ಲಾಟರಿ ಹುಚ್ಚು ಜಗತ್ತಿನ ಜೂಜು
“ನಿಮಗೆ ಬೇಕಾಗಿರುವುದು ಒಂದು ಡಾಲರ್ ಮತ್ತು ಒಂದು ಕನಸು, ಅಷ್ಟೆ.” ಆ ಕನಸು ನ್ಯೂ ಯಾರ್ಕ್ ಲಾಟರಿಯ ಬಹುಮಾನದ ಜ್ಯಾಕ್ಪಾಟ್ ಹಣವಾದ 45 ಮಿಲ್ಯ ಡಾಲರನ್ನು ಗೆಲ್ಲುವುದಾಗಿತ್ತು. ಒಂದು ಡಾಲರ್ ಅದನ್ನು ಗೆಲ್ಲಲು ಸಾಧ್ಯ ಮಾಡುತ್ತಿತ್ತು. ಈ ಕನಸು ಕಂಡು, ಬಂದವರು ಕೋಟಿಗಟ್ಟಲೆ ಜನ. ತಮ್ಮ ಟಿಕೇಟು ಕೊಳ್ಳಲು ಸಾಲಾಗಿ ನಿಂತ ಇವರು, ತಾವು ಬಹುಮಾನ ಗೆಲ್ಲುವಲ್ಲಿ, ವಿಹಾರ ದೋಣಿಗಳು, ಬೆಲೆಬಾಳುವ ಮಿಂಕ್ ಕೋಟ್ ಉಡುಪುಗಳು ಮತ್ತು ಶ್ರೀಮಂತ ಭವನಗಳು—ಇವುಗಳನ್ನು ಖರೀದಿಸುವ ವಿಷಯ ಮಾತಾಡಿದರು. ಒಂದು ಸಮಯ, ರಾಜ್ಯದಲ್ಲೆಲ್ಲ, ಅವರು ಒಂದು ನಿಮಿಷಕ್ಕೆ 28,000 ಟಿಕೆಟುಗಳನ್ನು ಕೊಂಡರು. ಲಾಟರಿ ತೆಗೆಯವುದಕ್ಕೆ ಮೊದಲಿನ ಮೂರು ದಿನಗಳಲ್ಲಿ, ಅವರು 3 ಕೋಟಿ 74 ಲಕ್ಷ ಟಿಕೆಟುಗಳನ್ನು ಕೊಂಡುಕೊಂಡರು.
ಜಪಾನಿನಲ್ಲಿ, 10,000 ಅಧಿಕೃತ ಲಾಟರಿ ಅಂಗಡಿಗಳಲ್ಲಿ ವರ್ಷಾಂತ್ಯದ ದೊಡ್ಡ ಗಾತ್ರದ ತಕಾರಕೂಜಿ (ಲಾಟರಿ)ಯ ಟಿಕೆಟನ್ನು ಪಡೆಯವ ಜನರಿಂದಾಗಿ ವ್ಯಾಪಾರ ಯಾವಾಗಲೂ ಜೋರು. ಹಿಂದಿನ ವರ್ಷಗಳಲ್ಲಿ ಐದು ಪ್ರಥಮ ದರ್ಜೆಯ ಟಿಕೆಟುಗಳು ಮಾರಲ್ಪಟ್ಟಿದ್ದವು ಎಂದು ಹೇಳಲಾಗಿರುವ ಟೋಕ್ಯೊವಿನ ಒಂದು ಅಂಗಡಿಯಲ್ಲಿ, ಅದರ ಬಾಗಿಲು ತೆಗೆಯುವ ಮುಂಚಿತವಾಗಿ 300 ಜನರು ಆಗಲೆ ಸಾಲಾಗಿ ನಿಂತಿದ್ದರು. ಬೇಗ ಏಳುವ ಹಕ್ಕಿಯ ಅದೃಷ್ಟ ಚೆನ್ನಾಗಿರುತ್ತದೆಂದು ನಂಬಿದ ಒಬ್ಬ ಯುವತಿ ಬೆಳಿಗ್ಗೆ 1 ಗಂಟೆಯಿಂದ ಕಾಯುತ್ತಿದ್ದಳು. ಕಳೆದ ವರ್ಷ ಆಶಾರ್ಹವಾಗಿದ್ದ ಜ್ಯಾಕ್ಪಾಟಿನ ಮೊತ್ತ: ಒಂದು ಸಾವಿರ ಮಿಲ್ಯ ಯೆನ್ (ಸುಮಾರು 1 ಕೋಟಿ 78 ಲಕ್ಷ ರೂ.) ಪಶ್ಚಿಮ ಆಫ್ರಿಕದ ಒಂದು ದೇಶದ ರಾಜಧಾನಿಯಲ್ಲಿ, ಲಾಟೊ ಕಾಲೇಜ್ ಕ್ಷೇತ್ರವೆಂದು ಜನರು ಕರೆಯುವ ಸ್ಥಳವು ಯಾವಾಗಲೂ ಟಿಕೆಟ್ ಕೊಳ್ಳಲು ಮತ್ತು ಮುಂದಿನ ನಂಬರುಗಳಿಗೆ ಊಹೆ ಕಟ್ಟಲು ಬರುವ ಜನರಿಂದ ಕಿಕ್ಕಿರಿದಿರುತ್ತದೆ. ಹಿಂದೆ ಗೆಲ್ಲಲ್ಪಟ್ಟಿರುವ ನಂಬರುಗಳ ಉದ್ದ ಪಟ್ಟಿಗಳು, ಅವುಗಳಲ್ಲಿ ಮುಂದಿನ ನಂಬರುಗಳ ಸಂಯೋಜನೆಯ ಸುಳಿವನ್ನು ಹೇಗೊ ಕಂಡುಹಿಡಿಯುವ ನಿರೀಕ್ಷೆಯುಳ್ಳವರಿಗೆ ಮಾರಲ್ಪಡುತ್ತವೆ. ರಹಸ್ಯಾರ್ಥ ಜ್ಞಾನದಲ್ಲಿ ನಂಬಿಕೆಯಿಡುವವರಿಗೆ ಭವಿಷ್ಯವಾಣಿ ನೀಡಲು, ಹಣ ಕೊಡುವಲ್ಲಿ ಲಾಟೊ ಭವಿಷ್ಯಜ್ಞರು ಜೂಜಾಡಲು ನಂಬರುಗಳನ್ನು ಕೊಡುತ್ತಾರೆ. ಇಂಥ ಸಂಭವಗಳು ವಿರಳವೊ? ನಿಶ್ಚಯವಾಗಿ ಅಲ್ಲ. ಲಾಟರಿ ಹುಚ್ಚು ಸರ್ವವ್ಯಾಪಿಯಾದ ವ್ಯಾಧಿ. ಅದು ಪ್ರತಿಯೊಂದು ಭೂಖಂಡವನ್ನೂ ಉದ್ದೀಪಿಸುತ್ತದೆ. ಅದು ಸಂಪನ್ನ ದೇಶಗಳಲ್ಲಿಯೂ ಬಡದೇಶಗಳಲ್ಲಿಯೂ ಉರಿಯುತ್ತಿದೆ. ಅದು ಆಬಾಲವೃದ್ಧರನ್ನು ಪ್ರತಿಯೊಂದು ಆರ್ಥಿಕ, ಸಾಮಾಜಿಕ, ಮತ್ತು ಶೈಕ್ಷಣಿಕ ಮಟ್ಟಗಳಲ್ಲಿಯೂ ಉದ್ರೇಕಿಸುತ್ತದೆ.
ಹೌದು, ಲಾಟರಿಗಳು ಭಾರಿ ವ್ಯಾಪಾರದ ಮಾಧ್ಯಮ. ಮತ್ತು ವ್ಯಾಪಾರ ತೀವ್ರವಾಗಿ ವೃದ್ಧಿಯಾಗುತ್ತಾ ಇದೆ. ಕೇವಲ ಅಮೆರಿಕದಲಿಯ್ಲೆ ರಾಜ್ಯಗಳು 1850 ಕೋಟಿ ಡಾಲರುಗಳನ್ನು ಗಳಿಸಿದವು. ಕೇವಲ 27 ವರ್ಷಗಳ ಹಿಂದೆ, ಆ ಸಂಖ್ಯೆ ಶೂನ್ಯವಾಗಿತ್ತು. ಆದರೆ ಈಗ ಲಾಟರಿಗಳು ಅಮೆರಿಕದಲ್ಲಿ ಜೂಜಾಟದ ಅತಿ ದೊಡ್ಡ ರೂಪಗಳಲ್ಲಿ ಎರಡನೆಯದು. ಮತ್ತು ಈ ಉದ್ಯಮ ಪ್ರತಿ ವರ್ಷ 17.5 ಸೇಕಡ, ಕಂಪ್ಯೂಟರ್ ಉದ್ಯಮದಷ್ಟೆ ವೇಗದಲ್ಲಿ ವೃದ್ಧಿಯಾಗುತ್ತಿದೆ.
ಲೋಕವ್ಯಾಪಕ ಲಾಟರಿ ಮಾರಾಟ, 1988ರಲ್ಲಿ ಗೇಮಿಂಗ್ ಆ್ಯಂಡ್ ವೇಜರಿಂಗ್ ಬಿಸಿನೆಸ್ ಎಂಬ ಪತ್ರಿಕೆಯ ಅತ್ಯಾಧುನಿಕ ಸಂಖ್ಯೆಗನುಸಾರ ಸುಮಾರು ರೂ. 1,40,950 ಶತಕೋಟಿ. ಇದು ಭಾರಿ ದೊಡ್ಡ ಸಂಖ್ಯೆ. ಇದು ಭೂಮಿಯ ಮೇಲಿರುವ ಪ್ರತಿಯೊಬ್ಬ ಪುರುಷ, ಸ್ತ್ರೀ ಮತ್ತು ಮಗುವಿಗೆ 250ಕ್ಕೂ ಹೆಚ್ಚು ರೂಪಾಯಿಗಳ ಲೆಕ್ಕದಲ್ಲಿದೆ! ಮತ್ತು ಇದು ಒಂದು ವರ್ಷದಲ್ಲಿ ಮಾತ್ರ!
ಲಾಟರಿಗಳ ಹೇರಳ ಅಭಿವೃದ್ಧಿಯನ್ನು ಯಾರೂ ಅಲ್ಲಗಳೆಯುವುದಿಲ್ಲವಾದರೂ, ಅದರ ವಿರುದ್ಧ ಬಲವಾಗಿ ವಾದಿಸುವವರು ಅನೇಕರಿದ್ದಾರೆ. ಮುಂದಿನ ಎರಡು ಲೇಖನಗಳು ಲಾಟರಿಗಳ ಹೆಚ್ಚುತ್ತಿರುವ ಜನಪ್ರಿಯತೆಯನ್ನೂ ಮತ್ತು ಅವುಗಳ ಹಿಂದಿರುವ ವಾಗ್ವಾದಗಳನ್ನೂ ಪರೀಕ್ಷಿಸುತ್ತವೆ. ನೀವು ಈ ನಿಜತ್ವಗಳನ್ನು ಪರಿಗಣಿಸುವಾಗ ಲಾಟರಿಗಳು ನಿಮ್ಮ ಹಿತಕ್ಕಾಗಿ ಇವೆಯೆ ಎಂದು ನಿರ್ಣಯಿಸಲು ನಿಮಗೆ ಸಾಧ್ಯವಾಗುವುದು. ಜೂಜಾಡುವುದು ನವನಾಜೂಕಿನ ವಿಷಯವೆ? ಅದರಲ್ಲಿ ಗೆಲ್ಲುವುದು ಎಷ್ಟು ಸುಲಭ? ಹಣಕ್ಕಿಂತಲೂ ಹೆಚ್ಚಿನದ್ದು ನಿಮಗೆ ನಷ್ಟವಾಗಬಹುದೆ?