ಯೆರೆಮೀಯ
27 ಯೋಷೀಯನ ಮಗ ಯೆಹೂದದ ರಾಜ ಯೆಹೋಯಾಕೀಮ ಆಳ್ತಿದ್ದ ಆರಂಭದಲ್ಲಿ ಯೆಹೋವ ಯೆರೆಮೀಯನಿಗೆ ಒಂದು ಸಂದೇಶ ಹೇಳಿದನು. 2 “ಯೆಹೋವ ನನಗೆ ಹೀಗೆ ಹೇಳಿದನು ‘ನೀನು ಹಗ್ಗಗಳನ್ನ, ನೊಗಗಳನ್ನ ಮಾಡಿ ನಿನ್ನ ಕುತ್ತಿಗೆ ಮೇಲೆ ಹಾಕ್ಕೊ. 3 ಆಮೇಲೆ ಅವುಗಳನ್ನ ಯೆರೂಸಲೇಮಿನಲ್ಲಿರೋ ಯೆಹೂದದ ರಾಜ ಚಿದ್ಕೀಯನ ಹತ್ರ ಬಂದಿರೋ ಸಂದೇಶವಾಹಕರ ಕೈಯಲ್ಲಿ ಕೊಟ್ಟು ಕಳಿಸಿ. ಅವರು ಅವುಗಳನ್ನ ಎದೋಮಿನ+ ರಾಜನಿಗೆ ಮೋವಾಬಿನ+ ರಾಜನಿಗೆ ಅಮ್ಮೋನಿಯರ+ ರಾಜನಿಗೆ ತೂರಿನ+ ರಾಜನಿಗೆ ಸೀದೋನಿನ+ ರಾಜನಿಗೆ ಕೊಡ್ಲಿ. 4 ನೀನು ಸಂದೇಶವಾಹಕರ ಮೂಲಕ ಆ ರಾಜರಿಗೆ ಹೇಳಬೇಕಾದ ವಿಷ್ಯ ಏನಂದ್ರೆ:
“ಸೈನ್ಯಗಳ ದೇವರಾದ ಇಸ್ರಾಯೇಲಿನ ದೇವರಾದ ಯೆಹೋವ ಹೇಳೋ ಈ ಮಾತುಗಳನ್ನ ನಿಮ್ಮ ರಾಜರಿಗೆ ಹೇಳಬೇಕು 5 ‘ಭೂಮಿಯನ್ನ, ಮನುಷ್ಯರನ್ನ, ಭೂಮಿ ಮೇಲಿರೋ ಪ್ರಾಣಿಗಳನ್ನ ಕೈಚಾಚಿ ತನ್ನ ಮಹಾ ಶಕ್ತಿಯಿಂದ ಮಾಡಿದ್ದು ನಾನೇ. ಅದನ್ನ ನನಗಿಷ್ಟ ಬಂದವರಿಗೆ ಕೊಟ್ಟಿದ್ದೀನಿ.+ 6 ಈಗ ನಾನು ಈ ಎಲ್ಲ ದೇಶಗಳನ್ನ ನನ್ನ ಸೇವಕ ಬಾಬೆಲಿನ ರಾಜ ಆದ ನೆಬೂಕದ್ನೆಚ್ಚರನಿಗೆ ಕೊಟ್ಟಿದ್ದೀನಿ.+ ಕಾಡುಪ್ರಾಣಿಗಳನ್ನ ಸಹ ಅವನಿಗೆ ಅಧೀನಪಡಿಸಿದ್ದೀನಿ. 7 ಅವನ ರಾಜ್ಯ ಅಂತ್ಯವಾಗೋ ಸಮ್ಯ ಬರೋ ತನಕ ಎಲ್ಲ ದೇಶದವರು ಅವನಿಗೆ, ಅವನ ಮಗನಿಗೆ, ಅವನ ಮೊಮ್ಮಗನಿಗೆ ಸೇವೆ ಮಾಡ್ತಾರೆ.+ ಆಮೇಲೆ ತುಂಬ ದೇಶಗಳು, ದೊಡ್ಡ ದೊಡ್ಡ ರಾಜರು ಅವನನ್ನ ತಮ್ಮ ದಾಸನಾಗಿ ಮಾಡ್ಕೊಳ್ತಾರೆ.’+
8 ‘ಯಾವ ಸಾಮ್ರಾಜ್ಯವಾದ್ರೂ, ದೇಶದವರಾದ್ರೂ, ಬಾಬೆಲಿನ ರಾಜ ನೆಬೂಕದ್ನೆಚ್ಚರನ ಸೇವೆ ಮಾಡೋಕೆ ಒಪ್ಪದಿದ್ರೆ, ಬಾಬೆಲಿನ ರಾಜನ ನೊಗದ ಕೆಳಗೆ ಬರೋಕೆ ಒಪ್ಪದಿದ್ರೆ ನಾನು ಅವ್ರಿಗೆ ಶಿಕ್ಷೆ ಕೊಡ್ತೀನಿ. ನಾನು ಅವ್ರನ್ನ* ರಾಜನ ಕೈಯಿಂದ ನಾಶ ಮಾಡೋ ತನಕ ಕತ್ತಿ,+ ಬರಗಾಲ, ಅಂಟುರೋಗ* ಬರೋ ತರ ಮಾಡ್ತೀನಿ’ ಅಂತ ಯೆಹೋವ ಹೇಳ್ತಾನೆ.
9 ‘ಹಾಗಾಗಿ ನೀವು “ಬಾಬೆಲಿನ ರಾಜನ ಸೇವೆ ಮಾಡೋ ಪರಿಸ್ಥಿತಿ ನಿಮಗೆ ಬರೋದೇ ಇಲ್ಲ” ಅಂತ ಹೇಳ್ತಿರೋ ನಿಮ್ಮ ಪ್ರವಾದಿಗಳ, ಕಣಿಹೇಳುವವರ, ಕನಸುಕಂಡು ಭವಿಷ್ಯ ಹೇಳುವವರ, ಮಂತ್ರತಂತ್ರ ಮಾಡುವವರ, ಮಾಟಗಾರರ ಮಾತನ್ನ ಕೇಳಬೇಡಿ. 10 ಅವರು ನಿಮಗೆ ಹೇಳ್ತಿರೋ ಭವಿಷ್ಯವಾಣಿಗಳೆಲ್ಲ ಸುಳ್ಳೇ. ಅದಕ್ಕೆ ಕಿವಿಗೊಟ್ರೆ ನೀವು ನಿಮ್ಮ ದೇಶದಿಂದ ತುಂಬ ದೂರ ಹೋಗಬೇಕಾಗುತ್ತೆ. ಅಷ್ಟೇ ಅಲ್ಲ ನಿಮ್ಮನ್ನ ಚದರಿಸಿಬಿಡ್ತೀನಿ, ನೀವು ನಾಶ ಆಗ್ತೀರ.
11 ಆದ್ರೆ ಯಾವ ದೇಶದವರು ಬಾಬೆಲಿನ ರಾಜನ ನೊಗದ ಕೆಳಗೆ ಬಂದು ಅವನ ಸೇವೆ ಮಾಡ್ತಾರೋ ಅವ್ರನ್ನ ನಾನು ಅವ್ರ ದೇಶದಲ್ಲೇ ಇರೋಕೆ ಬಿಡ್ತೀನಿ. ಅವರು ವ್ಯವಸಾಯ ಮಾಡಿ ಅಲ್ಲೇ ವಾಸ ಮಾಡ್ತಾರೆ’ ಅಂತ ಯೆಹೋವ ಹೇಳ್ತಾನೆ.”’”
12 ಯೆಹೂದದ ರಾಜ ಚಿದ್ಕೀಯನಿಗೆ+ ನಾನು ಇದೇ ಮಾತುಗಳನ್ನ ಹೇಳ್ದೆ. ಏನಂದ್ರೆ “ಬಾಬೆಲಿನ ರಾಜನ ನೊಗದ ಕೆಳಗೆ ಬಂದು ಅವನ, ಅವನ ಜನ್ರ ಸೇವೆ ಮಾಡಿ. ಆಗ ನೀವು ಬದುಕಿ ಉಳಿತೀರ.+ 13 ನೀನು, ನಿನ್ನ ಜನ ಯಾಕೆ ಕತ್ತಿ,+ ಬರಗಾಲ,+ ಅಂಟುರೋಗಕ್ಕೆ ಬಲಿಯಾಗಬೇಕು?+ ಬಾಬೆಲಿನ ರಾಜನ ಸೇವೆ ಮಾಡದ ದೇಶಗಳಿಗೆ ಇದೇ ಗತಿಯಾಗುತ್ತೆ ಅಂತ ಯೆಹೋವ ಹೇಳಿದ್ದಾನಲ್ಲಾ. 14 ‘ನಿಮಗೆ ಬಾಬೆಲಿನ ರಾಜನ ಸೇವೆ ಮಾಡೋ ಪರಿಸ್ಥಿತಿ ಬರೋದೇ ಇಲ್ಲ’+ ಅಂತ ಹೇಳ್ತಿರೋ ನಿಮ್ಮ ಪ್ರವಾದಿಗಳ ಮಾತನ್ನ ಕೇಳಬೇಡಿ. ಯಾಕಂದ್ರೆ ಅವರು ನಿಮಗೆ ಹೇಳ್ತಿರೋ ಭವಿಷ್ಯ ಸುಳ್ಳು.+
15 ಯೆಹೋವ ಹೇಳೋದು ಏನಂದ್ರೆ ‘ನಾನು ಆ ಪ್ರವಾದಿಗಳನ್ನ ಕಳಿಸಲಿಲ್ಲ. ಆದ್ರೆ ಅವರು ನನ್ನ ಹೆಸ್ರಲ್ಲಿ ಸುಳ್ಳು ಭವಿಷ್ಯ ಹೇಳ್ತಿದ್ದಾರೆ. ನೀವು ಅವ್ರ ಮಾತಿಗೆ ಕಿವಿಗೊಟ್ರೆ ನಾನು ನಿಮ್ಮನ್ನ, ನಿಮಗೆ ಭವಿಷ್ಯ ಹೇಳ್ತಿರೋ ಆ ಪ್ರವಾದಿಗಳನ್ನ ಚದರಿಸಿಬಿಡ್ತೀನಿ, ನೀವು ನಾಶ ಆಗ್ತಿರ.’”+
16 ನಾನು ಪುರೋಹಿತರಿಗೆ ಈ ಎಲ್ಲ ಜನ್ರಿಗೆ ಹೀಗೆ ಹೇಳ್ದೆ “ಯೆಹೋವ ಹೇಳೋದು ಏನಂದ್ರೆ ‘“ನೋಡಿ! ಯೆಹೋವನ ಆಲಯದ ಪಾತ್ರೆಗಳನ್ನ* ತುಂಬ ಬೇಗ ಬಾಬೆಲಿಂದ ವಾಪಸ್ ತರಲಾಗುತ್ತೆ”+ ಅಂತ ಭವಿಷ್ಯ ಹೇಳ್ತಿರೋ ನಿಮ್ಮ ಪ್ರವಾದಿಗಳ ಮಾತು ಕೇಳಬೇಡಿ. ಯಾಕಂದ್ರೆ ಅವರು ನಿಮಗೆ ಹೇಳ್ತಿರೋ ಭವಿಷ್ಯ ಸುಳ್ಳು.+ 17 ಅವರ ಮಾತು ಕೇಳಬೇಡಿ. ಬಾಬೆಲಿನ ರಾಜನ ಸೇವೆ ಮಾಡಿ, ಆಗ ಬದುಕಿ ಉಳಿತೀರ.+ ಈ ಪಟ್ಟಣ ಕೂಡ ನಾಶ ಆಗಲ್ಲ. 18 ನಿಜವಾಗ್ಲೂ ಅವರು ಪ್ರವಾದಿಗಳಾಗಿದ್ರೆ, ಯೆಹೋವನ ಮಾತುಗಳನ್ನೇ ಅವರು ಹೇಳ್ತಿದ್ರೆ ಸೈನ್ಯಗಳ ದೇವರಾದ ಯೆಹೋವನ ಹತ್ರ ಪ್ರಾರ್ಥನೆ ಮಾಡ್ತಾ, ಯೆಹೋವನ ಆಲಯದಲ್ಲೂ ಯೆಹೂದದ ರಾಜನ ಅರಮನೆಯಲ್ಲೂ ಯೆರೂಸಲೇಮಲ್ಲೂ ಉಳಿದಿರೋ ಪಾತ್ರೆಗಳನ್ನ ಬಾಬೆಲಿನವರು ತಗೊಂಡು ಹೋಗದಿರೋ ಹಾಗೆ ಬೇಡ್ಕೊಳ್ಳಲಿ.’
19 ಸೈನ್ಯಗಳ ದೇವರಾದ ಯೆಹೋವ ಕಂಬಗಳ,+ ಸಮುದ್ರ ಅನ್ನೋ ಪಾತ್ರೆಯ,*+ ಬಂಡಿಗಳ,+ ಈ ಪಟ್ಟಣದಲ್ಲಿ ಉಳಿದಿರೋ ಪಾತ್ರೆಗಳ ಬಗ್ಗೆ ಒಂದು ಸಂದೇಶ ಕೊಟ್ಟನು. 20 ಬಾಬೆಲಿನ ರಾಜ ನೆಬೂಕದ್ನೆಚ್ಚರ ಯೆಹೋಯಾಕೀಮನ ಮಗ ಯೆಹೂದದ ರಾಜ ಆದ ಯೆಕೊನ್ಯನನ್ನ, ಯೆಹೂದ ಮತ್ತು ಯೆರೂಸಲೇಮಿನ ಎಲ್ಲ ಪ್ರಮುಖರನ್ನ ಯೆರೂಸಲೇಮಿಂದ ಬಾಬೆಲಿಗೆ ಹಿಡ್ಕೊಂಡು ಹೋದಾಗ ಈ ಎಲ್ಲ ವಸ್ತುಗಳನ್ನ ತಗೊಂಡು ಹೋಗಿರಲಿಲ್ಲ.+ 21 ಯೆಹೋವನ ಆಲಯದಲ್ಲೂ ಯೆಹೂದದ ರಾಜನ ಅರಮನೆಯಲ್ಲೂ ಯೆರೂಸಲೇಮಲ್ಲೂ ಉಳಿದಿರೋ ಪಾತ್ರೆಗಳ ಬಗ್ಗೆ ಸೈನ್ಯಗಳ ದೇವರೂ ಇಸ್ರಾಯೇಲಿನ ದೇವರೂ ಆದ ಯೆಹೋವ ಹೀಗೆ ಹೇಳ್ತಾನೆ 22 ‘“ಅವುಗಳನ್ನ ಬಾಬೆಲಿಗೆ ತಗೊಂಡು ಹೋಗ್ತಾರೆ.+ ನಾನು ಅವುಗಳ ಕಡೆ ಮತ್ತೆ ಗಮನಹರಿಸೋ ದಿನ ತನಕ ಅವು ಅಲ್ಲೇ ಇರುತ್ತೆ. ಆಮೇಲೆ ನಾನು ಅವುಗಳನ್ನ ಈ ಸ್ಥಳಕ್ಕೆ ವಾಪಸ್ ತರ್ತಿನಿ” ಅಂತ ಯೆಹೋವ ಹೇಳ್ತಾನೆ.’”+