ಮತ್ತಾಯ
26 ಯೇಸು ಇದನ್ನೆಲ್ಲ ಹೇಳಿದ ಮೇಲೆ ತನ್ನ ಶಿಷ್ಯರಿಗೆ 2 “ನಿಮಗೆ ಗೊತ್ತಿರುವ ಹಾಗೆ ಇನ್ನೆರಡು ದಿನದಲ್ಲಿ ಪಸ್ಕಹಬ್ಬ ಇದೆ, ಆಗ ಮನುಷ್ಯಕುಮಾರನನ್ನು ಕಂಬಕ್ಕೆ ಜಡಿದು ಸಾಯಿಸಲಿಕ್ಕಾಗಿ ಶತ್ರುಗಳ ಕೈಗೆ ಒಪ್ಪಿಸಲಾಗುವುದು” ಅಂದನು.+
3 ಅದೇ ಸಮಯದಲ್ಲಿ ಮುಖ್ಯ ಯಾಜಕರು ಮತ್ತು ಹಿರಿಯರು ಮಹಾ ಯಾಜಕನಾದ ಕಾಯಫನ+ ಮನೆಯ ಅಂಗಳದಲ್ಲಿ ಕೂಡಿಬಂದರು. 4 ಯೇಸುವನ್ನು ಕುತಂತ್ರದಿಂದ ಹಿಡಿದು ಕೊಲ್ಲಲಿಕ್ಕಾಗಿ ಅವರು ಪಿತೂರಿ ಮಾಡಿದರು. 5 ಆದರೆ “ಹಬ್ಬದ ಸಮಯದಲ್ಲಿ ಬೇಡ, ಜನರು ಗಲಾಟೆ ಮಾಡಬಹುದು” ಎಂದು ಮಾತಾಡಿಕೊಂಡರು.
6 ಹಿಂದೆ ಕುಷ್ಠರೋಗಿಯಾಗಿದ್ದ ಬೇಥಾನ್ಯದ ಸೀಮೋನನ ಮನೆಯಲ್ಲಿ ಯೇಸು ಇದ್ದಾಗ, 7 ದುಬಾರಿಯಾದ ಸುಗಂಧ ತೈಲವಿದ್ದ ಬಾಟಲಿಯನ್ನು* ಹಿಡಿದಿದ್ದ ಒಬ್ಬ ಸ್ತ್ರೀಯು ಆತನ ಹತ್ತಿರ ಬಂದಳು. ಆತನು ಊಟ ಮಾಡುತ್ತಿರುವಾಗ ಆ ತೈಲವನ್ನು ಆತನ ತಲೆಯ ಮೇಲೆ ಸುರಿಯಲು ಆರಂಭಿಸಿದಳು. 8 ಇದನ್ನು ನೋಡಿ ಶಿಷ್ಯರಿಗೆ ತುಂಬ ಕೋಪ ಬಂದು “ಇವಳು ತೈಲವನ್ನು ಯಾಕೆ ಈ ರೀತಿ ಹಾಳು ಮಾಡುತ್ತಿದ್ದಾಳೆ? 9 ಇದನ್ನು ತುಂಬ ಬೆಲೆಗೆ ಮಾರಿ, ಬಂದ ಹಣವನ್ನು ಬಡವರಿಗೆ ಕೊಡಬಹುದಿತ್ತಲ್ಲಾ” ಎಂದು ಮಾತಾಡಿಕೊಂಡರು. 10 ಯೇಸುವಿಗೆ ಇದು ಗೊತ್ತಾಗಿ ಹೀಗಂದನು: “ನೀವು ಯಾಕೆ ಅವಳ ಮನಸ್ಸಿಗೆ ನೋವು ಮಾಡುತ್ತಿದ್ದೀರಿ? ಅವಳು ನನಗೆ ಒಂದು ಒಳ್ಳೇ ಕೆಲಸವನ್ನು ಮಾಡಿದ್ದಾಳೆ. 11 ಯಾಕೆಂದರೆ ಬಡವರು ನಿಮ್ಮ ಜೊತೆ ಯಾವಾಗಲೂ ಇರುತ್ತಾರೆ. ಆದರೆ ನಾನು ಯಾವಾಗಲೂ ಇರುವುದಿಲ್ಲ. 12 ಇವಳು ನನ್ನ ಮೇಲೆ ಸುಗಂಧ ತೈಲವನ್ನು ಹಾಕಿದ್ದು ನನ್ನ ಹೂಣಿಡುವಿಕೆಗಾಗಿ ನನ್ನನ್ನು ಸಿದ್ಧ ಮಾಡಲಿಕ್ಕಾಗಿಯೇ. 13 ನಾನು ನಿಮಗೆ ನಿಜ ಹೇಳುತ್ತೇನೆ, ಲೋಕದಲ್ಲಿ ಈ ಸಿಹಿಸುದ್ದಿಯನ್ನು ಎಲ್ಲೆಲ್ಲಿ ಸಾರಲಾಗುವುದೋ ಅಲ್ಲೆಲ್ಲ ಇವಳ ನೆನಪಿಗಾಗಿ ಈಕೆ ಮಾಡಿದ ಈ ಕೆಲಸದ ಬಗ್ಗೆಯೂ ತಿಳಿಸಲಾಗುವುದು.”
14 ಆಮೇಲೆ 12 ಮಂದಿ ಶಿಷ್ಯರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು+ ಮುಖ್ಯ ಯಾಜಕರ ಹತ್ತಿರ ಹೋಗಿ 15 “ನಾನು ಅವನನ್ನು ಹಿಡಿದುಕೊಟ್ಟರೆ ನನಗೇನು ಕೊಡುತ್ತೀರಿ?” ಎಂದು ಕೇಳಿದನು. ಅವರು ಅವನಿಗೆ 30 ಬೆಳ್ಳಿ ನಾಣ್ಯಗಳನ್ನು ಕೊಡುವುದಾಗಿ ಮಾತು ಕೊಟ್ಟರು.+ 16 ಅವತ್ತಿನಿಂದ ಅವನು ಯೇಸುವನ್ನು ಹಿಡಿದುಕೊಡಲು ಒಳ್ಳೇ ಅವಕಾಶಕ್ಕಾಗಿ ಕಾಯುತ್ತಿದ್ದನು.
17 ಹುಳಿಯಿಲ್ಲದ ರೊಟ್ಟಿಗಳ ಹಬ್ಬದ ಮೊದಲನೇ ದಿನ ಶಿಷ್ಯರು ಯೇಸುವಿನ ಹತ್ತಿರ ಬಂದು “ಪಸ್ಕಹಬ್ಬದ ಊಟ ಮಾಡಲಿಕ್ಕಾಗಿ ನಾವು ಎಲ್ಲಿ ಸಿದ್ಧಮಾಡಬೇಕು?” ಎಂದು ಕೇಳಿದರು. 18 ಅದಕ್ಕೆ ಯೇಸು “ನೀವು ಪಟ್ಟಣದೊಳಗೆ ಇಂಥವನ ಹತ್ತಿರ ಹೋಗಿ ‘ನಮ್ಮ ಗುರು ಹೇಳಿದನು, ನನ್ನ ನೇಮಿತ ಸಮಯ ಹತ್ತಿರವಿದೆ. ನಿನ್ನ ಮನೆಯಲ್ಲಿ ನಾನು ನನ್ನ ಶಿಷ್ಯರ ಜೊತೆ ಪಸ್ಕಹಬ್ಬ ಮಾಡಬೇಕು’ ಎಂದು ಹೇಳಿ” ಅಂದನು. 19 ಶಿಷ್ಯರು ಯೇಸು ಹೇಳಿದ ಹಾಗೆಯೇ ಪಸ್ಕಹಬ್ಬಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿದರು.
20 ಸಂಜೆಯಾದಾಗ ಯೇಸು ತನ್ನ 12 ಮಂದಿ ಶಿಷ್ಯರ ಜೊತೆ ಊಟಮಾಡಲು ಕುಳಿತುಕೊಂಡನು. 21 ಆಗ ಆತನು “ನಾನು ನಿಮಗೆ ನಿಜ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು” ಅಂದನು. 22 ಅದನ್ನು ಕೇಳಿ ಶಿಷ್ಯರಿಗೆ ತುಂಬ ದುಃಖವಾಯಿತು. ಅವರಲ್ಲಿ ಪ್ರತಿಯೊಬ್ಬರು ಯೇಸುವಿಗೆ “ಗುರುವೇ, ಅದು ನಾನಲ್ಲ ತಾನೇ?” ಎಂದು ಕೇಳಲು ಶುರುಮಾಡಿದರು. 23 ಆಗ ಯೇಸು “ನನ್ನ ಜೊತೆ ಬಟ್ಟಲಿನಲ್ಲಿ ರೊಟ್ಟಿಯನ್ನು ಅದ್ದುವ ವ್ಯಕ್ತಿಯೇ ನನಗೆ ದ್ರೋಹ ಮಾಡುವವನು. 24 ಪವಿತ್ರ ಗ್ರಂಥದಲ್ಲಿ ಹೇಳಿರುವ ಪ್ರಕಾರ ಮನುಷ್ಯಕುಮಾರನು ಸಾಯಲಿದ್ದಾನೆ ನಿಜ. ಆದರೆ ಮನುಷ್ಯಕುಮಾರನಿಗೆ ದ್ರೋಹ ಮಾಡುವ ವ್ಯಕ್ತಿಯ ಗತಿಯನ್ನು ಏನೆಂದು ಹೇಳಲಿ! ಅವನು ಹುಟ್ಟದೇ ಇರುತ್ತಿದ್ದರೆ ಚೆನ್ನಾಗಿರುತ್ತಿತ್ತು” ಅಂದನು. 25 ಆಗ ಆತನಿಗೆ ಇನ್ನೇನು ದ್ರೋಹ ಮಾಡಲಿಕ್ಕಿದ್ದ ಯೂದನು “ರಬ್ಬಿ, ಅದು ನಾನಲ್ಲ ತಾನೇ?” ಎಂದು ಕೇಳಿದನು. ಆಗ ಯೇಸು, “ನೀನೇ ಹೇಳಿಬಿಟ್ಟೆ” ಅಂದನು.
26 ಶಿಷ್ಯರು ಊಟಮಾಡುತ್ತಿದ್ದಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ಪ್ರಾರ್ಥನೆ ಮಾಡಿ ಅದನ್ನು ಮುರಿದು ಅವರಿಗೆ ಕೊಡುತ್ತಾ “ತೆಗೆದುಕೊಳ್ಳಿರಿ, ತಿನ್ನಿರಿ. ಇದು ನನ್ನ ದೇಹವನ್ನು ಸೂಚಿಸುತ್ತದೆ” ಎಂದು ಹೇಳಿದನು. 27 ಆಮೇಲೆ ಪಾತ್ರೆ ತೆಗೆದುಕೊಂಡು ಪ್ರಾರ್ಥನೆಯಲ್ಲಿ ದೇವರಿಗೆ ಧನ್ಯವಾದ ಹೇಳಿ ಅದನ್ನು ಅವರಿಗೆ ಕೊಡುತ್ತಾ “ನೀವೆಲ್ಲರೂ ಇದನ್ನು ಕುಡಿಯಿರಿ. 28 ಇದು ನನ್ನ ರಕ್ತವನ್ನು ಸೂಚಿಸುತ್ತದೆ. ಈ ರಕ್ತ ದೇವರ ಒಪ್ಪಂದವನ್ನು ಶುರುಮಾಡುತ್ತದೆ ಮತ್ತು ಅನೇಕರ ಪಾಪಗಳ ಕ್ಷಮೆಗಾಗಿ ಇದು ಸುರಿಸಲ್ಪಡುವುದು.+ 29 ನಾನು ನನ್ನ ತಂದೆಯ ರಾಜ್ಯದಲ್ಲಿ ನಿಮ್ಮ ಜೊತೆ ಹೊಸ ದ್ರಾಕ್ಷಾಮದ್ಯವನ್ನು ಕುಡಿಯುವ ತನಕ ಇನ್ನೆಂದೂ ದ್ರಾಕ್ಷಾಮದ್ಯ ಕುಡಿಯುವುದೇ ಇಲ್ಲ ಎಂದು ನಿಮಗೆ ಹೇಳುತ್ತೇನೆ” ಅಂದನು. 30 ಆಮೇಲೆ ಅವರು ಸ್ತುತಿಗೀತೆಗಳನ್ನು ಹಾಡಿ ಆಲೀವ್ ಗುಡ್ಡಕ್ಕೆ ಹೋದರು.
31 ಅಲ್ಲಿ ಯೇಸು “ನೀವೆಲ್ಲರೂ ಈ ರಾತ್ರಿ ನನ್ನನ್ನು ಬಿಟ್ಟು ಓಡಿಹೋಗುವಿರಿ.* ಯಾಕೆಂದರೆ ‘ನಾನು ಕುರುಬನ ಮೇಲೆ ಆಕ್ರಮಣ ಮಾಡುವೆನು ಮತ್ತು ಕುರಿಗಳು ಚೆದರಿಹೋಗುವವು’ ಎಂದು ಬರೆಯಲಾಗಿದೆ. 32 ಆದರೆ ದೇವರು ನನ್ನನ್ನು ಜೀವಂತ ಎಬ್ಬಿಸಿದ ಮೇಲೆ ನಾನು ನಿಮಗಿಂತ ಮುಂಚೆ ಗಲಿಲಾಯಕ್ಕೆ ಹೋಗುವೆನು”+ ಅಂದನು. 33 ಆಗ ಪೇತ್ರನು “ಬೇರೆಲ್ಲರೂ ಬಿಟ್ಟು ಹೋದರೂ ನಾನು ಮಾತ್ರ ನಿನ್ನನ್ನು ಬಿಟ್ಟು ಹೋಗುವುದಿಲ್ಲ”* ಎಂದನು. 34 ಯೇಸು ಅವನಿಗೆ “ನಾನು ನಿನಗೆ ನಿಜ ಹೇಳುತ್ತೇನೆ, ಇವತ್ತು ರಾತ್ರಿ ಹುಂಜ ಕೂಗುವುದಕ್ಕಿಂತ ಮುಂಚೆ ನೀನು ನನ್ನ ಬಗ್ಗೆ, ಇವನು ಯಾರೆಂದು ಗೊತ್ತಿಲ್ಲ ಎಂದು ಮೂರು ಸಾರಿ ಹೇಳುವಿ” ಅಂದನು. 35 ಆಗ ಪೇತ್ರನು “ನಾನು ನಿನ್ನ ಜೊತೆ ಸಾಯಬೇಕಾಗಿ ಬಂದರೂ ನೀನು ಯಾರೆಂದು ಗೊತ್ತಿಲ್ಲ ಎಂದು ಹೇಳುವುದಿಲ್ಲ” ಎಂದು ಹೇಳಿದನು. ಬೇರೆ ಶಿಷ್ಯರು ಸಹ ಅದನ್ನೇ ಹೇಳಿದರು.
36 ಆಮೇಲೆ ಯೇಸು ಅವರ ಜೊತೆ ಗೆತ್ಸೇಮನೆ ಎಂಬ ಜಾಗಕ್ಕೆ ಬಂದನು. ಅಲ್ಲಿ ತನ್ನ ಶಿಷ್ಯರಿಗೆ “ನೀವು ಇಲ್ಲೇ ಕುಳಿತುಕೊಳ್ಳಿ, ನಾನು ಅಲ್ಲಿ ಹೋಗಿ ಪ್ರಾರ್ಥನೆಮಾಡಿ ಬರುತ್ತೇನೆ” ಅಂದನು. 37 ತನ್ನ ಜೊತೆ ಪೇತ್ರನನ್ನು ಮತ್ತು ಜೆಬೆದಾಯನ ಇಬ್ಬರು ಗಂಡುಮಕ್ಕಳನ್ನು ಕರೆದುಕೊಂಡು ಹೋದನು. ಆತನು ದುಃಖಿಸಲಾರಂಭಿಸಿದನು ಮತ್ತು ಆತನಿಗೆ ತುಂಬ ಚಿಂತೆ ಶುರುವಾಯಿತು. 38 ಆತನು ಅವರಿಗೆ “ನಾನು ಪ್ರಾಣ ಹೋಗುವಷ್ಟು ದುಃಖದಲ್ಲಿದ್ದೇನೆ. ನೀವು ಇಲ್ಲೇ ಇರಿ, ನನ್ನ ಜೊತೆ ಎಚ್ಚರವಾಗಿರಿ” ಅಂದನು. 39 ಆತನು ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಅಡ್ಡಬಿದ್ದು “ನನ್ನ ತಂದೆಯೇ, ಸಾಧ್ಯವಿದ್ದರೆ ಈ ಪಾತ್ರೆ+ ನನ್ನಿಂದ ದೂರ ಮಾಡು. ಆದರೂ ನನ್ನ ಇಷ್ಟ ಅಲ್ಲ, ನಿನ್ನ ಇಷ್ಟದಂತೆಯೇ ಆಗಲಿ” ಎಂದು ಪ್ರಾರ್ಥಿಸಿದನು.
40 ಆತನು ಶಿಷ್ಯರ ಹತ್ತಿರ ಬಂದಾಗ ಅವರು ನಿದ್ದೆ ಮಾಡುತ್ತಿರುವುದನ್ನು ನೋಡಿ ಪೇತ್ರನಿಗೆ, “ನಿಮಗೆ ಒಂದು ತಾಸಾದರೂ ನನ್ನ ಜೊತೆ ಎಚ್ಚರವಾಗಿರಲು ಆಗಲಿಲ್ಲವೇ? 41 ಪರೀಕ್ಷೆ ಬಂದಾಗ ನೀವು ಬಿದ್ದು ಹೋಗದೆ ಇರಬೇಕೆಂದರೆ+ ಯಾವಾಗಲೂ ಎಚ್ಚರವಾಗಿದ್ದು, ಪ್ರಾರ್ಥನೆ ಮಾಡುತ್ತಾ ಇರಬೇಕು. ನಿಮಗೆ ಮನಸ್ಸಿದೆ ನಿಜ, ಆದರೆ ದೇಹಕ್ಕೆ ಶಕ್ತಿ ಸಾಲದು” ಅಂದನು. 42 ಮತ್ತೆ ಎರಡನೇ ಸಲ ಹೋಗಿ “ತಂದೆಯೇ, ನಾನು ಈ ಪಾತ್ರೆಯಿಂದ ಕುಡಿಯಲೇಬೇಕು ಎಂದಿದ್ದರೆ ನಿನ್ನ ಇಷ್ಟದಂತೆಯೇ ಆಗಲಿ” ಎಂದು ಪ್ರಾರ್ಥಿಸಿದನು.+ 43 ಆತನು ಹಿಂದಿರುಗಿ ಬಂದು ನೋಡಿದಾಗ ಅವರು ನಿದ್ದೆ ಮಾಡುತ್ತಿದ್ದರು, ಯಾಕೆಂದರೆ ಅವರ ಕಣ್ಣುಗಳು ಭಾರವಾಗಿದ್ದವು. 44 ಯೇಸು ಅವರನ್ನು ಬಿಟ್ಟು ಮತ್ತೆ ಹೋಗಿ ಮೂರನೇ ಸಲ ಅದೇ ವಿಷಯದ ಬಗ್ಗೆ ಪ್ರಾರ್ಥನೆ ಮಾಡಿದನು. 45 ಆಮೇಲೆ ಆತನು ಶಿಷ್ಯರ ಹತ್ತಿರ ಬಂದು “ಇಂಥ ಸಮಯದಲ್ಲಿ ನೀವು ನಿದ್ದೆ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೀರಾ? ಮನುಷ್ಯಕುಮಾರನಿಗೆ ದ್ರೋಹಬಗೆದು ಪಾಪಿಗಳ ಕೈಗೆ ಹಿಡಿದುಕೊಡಲಾಗುವ ಸಮಯ ಹತ್ತಿರ ಬಂದಿದೆ. 46 ಎದ್ದೇಳಿ ಹೋಗೋಣ. ನನಗೆ ದ್ರೋಹಬಗೆಯುವವನು ಹತ್ತಿರ ಬಂದಿದ್ದಾನೆ” ಅಂದನು. 47 ಆತನು ಹೀಗೆ ಹೇಳುತ್ತಿರುವಾಗಲೇ ಆ 12 ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಅಲ್ಲಿಗೆ ಬಂದನು. ಮುಖ್ಯ ಯಾಜಕರು ಮತ್ತು ಹಿರಿಯರು ಕಳುಹಿಸಿದ ಜನರ ದೊಡ್ಡ ಗುಂಪು ಖಡ್ಗ ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಅವನ ಜೊತೆ ಬಂತು.
48 ಯೇಸುವಿಗೆ ದ್ರೋಹಬಗೆಯುವವನು ಅವರಿಗೆ, “ನಾನು ಯಾರಿಗೆ ಮುತ್ತು ಕೊಡುತ್ತೇನೋ ಅವನೇ ಆ ವ್ಯಕ್ತಿ. ಅವನನ್ನು ಬಂಧಿಸಿರಿ” ಎಂದು ಗುರುತು ಕೊಟ್ಟಿದ್ದನು. 49 ಅವನು ನೇರವಾಗಿ ಯೇಸುವಿನ ಹತ್ತಿರ ಹೋಗಿ “ರಬ್ಬೀ ನಮಸ್ಕಾರ!” ಎಂದು ಹೇಳಿ ಮೃದುವಾಗಿ ಮುತ್ತು ಕೊಟ್ಟನು. 50 ಆಗ ಯೇಸು ಅವನಿಗೆ “ನೀನು ಯಾವ ಉದ್ದೇಶದಿಂದ ಇಲ್ಲಿಗೆ ಬಂದಿದ್ದೀಯಾ?” ಎಂದು ಕೇಳಿದನು. ಆಗ ಜನರು ಮುಂದೆ ಬಂದು ಯೇಸುವನ್ನು ಬಂಧಿಸಿದರು. 51 ಆದರೆ ಯೇಸುವಿನ ಜೊತೆ ಇದ್ದವರಲ್ಲಿ ಒಬ್ಬನು ತನ್ನ ಖಡ್ಗವನ್ನು ತೆಗೆದು ಮಹಾ ಯಾಜಕನ ಸೇವಕನಿಗೆ ಹೊಡೆದು ಅವನ ಕಿವಿಯನ್ನು ಕತ್ತರಿಸಿದನು. 52 ಆಗ ಯೇಸು “ನಿನ್ನ ಖಡ್ಗವನ್ನು ಎಲ್ಲಿಂದ ತೆಗೆದೆಯೋ ಅಲ್ಲೇ ಇಡು. ಖಡ್ಗವನ್ನು ಹಿಡಿದವರೆಲ್ಲರೂ ಖಡ್ಗದಿಂದಲೇ ಸಾಯುವರು. 53 ಈ ಕ್ಷಣದಲ್ಲೇ ಸಾವಿರಾರು* ದೇವದೂತರನ್ನು ಕಳುಹಿಸಿಕೊಡುವಂತೆ ನನ್ನ ತಂದೆಯ ಹತ್ತಿರ ಕೇಳಲು ನನ್ನಿಂದ ಆಗುವುದಿಲ್ಲವೆಂದು ನೆನಸುತ್ತೀಯಾ?+ 54 ಆದರೆ ನಾನು ಹಾಗೆ ಮಾಡಿದರೆ ಇದೇ ರೀತಿ ನಡೆಯಬೇಕೆಂದು ಪವಿತ್ರ ಗ್ರಂಥದಲ್ಲಿ ಬರೆದಿರುವ ಮಾತು ನೆರವೇರುವುದು ಹೇಗೆ?” ಅಂದನು. 55 ನಂತರ ಯೇಸು ಆ ಜನರಿಗೆ “ಒಬ್ಬ ಕಳ್ಳನನ್ನು ಹಿಡಿಯುವ ಹಾಗೆ ಖಡ್ಗ ಮತ್ತು ದೊಣ್ಣೆಗಳನ್ನು ತೆಗೆದುಕೊಂಡು ನನ್ನನ್ನು ಹಿಡಿಯಲು ಬಂದಿದ್ದೀರಲ್ಲಾ? ನಾನು ಪ್ರತಿದಿನ ದೇವಾಲಯದಲ್ಲಿ ಕುಳಿತು ಕಲಿಸುತ್ತಿದ್ದಾಗ ನೀವು ನನ್ನನ್ನು ಹಿಡಿಯಲಿಲ್ಲ. 56 ಆದರೆ ಪ್ರವಾದಿಗಳು ಪವಿತ್ರ ಗ್ರಂಥದಲ್ಲಿ ಬರೆದಿರುವುದು ನೆರವೇರಲಿಕ್ಕಾಗಿಯೇ ಇದೆಲ್ಲ ನಡೆಯಿತು” ಅಂದನು. ಆಗ ಶಿಷ್ಯರೆಲ್ಲರೂ ಆತನನ್ನು ಬಿಟ್ಟು ಓಡಿಹೋದರು.
57 ಯೇಸುವನ್ನು ಬಂಧಿಸಿದವರು ಆತನನ್ನು ಮಹಾ ಯಾಜಕನಾದ ಕಾಯಫನ ಹತ್ತಿರ ಕರೆದುಕೊಂಡು ಹೋದರು. ಅಲ್ಲಿ ಪಂಡಿತರು ಮತ್ತು ಹಿರಿಯರು ಬಂದಿದ್ದರು. 58 ಆದರೆ ಪೇತ್ರನು ದೂರದಿಂದ ಆತನನ್ನು ಹಿಂಬಾಲಿಸುತ್ತಾ ಮಹಾ ಯಾಜಕನ ಮನೆಯ ಅಂಗಳದ ತನಕ ಬಂದನು. ಮುಂದೇನಾಗುತ್ತದೆಂದು ನೋಡಲು ಒಳಗೆ ಹೋಗಿ ಮನೆ ಆಳುಗಳ ಜೊತೆ ಕುಳಿತುಕೊಂಡನು.
59 ಆಗ ಮುಖ್ಯ ಯಾಜಕರು ಮತ್ತು ಹಿರೀಸಭೆಯವರು* ಯೇಸುವನ್ನು ಕೊಲ್ಲಲು ಆತನ ವಿರುದ್ಧ ಸುಳ್ಳು ಸಾಕ್ಷಿಗಾಗಿ ಹುಡುಕುತ್ತಿದ್ದರು. 60 ಅನೇಕ ಜನರು ಮುಂದೆ ಬಂದು ಸುಳ್ಳು ಸಾಕ್ಷಿ ಹೇಳಿದರೂ ಅವರಿಗೆ ಬಲವಾದ ಸಾಕ್ಷಿ ಸಿಗಲಿಲ್ಲ. ಕೊನೆಗೆ ಇಬ್ಬರು ಮುಂದೆ ಬಂದು 61 “‘ಈ ದೇವಾಲಯವನ್ನು ಕೆಡವಿ ಮೂರೇ ದಿನಗಳಲ್ಲಿ ಅದನ್ನು ಮತ್ತೆ ಕಟ್ಟಲು ನನ್ನಿಂದಾಗುತ್ತದೆ’ ಎಂದು ಇವನು ಹೇಳಿದ್ದ” ಅಂದರು.+ 62 ಆಗ ಮಹಾ ಯಾಜಕನು ಎದ್ದುನಿಂತು ಆತನಿಗೆ “ಇದರ ಬಗ್ಗೆ ನೀನು ಏನೂ ಹೇಳುವುದಿಲ್ಲವಾ? ನಿನ್ನ ವಿರುದ್ಧ ಇವರು ಸಾಕ್ಷಿ ಹೇಳುತ್ತಿರುವುದು ನಿನಗೆ ಕೇಳಿಸುವುದಿಲ್ಲವಾ?” ಎಂದು ಕೇಳಿದನು. 63 ಆದರೆ ಯೇಸು ಸುಮ್ಮನಿದ್ದನು. ಆಗ ಮಹಾ ಯಾಜಕನು ಆತನಿಗೆ “ಜೀವವಿರುವ ದೇವರಾಣೆ, ನೀನು ದೇವರ ಮಗನಾದ ಕ್ರಿಸ್ತನೊ ಎಂದು ನಮಗೆ ಹೇಳು” ಅಂದನು. 64 ಯೇಸು ಅವನಿಗೆ “ನೀನೇ ಹೇಳಿಬಿಟ್ಟೆ. ಆದರೆ ನಾನು ನಿಮಗೆ ಹೇಳುವುದೇನೆಂದರೆ, ಇನ್ನು ಮುಂದೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಕುಳಿತಿರುವುದನ್ನು ಮತ್ತು ಮೋಡಗಳ ಮೇಲೆ ಬರುವುದನ್ನು ನೀವು ನೋಡುವಿರಿ” ಎಂದನು. 65 ಇದನ್ನು ಕೇಳಿ ಮಹಾ ಯಾಜಕನು ತನ್ನ ಮೇಲಂಗಿಗಳನ್ನು ಹರಿದುಕೊಂಡು “ಇವನು ದೇವರ ವಿರುದ್ಧ ಮಾತಾಡಿದ್ದಾನೆ! ಇದಕ್ಕಿಂತ ಬೇರೆ ಸಾಕ್ಷಿ ನಮಗೆ ಬೇಕಾ? ಇವನು ದೇವರ ವಿರುದ್ಧ ಮಾತಾಡಿದ್ದನ್ನು ನೀವು ಕೇಳಿಸಿಕೊಂಡಿರಲ್ಲಾ. 66 ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದನು. ಅದಕ್ಕೆ ಅವರು “ಇವನಿಗೆ ಮರಣಶಿಕ್ಷೆ ಆಗಬೇಕು” ಅಂದರು. 67 ಆಮೇಲೆ ಅವರು ಆತನ ಮುಖದ ಮೇಲೆ ಉಗುಳಿದರು ಮತ್ತು ಆತನನ್ನು ಗುದ್ದಿದರು. ಇನ್ನು ಕೆಲವರು ಆತನ ಮುಖಕ್ಕೆ ಹೊಡೆದು 68 “ಏ ಕ್ರಿಸ್ತ, ನೀನು ಪ್ರವಾದಿಯಾಗಿದ್ದರೆ ನಿನಗೆ ಹೊಡೆದದ್ದು ಯಾರೆಂದು ಹೇಳು ನೋಡೋಣ?” ಅಂದರು.
69 ಪೇತ್ರನು ಹೊರಗೆ ಅಂಗಳದಲ್ಲಿ ಕುಳಿತಿದ್ದನು. ಒಬ್ಬ ಸೇವಕಿ ಅವನ ಹತ್ತಿರ ಬಂದು “ಗಲಿಲಾಯದ ಆ ಯೇಸುವಿನ ಜೊತೆ ನೀನೂ ಇದ್ದೆ” ಅಂದಳು. 70 ಆದರೆ ಅವನು ಅಲ್ಲಿದ್ದ ಜನರೆಲ್ಲರ ಮುಂದೆ ಅದನ್ನು ಒಪ್ಪಿಕೊಳ್ಳದೆ “ನೀನೇನು ಹೇಳುತ್ತಿದ್ದಿಯೋ ನನಗೆ ಗೊತ್ತಿಲ್ಲ” ಅಂದನು. 71 ಅವನು ಅಂಗಳದ ಮುಖ್ಯ ಬಾಗಿಲಿನ ಹತ್ತಿರ ಹೋದಾಗ ಇನ್ನೊಂದು ಹುಡುಗಿ ಅವನನ್ನು ನೋಡಿ ಅಲ್ಲಿದ್ದ ಜನರಿಗೆ “ನಜರೇತಿನ ಯೇಸುವಿನ ಜೊತೆ ಇವನೂ ಇದ್ದ” ಅಂದಳು. 72 ಅವನು ಮತ್ತೆ ಅದನ್ನು ಒಪ್ಪಿಕೊಳ್ಳದೆ ಆಣೆಯಿಟ್ಟು “ಅವನು ಯಾರೆಂದು ನನಗೆ ಗೊತ್ತಿಲ್ಲ” ಅಂದನು. 73 ಸ್ವಲ್ಪ ಸಮಯದ ನಂತರ ಸುತ್ತಲೂ ನಿಂತಿದ್ದವರು ಪೇತ್ರನ ಹತ್ತಿರ ಬಂದು “ಖಂಡಿತವಾಗಿಯೂ ನೀನೂ ಅವರಲ್ಲಿ ಒಬ್ಬನು. ಅದು ನೀನು ಮಾತಾಡುವ ರೀತಿಯಿಂದಲೇ* ಗೊತ್ತಾಗುತ್ತದೆ” ಎಂದು ಹೇಳಿದರು. 74 ಆಗ ಅವನು ತನ್ನನ್ನೇ ಶಪಿಸುತ್ತಾ ಆಣೆಯಿಡುತ್ತಾ “ಅವನು ಯಾರೆಂದು ನನಗೆ ಗೊತ್ತಿಲ್ಲ” ಅಂದನು. ತಕ್ಷಣ ಹುಂಜ ಕೂಗಿತು. 75 ಆಗ, “ಹುಂಜ ಕೂಗುವುದಕ್ಕಿಂತ ಮುಂಚೆ ನೀನು ನನ್ನ ಬಗ್ಗೆ, ಇವನು ಯಾರೆಂದು ಗೊತ್ತಿಲ್ಲ ಎಂದು ಮೂರು ಸಾರಿ ಹೇಳುವಿ”+ ಎಂದು ಯೇಸು ಹೇಳಿದ್ದನ್ನು ಪೇತ್ರನು ನೆನಪಿಸಿಕೊಂಡು ಹೊರಗೆ ಹೋಗಿ ತುಂಬ ದುಃಖದಿಂದ ಅತ್ತನು.