ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g92 1/8 ಪು. 24-26
  • ಕೊರಿಂಥ ಎರಡು ಸಮುದ್ರಗಳ ನಗರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕೊರಿಂಥ ಎರಡು ಸಮುದ್ರಗಳ ನಗರ
  • ಎಚ್ಚರ!—1992
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅದರ ಮೂಲಸಂಪತ್ತು
  • ಸೋಲುಗಳು ಮತ್ತು ಚೇತರಿಸಿಕೊಳ್ಳುವಿಕೆ
  • ನಮ್ಮ ಆಲೋಚನೆಗಳು
  • ಮಳೆ ಬಂತು!
  • “ಮಾತಾಡ್ತಾನೇ ಇರು, ಸುಮ್ಮನಿರಬೇಡ”
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
ಎಚ್ಚರ!—1992
g92 1/8 ಪು. 24-26

ಕೊರಿಂಥ ಎರಡು ಸಮುದ್ರಗಳ ನಗರ

“ಪುರಾತನ ಕಾಲದ ಜನರು ದೇವತೆಗಳು ನಿಜವೆಂದು ನಂಬಿದ್ದರು. ಕೆಲವು ಬಾರಿ ನಾನೂ ಹಾಗೆಯೇ ನಂಬುತ್ತೇನೆ.” ಹೀಗೆಂದು, ಒಂದು ಕಾಲದಲ್ಲಿ ಅಪಾಲೊ, ಆ್ಯಫ್ರೊಡೈಟ್‌, ಹರ್ಮೀಸ್‌, ಹರ್ಕ್ಯುಲೀಸ್‌, ಮತ್ತು ಪೊಸೈಡನ್‌ ದೇವತೆಗಳಿಗೆ ಸಮರ್ಪಿಸಿದ್ದ ದೇವಸ್ಥಾನಗಳ ಅವಶೇಷಗಳಿಗೆ ನಮ್ಮನ್ನು ಕೊಂಡೊಯ್ಯುತ್ತಿದ್ದ ಗೈಡ್‌ ಹೇಳಿದಳು. ಗಾಳಿಯಲ್ಲಿ ಮಳೆಯ ವಾಸನೆಯಿತ್ತು, ಮತ್ತು ಸಿಡಿಲು ಮಳೆಯ ಅಲ್ಪ ಸದ್ದು ದೂರದಿಂದ ಕೇಳಿಬರುತ್ತಿತ್ತು. “ಝೀಯುಸ್‌” ಎಂದಳು ಆಕೆ ನಸುನಗೆ ಬೀರುತ್ತಾ.

ಬೆಳಿಗ್ಗೆ ಮೌಂಟ್‌ ಪರ್ನೇಸಸ್‌ ಬೆಟ್ಟದ ಮೇಲೆ ಸಿಡಿಲು ಮಳೆಮೋಡ ಕವಿದಿತ್ತು. ಅದು ಬೇಗನೆ ಕೊರಿಂಥ ಕೊಲಿಯ್ಲಲ್ಲಿ ಹರಡಿ ಭಯಸೂಚಕವಾಗಿ ನಮ್ಮ ಮೇಲೆ ಕವಿಯುತ್ತಿತ್ತು. ಆದರೆ ನಮ್ಮ ಗೈಡ್‌ ತಪ್ಪದೆ ಹರ್ಷಚಿತ್ತಳಾಗಿದ್ದು ಹಳೆಯ ದಿನಗಳ, ಗ್ರೀಕಿನ ವೈಭವದ, ಮತ್ತು ಕ್ರೈಸ್ತತ್ವದ ಆಗಮನದ ಕುರಿತು ಕಥೆಗಳನ್ನು ಹೊಸೆಯುತ್ತಾ ಹೋದಳು. ಆಕೆ ರಮ್ಯತೆಯಿಂದ ನಿಜತ್ವ, ಕಲ್ಪನೆ, ಚರಿತ್ರೆ, ಮತ್ತು ಪುರಾಣಗಳನ್ನು ಹೇಳುತ್ತಾ ನಮ್ಮ ಮನೋನೇತ್ರಗಳ ಮುಂದೆ ಕಟ್ಟಡಗಳನ್ನು ಕಟ್ಟಿ ಅವುಗಳಲ್ಲಿ ಇನ್ನೊಂದು ಯುಗದ ಜನರನ್ನು ತಂದು ತುಂಬಿಸಿದಳು.

ನಮಗೆ ಮಳೆಯ ಚಿಂತೆ ಇರಲಿಲ್ಲ. ಪೆಲೋಪಾನಿಸಾಸ್‌ ದ್ವೀಪಕಲ್ಪದಲ್ಲಿ ಮಳೆ ಬರುವುದು ವಿರಳ. ಈ ದಕ್ಷಿಣ ಭಾಗದ ದ್ವೀಪಕಲ್ಪ ಗ್ರೀಸಿನ ಅತ್ಯಂತ ಒಣ ಪ್ರದೇಶಗಳಲ್ಲಿ ಒಂದು! ಆಥೆನ್ಸ್‌ ಮಾತ್ರ ಇದಕ್ಕಿಂತ ಹೆಚ್ಚು ಒಣ ಪ್ರದೇಶ. ಆದರೆ ಮಳೆ ಬಂದಾಗೆಲ್ಲಾ, ಅದು ಮೃದು ಮಳೆಯಲ್ಲ. ಅದು ಎತ್ತರ ಪ್ರದೇಶವನ್ನು ಕೊರೆದು ತೊಳೆಯುವ ಮತ್ತು ಕೆಳಗಿರುವ ಕೊರಿಂಥ ಪ್ರಸ್ಥ ಭೂಮಿಯನ್ನು ನೆರೆಮಣ್ಣಿನಿಂದ ಫಲವತ್ತಾಗಿ ಮಾಡುವ ಪ್ರಚಂಡ ಮಳೆ.

ಆಶ್ಚರ್ಯ! ಕೊರಿಂಥವು ಪ್ರಸಿದ್ಧವಾಗಿರುವ ವಿಷಯಗಳಲ್ಲಿ ಒಂದು ಹೊಲದ ಫಲವಾಗಿರಬಹುದೆಂದು ನಾವು ನೆನಸಿರಲಿಲ್ಲ. ಹೌದು, ಲೆವ್ಯಾಂಟ್‌ ಪ್ರದೇಶ, ಕ್ಯಾಲಿಫೋರ್ನಿಯ, ಯಾ ಇನ್ನಾವ ಪ್ರದೇಶದಲ್ಲೇ ಬೆಳೆದು ನಾವು ಸಂತೋಷದಿಂದ ಜಗಿಯು, ಇಂಗ್ಲಿಷಿನಲ್ಲಿ ಕರಂಟ್‌ ಎಂದು ಕರೆಯಲ್ಪಡುವ ಒಣದ್ರಾಕ್ಷಿ, ಭಾಷಾಮಾಲಿನ್ಯದಿಂದಾಗಿ ಕರಂಟ್‌ ಎಂದಾಗಿರುವ ಕೊರಿಂಥದ ಹೆಸರನ್ನು ಧರಿಸಿರುತ್ತದೆ.

ಅದರ ಮೂಲಸಂಪತ್ತು

ಅಲ್ಲಿಯ ಮಣ್ಣು, ಹೋಮರ್‌ ಕವಿಯ “ವೆಲ್ತ್‌ ಕೊರಿಂಥ” (ಕೊರಿಂಥ ಐಶ್ವರ್ಯ) ಎಂಬ ಗುಣ ವಾಚಕಕ್ಕೆ ಕಾರಣವಾಗಿದ್ದಿರಬಹುದು. ಆದರೂ, ಕೊರಿಂ, ಅದರ ಅಧಿಕಾಂಶ ಸಂಪತ್ತನ್ನು ಐಯೋನಿಯನ್‌ ಮತ್ತು ಈಜಿಯನ್‌ ಸಮುದ್ರಗಳ ವ್ಯಾಪಾರಗಳ ಬಂದರಾಗಿ ಪಡೆಯಿತು. ಹಾರೆಸ್‌ ಕವಿ ಅದನ್ನು “ಬೆಮಾರಿಸ್ವ್‌ ಕೊರಿಂಥಿ,” ಅಥವಾ “ಎರಡು ಸಮುದ್ರಗಳ ಕೊರಿಂಥ” ವೆಂದು ಕರೆದನು. ಆದರೆ ಒಂದು ನಗರ ಎರಡು ಸಮುದ್ರಗಳ ಬಂದರಾಗುವುದು ಹೇಗೆ? ಇದು ಸುಲಭ, ಹೇಗೆಂದರೆ, ಪೆಲೋಪಾನಿಸಾಸನ್ನು ಗ್ರೀಕ್‌ ಭೂಭಾಗದೊಂದಿಗೆ ಜೋಡಿಸುವ ಅಗಲ ಕಿರಿದಾದ ಭೂಕಂಠ (ಗ್ರೀಕ್‌, ಇಸ್ತ್‌ಮಾಸ್‌) ದ ದಕ್ಷಿಣ ಭಾಗದಲ್ಲಿ ಇದು ಇದ್ದುದರಿಂದಲೇ.

ಪೂರ್ವ-ಪಶ್ಚಿಮ ರೇವು ಸಾರಿಗೆ ಮತ್ತು ಗ್ರೀಕರು ಡಯಾಲ್ಕಾಸ್‌ ಎಂದು ಕರೆದ ಹಡಗುಮಾರ್ಗವಾಗಿ ಸಾಮಾನು ಮತ್ತು ಚಿಕ್ಕ ಹಡಗುಗಳು ದಾಟುವಾಗ ವಸೂಲಾದ ಸುಂಕದಿಂದ ಕೊರಿಂಥ ಪ್ರಯೋಜನ ಪಡೆಯಿತು. ಉತ್ತರ ಮತ್ತು ದಕ್ಷಿಣ ಭಾಗಕ್ಕೆ ಭೂಮಾರ್ಗವಾಗಿ ಹೋಗುವ ಸಾಮಾನಿನ ಮೇಲೆ ತೆರಿಗೆಯನ್ನೂ ಕೊರಿಂಥ ವಸೂಲಿ ಮಾಡಿತು. ಹೀಗಿದ್ದುದರಿಂದ, ಮಹಾ ಅಲೆಕ್ಸಾಂಡರನ ತಂದೆ II ನೆಯ ಫಿಲಿಪನು ತನ್ನ ವಿಕಾಸಗೊಳ್ಳುತ್ತಿರುವ ರಾಜ ಪ್ರಭುತ್ವಕ್ಕೆ ಕೊರಿಂಥ ಪ್ರಧಾನವೆಂದೆಣಿಸಿದರ್ದಲ್ಲಿ ಆಶ್ಚರ್ಯವಿಲ್ಲ.

ಸೋಲುಗಳು ಮತ್ತು ಚೇತರಿಸಿಕೊಳ್ಳುವಿಕೆ

ಆದರೆ ಅದು ಶತಮಾನಗಳಿಗೆ ಹಿಂದೆ. ಇಂದು, ಕೊರಿಂಥ ಮತ್ತು ಸರಾನಿಕ್‌ ಕೊಲ್ಲಿಗಳನ್ನು ಒಂದು ಕಾಲುವೆ ಜೋಡಿಸುತ್ತದೆ, ಮತ್ತು ಜಡ ಕೊರಿಂಥ ಹಳ್ಳಿಯನ್ನು ದಾಟುವ ಸೂಪರ್‌ಹೈವೆಗಳಲ್ಲಿ ಲಾರಿಗಳು ರಭಸದಿಂದ ಓಡಾಡುತ್ತವೆ. ನಾವಿಕರು, ಲಾರಿ ನಡೆಸುವವರು ಮತ್ತು ಹಳ್ಳಿಗರು ಕೊರಿಂಥವು ಒಮ್ಮೆ ಮೆಡಿಟರೇನಿಯನಿನ ಕಾಂತವಾಗಿತ್ತೆಂಬುದರ ವಿಷಯ ಲಕ್ಷ್ಯ ಕೊಡುವುದಿಲ್ಲ. ಪ್ರಾಚೀನ ಶೋಧನ ಶಾಸ್ತ್ರಜ್ಞರು ಮತ್ತು ಪ್ರವಾಸಿಗಳು ಮಾತ್ರ ತಮ್ಮ ಕರಣೆ, ಫಿಲ್ಮ್‌, ಮತ್ತು ಕುತೂಹಲದೊಂದಿಗೆ ಇಲ್ಲಿಗೆ ಬರುತ್ತಾರೆ.

ಸಾ.ಶ.ಪೂ. 146ರಲ್ಲಿ, ರೋಮನ್‌ ಅಧಿಪತಿ ಮಮಿಯಸ್‌ ಕೊರಿಂಥವನ್ನು ನಾಶಮಾಡಿ ಕಾರ್ಯತಃ ನಿವಾಸಿಗಳಿಲ್ಲದಂತೆ ಮಾಡಿದನು. ಆದರೂ, ಸುಪ್ತಾವಸ್ಥೆಯ ಒಂದು ಶತಕದ ಬಳಿಕ ಜೂಲಿಯಸ್‌ ಸೀಸರನು ಇದನ್ನು ಗ್ರೀಕ್‌ ರೀತಿ ಮತ್ತು ಯೋಚನೆಗಳಿರುವ ರೋಮನ್‌ ವಲಸೆ ನಗರವಾಗಿ ಚೇತರಿಸಿದನು.

ಕ್ರೈಸ್ತ ಅಪೊಸ್ತಲ ಪೌಲನು ಇಲ್ಲಿಗೆ ಸುಮಾರು ನೂರು ವರ್ಷಗಳ ಬಳಿಕ ಬಂದಾಗ, ಕೊರಿಂಥವು ಪುನಃ ಸ್ಪಂದಕವಾದ ಏಳಿಗೆ ಹೊಂದಿರುವ ನಗರವಾಗಿತ್ತು. ಇಲ್ಲಿಯ ಜನರು ದಿನದಲ್ಲಿ ಕಟ್ಟುವುದರಲ್ಲಿ, ಶಿಲ್ಪಕಲೆಯಲ್ಲಿ ಮತ್ತು ವ್ಯಾಪಾರದಲ್ಲಿ ಸಾಫಲ್ಯ ಪಡೆದಿದ್ದರು. ರಾತ್ರಿಯಲ್ಲೋ? ಅವರು ಮೂರ್ತಿಗಳಿದ್ದ ಮಂದಿರಗಳಲ್ಲಿ ಮತ್ತು ಮದ್ಯದಂಗಡಿಗಳಲ್ಲಿ ಊಟ, ಪಾನಗಳನ್ನು ಮಾಡುತ್ತಾ ಕಾಮಸುಖವನ್ನು ಹುಡುಕುತ್ತಾ ಕತ್ತಲೆಯ ಬೀದಿಗಳಲ್ಲಿ ತಿರುಗಾಡುತ್ತಿದ್ದರು. ಆಸಕ್ತಿಕರವಾಗಿ, ಕೊರಿಂಥವು ಕಾಮುಕ ಯುಗದಲ್ಲಿ ಕುಪ್ರಸಿದ್ಧವಾಗಿದ್ದರೂ ಮತ್ತು “ಕೊರಿಂಥದ ಹುಡುಗಿ” ಯಾರೆಂದು ಪ್ರತಿಯೊಬ್ಬನೂ ತಿಳಿದಿದ್ದರೂ ಧಾರ್ಮಿಕ ವೇಶ್ಯಾವೃತ್ತಿ ಗ್ರೀಕ್‌ ಪದ್ಧತಿಯಾಗಿರಲಿಲ್ಲ. ಕೊರಿಂಥದಲ್ಲಿ ಆ್ಯಫ್ರೊಡೈಟ್‌ ದೇವತೆಗೆ ಮೀಸಲಾಗಿಟ್ಟಿದ್ದ ಒಂದು ಸಾವಿರ ಹುಡುಗಿಯರಿದ್ದರೆಂಬುದು ಸಾ.ಶ.ಪೂ. ಒಂದನೆಯ ಶತಮಾನದ ಭೂಗೋಳಜ್ಞ ಸ್ಟ್ರೇಬೊ ಎಂಬವನ ಸಂಶಯಾಸ್ಪದ ಅಭಿಪ್ರಾಯದ ಮೇಲೆ ಆಧಾರ ಮಾಡಿಕೊಂಡಿದೆ. ಆದರೆ ಅವನೂ ಈ ಸಂಗತಿಯನ್ನು ಹಿಂದಿನ ರೋಮನ್‌ ಪೂರ್ವದ ಸಮಯಾವಧಿಗೆ ಸಂಬಂಧಿಸಿದನು.

ನಮ್ಮ ಆಲೋಚನೆಗಳು

ನಾವು, ಪಶ್ಚಿಮ ರೇವನ್ನು ನಗರಮಧ್ಯದೊಂದಿಗೆ ಜೋಡಿಸಿದ ಪುರಾತನ ರಾಜಮಾರ್ಗವಾದ ಲಿಚೇಯಮ್‌ ಹಾದಿಯಲ್ಲಿ ನಡೆದಾಡಿದಾಗ, ನಮ್ಮ ಗೈಡ್‌ ನಮಗೆ ಸರಕಾರಿ ಕಟ್ಟಡಗಳು, ದೇವಸ್ಥಾನಗಳು, ಅಂಗಡಿಗಳು, ಮಾಂಸದ ಅಂಗಡಿ, ಮತ್ತು ಸಾರ್ವಜನಿಕ ಕಕ್ಕಸು, ಇವೆಲ್ಲಾ ಕ್ರಮಭಂಗವಾಗಿ ಬೆರಕೆಯಾಗಿರುವುದನ್ನು ತೋರಿಸಿದಳು.a ಆದರೂ ಈ ನಗರ ಯೋಜನೆಯ ಕೊರತೆಯ ಕಾರಣದಿಂದ—ಅದಿದ್ದ ಕಾರಣಕ್ಕಾಗಿ ಅಲ್ಲ—ನಾವು ಪೌಲನು ನಿಭಾಯಿಸಿದ ಆಸಕ್ತಿಯ ಹಾದಿ ದೃಶ್ಯವನ್ನು ಆಲೋಚಿಸ ತೊಡಗಿದೆವು. ಅಲ್ಲಿದ್ದ ಜನಸಂದಣಿ ಮತ್ತು ಕೆಲಸವಿಲ್ಲದ ಮಾತುಗಾರರು, ಅಂಗಡಿ ವ್ಯಾಪಾರಿಗಳು, ಗುಲಾಮರು, ಮತ್ತು ಇತರ ವ್ಯಾಪಾರಿಗಳು—ಇವರ ವಿಷಯ ಯೋಚಿಸಿದೆವು.

ನಾವು ಹಾದಿಯ ಅಂತ್ಯಕ್ಕೆ ಬಂದಾಗ ಪೈರೀನ್‌ ಊಟೆಯ ಗುಳುಗುಳನ್ನು ಕೇಳಿದೆವು. ಇದು ಕೆಟ್ಟು ಹೋಗುವ ವಸ್ತುಗಳನ್ನು ಮಾರುವ ಅಂಗಡಿಗಳಿಗೆ ತಣ್ಣೀರನ್ನು, ಶಿಲ್ಪಿಗಳಿಗೆ ತೊಳೆಯುವ ನೀರನ್ನು ಮತ್ತು ಕೊನೆಯದಾಗಿ ಕಕ್ಕಸುಗಳಿಗೆ ತೊಳೆನೀರನ್ನು ಒದಗಿಸಿತು. ಕ್ರೈಸ್ತ ವಿವಾಹಿತ ದಂಪತಿಗಳಾದ ಅಕ್ವಿಲ ಮತ್ತು ಪ್ರಿಸಿಲ್ಲರ ಡೇರೆ ಮಾಡುವ ಅಂಗಡಿ ಇಲ್ಲಿತ್ತೋ ಇಲ್ಲವೋ ಎಂಬುದು ಇಂದು ಯಾರಿಗೂ ತಿಳಿದಿಲ್ಲ. (ಅಪೊಸ್ತಲರ ಕೃತ್ಯಗಳು 18:1-3) ಆದರೆ ಕೆಲವೇ ಅಡಿ ದೂರದಲ್ಲಿ, ಸಾರ್ವಜನಿಕ ಚೌಕ (ಫೋರಮ್‌)ಕ್ಕೆ ಹೋಗುವ ಮೆಟ್ಟಲುಗಳಲ್ಲಿ ಪ್ರಾಚೀನ ಶೋಧನ ಶಾಸ್ತ್ರಜ್ಞರು ಒಂದು ಯೆಹೂದಿ ಸಭಾಮಂದಿರದ (ಸಿನಗಾಗಿನ) ಹಾಸುಗಲ್ಲನ್ನು ಕಂಡು ಹಿಡಿದರು. ಹೀಗೆ, ಇದು ಯೆಹೂದ್ಯರ ವಸತಿಯಾಗಿದ್ದಿರಬಹುದು, ಮತ್ತು ತೀತ ಯುಸ್ತನ ಮನೆ ಇಲ್ಲೇ ಇದ್ದಿರಬಹುದೆಂದು ಊಹಿಸಲು ನಾವು ಸಂತೋಷಪಟ್ಟೆವು.—ಅಪೊಸ್ತಲರ ಕೃತ್ಯಗಳು 18:7.

ಫೋರಮ್‌—ಎಷ್ಟೊಂದು ಆಕರ್ಷಕ ಸ್ಥಳ! ಇದರಲ್ಲಿ ಪೂರ್ವ-ಪಶ್ಚಿಮ ಅಕ್ಷರೇಖೆಯ ಮೇಲೆ ನಿಂತಿರುವ ಎರಡು ಸಮತಲಾಕೃತಿಯ ಮೆಟ್ಟಲು ದಿಬ್ಬಗಳು ಸೇರಿವೆ. ಎರಡೂ ಪಕ್ಕಗಳಲ್ಲಿ ಅಂಗಡಿಗಳಿರುವ ಮೇಲಿನ ಮೆಟ್ಟಲು ದಿಬ್ಬದಲ್ಲಿ ಬೀಮ ಎಂದು ಕರೆಯಲ್ಪಡುವ ಮತ್ತು ಸಾಂಪ್ರದಾಯಿಕ ಸಂದರ್ಭಗಳಲ್ಲಿ ಭಾಷಣಗಾರರು ಉಪಯೋಗಿಸುವ ಎತ್ತಲ್ಪಟ್ಟ ವೇದಿಕೆಯಿದೆ. ಪ್ರಾಂತಾಧಿಪತಿ ಗ್ಯಾಲಿಯೊ ಮುಂದೆ, ನ್ಯಾಯಾಲಯದಲ್ಲಿ ಪೌಲನು ನಿಂತಾಗ ವೈದ್ಯ ಲೂಕನು ಬರೆದ “ನ್ಯಾಯಾಸ್ಥಾನ” ಎಂಬುದರ ಗ್ರೀಕ್‌ ಪದ ಬೀಮ ಎಂದು ನಮ್ಮ ಗೈಡ್‌ ಹೇಳಿದಳು. (ಅಪೊಸ್ತಲರ ಕೃತ್ಯಗಳು 18:12) ಹಾಗಾದರೆ, ಅಪೊಸ್ತಲರ ಕೃತ್ಯಗಳು 18:12-17ರ ಸಂಭವಗಳು ಇದೇ ಸ್ಥಳದಲ್ಲಿ ನಡೆದಿರಬಹುದು! ಪೌಲನು ಯೆಹೂದಿ ದೂರುಗಾರರಿಂದ ಸುತ್ತಲ್ಪಟ್ಟವನಾಗಿ ತನ್ನ ಪ್ರತಿವಾದವನ್ನು ಮಾಡಲು ಎಲ್ಲಿ ನಿಂತಿರಬಹುದಿತ್ತೋ ಅದೇ ಸ್ಥಳದಲ್ಲಿ ನಾವು ನಿಂತಿದ್ದೆವು. ಆದರೆ ಅಲ್ಲ! ಗ್ಯಾಲಿಯೊ ಆ ಕೇಸನ್ನು ಕೇಳಲಿಲ್ಲ. ಅವನು ಪೌಲನನ್ನು ಬಿಡುಗಡೆ ಮಾಡಿ, ಆ ಬಲಪ್ರಯೋಗದ ಜನರ ಗುಂಪು ಸೊಸೇನ್ತನ್ನೇ ಹೊಡೆಯುವಂತೆ ಬಿಟ್ಟನು.

ಈ ತೆರೆದ ನ್ಯಾಯಾಲಯದ ಹಿಂದುಗಡೆ, ಕೆಳ ಮೆಟ್ಟಲು ದಿಬ್ಬದ ಉತ್ತರ ಅಂಚಿನಲ್ಲಿ ‘ಪವಿತ್ರ ಊಟೆ’ ಮತ್ತು ಅದರ ದಿವ್ಯವಾಣಿ ಸ್ಥಾನ ನಿಂತಿದೆ. ಈ ದಿವ್ಯವಾಣಿಯನ್ನು ಹೇಗೆ ಕೊಡಲಾಗುತ್ತಿತ್ತೆಂಬ ವಿಷಯ ಅಭಿಪ್ರಾಯ ವ್ಯತ್ಯಾಸಗಳಿವೆ. ಆದರೂ, ಪ್ರಾರ್ಥಿಸುವವನು ಸಾಕಷ್ಟು ಹಣ ಕೊಡುವಲ್ಲಿ ಪೂಜಾರಿಗಳು ಒರತೆಯ ನೀರನ್ನು ದ್ರಾಕ್ಷಾಮದ್ಯ ಮಾಡಿ ಹೀಗೆ “ಅದ್ಭುತ” ವನ್ನು ಮಾಡುತ್ತಿದ್ದರಂತೆ. ಇದು ಪ್ರಾರ್ಥಿಸುವವನಿಗೆ ಅವನು ಬೇಗನೆ ಪ್ರಕೃತ್ಯಾತೀತವಾಗಿ ಜ್ಞಾನಿಯಾಗುತ್ತಾನೆಂದು ಆಶ್ವಾಸನೆ ದೊರಕಿಸುತ್ತಿತ್ತಂತೆ. ಈ ಗುಡಿ ಪುರಾತನದ ಕ್ರೈಸ್ತ ಪೂರ್ವ ಕೊರಿಂಥದಲ್ಲಿಯೂ ಪೌಲನ ದಿನಗಳ ಪುನಃ ಕಟ್ಟಿದ ನಗರದಲ್ಲೂ ಬಹು ದೀರ್ಘ ಸಮಯದಿಂದ ಉಪಯೋಗಿಸಲ್ಪಟುತ್ತಿತ್ತೆಂದು ಭೂಶೋಧನ ಶಾಸ್ತ್ರಜ್ಞರು ಹೇಳುತ್ತಾರೆ. ಒಂದು ಗುಪ್ತ ದಾರಿಯನ್ನು ಇಣಿಕಿ ನೋಡಿದಾಗ ಅಲ್ಲಿ ದ್ರಾಕ್ಷಾಮದ್ಯವನ್ನು ಮಾಡುವ ತಂತ್ರದ ಸಾಧನಗಳನ್ನು ನೋಡಿ ಧಾರ್ಮಿಕ ಪಂಡಿತ ವೇಷಿಗಳು ಹೋಸಬರಲ್ಲವೆಂದು ನಿಶ್ಚಯಪಟ್ಟುಕೊಂಡು ಹಿಂದೆ ಬಂದೆವು.

ಪೊಸೈಡನ್‌ ಕೊರಿಂಥದ ರಕ್ಷಕ ದೇವತೆಯಾಗಿರಬೇಕಾಗಿದ್ದರೂ ಅಲ್ಲಿರುವ ಮನಸ್ಸಿಗೆ ಹಿಡಿಸುವ ಅತ್ಯುತ್ತಮ ಕಟ್ಟಡವು ಡಾರಿಕ್‌ ಶೈಲಿಯ ಅಪಾಲೊ ದೇವಾಲಯ. ಅದರ 38 ಸ್ತಂಭಗಳಲ್ಲಿ 7 ಈಗ ನಿಂತಿವೆ. 24 ಅಡಿ ಎತ್ತರ ಮತ್ತು ಬುಡದಲ್ಲಿ 6 ಅಡಿ ವ್ಯಾಸವಿರುವ ಪ್ರತಿಯೊಂದು ಸ್ತಂಭವು ಅರೆಗೊಳವಿಯಾಕಾರದ ಒಂದೇ ಸುಣ್ಣಗಲ್ಲಿನಿಂದ ಮಾಡಲ್ಪಟ್ಟಿದ್ದು ಆದಿಯಲ್ಲಿ ಬಿಳಿ ಕಚ್ಚುಗಾರೆಯಿಂದ ಹೊದಿಸಲ್ಪಟ್ಟಿತ್ತು. ನಗರದ ಮೇಲೆ ಮಧ್ಯದಲ್ಲಿ ಎತ್ತರವಾಗಿ ಕುಳಿತಿರುವ, ಈ ಕಪ್ಪು ಮತ್ತು ಮರುಗುತ್ತಿರುವ ಅವಶೇಷಗಳಲ್ಲಿ ಅವಶೇಷವಾಗಿರುವ ಈ ಮುಖ್ಯ ದೇವಾಲಯವು ಅಗಾಧವಾದ ಭಾವುಕತೆಯನ್ನು ಆಹ್ವಾನಿಸುತ್ತದೆ. ಅದು ಗಟೆ ಕವಿ ಬರೆದದ್ದನ್ನು—ವಾಸ್ತು ಶಿಲ್ಪವು “ಘನೀಭವಿಸಿರುವ ಸಂಗೀತ”—ಎಂಬುದನ್ನು ಪ್ರೇಕ್ಷಕನ ಮನಸ್ಸಿಗೆ ಬರಿಸೀತು.

ಮಳೆ ಬಂತು!

“ಬನ್ನಿ. ಇನ್ನೂ ಹೆಚ್ಚು ಸಂಗತಿಗಳನ್ನು ನೋಡಲಿಕ್ಕಿದೆ!” ಫಳೀರ್‌. “ನಾವಿನ್ನೂ ಅಡುಗೆ ಮನೆ ಮತ್ತು ಸೊಗಸಾದ ಊಟದ ಕೋಣೆಗಳಿರುವ ದೇವಸ್ಥಾನಗಳನ್ನು ನೋಡಲಿಲ್ಲ.” ಪಳಪಳ. “ಮತ್ತು ಇರ್ಯಾಸ್ಟಸ್‌ ಕಟ್ಟಿದ ಕಲ್ಲಿನ ನೆಲಗಟ್ಟನ್ನು ನೋಡಬೇಕು.” ವಟವಟ. “ಮತ್ತು ಆ್ಯಫ್ರೊಡೈಟಳ ಮದ್ಯದಂಗಡಿ ಯಾ ಎಸ್ಕ್ಯುಲೇಪಿಯಮನ್ನು ನೋಡದಿರಲು ನಿಮಗೆ ಮನಸ್ಸಿರಲಿಕ್ಕಿಲ್ಲ.” ಹೌದು, ದೊಡ್ಡ ನೀರಿನ ಹನಿಗಳ ಪಳಪಳ ವಟವಟ ಸದ್ದು ಗಾಳಿಮಳೆಯ ಮುನ್‌ಸೂಚಕವಾಗಿತ್ತು.

ಆ ಕ್ಷಣದಲ್ಲಿ ನಮ್ಮ ಭಾವನೆಯಲ್ಲಿದ್ದ ಜನರು ಮತ್ತು ಕಟ್ಟಡಗಳು ಕಾಣದೇ ಹೋದರು. ನಾವು ಬಂದ ದಾರಿಯಲ್ಲಿ, ನಮ್ಮ ಗೈಡ್‌ ನಾವು ನೋಡದೇ ಇದ್ದ ಕೆಲವು ವಸ್ತುಗಳನ್ನು ಇನ್ನೂ ಕಥನ ಮಾಡುತ್ತಿರುವಾಗಲೇ, ಧಾವಿಸಿ ಹಿಂದೆ ಹೋದೆವು. ಈಗ ಹೇರಳವಾಗಿ ಬೀಳುತ್ತಿದ್ದ ಮಳೆನೀರು ನೆಲಗಟ್ಟನ್ನು ಉಜ್ವಲವಾದ ತೊಯಿಸಿದ ವರ್ಣಗಳಾಗಿ ಪರಿವರ್ತಿಸಿ ಒಮ್ಮೆ ಅಭಿಮಾನದಿಂದಿದ್ದ ಕಟ್ಟಡಗಳ ಅಮೃತ ಶಿಲೆಗಳ ಮೇಲಿದ್ದ ದೂಳನ್ನು ತೊಳೆಯಿತು. ಆಕಾಶವು ಥಟ್ಟನೆ ಭಯಂಕರ ಮಳೆಯನ್ನು ಸುರಿಸಿದಾಗ ನಾವು ಓಡಿದೆವು. ನಮ್ಮ ಗೈಡ್‌ ಮುಂದಿನಿಂದ ಎಲ್ಲಿಂದಲೋ, “ಎಲ್ಲರೂ ಬನ್ನಿ!” ಎಂದು ಕರೆಯುವುದು ನಮಗೆ ಇನ್ನೂ ಕೇಳಿಸುತ್ತಿತ್ತು. ಆ ಕುರುಡಾಗಿಸುವ ಸುರಿಮಳೆಯಲ್ಲಿ, ಕೊರಿಂಥದ ಲಿಚೇಯಮ್‌ ಹಾದಿಯ ಮರುಕು ಕಟ್ಟಡಗಳೂ ಕಾಣದೆ ಹೋದವು. ಭೂದೃಶ್ಯವಾಗಲಿ ಸ್ವಪ್ನದೃಶ್ಯವಾಗಲಿ ಯಾವುದೂ ಉಳಿಯಲಿಲ್ಲ. ತೀರಾ ತೊಯಿದು ಹೋಗಿದ್ದ ನಾವು ನಮ್ಮ ಬಸ್ಸಿನ ಕಡೆಗೆ ಓಡಿ ಕಾಫಿ ವಿರಾಮದ ಸಮಯದಲ್ಲಿ ಬಸ್‌ ಓಡಿಸದಿದ್ದರೆ ಸಾಕಿತ್ತು ಎಂದು ನಿರೀಕ್ಷಿಸಿದೆವು.—ದತ್ತ ಲೇಖನ. (g91 1/22)

[ಅಧ್ಯಯನ ಪ್ರಶ್ನೆಗಳು]

a ಮಾಂಸದ ಮಾರುಕಟ್ಟೆ (ಗ್ರೀಕ್‌, ಮಕೆಲನ್‌): ಮಾಂಸ ಮತ್ತು ಮೀನನ್ನು ಮಾರುವ ಅಂಗಡಿಯಾದರೂ ಇತರ ಅನೇಕ ವಸ್ತುಗಳನ್ನೂ ಮಾರಿತು.—1 ಕೊರಿಂಥ 10:25.

[ಪುಟ 24ರಲ್ಲಿರುವಚಿತ್ರ]

(For fully formatted text, see publication)

ಗ್ರೀಸ್‌

ಕೊರಿಂಥ

ಐಓನಿಯನ್‌ ಸಮುದ್ರ

ಈಜಿಯನ್‌ ಸಮುದ್ರ

[ಪುಟ 25 ರಲ್ಲಿರುವಚಿತ್ರ]

ಮೇಲ್ಬದಿ: ಫೋರಮ್‌ನಲ್ಲಿ ಪುನರ್ರಚಿಸಲ್ಪಟ್ಟ ಅಂಗಡಿ

ಮಧ್ಯ: “ಬೀಮ”

ಕೆಳಭಾಗ:ಹಳೆಯ ಅಪಾಲೊ ದೇವಾಲಯ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ