ನಮ್ಮ ಸಂಗ್ರಹಾಲಯ
“ಹೃದಯದಲ್ಲಿ ಹಿಂದೆಂದಿಗಿಂತ ಹೆಚ್ಚು ಹುರುಪು ಮತ್ತು ಪ್ರೀತಿ ತುಂಬಿತು”
ಸೆಪ್ಟೆಂಬರ್ 1922, ಶುಕ್ರವಾರ ಬೆಳಗ್ಗೆ. ಸೆಕೆ ಜಾಸ್ತಿಯಾಗುತ್ತಾ ಇತ್ತು. ಸಭಾಂಗಣದೊಳಗೆ 8,000 ಮಂದಿ ಕೂಡಿಬಂದರು. ಕಾರ್ಯಕ್ರಮವನ್ನು ಆರಂಭಿಸಿದ ಅಧ್ಯಕ್ಷರು ಈ ಮಹತ್ವಪೂರ್ಣ ಕಾರ್ಯಕ್ರಮ ನಡೆಯುತ್ತಿರುವಾಗ ಯಾರಿಗಾದರೂ ಸಭಾಂಗಣದಿಂದ ಹೊರಗೆ ಹೋಗಬೇಕಿದ್ದರೆ ಹೋಗಬಹುದು, ಆದರೆ ಪುನಃ ಒಳಗೆ ಬರಲು ಅನುಮತಿಯಿಲ್ಲ ಎಂದು ಪ್ರಕಟಿಸಿದರು.
ಆರಂಭದಲ್ಲಿ ಸ್ತೋತ್ರಗಾನ ಭಾಗ (ಪ್ರೇಸ್ ಸರ್ವಿಸ್) ಇತ್ತು. ಎಲ್ಲರೂ ಗೀತೆಗಳನ್ನು ಹಾಡಿದರು. ನಂತರ ಜೋಸೆಫ್ ಎಫ್. ರದರ್ಫರ್ಡ್ ಭಾಷಣಗಾರನ ಸ್ಟ್ಯಾಂಡ್ ಹತ್ತಿರ ಬಂದು ನಿಂತರು. ಅವರು ಏನು ಹೇಳಲಿಕ್ಕಿದ್ದಾರೆ ಅಂತ ಸಭಿಕರು ಕಾತರದಿಂದ ಕೂತಿದ್ದರು. ಕೆಲವರು ಮಾತ್ರ ಸೆಕೆಯ ಕಾರಣ ಆಚೀಚೆ ಓಡಾಡುತ್ತಾ ಇದ್ದರು. ಕೂತು ಕಿವಿಗೊಡುವಂತೆ ಭಾಷಣಗಾರ ಕೇಳಿಕೊಂಡರು. ಭಾಷಣ ಆರಂಭವಾದಾಗ, ಮೇಲೆ ಎತ್ತರದಲ್ಲಿ ನೀಟಾಗಿ ಸುತ್ತಿ ಕಟ್ಟಿ ತೂಗುಹಾಕಲಾಗಿದ್ದ ಬಟ್ಟೆಯನ್ನು ಯಾರಾದರೂ ಗಮನಿಸಿರಬಹುದಾ?
ಸಹೋದರ ರದರ್ಫರ್ಡ್ “ಪರಲೋಕ ರಾಜ್ಯವು ಸಮೀಪವಿದೆ” ಎಂಬ ಭಾಷಣ ಕೊಟ್ಟರು. ಹಿಂದಿನಕಾಲದ ಪ್ರವಾದಿಗಳು ಬರಲಿರುವ ರಾಜ್ಯದ ಬಗ್ಗೆ ಹೇಗೆ ಭಯವಿಲ್ಲದೆ ಘೋಷಿಸಿದರೆಂದು ಸುಮಾರು ಒಂದೂವರೆ ತಾಸು ಮಾತಾಡಿದರು. ಅವರ ಗಡುಸಾದ ಧ್ವನಿ ಇಡೀ ಸಭಾಂಗಣದಲ್ಲಿ ಪ್ರತಿಧ್ವನಿಸುತ್ತಾ ಇತ್ತು. ಭಾಷಣದ ಕೊನೆಗೆ ಬರುತ್ತಿದ್ದಂತೆ, “ಮಹಿಮಾಭರಿತ ರಾಜನು ತನ್ನ ಆಳ್ವಿಕೆಯನ್ನು ಆರಂಭಿಸಿದ್ದಾನೆಂದು ನಂಬುತ್ತೀರೊ?” ಎಂದು ಕೇಳಿದರು. ಆಗ ಸಭಿಕರೆಲ್ಲರೂ ಗಟ್ಟಿಯಾಗಿ “ಹೌದು!” ಎಂದರು.
“ಹಾಗಿರುವಲ್ಲಿ, ಅತ್ಯುನ್ನತ ದೇವರ ಮಕ್ಕಳಾಗಿರುವ ನೀವು, ಕ್ಷೇತ್ರಕ್ಕೆ ತೆರಳಿರಿ!” ಎಂದು ಸಹೋದರ ರದರ್ಫರ್ಡ್ ಗಟ್ಟಿಯಾದ ಧ್ವನಿಯಲ್ಲಿ ಹೇಳಿದರು. “ನೋಡಿ, ರಾಜನು ಆಳುತ್ತಾನೆ! ಅವನ ಬಗ್ಗೆ ಪ್ರಚುರಪಡಿಸುವ ಪ್ರತಿನಿಧಿಗಳು ನೀವು. ಆದಕಾರಣ ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಿಸಿರಿ, ಪ್ರಕಟಿಸಿರಿ, ಪ್ರಕಟಿಸಿರಿ” ಎಂದರು.
ಆ ಕ್ಷಣದಲ್ಲೇ ಮೇಲೆ ಸುರುಳಿ ಸುತ್ತಿಕೊಂಡಿದ್ದ ಬಟ್ಟೆ ಮೆಲ್ಲನೆ ಬಿಚ್ಚಿಕೊಂಡು, “ರಾಜನನ್ನು ಮತ್ತು ರಾಜ್ಯವನ್ನು ಪ್ರಕಟಿಸಿರಿ” ಎಂದು ಅದರ ಮೇಲಿದ್ದ ಘೋಷಣಾವಾಕ್ಯ ಎಲ್ಲರ ಕಣ್ಣಿಗೆ ಬಿತ್ತು.
“ಸಭಿಕರಲ್ಲಿ ಒಂದು ರೀತಿಯ ವಿದ್ಯುತ್ ಸಂಚಾರವಾದಂತಿತ್ತು” ಎಂದು ನೆನಪುಮಾಡಿಕೊಳ್ಳುತ್ತಾರೆ ರೇ ಬೊಪ್ ಎಂಬವರು. “ಸಭಿಕರು ಎಷ್ಟು ಜೋರಾಗಿ ಚಪ್ಪಾಳೆ ತಟ್ಟಿದರೆಂದರೆ ಚಾವಣಿಯಲ್ಲಿದ್ದ ಮರದ ದಿಮ್ಮಿಗಳು ಕಂಪಿಸಿದವು!” ಅಂತ ಆ್ಯನ ಗಾಡ್ನರ್ ವರ್ಣಿಸುತ್ತಾರೆ. “ಸಭಿಕರೆಲ್ಲರೂ ಒಂದೇ ಸಮಯಕ್ಕೆ ಒಟ್ಟಿಗೆ ಎದ್ದು ನಿಂತರು” ಎನ್ನುತ್ತಾರೆ ಫ್ರೆಡ್ ಟ್ವಾರೊಷ್. “ಯಾವುದೊ ಬಲಿಷ್ಠ ಶಕ್ತಿ ನಮ್ಮನ್ನು ಕುರ್ಚಿಗಳಿಂದ ಎತ್ತಿ ನಿಲ್ಲಿಸಿದಂತಿತ್ತು. ನಮ್ಮ ಕಣ್ಣುಗಳಲ್ಲಿ ನೀರು ತುಂಬಿತ್ತು” ಎಂದು ಹೇಳಿದರು ಇವಾಂಜೆಲೊಸ್ ಸ್ಕೂಫಸ್.
ಆ ಅಧಿವೇಶನಕ್ಕೆ ಬಂದಿದ್ದವರಲ್ಲಿ ಅನೇಕರು ಈಗಾಗಲೇ ರಾಜ್ಯದ ಸುವಾರ್ತೆಯನ್ನು ಹಬ್ಬಿಸುವ ಕೆಲಸ ಮಾಡುತ್ತಿದ್ದರು. ಈಗ ಅವರಿಗೆ ಹೊಸ ಸ್ಫೂರ್ತಿ ಸಿಕ್ಕಿತ್ತು. ಬೈಬಲ್ ವಿದ್ಯಾರ್ಥಿಗಳು ಅಲ್ಲಿಂದ ಹೊರಟಾಗ ಅವರ “ಹೃದಯದಲ್ಲಿ ಹಿಂದೆಂದಿಗಿಂತ ಹೆಚ್ಚು ಹುರುಪು ಮತ್ತು ಪ್ರೀತಿ ತುಂಬಿತು” ಎನ್ನುತ್ತಾರೆ ಎತಲ್ ಬೆನಕೊಫ್. ಆ ಸಮಯದಲ್ಲಿ 18 ವರ್ಷದವರಾಗಿದ್ದ ಓಡೆಸ ಟಕ್ ಅಧಿವೇಶನದಿಂದ ಹೊರಟಾಗ “ಯಾವನು ಹೋಗುವನು?” ಎಂಬ ಕರೆಗೆ ಓಗೊಡಬೇಕೆಂಬ ದೃಢಮನಸ್ಸು ಅವರಲ್ಲಿತ್ತು. ಅವರಂದದ್ದು: “ಎಲ್ಲಿ, ಹೇಗೆ, ಏನು ಇದ್ಯಾವುದೂ ನನಗೆ ಗೊತ್ತಿರಲಿಲ್ಲ. ಒಂದಂತೂ ಚೆನ್ನಾಗಿ ಗೊತ್ತಿತ್ತು, ಅದೇನೆಂದರೆ ‘ಇಗೋ, ನಾನಿದ್ದೇನೆ, ನನ್ನನ್ನು ಕಳುಹಿಸು’ ಅಂತ ಹೇಳಿದ ಯೆಶಾಯನಂತೆ ನಾನಿರಬೇಕು.” (ಯೆಶಾ. 6:8) ರಾಲ್ಫ್ ಲೆಫ್ಲರ್ ಹೇಳಿದ್ದು: “ಇಂದು ಭೂಸುತ್ತಲೂ ರಾಜ್ಯವನ್ನು ಪ್ರಚುರಪಡಿಸಲು ನಡೆಯುತ್ತಿರುವ ಕಾರ್ಯಾಚರಣೆ ನಿಜವಾಗಿ ಆರಂಭವಾದದ್ದು ಆ ವಿಶೇಷ ದಿನದಂದೇ.”
1922ರಲ್ಲಿ ಒಹಾಯೋದ ಸೀಡರ್ ಪಾಯಿಂಟ್ನಲ್ಲಿ ನಡೆದ ಈ ಅಧಿವೇಶನ ಯೆಹೋವನ ಸಾಕ್ಷಿಗಳ ಇತಿಹಾಸದಲ್ಲಿ ಒಂದು ಪ್ರಮುಖ ಮೈಲಿಗಲ್ಲು ಆಗಿದ್ದು ಅನೇಕರ ಮನಸ್ಸಿನಲ್ಲಿ ಹಚ್ಚಹಸುರಾಗಿ ಉಳಿಯಿತು. ಜಾರ್ಜ್ ಗ್ಯಾಂಗಸ್ ಹೇಳಿದ್ದು: “ಈ ಅಧಿವೇಶನಕ್ಕೆ ಹಾಜರಾದ ನಂತರ ‘ನಾನು ಮುಂದೆ ಯಾವತ್ತೂ ಒಂದೇ ಒಂದು ಅಧಿವೇಶನವನ್ನೂ ತಪ್ಪಿಸಬಾರದು’ ಎಂದು ನಿರ್ಧರಿಸಿದೆ.” ಅವರಿಗೆ ನೆನಪಿರುವ ಹಾಗೆ ಅವರು ತಪ್ಪಿಸಿದ್ದೂ ಇಲ್ಲ! ಜೂಲ್ಯ ವಿಲ್ಕಾಕ್ಸ್ ಬರೆದದ್ದು: “ನಮ್ಮ ಸಾಹಿತ್ಯದಲ್ಲಿ ಸೀಡರ್ ಪಾಯಿಂಟ್ 1922 ಎಂಬ ಮಾತು ಬಂದಾಗೆಲ್ಲ ಎಷ್ಟು ಪುಳಕಿತಳಾಗುತ್ತೇನೆಂದು ವರ್ಣಿಸಕ್ಕಾಗಲ್ಲ. ‘ನನಗೆ ಅಲ್ಲಿರಲು ಅವಕಾಶ ಕೊಟ್ಟದ್ದಕ್ಕೆ ಧನ್ಯವಾದ ಯೆಹೋವನೇ’ ಅಂತ ಪ್ರತಿ ಬಾರಿ ಹೇಳಬೇಕು ಅನಿಸುತ್ತದೆ.”
ಇಂದು ನಮ್ಮಲ್ಲೂ ಅನೇಕರಿಗೆ ಒಂದಲ್ಲ ಒಂದು ಅಧಿವೇಶನದ ಬಗ್ಗೆ ಈ ರೀತಿಯ ಸವಿ ನೆನಪುಗಳಿರಬಹುದು. ಅದು ನಮ್ಮನ್ನು ಪುಳಕಿತಗೊಳಿಸಿರಬಹುದು. ನಮ್ಮಲ್ಲಿ ಹುರುಪನ್ನು, ನಮ್ಮ ಮಹಾನ್ ದೇವರು ಮತ್ತು ನಮ್ಮ ರಾಜನ ಮೇಲೆ ಪ್ರೀತಿಯನ್ನು ತುಂಬಿಸಿರಬಹುದು. ಅದರ ಬಗ್ಗೆ ಯೋಚಿಸುವಾಗೆಲ್ಲ “ನನಗೆ ಅಲ್ಲಿರಲು ಅವಕಾಶ ಕೊಟ್ಟದ್ದಕ್ಕೆ ಧನ್ಯವಾದ ಯೆಹೋವನೇ” ಅಂತ ಹೇಳಲು ನಮಗೂ ಮನಸ್ಸಾಗುತ್ತದಲ್ವಾ?