ಪುಟ್ಟನಿಗೆ ಈಗ ಕಂಪ್ಯೂಟರಿನ ಆವಶ್ಯಕತೆ ಇದೆಯೋ?
ಮಕ್ಕಳ ವಿದ್ಯಾಭ್ಯಾಸದಲ್ಲಿ ಕಂಪ್ಯೂಟರ್ ಯಾವ ಪಾತ್ರ ವಹಿಸುತ್ತಾ ಇದೆ?
ಅದೆಷ್ಟು ಉತ್ತಮ ಉಪಾಧ್ಯಾಯ?
ಪುಟ್ಟನ ತಾಯಿ ಅವನ ಅಧ್ಯಾಪಕನಿಗೆ ಶಾಂತಮನಸ್ಸಿನಿಂದ ಕಿವಿಗೊಡುತ್ತಿದ್ದಳು. ಪುಟ್ಟ ಶಾಲೆಯಲ್ಲಿ ಉತ್ತಮವಾಗಿ ಪ್ರಗತಿ ಹೊಂದುತ್ತಿಲ್ಲವೆಂದನು ಅಧ್ಯಾಪಕನು.
“ಹಾಗಾದರೆ ನೀವೇನು ಸಲಹೆ ಕೊಡುತ್ತೀರಿ?” ಎಂದು ಕೇಳಿದಳು ತಾಯಿ.
“ಹೋಮ್ ಕಂಪ್ಯೂಟರಿನ ಕುರಿತು ಯೋಚಿಸಿದ್ದೀರೊ?” ಎಂದರು ಅಧ್ಯಾಪಕರು.
ಈ ಮೇಲೆ ವರ್ಣಿಸಿದ ದೃಶ್ಯವನ್ನು ಚಿತ್ರಿಸುವ ಜಾಹೀರಾತುಗಳು, ಅನೇಕ ಚಿಂತಾಪರರಾದ ಹೆತ್ತವರು, ತಮ್ಮ ಮಕ್ಕಳ ಯೋಗ್ಯ ವಿದ್ಯಾಭ್ಯಾಸ ಹಾಗೂ ಭಾವೀ ಉದ್ಯೋಗ ಪ್ರತೀಕ್ಷೆಗಳಿಗೆ ಅವರು ಕಂಪ್ಯೂಟರಿನ ಸಂಬಂಧದಲ್ಲಿ ಸಕಲವನ್ನೂ ಕಲಿಯಬೇಕೆಂದು ನಂಬುವಂತೆ ಮಾಡಿವೆ. ಇದಲ್ಲದೆ, ಕಂಪ್ಯೂಟರುಗಳು ಕ್ಲಾಸ್ ರೂಮ್ಗಳಲ್ಲಿ ಶೀಘ್ರಗತಿಯಿಂದ ವೃದ್ಧಿಯಾಗುತ್ತಿರುವುದು ಕಂಡುಬರುತ್ತವೆ.
ಕಂಪ್ಯೂಟರಿಗೆ ಈ ಹಿಂದೆ ಅಸಾಧ್ಯವೆಂದೆಣಿಸಿದ ರೀತಿಯಲ್ಲಿ ಶಿಕ್ಷಣ ನೀಡುವ ಮತ್ತು ಕಲ್ಪನಾಶಕ್ತಿ ಮತ್ತು ಸಮಸ್ಯೆಪರಿಹಾರಕ ಸಾಮರ್ಥ್ಯವಿದೆಯೆಂಬುದು ನಿಶ್ಚಯ.
ದೃಷ್ಟಾಂತಕ್ಕೆ, ಒಂದು ಕಂಪ್ಯೂಟರ್ ಕಾರ್ಯಕ್ರಮ ವಿದ್ಯಾರ್ಥಿ ಕಪ್ಪೆಯನ್ನು ಅಂಗಚ್ಛೇದ ಮಾಡುವಂತೆ ಮಾತ್ರವಲ್ಲ ಅದನ್ನು ಪುನ: ಜೋಡಿಸುವಂತೆ ಬಿಡುತ್ತದೆ. ವಿದ್ಯಾರ್ಥಿ ಆ “ಶಸ್ತ್ರಚಿಕಿತ್ಸೆ”ಯನ್ನು ಸರಿಯಾಗಿ ಮಾಡುವಲ್ಲಿ ಕಪ್ಪೆ ಜೀವದಿಂದೆದ್ದು ಪರದೆಯಿಂದ ಕುಪ್ಪಳಿಸುತ್ತಾ ಹೋಗುವ ಬಹುಮಾನ ವಿದ್ಯಾರ್ಥಿಗಳಿಗೆ ದೊರೆಯುತ್ತದೆ. ಇತರ ಕಾರ್ಯಕ್ರಮಗಳು ಗ್ರಹಗಳ ಚಲನೆ, ಭೂವಿವರಣೆ ಇವನ್ನು ಚಿತ್ರಿಸುತ್ತವೆ ಅಥವಾ ಶಿಕ್ಷಾರ್ಥಿಯು ವಿಮಾನ ಮತ್ತು ಕಾರು ನಡೆಸುವಂತೆ ಅಥವಾ ರಾಸಾಯನಿಕ ಪ್ರಯೋಗಗಳನ್ನು ಮಾಡುವಂತೆ ಶಿಕ್ಷಣ ಕೊಡುತ್ತವೆ.
ಕಂಪ್ಯೂಟರನ್ನು ಉಪಯೋಗಿಸುವ ಇನ್ನೊಂದು ವಿಧವನ್ನು ಸಾಮಾನ್ಯವಾಗಿ ಕಂಪ್ಯೂಟರ್ ನೆರವಿನ ವಿದ್ಯೆ ಎಂದು ಕರೆಯಲಾಗುತ್ತದೆ. ಕಂಪ್ಯೂಟರ್ ಒಂದು ಪ್ರಶ್ನೆ ಕೇಳುತ್ತದೆ. ವಿದ್ಯಾರ್ಥಿ ಸರಿಯಾದ ಉತ್ತರ ಕೊಡುವಲ್ಲಿ ಅದು ಮುಂದಿನ ಪ್ರಶ್ನೆಗೆ ಹೋಗುತ್ತದೆ. ಇಲ್ಲದಿದ್ದರೆ ಅದು ಸುಳಿವುಗಳನ್ನು ಕೊಟ್ಟು ವಿದ್ಯಾರ್ಥಿಯನ್ನು ಉತ್ತೇಜಿಸುತ್ತದೆ. ಇದು ವಿದ್ಯಾರ್ಥಿಗೆ ಒಂದೊಂದಾಗಿ ಕಲಿಯುವ ಅನುಭವ ಕೊಟ್ಟು ಅವನು ತನ್ನದೇ ಆದ ಗತಿಯಲ್ಲಿ ಮುಂದುವರಿಯಲು ಬಿಡುತ್ತದೆ. ಇದಲ್ಲದೆ, ಕಂಪ್ಯೂಟರಿಗೆ “ಅನಂತ” ತಾಳ್ಮೆಯಿದ್ದು ವಿದ್ಯಾರ್ಥಿ ತಪ್ಪು ಉತ್ತರ ಕೊಡುವಾಗ ಅಧ್ಯಾಪಕನು ಮಾಡುವಂತೆ ಅದು “ರೇಗು”ವುದಿಲ್ಲ. ಇದೂ ಕಲಿಯಲು ಅನುಕೂಲ.
ಈಗ ಅನೇಕ ಶಾಲೆಗಳಲ್ಲಿ ಕಂಪ್ಯೂಟರ್ ಅಕ್ಷರ ಜ್ಞಾನದ ಕ್ಲಾಸುಗಳಿವೆ. ಕಂಪ್ಯೂಟರನ್ನು ಹೇಗೆ ನಡೆಸುವುದು, ಹೇಗೆ ಕಾರ್ಯಕ್ರಮ ಗೊತ್ತುಮಾಡುವುದು ಎಂಬುದನ್ನು ಈ ಕ್ಲಾಸುಗಳಲ್ಲಿ ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಉದ್ಯೋಗಾಸಕ್ತಿಯುಳ್ಳವರಿಗೆ ಇದು ಅತಿ ಪ್ರಾಮುಖ್ಯವಾಗಸಾಧ್ಯವಿದೆ. ಈ ಪಾಠಕ್ರಮದ ಪ್ರತಿಪಾದಕರು ಎಲ್ಲಾ ವಿದ್ಯಾರ್ಥಿಗಳಿಗೆ ಕಂಪ್ಯೂಟರಿನ ತುಸು ಜ್ಞಾನವಾದರೂ ಇರಬೇಕೆಂದು ಬಲವಾಗಿ ನಂಬುತ್ತಾರೆ. ನಿಜ ಅಥವಾ ಭಾವಿಸಲ್ಪಡುವ ಉದ್ಯೋಗ ಪ್ರತೀಕ್ಷೆಗಳು ಸಹ ಇಂಥ ಕ್ಲಾಸುಗಳನ್ನು ತುಂಬಾ ಹಿಡಿಸುವಂತೆ ಮಾಡುತ್ತವೆ.
ಬರವಣಿಗೆ ಮತ್ತು ಸಂಶೋಧನೆ ಸ್ಕೂಲ್ ಕಂಪ್ಯೂಟರುಗಳ ಇತರ ಉಪಯುಕ್ತ ವಿನಿಯೋಗಗಳು, ಬರವಣಿಗೆಯ ಕ್ಲಾಸುಗಳ ಉಪಾಧ್ಯಾಯರು, ಕಂಪ್ಯೂಟರನ್ನು ಪದ ಪ್ರಕ್ರಿಯಕ (WORD PROCESSOR)ವಾಗಿ ಉಪಯೋಗಿಸುವ ವಿದ್ಯಾರ್ಥಿಗಳು ತಮ್ಮ ಲೇಖನಗಳನ್ನು ಪುನಃ ಬರೆಯಲು ಮತ್ತು ತಿದ್ದಲು—ಇದು ಉತ್ತಮ ಬರವಣಿಗೆಯ ಅವಶ್ಯಭಾಗ—ಹೆಚ್ಚು ಇಷ್ಟಪಡುತ್ತಾರೆಂದು ಅನೇಕ ವೇಳೆ ಕಂಡುಹಿಡಿದಿದ್ದಾರೆ. ಏಕಂದರೆ ಅವರ ಮುಂದೆ ಯಾವಾಗಲೂ ಪೂರ್ತಿಗೊಳಿಸಲ್ಪಟ್ಟ ಮತ್ತು ಚೊಕ್ಕಟವಾದ ಲೇಖನ ಪರದೆಯಿರುತ್ತದೆ.
ಕಂಪ್ಯೂಟರ್ ವಿದ್ಯಾರ್ಥಿಗೆ ಅಗಾಧವಾದ ಸಮಾಚಾರ ಮೂಲವನ್ನೂ ಒದಗಿಸಬಲ್ಲದು. ವಿಶೇಷ ಪ್ರೋಜೆಕ್ಟ್ಗಳ ವಿಷಯ ತಿಳಿಯಲು, ಯೋಗ್ಯಸಾಧನವನ್ನುಪಯೋಗಿಸುತ್ತಾ ಒಂದು ಶಾಲೆಯ ವಿದ್ಯಾರ್ಥಿಗಳು ಇನ್ನೊಂದು ಶಾಲೆಯ ವಿದ್ಯಾರ್ಥಿಗಳನ್ನು ಸಂಪರ್ಕಿಸಬಲ್ಲರು. ದೊಡ್ಡ ಕೇಂದ್ರೀಯ ಲೈಬ್ರೆರಿ ಮತ್ತು ಡೇಟಾ ಬ್ಯಾಂಕುಗಳನ್ನೂ ಅವರು ಸಂಪರ್ಕಿಸಿ, ತಮ್ಮ ಸ್ವಂತ ಶಾಲೆ ಇಟ್ಟುಕೊಳ್ಳಲು ಸಾಧ್ಯವಿಲ್ಲದಿರುವ, ಅನೇಕಾನೇಕ ವಿಷಯಗಳಿರುವ ಅತ್ಯಾಧುನಿಕ ಸಮಾಚಾರವನ್ನು ಪಡೆಯಬಲ್ಲರು.
ಇದೆಲ್ಲಾ ಆಶ್ಚರ್ಯಕರವಾಗಿ ಕೇಳಿಬರುವುದು ನಿಶ್ಚಯ. ಆದರೆ ವಾಸ್ತವವಾಗಿ ಇದು ಹೇಗೆ ಕಾರ್ಯನಡಿಸುತ್ತದೆ? ಕಂಪ್ಯೂಟರಿನ ಮೇಲೆ ಇಟ್ಟಿದ್ದ ನಿರೀಕ್ಷೆ ಅದು ಪೂರೈಸಿದೆಯೋ?
ನಿರೀಕ್ಷೆ ಪೂರೈಸಿದೆಯೋ?
ವಿದ್ಯೆಯಲ್ಲಿ ಕಂಪ್ಯೂಟರನ್ನು ಸಫಲಗೊಳಿಸುವುದು ಶಾಲಾಪಾಠಕ್ರಮವನ್ನು ಸಫಲಗೊಳಿಸುವುದಕ್ಕಿಂತ ಭಿನ್ನವಿಲ್ಲ. ಆವಶ್ಯಕವಾಗಿರುವ ವಿಷಯವು ದಕ್ಷ ಅಧ್ಯಾಪಕರಿಂದ ಕಲಿಸಲ್ಪಡುವ ಯೋಗ್ಯ ರೀತಿಯ ಕಾರ್ಯಕ್ರಮಗಳು. ಈ ಯೋಗ್ಯತೆಗಳು ಪೂರೈಸಲ್ಪಟ್ಟಿವೆಯೋ?
ಕೆಲವು ಶಾಲೆಗಳು ಕಂಪ್ಯೂಟರ್ ತಾಂತ್ರಿಕವಿಜ್ಞಾನವನ್ನು ಕೊಳ್ಳುವ ಅವಸರದಲ್ಲಿ, ಅವುಗಳ ಉಪಯೋಗ ಮತ್ತು ವಿದ್ಯಾರ್ಥಿಗಳ ಆವಶ್ಯಕತೆಗಳನ್ನು ಜಾಗ್ರತೆಯಿಂದ ಪರಿಗಣಿಸದೆ ಕಂಪ್ಯೂಟರುಗಳನ್ನು ಕೊಂಡುಕೊಂಡವು. ಇದರ ಪರಿಣಾಮವಾಗಿ, ಅನೇಕ ಶಾಲೆಗಳಿಗೆ ತಮ್ಮ ಕಂಪ್ಯೂಟರುಗಳಿಗೆ ಯೋಗ್ಯ ಉಪಯೋಗ ಯಾವುದೆಂದು ಕಂಡುಹಿಡಿಯುವ ಅಹಿತಕರವಾದ ಕೆಲಸವಿದೆ.
ಈಗ ಶಾಲಾಕಂಪ್ಯೂಟರುಗಳು ಉಪಯೋಗಿಸಲ್ಪಡುವ ವಿಧ ಅದರ ಸ್ಥಿತಿಗತಿಯನ್ನು ಪ್ರತಿಬಿಂಬಿಸುತ್ತದೆ. ಆಕರ್ಷಕ ಕಾರ್ಯಕ್ರಮ ಮತ್ತು ಕೌಶಲದ ಕಲಿಸುವಿಕೆಗಳಿದ್ದರೂ ಇಂಥ ಕಾರ್ಯಕ್ರಮಗಳು ಶಾಲೆಗಳ ಮೊತ್ತ ಉಪಯೋಗದಲ್ಲಿ ಕೇವಲ ಚಿಕ್ಕ ಅಂಶವೇ ಎಂದು ಸಮೀಕ್ಷೆಗಳು ತಿಳಿಸುತ್ತವೆ. ಕ್ಲಾಸುಗಳು ಉಪಯೋಗಿಸುವ ಕಾರ್ಯಕ್ರಮಗಳಲ್ಲಿ ಅಧಿಕಾಂಶ ಅಭ್ಯಾಸಕ್ಕಾಗಿ ಮತ್ತು ವಾಕ್ಯರಚನಾಅಭ್ಯಾಸಕ್ಕಾಗಿ ಅಥವಾ ಕಂಪ್ಯೂಟರ್ ಅಕ್ಷರಜ್ಞಾನಕ್ಕಾಗಿವೆ.
ಅಭ್ಯಾಸ ಮತ್ತು ವಾಕ್ಯರಚನೆ ಶಾಲೆಗಳಿಗೆ ಅಗತ್ಯ. ಆದರೆ ಒಬ್ಬ ಅಧ್ಯಾಪಕ ಮತ್ತು ಕಂಪ್ಯೂಟರ್ ಅಕ್ಷರಜ್ಞಾನ ಶಿಕ್ಷಕ ಕೇಳಿದ ಪ್ರಶ್ನೆಯ ತರ್ಕವನ್ನು ಅಲ್ಲಗಳೆಯುವುದು ಕಷ್ಟ. ಅವನು ಕೇಳಿದ್ದು: “ವಾಕ್ಯರಚನೆ, ಅಭ್ಯಾಸಪಾಠಗಳು ಧಾರಾಳವಾಗಿರುವ ಸುಮಾರು ರೂ.45ರ ಪುಸ್ತಕ ದೊರೆಯುವಾಗ ರೂ.30 ಸಾವಿರ, 18 ಸಾವಿರ ಅಥವಾ 9 ಸಾವಿರ ರೂಪಾಯಿ ಖರ್ಚುಮಾಡಿ ಇಲೆಕ್ಟ್ರಾನಿಕ್ ಪುಸ್ತಕವನ್ನೇಕೆ ಕೊಳ್ಳಬೇಕು?” ಇದಲ್ಲದೆ, ಕೆಲವು ಶಿಕ್ಷಕರು ಕ್ಲಾಸಿನಲ್ಲಿ ಕಂಪ್ಯೂಟರನ್ನು ಉಪಯೋಗಿಸುವುದರ ಉದ್ದೇಶವನ್ನೇ ಇಂಥ ಪ್ರಯೋಗಗಳು ಸೋಲಿಸುತ್ತವೆ ಎಂದು ಹೇಳುತ್ತಾರೆ. ಏಕಂದರೆ ಯೋಚನೆ ಮತ್ತು ಕಲ್ಪನಾಶಕ್ತಿಯನ್ನು ಉತ್ತೇಜಿಸುವುದರ ಬದಲಿಗೆ ಇವು ಕಲಿಯುವುದನ್ನು ಸರಿ ಮತ್ತು ತಪ್ಪು ಎಂಬ ಉತ್ತರಗಳಿಗೆ ಇಳಿಸುತ್ತವೆ.
ಕಂಪ್ಯೂಟರ್ ಅಕ್ಷರಜ್ಞಾನ ಅಗತ್ಯ ಎಂಬ ಹೇಳಿಕೆ ಕಂಪ್ಯೂಟರ್ ತಯಾರಕರ ಮತ್ತು ಜೊತೆ ಕೈಗಾರಿಕೆಗಳ ಜಾಣತನದ ಗಮನ ಸೆಳೆತವೆಂದು ಅನೇಕರ ಅನಿಸಿಕೆ. ಹಿಂದೆ ಹೇಳಿರುವ ಜಾಹೀರಾತುಗಳ ಕಾರಣ ಮತ್ತು ಈ ಹೊಸ ಯಂತ್ರದ ವಿಷಯದಲ್ಲಿ ಅವರಿಗಿರುವ ಸ್ವಂತ ಭಯದ ಕಾರಣ ಅನೇಕ ಹೆತ್ತವರು, ತಮ್ಮ ಮಕ್ಕಳಿಗೆ ಕಂಪ್ಯೂಟರ್ ಜ್ಞಾನವಿಲ್ಲದಿದ್ದರೆ ತಮ್ಮ ಮಕ್ಕಳು ಜೀವನದಲ್ಲಿ ಪರಾಜಯ ಹೊಂದುವರೆಂದು ಅಭಿಪ್ರಯಿಸುತ್ತಾರೆ. ವಾಸ್ತವವಾಗಿ ಹೇಳುವುದಾದರೆ, ಭಾವೀ ಉದ್ಯೋಗಗಳಲ್ಲಿ ಕೇವಲ ಕೊಂಚ ಉದ್ಯೋಗಗಳು ಕಂಪ್ಯೂಟರ್ ಅಕ್ಷರಜ್ಞಾನದ ಅಂದರೆ ಕಾರ್ಯಕ್ರಮಗಳನ್ನು ಮಾಡುವ ಜ್ಞಾನ, ಕಂಪ್ಯೂಟರ್ ಭಾಷೆ, ಇತ್ಯಾದಿಗಳ ಜ್ಞಾನದ ಅಗತ್ಯವುಳ್ಳವುಗಳು. ಇದಕ್ಕೆ ಬದಲಾಗಿ, ಕಂಪ್ಯೂಟರುಗಳನ್ನು ಉಪಕರಣಗಳಾಗಿ ಅಂದರೆ ಈ ದಿನಗಳಲ್ಲಿ ಟೈಪ್ರೈಟರ್ ಮತ್ತು ಕ್ಯಾಲ್ಕ್ಯುಲೇಟರ್ಗಳನ್ನು ಉಪಯೋಗಿಸುವಂತೆಯೇ ಉಪಯೋಗಿಸಲಾಗುವುದು. ಈ ಯಂತ್ರಗಳನ್ನು ಉಪಯೋಗಿಸುವ ವಿಧವನ್ನು ಕಲಿಯುವುದು ನಿಶ್ಚಯವಾಗಿಯೂ ಪ್ರಯೋಜನಕರ. ಆದರೆ ಅದೇ ಉದ್ಯೋಗದಲ್ಲಿ ಆಸಕ್ತಿಯುಳ್ಳ ಒಬ್ಬನನ್ನು ಬಿಟ್ಟು ಇತರರು ಅವು ಹೇಗೆ ಕೆಲಸಮಾಡುತ್ತವೆಂದು ಅರಿಯದಿರುವುದರ ಕುರಿತು ಚಿಂತಿಸುವುದಿಲ್ಲ. ಈಗಿನ ಅಭಿಪ್ರಾಯವೇನಂದರೆ ಕಂಪ್ಯೂಟರ್ ಅಕ್ಷರಜ್ಞಾನ ಕಲಿಸಲ್ಪಡಬೇಕು, ಆದರೆ ಅದು ಐಚ್ಛಿಕವಾಗಿರಬೇಕು.
ಕಂಪ್ಯೂಟರುಗಳು ಕ್ಲಾಸ್ರೂಮಿಗೆ ಇತ್ತೀಚೆಗೆ ಬಂದವುಗಳಾದುದರಿಂದ ಅವು ತಾಂತ್ರಿಕಜ್ಞಾನವಿಲ್ಲದ ಉಪಾಧ್ಯಾಯರಿಗೆ ವಿದ್ಯಾರ್ಥಿಗಳಷ್ಟೇ ಅಗಮ್ಯ. ಈ ಕಾರಣದಿಂದ ಶಾಲಾ ಅಧಿಕಾರಿಗಳಿಗನುಸಾರ, ಕಂಪ್ಯೂಟರ್ ಶಿಕ್ಷಣ ಮಟ್ಟವನ್ನು ಮೇಲೆತ್ತುವುದಕ್ಕೆ ಇರುವ ದೊಡ್ಡ ತಡೆ, ಬದಲಾವಣೆಗೆ ಪ್ರತಿಭಟನೆಯೇ.
ಒಬ್ಬ ಸ್ಕೂಲ್ ಪ್ರಿನ್ಸಿಪಾಲರು ಹೇಳಿದ್ದು: “ಅನೇಕ ಉಪಾಧ್ಯಾಯರಿಗೆ ಕಂಪ್ಯೂಟರುಗಳು ಅಹಿತಕರ. ಕಂಪ್ಯೂಟರುಗಳು ಇಲ್ಲವೆ ಮತ್ತು ತಮಗೆ ಆಸಕ್ತಿಯಿರಬೇಕೆಂದು ಅವರಿಗೂ ಗೊತ್ತು. ಆದರೆ ಅವರ ತರಬೇತು ಅತ್ಯಂತ ದೊಡ್ಡ ಸಮಸ್ಯೆ.” ಅಧ್ಯಾಪಕರಿಗೆ ಪುನಃ ಶಿಕ್ಷಣನೀಡುವುದಕ್ಕೆ ಸಮಯ ಮತ್ತು ಹಣದ ವೆಚ್ಚವಿದೆ. ಆದರೂ, ಉಪಾಧ್ಯಾಯರು ಹೆಚ್ಚು ಅನುಭವಪಡೆಯುವಲ್ಲಿ ಮತ್ತು ಕಂಪ್ಯೂಟರ್ ಅಕ್ಷರಜ್ಞಾನವುಳ್ಳ ಹೆಚ್ಚು ಮಂದಿ ಉಪಾಧ್ಯಾಯರಾಗುವಲ್ಲಿ ಈ ಉಪಕರಣಕ್ಕೆ ಹೆಚ್ಚು ಉಪಯುಕ್ತ ಉಪಯೋಗ ಕಂಡುಹಿಡಿಯಲ್ಪಡಬಹುದೆಂದು ಶಾಲಾ ಅಧಿಕಾರಿಗಳ ಭರವಸೆ.
ಹೆತ್ತವರು ಮಾಡಲು ಅವಶ್ಯವಿರುವ ಸಂಗತಿಗಳು
ಹಾಗಾದರೆ ಪುಟ್ಟನಿಗೆ ಈಗ ನಿಜವಾಗಿಯೂ ಕಂಪ್ಯೂಟರಿನ ಅಗತ್ಯವಿದೆಯೇ? ಇದಕ್ಕೆ ಉತ್ತರ ಹೆತ್ತವರಾದ ನಿಮ್ಮ ಮೇಲೆ ಹೊಂದಿಕೊಂಡಿರಬಹುದು. ಕಂಪ್ಯೂಟರ್ ಇಲ್ಲದೆ ಇರುವಲ್ಲಿ ನಿಮ್ಮ ಮಗ ವಿಫಲಗೊಳ್ಳುವನೆಂಬುದು ನಿಮ್ಮ ಚಿಂತೆಯಾಗಿದ್ದರೆ ಈ ಮೇಲಿನ ಚರ್ಚೆಯಿಂದಾಗಿ ನೀವು ಪ್ರಾಯಶಃ ಚಿತ್ರವನ್ನು ಹೆಚ್ಚು ಸಮತೆಯ ವೀಕ್ಷಣದಿಂದ ನೋಡುವಂತಾಗುವುದು.
This paragraph is missing in archives
ಶಾಲಾಮಕ್ಕಳಿಗೆ ಕಂಪ್ಯೂಟರಿನ ವಿಷಯ ಸ್ವಲ್ಪವಾದರೂ ತಿಳಿದಿರಬೇಕೆಂದು ಶಿಕ್ಷಕರು ಸಾಮಾನ್ಯವಾಗಿ ಒಪ್ಪುತ್ತಾರೆ. ಈ ದೃಷ್ಟಿಯಿಂದ, ಅನೇಕ ಸಾರ್ವಜನಿಕ ಶಾಲೆಗಳು ಇಂದು ವಿದ್ಯಾರ್ಥಿಗಳಿಗೆ ಕಂಪ್ಯೂಟರಿನ ಕುರಿತು ಕಲಿಸುವ ಒಂದಲ್ಲ ಒಂದು ರೀತಿಯ ಕಾರ್ಯಕ್ರಮವನ್ನು ಒದಗಿಸಿ, ಕಂಪ್ಯೂಟರ್, ಕೀಬೋರ್ಡ್, ಡಿಸ್ಕ್ಡ್ರೈವ್, ಪ್ರಿಂಟರ್, ಇತ್ಯಾದಿ, ಮೂಲಭಾಗಗಳ ಮತ್ತು ಕಾರ್ಯಕ್ರಮಗಳ ಪರಿಚಯ ಮಾಡಿಸುತ್ತವೆ. ಶಾಲೆಗಳು ಕಂಪ್ಯೂಟರ್ ಕ್ಲಾಸುಗಳಲ್ಲಿ ಬೇಕಾದ ಉಪಕರಣಗಳನ್ನೂ ವಿದ್ಯಾರ್ಥಿಗಳಿಗೆ ಇವುಗಳನ್ನು ಉಪಯೋಗಿಸುವ ಅನುಭವವನ್ನೂ ಕೊಡುತ್ತವೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಆಸಕ್ತಿಯುಳ್ಳವರು ಮುಂದಿನ ವರ್ಷಗಳಲ್ಲಿ, ಇತರ ವಿದ್ಯಾರ್ಥಿಗಳು ಆರ್ಟ್, ಎಕೌಂಟಿಂಗ್, ಸೆಕ್ರೆಟೇರಿಯೆಟ್ ಮತ್ತಿತರ ಪಾಠಕ್ರಮಗಳನ್ನು ಆರಿಸಿಕೊಳ್ಳುವಂತೆಯೇ ವಿಶೇಷ ಕ್ಲಾಸುಗಳನ್ನು ಆರಿಸಿಕೊಳ್ಳಬಹುದು.
ಕಂಪ್ಯೂಟರುಗಳು ವ್ಯಾಪಕವಾಗಿ ಉಪಯೋಗಿಸಲ್ಪಟ್ಟು, ವಿವಿಧ ಪಾಠಗಳನ್ನು ಕಲಿಸಲು ನವೀನತೆಯ ಕಾರ್ಯಕ್ರಮಗಳನ್ನು ಉಪಯೋಗಿಸುವ ಶಾಲೆಗಳೂ ಇವೆ. ಆದರೆ ಈ ಪಾಠಕ್ರಮ ಇನ್ನೂ ಹೊಸದಾಗಿರುವುದರಿಂದ ಅದು ಸಾಂಪ್ರದಾಯಿಕ ವಿದ್ಯಾಕ್ರಮಗಳಿಗಿಂತ ಹೆಚ್ಚು ಉತ್ತಮವೋ ಅಲ್ಲವೋ ಎಂದು ಯಾರಿಗೂ ನಿಶ್ಚಯವಾಗಿ ತಿಳಿದಿರುವುದಿಲ್ಲ.
ನ್ಯೂಯೋರ್ಕ್ ಟೈಮ್ಸ್ನ ಲೇಖನದಲ್ಲಿ ಬಂದಿದ್ದ ಒಬ್ಬ ಹೈಸ್ಕೂಲ್ ವಿದ್ಯಾರ್ಥಿಯ ಮಾತುಗಳು ಈ ಪರಿಸ್ಥಿತಿಯನ್ನು ಸಾರಾಂಶರೂಪದಲ್ಲಿ ಹೇಳಲು ಯೋಗ್ಯವಾಗಿರಬಹುದು. ಅವನು ಬರೆಯುವುದು: “ವಿದ್ಯಾಭ್ಯಾಸದಲ್ಲಿ ಕಂಪ್ಯೂಟರುಗಳಿಗೆ ಸಾಧನಗಳಾಗಿರುವ ಸ್ಥಾನವಿದೆ. ಆದರೆ ಅಸಮರ್ಥತೆ ಮತ್ತು ಅಸ್ಪಷ್ಟ ಯೋಚನೆಗಳ ವಿರುದ್ಧ ಅವು ಸಾಮಾಜಿಕ ವಿಮೆಯಾಗಿರುವುದಿಲ್ಲ.” ವಿದ್ಯಾರ್ಥಿಗಳು ಹೇಗೆ ಆಲೋಚಿಸಬೇಕೆಂಬುದರ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ ಅವನು ಮುಗಿಸುವುದು: “ಆ ಗುರಿ ಮುಟ್ಟಬೇಕಾದರೆ ತಾಂತ್ರಿಕವಾಗಿ ದೂರಕಿರಿದಾದ ರಸ್ತೆಯಿಲ್ಲ.” (g89 7/22)
[ಪುಟ 26ರಲ್ಲಿರುವಚೌಕ]
“ಒಂದು ಮಗು ಬೀಪ್-ಬೀಪ್ ಶಬ್ದ ಮಾಡುವ ಪೆಟ್ಟಿಗೆಯ ಮುಂದೆ ಕುಳಿತು ಒಂದು ತಾಸು ಕಳೆಯುವ ಬದಲಾಗಿ ಆಸಕ್ತಿ ತೋರಿಸುವ ಹೆತ್ತವರೊಂದಿಗೆ ಅದೇ ತಾಸನ್ನು ಕಳೆದರೆ ಅದು ಎಷ್ಟೋ ಲಾಭದಾಯಕ.”—ನ್ಯೂಯೋರ್ಕ್ ಟೈಮ್ಸ್ನ ಪರ್ಸನಲ್ ಕಂಪ್ಯೂಟರ್ ಅಂಕಣ