸಿದನು. ಹೀಗೆ ಯೇಸು ಒಬ್ಬ ಪರಿಪೂರ್ಣ, ಪಾಪರಹಿತ ಮಾನವನಾಗಿ ಜನಿಸಿದನು.—ಮತ್ತಾಯ 1:18; ಲೂಕ 1:35; ಯೋಹಾನ 8:46.
ದೇವರು ವಾಗ್ದಾನಮಾಡಿದ್ದ ಮೆಸ್ಸೀಯ. ಸಮಾರ್ಯದ ಒಬ್ಬಾಕೆ ಸ್ತ್ರೀ ಯೇಸುವಿಗೆ, “ಮೆಸ್ಸೀಯನು ಬರಲಿದ್ದಾನೆಂಬುದು ನನಗೆ ತಿಳಿದಿದೆ” ಎಂದಳು. ಪ್ರತ್ಯುತ್ತರವಾಗಿ ಯೇಸು, “ನಿನ್ನೊಂದಿಗೆ ಮಾತಾಡುತ್ತಿರುವ ನಾನೇ ಅವನು” ಎಂದು ಹೇಳಿದನು. (ಯೋಹಾನ 4:25, 26) “ಮೆಸ್ಸೀಯ” ಎಂಬ ಪದದ ಅರ್ಥ “ಅಭಿಷಿಕ್ತ” ಎಂದಾಗಿದೆ. “ಕ್ರಿಸ್ತ” ಎಂಬ ಪದದ ಅರ್ಥವೂ ಅದೇ. ದೇವರು ತನ್ನ ವಾಗ್ದಾನಗಳನ್ನು ನೆರವೇರಿಸುವುದರಲ್ಲಿ ಒಂದು ವಿಶೇಷ ಪಾತ್ರವನ್ನು ಪೂರೈಸಲಿಕ್ಕಾಗಿ ಯೇಸುವನ್ನು ಅಭಿಷೇಕಿಸಿದನು ಅಥವಾ ನೇಮಿಸಿದನು.
ಯೇಸು ಭೂಮಿಗೆ ಬರಲು ಪ್ರಮುಖ ಕಾರಣ. ಯೇಸು ಒಮ್ಮೆ ಅಂದದ್ದು: “ನಾನು ದೇವರ ರಾಜ್ಯದ ಸುವಾರ್ತೆಯನ್ನು . . . ಪ್ರಕಟಿಸಬೇಕಾಗಿದೆ; ನಾನು ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.” (ಲೂಕ 4:43) ಆತನು ಕಷ್ಟದಲ್ಲಿದ್ದವರಿಗಾಗಿ ಅನೇಕ ಸತ್ಕಾರ್ಯಗಳನ್ನು ಮಾಡಿದನಾದರೂ ದೇವರ ರಾಜ್ಯದ ಕುರಿತು ಸಾರುವುದೇ ಆತನ ಬದುಕಿನ ಮುಖ್ಯ ಧ್ಯೇಯವಾಗಿತ್ತು. ಆ ರಾಜ್ಯದ ಕುರಿತು ಆತನು ಏನು ಬೋಧಿಸಿದನು ಎಂಬುದನ್ನು ಮುಂದೆ ಚರ್ಚಿಸಲಾಗುವುದು.
ಹೌದು, ಯೇಸು ಒಬ್ಬ ಸಾಮಾನ್ಯ ಪುರುಷನಾಗಿರಲಿಲ್ಲ.a ಮುಂದೆ ನಾವು ನೋಡಲಿರುವಂತೆ, ಆತನು ಮುಂಚೆ ಸ್ವರ್ಗದಲ್ಲಿ ಜೀವಿಸಿದ್ದರಿಂದ ಭೂಮಿಯ ಮೇಲೆ ಆತನು ಆಡಿದ ಮಾತುಗಳಿಗೆ ಹೆಚ್ಚು ಮಹತ್ವಾರ್ಥವಿತ್ತು. ಹೀಗಿರಲಾಗಿ ಯೇಸು ಜಗತ್ತಿನ ಕೋಟ್ಯಂತರ ಜನರ ಜೀವನಗಳ ಮೇಲೆ ಪ್ರಭಾವ ಬೀರುವ ಸಂದೇಶವನ್ನು ಸಾರಿದ್ದರಲ್ಲಿ ಆಶ್ಚರ್ಯವಿಲ್ಲ. (w10-E 04/01)
[ಪಾದಟಿಪ್ಪಣಿ]
a ಯೇಸುವಿನ ಬಗ್ಗೆ ಮತ್ತು ದೇವರ ಉದ್ದೇಶದ ನೆರವೇರಿಕೆಯಲ್ಲಿ ಆತನ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೈಬಲ್ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ ಅಧ್ಯಾಯ 4 ನೋಡಿ. ಈ ಪುಸ್ತಕ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.