1 ಗ್ರೀಕ್ ಶಾಸ್ತ್ರಗ್ರಂಥದೊಳಗೆ ದೇವರ ಹೆಸರಿನ (יהוה) ತರುವಿಕೆ
(ಬೆಂಬಲಿಸುವಂಥ ಹನ್ನೆರಡು ಅವಶಿಷ್ಟಗಳೊಂದಿಗೆ)
ಸದ್ಯಕ್ಕೆ ಅಸ್ತಿತ್ವದಲ್ಲಿರುವ ಮೂಲ ಗ್ರೀಕ್ ಗ್ರಂಥಪಾಠದ ಹಸ್ತಪ್ರತಿಗಳಲ್ಲಿ ಮಾತ್ರವಲ್ಲ ಅನೇಕ ಪುರಾತನ ಮತ್ತು ಆಧುನಿಕ ಭಾಷಾಂತರಗಳಲ್ಲಿಯೂ ದೇವರ ಹೆಸರು ಇಲ್ಲದಿರುವುದು ಗಮನಾರ್ಹ ವಾಸ್ತವಾಂಶಗಳಲ್ಲಿ ಒಂದಾಗಿದೆ. ಪುರಾತನ ಹೀಬ್ರು ಶಾಸ್ತ್ರಗ್ರಂಥದಲ್ಲಿ ಆ ಹೆಸರು ಸುಮಾರು 7,000 ಬಾರಿ יהוה ಎಂಬ ನಾಲ್ಕು ಅಕ್ಷರಗಳಿಂದ ಪ್ರತಿನಿಧಿಸಲ್ಪಟ್ಟಿದೆ. ಸಾಮಾನ್ಯವಾಗಿ ಈ ಅಕ್ಷರಗಳನ್ನು ಟೆಟ್ರಗ್ರಾಮಟಾನ್ (ಚತುರಕ್ಷರಿ) ಎಂದು ಕರೆಯಲಾಗುತ್ತದೆ ಮತ್ತು ಇದು YHWH (ಅಥವಾ, JHVH) ಎಂಬ ಇಂಗ್ಲಿಷ್ ಅಕ್ಷರಗಳಿಂದ ಪ್ರತಿನಿಧಿಸಲ್ಪಟ್ಟಿದೆ. ಈ ಹೆಸರಿನ ನಿಖರವಾದ ಉಚ್ಚಾರಣೆಯು ಇಂದು ತಿಳಿದಿಲ್ಲವಾದರೂ ಅದನ್ನು ತರ್ಜುಮೆಮಾಡುವ ಅತಿ ಹೆಚ್ಚು ಜನಪ್ರಿಯ ವಿಧಾನವು “ಯೆಹೋವ” ಎಂದಾಗಿದೆ. ಈ ಹೆಸರಿನ ಸಂಕ್ಷಿಪ್ತ ರೂಪವು “ಯಾಹು” ಎಂದಾಗಿದೆ. ಇದು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿರುವ ಅನೇಕ ಹೆಸರುಗಳಲ್ಲಿ ಕಂಡುಬರುತ್ತದೆ; ಮಾತ್ರವಲ್ಲದೆ “ಜನರೇ, ಯಾಹುವನ್ನು ಸ್ತುತಿಸಿರಿ!” ಎಂಬ ಅರ್ಥವಿರುವ “ಅಲ್ಲೆಲೂಯಾ!” ಅಥವಾ “ಹಲ್ಲೆಲೂಯಾ!” ಎಂಬ ಉದ್ಗಾರದಲ್ಲಿಯೂ ಕಂಡುಬರುತ್ತದೆ.—ಪ್ರಕಟನೆ 19:1, 3, 4, 6.
ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥವು ಪವಿತ್ರ ಹೀಬ್ರು ಶಾಸ್ತ್ರಗ್ರಂಥಕ್ಕೆ ಪ್ರೇರಿತ ಸೇರ್ಪಡೆಯೂ ಪೂರಕವೂ ಆಗಿರುವುದರಿಂದ ಗ್ರೀಕ್ ಗ್ರಂಥಪಾಠದಿಂದ ದೇವರ ಹೆಸರು ಇದ್ದಕ್ಕಿದ್ದಂತೆ ಕಣ್ಮರೆಯಾಗಿರುವುದು ಅಸಮಂಜಸವಾಗಿ ತೋರುತ್ತದೆ. ಅದರಲ್ಲೂ ಮುಖ್ಯವಾಗಿ ಸಾ.ಶ. ಮೊದಲನೆಯ ಶತಮಾನದ ಮಧ್ಯಭಾಗದ ಸುಮಾರಿಗೆ ಯಾಕೋಬನು ಯೆರೂಸಲೇಮಿನಲ್ಲಿದ್ದ ಅಪೊಸ್ತಲರಿಗೂ ಹಿರೀ ಶಿಷ್ಯರಿಗೂ, “ದೇವರು ಅನ್ಯಜನಾಂಗಗಳೊಳಗಿಂದ ತನ್ನ ಹೆಸರಿಗಾಗಿ ಒಂದು ಪ್ರಜೆಯನ್ನು ಆರಿಸಿಕೊಳ್ಳಲು ಹೇಗೆ ಮೊದಲ ಬಾರಿಗೆ ಅವರ ಕಡೆಗೆ ಗಮನಹರಿಸಿದನು ಎಂಬುದನ್ನು ಸಿಮೆಯೋನನು ಸ್ಪಷ್ಟವಾಗಿ ವಿವರಿಸಿದ್ದಾನೆ” ಎಂದು ಹೇಳಿರುವುದರಿಂದ ಇದು ಅಸಮಂಜಸವೇ ಸರಿ. (ಅ. ಕಾರ್ಯಗಳು 15:14) ಅನಂತರ ತನ್ನ ಮಾತನ್ನು ಬೆಂಬಲಿಸಲಿಕ್ಕಾಗಿ ಯಾಕೋಬನು ದೇವರ ಹೆಸರು ಉಪಯೋಗಿಸಲ್ಪಟ್ಟಿರುವ ಆಮೋಸ 9:11, 12 ನ್ನು ಉಲ್ಲೇಖಿಸಿದನು. ಕ್ರೈಸ್ತರು ದೇವರ ಹೆಸರಿಗಾಗಿರುವ ಪ್ರಜೆಯಾಗಿರಬೇಕಾದರೆ ಚತುರಕ್ಷರಿಯಿಂದ ಪ್ರತಿನಿಧಿಸಲ್ಪಟ್ಟಿರುವ ಆತನ ಹೆಸರು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಿಂದ ಏಕೆ ತೆಗೆದುಹಾಕಲ್ಪಡಬೇಕು? ಇದಕ್ಕೆ ಸಾಮಾನ್ಯವಾಗಿ ಕೊಡಲ್ಪಡುವ ವಿವರಣೆಯು ಇನ್ನೆಂದೂ ಸಮಂಜಸವಾದದ್ದಾಗಿರುವುದಿಲ್ಲ. ಸದ್ಯಕ್ಕೆ ಅಸ್ತಿತ್ವದಲ್ಲಿರುವ ನಮ್ಮ ಹಸ್ತಪ್ರತಿಗಳಲ್ಲಿ ದೇವರ ಹೆಸರು ಇಲ್ಲದಿರಲು ಮುಖ್ಯ ಕಾರಣವು, ಸಾ.ಶ.ಪೂ. ಮೂರನೆಯ ಶತಮಾನದಲ್ಲಿ ಆರಂಭವಾದ ಹೀಬ್ರು ಶಾಸ್ತ್ರಗ್ರಂಥದ ಮೊದಲನೆಯ ಭಾಷಾಂತರವಾದ ಗ್ರೀಕ್ ಸೆಪ್ಟ್ಯುಅಜಿಂಟ್ (LXX)ನಲ್ಲಿ ಆ ಹೆಸರು ಇಲ್ಲದಿರುವುದೇ ಆಗಿದೆ ಎಂದು ಬಹಳ ಸಮಯದಿಂದ ಭಾವಿಸಲಾಗಿತ್ತು. ಈ ಅಭಿಪ್ರಾಯವು ಸಾ.ಶ. ನಾಲ್ಕನೆಯ ಮತ್ತು ಐದನೆಯ ಶತಮಾನಗಳ ಮಹಾ ಹಸ್ತಪ್ರತಿಗಳಾದ ವ್ಯಾಟಿಕನ್ ಹಸ್ತಪ್ರತಿ 1209, ಕೋಡೆಕ್ಸ್ ಸೈನೈಟಿಕಸ್ ಮತ್ತು ಕೋಡೆಕ್ಸ್ ಅಲೆಕ್ಸಾಂಡ್ರಿನಸ್ನಲ್ಲಿ ಕಂಡುಬಂದ LXX ಭಾಷಾಂತರದ ಪ್ರತಿಗಳ ಮೇಲೆ ಆಧರಿಸಲ್ಪಟ್ಟಿತ್ತು. ಈ ಎಲ್ಲ ಹಸ್ತಪ್ರತಿಗಳಲ್ಲಿ ದೇವರ ವಿಶಿಷ್ಟವಾದ ಹೆಸರನ್ನು Κύριος (ಕಿರೀಯಾಸ್) ಮತ್ತು θεός (ಥಿಯಾಸ್) ಎಂಬ ಗ್ರೀಕ್ ಪದಗಳಿಂದ ತರ್ಜುಮೆಮಾಡಲಾಗಿದೆ. ಈ ಅನಾಮಧೇಯ ಸ್ಥಿತಿಯು ದೇವರು ಒಬ್ಬನೇ ಎಂಬ ವಾದವನ್ನು ಬೋಧಿಸಲು ಒಂದು ಸಹಾಯಕವಾಗಿದೆ ಎಂದು ಪರಿಗಣಿಸಲಾಗಿತ್ತು.
ಆದರೆ ಧರ್ಮೋಪದೇಶಕಾಂಡ ಪುಸ್ತಕದ ಉತ್ತರಾರ್ಧ ಭಾಗವನ್ನು ಹೊಂದಿದ್ದ LXX ಭಾಷಾಂತರದ ಒಂದು ಪಪೈರಸ್ ಸುರುಳಿಯ ಅನ್ವೇಷಣೆಯಿಂದ ಈ ವಾದವು ಸಂಪೂರ್ಣವಾಗಿ ತಪ್ಪೆಂದು ರುಜುಪಡಿಸಲ್ಪಟ್ಟಿದೆ. ಈ ಅವಶಿಷ್ಟಗಳಲ್ಲಿ ಒಂದರಲ್ಲಿಯೂ ದೇವರ ಹೆಸರಿಗೆ ಬದಲಾಗಿ ಕಿರೀಯಾಸ್ ಅಥವಾ ಥಿಯಾಸ್ ಉಪಯೋಗಿಸಲ್ಪಟ್ಟಿದೆ ಎಂಬುದರ ಉದಾಹರಣೆಯು ಕಂಡುಬರುವುದಿಲ್ಲ. ಆದರೆ ಪ್ರತಿಯೊಂದು ಸಂದರ್ಭದಲ್ಲಿಯೂ ಚತುರಕ್ಷರಿಯನ್ನು ಚಚ್ಚೌಕವಾದ ಹೀಬ್ರು ಅಕ್ಷರಗಳಲ್ಲಿ ಬರೆಯಲಾಗಿದೆ.
ಇಸವಿ 1944ರಲ್ಲಿ ಡಬ್ಲೂ. ಜಿ. ವಾಡೆಲ್ರವರು ದೇವತಾಶಾಸ್ತ್ರದ ಅಧ್ಯಯನಗಳ ಪತ್ರಿಕೆ (ಇಂಗ್ಲಿಷ್) ಎಂಬ ಪುಸ್ತಕದ ಸಂಪುಟ 45, ಪುಟ 158-161ರಲ್ಲಿ ಈ ಪಪೈರಸ್ ಸುರುಳಿಯ ಒಂದು ಅವಶಿಷ್ಟವನ್ನು ಪ್ರಕಟಿಸಿದರು. 1948ರಲ್ಲಿ ಈಜಿಪ್ಟಿನ ಕೈರೋದಲ್ಲಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಗಿಲ್ಯಡ್ ತರಬೇತಿಯನ್ನು ಹೊಂದಿದ್ದ ಇಬ್ಬರು ಮಿಷನೆರಿಗಳು ಈ ಪಪೈರಸ್ನ 18 ಅವಶಿಷ್ಟಗಳ ಛಾಯಾಚಿತ್ರಗಳನ್ನೂ ಅವುಗಳನ್ನು ಪ್ರಕಟಿಸುವ ಅನುಮತಿಯನ್ನೂ ಪಡೆದುಕೊಂಡರು. ತರುವಾಯ ಇವುಗಳಲ್ಲಿ 12 ಅವಶಿಷ್ಟಗಳು 1950ರಲ್ಲಿ ಪ್ರಕಟವಾದ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ನೂತನ ಲೋಕ ಭಾಷಾಂತರದ (ಇಂಗ್ಲಿಷ್) ಪುಟ 13, 14ರಲ್ಲಿ ಕಂಡುಬಂದವು. ಈ ಪ್ರಕಾಶನದಲ್ಲಿರುವ ಛಾಯಾಚಿತ್ರಗಳ ಆಧಾರದ ಮೇಲೆ ಈ ಮೂರು ಅಧ್ಯಯನ ಗ್ರಂಥಗಳು ಪ್ರಕಟಿಸಲ್ಪಟ್ಟವು: (1) 1957ರಲ್ಲಿ ಬರ್ಲಿನ್ನ ಕುರ್ಟ್ ಆ್ಯಲಂಡ್ ಮತ್ತು ಎಫ್. ಎಲ್. ಕ್ರಾಸ್ರಿಂದ ಮುದ್ರಣಕ್ಕೆ ಸಿದ್ಧಪಡಿಸಲ್ಪಟ್ಟ ಸ್ಟಡಿಯಾ ಪ್ಯಾಟ್ರಿಸ್ಟಿಕಾ, ಸಂಪುಟ I, ಭಾಗ 1ರ ಪುಟ 339-342ರಲ್ಲಿ ಪ್ರಕಟಿಸಲ್ಪಟ್ಟ ಎ. ವಕಾರಿಯವರ “Papiro Fuad, Inv. 266. Analisi critica dei Frammenti pubblicati in: ‘New World Translation of the Christian Greek Scriptures.’ Brooklyn (N.Y.) 1950 page 13s.,”; (2) 1959ರಲ್ಲಿ Wageningenನಲ್ಲಿ Nederlands Theologisch Tijdschrift ಎಂಬ ಪುಸ್ತಕದ ಸಂಪುಟ XIII, ಪುಟ 442-446ರಲ್ಲಿ ಪ್ರಕಟಿಸಲ್ಪಟ್ಟ ಡಬ್ಲ್ಯೂ. ಬಾರ್ಸ್ರವರ “Papyrus Fouad Inv. No. 266”; (3) 1971ರಲ್ಲಿ ಸಿನ್ಸಿನಾಟಿಯಲ್ಲಿ ಹೀಬ್ರು ಯೂನಿಯನ್ ಕಾಲೆಜ್ ಆ್ಯನುವಲ್ ಎಂಬ ಪುಸ್ತಕದ ಸಂಪುಟ XLII, ಪುಟ 125-131ರಲ್ಲಿ ಪ್ರಕಟಿಸಲ್ಪಟ್ಟ ಜಾರ್ಜ್ ಹವರ್ಡ್ರವರ “The Oldest Greek Text of Deuteronomy.”a
ಇಸವಿ 1959ರಲ್ಲಿ ಬರ್ಲಿನ್ನ ಕುರ್ಟ್ ಆ್ಯಲೆಂಡ್, ಎಫ್. ಎಲ್. ಕ್ರಾಸ್, ಜೀನ್ ಡ್ಯಾನಿಎಲೋ, ಹೆರಾಲ್ಡ್ ರೀಸೆನ್ಫೆಲ್ಡ್ ಮತ್ತು ಡಬ್ಲೂ. ಸಿ. ವ್ಯಾನ್ ಉನ್ನಿಕ್ರಿಂದ ಮುದ್ರಣಕ್ಕೆ ಸಿದ್ಧಪಡಿಸಲ್ಪಟ್ಟ ಸ್ಟಡಿಯಾ ಇವ್ಯಾಂಜಲಿಕಾ ಎಂಬ ಪುಸ್ತಕದ ಪುಟ 614ರಲ್ಲಿ ಪೌಲ್ ಕಹ್ಲೀ ಎಂಬವರು ಈ ಪಪೈರಸ್ನ ಕುರಿತು ಹೇಳಿಕೆ ನೀಡುತ್ತಾ ಬರೆದದ್ದು: “ಹೊಸ ಒಡಂಬಡಿಕೆಯ ಇಂಗ್ಲಿಷ್ ಭಾಷಾಂತರವನ್ನು ಪರಿಚಯಿಸಲಿಕ್ಕಾಗಿ 1950ರಲ್ಲಿ ನ್ಯೂ ಯಾರ್ಕಿನ ಬ್ರೂಕ್ಲಿನ್ನ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯು ಆ ಪಪೈರಸ್ನ ಛಾಯಾಚಿತ್ರದಿಂದ ಅದೇ ಪಪೈರಸ್ನ ಇನ್ನೂ ಅನೇಕ ಪ್ರತಿಗಳನ್ನು ಸಿದ್ಧಪಡಿಸಿತು. ಆ ಪಪೈರಸ್ನ ವೈಶಿಷ್ಟ್ಯವೇನೆಂದರೆ, ಅದು ದೇವರ ಹೆಸರನ್ನು ಹೀಬ್ರು ಚಚ್ಚೌಕ ಅಕ್ಷರಗಳಲ್ಲಿ ಚತುರಕ್ಷರಿಯಿಂದ ಭಾಷಾಂತರಿಸಿದ ವಾಸ್ತವಾಂಶವೇ ಆಗಿತ್ತು. ನನ್ನ ವಿನಂತಿಯ ಮೇರೆಗೆ ಪಪೈರಸ್ನ ಪ್ರಕಟಿಸಲ್ಪಟ್ಟಿರುವ ಅವಶಿಷ್ಟಗಳನ್ನು ಪೇಟರ್ ವಕಾರಿಯು ಪರೀಕ್ಷಿಸಿದ ಫಲಿತಾಂಶವಾಗಿ, ಕೋಡೆಕ್ಸ್ Bಗಿಂತ ಸುಮಾರು 400 ವರುಷಗಳ ಮುಂಚೆಯೇ ಬರೆಯಲ್ಪಟ್ಟಿರಬಹುದಾದ ಈ ಪಪೈರಸ್ ನಮಗೆ ಪರಂಪರಾಗತವಾಗಿ ಬಂದಿರುವ ಧರ್ಮೋಪದೇಶಕಾಂಡ ಪುಸ್ತಕದ ಅತಿ ನಿಖರವಾದ ಸೆಪ್ಟ್ಯುಅಜಿಂಟ್ ಗ್ರಂಥಪಾಠವನ್ನು ಹೊಂದಿದೆ ಎಂದು ಅವರು ತೀರ್ಮಾನಿಸುವಂತಾಯಿತು.”
LXXP. Fouad Inv. 266 ಇದರ ಒಟ್ಟು 117 ಅವಶಿಷ್ಟಗಳು, 1971ರಲ್ಲಿ ಕೈರೋದಲ್ಲಿ Études de Papyrologie, ಸಂಪುಟ 9, ಪುಟ 81-150, 227, 228ರಲ್ಲಿ ಪ್ರಕಟಿಸಲ್ಪಟ್ಟಿವೆ. 1980ರಲ್ಲಿ ಬಾನ್ನಲ್ಲಿ “Papyrologische Texte und Abhandlungen,” ಸಂಪುಟ 27ರ ಲೇಖನಮಾಲೆಯಲ್ಲಿ ಜಾಕೀ ಅಲಿ ಮತ್ತು ಲುಡ್ವಿಕ್ ಕೊಯ್ನನ್ರವರು ಆರಂಭದ ಸೆಪ್ಟ್ಯುಅಜಿಂಟ್ನ ಮೂರು ಸುರುಳಿಗಳು: ಆದಿಕಾಂಡ ಮತ್ತು ಧರ್ಮೋಪದೇಶಕಾಂಡ (ಇಂಗ್ಲಿಷ್) ಎಂಬ ಶೀರ್ಷಿಕೆಯ ಕೆಳಗೆ ಈ ಪಪೈರಸ್ನ ಎಲ್ಲ ಅವಶಿಷ್ಟಗಳ ಛಾಯಾಚಿತ್ರವನ್ನು ಒಳಗೊಂಡ ಸಂಚಿಕೆಯನ್ನು ಪ್ರಕಟಿಸಿದರು.
ಈ ಪಪೈರಸ್ ಸುರುಳಿಯ 12 ಅವಶಿಷ್ಟಗಳ ಛಾಯಾಚಿತ್ರಗಳಿಂದ LXXನ ಅಷ್ಟೊಂದು ಆರಂಭದ ಪ್ರತಿಯಲ್ಲಿ ಚತುರಕ್ಷರಿಯು ಇರುವುದನ್ನು ನಮ್ಮ ಓದುಗರು ಪರೀಕ್ಷಿಸಬಹುದು. ಈ ಪಪೈರಸ್ ಸಾ.ಶ.ಪೂ. ಮೊದಲನೆಯ ಶತಮಾನದ್ದಾಗಿರಬಹುದು, ಅಂದರೆ LXX ಭಾಷಾಂತರ ಆರಂಭಗೊಂಡ ಸುಮಾರು ಎರಡು ಶತಮಾನಗಳ ಅನಂತರದ್ದಾಗಿರಬಹುದು ಎಂದು ಪರಿಣತರು ತಿಳಿಸುತ್ತಾರೆ. ಆದುದರಿಂದ ಮೂಲ ಹೀಬ್ರು ಗ್ರಂಥದಲ್ಲಿ ಎಲ್ಲೆಲ್ಲಾ ದೇವರ ಹೆಸರು ಕಂಡುಬಂತೋ ಅಲ್ಲೆಲ್ಲಾ LXX ಭಾಷಾಂತರದ ಮೂಲ ಪ್ರತಿಯು ಆ ಹೆಸರನ್ನು ಹೊಂದಿತ್ತು ಎಂಬುದನ್ನು ಇದು ರುಜುಪಡಿಸುತ್ತದೆ. ಬೇರೆ ಒಂಬತ್ತು ಗ್ರೀಕ್ ಹಸ್ತಪ್ರತಿಗಳಲ್ಲಿ ಸಹ ದೇವರ ಹೆಸರು ಇದೆ.—NW ರೆಫರೆನ್ಸ್ ಬೈಬಲ್ನ ಪುಟ 1562-1564ನ್ನು ನೋಡಿ.
ಯೇಸು ಕ್ರಿಸ್ತನ ಬಳಿಯಲ್ಲಿ ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥವನ್ನು ಬರೆದ ಅವನ ಶಿಷ್ಯರ ಬಳಿಯಲ್ಲಿ ಚತುರಕ್ಷರಿಯ ರೂಪದಲ್ಲಿ ದೇವರ ಹೆಸರನ್ನು ಹೊಂದಿದ್ದ ಗ್ರೀಕ್ ಸೆಪ್ಟ್ಯುಅಜಿಂಟ್ನ ಪ್ರತಿಗಳಿದ್ದವೊ? ಹೌದು! ಕ್ರಿಸ್ತನ ಮತ್ತು ಅವನ ಅಪೊಸ್ತಲರ ನಂತರವೂ ಅನೇಕ ಶತಮಾನಗಳ ವರೆಗೆ LXXನ ಪ್ರತಿಗಳಲ್ಲಿ ಚತುರಕ್ಷರಿಯು ಇತ್ತು. ಸಾ.ಶ. ಎರಡನೆಯ ಶತಮಾನದ ಪ್ರಥಮಾರ್ಧ ಭಾಗದಲ್ಲಿ ಅಕ್ವಿಲ್ಲನ ಸ್ವಂತ ಗ್ರೀಕ್ ಭಾಷಾಂತರವು ತಯಾರಿಸಲ್ಪಟ್ಟಾಗ, ಅದರಲ್ಲಿ ಸಹ ಪ್ರಾಚೀನ ಹೀಬ್ರು ಅಕ್ಷರಗಳಲ್ಲಿ ಚತುರಕ್ಷರಿಯು ಕಂಡುಬಂತು.
ಸಾ.ಶ. ನಾಲ್ಕನೆಯ ಮತ್ತು ಐದನೆಯ ಶತಮಾನಗಳ ಜೆರೋಮ್ ಎಂಬವನು ಸಮುವೇಲ ಮತ್ತು ಅರಸುಗಳು ಪುಸ್ತಕಗಳ ಕುರಿತಾದ ತನ್ನ ಪ್ರಸ್ತಾವನೆಯಲ್ಲಿ ಹೇಳಿದ್ದು: “ಇಂದಿನ ವರೆಗೂ ಕೆಲವು ಗ್ರೀಕ್ ಸಂಪುಟಗಳಲ್ಲಿ ದೇವರ ಹೆಸರು, ಚತುರಕ್ಷರಿಯು ಪುರಾತನ ಅಕ್ಷರಗಳಲ್ಲಿ ಬರೆಯಲ್ಪಟ್ಟಿರುವುದನ್ನು ನಾವು ನೋಡುತ್ತೇವೆ.” ಹೀಗೆ ಲ್ಯಾಟಿನ್ ವಲ್ಗೆಟ್ ಭಾಷಾಂತರವನ್ನು ಸಿದ್ಧಪಡಿಸಿದ ಮುಖ್ಯ ಭಾಷಾಂತರಕಾರನಾದ ಜೆರೋಮ್ನ ಸಮಯದ ವರೆಗೂ, ನಾಲ್ಕು ಹೀಬ್ರು ಅಕ್ಷರಗಳಲ್ಲಿ ದೇವರ ಹೆಸರನ್ನು ಹೊಂದಿದ್ದ ಹೀಬ್ರು ಶಾಸ್ತ್ರಗ್ರಂಥದ ಗ್ರೀಕ್ ಹಸ್ತಪ್ರತಿಗಳು ಅಸ್ತಿತ್ವದಲ್ಲಿದ್ದವು.
ಯೇಸು ಮತ್ತು ಅವನ ಶಿಷ್ಯರು ಮೂಲ ಹೀಬ್ರು ಭಾಷೆಯಲ್ಲಾಗಲಿ ಗ್ರೀಕ್ ಸೆಪ್ಟ್ಯುಅಜಿಂಟ್ನಲ್ಲಾಗಲಿ ಶಾಸ್ತ್ರವಚನಗಳನ್ನು ಓದಿರುತ್ತಿದ್ದಲ್ಲಿ ಅವರು ದೇವರ ಹೆಸರನ್ನು ಅದರ ಚತುರಕ್ಷರಿ ರೂಪದಲ್ಲಿ ನೋಡಿರಲೇಬೇಕು. ಅಂಥ ಸ್ಥಳಗಳಲ್ಲಿ ಯೇಸು, ಅಂದಿನ ಸಾಂಪ್ರದಾಯಿಕ ಯೆಹೂದಿ ಪದ್ಧತಿಯನ್ನು ಅನುಸರಿಸುತ್ತಾ ದೇವರ ಹೆಸರನ್ನು ಅಗೌರವಿಸುವ ಮತ್ತು ಮೂರನೆಯ ಆಜ್ಞೆಯನ್ನು ಉಲ್ಲಂಘಿಸುವ ಭಯದಿಂದ ಅಡೋನೈ ಎಂದು ಓದಿದನೊ? (ವಿಮೋಚನಕಾಂಡ 20:7) ನಜರೇತಿನ ಸಭಾಮಂದಿರದಲ್ಲಿ ಅವನು ಎದ್ದುನಿಂತು ಯೆಶಾಯನ ಪುಸ್ತಕವನ್ನು ತೆಗೆದುಕೊಂಡು ಚತುರಕ್ಷರಿಯು ಉಪಯೋಗಿಸಲ್ಪಟ್ಟಿದ್ದ ಅದರ ವಚನಗಳನ್ನು (61:1, 2) ಓದಿದಾಗ ದೇವರ ಹೆಸರನ್ನು ಉಚ್ಚರಿಸಲು ಅವನು ನಿರಾಕರಿಸಿದನೊ? ಯೆಹೂದಿ ಶಾಸ್ತ್ರಿಗಳ ಅಶಾಸ್ತ್ರೀಯ ಸಂಪ್ರದಾಯಗಳಿಗೆ ಅವನು ಸಾಮಾನ್ಯವಾಗಿ ತೋರಿಸುತ್ತಿದ್ದ ಅಗೌರವವನ್ನು ಆಗಲೂ ತೋರಿಸುತ್ತಿದ್ದಲ್ಲಿ ಅವನು ಖಂಡಿತವಾಗಿಯೂ ಆ ಹೆಸರನ್ನು ಉಚ್ಚರಿಸಲು ನಿರಾಕರಿಸುತ್ತಿರಲಿಲ್ಲ. ಮತ್ತಾಯ 7:29 ತಿಳಿಸುವುದು: “ಅವನು ಅವರ ಶಾಸ್ತ್ರಿಗಳಂತೆ ಬೋಧಿಸದೆ ಅಧಿಕಾರವಿದ್ದ ವ್ಯಕ್ತಿಯಂತೆ ಬೋಧಿಸುತ್ತಿದ್ದನು.” ಯೇಸು ತನ್ನ ಶಿಷ್ಯರಿಗೆ ಕೇಳಿಸುವಂತೆ ಯೆಹೋವ ದೇವರಿಗೆ ಪ್ರಾರ್ಥಿಸುತ್ತಾ ಹೇಳಿದ್ದು: “ಲೋಕದೊಳಗಿಂದ ನೀನು ನನಗೆ ಕೊಟ್ಟ ಮನುಷ್ಯರಿಗೆ ನಾನು ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ. . . . ನಾನು ಇವರಿಗೆ ನಿನ್ನ ಹೆಸರನ್ನು ತಿಳಿಯಪಡಿಸಿದ್ದೇನೆ ಮತ್ತು ಇನ್ನೂ ತಿಳಿಯಪಡಿಸುವೆನು.”—ಯೋಹಾನ 17:6, 26.
ಈಗ ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ, ಯೇಸುವಿನ ಶಿಷ್ಯರು ತಮ್ಮ ಪ್ರೇರಿತ ಬರಹಗಳಲ್ಲಿ ದೇವರ ಹೆಸರನ್ನು ಉಪಯೋಗಿಸಿದರೊ? ಅಂದರೆ, ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ಮೂಲ ಬರಹಗಳಲ್ಲಿ ದೇವರ ಹೆಸರು ಕಂಡುಬಂತೊ? ಹೌದು ಎಂದು ಉತ್ತರಿಸಲು ನಮಗೆ ಆಧಾರವಿದೆ! ಸಾ.ಶ. ನಾಲ್ಕನೆಯ ಮತ್ತು ಐದನೆಯ ಶತಮಾನಗಳ ಜೆರೋಮ್ ಸೂಚಿಸಿದಂತೆ, ಮತ್ತಾಯನ ಸುವಾರ್ತಾ ವೃತ್ತಾಂತವು ಮೊದಲು ಬರೆಯಲ್ಪಟ್ಟದ್ದು ಹೀಬ್ರು ಭಾಷೆಯಲ್ಲಿ, ಗ್ರೀಕ್ ಭಾಷೆಯಲ್ಲಿ ಅಲ್ಲ. ಅವನು ಹೇಳುವುದು:
“ಲೇವಿಯನೂ ಮೊದಲು ತೆರಿಗೆ ವಸೂಲಿಗಾರನಾಗಿದ್ದು ಅನಂತರ ಅಪೊಸ್ತಲನಾದವನೂ ಆದ ಮತ್ತಾಯನು ಯೂದಾಯದಲ್ಲಿ ಕ್ರಿಸ್ತನ ಸುವಾರ್ತೆಯನ್ನು ಹೀಬ್ರು ಭಾಷೆಯಲ್ಲಿ ಮತ್ತು ಅಕ್ಷರಗಳಲ್ಲಿ ಮೊದಲು ಬರೆದನು; ಇದನ್ನು ಅವನು ಸುನ್ನತಿಯಾದ ವಿಶ್ವಾಸಿಗಳ ಪ್ರಯೋಜನಕ್ಕಾಗಿ ಬರೆದನು. ತದನಂತರ ಯಾರು ಅದನ್ನು ಗ್ರೀಕ್ ಭಾಷೆಗೆ ಭಾಷಾಂತರಿಸಿದರೆಂಬುದು ಖಚಿತವಾಗಿ ತಿಳಿದಿಲ್ಲ. ಮಾತ್ರವಲ್ಲದೆ, ಹುತಾತ್ಮನಾದ ಪಾಂಫಿಲಸನು ದೃಢಪ್ರಯತ್ನದಿಂದ ಸಂಗ್ರಹಿಸಿದ ಹೀಬ್ರು ಭಾಷೆಯ ಪ್ರತಿಯು ತಾನೇ ಇಂದಿನ ವರೆಗೂ ಕೈಸರೈಯದ ಗ್ರಂಥಾಲಯದಲ್ಲಿ ಸಂರಕ್ಷಿಸಲ್ಪಟ್ಟಿದೆ. ಸಿರಿಯದ ಬೆರೋಯ ಪಟ್ಟಣದಲ್ಲಿ ಈ ಸಂಪುಟವನ್ನು ಉಪಯೋಗಿಸುವ ನಜರೇತಿನವರು ನಾನು ಅದನ್ನು ನಕಲುಮಾಡುವಂತೆ ನನಗೆ ಅನುಮತಿಯನ್ನು ಸಹ ನೀಡಿದರು.”—De viris inlustribus (ಸುಪ್ರಸಿದ್ಧ ಪುರುಷರ ಕುರಿತು), ಅಧ್ಯಾಯ III. (ಇ. ಸಿ. ರಿಚರ್ಡ್ಸನ್ರಿಂದ ಮುದ್ರಣಕ್ಕೆ ಸಿದ್ಧಪಡಿಸಲ್ಪಟ್ಟು, 1896ರಲ್ಲಿ ಲೈಪ್ಸಿಗ್ನಲ್ಲಿ “Texte und Untersuchungen zur Geschichte der altchristlichen Literatur,” ಸಂಪುಟ 14ರ ಲೇಖನಮಾಲೆಯ ಪುಟ 8, 9ರಲ್ಲಿ ಪ್ರಕಟಿಸಲ್ಪಟ್ಟ ಲ್ಯಾಟಿನ್ ಗ್ರಂಥಪಾಠದ ಭಾಷಾಂತರ.)
ಪ್ರೇರಿತ ಹೀಬ್ರು ಶಾಸ್ತ್ರಗ್ರಂಥದಿಂದ ಮತ್ತಾಯನು ನೂರಕ್ಕಿಂತಲೂ ಹೆಚ್ಚು ಉಲ್ಲೇಖಗಳನ್ನು ಮಾಡಿದನು. ಆದುದರಿಂದ ಈ ಉಲ್ಲೇಖಗಳಲ್ಲಿ ಎಲ್ಲೆಲ್ಲಾ ದೇವರ ಹೆಸರು ಕಂಡುಬಂತೋ ಅಲ್ಲೆಲ್ಲಾ ಚತುರಕ್ಷರಿಯನ್ನು ನಿಖರವಾಗಿ ತನ್ನ ಹೀಬ್ರು ಭಾಷೆಯ ಸುವಾರ್ತಾ ವೃತ್ತಾಂತದಲ್ಲಿ ಒಳಗೂಡಿಸುವ ಹಂಗು ಅವನಿಗನಿಸಿರಬೇಕು. ಅವನ ಹೀಬ್ರು ವೃತ್ತಾಂತವು 19ನೇ ಶತಮಾನದ ಎಫ್. ಡೆಲಿಚ್ರವರ ಹೀಬ್ರು ಭಾಷಾಂತರದೊಂದಿಗೆ ನಿಕಟವಾಗಿ ಹೊಂದಿಕೆಯಲ್ಲಿದೆ. ಅದರಲ್ಲಿ ಮತ್ತಾಯನ ಸುವಾರ್ತೆಯಲ್ಲಿ ಯೆಹೋವನ ಹೆಸರು 18 ಬಾರಿ ಕಂಡುಬರುತ್ತದೆ. ಮತ್ತಾಯನು LXX ಭಾಷಾಂತರದಿಂದ ಉಲ್ಲೇಖಿಸುವ ಬದಲು ನೇರವಾಗಿ ಹೀಬ್ರು ಶಾಸ್ತ್ರಗ್ರಂಥದಿಂದಲೇ ಉಲ್ಲೇಖಿಸಲು ಬಯಸಿದ್ದನಾದರೂ ಅವನು LXX ಭಾಷಾಂತರದ ಶೈಲಿಯನ್ನೇ ಉಪಯೋಗಿಸಿ ಗ್ರೀಕ್ ಗ್ರಂಥಪಾಠದಲ್ಲಿ ದೇವರ ಹೆಸರನ್ನು ಅದರ ಸರಿಯಾದ ಸ್ಥಳದಲ್ಲಿ ಒಳಗೂಡಿಸಿರಬೇಕು. ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದ ಇತರ ಎಲ್ಲ ಬರಹಗಾರರು ಸಹ ವಚನಗಳಲ್ಲಿ ದೇವರ ಹೆಸರು ಕಂಡುಬರುವಂಥ ಹೀಬ್ರು ಶಾಸ್ತ್ರಗ್ರಂಥದಿಂದ ಅಥವಾ LXX ಭಾಷಾಂತರದಿಂದ ಉಲ್ಲೇಖವನ್ನು ಮಾಡಿದ್ದಾರೆ.
ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥದಲ್ಲಿ ಚತುರಕ್ಷರಿಯ ಉಪಯೋಗದ ಕುರಿತು ಅಮೆರಿಕದ ಜಾರ್ಜಿಯ ವಿಶ್ವವಿದ್ಯಾನಿಲಯದ ಜಾರ್ಜ್ ಹವರ್ಡ್ ಎಂಬವರು 1977ರ ಜರ್ನಲ್ ಆಫ್ ಬಿಬ್ಲಿಕಲ್ ಲಿಟ್ರೇಚರ್ನ ಸಂಪುಟ 96, ಪುಟ 63ರಲ್ಲಿ ಬರೆದದ್ದು: “ಈಜಿಪ್ಟ್ನಲ್ಲಿ ಮತ್ತು ಯೂದಾಯದ ಅರಣ್ಯ ಪ್ರದೇಶದಲ್ಲಿನ ಇತ್ತೀಚಿನ ಅನ್ವೇಷಣೆಗಳು ಕ್ರೈಸ್ತಪೂರ್ವ ಸಮಯಗಳಲ್ಲಿ ದೇವರ ಹೆಸರಿನ ಉಪಯೋಗವನ್ನು ಸಾಕ್ಷಾತ್ತಾಗಿ ನೋಡಲು ಸಂದರ್ಭವನ್ನು ಒದಗಿಸುತ್ತವೆ. ಈ ಅನ್ವೇಷಣೆಗಳು NT [ಹೊಸ ಒಡಂಬಡಿಕೆಯ] ಅಧ್ಯಯನಗಳಿಗೆ ಅತಿ ಪ್ರಾಮುಖ್ಯವಾಗಿವೆ; ಏಕೆಂದರೆ ಅವು ಅತ್ಯಾರಂಭದ ಕ್ರೈಸ್ತ ದಾಖಲೆಗಳೊಂದಿಗೆ ಸಾಹಿತ್ಯಕ ಹೋಲಿಕೆಯನ್ನು ರೂಪಿಸುತ್ತವೆ ಮತ್ತು NT ಲೇಖಕರು ದೇವರ ಹೆಸರನ್ನು ಹೇಗೆ ಉಪಯೋಗಿಸಿದರು ಎಂಬುದನ್ನು ವಿವರಿಸುತ್ತವೆ. OT [ಹಳೆಯ ಒಡಂಬಡಿಕೆಯಿಂದ] ತೆಗೆಯಲ್ಪಟ್ಟ NT ಉಲ್ಲೇಖಗಳಲ್ಲಿ ಮತ್ತು ಪರೋಕ್ಷ ಪ್ರಸ್ತಾಪಗಳಲ್ಲಿ ದೇವರ ಹೆಸರು (יהוה) (ಬಹುಶಃ ಅದರ ಸಂಕ್ಷಿಪ್ತ ರೂಪ) ಮೂಲತಃ ಬರೆಯಲ್ಪಟ್ಟಿತ್ತು, ಆದರೆ ಕಾಲಕ್ರಮೇಣ ಅದು ಮುಖ್ಯವಾಗಿ κς [“ಕರ್ತ” ಎಂಬ ಅರ್ಥವುಳ್ಳ ಕಿರೀಯಾಸ್ ಎಂಬ ಪದದ ಸಂಕ್ಷಿಪ್ತ ರೂಪ] ಎಂಬ ಪರ್ಯಾಯ ಪದದಿಂದ ಬದಲಾಯಿಸಲ್ಪಟ್ಟಿತು ಎಂಬುದಕ್ಕೆ ಮುಂದಿನ ಪುಟಗಳಲ್ಲಿ ಒಂದು ಸಿದ್ಧಾಂತವನ್ನು ಕೊಡುತ್ತೇವೆ. ಈ ರೀತಿಯಲ್ಲಿ ಚತುರಕ್ಷರಿಯನ್ನು ತೆಗೆದುಹಾಕಿರುವುದು, ‘ಕರ್ತನಾದ ದೇವರು’ ಮತ್ತು ‘ಕರ್ತನಾದ ಕ್ರಿಸ್ತನ’ (ಈ ಶೈಲಿಯು ಹಸ್ತಪ್ರತಿ ರೂಪದಲ್ಲಿರುವ NT ಗ್ರಂಥಪಾಠದಲ್ಲಿ ಕಂಡುಬರುತ್ತದೆ) ಮಧ್ಯೆ ಇರುವ ಸಂಬಂಧದ ಕುರಿತು ಆರಂಭದ ಅನ್ಯಜನಾಂಗದ ಕ್ರೈಸ್ತರ ಮನಸ್ಸುಗಳಲ್ಲಿ ಗೊಂದಲವನ್ನು ಉಂಟುಮಾಡಿತು ಎಂಬುದು ನಮ್ಮ ಅನಿಸಿಕೆ.”
ಈ ದೃಷ್ಟಿಕೋನವನ್ನು ನಾವು “ಸಿದ್ಧಾಂತ” ಎಂಬುದಾಗಿ ಅಲ್ಲ, ಬದಲಾಗಿ ಬೈಬಲ್ ಹಸ್ತಪ್ರತಿಗಳ ರವಾನೆಯ ಕುರಿತಾದ ಇತಿಹಾಸದ ವಾಸ್ತವಾಂಶಗಳ ಪ್ರಸ್ತುತಪಡಿಸುವಿಕೆ ಎಂದು ಪರಿಗಣಿಸುತ್ತೇವೆ ಎಂಬ ವಿಷಯವನ್ನು ಹೊರತುಪಡಿಸಿ ಮೇಲೆ ತಿಳಿಸಲಾದ ಬೇರೆಲ್ಲ ವಿಷಯವನ್ನು ನಾವು ಒಪ್ಪುತ್ತೇವೆ.
a LXXನ ಧರ್ಮೋಪದೇಶಕಾಂಡದ P. Fouad Inv. No. 266ರ ಅವಶಿಷ್ಟಗಳ ಛಾಯಾಚಿತ್ರಗಳಿಗಾಗಿ ಪುಟ 600, 601ನ್ನು ನೋಡಿ. ನಾವು ಈ 12 ಅವಶಿಷ್ಟಗಳಿಗೆ ಸಂಖ್ಯೆಯನ್ನು ಕೊಟ್ಟಿದ್ದೇವೆ; ಕೆಲವು ಅವಶಿಷ್ಟಗಳಲ್ಲಿ ವೃತ್ತಮಾಡಲ್ಪಟ್ಟ ಚತುರಕ್ಷರಿಯು ಒಂದಕ್ಕಿಂತ ಹೆಚ್ಚು ಬಾರಿ ಕಂಡುಬರುತ್ತದೆ. ನಂ. 1, ಧರ್ಮೋಪದೇಶಕಾಂಡ 31:28 ರಿಂದ 32:7, 7 ಮತ್ತು 15ನೇ ಸಾಲುಗಳಲ್ಲಿ ಚತುರಕ್ಷರಿಯನ್ನು ತೋರಿಸುತ್ತದೆ; ನಂ. 2 (ಧರ್ಮೋ 31:29, 30) ಅದನ್ನು 6ನೇ ಸಾಲಿನಲ್ಲಿ ತೋರಿಸುತ್ತದೆ; ನಂ. 3 (ಧರ್ಮೋ 20:12-14, 17-19) 3 ಮತ್ತು 7ನೇ ಸಾಲುಗಳಲ್ಲಿ; ನಂ. 4 (ಧರ್ಮೋ 31:26) 1ನೇ ಸಾಲಿನಲ್ಲಿ; ನಂ. 5 (ಧರ್ಮೋ 31:27, 28) 5ನೇ ಸಾಲಿನಲ್ಲಿ; ನಂ. 6 (ಧರ್ಮೋ 27:1-3) 5ನೇ ಸಾಲಿನಲ್ಲಿ; ನಂ. 7 (ಧರ್ಮೋ 25:15-17) 3ನೇ ಸಾಲಿನಲ್ಲಿ; ನಂ. 8 (ಧರ್ಮೋ 24:4) 5ನೇ ಸಾಲಿನಲ್ಲಿ; ನಂ. 9 (ಧರ್ಮೋ 24:8-10) 3ನೇ ಸಾಲಿನಲ್ಲಿ; ನಂ. 10 (ಧರ್ಮೋ 26:2, 3) 1ನೇ ಸಾಲಿನಲ್ಲಿ; ನಂ. 11 ಎರಡು ಭಾಗಗಳಲ್ಲಿ (ಧರ್ಮೋ 18:4-6) 5 ಮತ್ತು 6ನೇ ಸಾಲುಗಳಲ್ಲಿ; ಮತ್ತು ನಂ. 12 (ಧರ್ಮೋ 18:15, 16) 3ನೇ ಸಾಲಿನಲ್ಲಿ.
[ಪುಟ 600, 601ರಲ್ಲಿರುವ ಚಿತ್ರಗಳು]
[LXXನ ಧರ್ಮೋಪದೇಶಕಾಂಡದ P. Fouad Inv. No. 266ರ ಅವಶಿಷ್ಟಗಳ ಛಾಯಾಚಿತ್ರಗಳಿಗಾಗಿ ಪುಟ 600, 601ನ್ನು ನೋಡಿ]