ಲೂಕ
17 ಬಳಿಕ ಅವನು ತನ್ನ ಶಿಷ್ಯರಿಗೆ, “ಎಡವಲು ಕಾರಣಗಳು ಬರಲೇ ಬೇಕೆಂಬುದು ಅನಿವಾರ್ಯ, ಆದರೆ ಯಾರ ಮೂಲಕ ಅವು ಬರುತ್ತವೋ ಅವನ ಗತಿಯನ್ನು ಏನು ಹೇಳಲಿ. 2 ಅವನು ಈ ಚಿಕ್ಕವರಲ್ಲಿ ಒಬ್ಬನನ್ನು ಎಡವಿಸುವುದಕ್ಕಿಂತಲೂ ಅವನ ಕುತ್ತಿಗೆಗೆ ಬೀಸುವ ಕಲ್ಲನ್ನು ನೇತುಹಾಕಿ ಸಮುದ್ರದೊಳಗೆ ಎಸೆಯುವುದೇ ಹೆಚ್ಚು ಪ್ರಯೋಜನಕರ. 3 ನಿಮ್ಮ ವಿಷಯದಲ್ಲಿ ಎಚ್ಚರಿಕೆಯಿಂದಿರಿ. ನಿನ್ನ ಸಹೋದರನು ಪಾಪಮಾಡುವುದಾದರೆ ಅವನನ್ನು ಗದರಿಸು; ಅವನು ಪಶ್ಚಾತ್ತಾಪಪಡುವುದಾದರೆ ಅವನನ್ನು ಕ್ಷಮಿಸು. 4 ಅವನು ನಿನಗೆ ವಿರುದ್ಧವಾಗಿ ದಿನಕ್ಕೆ ಏಳು ಸಾರಿ ಪಾಪಮಾಡಿದರೂ ಏಳು ಸಾರಿ ನಿನ್ನ ಬಳಿಗೆ ಹಿಂದಿರುಗಿ ಬಂದು, ‘ನಾನು ಪಶ್ಚಾತ್ತಾಪಪಡುತ್ತೇನೆ’ ಎಂದು ಹೇಳುವಲ್ಲಿ ನೀನು ಅವನನ್ನು ಕ್ಷಮಿಸಲೇಬೇಕು” ಎಂದನು.
5 ಆಗ ಅಪೊಸ್ತಲರು ಕರ್ತನಿಗೆ, “ನಮಗೆ ಇನ್ನೂ ಹೆಚ್ಚು ನಂಬಿಕೆಯನ್ನು ದಯಪಾಲಿಸು” ಎಂದು ಹೇಳಿದಾಗ 6 ಕರ್ತನು, “ನಿಮಗೆ ಸಾಸಿವೆ ಕಾಳಿನ ಗಾತ್ರದಷ್ಟು ನಂಬಿಕೆಯಿರುತ್ತಿದ್ದರೆ ನೀವು ಈ ಕರಿ ಉಪ್ಪುನೇರಳೆ ಮರಕ್ಕೆ ‘ಇಲ್ಲಿಂದ ಬೇರುಸಹಿತ ಕೀಳಲ್ಪಟ್ಟು ಸಮುದ್ರದಲ್ಲಿ ನಾಟಿಕೊ’ ಎಂದು ಹೇಳುವುದಾದರೆ ಅದು ನಿಮ್ಮ ಮಾತನ್ನು ಕೇಳುವುದು.
7 “ನಿಮ್ಮಲ್ಲಿ ಒಬ್ಬನಿಗೆ ಉಳುವ ಅಥವಾ ಕುರಿಗಳನ್ನು ಕಾಯುವ ಆಳಿರುವುದಾದರೆ, ಅವನು ಹೊಲದಿಂದ ಬಂದಾಗ ಅವನಿಗೆ, ‘ಕೂಡಲೆ ಇಲ್ಲಿಗೆ ಬಂದು ಊಟಕ್ಕೆ ಕುಳಿತುಕೊ’ ಎಂದು ಹೇಳುವುದುಂಟೆ? 8 ಹಾಗೆ ಹೇಳದೆ ಅವನು ಆ ಆಳಿಗೆ, ‘ನನ್ನ ಸಂಧ್ಯಾ ಭೋಜನಕ್ಕಾಗಿ ಏನನ್ನಾದರೂ ಸಿದ್ಧಪಡಿಸು ಮತ್ತು ನಾನು ಊಟಮಾಡಿ ಕುಡಿಯುವ ತನಕ ಮೇಲ್ಬಟ್ಟೆ ಧರಿಸಿಕೊಂಡು ನನ್ನ ಸೇವೆಮಾಡು; ಆಮೇಲೆ ನೀನು ಊಟಮಾಡು, ಕುಡಿ’ ಎಂದು ಹೇಳುವನಲ್ಲವೆ? 9 ಆ ಆಳು ತನಗೆ ನೇಮಿಸಲ್ಪಟ್ಟ ಕೆಲಸವನ್ನು ಮಾಡಿದ್ದರಿಂದ ಯಜಮಾನನು ಅವನಿಗೆ ಕೃತಜ್ಞತೆ ಸಲ್ಲಿಸುವುದಿಲ್ಲ, ಅಲ್ಲವೆ? 10 ಅದರಂತೆಯೇ, ನಿಮಗೆ ನೇಮಿಸಲ್ಪಟ್ಟಿರುವ ಎಲ್ಲವನ್ನೂ ಮಾಡಿ ಮುಗಿಸಿದ ಬಳಿಕ, ‘ನಾವು ಕೆಲಸಕ್ಕೆ ಬಾರದ ಆಳುಗಳು. ನಾವು ಮಾಡಬೇಕಾಗಿದ್ದುದನ್ನೇ ಮಾಡಿದ್ದೇವೆ’ ಎಂದು ಹೇಳಿರಿ” ಅಂದನು.
11 ಅವನು ಯೆರೂಸಲೇಮಿಗೆ ಪ್ರಯಾಣಿಸುತ್ತಿರುವಾಗ ಸಮಾರ್ಯ ಮತ್ತು ಗಲಿಲಾಯ ಸೀಮೆಗಳ ಮಧ್ಯದಿಂದ ಹಾದುಹೋಗುತ್ತಿದ್ದನು. 12 ಅವನು ಒಂದು ಹಳ್ಳಿಯನ್ನು ಪ್ರವೇಶಿಸುತ್ತಿರುವಾಗ ಹತ್ತು ಮಂದಿ ಕುಷ್ಠರೋಗಿಗಳು ಅವನನ್ನು ಎದುರುಗೊಂಡು ದೂರದಲ್ಲೇ ನಿಂತುಕೊಂಡರು. 13 ಅವರು “ಯೇಸುವೇ, ಉಪದೇಶಕನೇ, ನಮಗೆ ಕರುಣೆ ತೋರಿಸು” ಎಂದು ಸ್ವರವೆತ್ತಿ ಕೂಗಿದರು. 14 ಅವನು ಅವರನ್ನು ನೋಡಿದಾಗ, “ಹೋಗಿ ಯಾಜಕರಿಗೆ ನಿಮ್ಮನ್ನು ತೋರಿಸಿಕೊಳ್ಳಿ” ಎಂದು ಹೇಳಿದನು. ಅವರು ಹೋಗುತ್ತಿರುವಾಗಲೇ ಶುದ್ಧರಾದರು. 15 ಅವರಲ್ಲಿ ಒಬ್ಬನು ತಾನು ವಾಸಿಯಾದದ್ದನ್ನು ನೋಡಿ ಗಟ್ಟಿಯಾದ ಸ್ವರದಿಂದ ದೇವರನ್ನು ಮಹಿಮೆಪಡಿಸುತ್ತಾ ಹಿಂದಿರುಗಿ ಬಂದು 16 ಯೇಸುವಿನ ಪಾದಗಳ ಬಳಿ ಅಧೋಮುಖವಾಗಿಬಿದ್ದು ಅವನಿಗೆ ಕೃತಜ್ಞತೆ ಸಲ್ಲಿಸಿದನು; ಇದಲ್ಲದೆ ಅವನು ಸಮಾರ್ಯದವನಾಗಿದ್ದನು. 17 ಆಗ ಯೇಸು ಅವನಿಗೆ, “ಹತ್ತು ಮಂದಿ ಶುದ್ಧೀಕರಿಸಲ್ಪಟ್ಟರು, ಅಲ್ಲವೆ? ಹಾಗಾದರೆ ಉಳಿದ ಒಂಬತ್ತು ಮಂದಿ ಎಲ್ಲಿ? 18 ದೇವರನ್ನು ಮಹಿಮೆಪಡಿಸಲು ಬೇರೊಂದು ಜನಾಂಗದವನಾದ ಈ ಮನುಷ್ಯನೇ ಹೊರತು ಇನ್ನಾರೂ ಹಿಂದಿರುಗಿ ಬರಲಿಲ್ಲವೆ?” ಎಂದು ಹೇಳಿ 19 ಅವನಿಗೆ, “ಎದ್ದು ಹೋಗು; ನಿನ್ನ ನಂಬಿಕೆಯು ನಿನ್ನನ್ನು ವಾಸಿಮಾಡಿದೆ” ಎಂದನು.
20 ಆದರೆ ದೇವರ ರಾಜ್ಯವು ಯಾವಾಗ ಬರುತ್ತದೆಂದು ಫರಿಸಾಯರು ಅವನನ್ನು ಕೇಳಿದಾಗ ಅವನು ಅವರಿಗೆ ಉತ್ತರವಾಗಿ, “ದೇವರ ರಾಜ್ಯವು ಕಣ್ಸೆಳೆಯುವ ದೃಶ್ಯವಾಗಿ ಬರುವುದಿಲ್ಲ. 21 ಅಥವಾ ಜನರು, ‘ಇಗೋ ಇಲ್ಲಿದೆ’ ಅಥವಾ ‘ಅಲ್ಲಿದೆ’ ಎಂದು ಹೇಳುತ್ತಿರುವುದೂ ಇಲ್ಲ. ಏಕೆಂದರೆ ದೇವರ ರಾಜ್ಯವು ನಿಮ್ಮ ಮಧ್ಯದಲ್ಲಿಯೇ ಇದೆ” ಎಂದು ಹೇಳಿದನು.
22 ಬಳಿಕ ಅವನು ಶಿಷ್ಯರಿಗೆ, “ಮನುಷ್ಯಕುಮಾರನ ದಿನಗಳಲ್ಲಿ ಒಂದನ್ನು ನೀವು ನೋಡಲು ಬಯಸುವಂಥ ದಿನಗಳು ಬರುವವು, ಆದರೆ ನೀವು ಅದನ್ನು ನೋಡುವುದಿಲ್ಲ. 23 ಜನರು ನಿಮಗೆ, ‘ಅಗೋ ಅಲ್ಲಿದ್ದಾನೆ’ ಅಥವಾ ‘ಇಗೋ ಇಲ್ಲಿದ್ದಾನೆ’ ಎಂದು ಹೇಳುವರು. ನೀವು ಹೊರಗೆ ಹೋಗಬೇಡಿ, ಅಥವಾ ಅವರನ್ನು ಬೆನ್ನಟ್ಟಿಹೋಗುವುದೂ ಬೇಡ. 24 ಏಕೆಂದರೆ ಮಿಂಚು ಹೇಗೆ ಆಕಾಶದ ಒಂದು ಬದಿಯಲ್ಲಿ ಮಿಂಚಿ ಇನ್ನೊಂದು ಬದಿಯ ವರೆಗೂ ಪ್ರಕಾಶಿಸುತ್ತದೊ ಅಂತೆಯೇ ಮನುಷ್ಯಕುಮಾರನಿರುವನು. 25 ಆದರೆ ಮೊದಲು ಅವನು ಅನೇಕ ಕಷ್ಟಗಳನ್ನು ಅನುಭವಿಸಿ ಈ ಸಂತತಿಯಿಂದ ತಿರಸ್ಕರಿಸಲ್ಪಡಬೇಕು. 26 ಇದಲ್ಲದೆ ನೋಹನ ದಿನಗಳಲ್ಲಿ ನಡೆದಂತೆಯೇ ಮನುಷ್ಯಕುಮಾರನ ದಿನಗಳಲ್ಲಿಯೂ ನಡೆಯುವುದು. 27 ನೋಹನು ನಾವೆಯೊಳಗೆ ಪ್ರವೇಶಿಸುವ ದಿನದ ವರೆಗೆ ಜನರು ಊಟಮಾಡುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಸ್ತ್ರೀಯರನ್ನು ಮದುವೆಮಾಡಿಕೊಡುತ್ತಾ ಇದ್ದರು ಮತ್ತು ಪ್ರಳಯವು ಬಂದು ಅವರೆಲ್ಲರನ್ನು ನಾಶಮಾಡಿತು. 28 ಅದೇ ರೀತಿಯಲ್ಲಿ, ಲೋಟನ ದಿವಸಗಳಲ್ಲಿಯೂ ಸಂಭವಿಸಿತು. ಜನರು ಊಟಮಾಡುತ್ತಾ ಕುಡಿಯುತ್ತಾ ಕೊಳ್ಳುತ್ತಾ ಮಾರುತ್ತಾ ನೆಡುತ್ತಾ ಕಟ್ಟುತ್ತಾ ಇದ್ದರು. 29 ಆದರೆ ಲೋಟನು ಸೊದೋಮಿನಿಂದ ಹೊರಟುಹೋದ ದಿವಸದಲ್ಲಿ ಆಕಾಶದಿಂದ ಬೆಂಕಿ ಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು. 30 ಮನುಷ್ಯಕುಮಾರನು ಪ್ರಕಟವಾಗಲಿರುವ ದಿನದಲ್ಲಿಯೂ ಹಾಗೆಯೇ ಇರುವುದು.
31 “ಆ ದಿನದಲ್ಲಿ ಮಾಳಿಗೆಯ ಮೇಲಿರುವ ವ್ಯಕ್ತಿಯು ಮನೆಯಲ್ಲಿರುವ ತನ್ನ ಚರಸೊತ್ತುಗಳನ್ನು ತೆಗೆದುಕೊಳ್ಳಲು ಕೆಳಗೆ ಇಳಿಯದಿರಲಿ; ಅದೇ ರೀತಿಯಲ್ಲಿ, ಹೊಲದಲ್ಲಿರುವ ವ್ಯಕ್ತಿಯು ಹಿಂದೆ ಬಿಟ್ಟಿರುವ ವಸ್ತುಗಳನ್ನು ತೆಗೆದುಕೊಳ್ಳಲು ಹಿಂದಿರುಗದಿರಲಿ. 32 ಲೋಟನ ಹೆಂಡತಿಯನ್ನು ಜ್ಞಾಪಕಮಾಡಿಕೊಳ್ಳಿರಿ. 33 ತನ್ನ ಪ್ರಾಣವನ್ನು ತನಗೋಸ್ಕರ ಉಳಿಸಿಕೊಳ್ಳಲು ಪ್ರಯತ್ನಿಸುವವನು ಅದನ್ನು ಕಳೆದುಕೊಳ್ಳುವನು; ಆದರೆ ಅದನ್ನು ಕಳೆದುಕೊಳ್ಳುವವನು ಅದನ್ನು ಕಾಪಾಡಿಕೊಳ್ಳುವನು. 34 ಆ ರಾತ್ರಿಯಲ್ಲಿ ಇಬ್ಬರು ಪುರುಷರು ಒಂದೇ ಹಾಸಿಗೆಯಲ್ಲಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು, ಇನ್ನೊಬ್ಬನು ಬಿಡಲ್ಪಡುವನು. 35 ಇಬ್ಬರು ಸ್ತ್ರೀಯರು ಒಂದೇ ಬೀಸುವ ಕಲ್ಲಿನಲ್ಲಿ ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಇನ್ನೊಬ್ಬಳು ಬಿಡಲ್ಪಡುವಳು ಎಂದು ಹೇಳುತ್ತೇನೆ” ಅಂದನು. 36* —— 37 ಆಗ ಶಿಷ್ಯರು ಅವನಿಗೆ, “ಕರ್ತನೇ, ಎಲ್ಲಿಗೆ?” ಎಂದು ಕೇಳಿದಾಗ ಅವನು ಅವರಿಗೆ, “ಹೆಣವು ಎಲ್ಲಿದೆಯೋ ಅಲ್ಲಿ ಹದ್ದುಗಳು ಸಹ ಒಟ್ಟುಗೂಡುವವು” ಎಂದು ಹೇಳಿದನು.