“ನಾನು ಅವನ ಕಣ್ಣು ಮತ್ತು ಅವನು ನನ್ನ ಪಾದವಾಗಿದ್ದಾನೆ”
ಹೋಸೆ ಲೂಯಿ ಎಸ್ಕೊಬಾರ್ ಮತ್ತು ಆರ್ಟೀಮಿಯೊ ಡೂರನ್, ಮೆಕ್ಸಿಕೋದಲ್ಲಿ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಹಿರಿಯರು. ಹೋಸೆ ಲೂಯಿ ಕುರುಡ ಮತ್ತು ಆರ್ಟೀಮಿಯೋಗೆ ನಡೆಯಲಿಕ್ಕಾಗುವುದಿಲ್ಲ.
ಹೋಸೆ ಲೂಯಿಗೆ 16 ವಯಸ್ಸಾಗಿರುವಾಗ ಬಾಕ್ಸಿಂಗ್ ಆಟ ತುಂಬ ಇಷ್ಟ. ಒಮ್ಮೆ ಒಂದು ಆಟದಲ್ಲಿ ಅವನನ್ನು ಒಬ್ಬ ಕಸಬುದಾರ ಬಾಕ್ಸರನ ಸ್ಥಾನದಲ್ಲಿ ಹೋರಾಡಲು ಕೇಳಿಕೊಳ್ಳಲಾಯಿತು. ನಾಲ್ಕನೆಯ ರೌಂಡಿನಲ್ಲಿ, ಅವರು ಆಗಲೆ ಒಬ್ಬರನ್ನೊಬ್ಬರು ಎಷ್ಟು ಹೊಡೆದಿದ್ದರೆಂದರೆ, ಆ ಹೋರಾಟವನ್ನು ನಿಲ್ಲಿಸಲಾಯಿತು. ಹೋಸೆ ಲೂಯಿ ವಿಜಯಿಯಾದರೂ, ಅವನಿಗೆ ಬಿದ್ದಿದ್ದ ಹೊಡೆತದ ಕಾರಣ ಅವನು ದೃಷ್ಟಿಯನ್ನು ಕಳೆದುಕೊಂಡಿದ್ದನು.
ಹೋಸೆ ಲೂಯಿ ಒಬ್ಬ ವೈದ್ಯನಿಂದ ಇನ್ನೊಬ್ಬ ವೈದ್ಯನ ಬಳಿ ಹೋದನು; ಪ್ರೇತ ವ್ಯವಹಾರಿಗಳ ಬಳಿಗೂ ಹೋದನು. ಆದರೆ ಯಾರಿಂದಲೂ ಅವನಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ನಿರಾಶನಾದ ಅವನು ಅನೇಕ ವೇಳೆ ಆತ್ಮಹತ್ಯದ ಪ್ರಯತ್ನ ಮಾಡಿದನು. ಆ ಬಳಿಕ ಅವನನ್ನು ಯೆಹೋವನ ಸಾಕ್ಷಿಗಳು ಸಂಪರ್ಕಿಸಲಾಗಿ ಅವನು ಬೈಬಲ್ ಸತ್ಯಗಳನ್ನು ಕಲಿತು, ಕೊನೆಗೆ ತನ್ನ ಜೀವವನ್ನು ದೇವರಿಗೆ ಸಮರ್ಪಿಸಿಕೊಂಡನು. 1974ರ ಆಗಸ್ಟಿನಲ್ಲಿ ಅವನಿಗೆ ದೀಕ್ಷಾಸ್ನಾನವಾಯಿತು.
ಇನ್ನೊಂದು ಕಡೆಯಲ್ಲಿ, ಆರ್ಟೀಮಿಯೊ 1981ರಲ್ಲಿ ಒಂದು ಗುರುತರವಾದ ಕಾರ್ ಅಪಘಾತಕ್ಕೊಳಗಾದನು. ಅವನು ಅಮೆರಿಕದಲ್ಲಿ ನ್ಯಾಯವಿರುದ್ಧವಾಗಿ ಬದುಕಿ, ಕೆಲಸ ಮಾಡುತ್ತಿದ್ದಾಗ ಇದು ನಡೆಯಿತು. ಆಸ್ಪತ್ರೆಯಲ್ಲಿ ಅವನನ್ನು ವಿವಿಧ ಧರ್ಮ ಪಂಗಡಗಳವರು ಭೇಟಿ ಮಾಡಿ ಅವನ ಕೆಟ್ಟ ಜೀವನ ರೀತಿಗಾಗಿ ದೇವರು ಅವನನ್ನು ಶಿಕ್ಷಿಸುತ್ತಿದ್ದಾನೆಂದು ಹೇಳಿದರು. ಈ ಆರ್ಟೀಮಿಯೊನನ್ನೂ ಯೆಹೋವನ ಸಾಕ್ಷಿಗಳು ಆ ಬಳಿಕ ಸಂಪರ್ಕಿಸಿದರು. ಅವನು ಬೈಬಲನ್ನು ಕಲಿತು, ತನ್ನ ಬದುಕಿನಲ್ಲಿ ಅಗತ್ಯವಿದ್ದ ಬದಲಾವಣೆಗಳನ್ನು ಮಾಡಿ 1984ರ ಮೇ ತಿಂಗಳಲ್ಲಿ ದೀಕ್ಷಾಸ್ನಾನ ಹೊಂದಿದನು.
ಈಗ ಈ ಇಬ್ಬರು ಪುರುಷರು ಒಂದೇ ಕ್ರೈಸ್ತ ಸಭೆಯಲ್ಲಿ ಸಂಗಾತಿಗಳು. ಅವರು ಕ್ರಮವಾಗಿ ಒಟ್ಟುಗೂಡಿ ಮನೆ ಮನೆಯ ಸೇವೆಯಲ್ಲಿ ಹೋಗಿ, ಜೊತೆಯಾಗಿ ಆಸಕ್ತರಿಗೆ ಪುನರ್ಭೇಟಿ ಮಾಡಿ, ಒಡಗೂಡಿ ಸಭಾ ಸದಸ್ಯರನ್ನು, ಆತ್ಮಿಕವಾಗಿ ಬಲಪಡಿಸಲಿಕ್ಕಾಗಿ ಸಂದರ್ಶಿಸುತ್ತಾರೆ. ಹೋಸೆ ಲೂಯಿ ಗಾಲಿಕುರ್ಚಿಯನ್ನು ದೂಡುವಾಗ ಆರ್ಟೀಮಿಯೊ ಅವನಿಗೆ ಮಾರ್ಗದರ್ಶನ ಮಾಡುತ್ತಾನೆ. ತಾವು ಒಂದು ಏಕಾಂಶ, “ನಾನು ಅವನ ಕಣ್ಣು, ಅವನು ನನ್ನ ಪಾದ” ಎನ್ನುತ್ತಾನೆ ಆರ್ಟೀಮಿಯೊ. (g91 6/22)