ಫಿಲಿಪ್ಪಿ ಊಟೆಗಳ ಊರು
ನಾವು ಥೆಸಲೊನೀಕವನ್ನು ಸಮೀಪಿಸುವಾಗ ಈಜಿಯನ್ ಸಮುದ್ರದ ಅಲೆಗಳನ್ನು ಸವರುತ್ತಾ ಇಳಿಯುತ್ತಿದ್ದೆವು. ಥಟ್ಟನೆ ನೀರಿನ ಅಂಚಿನಲ್ಲಿ ವಿಮಾನ ನಿಲ್ದಾಣದ ಇಳಿತಪಟ್ಟೆ ತೋರಿಬಂದು ನಮ್ಮ ಕೆಳಗಿಂದ ಧಾವಿಸಿತು. ಅದು ವಿಮಾನಕ್ಕೆ ಎಷ್ಟು ಸಮೀಪವಾಗಿತ್ತೆಂದರೆ ನಾವು ಆಗಲೆ ನೆಲಮುಟ್ಟಿದ್ದೇವೆಂದು ನನ್ನ ಪತ್ನಿ ಭಾವಿಸಿದಳು. “ಇದು ನಮ್ಮ ಅನುಭವದಲ್ಲಿ ಅತ್ಯಂತ ನಯವಾದ ನೆಲಮುಟ್ಟುವಿಕೆ!” ಎಂದಳಾಕೆ. ಆಗ, ಅಪ್ಪಳಿಕೆಯಿಂದ ಚಕ್ರಗಳು ನೆಲಮುಟ್ಟಿದವು.
ಮ್ಯಾಸೆಡೋನ್ಯ, ಗ್ರೀಸ್! ಮಹಾ ಅಲೆಗ್ಸಾಂಡರನ ಜಗತ್ತನ್ನೂ ಆ ಬಳಿಕ ಫಿಲಿಪ್ಪಿಯ ಬಯಲಿನಲ್ಲಿ ನಡೆದ ಮತ್ತು ರೋಮಿನ ಭವಿಷ್ಯವನ್ನು ನಿರ್ಧರಿಸಿದ ಕಾಳಗವನ್ನೂ ನಾನು ಯೋಚಿಸಿದೆ. ಮತ್ತು ಕ್ರೈಸ್ತ ಅಪೊಸ್ತಲ ಪೌಲನ ಜೀವನ ಮತ್ತು ಶುಶ್ರೂಷೆಯ ಮೇಲೆ ಅದು ಬೀರಿರಬಹುದಾದ ಪ್ರಭಾವದ ಕುರಿತೂ ನಾನು ಯೋಚಿಸತೊಡಗಿದೆ. “ಅನ್ಯಜನರಿಗೆ ಅಪೊಸ್ತಲ”ನಾಗಿದ್ದ ಪೌಲನು ಯೂರೋಪಿಗೆ ಫಿಲಿಪ್ಪಿಯಲ್ಲಿ ಕ್ರೈಸ್ತತ್ವದ ಪರಿಚಯ ಮಾಡಿಸಿದನು. (ರೋಮಾಪುರ 11:13) ನಮ್ಮ ಜ್ಞಾನವನ್ನು ಹೆಚ್ಚು ಬೆಳಗಿಸುವ ಯಾವುದನ್ನಾದರೂ ನಾವು ಅಲ್ಲಿ ನೋಡಿಯೇವೊ? ಅಥವಾ, ಇತಿಹಾಸ ಆ ಬಯಲನ್ನು ಗುಡಿಸಿರುವ ಕಾರಣ ಯಾವುದೆ ಸುಳಿವನ್ನು ಬಿಡದೆ ಹೋಗಿದೆಯೆ?
ಥೆಸಲೊನೀಕಕ್ಕೆ ಎರಡು ತಾಸು ಉತ್ತರದಲ್ಲಿ ಕವಾಲ ಬಂದರಿನ ಮೇಲಿನ ಬೆಟ್ಟಮಾರ್ಗವಾಗಿ ನಮ್ಮ ಬಸ್ಸು ಸುತ್ತಾಡಿ ಹೋಗುತ್ತಿತ್ತು. ಕವಾಲ ಮುಖ್ಯವಾಗಿ ಹೊಗೆಸೊಪ್ಪಿನ ರಫ್ತಿಗೆ ಪ್ರಸಿದ್ಧವಾಗಿರುವುದಾದರೂ, ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದ ಬೆಸ್ತರು, ಕವಾಲ ಊರು ನೆಯಾಪೊಲಿ ಎಂದು ಕರೆಯಲ್ಪಡುತ್ತಿದ್ದಾಗ ಅಪೊಸ್ತಲ ಪೌಲನು ಯಾವ ದೃಶ್ಯವನ್ನು ನೋಡಿದನೊ ಅದನ್ನೆ ನಾವೂ ನೋಡುತ್ತಿದ್ದೇವೆಂದು ಭಾವಿಸಿದೆವು.—ಅಪೊಸ್ತಲರ ಕೃತ್ಯಗಳು 16:11.
ಪೌಲನು ನೆಯಾಪೊಲಿಯಲ್ಲಿ ಉಳಿಯಲಿಲ್ಲವಾದರೂ, ನಮಗಿಂತ ಕೆಲವೇ ಗಜ ಕೆಳಗಿದ್ದ, ಮತ್ತು ಅವನು ಪಯಣಿಸಿದ ಕಲ್ಲುಗುಂಡಿನ ರಸ್ತೆ ನಮಗೆ ನೋಡಸಿಕ್ಕಿತು. ಆ ಬಳಿಕ ನಾವು ಅಗಲಕಿರಿದಾದ ಕಾಡಿರುವ ರಸ್ತೆಯನ್ನು ದಾಟಲಾಗಿ ಫಿಲಿಪ್ಪಿ ಎಂದು ಕರೆಯಲ್ಪಡುತ್ತಿದ್ದ ಪಟ್ಟಣದ ಪ್ರಥಮ ದರ್ಶನ ನಮಗಾಯಿತು. ಆ ಕಣಿವೆಯಲ್ಲಿ ಸುಮಾರು ಅರ್ಧದಷ್ಟು ದೂರದಲ್ಲಿ ಆ ನಿವೇಶನವನ್ನು ಗುರುತಿಸುತ್ತಿದ್ದ ದೊಡ್ಡ ಬಂಡೆ ನಮಗೆ ನೋಡಸಿಕ್ಕಿತು.
ನಾವು ಮಾಗುತ್ತಿದ್ದ ತಂಬಾಕಿನ ಹೊಲಗಳನ್ನು ಕೆಳಗೆ ನೋಡುತ್ತಿದ್ದೆವು. ಪೌಲನು ಜವುಗು ಭೂಮಿಯನ್ನೂ ಆದಿ ನೆಲಸಿಗರು ದಟ್ಟವಾದ ಕಾಡುಗಳನ್ನೂ ನೋಡಿದ್ದರು. ಅಪೊಸ್ತಲನು ಇಲ್ಲಿ ಕೆಳಗಿಳಿಯುತ್ತಿದ್ದಾಗ ವಿಶ್ರಮಿಸಿಕೊಳ್ಳಲು ತುಸು ನಿಂತಿದ್ದಿರಬಹುದು. ಆದರೂ, ಅವನೂ ಪ್ರಾಯಶಃ ನಮ್ಮಂತೆಯೆ ಭಾವೂದ್ರೇಕದಿಂದ ಧಾವಿಸಿ ಹೋಗಿದ್ದಿರಬೇಕು.
ಜಲಊಟೆಗಳು
ಸಾ.ಶ.ಪೂ. 356ರಲ್ಲಿ IIನೆಯ ಫಿಲಿಪ್ ಇಲ್ಲಿಗೆ ಕಾಡು ಕಡಿದು, ಪಟ್ಟಣವನ್ನು ವಿಸ್ತರಿಸಿ ಅದಕ್ಕೆ ತನ್ನ ಹೆಸರನ್ನು ಕೊಡಲು ಬರುವ ಮೊದಲೆ ಫಿಲಿಪ್ಪಿ ಅಸ್ತಿತ್ವದಲ್ಲಿತ್ತು. ಇದಕ್ಕೆ ಐದು ವರ್ಷ ಮುಂಚಿತವಾಗಿ, ನೆಲಸಿಗರು ಥಾಸೋಸಿನಿಂದ ಅಸೈಲ ಮತ್ತು ಮೌಂಟ್ ಪಂಜೀಯಸಿನ ಸಂಪದ್ಭರಿತ ಗಣಿಗಳಲ್ಲಿ ಕೆಲಸಮಾಡಲಿಕ್ಕಾಗಿ ಬಂದಿದ್ದರು. ತಮ್ಮ ಹಳ್ಳಿಯನ್ನು ಅವರು ಕ್ರೆನೀಡಿಸ್, ‘ಸಣ್ಣ ಊಟೆಗಳ ಸ್ಥಳ’ವೆಂದು ಕರೆದರು. ಏಕೆ? ಏಕೆಂದರೆ ಇಲ್ಲಿ ಎಲ್ಲೆಲ್ಲಿಯೂ ನೀರಿನ ಬುಗ್ಗೆಗಳು ಎದ್ದು ಬರುತ್ತವೆ. ಇವು ಈ ಕಣಿವೆಯನ್ನು ಜವುಗು ಭೂಮಿಯಾಗಿ ಮಾಡಿದವು.
ಕೇವಲ ಇತ್ತೀಚೆಗೆ ಇಲ್ಲಿಯ ನೀರನ್ನು ಯಶಸ್ವಿಯಾಗಿ ಬತ್ತಿಸಲಾಗಿದೆ. ಆದರೆ ಬುಗ್ಗೆಗಳು ಇನ್ನೂ ಇವೆ, ತೊರೆಗಳು ಇನ್ನೂ ಹರಿಯುತ್ತವೆ. ಒಂದು ಸ್ಥಳದಲ್ಲಿ, ಹಳೆಯ ರೋಮನ್ ರಸ್ತೆ ಗ್ಯಾಂಗಿಟೀಸ್ ಹೊಳೆಯನ್ನು ದಾಟಿ ಹೋಗುತ್ತದೆ. ಈ ನದಿ ಪೌಲನಿಗೆ ವಿಶೇಷ ಸಂಬಂಧದಲ್ಲಿತ್ತು, ಮತ್ತು ನಾವಿದನ್ನು ನೋಡಬಯಸಿದೆವು.
ಅಮೂಲ್ಯ ಲೋಹಗಳ ಊಟೆಗಳು
ಥ್ರೇಸಿನಿಂದ ಆಕ್ರಮಣಕ್ಕೊಳಗಾದ ಥಾಸೊಸಿನ ಗಣಿಕೆಲಸಗಾರರನ್ನು ಸಂರಕ್ಷಿಸಲು ಫಿಲಿಪನು ಕ್ರೆನೀಡಿಸನ್ನು ಭದ್ರಪಡಿಸಿದನು. ಕ್ರೆನೀಡಿಸನ್ನು ಮಿಲಿಟರಿ ಗಡಿಕಾವಲಿನ ಸ್ಥಳವಾಗಿ ಮಾಡಲು ಅವನು ಮನಸ್ಸು ಮಾಡಿದನು. ಆದರೆ, ಎಲ್ಲಕ್ಕೂ ಮಿಗಿಲಾಗಿ, ತನ್ನ ಹೆಬ್ಬಯಕೆಯ ಯುದ್ಧಯೋಜನೆಗೆ ಹಣಹಾಕಲು ಅವನಿಗೆ ಚಿನ್ನ ಅವಶ್ಯವಿತ್ತು. ಈ ಚಿನ್ನದ ಗಣಿಗಳು ಫಿಲಿಪನನ್ನೂ ಮಹಾ ಅಲೆಗ್ಸಾಂಡರನನ್ನೂ ವರ್ಷಕ್ಕೆ ಒಂದು ಸಾವಿರ ತಲಾಂತು ಚಿನ್ನದಷ್ಟೂ ಹೆಚ್ಚು ಧನಿಕರಾಗಿ ಮಾಡಿದವು. ಆದರೆ, ಚಿನ್ನ ಖಾಲಿಯಾದಾಗ, ಫಿಲಿಪ್ಪಿ ಅಜ್ಞಾತನಗರವಾಯಿತು.
ರಕ್ತದ ಊಟೆಗಳು
ಒಂದು ಶತಕಕ್ಕೂ ಹೆಚ್ಚು ವರ್ಷಗಳು ಕಳೆದವು. ಗ್ರೀಸ್ ಬಿಟ್ಟುಹೋದ ಅಧಿಕಾರವನ್ನು ರೋಮ್ ವಹಿಸಿಕೊಂಡಿತು. ರೋಮನ್ ಸಾಮ್ರಾಜ್ಯಕ್ಕೆ ಹೆದ್ದಾರಿಗಳು ಅವಶ್ಯ ಬಿದ್ದುದರಿಂದ ಮ್ಯಾಸೆಡೋನ್ಯದ ಉದ್ದಕ್ಕೆ ವೀಯ ಎಗ್ನಾಟಿಯ ಎಂಬ ರಸ್ತೆಯನ್ನು ಕಟ್ಟಲಾಯಿತು. ಸಮುದ್ರ ತೀರದಿಂದ 14 ಕಿ.ಮೀ. ದೂರದಲ್ಲಿ, ಇದು ಫಿಲಿಪ್ಪಿಯ ಮಧ್ಯದಲ್ಲಿ ಹಾದುಹೋಗಿ ಅದನ್ನು ವ್ಯಾಪಾರ ಮತ್ತು ಮಿಲಿಟರಿ ಸಂಚಾರಗಳಿಗೆ ಎದ್ದೆಬ್ಬಿಸಿತು.
ಫಿಲಿಪ್ಪಿ ವ್ಯೂಹಯುಕ್ತಿಯ ನಗರವಾಗಿ ಪರಿಣಮಿಸಿತ್ತು. ಸಾ.ಶ.ಪೂ. 42ರಲ್ಲಿ, ರೋಮ್ ಮತ್ತು ಆ ಸಾಮ್ರಾಜ್ಯವನ್ನು ನಿಯಂತ್ರಿಸಲು ಬಯಸಿದ್ದ ದುರಾಕ್ರಮಣಗಾರರ ಮಧ್ಯೆ ನಡೆದ ಎರಡು ಭಯಂಕರ ಯುದ್ಧಗಳಲ್ಲಿ ಬಹಳ ರಕ್ತ ಸುರಿಯಿತು. ಆದರೆ ಆ ರಿಪಬ್ಲಿಕನ್ ಒಳಸಂಚು ವಿಫಲಗೊಂಡದ್ದರಿಂದ ಕೈಸರರ ಸಾಮ್ರಾಜ್ಯ ಉಳಿಯಿತು. ಇದರ ಸ್ಮರಣಾರ್ಥವಾಗಿ, ವಿಜಯಿಯಾಗಿದ್ದ ಒಕೇವ್ಟಿಯನನು ಫಿಲಿಪ್ಪಿಯನ್ನು ಒಂದು ರೋಮನ್ ವಸಾಹತಾಗಿ ಮಾಡಿದನು.—ಅಪೊಸ್ತಲರ ಕೃತ್ಯಗಳು 16:12.
ಜೀವದ ಊಟೆಗಳು
ಇಂದು ಪಿಲಿಪ್ಪಿಯಲ್ಲಿ ಯಾರೂ ಜೀವಿಸುವುದಿಲ್ಲ. ಇಂದು ಅದು ಕೇವಲ ಭೂಸಂಶೋಧನ ಶಾಸ್ತ್ರದ ನಿವೇಶನ. ನಾವು ವೀಯ ಎಗ್ನಾಟಿಯದಲ್ಲಿ ತಿರುಗಾಡಿದಾಗ, ನೆಲಗಟ್ಟಿನ ಕಾಲುದಾರಿಯ ಮೇಲೆ ಚಕ್ರಗಳ ಗುರುತನ್ನು ಪರೀಕ್ಷಿಸಿದೆವು. ನಾವು ಅಂಗಡಿಚೌಕದಲ್ಲಿ ತಿರುಗಾಡಿ 50 ಜನರಿಗೆ ಸ್ಥಳವಿರುವ ಸಾರ್ವಜನಿಕ ಪಾಯಿಖಾನೆಯನ್ನು ನೋಡಿದೆವು. ಅಂಗಸಾಧನಾಲಯ (ಪಲೆಸ್ತ್ರ ಯಾ ಕುಸ್ತಿಶಾಲೆ)ದಲ್ಲಿ ಹೇಗೆ ಕುಸ್ತಿಯಾಡುವವರು ಇರಲಿಲ್ಲವೊ ಹಾಗೆಯೆ ಪುಸ್ತಕಾಲಯದಲ್ಲಿ ಯಾವ ಪುಸ್ತಕವೂ ಇರಲಿಲ್ಲ. ಎಕ್ರಾಪೊಲಿಸ್‌ಗೆ ಹೋಗುವ ಅರ್ಧ ದಾರಿಯಲ್ಲಿ ನಾವು ರೋಮನ್ ದೇವಾಲಯ, ಗ್ರೀಕ್ ಕೀರ್ತಿಮಂದಿರ ಮತ್ತು ಒಂದು ಈಜಿಪ್ಶಿಯನ್ ಗುಡಿಯನ್ನೂ ನೋಡಿದೆವು. ನಾವು ತೆರೆದ ಥಿಯೆಟರಿನಲ್ಲಿ ಕುಳಿತಾಗ ಅದರ ಧ್ವನಿಯ ಸ್ಪಷ್ಟಕೇಳುವಿಕೆಯನ್ನು ಕೇಳಿ ಅಚ್ಚರಿಗೊಂಡೆವು. ನಾವು ವಾದಸ್ಥಾನದಲ್ಲಿ ನಿಂತು, ಅಧಿಕಾರಗರ್ವದ ನ್ಯಾಯಾಧೀಶರು ತಮ್ಮ ಕೋಣೆಗಳಿಂದ ಬರುವಾಗ ಅವರ ಮುಂದಿನಿಂದ, ಕೊಡಲಿಗಳ ಸುತ್ತ ಕಟ್ಟಿರುವ ಬೆತ್ತಗಳ ಕಟ್ಟನ್ನು—ಅಧಿಕಾರದ ಚಿಹ್ನೆಯಾಗಿ— ಹೊತ್ತಿರುವ ಕಾನ್‌ಸೆಬ್ಟಲ್‌ಗಳು ಬರುವುದನ್ನು ಕಣ್ಣಮುಂದೆ ಚಿತ್ರಿಸಿಕೊಂಡೆವು. ಮನೋನೇತ್ರಗಳಿಂದ, ಅಷ್ಟು ರೋಮನ್ ಆಗಿ ಪರಿಣಮಿಸಿರುವ ಸಾ.ಶ. 50ರ ಫಿಲಿಪ್ಪಿಯನ್ನು ನಾವು ಪುನಃ ಕಟ್ಟಲು ಪ್ರಯತ್ನಿಸಿದೆವು.
ಬೈಬಲಿಗನುಸಾರ, ಪೌಲನೂ ಅವನ ಸಂಗಡಿಗರೂ “ಪಟ್ಟಣದಲ್ಲಿ ಕೆಲವು ದಿನ ಕಳೆದರು.” (ಅಪೊಸ್ತಲರ ಕೃತ್ಯಗಳು 16:12) ಭಾವೋದ್ರೇಕಗೊಳಿಸುವ ಯಾವ ಸಂಗತಿಗಳೂ ಅಲ್ಲಿ ನಡೆಯಲಿಲ್ಲ. ಆ ಬಳಿಕ, ಪೌಲನು, ಹಳೆಯ ಯಾ ಹೊಸ ದೇವರುಗಳನ್ನು ಆರಾಧಿಸದಿದ್ದರೂ ಧರ್ಮನಿಷ್ಠರೆಂದೆಣಿಸಿದ್ದ ಒಂದು ಗುಂಪಿನ ಸುದ್ದಿಯನ್ನು ಕೇಳಿದನು. ಅವರು ಪಟ್ಟಣದ ಹೊರಗೆ ನೆಲಸುನಾಡಿನ ಕಮಾನಿನ ಆಚೆಗೆ, ರಸ್ತೆಯು ತೊರೆಯನ್ನು ದಾಟುವ ಸ್ಥಳದಲ್ಲಿ ಕೂಡಿಬಂದರು.
ಲೂಕನು ಬರೆದುದು: “ನದೀತೀರದಲ್ಲಿ ದೇವರ ಪ್ರಾರ್ಥನೆ ನಡೆಯುವ ಸ್ಥಳ ಇರುವದೆಂದು ನೆನಸಿ ಸಬ್ಬತ್‌ದಿನದಲ್ಲಿ ಊರ ಬಾಗಿಲಿನ ಹೊರಗೆ ಹೋಗಿ ಅಲ್ಲಿ ಕೂಡಿಬಂದಿದ್ದ ಸ್ತ್ರೀಯರ ಸಂಗಡ ಕೂತುಕೊಂಡು ಮಾತಾಡಿದೆವು.” ರಕ್ಷಣೆಯ ನಿರೀಕ್ಷೆ ಮತ್ತು ಯೇಸು ಕ್ರಿಸ್ತನ ಮೂಲಕ ನಿತ್ಯಜೀವ—ಇವೇ ಚರ್ಚಾವಿಷಯಗಳಾಗಿದ್ದವು. “ನಮ್ಮ ಮಾತುಗಳನ್ನು ಕೇಳಿದವರಲ್ಲಿ ಧೂಮ್ರವರ್ಣದ ವಸ್ತ್ರಗಳನ್ನು ಮಾರುವವಳಾಗಿದ್ದ . . . ಲುದ್ಯಳೆಂಬ ಒಬ್ಬ ಸ್ತ್ರೀಯು ಇದ್ದಳು. ಪೌಲನು ಹೇಳಿದ ಮಾತುಗಳಿಗೆ ಲಕ್ಷ್ಯಕೊಡುವದಕ್ಕೆ ಕರ್ತ [ಯೆಹೋವ, NW]ನು ಆಕೆಯ ಹೃದಯವನ್ನು ತೆರೆದನು.”—ಅಪೊಸ್ತಲರ ಕೃತ್ಯಗಳು 16:13, 14; ಫಿಲಿಪ್ಪಿ 2:12, 16; 3:14 ಹೋಲಿಸಿರಿ.
ಕೆಲವು ದಿನಗಳ ಬಳಿಕ ಪೌಲನ ಫಿಲಿಪ್ಪಿಯ ಪ್ರಯಾಣ ನಾಟಕೀಯವಾಗಿ ಅಂತ್ಯಗೊಂಡಿತು. ಪ್ರಾರ್ಥನಾಸ್ಥಳಕ್ಕೆ ಸುಮಾರು ಒಂದು ಮೈಲು ನಡೆಯುತ್ತಿರುವಾಗ, ದುಷ್ಟಾತ್ಮಪೀಡಿತಳಾದ ಒಬ್ಬ ಕಿರುಕುಳದ ಹುಡುಗಿಯನ್ನು ಅವನು ಎದುರಾದನು. ಪೌಲನು ದೆವವ್ವನ್ನು ಬಿಡಿಸಿದಾಗ, ಹುಡಗಿಯ ಯಜಮಾನರು ತಮ್ಮ ಕಣಿ ಹೇಳುವ ವ್ಯಾಪಾರ ನಾಶವಾದುದಕ್ಕೆ ಕೋಪಗೊಂಡರು. ಪರಿಣಾಮವೇನಾಯಿತು?
ಅವರು “ಪೌಲನನ್ನು ಸೀಲನನ್ನೂ ಹಿಡಿದು ಚಾವಡಿಗೆ ಅಧಿಕಾರಿಗಳ ಬಳಿಗೆ ಎಳಕೊಂಡು ಹೋದರು.” ‘ಇವರು ಯೆಹೂದ್ಯರು’ ಎಂದು ಅವರು ಆರೋಪ ಹೊರಿಸಿದರು. (ಕ್ಲಾಡಿಯಸನು ಆಗ ತಾನೆ ಎಲ್ಲ ಯೆಹೂದ್ಯರನ್ನು ರೋಮಿನಿಂದ ಗಡೀಪಾರು ಮಾಡಿದ್ದನೆಂದು ಎಲ್ಲರೂ ತಿಳಿದಿದ್ದರು.) ‘ನಾವು ಆಯ್ದುಕೊಳ್ಳುವುದು ಯಾ ಆಚರಿಸುವುದು ಶಾಸನಬದ್ಧವಲ್ಲದ ಪದ್ಧತಿಗಳನ್ನು ರೋಮಾಪುರದವರಾದ ನಮಗೆ ಪ್ರಕಟಿಸಿ ಇವರು ನಗರವನ್ನು ತುಂಬ ಗೊಂದಲಕ್ಕೊಳಪಡಿಸಿದ್ದಾರೆ,’ ಎಂದರು ಅವರು. ಜನಸಂದಣಿ ಗಲಾಟೆ ಮಾಡಲಾರಂಭಿಸಿತು; ನ್ಯಾಯಾಧೀಶರು ತೀರ್ಪು ಕೊಟ್ಟರು. ಆಗ ಕಾನ್‌ಸ್ಟೆಬ್‌ಲ್‌ಗಳು ತಮ್ಮ ಬೆತ್ತಗಳನ್ನು ಬಿಚ್ಚಿ ಪೌಲ ಮತ್ತು ಸೀಲರಿಗೆ “ಬಹಳ ಪೆಟ್ಟುಗಳನ್ನು” ಹೊಡೆದರು. ಬಳಿಕ, ರಕ್ತ ಸುರಿದು ದುರ್ಬಲರಾಗಿದ್ದ ಅವರನ್ನು ಸೆರೆಮನೆಗೆ ಹಾಕಿ ಕಾಲುಗಳಿಗೆ ಕೋಳ ಹಾಕಿದರು. ಅದೇ ರಾತ್ರಿ ಉಂಟಾದ ಮಹಾ ಭೂಕಂಪವು ಪೌಲ ಮತ್ತು ಸೀಲರ ಬಿಡುಗಡೆಗೂ ಜೆಯ್ಲರನೂ [ಸೆರೆಮನೆಯ ಯಜಮಾನನು] ಮತ್ತು ಅವನ ಕುಟುಂಬವೂ ಕ್ರೈಸ್ತತ್ವವನ್ನು ಅವಲಂಬಿಸುವುದಕ್ಕೂ ನಡೆಸಿತು.—ಅಪೊಸ್ತಲರ ಕೃತ್ಯಗಳು 16:16-34.
ಮರುದಿನ ಬೆಳಿಗ್ಗೆ, ಅಧಿಕಾರಿಗಳು ಆಗಿದ್ದ ತಪ್ಪು ತಿಳಿವಳಿಕೆಗೆ ಎಷ್ಟೊ ವಿಷಾದವನ್ನು ವ್ಯಕ್ತಪಡಿಸಿ, ಅಪರಿಚಿತರು ದಯವಿಟ್ಟು ಊರು ಬಿಟ್ಟುಹೋಗುವಂತೆ ಕೇಳಿಕೊಂಡರು. ಪೌಲ ಮತ್ತು ಸೀಲರು, ಥೆಸಲೊನೀಕವನ್ನು ಬಿಟ್ಟುಹೋಗುವ ಮೊದಲು ಜೊತೆವಿಶ್ವಾಸಿಗಳನ್ನು ಪ್ರೋತ್ಸಾಹಿಸಲಿಕ್ಕಾಗಿ ಲುದ್ಯಳ ಮನೆಗೆ ಹೋದರು. ಲೂಕನು ಅನನುಭವಿಯಾಗಿದ್ದ ಸಭೆಯನ್ನು ಪರಾಮರಿಸಲು ಹಿಂದೆ ನಿಂತನು.—ಅಪೊಸ್ತಲರ ಕೃತ್ಯಗಳು 16:35-40.
ಔದಾರ್ಯದ ಊಟೆಗಳು
ತನ್ನ “ಮನೆಯಲ್ಲಿ ಉಳುಕೊಳ್ಳಲು ನಮ್ಮನ್ನು ಬಲವಂತ ಮಾಡಿದಳು” ಎಂದು ಲುದ್ಯಳ ಕುರಿತು ಲೂಕನು ಬರೆದನು. ನಿಜಸ್ಥಿತಿಯನ್ನು ತಿಳಿದಾಗ ಪೌಲನ ಜೆಯ್ಲರನೂ ಬಲು ಅತಿಥಿ ಸತ್ಕಾರ ತೋರಿಸಿದನು. (ಅಪೊಸ್ತಲರ ಕೃತ್ಯಗಳು 16:15, 33, 34) ಪೌಲನು ಥೆಸಲೊನೀಕದಲ್ಲಿ ಉಳುಕೊಂಡಿದ್ದಾಗ, ಫಿಲಿಪ್ಪಿಯ ಮಿತ್ರರು ಎರಡು ಬಾರಿ ಅವಶ್ಯವಿದ್ದ ವಸ್ತುಗಳನ್ನು ಅವನಿಗೆ ಕಳುಹಿಸಿದರು.
ತರುವಾಯ, ಅವನು ಧೈರ್ಯದಿಂದ ಕೊರಿಂಥದಲ್ಲಿ ದೇವರನ್ನು ಸೇವಿಸುತ್ತಿದ್ದಾಗ, ಫಿಲಿಪ್ಪಿಯವರು ಇನ್ನೊಮ್ಮೆ ಅವನನ್ನು ಹುಡುಕಿಕೊಂಡು ಬಂದರು. ಅನೇಕ ವರ್ಷಗಳ ಕಳೆದ ಬಳಿಕವೂ, ಪೌಲನು ರೋಮಿನಲ್ಲಿ ಸೆರೆಮನೆಯಲ್ಲಿದ್ದಾಗ, ಫಿಲಿಪ್ಪಿಯ ಪ್ರತಿನಿಧಿಯೊಬ್ಬನು ಕೊಡುಗೆಗಳನ್ನು ಹಿಡಿದುಕೊಂಡು ಬಂದು ಪೌಲನಿಗೆ ವೈಯಕ್ತಿಕ ಸೇವೆ ಸಲ್ಲಿಸಲಿಕ್ಕೂ ಸಿದ್ಧನಾದನು. ಇದರಿಂದ ಪೌಲನ ಹೃದಯ ಕರಗಿತು. ಫಿಲಿಪ್ಪಿಯವರಿಗೆ ಪ್ರಾಪಂಚಿಕವಾಗಿ ಹೆಚ್ಚು ಸಂಪತ್ತು ಇರಲಿಲ್ಲ ಎಂದು ಅವನು ತಿಳಿದಿದ್ದನು. ಆದುದರಿಂದ, ಅವನು ಬರೆದುದು: “ಅವರು ವಿಪರೀತವಾದ ಬಡತನದಲ್ಲಿದ್ದರೂ ಬಹು ಆನಂದದಿದ ತುಂಬಿದವರಾಗಿ ಅತ್ಯಂತ ಔದಾರ್ಯವುಳ್ಳವರಾದರು.”—2 ಕೊರಿಂಥ 8:1, 2; 11:8, 9; ಫಿಲಿಪ್ಪಿ 2:25; 4:16-18.
ನಮ್ಮ ನಿರ್ಗಮನ
ನಾವು ಗ್ಯಾಂಗೀಟಿಸ್ ಬಳಿ ತುಸು ನಿಂತಾಗ ನಾನು ಅದರ ನೀರಲ್ಲಿ ಕೈಯಾಡಿಸಿದೆ. ಆಶ್ಚರ್ಯಕರವಾಗಿ ಅದು ತಣ್ಣಗಾಗಿತ್ತು. ನಾವು ಅತ್ತಿತ್ತ ನೋಡಿದೆವು. ಪೌಲನೂ ಇತರರೂ ಆರಾಧನೆಗಾಗಿ ಕೂಡಿಬಂದ “ಪ್ರಾರ್ಥನೆ ನಡೆಯುವ ಸ್ಥಳ” ಇಲ್ಲಿ ಎಲ್ಲಿಯೊ ಇದ್ದಿರಬೇಕು.
ಆದರೆ, ಫಿಲಿಪ್ಪಿ ನನಗೆ ಅಷ್ಟು ವಿಶೇಷ ರೀತಿಯದ್ದಾಗಿರುವುದೇಕೆ, ಎಂದು ನಾನು ಕೇಳಿಕೊಂಡೆ. ನದಿಯ ಬಳಿಯಿರುವ ಈ ಸ್ಧಳದ ಕಾರಣವೆ? ಅಥವಾ, ಬರಿದಾಗಿರುವ ಪುಸ್ತಕಾಲಯ, ಖಾಲಿಯಾಗಿರುವ ಅಂಗಸಾಧನಾಲಯ, ದೇವರಿಲ್ಲದ ದೇವಸ್ಥಾನ, ಮತ್ತು ಸರಕಿಲ್ಲದ ಅಂಗಡಿಗಳ ಕಾರಣದಿಂದಲೊ?
ಬುಗ್ಗೆಗಳೊ? ಫಿಲಿಪ್ಪಿ ನಿಜವಾಗಿಯೂ “ಊಟೆಗಳ ಊರು.” ಅಲ್ಲಿ ನೀರು ಇನ್ನೂ ಹರಿಯುತ್ತದೆ. ಒಮ್ಮೆ ಇಲ್ಲಿ ಚಿನ್ನವೂ, ಮತ್ತು ದುಃಖದ ಸಮಯದಲ್ಲಿ, ರಕ್ತವೂ ಪ್ರವಹಿಸುತ್ತಿತ್ತು. ಆದರೆ, ಜೀವ, ಪ್ರೀತಿ, ಮತ್ತು ಔದಾರ್ಯದ ಬುಗ್ಗೆಗಳೂ ವಿಶೇಷ ಗುಣಗಳ ವ್ಯಕ್ತಿಗಳಾದ ಪೌಲ, ಲುದ್ಯ, ಜೆಯ್ಲರ್, ಮತ್ತು ಇತರರಿಂದ ಪ್ರವಹಿಸಿದವು. ಜನರು, ಅಲ್ಲವೆ? ಹೌದು, ಆ ವಿಶೇಷ ಜನರೇ ಫಿಲಿಪ್ಪಿಯನ್ನು ನನಗೆ ವಿಶೇಷ ಊರಾಗಿ ಮಾಡುತ್ತಾರೆ. ಅವರು ನನ್ನನ್ನು ವಿಚಾರಮಗ್ನನಾಗಿ ಮಾಡುತ್ತಾರೆ. ನಾನು ಪರ್ಯಾಲೋಚನೆ ಮಾಡುವಂತೆ ನಡೆಸುತ್ತಾರೆ. ನನ್ನ ಇಚ್ಛೆ—ನನ್ನ ಪತ್ನಿ ನನ್ನ ಕೈ ಮುಟ್ಟಿದಳು. “ಬನ್ನಿ” ಎಂದಳವಳು ಮೃದುವಾಗಿ. “ಹೋಗಲು ಸಮಯವಾಯಿತು.”—ದತ್ತ ಲೇಖನ. (g91 3/22)
[ಪುಟ 25ರಲ್ಲಿರುವಚಿತ್ರ]
ಮೇಲೆ ಎಡಕ್ಕೆ: ಪುರಾತನ ಫಿಲಿಪ್ಪಿಯ “ಬೀಮ” (ನ್ಯಾಯಸ್ಥಾನ);
ಮೇಲೆ ಬಲಕ್ಕೆ:“ವೀಯ ಎಗ್ನಾಟಿಯ” ಗ್ಯಾಂಗಿಟೀಸನ್ನು ದಾಟುವ ಸ್ಥಳ;
ಕೆಳಗೆ:ಫಾರಮ್ ಎಂಬ ವಾದಸ್ಥಾನ
[Map of Greece/Philippi]
ಫಿಲಿಪ್ಪಿ
ಗ್ರೀಸ್
ಈಜಿಯನ್ ಸಮುದ್ರ