ಲಾಟರಿಗಳು ಅಷ್ಟು ಜನಪ್ರಿಯವೇಕೆ?
ಜನರು ಲಾಟರಿ ಆಡುವುದೇಕೆ? ಲಾಟರಿ ಬೋರ್ಡಿನ ವಕ್ತಾರಳೊಬ್ಬಳು ಹೇಳಿದ್ದು: “ಅದು ಮನೋರಂಜಕ, ವಿನೋದವಾಗಿದೆ.” ಹಾಗಿರಬಹುದು, ನಿಜ, ಆದರೆ ಮುಖ್ಯ ಆಕರ್ಷಣೆ ಬಹುಮಾನವೆ. ಮತ್ತು ತುಸು ಹೆಚ್ಚು ಹಣ ದೊರೆಯುವಲ್ಲಿ, ಅದನ್ನು ಯಾರೂ ಉಪಯೋಗಿಸಬಲ್ಲರು. ಮತ್ತು ಲಾಟರಿಗಳು ತುಂಬ ಹಣವನ್ನು ವಾಗ್ದಾನಿಸುತ್ತವೆ. ಇಂದಿನ ಹೆಚ್ಚುತ್ತಿರುವ ಬೆಲೆಯ, ಬಂಡವಾಳ ಪತ್ರದ ಪೇಟೆಯ ಕುಸಿತದ, ಮತ್ತು ನಿಲುಕೊನೆ ಉದ್ಯೋಗದ ಜಗತ್ತಿನಲ್ಲಿ ನಂಬಲಾಗದ ರೀತಿಯಲ್ಲಿ ಐಶ್ವರ್ಯವಂತರಾಗಬೇಕಾದರೆ ಇರುವ ಏಕಮಾತ್ರ ಸಾಧ್ಯತೆಯ ಮಾರ್ಗವು ಲಾಟರಿಯನ್ನು ಗೆಲ್ಲುವುದೆ ಎಂದು ಮಿಲ್ಯಾಂತರ ಜನರು ನಂಬುತ್ತಾರೆ.
ಈ ಆಕರ್ಷಣೆಯನ್ನು ಲಾಟರಿಗಳ ಅಜಟಿಲತೆ ಮತ್ತು ಆಡುವ ಸೌಲಭ್ಯವು ಹೆಚ್ಚಿಸುತ್ತದೆ. ಇದರಲ್ಲಿ ಲಾಟೊ, ನಂಬರುಗಳು, ಮತ್ತು ಮರೆಯಲ್ಲಿರುವ ನಂಬರುಗಳನ್ನು ಕಾಗದವನ್ನು ಕೆದಕಿ ಹುಡುಕುವ ಆಟಗಳಂಥ ಅನೇಕ ವ್ಯತ್ಯಸ್ತ ವಿಧಗಳಿವೆ. ಆದರೆ ಇವೆಲ್ಲವುಗಳಲ್ಲಿ ಎರಡು ಲಕ್ಷಣಗಳಿವೆ. ಒಂದನೆಯದ್ದು, ವ್ಯವಸ್ಥಾಪಕರು ಹೆಕ್ಕಿ ತೆಗೆಯುವ ನಂಬರು ಆಟಗಾರರ ಟಿಕೆಟಿನ ನಂಬರನ್ನು ಹೋಲಬೇಕು. ಎರಡನೆಯದ್ದು, ಜೂಜಾಟದ ಇತರ ರೂಪಗಳಿಗೆ ಅಸದೃಶವಾಗಿ, ಒಬ್ಬನು ಗೆಲ್ಲಲು ಅವನಿಗೆ ವಿಶೇಷ ನೈಪುಣ್ಯ ಯಾ ಜ್ಞಾನ ಅವಶ್ಯವಿರುವುದಿಲ್ಲ. ಗೆಲ್ಲುವುದು ಯಾ ಸೋಲುವುದು ಕೇವಲ ಅದೃಷ್ಟದ ಮೇಲೆ ಹೊಂದಿಕೊಂಡಿದೆ.
ಟಿಕೆಟನ್ನು ಕೊಳ್ಳುವುದು ಸುಲಭವಾಗಿರುವುದರಿಂದಲೂ ಜನರು ಲಾಟರಿ ಆಡುತ್ತಾರೆ. ಹೆಚ್ಚಿನ ಅಮೆರಿಕನರು ತಮ್ಮ ಸ್ಥಳೀಕ ದಿನಸಿ ಅಂಗಡಿಯಲ್ಲಿ ಟಿಕೆಟನ್ನು ಖರೀದಿಸಬಲ್ಲರು. ಇತರ ಕಡೆಗಳಲ್ಲಿ, ಲಾಟರಿ ಅಂಗಡಿ ಸಮೀಪದಲ್ಲಿ ಇಲ್ಲದಿದ್ದರೆ, ಆಟಗಾರರು ಟಪ್ಪಾಲಿನ ಮಾಲಕ, ಟೆಲಿಫೋನ್, ಟೆಲೆಕ್ಸ್ ಯಾ ಫ್ಯಾಕ್ಸ್ ಮೂಲಕ ಪಣವೊಡ್ಡಬಹುದು.
ಲಾಟರಿಗಳಲ್ಲಿ ಹೊಸದೇನು?
ಲಾಟರಿಗಳು ಹೊಸದೊ? ನಿಶ್ಚಯವಾಗಿಯೂ ಅಲ್ಲ. ಪುರಾತನ ರೋಮಿನ ಉತ್ಸವಗಳಲ್ಲಿ, ನೀರೊ ಮತ್ತು ಅಗಸಸ್ಟ್ ಚಕ್ರವರ್ತಿಗಳು ಗುಲಾಮರನ್ನೂ ಸೊತ್ತುಗಳನ್ನೂ ಬಹುಮಾನವಾಗಿ ಕೊಟ್ಟರು. ದಾಖಲೆಯಾಗಿರುವ ಪ್ರಥಮ ನಗದು ಬಹುಮಾನ ಪ್ರಾಯಶಃ ಇಟೆಲಿಯ ಫ್ಲಾರೆನ್ಸಿನ ಲಾಟರಿಯೊಂದರಲ್ಲಿ 1530ರಲ್ಲಿ ಕೊಡಲ್ಪಟ್ಟಿತು. ಮುಂದಿನ ಶತಮಾನಗಳಲ್ಲಿ, ಯೂರೋಪಿನಲ್ಲಿ ಲಾಟರಿಗಳು ಬೆಳೆದವು. ಅಮೆರಿಕದಲ್ಲಿಯೂ ಆರಂಭದಲ್ಲಿ ಲಾಟರಿಗಳು ಅಭಿವೃದ್ಧಿ ಹೊಂದಿ, ಜೇಮ್ಸ್ಟೌನ್, ಕಾಂಟಿನೆಂಟಲ್ ಸೈನ್ಯ, ಮತ್ತು ಹಾರ್ವರ್ಡ್, ಡಾರ್ಟ್ಮುತ್, ಯೇಲ್ ಮತ್ತು ಕೊಲಂಬಿಯದಂತಹ ಪ್ರತಿಷ್ಠೆಯ ವಿಶ್ವವಿದ್ಯಾಲಯಗಳ ಕಟ್ಟಡಗಳನ್ನು ಕಟ್ಟಲು ಹಣಸಹಾಯ ಮಾಡಿದವು.
ಆದರೆ, 19ನೆಯ ಶತಮಾನದಲ್ಲಿ, ಈ ವ್ಯಾಪಾರ ಪೇಚಾಟದಲ್ಲಿ ಸಿಕ್ಕಿಕೊಂಡಿತು. ವಿರೋಧಿಗಳು ಅಧಿಕ ಪ್ರಮಾಣದ ಜೂಜಾಟವನ್ನು ದೂಷಿಸುತ್ತಾ ಗೆಲ್ಲುಚೀಟಿಗಳನ್ನು ವಂಚನೆಯಿಂದ ಹೆಕ್ಕಲಾಗುತ್ತದೆ ಎಂಬ ಆರೋಪವನ್ನು ಹೊರಿಸಿದರು. ಲಾಟರಿಗಳು ಲಂಚ, ಭ್ರಷ್ಟಾಚಾರ, ಮತ್ತು ಪಾತಕಿಗಳ ಸೇರಿಕೆಯಿಂದ ತುಂಬಿಕೊಂಡವು. ಖಾಸಗಿ ಪ್ರವರ್ತಕರು ಹೇರಳ ಲಾಭವನ್ನು ಪಡೆದರು. ಈ ಕಾರಣದಿಂದ, ಅಮೆರಿಕ, ಫ್ರಾನ್ಸ್, ಮತ್ತು ಬ್ರಿಟನಿನಲ್ಲಿ ಲಾಟರಿಗಳನ್ನು ನಿಷೇಧಿಸಲಾಯಿತು.
ಹಾಗಾದರೆ ಕಥೆ ಮುಗಿಯಿತೊ? ಇಲ್ಲ. ಲಾಟರಿಗಳು ಇತರ ಕಡೆಗಳಲ್ಲಿ—ದೃಷ್ಟಾಂತಕ್ಕೆ, ಇಟೆಲಿ ಮತ್ತು ಆಸ್ಟ್ರೇಲಿಯದಲ್ಲಿ—ಬೆಳೆಯತೊಡಗಿದವು. ಸ್ಪೇನಿನ IIIನೆಯ ಕಾರ್ಲೋಸ್ ಅರಸನು 1763ರಲ್ಲಿ ಒಂದು ಲಾಟರಿಯನ್ನು ಆರಂಭಿಸಿದನು; ಇದರ ಆಧುನಿಕ ರೂಪವು 1812ರಲ್ಲಿ ಶಾಸನಬದ್ಧವಾಯಿತು. ಆ ಬಳಿಕ, ಒಂದು ದೇಶದ ಹಿಂದೆ ಇನ್ನೊಂದು ಈ ಲಾಟರಿ ಬಂಡಿಯನ್ನು ಹತ್ತಿದವು.
1933ರಲ್ಲಿ ಫ್ರಾನ್ಸ್ ದೇಶ ನಿಷೇಧವನ್ನು ತೆಗೆದು ಲಾಟರಿ ನ್ಯಾಷನೆಲ್ ಎಂಬುದನ್ನು ಸ್ಥಾಪಿಸಿತು. ಇದಲ್ಲದೆ 1930ಗಳಲ್ಲಿ, ಐರ್ಲೆಂಡ್ ತನ್ನ ಪ್ರಸಿದ್ಧ ಐರಿಷ್ ಹಾಸ್ಪಿಟಲ್ಸ್ ಸ್ವೀಪ್ಸ್ಟೇಕ್ ಲಾಟರಿಯನ್ನು ಸ್ಥಾಪಿಸಿತು. ಜಪಾನಿನ ಟಕಾರಕೂಜಿ 1945ರಲ್ಲಿ ಆರಂಭಗೊಂಡಿತು. ಬ್ರಿಟನ್ ದೇಶ ಫುಟ್ಬಾಲ್ ಪೂಲ್ ಮತ್ತು ಪ್ರೀಮಿಯಮ್ ಬಾಂಡ್ ಡ್ರಾಯಿಂಗ್ ಎಂಬ ಹೆಸರಿನಲ್ಲಿ ಅಲ್ಲದಿದ್ದರೂ ವಾಸ್ತವವಾಗಿ ಲಾಟರಿಯೆ ಆಗಿರುವ ಏರ್ಪಾಡನ್ನು ಸಮ್ಮತಿಸಿತು. ಮತ್ತು 1964ರಲ್ಲಿ ಅಮೆರಿಕ ಈ ವ್ಯಾಪಾರಕ್ಕೆ ಹಿಂದಿರುಗಿ ಪ್ರವೇಶಿಸಿತು.
ಆ ಬಳಿಕ 1970ಗಳಲ್ಲಿ, ನಡೆದ ಎರಡು ಘಟನೆಗಳು ಲಾಟರಿ ಕ್ರಿಯಾಗತಿಯನ್ನು ರೂಪಾಂತರಿಸಿದವು. ಇವುಗಳಲ್ಲಿ ಒಂದನೆಯದ್ದು, ರಿಟೇಲ್ ಟರ್ಮಿನಲ್ಗಳಿಗೆ ಜೋಡಿಸಲ್ಪಟ್ಟ ಕಂಪ್ಯೂಟರಿನ ಉಪಯೋಗವಾಗಿತ್ತು. ಈಗ ಹೆಚ್ಚು ಸಂಖ್ಯೆಯಲ್ಲಿ ಹೆಚ್ಚು ಪದೇ ಪದೇ ಬರುವ ಆಟಗಳನ್ನು, ಆಟಗಾರರು ತಮ್ಮದೇ ಆದ ಸಂಖ್ಯೆಗಳನ್ನು ಆರಿಸಸಾಧ್ಯವಿರುವ ಆಟಗಳನ್ನು ವ್ಯವಸ್ಥಾಪಿಸಸಾಧ್ಯವಾಯಿತು. ತಾವು ಗೆದ್ದಿದ್ದೇವೊ ಇಲ್ಲವೊ ಎಂದು ನೋಡಲು ಇನ್ನು ಮುಂದೆ ಕೆಲವು ವಾರ ಯಾ ತಿಂಗಳು ಕಾಯಬೇಕೆಂದಿರಲಿಲ್ಲ; ಆಡುವವರು ಅದನ್ನು ಕೆಲವೇ ದಿನ, ಕೆಲವೇ ತಾಸು, ಯಾ ಕೆಲವೇ ನಿಮಿಷಗಳಲ್ಲಿಯೂ ಕಂಡುಹಿಡಿಯ ಸಾಧ್ಯವಿತ್ತು.
ಎರಡನೆಯ ವಿಕಸನವು ಲಾಟೊ ಎಂಬ ಗೆಲ್ಲುವ ಸಂಭವ ಪ್ರಮಾಣವು ಹೆಚ್ಚಾಗಿರುವ ಆಟದ ಆಗಮನವೇ. ಲಾಟೊ ಆಟದಲ್ಲಿ ಜ್ಯಾಕ್ಪಾಟ್ ಬಹುಮಾನವು ಗೆಲ್ಲಲ್ಪಡದಿರುವಾಗ ಅದನ್ನು ಮುಂದಿನ ಆಟಗಳಿಗೆ ಮುಂದುವರಿಸಲಾಗುತ್ತದೆ. ಇದರ ಪರಿಣಾಮವಾಗಿ, ಬಹುಮಾನದ ಹಣವು ಮಿಲ್ಯಾಂತರ ಡಾಲರುಗಳಾಗಿ ಪರಿಣಮಿಸಬಹುದು. ಹೀಗೆ, ಲಾಟೊ ಆಟದ ಕಾರಣ, ಟಿಕೆಟಿನ ಮಾರಾಟ ವಿಪರೀತ ಮೇಲೇರಿ, ವ್ಯಾಪಾರವು ನಿಜವಾಗಿಯೂ ದೊಡ್ಡ ವ್ಯಾಪಾರವಾಯಿತು.
ಪ್ರವರ್ತಕರಿಗೆ ಮನವೆ
ಸರಕಾರಗಳು ಜೂಜಾಟವನ್ನು ಏಕೆ ಪೋಷಿಸುತ್ತವೆ? ಏಕೆಂದರೆ ಇದು ಕಂದಾಯ ಹೆಚ್ಚಿಸದೆ ಹಣವನ್ನು ಒಳಗೆ ತರುವ ಸುಲಭ ವಿಧಾನ. ಸ್ಲಾಟ್ ಯಂತ್ರ ಮತ್ತು ರೂಲೆಟ್ ಜೂಜಾಟಗಳು ತಮಗೆ ಸಿಕ್ಕುವ ಹಣದಲ್ಲಿ 95 ಪ್ರತಿಶತದಷ್ಟೂ ಹಣವನ್ನು ಹಿಂದೆ ಕೊಡುವಾಗ, ಲಾಟರಿಗಳು 50ಕ್ಕೂ ಕಡಮೆ ಪ್ರತಿಶತವನ್ನು ಹಿಂದೆ ಕೊಡುತ್ತವೆ. ದೃಷ್ಟಾಂತಕ್ಕೆ, 1988ರಲ್ಲಿ ಅಮೆರಿಕದಲ್ಲಿ, ಪ್ರತಿ ಡಾಲರಿನಲ್ಲಿ 48 ಸೆಂಟುಗಳನ್ನು ಬಹುಮಾನವಾಗಿ ಕೊಡಲಾಯಿತು, ಮತ್ತು 15 ಸೆಂಟುಗಳು ಉತ್ತೇಜನ, ಮಾರಾಟ, ಮತ್ತು ಆಡಳಿತಕ್ಕೆ ಖರ್ಚಾದವು. ಉಳಿದ 37 ಸೆಂಟುಗಳನ್ನು ಸಾರ್ವಜನಿಕ ಅಭಿವೃದ್ಧಿ, ವಿದ್ಯಾಭ್ಯಾಸ, ಆರೋಗ್ಯ ಪರಾಮರಿಕೆ ಮತ್ತು ವೃದ್ಧರ ಸಹಾಯಕ್ಕಾಗಿ ಖರ್ಚು ಮಾಡಲ್ಪಟ್ಟಿತು. ರಾಷ್ಟ್ರವ್ಯಾಪಕವಾಗಿ, ಅದರ ಮೊತ್ತ 7,200 ಕೋಟಿ ಡಾಲರುಗಳಾಯಿತು.
ಆದರೆ ಸರಕಾರಗಳು ಕೇವಲ ಹಣ ಮಾಡಲು ಲಾಟರಿಗಳನ್ನು ವ್ಯವಸ್ಥಾಪಿಸುವುದಿಲ್ಲ. ಆ ವ್ಯಾಪಾರಕ್ಕೆ ಸೇರದಿದ್ದರೆ ಸರಕಾರಗಳಿಗೆ ಹಣ ನಷ್ಟ ಆಗುವ ಸಂಭವವಿದೆ. ಅವುಗಳ ಪೌರರು ಇನ್ನೆಲಿಯ್ಲಾದರೂ ಹೋಗಿ ಆಡಬಹುದು. ಹೀಗೆ, ಒಂದು ದೇಶ ಯಾ ರಾಜ್ಯವು ಲಾಟರಿಯನ್ನು ಆರಂಭಿಸುವಲ್ಲಿ, ನೆರೆಹೊರೆಯ ಪ್ರದೇಶಗಳೂ ಹಾಗೆ ಮಾಡುವ ಒತ್ತಡದೊಳಗೆ ಬರುತ್ತವೆ. ಈ ಶೀಘ್ರ ಬೆಳವಣಿಗೆಯ ಪರಿಣಾಮ ಅಮೆರಿಕದಲ್ಲಿ ವ್ಯಕ್ತವಾಗುತ್ತದೆ. 1964ರಲ್ಲಿ ಅಲ್ಲಿ ಒಂದು ರಾಜ್ಯ ಲಾಟರಿಯಿತ್ತು; 1989ರಲ್ಲಿ 30 ಲಾಟರಿಗಳಾಗಿ ಪರಿಣಮಿಸಿದವು.
ಐಶ್ವರ್ಯದ ಕನಸುಗಳು
ಆ ಬಳಕೆದಾರರ ಡಾಲರಿನಲ್ಲಿ ಒಂದು ತುಂಡನ್ನು ಪಡೆಯಲಿಚ್ಫಿಸುವ ಜನತೆಯೇನೋ ಧಾರಾಳವಿದೆ. ಹಾಗಾದರೆ, ಸಾರ್ವಜನಿಕರು ಲಾಟರಿಯಲ್ಲಿ ಹಣ ವ್ಯಯಿಸುವಂತೆ ಪ್ರವರ್ತಕರು ಅವರನ್ನು ಹೇಗೆ ನಂಬಿಸುತ್ತಾರೆ? ಜಾಹೀರಾತುಗಳ ಮೂಲಕವೆ! ಒಡಂಬಡಿಸುವ ಕಸಬುದಾರರ ಸಹಾಯ ಪಡೆಯಿರಿ!
ಈ ಜಾಹೀರಾತುಗಳು, ಆ ಹಣದ ಅಂಶ (ಅದು ಎಷ್ಟೇ ಚಿಕ್ಕದಾಗಿರಲಿ) ವಿದ್ಯೆಗೆ ಯಾ ವೃದ್ಧರ ಪರಾಮರಿಕೆಗೆ ಹೋಗುತ್ತದೆಂದು ಹೇಳುತ್ತವೆಯೆ? ನಿಶ್ಚಯವಾಗಿಯೂ ಇಲ್ಲ! ಅದನ್ನು ಹೇಳುವುದೇ ವಿರಳ. ಬದಲಿಗೆ, ಮಿಲ್ಯಾಂತರ ಡಾಲರುಗಳನ್ನು ಗೆಲ್ಲುವುದರಲ್ಲಿರುವ ವಿನೋದವನ್ನು ಜಾಹೀರಾತುಗಳು ಒತ್ತಿ ಹೇಳುತ್ತವೆ. ಇದರ ಕೆಲವು ಉದಾಹರಣೆಗಳು ಇಲ್ಲಿವೆ:
▫ ಐಶ್ವರ್ಯವಂತರ ಮತ್ತು ಕೀರ್ತಿವಂತರ ಆಡಂಭರದ ಜೀವನ ಶೈಲಿ ಒಂದು ಕ್ಷಣದಲ್ಲಿ ನಿಮ್ಮದಾಗಸಾಧ್ಯವಿದೆ . . . ನೀವು ಕೆನಡದ ಮಿಲ್ಯಾಂತರ ಡಾಲರಿನ ಲಾಟೊ 6⁄49 ಆಡುವಲ್ಲಿ.”
▫ “ಫ್ಲಾರಿಡ ಲಾಟರಿ . . . ಅಮೆರಿಕದ ಅತ್ಯಂತ ಮಹಾ ಲಾಟರಿಯಲ್ಲಿ ಐಶ್ವರ್ಯ ಪಡೆಯಿರಿ.”
▫ “ಜರ್ಮನಿಯಲ್ಲಿ ತಯಾರಿಸಿದ ಹಣ—ಐಶ್ವರ್ಯದಲ್ಲಿ ಜಯಹೊಂದಿ ರಾತ್ರಿ ಬೆಳಗಾಗುವುದರೊಳಗೆ ಮಿಲ್ಯಾಧಿಪತಿಗಳಾಗಿರಿ.”
ಬಲವಂತ ಮಾಡುವ ಮಾರಾಟವೊ? ನಿಶ್ಚಯ! ಜಾಹೀರಾತಿಗೆ ಕಡಮೆ ಬಲ ಹಾಕುವ ಪ್ರಯತ್ನಗಳು ಸಾಮಾನ್ಯವಾಗಿ ಟಿಕೆಟುಗಳು ಮಾರಲ್ಪಡದೆ ಹೋಗುವಾಗ ಅಂತ್ಯಗೊಳ್ಳುತ್ತವೆ. ವಾಸ್ತವವೇನಂದರೆ, ಪ್ರವರ್ತಕರು ಹೊಸ ಆಟಗಾರರನ್ನು ಪ್ರೇರೇಪಿಸಲು ಮತ್ತು ಹಳೆಯವರು ಆಸಕ್ತರಾಗಿ ಉಳಿಯುವಂತೆ ಮಾಡಲು ಹೆಚ್ಚು ಗಾಢವಾದ ಆಟಗಳಿಗೂ ಮಾರಾಟಗಳಿಗೂ ತಿರುಗುತ್ತಾರೆ. ಅವರು ಯಾವಾಗಲೂ ಹೊಸದಾಗಿ ಕಾಣುವ ವಿಷಯಗಳನ್ನು ನೀಡಬೇಕು. ಆರೆಗಾನಿನ ಲಾಟರಿ ಡೈರೆಕ್ಟರ್ ಜೇಮ್ಸ್ ಡೇವಿ ಹೇಳಿದ್ದು: “ನಮ್ಮಲ್ಲಿ ಜೂಜಾಟದ ಮುಖ್ಯ ವಿಷಯಗಳಿವೆ, ನಾವು ಒಲಿಂಪಿಕ್ಸನ್ನೂ ನಡೆಸುತ್ತೇವೆ. ಕ್ರಿಸ್ಮಸ್ ಸಮಯದಲ್ಲಿ ನಾವು ಹಾಲಿಡೇ ಕ್ಯಾಶ್ ನಡೆಸುತ್ತೇವೆ. ಲಕ್ಕಿ ಸ್ಟಾರ್ಸ್ ಎಂಬ ಆಟದಲ್ಲಿ ನಾವು ಜನರ ರಾಶಿ ಚಕ್ರದೊಂದಿಗೆ ಆಡುತ್ತೇವೆ. ಒಂದೇ ಸಮಯದಲ್ಲಿ ನಾವು ಎರಡು ಯಾ ಮೂರು, ನಾಲ್ಕು ಯಾ ಐದು ಆಟಗಳನ್ನು ಆಡುವಂತೆ ಮಾಡುವಲ್ಲಿ, ಹೆಚ್ಚು ಟಿಕೆಟುಗಳು ಮಾರಲ್ಪಡುತ್ತವೆಂದು ನಮ್ಮ ಕಂಡುಹಿಡಿತ.”
ಆದರೆ ಎಲ್ಲದ್ದಕ್ಕಿಂತ ಅತಿ ದೊಡ್ಡ ಆಕರ್ಷಣೆ ಆ ಬೃಹದಾಕಾರದ ಜ್ಯಾಕ್ಪಾಟ್ ಬಹುಮಾನವೆ. ಲಾಟೊ ಆಟದಲ್ಲಿ, ಬಹುಮಾನದ ಹಣ ದೊಡ್ಡದಾಗುವಾಗ—1989ರಲ್ಲಿ ಪೆನ್ಸಿಲೇನ್ವಿಯದಲ್ಲಿ ಬಹುಮಾನದ ಹಣ 115 ಮಿಲ್ಯ ಡಾಲರಿನಷ್ಟು ಏರಿದಾಗ ಆದಂತೆ—ಅದು ದೊಡ್ಡ ಸುದ್ದಿಯಾಗುತ್ತದೆ. ಜನರು ಟಿಕೆಟನ್ನು ಕೊಳ್ಳಲು ಮುತ್ತಿ ಬರುತ್ತಾರೆ. ಇದನ್ನು ಒಬ್ಬ ಲೇಖಕನು “ಜೂದಾಳಿಯ ತಿನ್ನುವ ಭ್ರಮಾವೇಶ” ಎಂದು ಕರೆದನು. ಈ ಉನ್ಮಾದದ ಮಧ್ಯೆ, ಸಾಧಾರಣವಾಗಿ ಲಾಟರಿ ಆಡದಿರುವವರೂ ತಮ್ಮ ಜೇಬಿಗೆ ಕೈಹಾಕುತ್ತಾರೆ.
[ಪುಟ 6 ರಲ್ಲಿರುವ ಚೌಕ]
ಜೂಜಿನ ಹುಚ್ಚು ಮತ್ತು ಧರ್ಮ
“ಕ್ಯಾಥಲಿಕ್ ಚರ್ಚು ನನಗೆ ಜೂಜಾಡಲು ಕಲಿಸಿದೆ. ಬಿಂಗೊ ಮತ್ತು ರ್ಯಾಫ್ಲ್ ಸೋಡ್ತಿಗೂ ಲಾಟರಿಗೂ ಯಾವ ವ್ಯತ್ಯಾಸವೂ ಇಲ್ಲ. ಕ್ಯಾಥಲಿಕ್ ಚರ್ಚು ಮುಂದುವರಿದು ಎಲ್ಲ ಜೂಜಾಟಗಳನ್ನು ನಿಲ್ಲಿಸುವಲ್ಲಿ ಲಾಟರಿ ಆಡುವುದನ್ನು ನಿಲ್ಲಿಸುವ ವಿಚಾರವನ್ನು ನಾನು ಪರಿಗಣಿಸುವೆನು. ನಾನು ಲೋಭಿಯಾಗಿರುವುದು ಏಕೆಂದರೆ ಅದು ಅಧಿಕಾಂಶ ಚರ್ಚಿನ ಪವಿತ್ರ ಕರ್ಮವಾಗಿರುವುದರಿಂದಲೆ.”—ಯು.ಎಸ್. ಕ್ಯಾಥಲಿಕ್ ಪತ್ರಿಕೆಗೆ ಒಬ್ಬ ವಾಚಕನ ಪತ್ರ.
“ಭಾನುವಾರದ ಮ್ಯಾಸ್ ಆರಾಧನೆಯ ಬಳಿಕ ಕ್ಯಾಥಲಿಕ್ ಚರ್ಚುಗಳಲ್ಲಿ ದ್ವಿತೀಯ ಉತ್ತಮ ಹಾಜರಿಯು ಸಾಪ್ತಾಹಿಕ ಬಿಂಗೊ ಆಟಗಳಲ್ಲಿದೆ, ಎನ್ನುತ್ತದೆ ನಾಟರ್ ಡೇಮ್ ವಿಶ್ವವಿದ್ಯಾಲಯ ನಡೆಸಿದ ಒಂದು ಸಮೀಕ್ಷೆ.” ಆದರೂ, ಅನೇಕ ಪಾದ್ರಿಗಳು, ಬಿಂಗೊ ಆಟದಲ್ಲಿ ಭಾಗವಹಿಸುವ ಅನೇಕರು ಚರ್ಚಿಗೆ ಹೋಗುವುದಿಲ್ಲವೆಂದು ಹೇಳುತ್ತಾರೆ.—ದ ಸಂಡೆ ಸ್ಟಾರ್-ಲೆಜರ್, ನ್ಯೂ ಜೆರ್ಸಿ, ಯು.ಎಸ್.ಎ.
“ಸೆಂಟ್ ಪ್ಯಾಂಕ್ರಸ್ ಮಡ್ರೀಡ್ಗೆ ಭಾಗ್ಯೋದಯವನ್ನು ತಂದರು” ಎಂಬ ಶೀರ್ಷಿಕೆ ಸ್ಪ್ಯಾನಿಷ್ ಸಾಪ್ತಾಹಿಕ ಎಬಿಸಿಯ ಅಂತಾರಾಷ್ಟ್ರೀಯ ಸಂಚಿಕೆಯಲ್ಲಿತ್ತು. ಆ ಲೇಖನ ಮುಂದುವರಿಸಿದ್ದು: “‘ಲಾಟರಿ ಅಂಗಡಿಯ ಇಬ್ಬರು ಕೆಲಸಗಾರರು ಅದು ಸೆಂಟ್ ಪ್ಯಾಂಕ್ರಸನೇ ಎಂದು ಪದೇ ಪದೇ ಹೇಳಿದರು . . . 250 ಮಿಲ್ಯ [ಪೆಸೇಟ, ಅಥವಾ ಇಂದು, 6 ಕೋಟಿ 25 ಲಕ್ಷ ರೂ.] ಬಹುಮಾನದ ‘ಗಾರ್ಡೊ’ [ದೊಡ್ಡ] ಲಾಟರಿಯ ಮಡ್ರೀಡ್ನಲ್ಲಿ ವಿತರಣೆ ಮಾಡಲ್ಪಟ್ಟಿರುವ 21515 ನಂಬರಿನ ಏಕಮಾತ್ರ ಶ್ರೇಣಿಯನ್ನು ಅವರು ಅಲ್ಲಿ ಮಾರಿದ್ದರು. ಅವರ ಅಂಗಡಿಯಲ್ಲಿ ಯಾರ ಪ್ರತಿಮೆ ಮುಖ್ಯ ಸ್ಥಾನದಲ್ಲಿದ್ದು ಪಾರ್ಸ್ಲಿ ಸಸ್ಯದ ಕುಡಿಯನ್ನು ಧರಿಸಿದ್ದಾಗಿತ್ತೊ ಆ ಸಂತನಿಗೆ, ಕ್ರಿಸ್ಮಸ್ ‘ಗಾರ್ಡೊ’ ಮಾರುವ ಭಾಗ್ಯ ತಮಗಿರಲಿ ಎಂದು ತಾವು ಪ್ರಾರ್ಥಿಸಿದ್ದೇವೆಂದು ಅವರು ಒಪ್ಪಿಕೊಂಡರು.’”
“ತಮ್ಮ ಸುಭಾಗ್ಯವನ್ನು ವಿವರಿಸುವ ವಿಧಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದ ವಯಸ್ಕ ವಿಜಯಿಗಳು, ದೇವರು ಮತ್ತು ವಿಧಿ ತಾವು ಹಣವನ್ನು ಗೆಲ್ಲುವಂತೆ ತಮ್ಮನ್ನು ಪ್ರತ್ಯೇಕಿಸಿದೆ ಎಂದು ನಂಬುವ ಪ್ರವೃತ್ತಿಯವರಾಗಿದ್ದರು. . . . ಮಾಯಮೀ ವಿಶ್ವವಿದ್ಯಾಲಯದ ಮನಶ್ಶಾಸ್ತ್ರ ಪ್ರೊಫೆಸರ್, ಡಾ. ಜ್ಯಾಕ್ ಎ. ಕ್ಯಾಪ್ಚನ್ ಹೇಳಿದ್ದು: ‘ಸೌಭಾಗ್ಯವೂ ದುರ್ಭಾಗ್ಯವೂ ಆಕಸ್ಮಿಕವಲ್ಲ, ಯಾವುದರಿಂದಲೊ ಬರುತ್ತದೆಂದು ನಂಬುವ ಮನಸ್ಸು ನಮಗಿದೆ. ಮತ್ತು ದೇವರಿಂದಲ್ಲದೆ ಇನ್ನಾವದರಿಂದ ಇದು ಬರುತ್ತದೆಂದು ನಾವು ಹೇಳಬಹುದು?’—ದ ನ್ಯೂ ಯಾರ್ಕ್ ಟೈಮ್ಸ್.
ಬೈಬಲು ಶುಭ ಅದೃಷ್ಟದ ಕುರಿತು ಏನನ್ನುತ್ತದೆ? ಇಸ್ರಾಯೇಲಿನ ಅಪನಂಬಿಗಸ್ತರಿಗೆ ಯೆಹೋವನು ಹೇಳಿದ್ದು: “ಕರ್ತನಾದ ನನ್ನನ್ನು ತೊರೆದು ನನ್ನ ಪವಿತ್ರ ಪರ್ವತವನ್ನು ಮರೆತು ಶುಭದಾಯಕ ದೇವತೆಗೆ ಔತಣವನ್ನು ಅಣಿಮಾಡಿ ಗತಿದಾಯಕ ದೇವತೆಗೆ ಮದ್ಯವನ್ನು ತುಂಬಾ ಬೆರಸಿದ ನಿಮಗೆ ಕತ್ತಿಯನ್ನೇ ಗತಿ ಮಾಡುವೆನು.”—ಯೆಶಾಯ 65:11.
ಹಣ ಗೆದ್ದಿರುವ ಕೇವಲ ಕೊಂಚ ಜನರಲ್ಲಿ ಎಷ್ಟು ಜನರು ತಮ್ಮ ವಿರಳ ಸುವಿಧಿಯು ಲಕ್ಷಾಂತರ ಮಂದಿಯ ದುರದೃಷ್ಟದ ಫಲವಾಗಿ ತಮಗೆ ದೊರೆತಿದೆಯೆಂದು ಯೋಚಿಸುತ್ತಾರೆ? ಈ ಜೂಜಾಟ ಯಾವ ವಿಧದಲ್ಲಾದರೂ ‘ನೆರೆಯವನ ಪ್ರೀತಿ’ಯನ್ನು ಪ್ರತಿಬಿಂಬಿಸುತ್ತದೆಯೆ? ವಿಶ್ವ ಪರಮಾಧಿಕಾರಿಯು ಜೂಜಾಟದಂಥ ಸ್ವಾರ್ಥಭರಿತ ವ್ಯಸನಗಳಲ್ಲಿ ಸೇರಿಸಿಕೊಳ್ಳುವನೆಂದು ನೆನಸುವುದು ನ್ಯಾಯಸಮ್ಮತವೊ ಇಲ್ಲವೆ ಶಾಸ್ತ್ರಾನುಸಾರವೊ?—ಮತ್ತಾಯ 22:39.