ಜೊಹಾನ್‌ನೆಸ್ ರೌಟೆ ಸಾರುವ ಕೆಲಸದಲ್ಲಿ ಭಾಗವಹಿಸುತ್ತಿದ್ದಾರೆ, ಬಹುಶಃ 1920ರಲ್ಲಿ
ನಮ್ಮ ಸಂಗ್ರಹಾಲಯ
“ಯೆಹೋವನ ಸೇವೆಯನ್ನು ನಾನು ಇಲ್ಲೇ ಮಾಡುತ್ತಿದ್ದೇನೆ”
“ಯೂರೋಪಿನಲ್ಲಿ ನಡೆಯುತ್ತಿರುವ ಹೋರಾಟದ ಮುಂದೆ ಇಲ್ಲಿವರೆಗೆ ನಡೆದ ಯುದ್ಧಗಳು ಏನೇನು ಅಲ್ಲ.” ಒಂದನೇ ವಿಶ್ವಯುದ್ಧದ ಬಗ್ಗೆ ಇದ್ದ ಈ ಹೇಳಿಕೆಯು ಸೆಪ್ಟೆಂಬರ್ 1, 1915ರ ಕಾವಲಿನ ಬುರುಜುವಿನಲ್ಲಿತ್ತು. ಈ ಯುದ್ಧ ಕ್ರಮೇಣ 30 ದೇಶಗಳನ್ನು ಆವರಿಸಿತು. ಯುದ್ಧದಿಂದಾಗಿ “ಸಾರುವ ಕೆಲಸವು ಜರ್ಮನಿ ಮತ್ತು ಫ್ರಾನ್ಸ್‌ನಲ್ಲಿ ಸ್ವಲ್ಪ ಸಮಯದ ವರೆಗೆ ನಿಂತು ಹೋಗಿತ್ತು” ಎಂದು ಕಾವಲಿನ ಬುರುಜು ವರದಿಸಿತು.
ಯುದ್ಧದ ಕಾವು ಭೂಮಿಯಲ್ಲೆಲ್ಲಾ ಹಬ್ಬುತ್ತಾ ಇತ್ತು. ಬೈಬಲ್ ವಿದ್ಯಾರ್ಥಿಗಳಿಗೆ ಕ್ರೈಸ್ತ ತಾಟಸ್ಥ್ಯದ ಹಿಂದಿದ್ದ ತತ್ವ ಸರಿಯಾಗಿ ಅರ್ಥವಾಗಿರಲಿಲ್ಲ. ಹಾಗಾಗಿ ಕೆಲವರು ಮಿಲಿಟರಿಗೆ ಸೇರಿದ್ದರು. ಆದರೂ ಸುವಾರ್ತೆ ಸಾರುವ ಧೃಡಮನಸ್ಸು ಅವರಿಗಿತ್ತು. ವಿಲ್‌ಹೆಲ್ಮ್ ಹಿಲ್ಡೆಬ್ರಾಂಟ್ ಎಂಬ ಸಹೋದರ ಸೇವೆ ಮಾಡಲು ಬಯಸಿದರು. ಅದರಿಂದ ಫ್ರೆಂಚ್ ಭಾಷೆಯ ದ ಬೈಬಲ್ ಸ್ಟೂಡೆಂಟ್ಸ್ ಮಂತ್ಲಿ ಎಂಬ ಪ್ರಕಾಶನದ ಪ್ರತಿಗಳನ್ನು ತರಿಸಿದರು. ಈ ಸಹೋದರ ಫ್ರಾನ್ಸ್‌ನಲ್ಲಿ ಕಾಲ್ಪೋರ್ಟರ್ ಅಥವಾ ಪೂರ್ಣ ಸಮಯದ ಸೇವಕ ಆಗಿರಲಿಲ್ಲ, ಜರ್ಮನಿಯ ಸೈನಿಕ ಆಗಿದ್ದರು. ಮಿಲಿಟರಿ ಸಮವಸ್ತ್ರ ಧರಿಸಿರುವ ತಮ್ಮ ದೇಶದ ವೈರಿಯೊಬ್ಬ ಶಾಂತಿಯ ಸಂದೇಶವನ್ನು ತಿಳಿಸುತ್ತಿದ್ದದ್ದನ್ನು ನೋಡುತ್ತಿದ್ದ ಫ್ರಾನ್ಸ್‌ನ ಜನರಿಗೆ ಆಶ್ಚರ್ಯವೋ ಆಶ್ಚರ್ಯ.
ಜರ್ಮನಿಯ ಅನೇಕ ಬೈಬಲ್ ವಿದ್ಯಾರ್ಥಿಗಳು ಮಿಲಿಟರಿಯಲ್ಲಿದ್ದರೂ ರಾಜ್ಯ ಸಂದೇಶವನ್ನು ಸಾರುವ ಕಡುಬಯಕೆ ಅವರಿಗೆ ಇತ್ತು ಎಂದು ಕಾವಲಿನ ಬುರುಜುವಿನಲ್ಲಿ ಮುದ್ರಣವಾದ ಪತ್ರಗಳು ತಿಳಿಸಿತು. ನೌಕಾಪಡೆಯಲ್ಲಿದ್ದ ಸಹೋದರ ಲೆಮ್ಕಿ ತನ್ನ ಜೊತೆ ಕೆಲಸ ಮಾಡುತ್ತಿದ್ದ ಐದು ಜನರಿಗೆ ಬೈಬಲಿನಲ್ಲಿ ಆಸಕ್ತಿ ಇರುವುದಾಗಿ ತಿಳಿಸಿದರು. ಅವರು ಬರೆದಿದ್ದು: “ಮಿಲಿಟರಿಯಲ್ಲಿ ಇದ್ದರೂ ಯೆಹೋವನ ಸೇವೆಯನ್ನು ನಾನು ಇಲ್ಲೇ ಮಾಡುತ್ತಿದ್ದೇನೆ.”
ಜಾರ್ಜ್ ಕೇಸರ್ ಸೈನಿಕನಾಗಿ ಹೋದರು, ದೇವರ ಸೇವಕನಾಗಿ ಹಿಂದಿರುಗಿದರು. ಹೇಗೆ? ಬೈಬಲ್ ಸ್ಟೂಡೆಂಟ್ ಎಂಬ ಪ್ರಕಾಶನ ಹೇಗೋ ಅವರ ಕೈಗೆ ಸಿಕ್ಕಿತು. ಅದರಲ್ಲಿದ್ದ ಸತ್ಯವನ್ನು ಹೃದಯದಾಳದಿಂದ ಸ್ವೀಕರಿಸಿದರು. ಯುದ್ಧ ಮಾಡುವುದನ್ನೇ ನಿಲ್ಲಿಸಿದರು. ನಂತರ ಜೀವ ಉಳಿಸುವ ಕೆಲಸವನ್ನು ಶುರುಮಾಡಿದರು. ಯುದ್ಧದ ನಂತರ ಅನೇಕ ವರ್ಷಗಳು ಪಯನೀಯರ್ ಆಗಿ ಹುರುಪಿನಿಂದ ಸೇವೆ ಮಾಡಿದರು.
ಬೈಬಲ್ ವಿದ್ಯಾರ್ಥಿಗಳಿಗೆ ತಾಟಸ್ಥ್ಯದ ಬಗ್ಗೆ ಪೂರ್ಣವಾಗಿ ಅರ್ಥ ಆಗಿರದಿದ್ದರೂ ಅವರ ಮನೋಭಾವ ಮತ್ತು ನಡತೆ ಯುದ್ಧವನ್ನು ಬೆಂಬಲಿಸುತ್ತಿದ್ದ ಬೇರೆ ಜನರಿಗಿಂತ ತುಂಬ ಭಿನ್ನವಾಗಿತ್ತು. ರಾಜಕಾರಣಿಗಳು ಮತ್ತು ಧರ್ಮಗುರುಗಳು ರಾಷ್ಟ್ರಧ್ವಜವನ್ನು ಹಾರಿಸಿದರು. ಆದರೆ ಬೈಬಲ್ ವಿದ್ಯಾರ್ಥಿಗಳು “ಸಮಾಧಾನದ ಪ್ರಭು”ಗಳಾಗಿದ್ದರು. (ಯೆಶಾ. 9:6) ಕೆಲವರು ತಾಟಸ್ಥ್ಯವನ್ನು ಕಟ್ಟುನಿಟ್ಟಾಗಿ ಪಾಲಿಸಲಿಲ್ಲವಾದರೂ ಕೊನ್ರಾಡ್ ಮಾರ್ಟರ್ ಹೇಳಿದಂತೆ ಅವರಿಗೂ ಅನಿಸಿತ್ತು. ಅವರಂದದ್ದು: “ಕ್ರೈಸ್ತರು ಯಾರನ್ನೂ ಕೊಲ್ಲಬಾರದು ಎಂದು ದೇವರ ವಾಕ್ಯದಿಂದ ನಾನು ಸ್ಪಷ್ಟವಾಗಿ ಗ್ರಹಿಸಿದೆ.”—ವಿಮೋ. 20:13.a
ಹಾನ್ಸ್ ಹೋಲ್ಟರ್‌ಹೋಫ್ ದ ಗೋಲ್ಡನ್ ಏಜ್ ಪತ್ರಿಕೆಯನ್ನು ಪ್ರಚಾರಮಾಡಲು ಈ ಕೈಬಂಡಿಯನ್ನು ಉಪಯೋಗಿಸಿದರು
ಯುದ್ಧದಲ್ಲಿ ಭಾಗವಹಿಸಲು ತಮ್ಮ ಮನಸ್ಸು ಒಪ್ಪುತ್ತಿಲ್ಲ ಎಂದರೂ ಜರ್ಮನಿಯ ನಿಯಮ ಅವರಿಗೆ ಯಾವುದೇ ವಿನಾಯಿತಿ ಕೊಡಲಿಲ್ಲ. 20 ಬೈಬಲ್ ವಿದ್ಯಾರ್ಥಿಗಳು ಮಿಲಿಟರಿಯಲ್ಲಿ ಭಾಗವಹಿಸಲು ನಿರಾಕರಿಸಿದರು. ಹಾಗಾಗಿ, ಕೆಲವರಿಗೆ ಹುಚ್ಚು ಹಿಡಿದಿದೆ ಎಂದು ಮಾನಸಿಕ ಆಸ್ಪತ್ರೆಗೆ ಕಳುಹಿಸಿದರು. ಅವರಲ್ಲಿ ಗಸ್ತವ್ ಕುಯಾಟ್ ಕೂಡ ಒಬ್ಬರು. ಅಲ್ಲಿ ಅವರಿಗೆ ಮಾನಸಿಕ ರೋಗಿಗಳ ಔಷಧಿಗಳನ್ನು ಕೊಟ್ಟು ಹಿಂಸಿಸಲಾಯಿತು. ಹಾನ್ಸ್ ಹೋಲ್ಟರ್‌ಹೋಫ್ ಎಂಬವರು ಯುದ್ಧಕ್ಕೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ಮಾಡಲು ನಿರಾಕರಿಸಿದರು. ಅವರನ್ನು ಜೈಲಿಗೆ ಹಾಕಲಾಯಿತು. ಪೊಲೀಸರು ಅವರ ಕೈಕಾಲುಗಳನ್ನು ಬಿಗಿಯಾಗಿ ಕಟ್ಟಿ ಅದು ಶಕ್ತಿ ಕಳಕೊಳ್ಳುವ ಹಾಗೆ ಮಾಡಿದರು. ಹೀಗೆಲ್ಲಾ ಮಾಡಿದರೂ ಆ ಸಹೋದರ ತಮ್ಮ ನಿಲುವನ್ನು ಬಿಡದೇ ಇದ್ದದರಿಂದ ಅವರನ್ನು ಮಾನಸಿಕವಾಗಿ ಹಿಂಸಿಸಲು ಅವರಂತೆಯೇ ಕಾಣುವ ಒಂದು ಗೊಂಬೆ ಮಾಡಿ ಅದನ್ನು ಅವರ ಕಣ್ಣ ಮುಂದೆನೇ ಕ್ರೂರವಾಗಿ ಕೊಂದುಹಾಕುವಂತೆ ನಟಿಸಿದರು. ಇಷ್ಟೆಲ್ಲಾ ಆದರೂ ಹಾನ್ಸ್ ಮಾತ್ರ ತಮ್ಮ ತಾಟಸ್ಥ್ಯವನ್ನು ಬಿಟ್ಟುಕೊಡಲೇ ಇಲ್ಲ.
ಇತರ ಸಹೋದರರು ‘ಶಸ್ತ್ರಗಳಿಂದ ಇನ್ನೊಬ್ಬರನ್ನು ಸಾಯಿಸುವ ಕೆಲಸ ಬಿಟ್ಟು ಬೇರೆ ಯಾವುದಾದರೂ ಕೆಲಸ ಕೊಡಿ’ ಎಂದು ಕೇಳಿಕೊಂಡರು.b ಈ ರೀತಿ ಕೇಳಿಕೊಂಡವರಲ್ಲಿ ಜೊಹಾನ್‌ನೆಸ್ ರೌಟೆ ಕೂಡ ಒಬ್ಬರು. ಇವರನ್ನು ರೈಲುವ್ಯವಸ್ಥೆಯಲ್ಲಿ ಕೆಲಸ ಮಾಡಲು ಕಳುಹಿಸಲಾಯಿತು. ಕೊನ್ರಾಡ್ ಮಾರ್ಟರ್‌ರನ್ನು ಆಸ್ಪತ್ರೆಯಲ್ಲಿ ಗುಡಿಸುವ ಕೆಲಸಕ್ಕೆ ಹಾಕಿದರು ಮತ್ತು ರೆಯಿನ್‌ಹೋಲ್ಡ್ ವೆಬರ್‌ರಿಗೆ ರೋಗಿಗಳಿಗೆ ಆರೈಕೆ ಮಾಡುವ ಕೆಲಸ ಕೊಡಲಾಯಿತು. ಆಗಸ್ಟ್ ಕ್ರಾಫ್‌ಚಿಕ್‌ರಿಗೆ ಸಾಮಾನುಗಳನ್ನು ನೋಡಿಕೊಳ್ಳುವ ಕೆಲಸ ಕೊಡಲಾಯಿತು. ತಮ್ಮ ಈ ಕೆಲಸ ಯಾವುದೇ ರೀತಿ ಯುದ್ಧಕ್ಕೆ ಸಂಬಂಧ ಪಡದೆ ಇದ್ದದ್ದಕ್ಕೆ ಅವರು ತುಂಬ ಕೃತಜ್ಞರಾಗಿದ್ದರು. ಈ ಬೈಬಲ್ ವಿದ್ಯಾರ್ಥಿಗಳು ಮತ್ತು ಇತರರು ತಮಗೆ ಯೆಹೋವನ ಮೇಲಿದ್ದ ಪ್ರೀತಿ ಮತ್ತು ನಿಷ್ಠೆಯಿಂದಾಗಿ ಆತನನ್ನು ಸೇವೆಮಾಡುವ ಧೃಡತೀರ್ಮಾನ ಮಾಡಿದ್ದರು.
ಬೈಬಲ್ ವಿದ್ಯಾರ್ಥಿಗಳು ಯುದ್ಧದ ಸಮಯದಲ್ಲಿ ತಮ್ಮ ನಿಲುವನ್ನು ಕಾಪಾಡಿಕೊಂಡಿದ್ದರಿಂದ ಅವರನ್ನು ಅಧಿಕಾರಿಗಳ ತನಿಖೆಯಡಿ ಇಡಲಾಯಿತು. ಮುಂದಿನ ಹಲವು ವರ್ಷಗಳು ಜರ್ಮನಿಯ ಬೈಬಲ್ ವಿದ್ಯಾರ್ಥಿಗಳು ತಮ್ಮ ಸಾರುವ ಕೆಲಸದಿಂದಾಗಿ ಸಾವಿರಾರು ಕೋರ್ಟ್ ಕೇಸುಗಳನ್ನು ಎದುರಿಸಬೇಕಾಯಿತು. ಅವರಿಗೆ ಸಹಾಯ ಮಾಡಲಿಕ್ಕಾಗಿ ಜರ್ಮನಿಯ ಬ್ರಾಂಚ್ ಆಫೀಸ್ ಮಾಗ್ಡಬರ್ಗ್‌ನ ಬೆತೆಲ್‌ನಲ್ಲಿ ಕಾನೂನು ಇಲಾಖೆಯನ್ನು ರಚಿಸಿತು.
ಯೆಹೋವನ ಸಾಕ್ಷಿಗಳು ಕ್ರೈಸ್ತ ತಾಟಸ್ಥ್ಯದ ಬಗ್ಗೆ ತಮಗಿದ್ದ ತಿಳುವಳಿಕೆಯನ್ನು ಹಂತ ಹಂತವಾಗಿ ಪರಿಷ್ಕೃತಗೊಳಿಸಿದರು. ಎರಡನೇ ವಿಶ್ವಯುದ್ಧ ಆರಂಭವಾದಾಗ ಅವರು ಮಿಲಿಟರಿಯಿಂದ ಸಂಪೂರ್ಣವಾಗಿ ತಮ್ಮನ್ನು ದೂರವಿಟ್ಟುಕೊಳ್ಳುವ ಮೂಲಕ ತಮ್ಮ ತಾಟಸ್ಥ್ಯವನ್ನು ಕಾಪಾಡಿಕೊಂಡರು. ಹಾಗಾಗಿ ಅವರನ್ನು ಜರ್ಮನಿಯ ವೈರಿಗಳಂತೆ ವೀಕ್ಷಿಸಲಾಯಿತು ಮತ್ತು ಕ್ರೂರವಾಗಿ ಹಿಂಸಿಸಲಾಯಿತು. ಆದರೆ ಅದು ಇನ್ನೊಂದು ಕಥೆ. ಅದು “ನಮ್ಮ ಸಂಗ್ರಹಾಲಯ”ದ ಮುಂದಿನ ಸರಣಿಯಲ್ಲಿ ಮೂಡಿಬರಲಿದೆ.—ಮಧ್ಯ ಯೂರೋಪಿನ ನಮ್ಮ ಸಂಗ್ರಹಾಲಯ.
a ಒಂದನೇ ವಿಶ್ವಯುದ್ಧದ ಸಮಯದಲ್ಲಿದ್ದ ಬ್ರಿಟಿಷ್ ಬೈಬಲ್ ವಿದ್ಯಾರ್ಥಿಗಳ ಬಗ್ಗೆ ಮೇ 15, 2013ರ ಕಾವಲಿನಬುರುಜುವಿನಲ್ಲಿರುವ “ನಮ್ಮ ಸಂಗ್ರಹಾಲಯ—ಪರೀಕ್ಷೆಯ ಗಳಿಗೆಯಲ್ಲಿ ಸ್ಥಿರವಾಗಿ ನಿಂತರು” ಎಂಬ ಲೇಖನ ನೋಡಿ.
b ಈ ಅನುಭವಗಳು ಮಿಲೇನಿಯಲ್ ಡಾನ್ ಸರಣಿ ಸಂಪುಟ 6, 1904 ಮತ್ತು ಝಯನ್ಸ್ ವಾಚ್ ಟವರ್ ಆಗಸ್ಟ್ 1906ರ ಜರ್ಮನ್ ಆವೃತ್ತಿಯಲ್ಲಿದೆ. ದ ವಾಚ್ ಟವರ್ ಸೆಪ್ಟೆಂಬರ್ 1915ರ ಆವೃತ್ತಿಯು ಬೈಬಲ್ ವಿದ್ಯಾರ್ಥಿಗಳ ತಿಳುವಳಿಕೆಯನ್ನು ಪರಿಷ್ಕೃತಗೊಳಿಸಿ ಮಿಲಿಟರಿಗೆ ಸೇರಬಾರದು ಎಂದು ತಿಳಿಸಲಾಯಿತು. ಈ ಲೇಖನವು ಜರ್ಮನ್ ಆವೃತ್ತಿಯಲ್ಲಿ ಮೂಡಿಬರಲಿಲ್ಲ.