ಲೂಕ
22 ಪಸ್ಕ ಎಂದು ಕರೆಯಲ್ಪಡುವ ಹುಳಿಯಿಲ್ಲದ ರೊಟ್ಟಿಯ ಹಬ್ಬವು ಹತ್ತಿರವಾಗುತ್ತಿತ್ತು. 2 ಮುಖ್ಯ ಯಾಜಕರೂ ಶಾಸ್ತ್ರಿಗಳೂ ಅವನನ್ನು ತೊಲಗಿಸಿಬಿಡುವ ಪರಿಣಾಮಕಾರಿ ವಿಧವನ್ನು ಹುಡುಕುತ್ತಿದ್ದರು, ಏಕೆಂದರೆ ಅವರು ಜನರಿಗೆ ಭಯಪಡುತ್ತಿದ್ದರು. 3 ಆದರೆ ಸೈತಾನನು ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದ ಇಸ್ಕರಿಯೋತನೆಂದು ಕರೆಯಲ್ಪಡುತ್ತಿದ್ದ ಯೂದನೊಳಗೆ ಪ್ರವೇಶಿಸಿದನು. 4 ಅವನು ಮುಖ್ಯ ಯಾಜಕರ ಬಳಿಗೂ ದೇವಾಲಯದ ಮುಖ್ಯಸ್ಥರ ಬಳಿಗೂ ಹೋಗಿ, ಅವನನ್ನು ಅವರಿಗೆ ದ್ರೋಹದಿಂದ ಹಿಡಿದುಕೊಡುವ ಪರಿಣಾಮಕಾರಿ ವಿಧದ ಕುರಿತು ಮಾತಾಡಿದನು. 5 ಅವರು ಸಂತೋಷಪಟ್ಟು ಅವನಿಗೆ ಬೆಳ್ಳಿಯ ಹಣವನ್ನು ಕೊಡಲು ಒಪ್ಪಿಕೊಂಡರು. 6 ಅವನು ಇದಕ್ಕೆ ಸಮ್ಮತಿಸಿ, ಜನರ ಗುಂಪು ಇಲ್ಲದಿರುವಾಗ ಅವರಿಗೆ ಅವನನ್ನು ದ್ರೋಹದಿಂದ ಹಿಡಿದುಕೊಡುವ ಸುಸಂದರ್ಭಕ್ಕಾಗಿ ಕಾಯುತ್ತಾ ಇದ್ದನು.
7 ಪಸ್ಕದ ಪ್ರಾಣಿಯನ್ನು ಯಜ್ಞವಾಗಿ ಅರ್ಪಿಸಬೇಕಾದ ಹುಳಿಯಿಲ್ಲದ ರೊಟ್ಟಿಯ ಹಬ್ಬದ ದಿನವು ಬಂತು. 8 ಆಗ ಅವನು ಪೇತ್ರನಿಗೂ ಯೋಹಾನನಿಗೂ, “ಹೋಗಿ ನಾವು ಊಟಮಾಡಲಿಕ್ಕಾಗಿ ನಮಗೋಸ್ಕರ ಪಸ್ಕವನ್ನು ಸಿದ್ಧಮಾಡಿರಿ” ಎಂದು ಹೇಳಿ ಕಳುಹಿಸಿದನು. 9 ಅದಕ್ಕೆ ಅವರು, “ನಾವು ಅದನ್ನು ಎಲ್ಲಿ ಸಿದ್ಧಮಾಡಬೇಕೆನ್ನುತ್ತಿ?” ಎಂದು ಕೇಳಿದರು. 10 ಅವನು ಅವರಿಗೆ, “ನೋಡಿರಿ, ನೀವು ಪಟ್ಟಣದೊಳಗೆ ಹೋದಾಗ ಅಲ್ಲಿ ಮಣ್ಣಿನ ಕೊಡದಲ್ಲಿ ನೀರನ್ನು ಹೊತ್ತುಕೊಂಡು ಹೋಗುತ್ತಿರುವ ಒಬ್ಬ ಮನುಷ್ಯನು ನಿಮಗೆ ಎದುರಾಗುವನು. ಅವನು ಪ್ರವೇಶಿಸುವ ಮನೆಯೊಳಗೆ ಅವನನ್ನು ಹಿಂಬಾಲಿಸಿರಿ. 11 ಮತ್ತು ನೀವು ಆ ಮನೆಯ ಯಜಮಾನನಿಗೆ, ‘ “ನನ್ನ ಶಿಷ್ಯರೊಂದಿಗೆ ನಾನು ಪಸ್ಕದ ಊಟವನ್ನು ಮಾಡಬಹುದಾದ ಅತಿಥಿ ಕೋಣೆ ಎಲ್ಲಿದೆ?” ಎಂದು ಬೋಧಕನು ನಿನ್ನನ್ನು ಕೇಳುತ್ತಾನೆ’ ಎಂದು ಹೇಳಿರಿ. 12 ಆಗ ಆ ಮನುಷ್ಯನು ನಿಮಗೆ ಸಜ್ಜುಗೊಳಿಸಲ್ಪಟ್ಟಿರುವ ಮೇಲಂತಸ್ತಿನ ದೊಡ್ಡ ಕೋಣೆಯನ್ನು ತೋರಿಸುವನು; ಅಲ್ಲಿ ಸಿದ್ಧಮಾಡಿರಿ” ಎಂದನು. 13 ಆದುದರಿಂದ ಅವರು ಹೊರಟುಹೋಗಿ ಅವನು ತಮಗೆ ಹೇಳಿದಂತೆಯೇ ಇದ್ದುದನ್ನು ಕಂಡು ಪಸ್ಕಕ್ಕಾಗಿ ಸಿದ್ಧತೆಗಳನ್ನು ಮಾಡಿದರು.
14 ಆ ಗಳಿಗೆ ಬಂದಾಗ, ಅವನು ಅಪೊಸ್ತಲರೊಂದಿಗೆ ಮೇಜಿನ ಬಳಿ ಊಟಕ್ಕೆ ಕುಳಿತುಕೊಂಡನು. 15 ಅವನು ಅವರಿಗೆ, “ನಾನು ಕಷ್ಟವನ್ನು ಅನುಭವಿಸುವುದಕ್ಕೆ ಮುಂಚೆ ನಿಮ್ಮೊಂದಿಗೆ ಈ ಪಸ್ಕವನ್ನು ತಿನ್ನಲು ಬಹಳವಾಗಿ ಅಪೇಕ್ಷಿಸಿದ್ದೇನೆ; 16 ದೇವರ ರಾಜ್ಯದಲ್ಲಿ ಇದು ನೆರವೇರುವ ತನಕ ನಾನು ಪುನಃ ಇದನ್ನು ತಿನ್ನುವುದಿಲ್ಲ ಎಂದು ನಿಮಗೆ ಹೇಳುತ್ತೇನೆ” ಅಂದನು. 17 ಅನಂತರ ಪಾತ್ರೆಯನ್ನು ತೆಗೆದುಕೊಂಡು ಉಪಕಾರ ಸಲ್ಲಿಸಿ, “ಇದನ್ನು ತೆಗೆದುಕೊಂಡು ನಿಮ್ಮ ಮಧ್ಯೆ ಒಬ್ಬರಿಂದ ಇನ್ನೊಬ್ಬರಿಗೆ ದಾಟಿಸಿರಿ; 18 ಇಂದಿನಿಂದ ದೇವರ ರಾಜ್ಯವು ಬರುವ ತನಕ ನಾನು ದ್ರಾಕ್ಷಾಲತೆಯ ಉತ್ಪನ್ನವನ್ನು ಪುನಃ ಕುಡಿಯುವುದೇ ಇಲ್ಲ ಎಂದು ನಿಮಗೆ ಹೇಳುತ್ತೇನೆ” ಅಂದನು.
19 ಬಳಿಕ ಅವನು ರೊಟ್ಟಿಯನ್ನು ತೆಗೆದುಕೊಂಡು ಕೃತಜ್ಞತೆ ಸಲ್ಲಿಸಿ ಮುರಿದು ಅವರಿಗೆ ನೀಡಿ, “ಇದು ನಿಮಗೋಸ್ಕರ ಕೊಡಲ್ಪಡಲಿರುವ ನನ್ನ ದೇಹವನ್ನು ಸೂಚಿಸುತ್ತದೆ. ನನ್ನನ್ನು ಜ್ಞಾಪಿಸಿಕೊಳ್ಳುವುದಕ್ಕೋಸ್ಕರ ಇದನ್ನು ಮಾಡುತ್ತಾ ಇರಿ” ಎಂದು ಹೇಳಿದನು. 20 ಅವರು ಸಂಜೆಯ ಊಟವನ್ನು ಮಾಡಿ ಮುಗಿಸಿದ ಬಳಿಕ ಅವನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು, “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡಲಿರುವ ನನ್ನ ರಕ್ತದ ಆಧಾರದ ಮೇಲೆ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.
21 “ಆದರೆ ಇಗೋ ನನಗೆ ದ್ರೋಹಮಾಡುವವನು ನನ್ನೊಂದಿಗೆ ಮೇಜಿನ ಬಳಿ ಕುಳಿತಿದ್ದಾನೆ. 22 ಗೊತ್ತುಮಾಡಲಾಗಿರುವಂತೆಯೇ ಮನುಷ್ಯಕುಮಾರನು ಹೊರಟುಹೋಗುತ್ತಾನೆ; ಆದರೂ ಯಾವನ ಮೂಲಕ ಅವನಿಗೆ ದ್ರೋಹವಾಗುತ್ತದೋ ಅವನ ಗತಿಯನ್ನು ಏನು ಹೇಳಲಿ!” ಎಂದನು. 23 ಆಗ ತಮ್ಮಲ್ಲಿ ಯಾರು ನಿಜವಾಗಿಯೂ ಇದನ್ನು ಮಾಡಲಿಕ್ಕಿದ್ದಾನೆ ಎಂಬ ಪ್ರಶ್ನೆಯ ಕುರಿತು ಅವರು ತಮ್ಮ ಮಧ್ಯೆ ಚರ್ಚಿಸಲಾರಂಭಿಸಿದರು.
24 ಇದಲ್ಲದೆ, ತಮ್ಮೊಳಗೆ ಯಾರು ಅತಿ ದೊಡ್ಡವನು ಎಂಬ ವಿಷಯದಲ್ಲಿ ಅವರ ಮಧ್ಯೆ ತೀಕ್ಷ್ಣ ವಾಗ್ವಾದ ಸಹ ಉಂಟಾಯಿತು. 25 ಆಗ ಅವನು ಅವರಿಗೆ, “ಅನ್ಯಜನಾಂಗಗಳ ಅರಸರು ಅವರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ ಮತ್ತು ಅವರ ಮೇಲೆ ಅಧಿಕಾರಹೊಂದಿರುವವರು ‘ಉಪಕಾರಿಗಳು’ ಎಂದು ಕರೆಯಲ್ಪಡುತ್ತಾರೆ. 26 ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ಅತಿ ದೊಡ್ಡವನು ಅತಿ ಚಿಕ್ಕವನಂತಾಗಬೇಕು ಮತ್ತು ಮುಖ್ಯಸ್ಥನಾಗಿ ವರ್ತಿಸುವವನು ಸೇವೆಮಾಡುವವನಂತಾಗಬೇಕು. 27 ಯಾವನು ದೊಡ್ಡವನು? ಊಟಕ್ಕೆ ಕುಳಿತುಕೊಂಡಿರುವವನೋ ಅಥವಾ ಸೇವೆಮಾಡುವವನೊ? ಊಟಕ್ಕೆ ಕುಳಿತುಕೊಂಡಿರುವವನಲ್ಲವೆ? ಆದರೆ ನಾನು ನಿಮ್ಮ ಮಧ್ಯೆ ಸೇವೆಮಾಡುವವನಂತಿದ್ದೇನೆ.
28 “ಇದಲ್ಲದೆ ನೀವು ನನ್ನ ಕಷ್ಟಗಳಲ್ಲಿ ನನ್ನೊಂದಿಗೆ ಯಾವಾಗಲೂ ಇದ್ದವರು; 29 ನನ್ನ ತಂದೆಯು ನನ್ನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿರುವಂತೆ ನಾನು ನಿಮ್ಮೊಂದಿಗೆ ಒಂದು ರಾಜ್ಯಕ್ಕಾಗಿ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ. 30 ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಬಳಿಯಲ್ಲಿ ಕುಳಿತುಕೊಂಡು ಊಟಮಾಡುವಿರಿ, ಕುಡಿಯುವಿರಿ ಮತ್ತು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸಲು ಸಿಂಹಾಸನಗಳ ಮೇಲೆ ಕುಳಿತುಕೊಳ್ಳುವಿರಿ.
31 “ಸೀಮೋನನೇ, ಸೀಮೋನನೇ, ಇಗೋ ಸೈತಾನನು ನಿಮ್ಮನ್ನು ಗೋದಿಯಂತೆ ತೂರಲು ಒತ್ತಾಯಿಸಿದ್ದಾನೆ. 32 ಆದರೆ ನಿನ್ನ ನಂಬಿಕೆಯು ಮುರಿದುಬೀಳದಂತೆ ನಾನು ನಿನಗೋಸ್ಕರ ಯಾಚಿಸಿದ್ದೇನೆ; ನೀನು ತಿರುಗಿ ಬಂದ ಮೇಲೆ ನಿನ್ನ ಸಹೋದರರನ್ನು ಬಲಪಡಿಸು” ಎಂದು ಹೇಳಿದನು. 33 ಅದಕ್ಕೆ ಅವನು, “ಕರ್ತನೇ, ನಾನು ನಿನ್ನೊಂದಿಗೆ ಸೆರೆಮನೆಗೆ ಹೋಗುವುದಕ್ಕೂ ಸಾಯುವುದಕ್ಕೂ ಸಿದ್ಧನಾಗಿದ್ದೇನೆ” ಎಂದನು. 34 ಆದರೆ ಅವನು “ಪೇತ್ರನೇ, ನನ್ನನ್ನು ಅರಿಯೆನೆಂದು ನೀನು ಮೂರು ಸಾರಿ ಹೇಳುವ ವರೆಗೆ ಇಂದು ಹುಂಜವು ಕೂಗುವುದೇ ಇಲ್ಲ ಎಂದು ನಿನಗೆ ಹೇಳುತ್ತೇನೆ” ಅಂದನು.
35 ಅವನು ಅವರಿಗೆ, “ನಾನು ನಿಮ್ಮನ್ನು ಹಣದ ಚೀಲ, ಆಹಾರದ ಚೀಲ ಮತ್ತು ಕೆರಗಳಿಲ್ಲದೆ ಕಳುಹಿಸಿದಾಗ ನಿಮಗೇನಾದರೂ ಕೊರತೆ ಉಂಟಾಯಿತೊ?” ಎಂದು ಕೇಳಿದಾಗ ಅವರು “ಇಲ್ಲ” ಎಂದರು. 36 ಬಳಿಕ ಅವನು ಅವರಿಗೆ, “ಆದರೆ ಈಗ ಹಣದ ಚೀಲವುಳ್ಳವನು ಅದನ್ನು ತೆಗೆದುಕೊಳ್ಳಲಿ, ಆಹಾರದ ಚೀಲವುಳ್ಳವನು ಸಹ ಅದನ್ನು ತೆಗೆದುಕೊಳ್ಳಲಿ; ಕತ್ತಿ ಇಲ್ಲದಿರುವವನು ತನ್ನ ಮೇಲಂಗಿಯನ್ನು ಮಾರಿ ಒಂದು ಕತ್ತಿಯನ್ನು ಕೊಂಡುಕೊಳ್ಳಲಿ. 37 ಏಕೆಂದರೆ, ‘ಅವನು ಅಧರ್ಮಿಗಳಲ್ಲಿ ಒಬ್ಬನಂತೆ ಎಣಿಸಲ್ಪಟ್ಟನು’ ಎಂದು ಬರೆದಿರುವ ಮಾತು ನನ್ನಲ್ಲಿ ನೆರವೇರಬೇಕಾಗಿದೆ ಎಂದು ನಿಮಗೆ ಹೇಳುತ್ತೇನೆ. ನನಗೆ ಸಂಬಂಧಪಟ್ಟದ್ದು ನೆರವೇರಿಕೆಯನ್ನು ಪಡೆಯುತ್ತಾ ಇದೆ” ಎಂದನು. 38 ಅದಕ್ಕೆ ಅವರು, “ಕರ್ತನೇ, ಇಲ್ಲಿ ಎರಡು ಕತ್ತಿಗಳಿವೆ” ಎಂದಾಗ “ಅದು ಸಾಕು” ಎಂದು ಅವನು ಅವರಿಗೆ ಹೇಳಿದನು.
39 ಅವನು ಹೊರಗೆ ಬಂದು ವಾಡಿಕೆಯಂತೆ ಆಲೀವ್ ಮರಗಳ ಗುಡ್ಡಕ್ಕೆ ಹೋದನು; ಶಿಷ್ಯರು ಸಹ ಅವನ ಹಿಂದೆ ಹೋದರು. 40 ಆ ಸ್ಥಳಕ್ಕೆ ಬಂದಾಗ ಅವನು ಅವರಿಗೆ, “ನೀವು ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥನೆಮಾಡುತ್ತಾ ಇರಿ” ಎಂದನು. 41 ಆಮೇಲೆ ಅವರಿಂದ ಕಲ್ಲೆಸುಗೆಯಷ್ಟು ದೂರಕ್ಕೆ ಹೋಗಿ ಮೊಣಕಾಲೂರಿ ಪ್ರಾರ್ಥಿಸುತ್ತಾ, 42 “ತಂದೆಯೇ, ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು. ಆದರೂ ನನ್ನ ಚಿತ್ತವಲ್ಲ ನಿನ್ನ ಚಿತ್ತವು ನೆರವೇರಲಿ” ಎಂದು ಹೇಳಿದನು. 43 ಆಗ ಸ್ವರ್ಗದಿಂದ ಒಬ್ಬ ದೇವದೂತನು ಅವನಿಗೆ ಕಾಣಿಸಿಕೊಂಡು ಅವನನ್ನು ಬಲಪಡಿಸಿದನು. 44 ಆದರೆ ಅಪಾರ ದುಃಖದಿಂದಾಗಿ ಅವನು ಹೆಚ್ಚು ಶ್ರದ್ಧಾಪೂರ್ವಕವಾಗಿ ಪ್ರಾರ್ಥಿಸುವುದನ್ನು ಮುಂದುವರಿಸಿದನು ಮತ್ತು ಅವನ ಬೆವರು ನೆಲಕ್ಕೆ ಬೀಳುತ್ತಿರುವ ರಕ್ತದ ಹನಿಗಳಂತಿತ್ತು. 45 ಅವನು ಪ್ರಾರ್ಥನೆ ಮುಗಿಸಿ ಎದ್ದು ಶಿಷ್ಯರ ಬಳಿಗೆ ಬಂದಾಗ ಅವರು ದುಃಖದಿಂದ ಭಾರವಾಗಿ ನಿದ್ರೆಮಾಡುತ್ತಿರುವುದನ್ನು ನೋಡಿದನು. 46 ಆಗ ಅವನು ಅವರಿಗೆ, “ನೀವು ಏಕೆ ನಿದ್ರೆಮಾಡುತ್ತಿದ್ದೀರಿ? ಏಳಿರಿ, ನೀವು ಪ್ರಲೋಭನೆಗೆ ಒಳಗಾಗದಂತೆ ಪ್ರಾರ್ಥಿಸುತ್ತಾ ಇರಿ” ಎಂದನು.
47 ಅವನು ಇನ್ನೂ ಮಾತಾಡುತ್ತಿರುವಾಗ ಜನರ ಗುಂಪು ಕಾಣಿಸಿಕೊಂಡಿತು; ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದ ಯೂದನೆಂಬವನು ಅವರ ಮುಂದೆ ನಡೆಯುತ್ತಿದ್ದನು; ಅವನು ಯೇಸುವಿಗೆ ಮುದ್ದಿಡಲಿಕ್ಕಾಗಿ ಅವನ ಬಳಿಗೆ ಬಂದಾಗ 48 ಯೇಸು ಅವನಿಗೆ “ಯೂದನೇ, ನೀನು ಒಂದು ಮುದ್ದಿನ ಮೂಲಕ ಮನುಷ್ಯಕುಮಾರನಿಗೆ ದ್ರೋಹಮಾಡುತ್ತೀಯೊ?” ಎಂದು ಕೇಳಿದನು. 49 ಆಗ ಅವನ ಸುತ್ತಲೂ ಇದ್ದವರು ಮುಂದೆ ಏನು ಸಂಭವಿಸಲಿದೆ ಎಂಬುದನ್ನು ಅರಿತವರಾಗಿ, “ಕರ್ತನೇ, ನಾವು ಕತ್ತಿಯಿಂದ ಹೊಡೆಯೋಣವೊ?” ಎಂದು ಕೇಳಿದರು. 50 ಅಷ್ಟರೊಳಗೆ ಅವರಲ್ಲಿ ಒಬ್ಬನು ಮಹಾ ಯಾಜಕನ ಆಳಿಗೆ ಹೊಡೆದು ಅವನ ಬಲಗಿವಿಯನ್ನು ಕಡಿದುಹಾಕಿದನು. 51 ಆಗ ಯೇಸು, “ಇಷ್ಟಕ್ಕೇ ಬಿಡಿರಿ” ಎಂದನು. ಬಳಿಕ ಅವನು ಆ ಆಳಿನ ಕಿವಿಯನ್ನು ಮುಟ್ಟಿ ವಾಸಿಮಾಡಿದನು. 52 ತನ್ನನ್ನು ಹಿಡಿಯಲು ಅಲ್ಲಿಗೆ ಬಂದಿದ್ದ ಮುಖ್ಯ ಯಾಜಕರಿಗೂ ದೇವಾಲಯದ ಮುಖ್ಯಸ್ಥರಿಗೂ ಹಿರೀಪುರುಷರಿಗೂ ಯೇಸು, “ಒಬ್ಬ ಕಳ್ಳನನ್ನು ಹಿಡಿಯುವುದಕ್ಕೆ ಬಂದಂತೆ ಕತ್ತಿಗಳನ್ನೂ ದೊಣ್ಣೆಗಳನ್ನೂ ಹಿಡಿದುಕೊಂಡು ಬಂದಿರೊ? 53 ನಾನು ಪ್ರತಿದಿನವೂ ದೇವಾಲಯದಲ್ಲಿ ನಿಮ್ಮೊಂದಿಗಿದ್ದಾಗ ನೀವು ನನ್ನ ವಿರುದ್ಧ ಕೈಯೆತ್ತಲಿಲ್ಲ. ಆದರೆ ಇದು ನಿಮ್ಮ ಗಳಿಗೆಯಾಗಿದೆ ಮತ್ತು ಅಂಧಕಾರದ ಅಧಿಕಾರವಾಗಿದೆ” ಎಂದು ಹೇಳಿದನು.
54 ಬಳಿಕ ಅವರು ಅವನನ್ನು ಬಂಧಿಸಿ ಮಹಾ ಯಾಜಕನ ಮನೆಗೆ ಕರೆತಂದರು; ಪೇತ್ರನು ಸ್ವಲ್ಪ ದೂರದಲ್ಲಿ ಅವರನ್ನು ಹಿಂಬಾಲಿಸುತ್ತಿದ್ದನು. 55 ಅವರು ಅಂಗಳದ ಮಧ್ಯದಲ್ಲಿ ಬೆಂಕಿಯನ್ನು ಹೊತ್ತಿಸಿ ಒಟ್ಟಿಗೆ ಕುಳಿತುಕೊಂಡಿದ್ದಾಗ ಪೇತ್ರನೂ ಅವರ ನಡುವೆ ಕುಳಿತುಕೊಂಡಿದ್ದನು. 56 ಆಗ ಒಬ್ಬ ಸೇವಕಿಯು ಅವನು ಉರಿಯುತ್ತಿದ್ದ ಬೆಂಕಿಯ ಬಳಿ ಕುಳಿತುಕೊಂಡಿರುವುದನ್ನು ದಿಟ್ಟಿಸಿ ನೋಡಿ, “ಈ ಮನುಷ್ಯನು ಸಹ ಅವನೊಂದಿಗಿದ್ದನು” ಎಂದು ಹೇಳಿದಳು. 57 ಆದರೆ ಅವನು ಅದನ್ನು ಅಲ್ಲಗಳೆಯುತ್ತಾ, “ಅಮ್ಮಾ, ನಾನು ಅವನನ್ನು ಅರಿಯೆನು” ಎಂದನು. 58 ಸ್ವಲ್ಪ ಸಮಯದ ಬಳಿಕ ಇನ್ನೊಬ್ಬ ವ್ಯಕ್ತಿಯು ಅವನನ್ನು ನೋಡಿ, “ನೀನು ಸಹ ಅವರಲ್ಲಿ ಒಬ್ಬನು” ಎಂದು ಹೇಳಿದಾಗ ಪೇತ್ರನು “ಇಲ್ಲಪ್ಪ, ನಾನಲ್ಲ” ಎಂದನು. 59 ಸುಮಾರು ಒಂದು ತಾಸಿನ ಬಳಿಕ ಮತ್ತೊಬ್ಬನು, “ಖಂಡಿತವಾಗಿಯೂ ಈ ಮನುಷ್ಯನು ಸಹ ಅವನೊಂದಿಗೆ ಇದ್ದವನು; ವಾಸ್ತವದಲ್ಲಿ ಇವನು ಗಲಿಲಾಯದವನು” ಎಂದು ಪಟ್ಟುಹಿಡಿದು ಹೇಳಲಾರಂಭಿಸಿದನು. 60 ಅದಕ್ಕೆ ಪೇತ್ರನು, “ನೀನು ಏನು ಹೇಳುತ್ತಿದ್ದೀಯೊ ನಾನರಿಯೆನಪ್ಪ” ಎಂದನು. ಅವನು ಇನ್ನೂ ಮಾತಾಡುತ್ತಿರುವಾಗ ಆ ಕೂಡಲೆ ಒಂದು ಹುಂಜವು ಕೂಗಿತು. 61 ಆಗ ಕರ್ತನು ತಿರುಗಿ ಪೇತ್ರನನ್ನು ದೃಷ್ಟಿಸಿ ನೋಡಿದನು ಮತ್ತು “ಇವತ್ತು ಹುಂಜವು ಕೂಗುವುದರೊಳಗೆ ನೀನು ನನ್ನನ್ನು ಮೂರು ಸಾರಿ ಅಲ್ಲಗಳೆಯುವಿ” ಎಂದು ಕರ್ತನು ತನಗೆ ಹೇಳಿದ್ದನ್ನು ಪೇತ್ರನು ನೆನಪಿಸಿಕೊಂಡು 62 ಹೊರಗೆ ಹೋಗಿ ಬಹಳವಾಗಿ ಅತ್ತನು.
63 ಯೇಸುವನ್ನು ಕಾಯುತ್ತಿದ್ದವರು ಅವನಿಗೆ ಅಪಹಾಸ್ಯಮಾಡುತ್ತಾ ಹೊಡೆಯುತ್ತಾ ಇದ್ದರು; 64 ಅವನ ಮುಖಕ್ಕೆ ಮುಸುಕುಹಾಕಿ, “ನಿನ್ನನ್ನು ಹೊಡೆದವರು ಯಾರು? ಪ್ರವಾದಿಸು” ಎಂದು ಹೇಳುತ್ತಿದ್ದರು. 65 ಇದಲ್ಲದೆ ಅವರು ಅವನ ವಿರುದ್ಧವಾಗಿ ಇನ್ನೂ ಅನೇಕ ದೂಷಣೆಯ ಮಾತುಗಳನ್ನು ಆಡಿದರು.
66 ಬೆಳಗಾದಾಗ ಜನರ ಹಿರೀಪುರುಷರ ಸಭೆಯವರು ಅಂದರೆ ಮಹಾ ಯಾಜಕರೂ ಶಾಸ್ತ್ರಿಗಳೂ ಒಟ್ಟುಗೂಡಿದರು ಮತ್ತು ಅವನನ್ನು ತಮ್ಮ ಹಿರೀಸಭೆಯೊಳಗೆ* ಕರೆದುಕೊಂಡು ಹೋಗಿ, 67 “ನೀನು ಕ್ರಿಸ್ತನಾಗಿದ್ದರೆ ನಮಗೆ ಹೇಳು” ಅಂದರು. ಅದಕ್ಕೆ ಅವನು ಅವರಿಗೆ, “ನಾನು ನಿಮಗೆ ಹೇಳಿದರೂ ನೀವು ಅದನ್ನು ನಂಬುವುದೇ ಇಲ್ಲ. 68 ಅಲ್ಲದೆ ನಾನು ನಿಮ್ಮನ್ನು ಪ್ರಶ್ನಿಸಿದರೂ ನೀವು ಉತ್ತರಕೊಡುವುದೇ ಇಲ್ಲ. 69 ಆದರೆ ಈಗಿನಿಂದ ಮನುಷ್ಯಕುಮಾರನು ದೇವರ ಪ್ರಬಲವಾದ ಬಲಹಸ್ತದ ಬಳಿ ಕುಳಿತುಕೊಂಡಿರುವನು” ಎಂದು ಹೇಳಿದನು. 70 ಆಗ ಅವರು, “ಹಾಗಾದರೆ ನೀನು ದೇವರ ಮಗನೊ?” ಎಂದು ಕೇಳಿದಾಗ, ಅವನು ಅವರಿಗೆ “ನಾನೇ ಅವನು ಎಂದು ನೀವೇ ಹೇಳುತ್ತಿದ್ದೀರಿ” ಎಂದನು. 71 ಅದಕ್ಕೆ ಅವರು, “ನಮಗೆ ಇದಕ್ಕಿಂತ ಹೆಚ್ಚಿನ ಸಾಕ್ಷಿ ಏಕೆ ಬೇಕು? ನಾವು ಅದನ್ನು ಇವನ ಬಾಯಿಂದಲೇ ಕೇಳಿಸಿಕೊಂಡಿದ್ದೇವಲ್ಲಾ” ಎಂದರು.