ಪ್ರಕಟನೆ
12 ಸ್ವರ್ಗದಲ್ಲಿ ಒಂದು ಮಹಾ ಸೂಚನೆಯು ಕಾಣಿಸಿತು; ಒಬ್ಬ ಸ್ತ್ರೀಯು ಸೂರ್ಯನನ್ನು ಧರಿಸಿಕೊಂಡಿದ್ದಳು ಮತ್ತು ಅವಳ ಪಾದಗಳ ಕೆಳಗೆ ಚಂದ್ರನಿದ್ದನು; ಅವಳ ತಲೆಯ ಮೇಲೆ ಹನ್ನೆರಡು ನಕ್ಷತ್ರಗಳುಳ್ಳ ಒಂದು ಕಿರೀಟವಿತ್ತು 2 ಮತ್ತು ಅವಳು ಗರ್ಭಿಣಿಯಾಗಿದ್ದಳು. ಅವಳು ನೋವಿನಿಂದಲೂ ಪ್ರಸವವೇದನೆಯಿಂದಲೂ ಕೂಗುತ್ತಾಳೆ.
3 ಸ್ವರ್ಗದಲ್ಲಿ ಇನ್ನೊಂದು ಸೂಚನೆಯು ಕಾಣಿಸಿತು; ಇಗೋ, ಏಳು ತಲೆಗಳೂ ಹತ್ತು ಕೊಂಬುಗಳೂ ಇರುವ ಅಗ್ನಿವರ್ಣದ ಒಂದು ಮಹಾ ಘಟಸರ್ಪವು ಇತ್ತು. ಅದರ ತಲೆಗಳ ಮೇಲೆ ಏಳು ಮುಕುಟಗಳಿದ್ದವು. 4 ಅದರ ಬಾಲವು ಆಕಾಶದ ನಕ್ಷತ್ರಗಳಲ್ಲಿ ಮೂರನೆಯ ಒಂದು ಭಾಗವನ್ನು ಎಳೆದು ಕೆಳಗೆ ಭೂಮಿಗೆ ಎಸೆಯಿತು. ಇನ್ನೇನು ಹೆರಲಿದ್ದ ಆ ಸ್ತ್ರೀಯು ಹೆತ್ತಾಗ ಅವಳ ಮಗುವನ್ನು ನುಂಗಲಿಕ್ಕಾಗಿ ಆ ಘಟಸರ್ಪವು ಅವಳ ಮುಂದೆ ನಿಂತುಕೊಂಡಿತ್ತು.
5 ಅವಳು ಎಲ್ಲ ಜನಾಂಗಗಳನ್ನು ಕಬ್ಬಿಣದ ಕೋಲಿನಿಂದ ಪಾಲನೆಮಾಡಲಿದ್ದ ಒಬ್ಬ ಪುತ್ರನನ್ನು, ಒಂದು ಗಂಡುಮಗುವನ್ನು ಹೆತ್ತಳು. ಅವಳ ಮಗು ಫಕ್ಕನೆ ದೇವರ ಬಳಿಗೂ ಆತನ ಸಿಂಹಾಸನದ ಬಳಿಗೂ ಎತ್ತಲ್ಪಟ್ಟಿತು. 6 ಆ ಸ್ತ್ರೀಯು ಅರಣ್ಯಕ್ಕೆ ಓಡಿಹೋದಳು; ಅಲ್ಲಿ ಅವಳನ್ನು ಸಾವಿರದ ಇನ್ನೂರ ಅರುವತ್ತು ದಿನಗಳ ವರೆಗೆ ಅವರು ಪೋಷಿಸುವಂತೆ ದೇವರಿಂದ ಸಿದ್ಧಪಡಿಸಲ್ಪಟ್ಟ ಸ್ಥಳವು ಅವಳಿಗಿದೆ.
7 ಸ್ವರ್ಗದಲ್ಲಿ ಯುದ್ಧವು ಆರಂಭವಾಯಿತು: ಮೀಕಾಯೇಲನೂ ಅವನ ದೂತರೂ ಘಟಸರ್ಪದೊಂದಿಗೆ ಯುದ್ಧಮಾಡಿದರು; ಘಟಸರ್ಪವೂ ಅದರ ದೂತರೂ ಯುದ್ಧಮಾಡಿದರು, 8 ಆದರೆ ಅದು ಜಯಶಾಲಿಯಾಗಲಿಲ್ಲ. ಸ್ವರ್ಗದಲ್ಲಿ ಅವರಿಗೆ ಇನ್ನು ಮುಂದೆ ಸ್ಥಳವಿಲ್ಲದೆ ಹೋಯಿತು. 9 ಹೀಗೆ ಇಡೀ ನಿವಾಸಿತ ಭೂಮಿಯನ್ನು ತಪ್ಪುದಾರಿಗೆ ನಡಿಸುತ್ತಿರುವ ಆ ಮಹಾ ಘಟಸರ್ಪ, ಅಂದರೆ ಪಿಶಾಚನೆಂದೂ ಸೈತಾನನೆಂದೂ ಕರೆಯಲ್ಪಡುವ ಪುರಾತನ ಸರ್ಪ ಭೂಮಿಗೆ ದೊಬ್ಬಲ್ಪಟ್ಟನು ಮತ್ತು ಅವನ ದೂತರೂ ಅವನೊಂದಿಗೆ ದೊಬ್ಬಲ್ಪಟ್ಟರು. 10 ಆಗ ಸ್ವರ್ಗದಲ್ಲಿ ಮಹಾ ಧ್ವನಿಯು ಹೀಗೆ ಹೇಳುವುದನ್ನು ನಾನು ಕೇಳಿಸಿಕೊಂಡೆನು:
“ಈಗ ರಕ್ಷಣೆಯೂ ಶಕ್ತಿಯೂ ನಮ್ಮ ದೇವರ ರಾಜ್ಯವೂ ಆತನ ಕ್ರಿಸ್ತನ ಅಧಿಕಾರವೂ ಉಂಟಾಗಿವೆ, ಏಕೆಂದರೆ ಹಗಲೂರಾತ್ರಿ ನಮ್ಮ ದೇವರ ಮುಂದೆ ನಮ್ಮ ಸಹೋದರರನ್ನು ಆಪಾದಿಸುವ ಅವರ ಆಪಾದಕನು ಕೆಳಗೆ ದೊಬ್ಬಲ್ಪಟ್ಟಿದ್ದಾನೆ! 11 ಕುರಿಮರಿಯ ರಕ್ತದಿಂದಲೂ ತಾವು ಸಾಕ್ಷಿನೀಡುವ ವಾಕ್ಯದಿಂದಲೂ ಅವರು ಅವನನ್ನು ಜಯಿಸಿದರು; ಮರಣದ ಎದುರಿನಲ್ಲಿಯೂ ಅವರು ತಮ್ಮ ಪ್ರಾಣಗಳನ್ನು ಪ್ರೀತಿಸಲಿಲ್ಲ. 12 ಈ ಕಾರಣದಿಂದ ಸ್ವರ್ಗವೇ, ಅದರಲ್ಲಿ ವಾಸಮಾಡುವವರೇ ಹರ್ಷಿಸಿರಿ! ಭೂಮಿಗೂ ಸಮುದ್ರಕ್ಕೂ ಅಯ್ಯೋ, ಏಕೆಂದರೆ ಪಿಶಾಚನು ತನಗಿರುವ ಸಮಯಾವಧಿಯು ಸ್ವಲ್ಪವೆಂದು ತಿಳಿದು ಮಹಾ ಕೋಪದಿಂದ ನಿಮ್ಮ ಕಡೆಗೆ ಇಳಿದುಬಂದಿದ್ದಾನೆ.”
13 ಘಟಸರ್ಪವು ತಾನು ಭೂಮಿಗೆ ದೊಬ್ಬಲ್ಪಟ್ಟಿರುವುದನ್ನು ಕಂಡಾಗ ಅದು ಗಂಡುಮಗುವನ್ನು ಹೆತ್ತ ಸ್ತ್ರೀಯನ್ನು ಹಿಂಸಿಸಿತು. 14 ಆದರೆ ಆ ಸ್ತ್ರೀಯು ಅರಣ್ಯದೊಳಗಿರುವ ತನ್ನ ಸ್ಥಳಕ್ಕೆ ಹಾರಿಹೋಗುವಂತೆ ಅವಳಿಗೆ ದೊಡ್ಡ ಗರುಡಪಕ್ಷಿಯ ಎರಡು ರೆಕ್ಕೆಗಳು ಕೊಡಲ್ಪಟ್ಟವು; ಅಲ್ಲಿ ಅವಳು ಒಂದು ಕಾಲ, ಕಾಲಗಳು ಮತ್ತು ಅರ್ಧಕಾಲದ ವರೆಗೆ ಸರ್ಪನ ಮುಖಕ್ಕೆ ಮರೆಯಾಗಿ ಪೋಷಣೆಹೊಂದುತ್ತಾಳೆ.
15 ಆ ಸ್ತ್ರೀಯು ನದಿಯಲ್ಲಿ ಮುಳುಗಿಹೋಗುವಂತೆ ಮಾಡಲಿಕ್ಕಾಗಿ ಸರ್ಪವು ಅವಳ ಹಿಂದೆ ತನ್ನ ಬಾಯೊಳಗಿಂದ ನೀರನ್ನು ನದಿಯಂತೆ ಹೊರಬಿಟ್ಟಿತು. 16 ಆದರೆ ಭೂಮಿಯು ಆ ಸ್ತ್ರೀಯ ಸಹಾಯಕ್ಕೆ ಬಂತು ಮತ್ತು ಭೂಮಿಯು ತನ್ನ ಬಾಯನ್ನು ತೆರೆದು ಘಟಸರ್ಪವು ತನ್ನ ಬಾಯೊಳಗಿಂದ ಹರಿಯಬಿಟ್ಟ ನದಿಯನ್ನು ಕುಡಿದುಬಿಟ್ಟಿತು. 17 ಘಟಸರ್ಪವು ಸ್ತ್ರೀಯ ಮೇಲೆ ಕ್ರೋಧಗೊಂಡು ಅವಳ ಸಂತಾನದವರಲ್ಲಿ ಉಳಿದವರ ಮೇಲೆ, ಅಂದರೆ ದೇವರ ಆಜ್ಞೆಗಳನ್ನು ಕೈಕೊಂಡು ನಡೆದು ಯೇಸುವಿನ ವಿಷಯವಾಗಿ ಸಾಕ್ಷಿಹೇಳುವ ಕೆಲಸವನ್ನು ಮಾಡುವವರ ಮೇಲೆ ಯುದ್ಧಮಾಡುವುದಕ್ಕೆ ಹೊರಟುಹೋಯಿತು.