ದೇವರಿಗೊಂದು ಹೆಸರಿದೆಯಾ?
ಬೈಬಲ್ ಕೊಡೋ ಉತ್ತರ
ಎಲ್ಲ ಮನುಷ್ಯರಿಗೂ ವೈಯಕ್ತಿಕ ಹೆಸರು ಅನ್ನೋದು ಇದ್ದೇ ಇರುತ್ತೆ. ಅದೇ ತರ ನಾವು ಯೋಚಿಸಬೇಕಾಗಿರೋ ವಿಷಯ ಏನಂದ್ರೆ ದೇವರಿಗೂ ಒಂದು ವೈಯಕ್ತಿಕ ಹೆಸರು ಇರಬೇಕಲ್ವಾ? ನಾವು ಯಾರನ್ನಾದರೂ ಫ್ರೆಂಡ್ ಮಾಡಿಕೊಳ್ಳಬೇಕಂದ್ರೆ ಅವರ ಹೆಸರು ತಿಳಿದುಕೊಳ್ಳೋದು ಹಾಗೂ ಅದನ್ನ ಬಳಸೋದು ತುಂಬಾನೆ ಮುಖ್ಯ. ಅದೇ ತರ ನಾವು ದೇವರ ಫ್ರೆಂಡ್ ಆಗಬೇಕು ಅಂದ್ರೆ ಆತನ ಹೆಸರನ್ನ ತಿಳ್ಕೊಳ್ಳಲೇ ಬೇಕಲ್ವಾ?
ಬೈಬಲ್‌ನಲ್ಲಿ ದೇವರು ಹೀಗೆ ಹೇಳ್ತಾರೆ: “ನಾನು ಯೆಹೋವ. ಇದು ನನ್ನ ಹೆಸ್ರು” (ಯೆಶಾಯ 42:8) ದೇವರಿಗೆ “ಸರ್ವಶಕ್ತ ದೇವರು,” “ವಿಶ್ವದ ರಾಜ,” ಹಾಗೂ “ಸೃಷ್ಟಿಕರ್ತ,” ಅನ್ನೋ ಅನೇಕ ಬಿರುದುಗಳಿದ್ರೂ, ತನ್ನ ಆರಾಧಕರು ಆತನನ್ನ ಹೆಸರು ಹಿಡಿದು ಕರಿಬೇಕು ಅನ್ನೋದು ದೇವರ ಇಷ್ಟ. ಹೀಗೆ ದೇವರು ತನ್ನ ಆರಾಧಕರನ್ನ ಗೌರವಿಸ್ತಾನೆ.—ಆದಿಕಾಂಡ 17:1; ಅಪೊಸ್ತಲರ ಕಾರ್ಯ 4:24; 1 ಪೇತ್ರ 4:19.
ಅನೇಕ ಬೈಬಲ್ ಭಾಷಾಂತರಗಳಲ್ಲಿ ದೇವರ ಹೆಸರನ್ನ ನಾವು ವಿಮೋಚನಕಾಂಡ 6:3 ರಲ್ಲಿ ನೋಡಬಹುದು. ಅಲ್ಲಿ ಹೀಗಿದೆ: “ನಾನು ಅಬ್ರಹಾಮನಿಗೆ, ಇಸಾಕನಿಗೆ, ಯಾಕೋಬನಿಗೆ ಕಾಣಿಸ್ಕೊಂಡು ನಾನೇ ಸರ್ವಶಕ್ತ ದೇವರು ಅಂತ ಅವರಿಗೆ ತಿಳಿಸ್ತಿದ್ದೆ. ಆದ್ರೆ ಯೆಹೋವ ಅನ್ನೋ ನನ್ನ ಹೆಸರಿನ ವಿಷ್ಯದಲ್ಲಿ ಅವರಿಗೆ ಪೂರ್ತಿ ತಿಳಿಸಲಿಲ್ಲ.”
ತುಂಬಾ ವರ್ಷಗಳಿಂದ ಕನ್ನಡದಲ್ಲಿ ದೇವರ ಹೆಸರನ್ನ ಯೆಹೋವ ಅಂತ ಬಳಸಲಾಗ್ತಿದೆ. ಅನೇಕ ವಿದ್ವಾಂಸರು ದೇವರ ಹೆಸರನ್ನ “ಯಾಹ್ವೆ” ಅಂತ ಬಳಸೋಕೆ ಇಷ್ಟಪಡ್ತಾರೆ ಆದರೆ ಎಲ್ಲರಿಗೂ ಚಿರಪರಿಚಿತವಾಗಿರುವ ಹೆಸರು ಯೆಹೋವ. ಬೈಬಲಿನ ಮೊದಲನೇ ಭಾಗವನ್ನ ಇಂಗ್ಲೀಷ್‌ನಲ್ಲಿ ಅಲ್ಲ, ಹೀಬ್ರು ಭಾಷೆಯಲ್ಲಿ ಬರೆದರು. ಹೀಬ್ರು ಭಾಷೆಯನ್ನ ಬಲದಿಂದ ಎಡಕ್ಕೆ ಓದ್ತಾರೆ. ಹೀಬ್ರು ಭಾಷೆಯ ನಾಲ್ಕು ವ್ಯಂಜನಾಕ್ಷರಗಳನ್ನ (יהוה) ಬಳಸಿ ದೇವರ ಪವಿತ್ರ ಹೆಸರನ್ನ ಬರೆಯಲಾಗಿದೆ. ಇಂಗ್ಲಿಷ್‌ನಲ್ಲಿ ಇದನ್ನ YHWH ಅನ್ನೋ ನಾಲ್ಕು ವ್ಯಂಜನಗಳಿಂದ ಬರೆಯಲಾಗಿದೆ. ಇದನ್ನ ‘ಚತುರಕ್ಷರಿ’ ಅಂತ ಕರೆಯಲಾಗುತ್ತೆ.