‘ಭೂಮಿಯನ್ನ ಆಸ್ತಿಯಾಗಿ ಪಡ್ಕೊಳ್ಳೋಕೆ’ ನೀವು ರೆಡಿನಾ?
‘ಮೃದು ಸ್ವಭಾವದವರು ಸಂತೋಷವಾಗಿ ಇರ್ತಾರೆ. ಅವರು ಭೂಮಿಯನ್ನ ಆಸ್ತಿಯಾಗಿ ಪಡ್ಕೊಳ್ತಾರೆ’ ಅಂತ ಯೇಸು ಹೇಳಿದನು. (ಮತ್ತಾ. 5:5) ಆ ಮಾತು ನಿಜ ಆಗೋಕೆ ನಾವೆಲ್ಲರೂ ಕಾಯ್ತಾ ಇದ್ದೀವಿ. ಮುಂದೆ ಅಭಿಷಿಕ್ತರು ಸ್ವರ್ಗದಲ್ಲಿ ರಾಜರಾದಾಗ ಅವರು ಈ ಭೂಮಿಯನ್ನ ಆಸ್ತಿಯಾಗಿ ಪಡ್ಕೊಳ್ತಾರೆ. (ಪ್ರಕ. 5:10; 20:6) ಇವತ್ತಿರೋ ಎಷ್ಟೋ ನಿಜ ಕ್ರೈಸ್ತರು ಮುಂದೆ ಇದೇ ಭೂಮಿ ಮೇಲೆ ಶಾಶ್ವತ ಜೀವ ಪಡೆದುಕೊಂಡಾಗ ಈ ಭೂಮಿಯನ್ನ ಆಸ್ತಿಯಾಗಿ ಪಡ್ಕೊಳ್ತಾರೆ. ಅಲ್ಲಿ ಅವರು ಪರಿಪೂರ್ಣರಾಗಿರುತ್ತಾರೆ, ಶಾಂತಿ ನೆಮ್ಮದಿಯಿಂದ ಜೀವಿಸುತ್ತಾರೆ. ಆದ್ರೆ ಅಲ್ಲಿ ನಮಗೆ ಕೆಲವು ಕೆಲಸಗಳನ್ನೂ ಮಾಡೋಕೆ ಇರುತ್ತೆ. ಅದರಲ್ಲಿ ಮೂರನ್ನ ನಾವೀಗ ನೊಡೋಣ. (1) ಇಡೀ ಭೂಮಿಯನ್ನ ಪರದೈಸಾಗಿ ಮಾಡೋದು (2) ಮತ್ತೆ ಜೀವ ಪಡೆದುಕೊಂಡವರಿಗೆ ಸಹಾಯ ಮಾಡೋದು (3) ಅವರಿಗೆ ಕಲಿಸೋದು. ಅದನ್ನ ಮಾಡೋಕೆ ನಾವು ಈಗಿಂದಾನೇ ಹೇಗೆ ತಯಾರಾಗೋದು ಅಂತ ನೊಡೋಣ.
ಭೂಮಿಯನ್ನ ಪರದೈಸಾಗಿ ಮಾಡೋಕೆ ತಯಾರಾಗಿ
ಯೆಹೋವ ದೇವರು ಮನುಷ್ಯರಿಗೆ “ಇಡೀ ಭೂಮಿ ತುಂಬ್ಕೊಳಿ. ಅದು ನಿಮ್ಮ ಅಧಿಕಾರದ ಕೆಳಗಿರಲಿ” ಅಂತ ಹೇಳಿದ್ದನು. (ಆದಿ. 1:28) ಇದರ ಅರ್ಥ ಅವರು ಇಡೀ ಭೂಮಿಯನ್ನ ಒಂದು ಪರದೈಸಾಗಿ ಮಾಡಬೇಕಿತ್ತು. ಮುಂದೆ ಈ ಭೂಮಿಯನ್ನ ಆಸ್ತಿಯಾಗಿ ಪಡೆದುಕೊಳ್ಳೋರು ಈ ಕೆಲಸವನ್ನ ಮಾಡ್ತಾರೆ. ಯಾಕಂದ್ರೆ ಅರ್ಮಗೆದ್ದೋನ್ ಯುದ್ಧದಿಂದ ಈ ಭೂಮಿ ಹಾಳಾಗಿರುತ್ತೆ. ಯೆಹೋವ ಈ ಭೂಮಿಯನ್ನ ಏದೆನ್ ತೋಟದ ತರ ಮಾಡಿಕೊಡಲ್ಲ. ಹಾಗಾಗಿ ಅದನ್ನ ಪೂರ್ತಿಯಾಗಿ ಶುಚಿಮಾಡಿ ಅದನ್ನ ಒಂದು ಸುಂದರ ತೋಟದ ತರ ಮಾಡೋ ಕೆಲಸ ನಮಗಿರುತ್ತೆ. ಎಷ್ಟು ದೊಡ್ಡ ಕೆಲಸ ಅಲ್ವಾ?
ಇದು ಇಸ್ರಾಯೇಲ್ಯರು ಬಾಬೆಲಿಂದ ವಾಪಸ್ ಬಂದ ಸಮಯವನ್ನ ನಮಗೆ ನೆನಪಿಸುತ್ತೆ. ಅವರು ಕೈದಿಗಳಾಗಿ 70 ವರ್ಷ ಬಾಬೆಲಿನಲ್ಲಿ ಇದ್ರು. ಅಲ್ಲಿ ತನಕ ಯೆರೂಸಲೇಮ್ ಪಾಳುಬಿದ್ದಿತ್ತು. ಅವರು ವಾಪಸ್ ಬಂದಮೇಲೆ ಹೊಸದಾಗಿ ಜೀವನ ಶುರು ಮಾಡಬೇಕಿತ್ತು. ಹಾಗಾಗಿ ಆ ಜಾಗನೆಲ್ಲಾ ರೆಡಿ ಮಾಡ್ಕೊಬೇಕಿತ್ತು. ಯೆಹೋವ ದೇವರ ಸಹಾಯದಿಂದ ಅವರು ಅದನ್ನೆಲ್ಲಾ ಮಾಡ್ತಾರೆ ಅಂತ ಯೆಶಾಯ ಭವಿಷ್ಯವಾಣಿ ಹೇಳಿದ. ಅಲ್ಲಿ ಹೀಗಿತ್ತು: “ಮರಳುಗಾಡನ್ನ ಏದೆನಿನ ತರ ಮಾಡ್ತಾನೆ, ಅದ್ರ ಬಯಲು ಪ್ರದೇಶವನ್ನ ಯೆಹೋವನ ತೋಟದ ಹಾಗೆ ಮಾಡ್ತಾನೆ.” (ಯೆಶಾ. 51:3) ನಾವೂ ಈ ಇಡೀ ಭೂಮಿಯನ್ನ ಪರದೈಸಾಗಿ ಮಾಡುವಾಗ ಯೆಹೋವ ನಮ್ಮ ಜೊತೆ ಇರ್ತಾನೆ, ನಮಗೆ ಸಹಾಯ ಮಾಡ್ತಾನೆ. ಹಾಗಾದ್ರೆ ಈ ಕೆಲಸದಲ್ಲಿ ಕೈ ಜೋಡಿಸೋಕೆ ನಮಗೆ ಆಸೆಯಿದೆ ಅಂತ ಈಗಿಂದನೇ ತೋರಿಸಿಕೊಡಬೇಕು. ಅದು ಹೇಗೆ?
ನೀವು ನಿಮ್ಮ ಮನೆ ಮತ್ತು ಅದರ ಸುತ್ತ ಮುತ್ತ ಶುಚಿಯಾಗಿ ಇಟ್ಟುಕೊಳ್ಳಬೇಕು. ನಿಮ್ಮ ಅಕ್ಕಪಕ್ಕದ ಮನೆಯವರು ನೀಟಾಗಿ ಇಟ್ಟುಕೊಂಡಿಲ್ಲ ಅಂದ್ರೂ ನೀವು ನೀಟಾಗಿ ಇಟ್ಟುಕೊಳ್ಳಿ. ರಾಜ್ಯ ಸಭಾಗೃಹಗಳನ್ನ ಮತ್ತು ಅಧಿವೇಶನ ಹಾಲ್‌ಗಳನ್ನ ಶುಚಿಮಾಡೋಕೆ ಕೈಜೋಡಿಸಿ. ವಿಪತ್ತು ಪರಿಹಾರ ಕೆಲಸ ಮಾಡೋಕೆ ನಿಮಗೆ ಆಸೆಯಿದ್ರೆ ನೀವು ಅರ್ಜಿ ಹಾಕಬಹುದು. ಇದ್ರಿಂದ ಅಗತ್ಯ ಇದ್ದಾಗ ಸಹಾಯ ಮಾಡೋಕೆ ನೀವು ರೆಡಿ ಇರ್ತೀರ. ಹಾಗಾಗಿ, ‘ಮುಂದೆ ಹೊಸ ಲೋಕದಲ್ಲಿ ಕೆಲಸಗಳನ್ನ ಮಾಡೋಕೆ ನಾನು ಈಗಿಂದನೇ ಯಾವೆಲ್ಲಾ ಕೌಶಲಗಳನ್ನ ಬೆಳೆಸಿಕೊಳ್ಳಬೇಕು?’ ಅಂತ ನಿಮ್ಮನ್ನೇ ಕೇಳಿಕೊಳ್ಳಿ.
ಮತ್ತೆ ಬದುಕುವವರಿಗೆ ಸಹಾಯ ಮಾಡೋಕೆ ತಯಾರಾಗಿ
ಯೇಸು ಯಾಯೀರನ ಮಗಳನ್ನ ಜೀವಂತವಾಗಿ ಎಬ್ಬಿಸಿದ ಮೇಲೆ “ಆ ಹುಡುಗಿಗೆ ಏನಾದ್ರೂ ತಿನ್ನೋಕೆ ಕೊಡಿ ಅಂದನು.” (ಮಾರ್ಕ 5:42, 43) 12 ವರ್ಷದ ಹುಡುಗಿಗೆ ಊಟ ಕೊಡೋದು ಅಷ್ಟೇನು ದೊಡ್ಡ ವಿಷಯ ಅಲ್ಲ. ಆದ್ರೆ ಮುಂದೆ ‘ಸಮಾಧಿಗಳಲ್ಲಿ ಇರೋರೆಲ್ಲ ಯೇಸುವಿನ ಸ್ವರ ಕೇಳಿ ಜೀವಂತವಾಗಿ ಎದ್ದು ಬಂದಾಗ’ ಅವರಿಗೆ ಊಟ, ಬಟ್ಟೆ, ಇರೋಕೆ ಜಾಗ ಇದನೆಲ್ಲಾ ಏರ್ಪಾಡು ಮಾಡೋದು ಅಷ್ಟು ಸುಲಭ ಅಲ್ಲ. (ಯೋಹಾ. 5:28, 29) ನಿಜ, ಇದರ ಬಗ್ಗೆ ಬೈಬಲಲ್ಲಿ ಹೆಚ್ಚಿನ ಮಾಹಿತಿ ಕೊಟ್ಟಿಲ್ಲ. ಆದ್ರೂ ಅಲ್ಲಿ ಎಷ್ಟೆಲ್ಲ ಕೆಲಸ ಇರುತ್ತೆ ಅಂತ ಯೋಚನೆ ಮಾಡಿ ನೋಡಿ. ಅವರಿಗೆ ಸಹಾಯ ಮಾಡೋಕೆ ನಾವು ರೆಡಿ ಇದ್ದೀವಿ ಅಂತ ಹೇಗೆ ತೋರಿಸಬಹುದು? ಈ ಕೆಳಗಿನ ಪ್ರಶ್ನೆಗಳನ್ನ ಕೇಳಿಕೊಳ್ಳಿ.
ಭೂಮಿಯನ್ನ ಆಸ್ತಿಯಾಗಿ ಪಡ್ಕೊಳ್ಳೋಕೆ ನೀವು ರೆಡಿಯಾಗಿದ್ದೀರ ಅಂತ ಹೇಗೆ ತೋರಿಸ್ತೀರಾ?
ಸರ್ಕಿಟ್ ಮೇಲ್ವಿಚಾರಕರ ಭೇಟಿ ಇದೆ ಅಂತ ಗೊತ್ತಾದಾಗ ಅವರನ್ನ ಊಟಕ್ಕೆ ಕರೆಯೋಕೆ ಯೋಜನೆ ಮಾಡ್ತೀರಾ? ಈ ಮುಂಚೆ ಬೆತೆಲ್‌ನಲ್ಲಿ ಅಥವಾ ಸರ್ಕಿಟ್ ಮೇಲ್ವಿಚಾರಕರಾಗಿ ಸೇವೆ ಮಾಡುತ್ತಿದ್ದ ಸಹೋದರ ಅಥವಾ ಸಹೋದರಿಗೆ ನೇಮಕ ಬದಲಾದಾಗ ಅವರಿಗೆ ಮನೆ ಹುಡುಕೋಕೆ ನೀವು ಸಹಾಯ ಮಾಡ್ತಿರಾ? ನೀವಿರೋ ಕಡೆ ಪ್ರಾದೇಶಿಕ ಅಧಿವೇಶನ ಅಥವಾ ವಿಶೇಷ ಅಧಿವೇಶನ ನಡೀತಿದ್ರೆ, ಅಧಿವೇಶನ ಶುರುವಾಗೋ ಮುಂಚೆ ಅಥವಾ ಮುಗಿದ ಮೇಲೆ ಅಲ್ಲಿ ಹೋಗಿ ಕೆಲಸ ಮಾಡೋಕೆ ಇಷ್ಟಪಡ್ತೀರಾ? ಅಲ್ಲಿಗೆ ಬರೋ ಅತಿಥಿಗಳನ್ನ ಸ್ವಾಗತಿಸೋಕೆ ಮುಂದಾಗಿ ಹೋಗ್ತಿರಾ?
ಮತ್ತೆ ಬದುಕುವವರಿಗೆ ಕಲಿಸೋಕೆ ತಯಾರಾಗಿ
ಅಪೊಸ್ತಲರ ಕಾರ್ಯ 24:15ರಲ್ಲಿರೋ ಮಾತುಗಳು ನಿಜ ಆಗುವಾಗ ಕೋಟಿಗಟ್ಟಲೆ ಜನ ಮತ್ತೆ ಜೀವಂತವಾಗಿ ಎದ್ದು ಬರ್ತಾರೆ. ಅವರಲ್ಲಿ ಎಷ್ಟೋ ಜನರಿಗೆ ಯೆಹೋವನ ಬಗ್ಗೆ ತಿಳಿದುಕೊಳ್ಳೋ ಅವಕಾಶನೇ ಸಿಕ್ಕಿರಲ್ಲ. ಆದ್ರೆ ಜೀವಂತವಾಗಿ ಎದ್ದು ಬಂದ ಮೇಲೆ ಆ ಅವಕಾಶ ಸಿಗುತ್ತೆ.a ಅವರಿಗೆ ಯಾರು ಕಲಿಸ್ತಾರೆ? ತುಂಬ ವರ್ಷಗಳಿಂದ ಯೆಹೋವನ ಸೇವೆ ಮಾಡ್ತಿರುವವರು ಅವರಿಗೆ ಕಲಿಸ್ತಾರೆ. (ಯೆಶಾ. 11:9) ಯುರೋಪ್, ದಕ್ಷಿಣ ಅಮೆರಿಕ, ಆಫ್ರಿಕಾದಲ್ಲಿ ಸೇವೆ ಮಾಡಿರೋ ಸಹೋದರಿ ಶಾರ್ಲೆಟ್ ಹೀಗೆ ಹೇಳ್ತಾರೆ: “ಕೆಲವೊಮ್ಮೆ ನಾನು ತೀರಿಹೋಗಿರುವವರ ಬಗ್ಗೆ ಯೋಚನೆ ಮಾಡುವಾಗ ‘ಅವರಿಗೆ ಯೆಹೋವನ ಬಗ್ಗೆ ಗೊತ್ತಿದ್ರೆ ಅವರ ಜೀವನ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ’ ಅಂತ ಅಂದುಕೊಳ್ತೀನಿ. ಹಾಗಾಗಿ ಅಂಥವರು ಜೀವಂತವಾಗಿ ಎದ್ದು ಬಂದ ಮೇಲೆ ಅವರಿಗೆ ಯೆಹೋವನ ಬಗ್ಗೆ ಕಲಿಸೋಕೆ ನಾನು ಕಾಯ್ತಾ ಇದ್ದೀನಿ.”
ಯೇಸುಗಿಂತ ಮುಂಚೆ ಇದ್ದ ಎಷ್ಟೋ ಯೆಹೋವನ ನಂಬಿಗಸ್ತ ಸೇವಕರಿಗೂ ನಾವು ತುಂಬ ವಿಷಯಗಳನ್ನ ಕಲಿಸಬೇಕಿರುತ್ತೆ. ಉದಾಹರಣೆಗೆ, ದಾನಿಯೇಲ ಬರೆದಿದ್ದ ಭವಿಷ್ಯವಾಣಿಗಳ ಅರ್ಥ ಏನಂತ ಅವನಿಗೇ ಗೊತ್ತಿರಲಿಲ್ಲ. ಆದ್ರೆ ಅದೆಲ್ಲ ಹೇಗೆ ನೆರವೇರಿತು ಅಂತ ನಾವು ಅವನಿಗೆ ತಿಳಿಸಿಕೊಡಬೇಕು. (ದಾನಿ. 12:8) ರೂತ್ ಮತ್ತು ನೊವೊಮಿ ಹತ್ರ ಮಾತಾಡ್ತಾ ‘ನಿಮ್ಮ ವಂಶದಲ್ಲೇ ಮೆಸ್ಸೀಯ ಬಂದನು’ ಅಂತ ಹೇಳಿದಾಗ ಅವರಿಗೆ ಎಷ್ಟು ಖುಷಿಯಾಗುತ್ತೆ ಅಲ್ವಾ? ಇವರಿಗೆಲ್ಲಾ ಕಲಿಸೋದನ್ನ ನೆನಸಿಕೊಂಡಾಗ ನಮಗೆ ತುಂಬ ಹೆಮ್ಮೆಯಾಗುತ್ತೆ. ಈಗಿರೋ ಚಿಂತೆ ಒತ್ತಡಗಳು ನಮಗೆ ಹೊಸ ಲೋಕದಲ್ಲಿ ಇರಲ್ಲ. ನಾವು ಆಗ ಆರಾಮವಾಗಿ ಎಲ್ಲರಿಗೂ ಯೆಹೋವನ ಬಗ್ಗೆ ಕಲಿಸಬಹುದು.
ಹೊಸ ಲೋಕದಲ್ಲಿ ಬೇರೆಯವರಿಗೆ ಕಲಿಸೋಕೆ ನಿಮಗೆ ಆಸೆಯಿದೆ ಅಂತ ಈಗಲೇ ಹೇಗೆ ತೋರಿಸಿಕೊಡಬಹುದು? ಸಿಹಿಸುದ್ದಿ ಸಾರೋಕೆ ನಿಮ್ಮಿಂದ ಆಗೋದನ್ನೆಲ್ಲಾ ಮಾಡಬೇಕು. ಬೇರೆಯವರಿಗೆ ಬೈಬಲ್ ಸತ್ಯಗಳನ್ನ ಕಲಿಸೋಕೆ ಹೊಸಹೊಸ ವಿಧಾನಗಳನ್ನ ಕಲಿತುಕೊಳ್ಳಬೇಕು. (ಮತ್ತಾ. 24:14) ಈಗ ನಿಮಗೆ ವಯಸ್ಸಾಗಿರೋದ್ರಿಂದ ಅಥವಾ ಬೇರೆ ಕಾರಣಗಳಿಂದ ಜಾಸ್ತಿ ಸೇವೆ ಮಾಡೋಕೆ ಆಗದೆ ಇರಬಹುದು. ಆದ್ರೆ ನಿಮ್ಮಿಂದ ಆಗೋದನ್ನೆಲ್ಲಾ ಮಾಡ್ತಾ ಇರುವಾಗ, ಮುಂದೆ ಜೀವಂತವಾಗಿ ಎದ್ದು ಬರುವವರಿಗೆ ಕಲಿಸೋಕೆ ನಿಮಗೆ ಆಸೆಯಿದೆ ಅಂತ ತೋರಿಸ್ತೀರ.
ಭೂಮಿಯನ್ನ ಆಸ್ತಿಯಾಗಿ ಪಡ್ಕೊಳ್ಳೋಕೆ ನೀವು ರೆಡಿಯಾಗಿದ್ದೀರಾ? ಈ ಭೂಮಿಯನ್ನ ಪರದೈಸಾಗಿ ಮಾಡೋಕೆ, ಜೀವಂತವಾಗಿ ಎದ್ದು ಬಂದವರಿಗೆ ಸಹಾಯ ಮಾಡೋಕೆ ಮತ್ತು ಅವರಿಗೆ ಕಲಿಸೋಕೆ ನೀವು ತಯಾರಾಗಿದ್ದೀರಾ? ಈಗ ನಿಮ್ಮ ಮುಂದಿರೋ ಅವಕಾಶಗಳನ್ನ ಚೆನ್ನಾಗಿ ಉಪಯೋಗಿಸಿಕೊಂಡ್ರೆ ಈ ಭೂಮಿಯನ್ನ ನೀವು ಆಸ್ತಿಯಾಗಿ ಪಡ್ಕೊಳ್ತೀರ.
a ಸೆಪ್ಟೆಂಬರ್, 2022ರ ಕಾವಲಿನಬುರುಜುವಿನಲ್ಲಿ “ನೀತಿವಂತರಾಗೋಕೆ ತುಂಬ ಜನರಿಗೆ ಸಿಗೋ ಸಹಾಯ” ಅನ್ನೋ ಲೇಖನ ನೋಡಿ.