ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp17 ನಂ. 1 ಪು. 8-9
  • ನನಗೆ ಸಾಯಲು ಇಷ್ಟವಿರಲಿಲ್ಲ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನನಗೆ ಸಾಯಲು ಇಷ್ಟವಿರಲಿಲ್ಲ!
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2017
  • ಅನುರೂಪ ಮಾಹಿತಿ
  • ಅಂದು ಮತ್ತು ಇಂದು ದೇವರ ವಾಕ್ಯದ ಪ್ರಭಾವ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಬದುಕು ಬದಲಾದ ವಿಧ
    ಕಾವಲಿನಬುರುಜು: “ಭೇದ ಭಾವ ಮಾಡೋದನ್ನ ಬಿಟ್ಟುಬಿಟ್ಟೆ”
  • ಬದುಕನ್ನೇ ಬದಲಾಯಿಸುವ ಬೈಬಲ್‌
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ಬದುಕು ಬದಲಾದ ವಿಧ
    2011ರ ಇಂಗ್ಲಿಷ್‌ ಕಾವಲಿನಬುರುಜುವಿನ ಲೇಖನ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2017
wp17 ನಂ. 1 ಪು. 8-9

ಬದುಕು ಬದಲಾದ ವಿಧ

ನನಗೆ ಸಾಯಲು ಇಷ್ಟವಿರಲಿಲ್ಲ!

ಈವಾನ್‌ ಕ್ವಾರೀ ರವರ ಕಥನ

  • ಜನನ: 1964

  • ದೇಶ: ಇಂಗ್ಲೆಂಡ್‌

  • ಹಿಂದೆ: ಇಷ್ಟ ಬಂದಂತೆ ಇದ್ದ ಹದಿವಯಸ್ಸಿನ ತಾಯಿ

ಹದಿವಯಸ್ಸಿನಲ್ಲೇ ತಾಯಿಯಾಗಿರುವ ಈವಾನ್‌ ಕ್ವಾರೀ

ಹಿನ್ನೆಲೆ

ನಾನು ಜನಿಸಿದ್ದು, ಲಂಡನಿನ ಪ್ಯಾಡಿಂಗ್‌ಟನ್‌ ಎಂಬಲ್ಲಿ. ನಮ್ಮ ಮನೆಯಲ್ಲಿ ನಾನು, ಅಮ್ಮ ಮತ್ತು ಮೂವರು ಅಕ್ಕಂದಿರು ಇದ್ದರು. ಅಪ್ಪನಿಗೆ ಕುಡಿಯೋ ಚಟ ಇದ್ದದರಿಂದ ಒಂದು ದಿನ ಮನೆಗೆ ಬಂದರೆ ನಾಲ್ಕು ದಿನ ಬರ್ತಾನೇ ಇರಲಿಲ್ಲ.

ನಾನು ಚಿಕ್ಕವಳಿದ್ದಾಗ, ನನ್ನ ಅಮ್ಮ ಪ್ರತಿ ರಾತ್ರಿ ಪ್ರಾರ್ಥನೆ ಮಾಡೋದನ್ನ ಹೇಳಿಕೊಡುತ್ತಿದ್ರು. ನನ್ನ ಹತ್ತಿರ ಬೈಬಲಿತ್ತು, ಆದರೆ ಅದರಲ್ಲಿ ಕೀರ್ತನೆ ಪುಸ್ತಕ ಮಾತ್ರ ಇತ್ತು. ಅದಕ್ಕೆ ನಾನೇ ರಾಗ ಹಾಕಿ ಹಾಡುತ್ತಿದ್ದೆ. ನನ್ನತ್ರ ಇದ್ದ ಬೇರೆ ಒಂದು ಪುಸ್ತಕದಲ್ಲಿ, “ಮುಂದೊಂದು ದಿನ ನಾಳೆ ಅನ್ನೋದೇ ಇರಲ್ಲ!” ಅಂತ ಓದಿದ್ದು ನನಗಿನ್ನೂ ಚೆನ್ನಾಗಿ ನೆನಪಿದೆ. ಈ ಮಾತಿನಿಂದಾಗಿ ರಾತ್ರಿ ಎಲ್ಲಾ ನಿದ್ದೆಗೆಡುತ್ತಿದ್ದೆ, ನಾಳೆ ಏನಾಗುತ್ತೋ? ಅಂತ ಭಯಪಡುತ್ತಿದ್ದೆ. ‘ಜೀವನ ಅಂದ್ರೆ ಇಷ್ಟೇ ಅಲ್ಲ’ ಅಂತ ನನಗನಿಸ್ತಿತ್ತು. ‘ನಾನ್ಯಾಕೆ ಇಲ್ಲಿ ಇದ್ದೀನಿ?’ ಅನ್ನೋ ಪ್ರಶ್ನೆ ಕಾಡ್ತಾ ಇತ್ತು. ನನಗೆ ಸಾಯಲು ಇಷ್ಟ ಇರಲಿಲ್ಲ.

ಆದ್ದರಿಂದ ಮಾಟ-ಮಂತ್ರದ ಬಗ್ಗೆ ತುಂಬ ಆಸಕ್ತಿ ಹುಟ್ಟಿಕೊಂಡಿತು. ಸತ್ತವರನ್ನು ಮಾತಾಡಿಸಲು ಪ್ರಯತ್ನಿಸಿದೆ, ನನ್ನ ಶಾಲೆಯ ಸ್ನೇಹಿತರ ಜೊತೆ ಸ್ಮಶಾನಗಳಿಗೆ ಹೋದೆ, ಅವರ ಜೊತೆ ದೆವ್ವ-ಭೂತದ ಚಲನಚಿತ್ರಗಳನ್ನು ನೋಡಿದೆ. ಅವುಗಳನ್ನು ನೋಡುವಾಗ ಕುತೂಹಲ ಮತ್ತು ಭಯ ಎರಡೂ ಆಗುತ್ತಿತ್ತು.

ನನಗೆ ಹತ್ತು ವರ್ಷ ವಯಸ್ಸಾದಾಗ ಇಷ್ಟ ಬಂದಂತೆ ಇರಲು ಶುರುಮಾಡಿದೆ. ಸಿಗರೇಟು ಸೇದುತ್ತಾ, ಬೇಗನೆ ಅದಕ್ಕೆ ದಾಸಳಾದೆ. ನಂತರ, ಗಾಂಜಾ ಸೇದಲೂ ಆರಂಭಿಸಿದೆ. ಹನ್ನೊಂದನೇ ವಯಸ್ಸಿನಷ್ಟಕ್ಕೆ ಕುಡಿಯಲು ಆರಂಭಿಸಿದೆ. ನನಗೆ ಅದರ ರುಚಿ ಇಷ್ಟ ಆಗದಿದ್ದರೂ, ಮತ್ತಳಾಗೋದು ಇಷ್ಟ ಆಗುತ್ತಿತ್ತು. ಸಂಗೀತ, ಡ್ಯಾನ್ಸ್‌ ನನಗೆ ಪಂಚಪ್ರಾಣ. ಸಾಧ್ಯವಾದಾಗೆಲ್ಲಾ ಪಾರ್ಟಿಗಳಿಗೆ, ರಾತ್ರಿಯ ಕ್ಲಬ್‌ಗಳಿಗೆ ಹೋಗುತ್ತಿದ್ದೆ. ರಾತ್ರಿ ಹೋದರೆ ಬೆಳಗಾಗುವ ಮುಂಚೆ ಎಲ್ಲರ ಕಣ್ಣು ತಪ್ಪಿಸಿ ಮನೆ ಸೇರುತ್ತಿದ್ದೆ. ನಿದ್ದೆ ಇಲ್ಲದೆ ಸುಸ್ತಾಗುತ್ತಿದ್ದರಿಂದ ಮರುದಿನ ಶಾಲೆಗೆ ಹೋದಾಗ ಯಾರಿಗೂ ಹೇಳದೆ ಕೇಳದೆ ಅಲ್ಲಿಂದ ಹೊರಬರುತ್ತಿದ್ದೆ. ಶಾಲೆಯಲ್ಲಿದ್ದರೂ ವಿರಾಮ ಸಮಯದಲ್ಲೆಲ್ಲಾ ಕುಡಿಯುತ್ತಿದ್ದೆ.

ಶಾಲೆಯ ಕೊನೆಯ ವರ್ಷದಲ್ಲಿ ನನಗೆ ತುಂಬ ಕಡಿಮೆ ಅಂಕಗಳು ಬಂದವು. ಆದರೆ ಅಮ್ಮನಿಗೆ ನನ್ನ ಜೀವನ ರೀತಿಯ ಬಗ್ಗೆ ಇನ್ನೂ ಸರಿಯಾಗಿ ಗೊತ್ತಿರಲಿಲ್ಲ. ನನ್ನ ಅಂಕಗಳನ್ನು ನೋಡಿದಾಗ ಅಮ್ಮನಿಗೆ ನನ್ನ ಮೇಲೆ ಬೇಸರ, ಕೋಪ ಬಂತು. ನಾವು ಜಗಳವಾಡಿದೆವು. ಆಗ ನಾನು ಮನೆ ಬಿಟ್ಟು ಓಡಿಹೋದೆ. ಸ್ವಲ್ಪ ಸಮಯದವರೆಗೆ ನಾನು ನನ್ನ ಬಾಯ್‌ಫ್ರೆಂಡ್‌ ಟೋನಿ ಜೊತೆ ಇದ್ದೆ. ಅವನು ರಸ್ತಾಫಾರೀ ಎಂಬ ಧಾರ್ಮಿಕ ಗುಂಪಿನವನಾಗಿದ್ದ. ಅವನು ಚಿಕ್ಕಪುಟ್ಟ ಅಪರಾಧಗಳನ್ನು ಮಾಡುತ್ತಾ ಡ್ರಗ್ಸ್‌ ಮಾರುತ್ತಿದ್ದ. ತುಂಬ ಹಿಂಸಾತ್ಮಕ ವ್ಯಕ್ತಿ ಎಂಬ ಖ್ಯಾತಿ ಅವನಿಗಿತ್ತು. ಸ್ವಲ್ಪದರಲ್ಲೇ ನಾನು ಗರ್ಭಿಣಿಯಾದೆ. ನಮ್ಮ ಮೊದಲ ಮಗು ಹುಟ್ಟುವಾಗ ನನಗೆ ಬರೀ 16 ವರ್ಷ.

ನನ್ನ ಬದುಕನ್ನೇ ಬದಲಾಯಿಸಿತು ಬೈಬಲ್‌

ಸ್ಥಳೀಯ ಅಧಿಕಾರಿಗಳು ನನಗೆ ಅವಿವಾಹಿತ ತಾಯಂದಿರು ಮತ್ತವರ ಮಕ್ಕಳಿಗಾಗಿ ಇರುವ ಹಾಸ್ಟೆಲ್‌ನಲ್ಲಿ ಒಂದು ರೂಮನ್ನು ಕೊಟ್ಟಿದ್ದರು. ಅಲ್ಲೇ ನನಗೆ ಮೊದಲ ಬಾರಿ ಯೆಹೋವನ ಸಾಕ್ಷಿಗಳು ಸಿಕ್ಕಿದ್ದು. ಅಲ್ಲಿರುವ ಕೆಲವು ತಾಯಂದಿರನ್ನು ಇಬ್ಬರು ಸಾಕ್ಷಿ ಮಹಿಳೆಯರು ಭೇಟಿಯಾಗಿ ಬೈಬಲ್‌ ಕಲಿಸುತ್ತಿದ್ದರು. ಒಮ್ಮೆ ನಾನೂ ಅವರ ಚರ್ಚೆಯಲ್ಲಿ ಭಾಗವಹಿಸಿದೆ. ಸಾಕ್ಷಿಗಳು ಹೇಳುವುದು ತಪ್ಪು ಎಂದು ರುಜುಪಡಿಸುವುದೇ ನನ್ನ ಗುರಿಯಾಗಿತ್ತು. ಆದರೆ ಅವರು ನನ್ನೆಲ್ಲಾ ಪ್ರಶ್ನೆಗಳಿಗೆ ಬೈಬಲ್‌ ಉಪಯೋಗಿಸುತ್ತಾ ಸಮಾಧಾನದಿಂದ ಸ್ಪಷ್ಟ ಉತ್ತರ ಕೊಟ್ಟರು. ಅವರು ದಯೆಯಿಂದ ನಡೆದುಕೊಳ್ಳುತ್ತಿದ್ದರು. ಅದು ನನಗೆ ತುಂಬ ಹಿಡಿಸಿತು. ಆದ್ದರಿಂದ ಅವರ ಜೊತೆ ಬೈಬಲ್‌ ಬಗ್ಗೆ ಕಲಿಯಲು ಒಪ್ಪಿಕೊಂಡೆ.

ಸ್ವಲ್ಪದರಲ್ಲೇ ನಾನು ಬೈಬಲಿನಿಂದ ಒಂದು ವಿಷಯವನ್ನು ಕಲಿತುಕೊಂಡೆ. ಅದರಿಂದ ನನ್ನ ಜೀವನವೇ ಬದಲಾಯಿತು. ನಾನು ಚಿಕ್ಕಂದಿನಿಂದಲೂ ಸಾವಿನ ಬಗ್ಗೆ ಭಯಪಡುತ್ತಿದ್ದೆ. ಆದರೆ ಈಗ ನಾನು ಯೇಸುವಿನ ಪುನರುತ್ಥಾನದ ಬೋಧನೆ ಬಗ್ಗೆ ಕಲಿತೆ! (ಯೋಹಾನ 5:28, 29) ದೇವರು ನನ್ನ ಬಗ್ಗೆ ತುಂಬ ಕಾಳಜಿ ವಹಿಸುತ್ತಾನೆ ಅಂತ ಸಹ ತಿಳಿದುಕೊಂಡೆ. (1 ಪೇತ್ರ 5:7) ಯೆರೆಮೀಯ 29:11⁠ರಲ್ಲಿರುವ (ಪವಿತ್ರ ಗ್ರಂಥ ಭಾಷಾಂತರ) ಮಾತುಗಳು ನನ್ನ ಮೇಲೆ ತುಂಬ ಪ್ರಭಾವ ಬೀರಿದವು. ಅಲ್ಲಿ ಹೇಳುತ್ತೆ: “ನಾನು ನಿಮ್ಮನ್ನು ಕುರಿತು ಮಾಡುವ ಯೋಜನೆಗಳನ್ನು ಬಲ್ಲೆನು. ಅವು ಕೇಡಿಗಲ್ಲ, ಹಿತಕ್ಕಾಗಿರುವ ಯೋಜನೆಗಳು. ನಿಮಗೆ ಭವಿಷ್ಯವನ್ನೂ ನಿರೀಕ್ಷೆಯನ್ನೂ ಕೊಡುವುದಕ್ಕಿವೆ ಎಂದು ಯೆಹೋವನು ಹೇಳುತ್ತಾನೆ.” ಸುಂದರ ತೋಟದಂತಿರುವ ಭೂಮಿಯಲ್ಲಿ ನಾನು ಸಾವೇ ಇಲ್ಲದೆ ಬದುಕಬಹುದು ಅನ್ನೋ ನಂಬಿಕೆ ನನಗೆ ಬಂತು.—ಕೀರ್ತನೆ 37:29.

ಯೆಹೋವನ ಸಾಕ್ಷಿಗಳು ನನಗೆ ನಿಜವಾದ ಪ್ರೀತಿ ತೋರಿಸಿದ್ರು. ಮೊದಲ ಬಾರಿ ನಾನು ಅವರ ಕೂಟಕ್ಕೆ ಹೋದಾಗ ಅವರು ಪ್ರೀತಿಯಿಂದ ನನ್ನನ್ನ ಸ್ವಾಗತಿಸಿದ್ರು. ಎಲ್ಲರೂ ಸ್ನೇಹಿತರ ಹಾಗೆ ಇದ್ದರು. (ಯೋಹಾನ 13:34, 35) ಚರ್ಚಲ್ಲಿ ನನ್ನನ್ನ ನೋಡ್ತಿದ್ದ ರೀತಿಗೂ ಇಲ್ಲಿ ನೋಡೋ ರೀತಿಗೂ ತುಂಬ ವ್ಯತ್ಯಾಸ ಇತ್ತು. ನನ್ನ ಜೀವನದ ಬಗ್ಗೆ ಗೊತ್ತಿದ್ದರೂ ಸಾಕ್ಷಿಗಳು ನನ್ನನ್ನ ಪ್ರೀತಿಯಿಂದ ಸ್ವಾಗತಿಸಿದರು. ನನಗೋಸ್ಕರ ಅವರ ಸಮಯ ಕೊಟ್ಟರು, ಕಾಳಜಿ, ಪ್ರೀತಿ ತೋರಿಸಿದ್ರು. ತುಂಬ ಸಹಾಯ ಮಾಡಿದ್ರು. ನನ್ನನ್ನ ತುಂಬ ಪ್ರೀತಿಸುವ ದೊಡ್ಡ ಕುಟುಂಬದಲ್ಲಿ ನಾನಿದ್ದೀನಿ ಅಂತ ನನಗನಿಸ್ತು.

ಬೈಬಲ್‌ ಕಲಿಯುತ್ತಾ ಹೋದ ಹಾಗೆ, ದೇವರ ಉನ್ನತ ನೈತಿಕ ಮಟ್ಟಗಳಿಗೆ ಸರಿಯಾಗಿ ನಾನಿರಬೇಕು, ಅದಕ್ಕೋಸ್ಕರ ಜೀವನದಲ್ಲಿ ತುಂಬ ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಅಂತ ಗೊತ್ತಾಯಿತು. ನಾನು ಕೇಳುತ್ತಿದ್ದ ಕೆಲವು ಸಂಗೀತ ನನ್ನ ಗಾಂಜಾ ತಗೊಳ್ಳೋ ಆಸೆಯನ್ನ ಬಡಿದೆಬ್ಬಿಸುತ್ತೆ ಅಂತ ಗೊತ್ತಾದಾಗ ಅಂಥ ಸಂಗೀತ ಕೇಳೋದನ್ನ ಬಿಟ್ಟುಬಿಟ್ಟೆ. ಪಾರ್ಟಿಗಳಿಗೆ, ರಾತ್ರಿ ಕ್ಲಬ್‌ಗಳಿಗೆ ಹೋದರೆ ಕುಡಿಯಲು ಮನಸ್ಸಾಗುತ್ತೆ ಅಂತ ಗೊತ್ತಾದಾಗ ಅಲ್ಲಿ ಹೋಗೋದನ್ನೇ ಬಿಟ್ಟುಬಿಟ್ಟೆ. ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಲು ಸಹಾಯ ಮಾಡುವ ಹೊಸ ಸ್ನೇಹಿತರನ್ನು ಮಾಡಿಕೊಂಡೆ.—ಜ್ಞಾನೋಕ್ತಿ 13:20.

ಇಷ್ಟೊತ್ತಿಗಾಗಲೇ, ಟೋನಿ ಸಹ ಯೆಹೋವನ ಸಾಕ್ಷಿಗಳ ಜೊತೆ ಬೈಬಲ್‌ ಕಲಿಯಲು ಆರಂಭಿಸಿದ್ದರು. ಸಾಕ್ಷಿಗಳು ಅವರ ಪ್ರಶ್ನೆಗಳಿಗೆ ಬೈಬಲಿನಿಂದ ಉತ್ತರ ಕೊಟ್ಟಾಗ ಇದೇ ಸತ್ಯ ಎಂದು ಅವರಿಗೆ ಗೊತ್ತಾಯಿತು. ಅವರೂ ಜೀವನದಲ್ಲಿ ತುಂಬ ಬದಲಾವಣೆ ಮಾಡಿಕೊಂಡರು. ದುಷ್ಕೃತ್ಯಗಳನ್ನು, ಹಿಂಸಾತ್ಮಕ ಜನರ ಸ್ನೇಹವನ್ನು, ಗಾಂಜಾ ತಗೊಳ್ಳೋದನ್ನು ಬಿಟ್ಟುಬಿಟ್ಟರು. ಯೆಹೋವನನ್ನು ಎಲ್ಲಾ ರೀತಿಯಲ್ಲೂ ಮೆಚ್ಚಿಸಲಿಕ್ಕೋಸ್ಕರ ನಮ್ಮ ಅನೈತಿಕ ಜೀವನವನ್ನು ತಿದ್ದಿಕೊಂಡು ನಮ್ಮ ಮಗನನ್ನು ಉತ್ತಮ ವಾತಾರವಣದಲ್ಲಿ ಬೆಳೆಸಬೇಕೆಂದು ನಿರ್ಧರಿಸಿದೆವು. ಆದ್ದರಿಂದ 1982⁠ರಲ್ಲಿ ಮದುವೆಯಾದೆವು.

“ಈಗ ನಾನು ಸಾವಿನ ಬಗ್ಗೆಯಾಗಲಿ, ‘ನಾಳೆ ಏನಾಗುತ್ತೋ’ ಅನ್ನೋದರ ಬಗ್ಗೆಯಾಗಲಿ ಯೋಚಿಸುತ್ತಾ ರಾತ್ರಿ ನಿದ್ದೆಗೆಡಲ್ಲ”

ಹಿಂದೆ ನನ್ನಂಥದ್ದೇ ಜೀವನ ನಡೆಸಿ, ನಂತರ ಬದಲಾವಣೆ ಮಾಡಿಕೊಂಡವರ ಅನುಭವಗಳನ್ನು ಕಾವಲಿನಬುರುಜು ಮತ್ತು ಎಚ್ಚರ!a ಪತ್ರಿಕೆಯಲ್ಲಿ ಹುಡುಕುತ್ತಿದ್ದದ್ದು ನನಗೆ ಈಗಲೂ ನೆನಪಿದೆ. ಅವರ ಮಾದರಿಯಿಂದ ಬದಲಾವಣೆ ಮಾಡಿಕೊಳ್ಳಲು ನನಗೆ ತುಂಬ ಪ್ರೋತ್ಸಾಹ ಸಿಕ್ಕಿತು. ಪಟ್ಟುಬಿಡದೆ ಪ್ರಯತ್ನಿಸಲು ಅವರಿಂದ ನನಗೆ ಬಹಳಷ್ಟು ಬಲ ಸಿಕ್ಕಿತು. ನನ್ನ ಈ ಪ್ರಯತ್ನದಲ್ಲಿ ನಾನು ಯಾವತ್ತೂ ಸೋಲಬಾರದು ಮತ್ತು ಯೆಹೋವನು ನನಗೆ ಈ ವಿಷಯದಲ್ಲಿ ಸಹಾಯ ಮಾಡುವುದನ್ನು ಯಾವತ್ತೂ ನಿಲ್ಲಿಸಬಾರದು ಎಂದು ಪ್ರಾರ್ಥಿಸುತ್ತಿದ್ದೆ. 1982⁠ರಲ್ಲಿ ದೀಕ್ಷಾಸ್ನಾನ ಪಡೆದು ಟೋನಿ ಮತ್ತು ನಾನು ಯೆಹೋವನ ಸಾಕ್ಷಿಗಳಾದೆವು.

ಈವಾನ್‌ಕ್ವಾರೀ

ಸಿಕ್ಕಿದ ಪ್ರಯೋಜನಗಳು

ಯೆಹೋವನೊಟ್ಟಿಗೆ ಸ್ನೇಹ ಬೆಳೆಸಿದ್ದರಿಂದ ನನ್ನ ಪ್ರಾಣ ಉಳಿಯಿತು. ನನಗೆ ಮತ್ತು ಟೋನಿಗೆ ಕಷ್ಟದ ಸಮಯದಲ್ಲಿ ಯೆಹೋವನು ಕೈಹಿಡಿದು ನಡೆಸಿದ ಅನುಭವವಾಗಿದೆ. ಕಷ್ಟಗಳ ಸಮಯದಲ್ಲಿ ಯೆಹೋವನನ್ನು ಆತುಕೊಳ್ಳಲು ನಾವು ಕಲಿತುಕೊಂಡಿದ್ದೇವೆ. ಯೆಹೋವನು ನಮಗೆ ಯಾವಾಗಲೂ ಸಹಾಯಮಾಡಿ ನಮ್ಮ ಕುಟುಂಬವನ್ನು ನೋಡಿಕೊಂಡಿದ್ದಾನೆ.—ಕೀರ್ತನೆ 55:22.

ಯೆಹೋವನನ್ನು ಚೆನ್ನಾಗಿ ತಿಳಿದುಕೊಳ್ಳಲು ನನ್ನ ಮಗ ಮತ್ತು ಮಗಳಿಗೆ ಕಲಿಸುವಾಗ ನನಗೆ ಸಂತೋಷ ಸಿಕ್ಕಿದೆ. ಈಗ ಅವರ ಮಕ್ಕಳು ಸಹ ದೇವರ ಬಗ್ಗೆ ತಿಳಿದುಕೊಳ್ಳುವುದನ್ನು ನೋಡುವಾಗ ನನಗೆ ಇನ್ನೂ ಹೆಚ್ಚು ಸಂತೋಷವಾಗುತ್ತದೆ.

ಈಗ ನಾನು ಸಾವಿನ ಬಗ್ಗೆಯಾಗಲಿ, ‘ನಾಳೆ ಏನಾಗುತ್ತೋ’ ಅನ್ನೋದರ ಬಗ್ಗೆಯಾಗಲಿ ಯೋಚಿಸುತ್ತಾ ರಾತ್ರಿ ನಿದ್ದೆಗೆಡಲ್ಲ. ನಾನೂ, ಟೋನೀ ಪ್ರತಿ ವಾರ ಯೆಹೋವನ ಸಾಕ್ಷಿಗಳ ಬೇರೆ ಬೇರೆ ಸಭೆಗಳಿಗೆ ಹೋಗಿ ಅವರನ್ನು ಉತ್ತೇಜಿಸುತ್ತೇವೆ. ಯೇಸುವಿನಲ್ಲಿ ನಂಬಿಕೆ ಇಡುವುದಾದರೆ ಶಾಶ್ವತ ಜೀವನ ಪಡೆಯಲು ಸಾಧ್ಯ ಎಂಬ ಸಂದೇಶವನ್ನು ನಾವು ಅವರೊಂದಿಗೆ ಸೇರಿ ಸಾರುತ್ತಿದ್ದೇವೆ. ▪

a ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ