ಸರಳ ಜೀವನದಿಂದ ಸಿಗುತ್ತಿರುವ ಸಂತೋಷ
ಡ್ಯಾನಿಯೆಲ್ ಮತ್ತು ಮಿರ್ಯಮ್ ಸೆಪ್ಟೆಂಬರ್ 2000ದಲ್ಲಿ ಮದುವೆಯಾದರು. ಅವರು ಸ್ಪೇನ್ನ ಬಾರ್ಸಲೋನದಲ್ಲಿ ಸುಖಸೌಕರ್ಯದ ಜೀವನ ನಡೆಸುತ್ತಿದ್ದರು. ಡ್ಯಾನಿಯೆಲ್ ಹೇಳುವುದು: “ನಮಗೆ ಕೈತುಂಬ ಸಂಬಳ ಬರೋ ಕೆಲಸ ಇತ್ತು. ಒಳ್ಳೊಳ್ಳೆ ಹೋಟೆಲುಗಳಲ್ಲಿ ಊಟ ಮಾಡುತ್ತಿದ್ವಿ, ಬೇರೆ ದೇಶಗಳಿಗೆ ಹೋಗಿ ಸುತ್ತಾಡಿಕೊಂಡು ಬರುತ್ತಿದ್ವಿ, ಉತ್ತಮ ಗುಣಮಟ್ಟದ ಬಟ್ಟೆ ಹಾಕುತ್ತಿದ್ವಿ. ತಪ್ಪದೇ ಕ್ಷೇತ್ರ ಸೇವೆಗೂ ಹೋಗುತ್ತಿದ್ವಿ.” ಆದರೆ ಅವರ ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಆಯಿತು.
2006ರಲ್ಲಿ ನಡೆದ ಅಧಿವೇಶನದ ಒಂದು ಭಾಷಣದಲ್ಲಿ ಕೇಳಲಾದ ಈ ಪ್ರಶ್ನೆ ಡ್ಯಾನಿಯೆಲ್ರನ್ನು ಯೋಚಿಸುವಂತೆ ಮಾಡಿತು: “‘ಸಂಹಾರಕ್ಕೆ ಗುರಿಯಾದವರು’ ನಿತ್ಯಜೀವದ ಮಾರ್ಗಕ್ಕೆ ಬರುವಂತೆ ಸಹಾಯಮಾಡಲು ನಮ್ಮಿಂದಾದುದೆಲ್ಲವನ್ನು ಮಾಡುತ್ತಿದ್ದೇವೊ?” (ಜ್ಞಾನೋ. 24:11) ಬೈಬಲ್ ಸಂದೇಶ ಜನರ ಜೀವ ರಕ್ಷಿಸುವುದರಿಂದ ಅದನ್ನು ಸಾರುವ ಹೊಣೆ ನಮ್ಮ ಮೇಲಿದೆಯೆಂದು ಆ ಭಾಷಣದಲ್ಲಿ ವಿವರಿಸಲಾಯಿತು. (ಅ. ಕಾ. 20:26, 27) “ಯೆಹೋವನು ನನ್ನ ಹತ್ತಿರ ಮಾತಾಡುತ್ತಿದ್ದ ಹಾಗೆ ಅನಿಸಿತು” ಎಂದು ಡ್ಯಾನಿಯೆಲ್ ನೆನಪಿಸಿಕೊಳ್ಳುತ್ತಾರೆ. ಹೆಚ್ಚು ಸೇವೆ ಮಾಡಿದರೆ ಹೆಚ್ಚು ಸಂತೋಷವಾಗಿರಬಹುದು ಎಂದು ಆ ಭಾಷಣದಲ್ಲಿ ಹೇಳಲಾಯಿತು. ಮಿರ್ಯಮ್ ಈಗಾಗಲೇ ಪಯನೀಯರ್ ಸೇವೆ ಆರಂಭಿಸಿ ಬಹಳ ಸಂತೋಷವಾಗಿ ಇರುವುದನ್ನು ನೋಡಿದ್ದ ಡ್ಯಾನಿಯೆಲ್ಗೆ ಆ ಮಾತು ಸತ್ಯ ಎಂದು ಗೊತ್ತಿತ್ತು.
ಆ ಭಾಷಣ ಕೇಳಿದ ಮೇಲೆ ಡ್ಯಾನಿಯೆಲ್ ತಮ್ಮ ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಮಾಡಲು ನಿರ್ಧರಿಸಿದರು. ಕೆಲಸ ಕಡಿಮೆ ಮಾಡಿ ಪಯನೀಯರ್ ಸೇವೆ ಆರಂಭಿಸಿದರು. ಪ್ರಚಾರಕರ ಅಗತ್ಯವಿರುವ ಸ್ಥಳಕ್ಕೆ ಹೋಗಿ ಸೇವೆ ಮಾಡಿದರೆ ಇಬ್ಬರೂ ಇನ್ನೂ ಸಂತೋಷವಾಗಿರಬಹುದು ಎಂದು ಯೋಚಿಸಿದರು.
ಸವಾಲುಗಳ ನಂತರ ಸಿಕ್ಕಿದ ಸಂತೋಷ
ಮೇ 2007ರಲ್ಲಿ ಡ್ಯಾನಿಯೆಲ್ ಮತ್ತು ಮಿರ್ಯಮ್ ಕೆಲಸ ಬಿಟ್ಟರು. ಪನಾಮ ದೇಶಕ್ಕೆ ಹೋದರು. ಈ ಮುಂಚೆ ಅಲ್ಲಿಗೆ ಒಮ್ಮೆ ಹೋಗಿ ಬಂದಿದ್ದರು. ಕೆರೀಬಿಯನ್ ಸಮುದ್ರದ ಬೊಕಾಸ್ ಡೆಲ್ ಟೊರೊ ದ್ವೀಪಸಮೂಹ ಅವರ ಕ್ಷೇತ್ರವಾಗಿತ್ತು. ಈ ದ್ವೀಪಗಳಲ್ಲಿ ಹೆಚ್ಚಾಗಿ ಮೂಲನಿವಾಸಿಗಳಾದ ಎನ್ಗಬೆ ಜನರಿದ್ದಾರೆ. ಡ್ಯಾನಿಯೆಲ್ ಮತ್ತು ಮಿರ್ಯಮ್ ಕೂಡಿಸಿಟ್ಟಿದ್ದ ಹಣ ಎಂಟು ತಿಂಗಳು ಅಲ್ಲೇ ಇದ್ದು ಸೇವೆಮಾಡಲು ಸಾಕಾಗಬಹುದೆಂದು ಲೆಕ್ಕಹಾಕಿದರು.
ಅವರು ಒಂದು ದ್ವೀಪದಿಂದ ಇನ್ನೊಂದು ದ್ವೀಪಕ್ಕೆ ದೋಣಿಯಲ್ಲಿ ಹೋಗುತ್ತಿದ್ದರು. ಆಮೇಲೆ ಸೈಕಲಲ್ಲಿ ಹೋಗುತ್ತಿದ್ದರು. ಅವರು ಮೊದಲ ಬಾರಿ ಸುಡುಬಿಸಿಲಲ್ಲಿ ಕಡಿದಾದ ಬೆಟ್ಟದ ದಾರಿಯಲ್ಲಿ 30 ಕಿ.ಮೀ. ಸೈಕಲ್ ತುಳಿದದ್ದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಡ್ಯಾನಿಯೆಲ್ ಎಷ್ಟು ದಣಿದಿದ್ದರೆಂದರೆ ಇನ್ನೇನು ಪ್ರಜ್ಞೆ ತಪ್ಪಿಬೀಳಲಿದ್ದರು. ಆದರೆ ಅವತ್ತು ಅವರು ಭೇಟಿಯಾದ ಎನ್ಗಬೆ ಜನರು ತುಂಬ ಅತಿಥಿಸತ್ಕಾರ ಮಾಡಿದರು. ಅದರಲ್ಲೂ ತಮ್ಮ ಭಾಷೆಯ ಕೆಲವು ಪದಗಳನ್ನು ಕಲಿತಾಗಂತೂ ಆ ಜನರಿಗೆ ತುಂಬ ಸಂತೋಷವಾಯಿತು. ಸ್ವಲ್ಪ ಸಮಯದಲ್ಲೇ ಈ ದಂಪತಿಗೆ 23 ಬೈಬಲ್ ಅಧ್ಯಯನಗಳು ಸಿಕ್ಕಿದವು.
ಅವರು ಕೂಡಿಸಿಟ್ಟಿದ್ದ ಹಣ ಖಾಲಿಯಾದ ಮೇಲೆ ಏನಾಯಿತು? ಡ್ಯಾನಿಯೆಲ್ ಹೇಳುವುದು: “ಸ್ಪೇನ್ಗೆ ವಾಪಸ್ಸು ಹೋಗಬೇಕಲ್ಲಾ ಅಂತ ಯೋಚಿಸಿದರೆನೇ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತಿತ್ತು. ನಮ್ಮ ಬೈಬಲ್ ವಿದ್ಯಾರ್ಥಿಗಳನ್ನೆಲ್ಲ ಬಿಟ್ಟು ಹೋಗಬೇಕಲ್ಲಾ ಅಂತ ದುಃಖವಾಗುತ್ತಿತ್ತು.” ಆದರೆ ಒಂದು ತಿಂಗಳ ನಂತರ ಒಂದು ಸಂತೋಷದ ಸುದ್ದಿ ಸಿಕ್ಕಿತು. “ನಮಗೆ ವಿಶೇಷ ಪಯನೀಯರ್ ನೇಮಕ ಸಿಕ್ಕಿತು. ಇಲ್ಲೇ ಇದ್ದು ಸೇವೆ ಮುಂದುವರಿಸಬಹುದಲ್ಲ ಅಂತ ತುಂಬತುಂಬ ಸಂತೋಷವಾಯಿತು!” ಎಂದು ಮಿರ್ಯಮ್ ಹೇಳುತ್ತಾರೆ.
ಎಲ್ಲಕ್ಕಿಂತ ಹೆಚ್ಚು ಸಂತೋಷ ತರುತ್ತಿರುವ ವಿಷಯ
ಸಂಘಟನೆಯಲ್ಲಾದ ಕೆಲವು ಬದಲಾವಣೆಯಿಂದಾಗಿ ಡ್ಯಾನಿಯೆಲ್ ಮತ್ತು ಮಿರ್ಯಮ್ 2015ರಲ್ಲಿ ವಿಶೇಷ ಪಯನೀಯರ್ ಸೇವೆ ನಿಲ್ಲಿಸಬೇಕಾಯಿತು. ಆಮೇಲೆ ಏನು ಮಾಡಿದರು? “ನಿನ್ನ ಭೂಯಾತ್ರೆಯ ಚಿಂತೆಯನ್ನು ಯೆಹೋವನಿಗೆ ವಹಿಸಿಬಿಟ್ಟು ಭರವಸದಿಂದಿರು; ಆತನೇ ಅದನ್ನು ಸಾಗಿಸುವನು” ಎಂದು ಕೀರ್ತನೆ 37:5ರಲ್ಲಿ ಹೇಳಿರುವ ಮಾತಿನ ಮೇಲೆ ನಂಬಿಕೆ ಇಟ್ಟರು. ಕೆಲಸ ಹುಡುಕಿಕೊಂಡರು. ಈಗ ಪನಾಮದ ಬೆರಗ್ವಾಸ್ ಎಂಬಲ್ಲಿನ ಒಂದು ಸಭೆಯಲ್ಲಿ ರೆಗ್ಯುಲರ್ ಪಯನೀಯರ್ ಸೇವೆ ಮಾಡುತ್ತಿದ್ದಾರೆ.
ಡ್ಯಾನಿಯೆಲ್ ಹೇಳುವುದು: “ನಾವು ಸ್ಪೇನ್ನಲ್ಲಿದ್ದಾಗ, ನಮ್ಮಿಂದ ಸರಳ ಜೀವನ ಸಾಧ್ಯನಾ ಅಂತ ಸಂಶಯ ಇತ್ತು. ಆದರೆ ಇವತ್ತು ಅದನ್ನೇ ಮಾಡುತ್ತಿದ್ದೇವೆ. ಜೀವನದಲ್ಲಿ ಏನು ನಿಜವಾಗಿ ಮುಖ್ಯವೋ ಅದೆಲ್ಲಾ ನಮ್ಮ ಹತ್ತಿರ ಇದೆ.” ಅವರಿಗೆ ಎಲ್ಲಕ್ಕಿಂತ ಹೆಚ್ಚು ಸಂತೋಷ ಕೊಡುತ್ತಿರುವ ವಿಷಯ ಯಾವುದು? “ಯೆಹೋವನ ಬಗ್ಗೆ ಕಲಿಯಲು ದೀನ ಜನರಿಗೆ ಸಹಾಯ ಮಾಡುವುದರಿಂದ ಸಿಗುವ ಸಂತೋಷ ಇನ್ಯಾವುದರಲ್ಲೂ ಸಿಗಲ್ಲ” ಎಂದು ಅವರು ಹೇಳುತ್ತಾರೆ.