ಮನೋವ್ಯಥೆಗೆ ಮದ್ದು
ನೆದರ್ಲೆಂಡ್ಸ್‌ನಲ್ಲಿರುವ ಜಾರ್ಜ ಮತ್ತು ಮ್ಯಾನೊನ್ ಎಂಬ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ರೀಯ ಎಂಬ ವೃದ್ಧೆಗೆ ಸಾರಿದಾಗ ಆಕೆ ಒರಟಾಗಿ ಪ್ರತಿಕ್ರಿಯಿಸಿದರು. ಅದಕ್ಕೆ ಕಾರಣ ಏನೆಂಬುದು ನಂತರ ಸಾಕ್ಷಿಗಳಿಗೆ ತಿಳಿಯಿತು. ಆಕೆಯ ಮೊದಲ ಪತಿ, ಎರಡನೇ ಪತಿ ಹಾಗೂ ಮಗ ತೀರಿಹೋಗಿದ್ದರು. ಈ ದುಃಖದೊಂದಿಗೆ ಆಕೆ ತೀವ್ರ ಸಂಧಿವಾತದಿಂದಲೂ ನರಳುತ್ತಿದ್ದರು. ಸಂಭಾಷಣೆ ಮುಂದುವರಿದಾಗ ಆಕೆ ಸ್ವಲ್ಪ ಶಾಂತರಾದರು. ಆದರೂ ಸ್ನೇಹಪರರಾಗಲಿಲ್ಲ.
ರೀಯರವರು ತೀವ್ರ ಒಂಟಿತನ ಹಾಗೂ ವ್ಯಥೆಯಿಂದ ಕೊರಗುತ್ತಿದ್ದರಿಂದ ಪುನಃ ಆಕೆಯನ್ನು ನೋಡಲು ಹೋಗುವಾಗ ಒಂದು ಹೂಗುಚ್ಛ ತೆಗೆದುಕೊಂಡು ಹೋಗೋಣ ಎಂದು ಮ್ಯಾನೊನ್‌ಳಿಗೆ ಜಾರ್ಜ ಸಲಹೆ ಕೊಟ್ಟನು. ರೀಯಗೆ ಸಾಕ್ಷಿಗಳು ಹೂಗುಚ್ಛ ಕೊಟ್ಟಾಗ ಆಕೆ ಸಂತೋಷದಿಂದ ಬೆರಗಾದರು. ಆ ದಿನ ಅವರೊಂದಿಗೆ ಮಾತಾಡಲು ಆಕೆಗೆ ಸಮಯವಿಲ್ಲದ ಕಾರಣ ಬೇರೊಂದು ದಿನ ಬರುವಂತೆ ಸಮಯ ಗೊತ್ತುಮಾಡಿದರು. ಆ ದಿನದಂದು ಸಾಕ್ಷಿಗಳು ಬಂದಾಗ ಆಕೆ ಮನೆಯಲ್ಲಿರಲಿಲ್ಲ. ಮತ್ತೆ ಅನೇಕ ಬಾರಿ ಹೋಗಿ ನೋಡಿದರೂ ಆಕೆ ಸಿಗಲಿಲ್ಲ. ತಾವು ಬರುವುದು ಆಕೆಗೆ ಇಷ್ಟವಿಲ್ಲವೇನೊ, ಅದಕ್ಕೆ ತಪ್ಪಿಸಿಕೊಳ್ಳುತ್ತಿದ್ದಾರೆಂದು ಸಾಕ್ಷಿಗಳಿಗೆ ಅನಿಸತೊಡಗಿತು.
ಕೊನೆಗೂ ಒಂದು ದಿನ ಜಾರ್ಜಗೆ ರೀಯರವರು ಮನೆಯಲ್ಲಿ ಸಿಕ್ಕಿದರು. ಆಕೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕಾರಣ ಹೇಳಿದ ದಿನದಂದು ಮನೆಯಲ್ಲಿ ಇರಲಿಲ್ಲ ಎಂದು ವಿವರಿಸಿ ಕ್ಷಮೆಯಾಚಿಸಿದರು. “ಆವತ್ತು ನೀವು ಬಂದು ಹೋದ ಮೇಲೆ ನಾನು ಏನು ಮಾಡಿದೆ ಅಂತ ಗೊತ್ತಾ? ನಾನು ಬೈಬಲನ್ನು ಓದಲು ಶುರುಮಾಡಿದೆ!” ಎಂದು ಆಕೆ ಹೇಳಿದರು. ಅನಂತರ ಖುಷಿಯಿಂದ ಬೈಬಲ್ ಚರ್ಚೆಯಲ್ಲಿ ಒಳಗೂಡಿದರು. ಬೈಬಲ್ ಅಧ್ಯಯನ ಆರಂಭವಾಯಿತು.
ಬೈಬಲ್ ವಿಷಯಗಳನ್ನು ಕಲಿತಂತೆ ಕೋಪ ಮತ್ತು ದುಃಖ ಮರೆಯಾಗಿ ರೀಯರವರ ಮುಖದಲ್ಲಿ ಸಂತೋಷ ಕಾಣುತ್ತಿತ್ತು. ಸ್ನೇಹಪರರೂ ಆದರು. ಆಕೆಗೆ ಮನೆಯಿಂದ ಹೊರಗೆ ಹೋಗಲು ಆಗದಿದ್ದರೂ ತನ್ನನ್ನು ಭೇಟಿ ಮಾಡಲು ಬರುತ್ತಿದ್ದವರಿಗೆಲ್ಲ ತನ್ನ ಹೊಸ ನಂಬಿಕೆಯ ಕುರಿತು ತಿಳಿಸುತ್ತಿದ್ದರು. ಅಸ್ವಸ್ಥತೆಯ ಕಾರಣ ಆಕೆಗೆ ಹೆಚ್ಚಾಗಿ ಕೂಟಗಳಿಗೆ ಹೋಗಲು ಆಗುತ್ತಿರಲಿಲ್ಲವಾದರೂ ಸಹೋದರ ಸಹೋದರಿಯರು ಮನೆಗೆ ಬರುವುದನ್ನು ಆಕೆ ಬಹಳ ಇಷ್ಟಪಡುತ್ತಿದ್ದರು. 82ರ ಪ್ರಾಯಕ್ಕೆ ಕಾಲಿಟ್ಟ ದಿನದಂದು ಸರ್ಕಿಟ್ ಸಮ್ಮೇಳನದಲ್ಲಿ ಆಕೆ ದೇವರಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಂಡರು.
ವೃದ್ಯಾಪ್ಯದಲ್ಲಿ ಅನುಭವಿಸಿದ ಒಂಟಿತನದ ಸಂಕಟ ಹಾಗೂ ಇತರರು ದಯೆ ತೋರಿಸುವ ಮಹತ್ವದ ಕುರಿತು ಅವರೊಮ್ಮೆ ಒಂದು ಕವನ ಬರೆದಿದ್ದರು. ಅದು ಆಕೆಯ ಮರಣದ ಕೆಲ ತಿಂಗಳುಗಳ ನಂತರ ಸಿಕ್ಕಿತು. “ಆ ಕವನ ನನ್ನ ಮನಃಸ್ಪರ್ಶಿಸಿತು. ಆಕೆಗೆ ದಯೆಯನ್ನು ತೋರಿಸಲು ಯೆಹೋವನು ಸಹಾಯ ಮಾಡಿದ್ದಕ್ಕಾಗಿ ನಾನು ತುಂಬಾ ಆಭಾರಿ” ಎಂದು ಮ್ಯಾನೊನ್ ಹೇಳಿದಳು.
ಹೌದು, ಯೆಹೋವನ ಸ್ವಂತ ಮಾದರಿಯು ನಾವು ಕೂಡ ಪ್ರೀತಿ, ದಯೆಯನ್ನು ತೋರಿಸುವಂತೆ ಪ್ರಚೋದಿಸುತ್ತದೆ. (ಎಫೆ. 5:1, 2) “ನಾವು ದೇವರ ಶುಶ್ರೂಷಕರಾಗಿ . . . ದಯೆ” ತೋರಿಸುತ್ತಾ ಇರುವಾಗ ನಮ್ಮ ಸೇವೆಯು ಫಲಭರಿತವಾಗುವುದು.—2 ಕೊರಿಂ. 6:4, 6.