ಮತ್ತಾಯ
10 ಅವನು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ ದೆವ್ವಗಳನ್ನು ಬಿಡಿಸುವುದಕ್ಕೂ ಎಲ್ಲ ರೀತಿಯ ರೋಗಗಳನ್ನು ಮತ್ತು ಎಲ್ಲ ರೀತಿಯ ದೇಹದೌರ್ಬಲ್ಯಗಳನ್ನು ಗುಣಪಡಿಸುವುದಕ್ಕೂ ಅಧಿಕಾರವನ್ನು ಕೊಟ್ಟನು.
2 ಆ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಹೀಗಿವೆ: ಮೊದಲನೆಯವನು ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ತಮ್ಮನಾದ ಅಂದ್ರೆಯ, ಜೆಬೆದಾಯನ ಮಗನಾದ ಯಾಕೋಬ, ಅವನ ತಮ್ಮನಾದ ಯೋಹಾನ, 3 ಫಿಲಿಪ್ಪ, ಬಾರ್ತೊಲೊಮಾಯ, ತೋಮ, ತೆರಿಗೆ ವಸೂಲಿಗಾರನಾಗಿದ್ದ ಮತ್ತಾಯ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, 4 ಕಾನಾನ್ಯನಾದ ಸೀಮೋನ ಮತ್ತು ಸಮಯಾನಂತರ ಯೇಸುವಿಗೆ ದ್ರೋಹಮಾಡಿದ ಇಸ್ಕರಿಯೋತ ಯೂದ.
5 ಈ ಹನ್ನೆರಡು ಮಂದಿಗೆ ಯೇಸು ಈ ಆಜ್ಞೆಗಳನ್ನು ಕೊಟ್ಟು ಕಳುಹಿಸಿದನು: “ಅನ್ಯಜನಾಂಗಗಳ ಬಳಿಗೆ ಹೋಗಬೇಡಿರಿ; ಸಮಾರ್ಯದವರ ಪಟ್ಟಣವನ್ನು ಪ್ರವೇಶಿಸಬೇಡಿರಿ; 6 ಅದಕ್ಕೆ ಬದಲಾಗಿ ಇಸ್ರಾಯೇಲ್ ಮನೆತನದ ತಪ್ಪಿಹೋದ ಕುರಿಗಳ ಬಳಿಗೇ ಹೋಗಿರಿ. 7 ನೀವು ಹೋಗುವಾಗ, ‘ಸ್ವರ್ಗದ ರಾಜ್ಯವು ಸಮೀಪಿಸಿದೆ’ ಎಂದು ಸಾರಿಹೇಳಿರಿ. 8 ರೋಗಿಗಳನ್ನು ಗುಣಪಡಿಸಿರಿ, ಸತ್ತವರನ್ನು ಎಬ್ಬಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ. ನೀವು ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ. 9 ನಿಮ್ಮ ನಡುಪಟ್ಟಿಯ ಜೇಬುಗಳಲ್ಲಿ ಚಿನ್ನ ಅಥವಾ ಬೆಳ್ಳಿ ಅಥವಾ ತಾಮ್ರವನ್ನಾಗಲಿ 10 ಅಥವಾ ಪ್ರಯಾಣಕ್ಕಾಗಿ ಆಹಾರದ ಚೀಲವನ್ನಾಗಲಿ ಎರಡು ಒಳಉಡುಪುಗಳನ್ನಾಗಲಿ ಕೆರಗಳನ್ನಾಗಲಿ ಕೋಲನ್ನಾಗಲಿ ಕೊಂಡೊಯ್ಯಬೇಡಿರಿ; ಏಕೆಂದರೆ ಕೆಲಸಗಾರನು ತನ್ನ ಕೂಲಿಗೆ ಅರ್ಹನು.
11 “ನೀವು ಯಾವುದೇ ಊರನ್ನು ಅಥವಾ ಹಳ್ಳಿಯನ್ನು ಪ್ರವೇಶಿಸಿದಾಗ, ಅಲ್ಲಿ ಯೋಗ್ಯರು ಯಾರೆಂದು ಹುಡುಕಿರಿ ಮತ್ತು ಅಲ್ಲಿಂದ ಹೊರಡುವ ತನಕ ಅಲ್ಲಿಯೇ ಉಳಿಯಿರಿ. 12 ನೀವು ಒಂದು ಮನೆಯೊಳಗೆ ಹೋಗುವಾಗ ಮನೆಯವರನ್ನು ವಂದಿಸಿರಿ; 13 ಆ ಮನೆಯು ಯೋಗ್ಯವಾಗಿರುವಲ್ಲಿ ನೀವು ಹಾರೈಸುವ ಶಾಂತಿಯು ಅದರ ಮೇಲೆ ಬರಲಿ; ಅದು ಯೋಗ್ಯವಲ್ಲದಿದ್ದರೆ ನಿಮ್ಮ ಶಾಂತಿಯು ನಿಮಗೇ ಹಿಂದಿರುಗಲಿ. 14 ಯಾರಾದರೂ ನಿಮ್ಮನ್ನು ಬರಮಾಡಿಕೊಳ್ಳದಿದ್ದರೆ ಅಥವಾ ನಿಮ್ಮ ಮಾತುಗಳಿಗೆ ಕಿವಿಗೊಡದಿದ್ದರೆ ಆ ಮನೆಯನ್ನು ಅಥವಾ ಆ ಊರನ್ನು ಬಿಟ್ಟುಹೋಗುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ. 15 ನ್ಯಾಯತೀರ್ಪಿನ ದಿನದಲ್ಲಿ ಆ ಪಟ್ಟಣಕ್ಕಿಂತ ಸೊದೋಮ್ ಮತ್ತು ಗೊಮೋರ ಪ್ರದೇಶದ ಗತಿಯು ಹೆಚ್ಚು ಸಹನೀಯವಾಗಿರುವುದು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.
16 “ನೋಡಿರಿ! ತೋಳಗಳ ಮಧ್ಯೆ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತಿದ್ದೇನೆ; ಆದುದರಿಂದ ನೀವು ಹಾವುಗಳಂತೆ ಜಾಗರೂಕರೂ, ಆದರೆ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿದ್ದೀರಿ ಎಂಬುದನ್ನು ತೋರಿಸಿಕೊಡಿರಿ. 17 ಜನರ ವಿಷಯದಲ್ಲಿ ಎಚ್ಚರಿಕೆಯಿಂದಿರಿ; ಅವರು ನಿಮ್ಮನ್ನು ಸ್ಥಳಿಕ ನ್ಯಾಯಾಲಯಗಳಿಗೆ ಒಪ್ಪಿಸುವರು ಮತ್ತು ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು. 18 ನನ್ನ ನಿಮಿತ್ತವಾಗಿ ನೀವು ರಾಜ್ಯಪಾಲರ ಮುಂದೆಯೂ ಅರಸರ ಮುಂದೆಯೂ ಎಳೆದೊಯ್ಯಲ್ಪಡುವಿರಿ; ಇದು ಅವರಿಗೂ ಅನ್ಯಜನಾಂಗಗಳಿಗೂ ಸಾಕ್ಷಿಗಾಗಿರುವುದು. 19 ಆದರೂ ಅವರು ನಿಮ್ಮನ್ನು ಒಪ್ಪಿಸಿಕೊಡುವಾಗ ನೀವು ಹೇಗೆ ಮಾತಾಡಬೇಕು, ಏನು ಮಾತಾಡಬೇಕು ಎಂದು ಚಿಂತಿಸಬೇಡಿರಿ; ನೀವು ಏನು ಮಾತಾಡಬೇಕು ಎಂಬುದು ಆ ಗಳಿಗೆಯಲ್ಲಿ ನಿಮಗೆ ತಿಳಿಯುವುದು; 20 ಏಕೆಂದರೆ ಮಾತಾಡುವವರು ನೀವು ಮಾತ್ರವೇ ಅಲ್ಲ, ನಿಮ್ಮ ತಂದೆಯ ಪವಿತ್ರಾತ್ಮವು ನಿಮ್ಮ ಮೂಲಕ ಮಾತಾಡುತ್ತದೆ. 21 ಇದಲ್ಲದೆ ಸಹೋದರನು ಸಹೋದರನನ್ನೂ ತಂದೆಯು ತನ್ನ ಮಗನನ್ನೂ ಮರಣಕ್ಕೆ ಒಪ್ಪಿಸುವರು; ಮಕ್ಕಳು ಹೆತ್ತವರ ವಿರುದ್ಧವಾಗಿ ಎದ್ದು ಅವರನ್ನು ಕೊಲ್ಲಿಸುವರು. 22 ನನ್ನ ಹೆಸರಿನ ನಿಮಿತ್ತ ನೀವು ಎಲ್ಲ ಜನರ ದ್ವೇಷಕ್ಕೆ ಗುರಿಯಾಗುವಿರಿ; ಆದರೆ ಕಡೇ ವರೆಗೆ ತಾಳಿಕೊಂಡಿರುವವನೇ ರಕ್ಷಿಸಲ್ಪಡುವನು. 23 ಅವರು ಒಂದು ಊರಿನಲ್ಲಿ ನಿಮ್ಮನ್ನು ಹಿಂಸೆಪಡಿಸಿದರೆ ಇನ್ನೊಂದು ಊರಿಗೆ ಓಡಿಹೋಗಿರಿ; ಮನುಷ್ಯಕುಮಾರನು ಬರುವ ತನಕ ನೀವು ಇಸ್ರಾಯೇಲಿನ ಊರುಗಳ ಸಂಚಾರವನ್ನು ಪೂರ್ಣಗೊಳಿಸಿರುವುದಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.
24 “ಬೋಧಕನಿಗಿಂತ ಶಿಷ್ಯನು ದೊಡ್ಡವನಲ್ಲ ಅಥವಾ ಯಜಮಾನನಿಗಿಂತ ಆಳು ದೊಡ್ಡವನಲ್ಲ. 25 ತನ್ನ ಬೋಧಕನಂತೆ ಆಗುವುದು ಶಿಷ್ಯನಿಗೆ ಸಾಕು ಮತ್ತು ತನ್ನ ಯಜಮಾನನಂತೆ ಆಗುವುದು ಆಳಿಗೆ ಸಾಕು. ಮನೆಯವನನ್ನೇ ಜನರು ಬೆಲ್ಜೆಬೂಲನೆಂದು ಕರೆದಿರುವುದಾದರೆ ಅವನ ಮನೆಯವರನ್ನು ಇನ್ನೂ ಎಷ್ಟು ಹೆಚ್ಚಾದ ರೀತಿಯಲ್ಲಿ ಹಾಗೆ ಕರೆಯುವರು? 26 ಆದುದರಿಂದ ಅವರಿಗೆ ಭಯಪಡಬೇಡಿರಿ; ಮುಚ್ಚಲ್ಪಟ್ಟಿರುವ ಯಾವುದೂ ತೆರೆಯಲ್ಪಡದೆ ಇರುವುದಿಲ್ಲ ಮತ್ತು ಬಯಲಿಗೆ ಬರದಂಥ ಯಾವುದೇ ರಹಸ್ಯವೂ ಇಲ್ಲ. 27 ನಾನು ನಿಮಗೆ ಕತ್ತಲೆಯಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಹೇಳಿರಿ; ನೀವು ಕೇಳಿಸಿಕೊಳ್ಳುವ ಪಿಸುಮಾತನ್ನು ಮನೆಯ ಮಾಳಿಗೆಗಳಿಂದ ಸಾರಿರಿ. 28 ದೇಹವನ್ನು ಕೊಂದು ಪ್ರಾಣವನ್ನು * ಕೊಲ್ಲಲಾರದವರಿಗೆ ಭಯಪಡಬೇಡಿರಿ; ಪ್ರಾಣವನ್ನೂ ದೇಹವನ್ನೂ ಗೆಹೆನ್ನದಲ್ಲಿ ನಾಶಮಾಡಬಲ್ಲಾತನಿಗೆ ಭಯಪಡಿರಿ. 29 ಸಣ್ಣ ಮೌಲ್ಯವಿರುವ ಒಂದು ಕಾಸಿಗೆ ಎರಡು ಗುಬ್ಬಿಗಳು ಮಾರಲ್ಪಡುವುದಿಲ್ಲವೇ? ಹಾಗಿದ್ದರೂ ನಿಮ್ಮ ತಂದೆಗೆ ತಿಳಿಯದೆ ಅವುಗಳಲ್ಲಿ ಒಂದೂ ನೆಲಕ್ಕೆ ಬೀಳುವುದಿಲ್ಲ. 30 ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. 31 ಆದುದರಿಂದ ಭಯಪಡಬೇಡಿರಿ; ನೀವು ಅನೇಕ ಗುಬ್ಬಿಗಳಿಗಿಂತ ಹೆಚ್ಚು ಬೆಲೆಯುಳ್ಳವರು.
32 “ಜನರ ಮುಂದೆ ನನ್ನೊಂದಿಗಿದ್ದೇನೆಂದು ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು ನಾನು ಸಹ ಅವನೊಂದಿಗಿದ್ದೇನೆಂದು ಸ್ವರ್ಗದಲ್ಲಿರುವ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು; 33 ಆದರೆ ಯಾವನು ಜನರ ಮುಂದೆ ನನ್ನನ್ನು ಅಲ್ಲಗಳೆಯುತ್ತಾನೋ ಅವನನ್ನು ನಾನು ಸಹ ಸ್ವರ್ಗದಲ್ಲಿರುವ ನನ್ನ ತಂದೆಯ ಮುಂದೆ ಅಲ್ಲಗಳೆಯುವೆನು. 34 ನಾನು ಭೂಮಿಯ ಮೇಲೆ ಶಾಂತಿಯನ್ನು ಉಂಟುಮಾಡಲು ಬಂದೆನೆಂದು ನೆನಸಬೇಡಿರಿ; ನಾನು ಶಾಂತಿಯನ್ನಲ್ಲ ಖಡ್ಗವನ್ನು ಹಾಕಲು ಬಂದೆನು. 35 ಮಗನಿಗೂ ಅವನ ತಂದೆಗೂ, ಮಗಳಿಗೂ ಅವಳ ತಾಯಿಗೂ, ಯುವ ಪತ್ನಿಗೂ ಅವಳ ಅತ್ತೆಗೂ ಒಡಕನ್ನು ಉಂಟುಮಾಡಲು ನಾನು ಬಂದೆನು. 36 ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವುದು ನಿಶ್ಚಯ. 37 ನನಗಿಂತಲೂ ಹೆಚ್ಚಾಗಿ ತಂದೆಯ ಅಥವಾ ತಾಯಿಯ ಮೇಲೆ ಮಮತೆಯಿರುವವನು ನನಗೆ ಯೋಗ್ಯನಲ್ಲ; ನನಗಿಂತಲೂ ಹೆಚ್ಚಾಗಿ ಮಗನ ಅಥವಾ ಮಗಳ ಮೇಲೆ ಮಮತೆಯಿರುವವನು ನನಗೆ ಯೋಗ್ಯನಲ್ಲ. 38 ಮತ್ತು ತನ್ನ ಯಾತನಾ ಕಂಬವನ್ನು ಅಂಗೀಕರಿಸದೆ ನನ್ನ ಹಿಂದೆ ಬರುವವನು ನನಗೆ ಯೋಗ್ಯನಲ್ಲ. 39 ತನ್ನ ಪ್ರಾಣವನ್ನು ಉಳಿಸಿಕೊಳ್ಳುವವನು ಅದನ್ನು ಕಳೆದುಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಉಳಿಸಿಕೊಳ್ಳುವನು.
40 “ನಿಮ್ಮನ್ನು ಸೇರಿಸಿಕೊಳ್ಳುವವನು ನನ್ನನ್ನೂ ಸೇರಿಸಿಕೊಳ್ಳುತ್ತಾನೆ ಮತ್ತು ನನ್ನನ್ನು ಸೇರಿಸಿಕೊಳ್ಳುವವನು ನನ್ನನ್ನು ಕಳುಹಿಸಿದಾತನನ್ನೂ ಸೇರಿಸಿಕೊಳ್ಳುತ್ತಾನೆ. 41 ಯಾವನಾದರೂ ಒಬ್ಬ ಪ್ರವಾದಿಯನ್ನು ಅವನು ಪ್ರವಾದಿಯಾಗಿರುವ ಕಾರಣ ಸೇರಿಸಿಕೊಳ್ಳುವವನು ಪ್ರವಾದಿಯ ಪ್ರತಿಫಲವನ್ನು ಹೊಂದುವನು; ಯಾವನಾದರೂ ಒಬ್ಬ ನೀತಿವಂತನನ್ನು ಅವನು ನೀತಿವಂತನಾಗಿರುವ ಕಾರಣ ಸೇರಿಸಿಕೊಳ್ಳುವವನು ನೀತಿವಂತನ ಪ್ರತಿಫಲವನ್ನು ಹೊಂದುವನು. 42 ಈ ಚಿಕ್ಕವರಲ್ಲಿ ಒಬ್ಬನಿಗೆ ಅವನು ಶಿಷ್ಯನಾಗಿರುವ ಕಾರಣ ಕುಡಿಯಲು ಒಂದು ಲೋಟ ತಣ್ಣೀರನ್ನಾದರೂ ಕೊಡುವವನು ಅವನ ಪ್ರತಿಫಲವನ್ನು ಕಳೆದುಕೊಳ್ಳುವುದೇ ಇಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.”