ಮತ್ತಾಯ
25 ಸ್ವರ್ಗದ ರಾಜ್ಯವು ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಭೇಟಿಮಾಡಲು ಹೋದ ಹತ್ತು ಕನ್ಯೆಯರಿಗೆ ಹೋಲಿಕೆಯಾಗಿದೆ. 2 ಅವರಲ್ಲಿ ಐದು ಕನ್ಯೆಯರು ಮೂರ್ಖರಾಗಿದ್ದರು. ಐದು ಕನ್ಯೆಯರು ಬುದ್ಧಿವಂತೆಯರಾಗಿದ್ದರು.+ 3 ಮೂರ್ಖ ಕನ್ಯೆಯರು ತಮ್ಮ ದೀಪಗಳನ್ನು ತೆಗೆದುಕೊಂಡು ಹೋದರೂ ಎಣ್ಣೆಯನ್ನು ತೆಗೆದುಕೊಂಡು ಹೋಗಲಿಲ್ಲ. 4 ಬುದ್ಧಿವಂತ ಕನ್ಯೆಯರು ತಮ್ಮ ದೀಪಗಳೊಂದಿಗೆ ಎಣ್ಣೆಯನ್ನೂ ತೆಗೆದುಕೊಂಡು ಹೋದರು. 5 ಮದುಮಗನು ಬರಲು ತಡವಾದಾಗ ಎಲ್ಲರೂ ತೂಕಡಿಸಿ ನಿದ್ದೆಹೋದರು. 6 ಮಧ್ಯರಾತ್ರಿಯಲ್ಲಿ, ‘ಮದುಮಗನು ಬರುತ್ತಿದ್ದಾನೆ! ಹೊರಗೆ ಹೋಗಿ ಅವನನ್ನು ಭೇಟಿಮಾಡಿ’ ಎಂಬ ಕೂಗು ಕೇಳಿಸಿತು. 7 ಆಗ ಎಲ್ಲ ಕನ್ಯೆಯರು ಎದ್ದು ತಮ್ಮ ದೀಪಗಳನ್ನು ಸಿದ್ಧ ಮಾಡಿಕೊಳ್ಳಲು ಶುರುಮಾಡಿದರು. 8 ಮೂರ್ಖ ಕನ್ಯೆಯರು ಬುದ್ಧಿವಂತ ಕನ್ಯೆಯರಿಗೆ ‘ನಮ್ಮ ದೀಪಗಳು ಇನ್ನೇನು ಆರಿಹೋಗಲಿವೆ. ನಮಗೆ ಸ್ವಲ್ಪ ಎಣ್ಣೆಯನ್ನು ಕೊಡಿ’ ಎಂದು ಕೇಳಿದರು. 9 ಬುದ್ಧಿವಂತ ಕನ್ಯೆಯರು ‘ನಿಮಗೆ ಕೊಟ್ಟರೆ ನಮಗೂ ಸಾಕಾಗುವುದಿಲ್ಲ ನಿಮಗೂ ಸಾಕಾಗುವುದಿಲ್ಲ, ಹಾಗಾಗಿ ಮಾರುವವರ ಹತ್ತಿರ ಹೋಗಿ ಖರೀದಿಸಿ’ ಅಂದರು. 10 ಅವರು ಖರೀದಿಸಲು ಹೋಗುತ್ತಿದ್ದಾಗ ಮದುಮಗನು ಬಂದನು. ಸಿದ್ಧರಾಗಿದ್ದ ಕನ್ಯೆಯರು ಅವನ ಜೊತೆ ಒಳಗೆ ಮದುವೆ ಔತಣಕ್ಕೆ ಹೋದರು ಮತ್ತು ಬಾಗಿಲನ್ನು ಮುಚ್ಚಲಾಯಿತು. 11 ಆಮೇಲೆ ಮೂರ್ಖ ಕನ್ಯೆಯರು ಬಂದು ‘ಸ್ವಾಮಿ, ಸ್ವಾಮಿ, ಬಾಗಿಲು ತೆರೆಯಿರಿ’ ಅಂದರು. 12 ಅದಕ್ಕೆ ಮದುಮಗನು ‘ನೀವು ಯಾರೆಂದು ನನಗೆ ನಿಜವಾಗಿಯೂ ಗೊತ್ತಿಲ್ಲ’ ಅಂದನು.
13 ಹಾಗಾಗಿ ಎಚ್ಚರವಾಗಿರಿ, ಯಾಕೆಂದರೆ ಆ ದಿನ ಮತ್ತು ಆ ಸಮಯ ನಿಮಗೆ ಗೊತ್ತಿಲ್ಲ.+
14 ಸ್ವರ್ಗದ ರಾಜ್ಯವನ್ನು ವಿದೇಶಕ್ಕೆ ಹೋಗಲಿದ್ದ ಒಬ್ಬ ವ್ಯಕ್ತಿಗೆ ಹೋಲಿಸಬಹುದು. ಅವನು ಹೋಗುವ ಮುಂಚೆ ಸೇವಕರನ್ನು ಕರೆದು ತನ್ನ ಆಸ್ತಿಯನ್ನೆಲ್ಲ ನೋಡಿಕೊಳ್ಳಲು ಹೇಳಿದನು. 15 ಅವನು ಒಬ್ಬ ಸೇವಕನಿಗೆ ಐದು ತಲಾಂತು, ಇನ್ನೊಬ್ಬನಿಗೆ ಎರಡು ತಲಾಂತು, ಮತ್ತೊಬ್ಬನಿಗೆ ಒಂದು ತಲಾಂತನ್ನು ಹೀಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಕೊಟ್ಟು ವಿದೇಶಕ್ಕೆ ಹೋದನು. 16 ಐದು ತಲಾಂತು ಪಡೆದವನು ತಕ್ಷಣ ಹೋಗಿ ವ್ಯಾಪಾರ ಮಾಡಿ ಇನ್ನೂ ಐದು ತಲಾಂತು ಸಂಪಾದಿಸಿದನು. 17 ಹಾಗೆಯೇ ಎರಡು ತಲಾಂತು ಪಡೆದವನು ಇನ್ನೂ ಎರಡು ತಲಾಂತು ಸಂಪಾದಿಸಿದನು. 18 ಆದರೆ ಒಂದು ತಲಾಂತು ಪಡೆದವನು ಹೋಗಿ ನೆಲವನ್ನು ಅಗೆದು ಅಲ್ಲಿ ಯಜಮಾನನ ಹಣವನ್ನು ಬಚ್ಚಿಟ್ಟನು.
19 ತುಂಬ ಸಮಯದ ನಂತರ ಆ ಯಜಮಾನನು ಬಂದು ಸೇವಕರಿಂದ ಲೆಕ್ಕ ಕೇಳಿದನು. 20 ಆಗ ಐದು ತಲಾಂತು ಪಡೆದವನು ಮುಂದೆ ಬಂದು ಇನ್ನೂ ಐದು ತಲಾಂತು ಕೊಟ್ಟು ‘ಯಜಮಾನನೇ, ನೀನು ನನಗೆ ಐದು ತಲಾಂತು ಒಪ್ಪಿಸಿದ್ದೆ. ನೋಡಿ ನಾನು ಇನ್ನೂ ಐದು ತಲಾಂತು ಸಂಪಾದಿಸಿದ್ದೇನೆ’ ಅಂದನು. 21 ಆಗ ಯಜಮಾನನು ‘ಶಭಾಷ್, ನೀನು ನಂಬಿಗಸ್ತನಾದ ಒಳ್ಳೇ ಸೇವಕ! ನೀನು ಸ್ವಲ್ಪ ವಿಷಯದಲ್ಲಿ ನಂಬಿಗಸ್ತನಾಗಿದ್ದೆ. ಅದಕ್ಕೆ ನಿನಗೆ ಇನ್ನೂ ಹೆಚ್ಚು ವಿಷಯಗಳನ್ನು ನೇಮಿಸುತ್ತೇನೆ. ಬಾ, ನಿನ್ನ ಯಜಮಾನನ ಜೊತೆ ಸಂತೋಷಪಡು’ ಎಂದು ಹೇಳಿದನು. 22 ಆಮೇಲೆ ಎರಡು ತಲಾಂತು ಪಡೆದವನು ಮುಂದೆ ಬಂದು ‘ಯಜಮಾನನೇ, ನೀನು ಎರಡು ತಲಾಂತುಗಳನ್ನು ಕೊಟ್ಟಿದ್ದೆ. ನಾನು ಇನ್ನೂ ಎರಡು ತಲಾಂತುಗಳನ್ನು ಸಂಪಾದಿಸಿದ್ದೇನೆ’ ಅಂದನು. 23 ಅದಕ್ಕೆ ಯಜಮಾನನು ‘ಶಭಾಷ್, ನಂಬಿಗಸ್ತನಾದ ಒಳ್ಳೇ ಸೇವಕ! ನೀನು ಸ್ವಲ್ಪ ವಿಷಯದಲ್ಲಿ ನಂಬಿಗಸ್ತನಾಗಿದ್ದೆ. ಅದಕ್ಕೆ ನಾನು ನಿನಗೆ ಇನ್ನೂ ಹೆಚ್ಚು ವಿಷಯಗಳನ್ನು ನೇಮಿಸುತ್ತೇನೆ. ಬಾ, ನಿನ್ನ ಯಜಮಾನನ ಜೊತೆ ಸಂತೋಷಪಡು’ ಎಂದು ಹೇಳಿದನು.
24 ಕೊನೆಗೆ ಒಂದು ತಲಾಂತು ಪಡೆದವನು ಮುಂದೆ ಬಂದು ‘ಯಜಮಾನನೇ, ನೀನೊಬ್ಬ ಕಟ್ಟುನಿಟ್ಟಿನ ವ್ಯಕ್ತಿ, ಬಿತ್ತದಿದ್ದರೂ ಕೊಯ್ಯುತ್ತೀ, ಧಾನ್ಯ ತೂರದಿದ್ದರೂ ರಾಶಿಮಾಡುತ್ತೀ ಎಂದು ನನಗೆ ಗೊತ್ತಿತ್ತು. 25 ಹಾಗಾಗಿ ನಾನು ಹೆದರಿ ನೀನು ಕೊಟ್ಟ ತಲಾಂತನ್ನು ನೆಲದಲ್ಲಿ ಬಚ್ಚಿಟ್ಟೆ. ತೆಗೆದುಕೊ, ನಿನ್ನದ್ದನ್ನು ನಿನಗೇ ಕೊಡುತ್ತಿದ್ದೇನೆ’ ಅಂದನು. 26 ಅದಕ್ಕೆ ಯಜಮಾನನು ಅವನಿಗೆ ‘ನೀನು ಅಯೋಗ್ಯ, ಸೋಮಾರಿ ಸೇವಕ. ನಾನು ಬಿತ್ತದಿದ್ದರೂ ಕೊಯ್ಯುವವನು, ಧಾನ್ಯ ತೂರದಿದ್ದರೂ ರಾಶಿ ಮಾಡುವವನು ಎಂದು ನಿನಗೆ ಗೊತ್ತಿತ್ತಾ? 27 ಹಾಗಿದ್ದರೆ ನೀನು ನನ್ನ ಹಣವನ್ನು ಬಡ್ಡಿಗಾಗಿ ಜಮಾ ಮಾಡಬೇಕಿತ್ತು. ನಾನು ಬಂದಾಗ ಅದು ನನಗೆ ಬಡ್ಡಿ ಸಮೇತ ಸಿಗುತ್ತಿತ್ತು’ ಅಂದನು.
28 ಆಮೇಲೆ ಯಜಮಾನನು ಸೇವಕರಿಗೆ ‘ಇವನ ಹತ್ತಿರವಿರುವ ಆ ತಲಾಂತನ್ನು ತೆಗೆದುಕೊಂಡು ಹತ್ತು ತಲಾಂತು ಇರುವವನಿಗೆ ಕೊಡಿ. 29 ಯಾಕೆಂದರೆ ಇರುವವನಿಗೆ ಇನ್ನೂ ಹೆಚ್ಚನ್ನು ಕೊಡಲಾಗುವುದು ಮತ್ತು ಅವನಿಗೆ ಸಮೃದ್ಧಿಯಾಗುವುದು. ಆದರೆ ಇಲ್ಲದವನಿಂದ ಅವನ ಹತ್ತಿರ ಇದ್ದದ್ದನ್ನೂ ತೆಗೆಯಲಾಗುವುದು.+ 30 ಈ ಅಯೋಗ್ಯ ಸೇವಕನನ್ನು ಹೊರಗೆ ಕತ್ತಲೆಗೆ ಎಸೆಯಿರಿ. ಅಲ್ಲಿ ಅವನು ಗೋಳಾಡುವನು ಮತ್ತು ಹಲ್ಲು ಕಡಿಯುವನು’ ಅಂದನು.
31 ಮನುಷ್ಯಕುಮಾರನು ತನ್ನ ಮಹಿಮೆಯಲ್ಲಿ ಎಲ್ಲ ದೇವದೂತರ ಜೊತೆ+ ಬರುವಾಗ ತನ್ನ ಮಹಿಮಾನ್ವಿತ ಸಿಂಹಾಸನದಲ್ಲಿ ಕುಳಿತುಕೊಳ್ಳುವನು. 32 ಆಗ ಎಲ್ಲ ದೇಶಗಳ ಜನರನ್ನು ಆತನ ಮುಂದೆ ಒಟ್ಟು ಸೇರಿಸಲಾಗುವುದು. ಒಬ್ಬ ಕುರುಬನು ಕುರಿಗಳನ್ನು ಆಡುಗಳಿಂದ ಬೇರೆಬೇರೆ ಮಾಡುವ ಹಾಗೆ ಆತನು ಜನರನ್ನು ಬೇರೆಬೇರೆ ಮಾಡುವನು. 33 ಆತನು ಕುರಿಗಳನ್ನು ತನ್ನ ಬಲಗಡೆಯಲ್ಲಿ ಮತ್ತು ಆಡುಗಳನ್ನು ಎಡಗಡೆಯಲ್ಲಿ ನಿಲ್ಲಿಸುವನು.+
34 ಆಮೇಲೆ ರಾಜನು ತನ್ನ ಬಲಗಡೆಯಲ್ಲಿ ಇರುವವರಿಗೆ ‘ನನ್ನ ತಂದೆಯಿಂದ ಆಶೀರ್ವಾದ ಪಡೆದವರೇ ಬನ್ನಿ. ಲೋಕದ ಸ್ಥಾಪನೆಯಾದಾಗಿನಿಂದ ನಿಮಗಾಗಿ ಸಿದ್ಧಮಾಡಲಾಗಿರುವ ದೇವರ ರಾಜ್ಯವನ್ನು ಆಸ್ತಿಯಾಗಿ ಪಡೆದುಕೊಳ್ಳಿ. 35 ಯಾಕೆಂದರೆ ನಾನು ಹಸಿದಿದ್ದಾಗ ನೀವು ತಿನ್ನಲು ಕೊಟ್ಟಿರಿ. ಬಾಯಾರಿದಾಗ ಕುಡಿಯಲು ಕೊಟ್ಟಿರಿ. ನಾನು ಅಪರಿಚಿತನಾಗಿದ್ದಾಗ ನನಗೆ ಅತಿಥಿಸತ್ಕಾರ ಮಾಡಿದಿರಿ. 36 ನನಗೆ ಬಟ್ಟೆ ಇಲ್ಲದಿದ್ದಾಗ ಬಟ್ಟೆ ಕೊಟ್ಟಿರಿ. ನನಗೆ ಹುಷಾರಿಲ್ಲದಿದ್ದಾಗ ನನ್ನನ್ನು ನೋಡಿಕೊಂಡಿರಿ. ನಾನು ಜೈಲಿನಲ್ಲಿದ್ದಾಗ ನನ್ನನ್ನು ನೋಡಲು ಬಂದಿರಿ’ ಎಂದು ಹೇಳುವನು. 37 ಆಗ ನೀತಿವಂತರು ಆತನಿಗೆ ‘ಸ್ವಾಮಿ, ನಾವು ಯಾವಾಗ ನೀನು ಹಸಿದಿರುವುದನ್ನು ನೋಡಿ ತಿನ್ನಲು ಕೊಟ್ಟೆವು? ಯಾವಾಗ ನೀನು ಬಾಯಾರಿರುವುದನ್ನು ನೋಡಿ ಕುಡಿಯಲು ಕೊಟ್ಟೆವು?+ 38 ಯಾವಾಗ ನೀನು ಅಪರಿಚಿತನಾಗಿ ಇದ್ದದ್ದನ್ನು ನೋಡಿ ಅತಿಥಿಸತ್ಕಾರ ಮಾಡಿದೆವು? ಯಾವಾಗ ನಿನಗೆ ಬಟ್ಟೆ ಇಲ್ಲದ್ದನ್ನು ನೋಡಿ ಬಟ್ಟೆ ಕೊಟ್ಟೆವು? 39 ನಾವು ಯಾವಾಗ ನಿನಗೆ ಹುಷಾರು ಇಲ್ಲದಿರುವುದನ್ನು ಮತ್ತು ಜೈಲಿನಲ್ಲಿ ಇರುವುದನ್ನು ಕಂಡು ನೋಡಲು ಬಂದೆವು?’ ಎಂದು ಕೇಳುವರು. 40 ಅದಕ್ಕೆ ರಾಜನು ‘ನಾನು ನಿಮಗೆ ನಿಜ ಹೇಳುತ್ತೇನೆ, ನೀವು ನನ್ನ ಸಹೋದರರಲ್ಲೇ ಅತೀ ಚಿಕ್ಕವನಿಗೆ ಏನೆಲ್ಲ ಮಾಡಿದ್ದೀರೋ ಅದನ್ನು ನನಗೂ ಮಾಡಿದ ಹಾಗಾಯಿತು’+ ಎಂದು ಹೇಳುವನು.
41 ಆಮೇಲೆ ಆತನು ತನ್ನ ಎಡಗಡೆಯಲ್ಲಿರುವವರಿಗೆ ‘ನನ್ನಿಂದ ದೂರ ಹೋಗಿ.+ ದೇವರು ನಿಮಗೆ ತೀರ್ಪು ಮಾಡಿದ್ದಾನೆ. ಸೈತಾನನಿಗೆ ಮತ್ತು ಅವನ ಕೆಟ್ಟ ದೇವದೂತರಿಗೆ ಸಿದ್ಧಮಾಡಲಾಗಿರುವ ನಿತ್ಯನಾಶನದ ಬೆಂಕಿಗೆ ಹೋಗಿ.+ 42 ಯಾಕೆಂದರೆ ನಾನು ಹಸಿದಿದ್ದಾಗ ನೀವು ನನಗೆ ತಿನ್ನಲು ಏನೂ ಕೊಡಲಿಲ್ಲ. ನಾನು ಬಾಯಾರಿದ್ದಾಗ ಕುಡಿಯಲು ಏನೂ ಕೊಡಲಿಲ್ಲ. 43 ನಾನು ಅಪರಿಚಿತನಾಗಿದ್ದಾಗ ನೀವು ನನಗೆ ಅತಿಥಿಸತ್ಕಾರ ಮಾಡಲಿಲ್ಲ. ನನಗೆ ಬಟ್ಟೆ ಇಲ್ಲದಿದ್ದಾಗ ಬಟ್ಟೆ ಕೊಡಲಿಲ್ಲ. ನನಗೆ ಹುಷಾರಿಲ್ಲದಿದ್ದಾಗ ಮತ್ತು ನಾನು ಜೈಲಿನಲ್ಲಿದ್ದಾಗ ನನ್ನನ್ನು ನೋಡಿಕೊಳ್ಳಲಿಲ್ಲ’ ಎಂದು ಹೇಳುವನು. 44 ಆಗ ಅವರು ಸಹ ‘ಸ್ವಾಮಿ, ನೀನು ಯಾವಾಗ ಹಸಿದಿರುವುದನ್ನು, ಬಾಯಾರಿರುವುದನ್ನು, ಅಪರಿಚಿತನಾಗಿರುವುದನ್ನು, ಬಟ್ಟೆಯಿಲ್ಲದೆ ಇರುವುದನ್ನು, ಹುಷಾರಿಲ್ಲದೆ ಇರುವುದನ್ನು, ಜೈಲಿನಲ್ಲಿ ಇರುವುದನ್ನು ನೋಡಿ ನಾವು ನಿನಗೆ ಸಹಾಯ ಮಾಡಲಿಲ್ಲ?’ ಎಂದು ಹೇಳುವರು. 45 ಅದಕ್ಕೆ ರಾಜನು ‘ನಾನು ನಿಮಗೆ ನಿಜ ಹೇಳುತ್ತೇನೆ, ನೀವು ನನ್ನ ಸಹೋದರರಲ್ಲೇ ಅತೀ ಚಿಕ್ಕವನಿಗೆ ಏನೆಲ್ಲ ಮಾಡಲಿಲ್ಲವೋ ಅದನ್ನು ನನಗೂ ಮಾಡದೇ ಇದ್ದ ಹಾಗಾಯಿತು’ ಎಂದು ಹೇಳುವನು. 46 ಇವರಿಗೆ ಶಾಶ್ವತ ಸಾವು ಸಿಗಲಿದೆ, ಆದರೆ ನೀತಿವಂತರಿಗೆ ಶಾಶ್ವತ ಜೀವ ಸಿಗಲಿದೆ.”