ಕೊಲೊಸ್ಸೆ
3 ಆದಕಾರಣ ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವುದಾದರೆ ಮೇಲಿನವುಗಳನ್ನು ಹುಡುಕುತ್ತಾ ಇರಿ; ಅಲ್ಲಿ ಕ್ರಿಸ್ತನು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾನೆ. 2 ನೀವು ಭೂಸಂಬಂಧವಾದವುಗಳ ಮೇಲೆ ಅಲ್ಲ, ಮೇಲಿನವುಗಳ ಮೇಲೆ ಮನಸ್ಸಿಡಿರಿ. 3 ಏಕೆಂದರೆ ನೀವು ಸತ್ತಿರಿ ಮತ್ತು ನಿಮ್ಮ ಜೀವವು ಕ್ರಿಸ್ತನೊಂದಿಗೆ ದೇವರ ಚಿತ್ತಕ್ಕನುಸಾರ ಮರೆಯಾಗಿಡಲ್ಪಟ್ಟಿದೆ. 4 ನಮ್ಮ ಜೀವವಾಗಿರುವ ಕ್ರಿಸ್ತನು ಪ್ರಕಟಪಡಿಸಲ್ಪಡುವಾಗ ನೀವು ಸಹ ಅವನೊಂದಿಗೆ ಮಹಿಮೆಯಲ್ಲಿ ಪ್ರಕಟಪಡಿಸಲ್ಪಡುವಿರಿ.
5 ಆದುದರಿಂದ ಜಾರತ್ವ, ಅಶುದ್ಧತೆ, ಕಾಮಾಭಿಲಾಷೆ, ಹಾನಿಕಾರಕ ಆಶೆ ಮತ್ತು ವಿಗ್ರಹಾರಾಧನೆಯಾಗಿರುವ ಲೋಭ ಇವುಗಳಿಗೆ ಸಂಬಂಧಿಸಿದ ಭೂಸಂಬಂಧವಾದ ನಿಮ್ಮ ದೈಹಿಕ ಅಂಗಗಳನ್ನು ಸಾಯಿಸಿರಿ. 6 ಇವುಗಳ ನಿಮಿತ್ತ ದೇವರ ಕ್ರೋಧವು ಬರುತ್ತದೆ. 7 ಪೂರ್ವದಲ್ಲಿ ನೀವು ಸಹ ಈ ವಿಷಯಗಳಲ್ಲಿ ಜೀವಿಸುತ್ತಿದ್ದಾಗ ಅವುಗಳಲ್ಲಿಯೇ ನಡೆಯುತ್ತಿದ್ದಿರಿ. 8 ಈಗಲಾದರೋ ಕ್ರೋಧ, ಕೋಪ, ಕೆಟ್ಟತನ, ನಿಂದಾತ್ಮಕ ಮಾತು ಮತ್ತು ನಿಮ್ಮ ಬಾಯಿಂದ ಹೊರಡುವ ಅಶ್ಲೀಲವಾದ ಮಾತು ಇವುಗಳೆಲ್ಲವನ್ನು ನಿಮ್ಮಿಂದ ತೊಲಗಿಸಿಬಿಡಿರಿ. 9 ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ. ಹಳೆಯ ವ್ಯಕ್ತಿತ್ವವನ್ನು ಅದರ ಅಭ್ಯಾಸಗಳೊಂದಿಗೆ ತೆಗೆದುಹಾಕಿರಿ 10 ಮತ್ತು ನೂತನ ವ್ಯಕ್ತಿತ್ವವನ್ನು ಧರಿಸಿಕೊಳ್ಳಿರಿ; ಈ ವ್ಯಕ್ತಿತ್ವವು ಇದನ್ನು ಸೃಷ್ಟಿಸಿದಾತನ ಸ್ವರೂಪಕ್ಕನುಸಾರ ನಿಷ್ಕೃಷ್ಟ ಜ್ಞಾನದ ಮೂಲಕ ನೂತನಗೊಳಿಸಲ್ಪಡುತ್ತಿದೆ. 11 ಇದರಲ್ಲಿ ಗ್ರೀಕನು ಯೆಹೂದ್ಯನು, ಸುನ್ನತಿಯಾದವನು ಸುನ್ನತಿಯಿಲ್ಲದವನು, ಪರದೇಶೀಯನು, ಅನಾಗರಿಕನು, * ದಾಸನು, ಸ್ವತಂತ್ರನು ಎಂಬ ಭೇದವಿಲ್ಲ; ಆದರೆ ಕ್ರಿಸ್ತನು ಎಲ್ಲದರಲ್ಲಿಯೂ ಎಲ್ಲವೂ ಆಗಿದ್ದಾನೆ.
12 ಆದುದರಿಂದ ದೇವರಿಂದ ಆರಿಸಿಕೊಳ್ಳಲ್ಪಟ್ಟ ಪವಿತ್ರರೂ ಪ್ರಿಯರೂ ಆಗಿರುವ ನೀವು ಸಹಾನುಭೂತಿಯ ಕೋಮಲ ಮಮತೆಯನ್ನೂ ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ. 13 ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ. ಯೆಹೋವನು ನಿಮ್ಮನ್ನು ಉದಾರವಾಗಿ ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ. 14 ಇದೆಲ್ಲಾದರ ಜೊತೆಗೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಏಕೆಂದರೆ ಇದು ಐಕ್ಯದ ಪರಿಪೂರ್ಣ ಬಂಧವಾಗಿದೆ.
15 ಮಾತ್ರವಲ್ಲದೆ, ಕ್ರಿಸ್ತನ ಶಾಂತಿಯು ನಿಮ್ಮ ಹೃದಯಗಳಲ್ಲಿ ಆಳಲಿ; ಏಕೆಂದರೆ ನೀವು ಅದಕ್ಕಾಗಿಯೇ ಒಂದೇ ದೇಹವಾಗಿರುವಂತೆ ಕರೆಯಲ್ಪಟ್ಟಿರಿ. ಮತ್ತು ನೀವು ಕೃತಜ್ಞತಾಭಾವದವರೆಂದು ತೋರಿಸಿರಿ. 16 ಕ್ರಿಸ್ತನ ವಾಕ್ಯವು ಸಕಲ ವಿವೇಕದೊಂದಿಗೆ ನಿಮ್ಮಲ್ಲಿ ಸಮೃದ್ಧವಾಗಿ ನೆಲೆಸಿರಲಿ. ಕೀರ್ತನೆಗಳಿಂದಲೂ ದೇವರ ಸ್ತುತಿಗೀತೆಗಳಿಂದಲೂ ಸೌಜನ್ಯಭರಿತವಾದ ಆಧ್ಯಾತ್ಮಿಕ ಹಾಡುಗಳಿಂದಲೂ ಒಬ್ಬರಿಗೊಬ್ಬರು ಬೋಧಿಸುತ್ತಾ ಬುದ್ಧಿಹೇಳುತ್ತಾ ನಿಮ್ಮ ಹೃದಯಗಳಲ್ಲಿ ಯೆಹೋವನಿಗೆ ಗಾನಮಾಡಿರಿ. 17 ನೀವು ಮಾತಿನಲ್ಲಿ ಅಥವಾ ಕ್ರಿಯೆಯಲ್ಲಿ ಏನೇ ಮಾಡಿದರೂ ಎಲ್ಲವನ್ನೂ ಕರ್ತನಾದ ಯೇಸುವಿನ ಹೆಸರಿನಲ್ಲಿಯೇ ಮಾಡುತ್ತಾ ಅವನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ.
18 ಹೆಂಡತಿಯರೇ, ನಿಮ್ಮನಿಮ್ಮ ಗಂಡಂದಿರಿಗೆ ಅಧೀನರಾಗಿರಿ; ಇದು ಕರ್ತನ ದೃಷ್ಟಿಯಲ್ಲಿ ಯೋಗ್ಯವಾದದ್ದಾಗಿದೆ. 19 ಗಂಡಂದಿರೇ, ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುತ್ತಾ ಇರಿ; ಅವರ ಮೇಲೆ ಕಟುವಾಗಿ ಕೋಪಿಸಿಕೊಳ್ಳಬೇಡಿರಿ. 20 ಮಕ್ಕಳೇ, ಎಲ್ಲ ವಿಷಯಗಳಲ್ಲಿ ನಿಮ್ಮ ಹೆತ್ತವರಿಗೆ ವಿಧೇಯರಾಗಿರಿ; ಇದು ಕರ್ತನ ದೃಷ್ಟಿಯಲ್ಲಿ ಬಹು ಮೆಚ್ಚಿಕೆಯಾದದ್ದಾಗಿದೆ. 21 ತಂದೆಗಳೇ, ನಿಮ್ಮ ಮಕ್ಕಳು ಮನಗುಂದಿಹೋಗದಂತೆ ಅವರನ್ನು ಕೆಣಕುತ್ತಾ ಇರಬೇಡಿ. 22 ದಾಸರೇ, ಶಾರೀರಿಕ ರೀತಿಯಲ್ಲಿ ನಿಮಗೆ ಯಜಮಾನರಾಗಿರುವವರಿಗೆ ಎಲ್ಲ ವಿಷಯಗಳಲ್ಲಿ ವಿಧೇಯರಾಗಿರಿ; ಮನುಷ್ಯರನ್ನು ಮೆಚ್ಚಿಸುವವರಂತೆ ಕಣ್ಣೆದುರಿಗೆ ಮಾತ್ರ ಸೇವೆಮಾಡುವವರಾಗಿರದೆ ಯಥಾರ್ಥ ಹೃದಯದಿಂದಲೂ ಯೆಹೋವನ ಭಯದಿಂದಲೂ ಸೇವೆಮಾಡಿರಿ. 23 ನೀವು ಏನೇ ಮಾಡುವುದಾದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಯೆಹೋವನಿಗೋಸ್ಕರವೇ ಎಂದು ಪೂರ್ಣ ಪ್ರಾಣದಿಂದ ಮಾಡುವವರಾಗಿರಿ. 24 ಏಕೆಂದರೆ ನೀವು ಬಾಧ್ಯತೆಯೆಂಬ ತಕ್ಕ ಫಲವನ್ನು ಯೆಹೋವನಿಂದಲೇ ಪಡೆದುಕೊಳ್ಳುವಿರಿ ಎಂಬುದು ನಿಮಗೆ ತಿಳಿದಿದೆ. ಯಜಮಾನನಾದ ಕ್ರಿಸ್ತನಿಗೆ ದಾಸರಂತೆ ಸೇವೆಮಾಡಿರಿ. 25 ತಪ್ಪಾದದ್ದನ್ನು ಮಾಡುವವನು ತಾನು ಮಾಡಿದ ತಪ್ಪಿಗೆ ತಕ್ಕ ಪ್ರತಿಫಲವನ್ನು ಹೊಂದುವನು ಎಂಬುದಂತೂ ಖಂಡಿತ ಮತ್ತು ಇದರಲ್ಲಿ ಯಾವುದೇ ಪಕ್ಷಪಾತವಿಲ್ಲ.