ಮತ್ತಾಯ
23 ಅನಂತರ ಯೇಸು ಜನರ ಗುಂಪುಗಳಿಗೂ ಶಿಷ್ಯರಿಗೂ ಹೀಗೆ ಹೇಳಿದನು: 2 “ಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಆಸನದಲ್ಲಿ ಕುಳಿತುಕೊಂಡಿದ್ದಾರೆ. 3 ಆದುದರಿಂದ ಅವರು ನಿಮಗೆ ಹೇಳುವ ಎಲ್ಲ ವಿಷಯಗಳನ್ನು ಕೈಗೊಂಡು ನಡೆಯಿರಿ; ಆದರೆ ಅವರ ಕೃತ್ಯಗಳ ಪ್ರಕಾರ ಮಾಡಬೇಡಿರಿ; ಏಕೆಂದರೆ ಅವರು ಹೇಳುತ್ತಾರೇ ಹೊರತು ಮಾಡುವುದಿಲ್ಲ. 4 ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲುಗಳ ಮೇಲೆ ಹೊರಿಸುತ್ತಾರೆ; ಆದರೆ ತಾವು ಮಾತ್ರ ಅವುಗಳನ್ನು ಬೆರಳಿನಿಂದ ಸರಿಸಲೂ ಬಯಸುವುದಿಲ್ಲ. 5 ಅವರು ತಾವು ಮಾಡುವ ಪ್ರತಿಯೊಂದು ಕೆಲಸವನ್ನು ಜನರು ನೋಡಬೇಕೆಂದು ಮಾಡುತ್ತಾರೆ; ಸಂರಕ್ಷಣೆಗಾಗಿ ಕಟ್ಟಿಕೊಳ್ಳುವ ಶಾಸ್ತ್ರವಚನಗಳುಳ್ಳ ಡಬ್ಬಿಗಳನ್ನು ಅವರು ಅಗಲವಾಗಿಸುತ್ತಾರೆ ಮತ್ತು ತಮ್ಮ ಉಡುಪಿನ ಅಂಚುಗಳನ್ನು ವಿಶಾಲಗೊಳಿಸುತ್ತಾರೆ. 6 ಅವರು ಸಂಧ್ಯಾ ಭೋಜನಗಳಲ್ಲಿ ಅತಿ ಶ್ರೇಷ್ಠ ಸ್ಥಾನವನ್ನೂ ಸಭಾಮಂದಿರಗಳಲ್ಲಿ ಮುಖ್ಯ ಪೀಠಗಳನ್ನೂ 7 ಮಾರುಕಟ್ಟೆಗಳಲ್ಲಿ ವಂದನೆಗಳನ್ನೂ ಜನರಿಂದ ರಬ್ಬಿಗಳು * ಎನಿಸಿಕೊಳ್ಳುವುದನ್ನೂ ಇಷ್ಟಪಡುತ್ತಾರೆ. 8 ಆದರೆ ನೀವು ರಬ್ಬಿಗಳು ಎನಿಸಿಕೊಳ್ಳಬೇಡಿರಿ; ಏಕೆಂದರೆ ಒಬ್ಬನೇ ನಿಮ್ಮ ಬೋಧಕನು, ನೀವೆಲ್ಲರೂ ಸಹೋದರರು. 9 ಇದಲ್ಲದೆ ಭೂಮಿಯಲ್ಲಿ ಯಾರನ್ನೂ ನಿಮ್ಮ ತಂದೆಯೆಂದು ಕರೆಯಬೇಡಿರಿ; ಏಕೆಂದರೆ ಸ್ವರ್ಗದಲ್ಲಿರುವ ಒಬ್ಬನೇ ನಿಮ್ಮ ತಂದೆಯಾಗಿದ್ದಾನೆ. 10 ‘ನಾಯಕರು’ ಎಂದು ಕರೆಸಿಕೊಳ್ಳಬೇಡಿರಿ; ಏಕೆಂದರೆ ಕ್ರಿಸ್ತನೊಬ್ಬನೇ ನಿಮ್ಮ ನಾಯಕನು. 11 ಆದರೆ ನಿಮ್ಮಲ್ಲಿ ಅತಿ ದೊಡ್ಡವನು ನಿಮ್ಮ ಸೇವಕನಾಗಿರಬೇಕು. 12 ತನ್ನನ್ನು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.
13 “ಕಪಟಿಗಳಾದ ಶಾಸ್ತ್ರಿಗಳೇ ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಮನುಷ್ಯರ ಮುಂದೆ ಸ್ವರ್ಗದ ರಾಜ್ಯವನ್ನು ಮುಚ್ಚಿಬಿಡುತ್ತೀರಿ; ನೀವು ಹೇಗೂ ಒಳಗೆ ಹೋಗುವುದಿಲ್ಲ, ಒಳಗೆ ಹೋಗುವ ಮಾರ್ಗದಲ್ಲಿರುವವರನ್ನೂ ಹೋಗಗೊಡಿಸುವುದಿಲ್ಲ. 14 * ——
15 “ಕಪಟಿಗಳಾದ ಶಾಸ್ತ್ರಿಗಳೇ ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ಒಬ್ಬನನ್ನು ಮತಾವಲಂಬಿಯಾಗಿಸಲು ನೀವು ಸಮುದ್ರವನ್ನೂ ಒಣನೆಲವನ್ನೂ ಸುತ್ತಿಕೊಂಡು ಬರುತ್ತೀರಿ; ಅವನು ಮತಾವಲಂಬಿಯಾದಾಗ ಅವನನ್ನು ನಿಮಗಿಂತ ಎರಡು ಪಟ್ಟು ಗೆಹೆನ್ನಕ್ಕೆ ಪಾತ್ರನನ್ನಾಗಿ ಮಾಡುತ್ತೀರಿ.
16 “ಕುರುಡ ಮಾರ್ಗದರ್ಶಕರೇ ನಿಮ್ಮ ಗತಿಯನ್ನು ಏನು ಹೇಳಲಿ! ನೀವು ‘ಯಾರಾದರೂ ದೇವಾಲಯದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ; ಆದರೆ ಯಾರಾದರೂ ದೇವಾಲಯದಲ್ಲಿರುವ ಚಿನ್ನದ ಮೇಲೆ ಆಣೆಯಿಟ್ಟರೆ ಅವನು ಅದನ್ನು ಪೂರೈಸುವ ಹಂಗಿನಲ್ಲಿದ್ದಾನೆ’ ಎಂದು ಹೇಳುತ್ತೀರಿ. 17 ಮೂರ್ಖರೇ, ಕುರುಡರೇ! ಯಾವುದು ದೊಡ್ಡದು, ಚಿನ್ನವೋ ಅಥವಾ ಚಿನ್ನವನ್ನು ಪವಿತ್ರೀಕರಿಸಿರುವ ದೇವಾಲಯವೊ? 18 ಇದಲ್ಲದೆ, ‘ಯಾರಾದರೂ ಯಜ್ಞವೇದಿಯ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ; ಆದರೆ ಯಾರಾದರೂ ಅದರ ಮೇಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟರೆ ಅವನು ಅದನ್ನು ಪೂರೈಸುವ ಹಂಗಿನಲ್ಲಿದ್ದಾನೆ’ ಎಂದು ನೀವು ಹೇಳುತ್ತೀರಿ. 19 ಕುರುಡರೇ! ಯಾವುದು ದೊಡ್ಡದು, ಕಾಣಿಕೆಯೋ ಅಥವಾ ಕಾಣಿಕೆಯನ್ನು ಪವಿತ್ರೀಕರಿಸುವ ಯಜ್ಞವೇದಿಯೊ? 20 ಆದುದರಿಂದ ಯಜ್ಞವೇದಿಯ ಮೇಲೆ ಆಣೆಯಿಡುವವನು ಅದರ ಮೇಲೆಯೂ ಅದರ ಮೇಲಿರುವ ಎಲ್ಲ ವಸ್ತುಗಳ ಮೇಲೆಯೂ ಆಣೆಯಿಡುವವನಾಗಿದ್ದಾನೆ; 21 ಮತ್ತು ದೇವಾಲಯದ ಮೇಲೆ ಆಣೆಯಿಡುವವನು ಅದರ ಮೇಲೆಯೂ ಅದರಲ್ಲಿ ವಾಸಮಾಡುತ್ತಿರುವಾತನ ಮೇಲೆಯೂ ಆಣೆಯಿಡುವವನಾಗಿದ್ದಾನೆ; 22 ಸ್ವರ್ಗದ ಮೇಲೆ ಆಣೆಯಿಡುವವನು ದೇವರ ಸಿಂಹಾಸನದ ಮೇಲೆಯೂ ಅದರಲ್ಲಿ ಕುಳಿತಿರುವಾತನ ಮೇಲೆಯೂ ಆಣೆಯಿಡುವವನಾಗಿದ್ದಾನೆ.
23 “ಕಪಟಿಗಳಾದ ಶಾಸ್ತ್ರಿಗಳೇ ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಪುದೀನ, ಸಬ್ಬಸ್ಸಿಗೆ, ಜೀರಿಗೆಗಳಲ್ಲಿ ಹತ್ತರಲ್ಲೊಂದು ಭಾಗವನ್ನು ಕೊಡುತ್ತೀರಿ; ಆದರೆ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ನ್ಯಾಯ, ಕರುಣೆ ಮತ್ತು ನಂಬಿಗಸ್ತಿಕೆಯಂಥ ಪ್ರಾಮುಖ್ಯ ವಿಷಯಗಳನ್ನು ನೀವು ಕಡೆಗಣಿಸಿದ್ದೀರಿ. ಈ ವಿಷಯಗಳನ್ನು ಮಾಡುವುದು ಕಡ್ಡಾಯವಾಗಿತ್ತು, ಅದೇ ಸಮಯದಲ್ಲಿ ಬೇರೆ ವಿಷಯಗಳನ್ನು ಕಡೆಗಣಿಸಬಾರದಾಗಿತ್ತು. 24 ಕುರುಡ ಮಾರ್ಗದರ್ಶಕರೇ, ನೀವು ಸೊಳ್ಳೆಯನ್ನು ಸೋಸುವವರೂ ಒಂಟೆಯನ್ನು ನುಂಗುವವರೂ ಆಗಿದ್ದೀರಿ.
25 “ಕಪಟಿಗಳಾದ ಶಾಸ್ತ್ರಿಗಳೇ ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಲೋಟ ಮತ್ತು ಬಟ್ಟಲಿನ ಹೊರಭಾಗವನ್ನು ಮಾತ್ರ ಶುಚಿಮಾಡುತ್ತೀರಿ, ಆದರೆ ಒಳಗೆ ಅವು ಸುಲಿಗೆಯಿಂದಲೂ ಅತಿರೇಕದಿಂದಲೂ ತುಂಬಿರುತ್ತವೆ. 26 ಕುರುಡನಾದ ಫರಿಸಾಯನೇ, ಮೊದಲು ಲೋಟ ಮತ್ತು ಬಟ್ಟಲಿನ ಒಳಭಾಗವನ್ನು ಶುಚಿಮಾಡು, ಆಗ ಅದರ ಹೊರಭಾಗವೂ ಶುಚಿಯಾಗುವುದು.
27 “ಕಪಟಿಗಳಾದ ಶಾಸ್ತ್ರಿಗಳೇ ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಸುಣ್ಣ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಅವು ಹೊರಗೆ ಬಹಳ ಸುಂದರವಾಗಿ ಕಾಣುತ್ತವೆ ಆದರೆ ಒಳಗೆ ಸತ್ತ ಮನುಷ್ಯರ ಎಲುಬುಗಳಿಂದಲೂ ಎಲ್ಲ ರೀತಿಯ ಅಶುದ್ಧತೆಯಿಂದಲೂ ತುಂಬಿರುತ್ತವೆ. 28 ಹಾಗೆಯೇ ನೀವು ಸಹ ಹೊರಗೆ ಮನುಷ್ಯರಿಗೆ ನೀತಿವಂತರಂತೆ ಕಾಣುತ್ತೀರಿ, ಆದರೆ ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ.
29 “ಕಪಟಿಗಳಾದ ಶಾಸ್ತ್ರಿಗಳೇ ಫರಿಸಾಯರೇ, ನಿಮ್ಮ ಗತಿಯನ್ನು ಏನು ಹೇಳಲಿ! ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ ನೀತಿವಂತರ ಸ್ಮರಣೆಯ ಸಮಾಧಿಗಳನ್ನು ಅಲಂಕರಿಸುತ್ತೀರಿ; 30 ಮತ್ತು ‘ನಾವು ನಮ್ಮ ಪೂರ್ವಜರ ದಿನಗಳಲ್ಲಿ ಇರುತ್ತಿದ್ದರೆ ಪ್ರವಾದಿಗಳ ರಕ್ತವನ್ನು ಸುರಿಸಿದ ಪಾಪದಲ್ಲಿ ಅವರೊಂದಿಗೆ ಪಾಲಿಗರಾಗುತ್ತಿರಲಿಲ್ಲ’ ಎಂದು ಹೇಳುತ್ತೀರಿ. 31 ಹೀಗೆ ನೀವು ಪ್ರವಾದಿಗಳನ್ನು ಕೊಂದವರ ಮಕ್ಕಳಾಗಿದ್ದೀರಿ ಎಂಬುದಕ್ಕೆ ನಿಮಗೆ ವಿರುದ್ಧವಾಗಿ ನೀವೇ ಸಾಕ್ಷಿಹೇಳಿಕೊಳ್ಳುತ್ತೀರಿ. 32 ಹೀಗಿರುವುದರಿಂದ, ನಿಮ್ಮ ಪೂರ್ವಜರ ಅಪರಾಧದ ವ್ಯಾಪ್ತಿಯನ್ನು ನೀವು ಪೂರ್ಣಗೊಳಿಸಿರಿ.
33 “ಹಾವುಗಳೇ, ವಿಷಸರ್ಪಗಳ ಪೀಳಿಗೆಯವರೇ, ಗೆಹೆನ್ನದ ನ್ಯಾಯತೀರ್ಪಿನಿಂದ ನೀವು ಹೇಗೆ ತಪ್ಪಿಸಿಕೊಳ್ಳುವಿರಿ? 34 ಈ ಕಾರಣದಿಂದಲೇ ನಾನು ನಿಮ್ಮ ಬಳಿಗೆ ಪ್ರವಾದಿಗಳನ್ನೂ ವಿವೇಕಿಗಳನ್ನೂ ಸಾರ್ವಜನಿಕ ಉಪದೇಶಕರನ್ನೂ ಕಳುಹಿಸುತ್ತಿದ್ದೇನೆ. ಅವರಲ್ಲಿ ಕೆಲವರನ್ನು ನೀವು ಕೊಲ್ಲುವಿರಿ, ಶೂಲಕ್ಕೇರಿಸುವಿರಿ; ಇನ್ನೂ ಕೆಲವರನ್ನು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಊರಿನಿಂದ ಊರಿಗೆ ಅಟ್ಟುವಿರಿ. 35 ಹೀಗೆ ನೀತಿವಂತನಾದ ಹೇಬೆಲನ ರಕ್ತದಿಂದ ಆರಂಭಿಸಿ ದೇವಾಲಯಕ್ಕೂ ಯಜ್ಞವೇದಿಗೂ ನಡುವೆ ನೀವು ಕೊಂದುಹಾಕಿದ ಬರಕೀಯನ ಮಗನಾದ ಜಕರೀಯನ ರಕ್ತದ ವರೆಗೂ ಭೂಮಿಯ ಮೇಲೆ ಸುರಿಸಲ್ಪಟ್ಟ ಎಲ್ಲ ನೀತಿವಂತರ ರಕ್ತಾಪರಾಧವು ನಿಮ್ಮ ಮೇಲೆ ಬರುವುದು. 36 ಇದೆಲ್ಲವೂ ಈ ಸಂತತಿಯ ಮೇಲೆ ಬರುವುದು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.
37 “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಲ್ಪಟ್ಟವರನ್ನು ಕಲ್ಲೆಸೆದು ಕೊಲ್ಲುವವಳೇ—ಕೋಳಿಯು ತನ್ನ ರೆಕ್ಕೆಗಳ ಕೆಳಗೆ ತನ್ನ ಮರಿಗಳನ್ನು ಒಟ್ಟುಗೂಡಿಸಿಕೊಳ್ಳುವಂತೆ ನಾನು ನಿನ್ನ ಮಕ್ಕಳನ್ನು ಎಷ್ಟು ಬಾರಿ ಒಟ್ಟುಗೂಡಿಸಿಕೊಳ್ಳಲು ಬಯಸಿದೆ! ಆದರೆ ನೀವು ಅದನ್ನು ಇಷ್ಟಪಡಲಿಲ್ಲ. 38 ನೋಡಿರಿ, ನಿಮ್ಮ ಆಲಯವು ನಿಮಗೆ ಬರಿದಾಗಿ ಬಿಡುತ್ತದೆ. 39 ಇಂದಿನಿಂದ ‘ಯೆಹೋವನ ನಾಮದಲ್ಲಿ ಬರುವವನು ಆಶೀರ್ವದಿತನು!’ ಎಂದು ನೀವು ಹೇಳುವ ತನಕ ನೀವು ನನ್ನನ್ನು ನೋಡುವುದೇ ಇಲ್ಲ ಎಂದು ನಿಮಗೆ ಹೇಳುತ್ತೇನೆ.”