ಗಲಾತ್ಯ
1 ಮನುಷ್ಯರಿಂದಾಗಲಿ ಒಬ್ಬ ಮನುಷ್ಯನ ಮುಖಾಂತರವಾಗಲಿ ಅಪೊಸ್ತಲನಾಗಿರದೆ ಯೇಸು ಕ್ರಿಸ್ತನ ಮುಖಾಂತರವೂ ಅವನನ್ನು ಸತ್ತವರೊಳಗಿಂದ ಎಬ್ಬಿಸಿದ ತಂದೆಯಾದ ದೇವರ ಮುಖಾಂತರವೂ ಅಪೊಸ್ತಲನಾದ ಪೌಲನೆಂಬ ನಾನು 2 ಮತ್ತು ನನ್ನೊಂದಿಗಿರುವ ಎಲ್ಲ ಸಹೋದರರು ಗಲಾತ್ಯದಲ್ಲಿರುವ ಸಭೆಗಳಿಗೆ ಬರೆಯುವುದೇನೆಂದರೆ,
3 ನಮ್ಮ ತಂದೆಯಾದ ದೇವರಿಂದಲೂ ಕರ್ತನಾದ ಯೇಸು ಕ್ರಿಸ್ತನಿಂದಲೂ ನಿಮಗೆ ಅಪಾತ್ರ ದಯೆಯೂ * ಶಾಂತಿಯೂ ಉಂಟಾಗಲಿ. 4 ಅವನು ನಮ್ಮ ದೇವರೂ ತಂದೆಯೂ ಆದಾತನ ಚಿತ್ತಕ್ಕನುಸಾರ ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯಿಂದ ನಮ್ಮನ್ನು ಬಿಡಿಸಲಿಕ್ಕಾಗಿ ತನ್ನನ್ನೇ ನಮ್ಮ ಪಾಪಗಳಿಗಾಗಿ ಒಪ್ಪಿಸಿಕೊಟ್ಟನು. 5 ಅದಕ್ಕಾಗಿ ದೇವರಿಗೆ ಸದಾಕಾಲಕ್ಕೂ ಮಹಿಮೆಯು ಸಲ್ಲುತ್ತಾ ಇರಲಿ. ಆಮೆನ್.
6 ಕ್ರಿಸ್ತನ ಅಪಾತ್ರ ದಯೆಯಿಂದ ನಿಮ್ಮನ್ನು ಕರೆದಾತನನ್ನು ನೀವು ಇಷ್ಟು ಬೇಗನೆ ಬಿಟ್ಟು ಬೇರೊಂದು ಸುವಾರ್ತೆಗೆ ಕಿವಿಗೊಡುತ್ತಿದ್ದೀರಿ ಎಂಬುದನ್ನು ತಿಳಿದು ನಾನು ಆಶ್ಚರ್ಯಪಡುತ್ತೇನೆ. 7 ಆದರೆ ಅದು ಬೇರೊಂದಲ್ಲ; ಕೆಲವರು ನಿಮಗೆ ತೊಂದರೆಯನ್ನು ಉಂಟುಮಾಡುತ್ತಾ ಕ್ರಿಸ್ತನ ಕುರಿತಾದ ಸುವಾರ್ತೆಯನ್ನು ತಿರುಚಲು ಬಯಸುತ್ತಾ ಇದ್ದಾರೆ ಅಷ್ಟೆ. 8 ನಾವು ನಿಮಗೆ ಪ್ರಕಟಪಡಿಸಿದ ಸುವಾರ್ತೆಗಿಂತ ಭಿನ್ನವಾದದ್ದನ್ನು ನಾವೇ ಆಗಲಿ ಸ್ವರ್ಗದಿಂದ ಬಂದ ಒಬ್ಬ ದೇವದೂತನೇ ಆಗಲಿ ಸುವಾರ್ತೆಯಾಗಿ ಪ್ರಕಟಪಡಿಸುವುದಾದರೆ ಅವನು ಶಾಪಗ್ರಸ್ತನಾಗಲಿ. 9 ನಾವು ಮೊದಲು ಹೇಳಿದಂತೆ ಈಗಲೂ ನಾನು ಪುನಃ ಹೇಳುವುದೇನೆಂದರೆ, ನೀವು ಸ್ವೀಕರಿಸಿದ್ದಕ್ಕಿಂತ ಭಿನ್ನವಾದದ್ದನ್ನು ನಿಮಗೆ ಸುವಾರ್ತೆಯಾಗಿ ಯಾವನಾದರೂ ಪ್ರಕಟಿಸುವುದಾದರೆ ಅವನು ಶಾಪಗ್ರಸ್ತನಾಗಲಿ.
10 ವಾಸ್ತವದಲ್ಲಿ ನಾನು ಒಡಂಬಡಿಸಲು ಪ್ರಯತ್ನಿಸುತ್ತಿರುವುದು ಮನುಷ್ಯರನ್ನೊ ದೇವರನ್ನೊ? ಅಥವಾ ನಾನು ಮನುಷ್ಯರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೇನೊ? ನಾನು ಇನ್ನೂ ಮನುಷ್ಯರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿರುವುದಾದರೆ ಕ್ರಿಸ್ತನ ದಾಸನಾಗಿರೆನು. 11 ಸಹೋದರರೇ, ನನ್ನಿಂದ ನಿಮಗೆ ಪ್ರಕಟಿಸಲ್ಪಟ್ಟ ಸುವಾರ್ತೆಯು ಮಾನವ ರೀತಿಯದ್ದಲ್ಲ ಎಂಬುದನ್ನು ನಾನು ನಿಮ್ಮ ಗಮನಕ್ಕೆ ತರುತ್ತೇನೆ. 12 ನಾನು ಅದನ್ನು ಮನುಷ್ಯನಿಂದ ಹೊಂದಲಿಲ್ಲ ಅಥವಾ ಯಾರೂ ಅದನ್ನು ನನಗೆ ಕಲಿಸಲಿಲ್ಲ, ಯೇಸು ಕ್ರಿಸ್ತನಿಂದ ಪಡೆದ ಪ್ರಕಟನೆಯಿಂದಲೇ ನಾನು ಅದನ್ನು ತಿಳಿದುಕೊಂಡೆನು.
13 ನಾನು ಮುಂಚೆ ಯೆಹೂದಿಮತದಲ್ಲಿದ್ದಾಗ ನನ್ನ ನಡತೆ ಹೇಗಿತ್ತು ಎಂಬುದರ ಕುರಿತು ನೀವು ಕೇಳಿಸಿಕೊಂಡಿದ್ದೀರಿ; ನಾನು ದೇವರ ಸಭೆಯನ್ನು ಮಿತಿಮೀರಿ ಹಿಂಸಿಸುತ್ತಾ ಅದನ್ನು ಧ್ವಂಸಗೊಳಿಸುತ್ತಾ ಇದ್ದೆನು. 14 ನಾನು ನನ್ನ ಪಿತೃಗಳ ಸಂಪ್ರದಾಯಗಳ ವಿಷಯದಲ್ಲಿ ಬಹಳ ಶ್ರದ್ಧೆಯುಳ್ಳವನಾಗಿದ್ದುದರಿಂದ ನನ್ನ ಕುಲದವರೊಳಗೆ ನನ್ನ ಸಮಪ್ರಾಯದವರಲ್ಲಿ ಅನೇಕರಿಗಿಂತಲೂ ನಾನು ಯೆಹೂದಿಮತದಲ್ಲಿ ಹೆಚ್ಚು ಪ್ರಗತಿಯನ್ನು ಮಾಡುತ್ತಾ ಇದ್ದೆನು. 15 ಆದರೆ ನನ್ನ ತಾಯಿಯ ಗರ್ಭದಿಂದ ನನ್ನನ್ನು ಪ್ರತ್ಯೇಕಿಸಿ ತನ್ನ ಅಪಾತ್ರ ದಯೆಯಿಂದ ನನ್ನನ್ನು ಕರೆದ ದೇವರು 16 ನಾನು ಆತನ ಮಗನ ಕುರಿತಾದ ಸುವಾರ್ತೆಯನ್ನು ಅನ್ಯಜನಾಂಗಗಳಿಗೆ ಪ್ರಕಟಪಡಿಸಲು ಸಾಧ್ಯವಾಗುವಂತೆ ಅವನನ್ನು ನನ್ನ ಮೂಲಕ ಪ್ರಕಟಪಡಿಸುವುದು ಉತ್ತಮವೆಂದು ಕಂಡಾಗ ನಾನು ಕೂಡಲೆ ಮನುಷ್ಯ ವರ್ಗವನ್ನು ವಿಚಾರಿಸಲು ಹೋಗಲಿಲ್ಲ. 17 ಅಥವಾ ನನಗಿಂತ ಮುಂಚೆ ಅಪೊಸ್ತಲರಾಗಿದ್ದವರನ್ನು ವಿಚಾರಿಸಲು ಯೆರೂಸಲೇಮಿಗೂ ಹೋಗದೆ, ಅರೇಬಿಯಕ್ಕೆ ಹೋಗಿ ಪುನಃ ದಮಸ್ಕಕ್ಕೆ ಹಿಂದಿರುಗಿದೆನು.
18 ಮೂರು ವರ್ಷಗಳ ಬಳಿಕ ನಾನು ಕೇಫನನ್ನು ಭೇಟಿಯಾಗಲು ಯೆರೂಸಲೇಮಿಗೆ ಹೋಗಿ ಹದಿನೈದು ದಿವಸ ಅವನೊಂದಿಗೆ ಉಳಿದುಕೊಂಡೆನು. 19 ಆದರೆ ಕರ್ತನ ತಮ್ಮನಾದ ಯಾಕೋಬನನ್ನೇ ಹೊರತು ಅಪೊಸ್ತಲರಲ್ಲಿ ಬೇರೆ ಯಾರನ್ನೂ ನಾನು ಕಾಣಲಿಲ್ಲ. 20 ನಾನು ಈಗ ನಿಮಗೆ ಬರೆಯುತ್ತಿರುವ ಸಂಗತಿಗಳು ಸುಳ್ಳಲ್ಲವೆಂದು ದೇವರ ಮುಂದೆ ಹೇಳುತ್ತೇನೆ.
21 ಇದಾದ ಮೇಲೆ ನಾನು ಸಿರಿಯ ಮತ್ತು ಕಿಲಿಕ್ಯ ಪ್ರಾಂತಗಳಿಗೆ ಹೋದೆನು. 22 ಆದರೆ ಕ್ರಿಸ್ತನೊಂದಿಗೆ ಐಕ್ಯದಲ್ಲಿದ್ದ ಯೂದಾಯದ ಸಭೆಗಳವರಿಗೆ ನನ್ನ ಮುಖಪರಿಚಯವಿರಲಿಲ್ಲ. 23 ಅವರು, “ಈ ಮುಂಚೆ ನಮ್ಮನ್ನು ಹಿಂಸಿಸುತ್ತಿದ್ದ ಆ ಮನುಷ್ಯನು ಈ ಹಿಂದೆ ತಾನು ಧ್ವಂಸಮಾಡಲು ಪ್ರಯತ್ನಿಸಿದ್ದ ನಂಬಿಕೆಯ ಕುರಿತಾದ ಸುವಾರ್ತೆಯನ್ನೇ ಈಗ ಪ್ರಕಟಿಸುತ್ತಿದ್ದಾನೆ” ಎಂಬುದಾಗಿ ಮಾತ್ರ ನನ್ನ ಬಗ್ಗೆ ಕೇಳಿಸಿಕೊಳ್ಳುತ್ತಿದ್ದರು. 24 ಆದುದರಿಂದ ನನ್ನ ನಿಮಿತ್ತ ಅವರು ದೇವರನ್ನು ಮಹಿಮೆಪಡಿಸಲಾರಂಭಿಸಿದರು.