“ಯಾವ ಮೂಢತನವನ್ನೂ ಮಾಡಬೇಡ, ಕೊಂದು ಬಿಡುವೆ”
ಬಂದೂಕಿನ ಬಾಯಿ ಕಾರಿನ ತೆರೆದಿದ್ದ ಕಿಟಿಕಿಯಿಂದ ಒಳಗೆ ನೂಕಲ್ಪಟ್ಟಿದ್ದು ನನ್ನ ತಲೆಗೆ ಗುರಿ ಮಾಡಿತ್ತು. ಒಂದು ಸರ್ವ ಹೀಗಂದಿತು:
“ನನ್ನನ್ನೇ ನೋಡಬೇಡ ಹೆಂಗಸೆ. ಬಾಗಿಲು ತೆಗೆ. ಪಕ್ಕದ ಪ್ರಯಾಣಿಕರ ಸೀಟಿನಲ್ಲಿ ಕುಳಿತುಕೊ.” ಹೇಳಿದಂತೆ ನಾನು ಮಾಡಿದೆ. ಆ ಮನುಷ್ಯ ಚಾಲಕ ಚಕ್ರದ ಹಿಂದೆ ಜಾರಿ ಕುಳಿತ. ಬಂದೂಕು ಇನ್ನೂ ನನಗೆ ಗುರಿ ಹಿಡಿಯಲ್ಪಟ್ಟಿತ್ತು.
“ನಿನ್ನೊಡನೆ ಬ್ಯಾಂಕಿನ ಕೀಲಿ ಕೈ ಇದೆಯೆ?”
“ನನ್ನೊಡನೆ ಇಲ್ಲ. ಆದರೆ ಬಾಗಿಲು ತೆರೆಯಲು ಇದೇ ಕ್ಷಣದಲ್ಲಿ ಯಾರಾದರೂ ಬರುವರು.”
“ಯಾವ ಮೂಢತನವನ್ನೂ ಮಾಡಬೇಡ,” ಅವನು ಎಚ್ಚರಿಸಿದ, “ಕೊಂದು ಬಿಡುವೆ.” ನನ್ನ ಕಾರನ್ನು ಅವನು ಪ್ರಾರಂಭಿಸಿ ನಡೆಸಿಕೊಂಡು ಹೋದ.
ಇದು ನನಗೆ ಅಭ್ಯಾಸವಾಗಿತ್ತು. ನಾನು ಟ್ರಸ್ಟ್ ಕಂಪೆನಿ ಬ್ಯಾಂಕಿನ ಒಂದು ಶಾಖೆಯಲ್ಲಿ ಸರಾಫಳಾಗಿದ್ದೆ. ಕಳೆದ ಏಪ್ರಿಲಿನಲ್ಲಿ, ಒಬ್ಬ ಮಹಿಳೆ ತನ್ನ ಪರ್ಸನ್ನು ನನ್ನ ಕಡೆ ತೋರಿಸಿ, “ಇದರಲ್ಲಿ ಬಂದೂಕಿದೆ. ಹಣ ಕೊಟ್ಟು ಬಿಡು,” ಎಂದು ಹೇಳಿದಾಗ ನಾನು ಕೊಟ್ಟು ಬಿಟ್ಟಿದ್ದೆ.
ಸ್ವಲ್ಪ ವಾರಗಳು ಕಳೆದಾಗ, ಒಬ್ಬ ಪುರುಷನು ನನ್ನ ಕಿಟಿಕಿಗೆ ಬಂದ. ಅವನಲ್ಲಿದ್ದ ಬಂದೂಕು ಸರಿಯಾಗಿ ತೋರುತ್ತಿತ್ತು. “ಹಣ ಕೊಡು.” ನಾನು ನೋಟಿನ ಕಟ್ಟನ್ನು ಅವನ ಕಡೆ ದೂಡಿದೆ.
ನನಗೆ ಸಾಕಾಗಿ ಹೋಗಿತ್ತು. ಅಲ್ಲಿಂದ ಇನ್ನೊಂದು ಬ್ರಾಂಚಿಗೆ ವರ್ಗಾಯಿಸುವರೆ ಕೇಳಿಕೊಂಡೆ. ನನ್ನ ವಿನಂತಿಗೆ ಸಮ್ಮತಿ ದೊರಕಿತ್ತು. ಹೀಗೆ, ಈ ಮೇ 23, ಗುರುವಾರ ಬೆಳಿಗ್ಗೆ ಜಾರ್ಜಿಯದ ಕೊಲಂಬಸ್ನ ಪೀಚ್ಟ್ರೀ ಮಾಲ್ನ ಹೊಸ ಬ್ರಾಂಚಿನ ಕಾರು ನಿಲ್ದಾಣದಲ್ಲಿ ಕುಳಿತಿದ್ದೇನೆ. ಬ್ಯಾಂಕ್ ತೆರೆಯಲಿಕ್ಕಾಗಿ ನಾನು ಕಾಯುತ್ತಿದ್ದೇನೆ. ಸಮಯ 8:25. ನಾನು ಸಾಮಾನ್ಯವಾಗಿ ಕೆಲವು ನಿಮಿಷ ಮೊದಲಾಗಿ ಬಂದು ಬೈಬಲಿನ ದಿನದ ವಚನವನ್ನು ಓದುತ್ತೇನೆ. ಈ ದಿನ ಅದು ಮತ್ತಾಯ 6:13, [NW]. “ಕೆಡುಕನಿಂದ ನಮ್ಮನ್ನು ಉದ್ಧರಿಸು,” ಎನ್ನುತ್ತದೆ ಅದು. ನಾನು ಅದನ್ನು ಆಗ ಗ್ರಹಿಸದಿದ್ದರೂ, ಆ ವಚನ ನನಗೆ ಮುಂದಿನ ಎರಡು ದಿವಸಗಳಲ್ಲಿ ಅತಿ ಪ್ರಾಮುಖ್ಯವಾಗಿ ಪರಿಣಮಿಸಲಿಕ್ಕಿತ್ತು.
ನಾನು ಈ ಹೊಸ ಬ್ರಾಂಚಿನಲ್ಲಿ ಕೇವಲ ಎರಡು ವಾರ ಕೆಲಸ ಮಾಡಿದ್ದೆ ಮತ್ತು ನನ್ನ ಕೈಗೆ ಬೀಗದ ಕೈಯನ್ನು ಇನ್ನೂ ಕೊಟ್ಟಿರಲಿಲ್ಲ. ನನ್ನ ಕಾರಿನ ಕಿಟಿಕಿ ಸ್ವಲ್ಪ ತೆರೆದಿತ್ತು, ಮತ್ತು ನಾನು ಆಗ ತಾನೆ ಓದಿದ್ದ ವಚನದ ಕುರಿತು ಚಿಂತಿಸುತ್ತಿದ್ದೆ. ಆಗ ಬಂದೂಕಿನ ಬಾಯಿ ಕಿಟಿಕಿಯಲ್ಲಿ ತೋರಿಬಂತು. ಈ ಮೊದಲು ಎರಡು ಬಾರಿ, ಕಳ್ಳರು ಬ್ಯಾಂಕಿನ ಹಣ ದೋಚಿ ಪರಾರಿಯಾಗಿದ್ದರು. ಈ ಬಾರಿ ನಾನು ಬಲಿಯಾಗಿದ್ದೆ.
ಅವನು ಕಾರು ನಡೆಸಿಕೊಂಡು ಹೋದಾಗ, ನಾನು ಗಟ್ಟಿಯಾಗಿ, “ಓ ಯೆಹೋವನೆ, ನನಗೆ ದಯವಿಟ್ಟು ಸಹಾಯ ಮಾಡು!” ಎಂದು ಕೂಗಿ ಪ್ರಾರ್ಥಿಸಿದೆ.
“ಯೆಹೋವ ಎಂದರೆ ಯಾರು?” ಎಂದು ತಿಳಿಯ ಬಯಸಿದ ನನ್ನ ಅಪಹರಣಗಾರ.
“ಅವನು ನಾನು ಆರಾಧಿಸುವ ದೇವರು.”
“ನನ್ನನ್ನು ನೋಡಬೇಡ! ನೀನು ಕಿಟಿಕಿಯಿಂದ ಹೊರಗೆ ನೋಡುತ್ತಾ ಇರು! ಯೆಹೋವ . . . ಅದು ಕಾವಲಿನ ಬುರುಜು, ಯೆಹೋವನ ಸಾಕ್ಷಿಗಳು, ಅಲ್ಲವೆ?”
“ಹೌದು.”
“ನಾನು ನ್ಯೂ ಯಾರ್ಕ್ ಸಿಟಿಯಲ್ಲಿ ಜೀವಿಸುತ್ತಿದ್ದಾಗ ನನಗೆ ಅವರ ಪರಿಚಯವಿತ್ತು. ನಾನು ಕ್ಯಾಥೊಲಿಕನು. ಹೇಗೂ ಇರಲಿ, ನೀನು ನಿನ್ನ ಪ್ರಾರ್ಥನೆಯನ್ನು ಮೌನವಾಗಿ ಮಾಡುತ್ತಿರು. ನಾನು ಅದನ್ನು ಕೇಳಲು ಬಯಸುವುದಿಲ್ಲ.” ಅವನು ಕೂಡಿಸಿ ಹೇಳಿದ್ದು: “ನೋಡು, ನಾನು ನಿನಗೆ ಕೆಡುಕು ಮಾಡುವುದಿಲ್ಲ. ನನಗೆ ಹಣ ಬೇಕು, ನೀನಲ್ಲ. ನೀನು ಯಾವ ಮೂಢತನವನ್ನೂ ಮಾಡಬೇಡ, ಮಾಡದಿದ್ದರೆ ನಿನಗೆ ಕೆಡುಕಾಗುವುದಿಲ್ಲ.”
ಕಾರು ನಡೆಯಿಸುತ್ತಿದ್ದಾಗೆಲ್ಲ, ಅವನು ಬ್ಯಾಂಕಿನ ವಿಷಯ ನನ್ನೊಂದಿಗೆ ಕೇಳುತ್ತಿದ್ದ. ಬಾಗಿಲು ತೆರೆಯಲು ಅಲ್ಲಿ ಯಾರಿರುವರು? ಅದು ಸಾರ್ವಜನಿಕರಿಗಾಗಿ ಯಾವ ಸಮಯದಲ್ಲಿ ತೆರೆಯುತ್ತದೆ? ಅಲ್ಲಿ ಎಷ್ಟು ಹಣವಿದೆ? ಹೀಗೆ ಬ್ಯಾಂಕಿನ ಕುರಿತು ತುಂಬ ಪ್ರಶ್ನೆಗಳಿದ್ದವು. ನಾನು ನನಗೆ ಸಾಧ್ಯವಾಗುವಷ್ಟು ಉತ್ತರಿಸುತ್ತಿದ್ದಾಗಲೂ ಮೌನವಾಗಿ ಪ್ರಾರ್ಥಿಸುತ್ತಿದ್ದೆ. ಇದರಿಂದ ನನ್ನನ್ನು ಸುಭದ್ರವಾಗಿ ಪಾರುಮಾಡು ಎಂದು ನಾನು ಯೆಹೋವನನ್ನು ಬೇಡುತ್ತಿದ್ದೆ.
ಸುಮಾರು ಹತ್ತು ನಿಮಿಷಗಳ ಬಳಿಕ ಅವನು ಒಂದು ಮಣ್ಣು ರಸ್ತೆಯಲ್ಲಿ ಕಾಡಿಗೆ ಕರೆದುಕೊಂಡು ಹೋದ. ಅವನಿಗೆ ಇಲ್ಲಿ ಯಾರನ್ನೋ ಸಂಧಿಸಲಿಕ್ಕಿತ್ತೆಂಬುದು ವ್ಯಕ್ತ, ಏಕೆಂದರೆ, ಅವನು ತನ್ನೊಳಗೆ, “ಅವನೆಲ್ಲಿ? ಅವನೆಲ್ಲಿ?” ಎಂದು ಗೊಣಗುತ್ತಿದ್ದ. ಅವನು ಕಾರನ್ನು ನಿಲ್ಲಿಸಿ ಹೊರಗೆ ಹೋಗಿ ನಾನು ಡ್ರೈವರನ ಪಕ್ಕದಿಂದ ಜಾರಿ ಕಾರಿನಿಂದ ಇಳಿಯುವಂತೆ ಮಾಡಿದ. ನನ್ನ ಬೆನ್ನು ಯಾವಾಗಲೂ ಅವನಿಗೆದುರಾಗಿತ್ತು. ಬಂದೂಕನ್ನು ನನ್ನ ಪಕ್ಕಕ್ಕೆ ತಿವಿಯುತ್ತಾ ಅವನು ನನ್ನನ್ನು ಕಾಡಿನೊಳಗೆ ದೂರ ಕರೆದುಕೊಂಡು ಹೋದ. ನಾನು ಅವನನ್ನು ನೋಡದ ಹಾಗೆ ನನ್ನ ದೃಷ್ಟಿಯನ್ನು ಸದಾ ನೆಲದ ಮೇಲೆಯೆ ಇಡಬೇಕಾಗಿತ್ತು. ನನ್ನ ಅಂಗಿ ಮತ್ತು ಎತ್ತರ ಹಿಮ್ಮಡಿಯ ಪಾದರಕ್ಷೆಯ ಕಾರಣ ನಡೆಯಲು ಕಷ್ಟವಾಗುತ್ತಿತ್ತು. ಅವನು ನನ್ನನ್ನು ಒಂದು ಮರಕ್ಕೆ ಕೊಂಡೊಯ್ದು ಅದರ ಕಾಂಡಕ್ಕೆ ಮುಖಮಾಡಿಸಿ ನನ್ನ ಕಣ್ಣುಗಳ ಮತ್ತು ಬಾಯಿಯ ಮೇಲೆ ದಪ್ಪದ ಡಕ್ಟ್ ಟೇಪ್ ಹಚ್ಚಿದ. ನನ್ನ ಕೈಗಳನ್ನು ಬೆನ್ನ ಹಿಂದೆ ಜೋಡಿಸಿ ಟೇಪ್ ಹಚ್ಚಿ, ಆ ಬಳಿಕ ನನ್ನನ್ನು ಆ ಮರದ ಕಾಂಡಕ್ಕೆ ಟೇಪಿನಿಂದ ಸುತ್ತಿ ಕಟ್ಟಿದ.
ಅಷ್ಟರಲ್ಲಿ ನಾನು ಜೋರಾಗಿ ನಡುಗುತ್ತಿದ್ದೆ. ಅದನ್ನು ನಿಲ್ಲಿಸುವಂತೆ ಆಜ್ಞಾಪಿಸಿದ. ಆಗುವುದಿಲ್ಲವೆಂದು ನಾನು ಟೇಪಿನೊಳಗಿಂದ ಗೊಣಗಿ ಹೇಳಿದೆ. “ಹೇಗೂ ಸುಮ್ಮನಾಗು. ಯಾವನೋ ನಿನ್ನನ್ನು ಕಾಯುತ್ತಿದ್ದಾನೆ. ನೀನು ಕಟ್ಟು ಕಳಚುವಂತೆ ಒದ್ದಾಡುವುದಾದರೆ ಅವನು ನಿನ್ನನ್ನು ಕೊಲ್ಲುವನು.” ಅಷ್ಟು ಹೇಳಿ ಅವನು ನನ್ನನ್ನು ಬಿಟ್ಟು ಹೋದ. ನಾನು “ಕೆಡುಕನಿಂದ ನನ್ನನ್ನು ಉದ್ಧರಿಸು” ಎಂಬ ದಿನವಚನವನ್ನು ಜ್ಞಾಪಿಸಿಕೊಂಡು, ಈ ಸಮಯದಲ್ಲಿ ಅದು ನನಗೆ ಎಷ್ಟು ಸಮಂಜಸವೆಂದು ಯೋಚಿಸುತ್ತಿದ್ದೆ.
ಅವನು ಸ್ವಲ್ಪದರಲ್ಲಿ ಇನ್ನೊಂದು ಕಾರಿನಲ್ಲಿ ಹಿಂದೆ ಬಂದ—ನನ್ನ ಕಾರಾಗಿದ್ದರೆ ಎಂಜಿನಿನ ಸದ್ದಿನಿಂದ ಅದು ನನಗೆ ತಿಳಿಯುತ್ತಿತ್ತು. ಅವನು ತನ್ನ ಕಾರನ್ನು ನನ್ನದಕ್ಕೆ ವಿನಿಮಯ ಮಾಡಿರಬಹುದು. ಅವನು ನನ್ನ ಸೊಂಟ ಮತ್ತು ಮರದ ಕಾಂಡಕ್ಕೆ ಸುತ್ತಿದ ಟೇಪಿನಿಂದ ನನ್ನನ್ನು ಬಿಡಿಸಿದ, ಆದರೆ ನನ್ನ ಕಣ್ಣುಗಳು ಮತ್ತು ಬಾಯಿಯನ್ನು ಹಾಗೆಯೆ ಇಟ್ಟ, ಮತ್ತು ನನ್ನ ಮಣಿಕಟ್ಟುಗಳು ಬೆನ್ನ ಹಿಂದೆ ಇನ್ನೂ ಟೇಪಿನಿಂದ ಕಟ್ಟಲ್ಪಟ್ಟಿದ್ದವು. ಅವನು ಪೊದೆಗಳ ಮಧ್ಯದಿಂದ ನನ್ನನ್ನು ಕಾರಿಗೆ ಹಿಂದೆ ಕರೆದುಕೊಂಡು ಹೋದ. ಅವನು ಅದರ ಹಿಂಭಾಗದ ಸಾಮಾನಿಡುವ ಸ್ಥಳದ ಬಾಗಿಲನ್ನು ತೆರೆದು ಅದರೊಳಗೆ ನನ್ನನ್ನು ಹಾಕಿ, ಬಾಗಿಲು ಮುಚ್ಚಿ ಕಾರು ನಡೆಸಿಕೊಂಡು ಹೋದ.
ನಾನು ಪುನಃ ಪ್ರಾರ್ಥಿಸಲಾರಂಭಿಸಿದೆ. ನಾನು ಆ ದಿನದಲ್ಲಿ ಅಧಿಕಾಂಶ ಪ್ರಾರ್ಥಿಸುತ್ತಿದೆ. ನನ್ನ ಮುಂದೆ ಏನಿದ್ದರೂ ಅದನ್ನು ಸಹಿಸುವ ಬಲಕ್ಕಾಗಿ ಯೆಹೋವನನ್ನು ಕೇಳಿಕೊಂಡೆ. ನಾವು ಸಾಧಾರಣ 15 ಯಾ 20 ನಿಮಿಷ ಹೋದಾಗ ಅವನು ಪುನಃ ನಿಂತು, ನಾನಿದ್ದ ಸ್ಥಳದ ಬಾಗಿಲು ತೆರೆದು, ನನ್ನ ಬಾಯಿಯ ಟೇಪ್ ತೆಗೆದು, ಬ್ಯಾಂಕಿನ ಫೋನ್ ನಂಬರನ್ನು ಕೇಳಿದ. ನಾನು ಅದನ್ನು ಅವನಿಗೆ ಕೊಟ್ಟೆ. ನನ್ನ ಧಣಿ ಯಾರೆಂದು ಕೇಳಿದ. ನಾನು ಹೇಳಿದೆ. ಅವನು ನನ್ನ ಬಾಯಿಗೆ ಪುನಃ ಟೇಪ್ ಹಚ್ಚಿದ. ಆ ಸಮಯದಲ್ಲಿಯೇ ಅವನು ಬ್ಯಾಂಕನ್ನು ಕರೆದು ಹಣವನ್ನು ಕೇಳಿದ್ದು—1,50,000 ಡಾಲರುಗಳೆಂದು ನನಗೆ ಆ ಬಳಿಕ ತಿಳಿಯಿತು.
ಜಾರ್ಜ್—ಆ ದಿನ ಬ್ಯಾಂಕಿನಲ್ಲಿದ್ದ ಆಫೀಸರ್—ಎಂಬವನಿಗೆ ಅವನು, ಮಧ್ಯಾಹ್ನ ಎರಡು ಗಂಟೆಯೊಳಗೆ ಅಟ್ಲಾಂಟದ ದಕ್ಷಿಣದಲ್ಲಿ ಒಂದು ಪ್ರತ್ಯೇಕ ಟೆಲಿಫೊನ್ ಬೂತ್ನಲ್ಲಿ ಹಣದೊಂದಿಗೆ ಇರಬೇಕೆಂದೂ, ಆ ಮೇಲೆ ಮುಂದಿನ ಮಾಹಿತಿ ಕೊಡಲಾಗುವುದೆಂದೂ ಹೇಳಿದ. ಅವನು ಈ ವಿದ್ಯಮಾನಗಳನ್ನು ನನಗೆ ತಿಳಿಸಿ ನನಗೆ ಬೇಗನೆ ಬಿಡುಗಡೆಯಾಗುವ ಆಶ್ವಾಸನೆ ಕೊಟ್ಟ. ಆದರೆ ಮಧ್ಯಾಹ್ನ ಎರಡು ಗಂಟೆ ಇನ್ನೂ ಬಹು ದೂರದಲ್ಲಿತ್ತು ಮತ್ತು ನಾನಿನ್ನೂ ಆ ಡಿಕ್ಕಿಯಲ್ಲಿ ನಿಗ್ರಹಿಸಲ್ಪಟ್ಟು ಕಟ್ಟಲ್ಪಟ್ಟಿದ್ದೆ. ಕಾವು ಸದಾ ಜಾಸ್ತಿಯಾಗುತ್ತಾ ಇತ್ತು. ತಾಸುಗಳು ನಿಧಾನವಾಗಿ ದಾಟಿದವು. ಒಮ್ಮೆಯೋ ಎರಡು ಬಾರಿಯೋ ನಾನು ಹೇಗಿದ್ದೇನೆಂದು ಅವನು ಒಳಗೆ ನೋಡಿದ. “ನಿನ್ನ ದೇವರಾದ ಯೆಹೋವನು ನಿನ್ನನ್ನು ಪರಾಮರಿಸುತ್ತಿದ್ದಾನೆ,” ಎಂದು ಅವನು ಹೇಳಿದ. ಹೀಗೆ ನಾನು ಯೆಹೋವನಿಗೆ ಬೆಳಗ್ಗಿನಿಂದ ಮಾಡಿದ ಪ್ರಾರ್ಥನೆಯನ್ನು ಅವನು ಜ್ಞಾಪಿಸಿಕೊಂಡ.
ನಾನು ನನ್ನ ಕುಟುಂಬದ ವಿಷಯ ಯೋಚಿಸಿದೆ. ನಾನು ಕಾಣೆಯಾದದ್ದು ಸಹ ಅವರಿಗೆ ತಿಳಿದಿದಿಯೆ? ತಿಳಿದಿದ್ದರೆ ಅವರ ಪ್ರತಿಕ್ರಿಯೆ ಏನಾಗಿರಬಹುದು? ನನ್ನ ವಿಷಯ ಚಿಂತಿಸುವುದಕ್ಕಿಂತ ಹೆಚ್ಚು ನಾನು ಅವರ ವಿಷಯ ಚಿಂತಿಸತೊಡಗಿದೆ. ವಿವಿಧ ಶಾಸ್ತ್ರವಚನಗಳ ಕುರಿತು ಯೋಚಿಸಿದೆ. ‘ಯೆಹೋವನ ನಾಮ ಒಂದು ಬಲವಾದ ದುರ್ಗ; ಅಲ್ಲಿಗೆ ಓಡುವ ನೀತಿವಂತರೂ ಸುಭದ್ರರು,’ ಎಂಬ ಯೆಹೋವನ ಹೆಸರಿನ ಕುರಿತ ಮತ್ತು, ‘ಯೆಹೋವನ ಹೆಸರನ್ನು ಕರೆಯುವವರು ರಕ್ಷಿಸಲ್ಪಡುವರು,’ ಎಂಬ ವಚನಗಳ ವಿಷಯ ಯೋಚಿಸಿದೆ. ಮತ್ತು “ಎಡೆಬಿಡದೆ ಪ್ರಾರ್ಥನೆ ಮಾಡಿರಿ” ಎಂಬ ಅಪೊಸ್ತಲ ಪೌಲನ ಸಲಹೆಯನ್ನು ನಾನು ನಿಶ್ಚಯವಾಗಿಯೂ ಪ್ರಯೋಗಿಸುತ್ತಿದ್ದೆ. (ಜ್ಞಾನೋಕ್ತಿ 18:10; ರೋಮಾಪುರ 10:13; 1 ಥೆಸಲೊನೀಕ 5:17) ಬೈಬಲ್ ವಚನಗಳಲ್ಲದೆ, ರಾಜ್ಯ ಸಂಗೀತಗಳ ಮಾತುಗಳು ಮತ್ತು ಸರ್ವವಿನ್ಯಾಸಗಳು, ‘ಯೆಹೋವನು ನನ್ನ ಶರಣನು, ನನ್ನ ಬಲವೂ ಶಕ್ತಿಯೂ’ ಮತ್ತು ‘ಯೆಹೋವನು ನನ್ನ ಆಶ್ರಯದುರ್ಗ’ ಎಂಬಂಥ ಗೀತಗಳು ಮತ್ತೆ ಮತ್ತೆ ನನ್ನ ಮನಸ್ಸಿಗೆ ಬಂದವು.
ಕಾವಲಿನ ಬುರುಜು ಪತ್ರಿಕೆಗಳಲ್ಲಿ ನಾನು ಓದಿದ್ದ ಅನುಭವಗಳಿಂದ, ವಿಶೇಷ ಪರೀಕ್ಷೆಗಳನ್ನು ತಾಳಿಕೊಳ್ಳಲು ಯೆಹೋವನು ಇತರರಿಗೆ ಸಹಾಯ ಮಾಡಿದುದನ್ನು ಜ್ಞಾಪಿಸಿಕೊಂಡೆ. ನನ್ನ ಮನಸ್ಸಿನಲ್ಲಿ ಎದ್ದು ನಿಂತಿದ್ದ ಅವೇಕ್! ಪತ್ರಿಕೆಯ ಒಂದು ಅನುಭವವು, ಬ್ಯಾಂಕ್ ದರೋಡೆಯಲ್ಲಿ ಒತ್ತೆಯಾಳಾಗಿ ಹಿಡಿಯಲ್ಪಟ್ಟಿದ್ದ ಒಬ್ಬ ಸಾಕ್ಷಿಯದ್ದಾಗಿತ್ತು.a ಅವಳ ಕುತ್ತಿಗೆ ಬಿಗಿಯಾಗಿ ಹಿಡಿಯಲ್ಪಟ್ಟಿದ್ದಾಗ, ಆ ದರೋಡೆಕೋರನು ಒಂದು ಕೈ ಸಿಡಿಗುಂಡಿನ್ನು ಬೀಸುತ್ತಾ ಅವಳನ್ನು ಬೆದರಿಸಿದ್ದ. ಅವಳ ಉಗ್ರಪರೀಕ್ಷೆ ಅನೇಕ ತಾಸು ನಡೆಯಿತು. ಅವಳೂ ಆ ದರೋಡೆಕೋರನೂ ಒಳಗಿದ್ದರು, ಪೊಲೀಸರು ಹೊರಗಿದ್ದರು. ಅವಳು ಸಹ ಅವಳ ಉಗ್ರಪರೀಕ್ಷೆಯನ್ನು ಯೆಹೋವನಿಗೆ ಪ್ರಾರ್ಥಿಸುತ್ತಾ, ಶಾಸ್ತ್ರವಚನಗಳನ್ನು ನೆನಪಿಸಿಕೊಳ್ಳುತ್ತಾ ತಾಳಿದಳು. ಮತ್ತು ಅವಳ ಧೈರ್ಯದ ಪ್ರತಿಫಲವಾಗಿ, ಅವಳು ಭದ್ರವಾಗಿ ತನ್ನ ಕುಟುಂಬಕ್ಕೆ ಹಿಂದಿರುಗಿಸಲ್ಪಟ್ಟಳು.
ಕೊನೆಗೆ ಕಾರ್ ನಿಂತು, ಡ್ರೈವರನು ಕೆಳಗಿಳಿದ. ನನ್ನ ವಾಚ್ ಕೈಯಲ್ಲಿದ್ದು ಕೈ ಹಿಂದೆ ಬಿಗಿದದ್ದರಿಂದ, ಸಮಯವನ್ನು ನೋಡಲಿಕ್ಕಾಗದಿದ್ದರೂ ಆಗ ಎರಡು ಗಂಟೆಯಾಗಿರಬಹುದೆಂದು, ಸರಿಯಾಗಿಯೇ ಊಹಿಸಿ, ಅವನು ಬ್ಯಾಂಕಿನ ಜಾರ್ಜ್ನೊಂದಿಗೆ ಸಂಪರ್ಕ ಬೆಳೆಸಲು ಹೋಗಿದ್ದಾನೆಂದು ನೆನಸಿದೆ. ನನ್ನ ಬಿಡುಗಡೆ ಸಮೀಪವಿರಬಹುದೆಂಬ ನಿರೀಕ್ಷೆ ನನಗಿತ್ತು. ಆದರೆ ಅದು ಹಾಗೆ ನಡೆಯಲಿಲ್ಲ. ಅವನ ಯೋಜನೆಗಳು ಸರಾಗವಾಗಿ ನಡೆದಿರಲಿಲ್ಲವೆಂಬುದು ವ್ಯಕ್ತವಾಯಿತು; ನಾವು ಪುನಃ ಕಾರಿನಲ್ಲಿ ಪ್ರಯಾಣಿಸಿದೆವು.
ಥಟ್ಟನೆ ಎಂಜಿನಿನ ವೇಗ ಹೆಚ್ಚಾಯಿತು, ಕಾರು ಅದರ ಪೂರ್ತಿ ವೇಗದಲ್ಲಿ ಮುಂದುವರಿಯ ತೊಡಗಿತು! ಅವನು ಅತಿ ಹೆಚ್ಚು ವೇಗದಲ್ಲಿ ಕಾರನ್ನು ನಡೆಸುತ್ತಿದ್ದುದು ಮಾತ್ರವಲ್ಲ, ಇತರ ವಾಹನಗಳನ್ನು ತಪ್ಪಿಸಲಿಕ್ಕಾಗಿಯೋ ಎಂಬಂತೆ ಒಳಗೆ ಹೊರಗೆ ತಿರುಗಿಸುತ್ತಾ ಅದನ್ನು ನಡೆಸತೊಡಗಿದ. ನಾನು ಆ ಡಿಕ್ಕಿಯ ಎಲ್ಲಾ ಎಡೆಗಳಿಗೂ ಎಸೆಯಲ್ಪಟ್ಟೆ. ನನ್ನ ದೇಹ ನೆಲದಿಂದ ಮೇಲಕ್ಕೆ ಎಸೆಯಲ್ಪಡುತ್ತಿತ್ತು ಮತ್ತು ನನ್ನ ತಲೆ ಡಿಕ್ಕಿಯ ಬದಿಗಳಿಗೆ ಬಡಿಯುತ್ತಿತ್ತು. ನನ್ನ ಕೈಗಳು ಮತ್ತು ತೋಳುಗಳು ನನ್ನ ಬೆನ್ನ ಹಿಂದೆ ಬಂಧಿಸಲ್ಪಟ್ಟಿದ್ದ ಕಾರಣ ನಾನು ಸಕಲ ದಿಕ್ಕುಗಳಿಗೂ ಹಾರಿಸಲ್ಪಡುತ್ತಿದ್ದಾಗ ನನಗೆ ಹುರಿಗೊಳ್ಳುವ ಯಾ ಪೆಟ್ಟನ್ನು ತಡೆಯುವ ಶಕ್ತಿ ಇರಲಿಲ್ಲ. ಅದು ಹತ್ತು ನಿಮಿಷ ಕಾಲ ಮುಂದುವರಿದಿರಬಹುದಾದರೂ, ಅದಕ್ಕೂ ಎಷ್ಟೋ ಹೆಚ್ಚು ಸಮಯವೆಂಬಂತೆ ನನಗೆ ತೋಚಿತು.
ಇದಕ್ಕೆ ಸ್ವಲ್ಪದರಲ್ಲೇ ಕಾರ್ ನಿಂತಿತು. ನಾನು ಹೇಗಿದ್ದೇನೆಂದು ನೋಡಲು ಅವನು ಡಿಕ್ಕಿಯ ಬಾಗಿಲು ತೆರೆದ. ನನಗೆ ಸಿಕ್ಕಿದ ಹೊಡೆತಗಳಿಂದಾಗಿ ನಾನು ತೀರ ತತ್ತರಿಸಲ್ಪಟ್ಟು ಸಂಕಟದಲ್ಲಿದ್ದೆ ಎಂಬುದು ವ್ಯಕ್ತ. ನನ್ನ ಹೃದಯ ಬಡಿಯುತ್ತಿತ್ತು, ಮತ್ತು ಉಸಿರಾಟ ಅತಿ ಕಷ್ಟಕರವಾಗಿತ್ತು. ನಾನು ಬೆವರಿನಿಂದ ತುಂಬಿ ಹೋಗಿದ್ದರೂ ಕೈಗಳನ್ನು ಹಿಂದೆ ಕಟ್ಟಿದ್ದ ಕಾರಣ ಅದನ್ನು ಒರಸಲು ಸಹಾಯಶೂನ್ಯಳಾಗಿದ್ದೆ. ನನ್ನ ಕಣ್ಣು ಮತ್ತು ಬಾಯಿಯ ಮೇಲಿದ್ದ ಟೇಪಿನ ದೆಸೆಯಿಂದ ನನ್ನ ಮೂಗು ಮಾತ್ರ ಕಾಣುತ್ತಿದ್ದುದರಿಂದ ಉಸಿರಾಡುವುದು ವಿಶೇಷವಾಗಿ ಕಷ್ಟಕರವಾಗಿತ್ತು. ನನಗೆ ಉಸಿರಾಡಲು ಸುಲಭವಾಗುವಂತೆ ಮತ್ತು ಅಪೇಕ್ಷೆ ಇರುವಲ್ಲಿ ಮಾತಾಡುವಂತೆ, ಅವನು ನನ್ನ ಬಾಯಿಯಿಂದ ತುಸು ಹೊತ್ತು ಆ ಟೇಪನ್ನು ತೆಗೆದ.
ಪೊಲೀಸರು ತನ್ನ ಕಾರನ್ನು ಪ್ರಾಯಶಃ ಅವರ ಕಣ್ಗಾವಲಿನ ಮೂಲಕ ಕಂಡುಹಿಡಿದು ಬೆನ್ನಟ್ಟಿ ಬಂದರೆಂದು ಅವನು ಹೇಳಿದ. ಈ ಕಾರಣದಿಂದಲೇ ಅವನು ಅಷ್ಟು ವೇಗವಾಗಿ ಮತ್ತು ಇತರ ಕಾರುಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹಿಂದಕ್ಕೂ ಮುಂದಕ್ಕೂ ತಿರುಗಿಸುತ್ತಾ ಕಾರು ನಡೆಸಿದ್ದು. ಪೋಲಿಸರಿಂದ ತಪ್ಪಿಸಿಕೊಳ್ಳಲು ಅವನಿಗೆ ಸಾಧ್ಯವಾಯಿತು. ಅವನಿಗೆ ಇನ್ನೂ ಹಣ ಸಿಗಲಿಲ್ಲ, ಆದರೆ ಅವನು ಇನ್ನಾವದೋ ಮಾರ್ಗವನ್ನು ಪ್ರಯತ್ನಿಸಲಿದ್ದಾನೆ, ಅದಕ್ಕೆ ಸ್ವಲ್ಪ ಸಮಯ ಹಿಡಿದೀತಾದರೂ ನನಗೆ ಚಿಂತೆ ಬೇಡವೆಂದು ಅವನು ವಿವರಿಸಿದ. ನನಗೆ ಶಾರೀರಿಕವಾಗಿ ಹಾನಿ ಮಾಡುವುದಿಲ್ಲವೆಂದೂ ಅದು ಅವನ ಉದ್ದೇಶವಲ್ಲವೆಂದೂ ಅವನು ನನಗೆ ಆಶ್ವಾಸನೆ ಕೊಟ್ಟ. ಅವನಿಗೆ ಹಣ ಬೇಕಾಗಿದೆ ಮತ್ತು ಅದನ್ನು ಪಡೆಯಲು ನನ್ನನ್ನು ಬೀಗದ ಕೈಯಾಗಿ ಉಪಯೋಗಿಸುತ್ತಿದ್ದಾನೆ. ಅವನು ಇದನ್ನು ಹೇಳಿದಾಗ, ನನ್ನ ಮನಸ್ಸಿಗೆ ಶಾಂತಿಯಾಯಿತು. ಏಕೆಂದರೆ, ಅವನು ನನಗೆ ಹಾನಿಮಾಡತೊಡಗಿದರೆ, ನಾನು ಸರಿಯಾದ ಪ್ರತಿಕ್ರಿಯೆ ತೋರಿಸುವಂತೆ ಸಹಾಯಮಾಡಬೇಕೆಂದು ನಾನು ಯೆಹೋವನಿಗೆ ಪ್ರಾರ್ಥಿಸಿದ್ದೆ.
ತಾಸುಗಳು ನಿಧಾನವಾಗಿ ಕಳೆದವು. ಅವನು ಒಂದೆರಡು ಸಲ ಕಾರ್ ನಿಲ್ಲಿಸಿದ, ಹೆಚ್ಚು ಫೋನ್ ಮಾಡಲಿಕ್ಕೋ, ಹಣ ಪಡೆಯುವ ಪ್ರಯತ್ನಕ್ಕೋ ಆಗಿದ್ದಿರಬಹುದು. ಒಮ್ಮೆ ಅವನು ನಿಲ್ಲಿಸಿದಾಗ ಪೆಟ್ರೋಲ್ ತುಂಬಿಸುವುದು ನನಗೆ ಕೇಳಿಸಿತು. ನನಗೆ ಒಳಗೆ ಎಷ್ಟು ಇಕ್ಕಟ್ಟಾಗಿತ್ತೆಂದರೆ ನಾನು ಅತ್ತಿತ್ತು ಸರಿಯಲು ಸಾಧ್ಯವಿದ್ದಷ್ಟು ಪ್ರಯತ್ನಿಸಿದಾಗ ಸ್ವಲ್ಪ ಶಬ್ದ ಮಾಡಿದೆ. ಕೂಡಲೆ ಅವನು ಟ್ರಂಕ್ ತೆರೆದು ಸದ್ದು ಮಾಡುವುದರ ಕುರಿತು ಎಚ್ಚರಿಸಿದ. ಆಗ ಸಮಯವೆಷ್ಟೋ ಎಂದು ನಾನು ಯೋಚಿಸತೊಡಗಿದೆ. ಅವನು ಎರಡು ಗಂಟೆಯಾಗಿದ್ದಾಗ ಆ ಮೊದಲನೆಯ ಬಾರಿಯಲ್ಲದೆ, ನಿರ್ದಿಷ್ಟವಾಗಿ ಯಾವ ಸಮಯವೆಂದು ಹೇಳಲಿಲ್ಲ. ಆದರೆ ನಾವು ಅಟ್ಲಾಂಟ ಪ್ರದೇಶದಲ್ಲೇ ಇದ್ದೇವೆಂದು ನನಗೆ ತಿಳಿದಿತ್ತು, ಏಕೆಂದರೆ ವಿಮಾನ ನಿಲ್ದಾಣದಿಂದ ವಿಮಾನಗಳು ಏರಿ ಇಳಿಯುವುದು ನನಗೆ ಕೇಳಿಬರುತ್ತಿತ್ತು.
ಆ ಬಳಿಕ, ಅವನು ಡಿಕ್ಕಿ ತೆರೆದು, ‘ಇನ್ನೊಂದು ತಾಸು. ಇನ್ನೊಂದು ತಾಸಿನ ಬಳಿಕ ನೀನು ಸ್ವತಂತ್ರಳು’ ಎಂದು ಹೇಳಿದ. ಅವನು ಅನೇಕ ಬಾರಿ ಹಾಗೆ ಹೇಳಿದ. ಆ ಮೇಲೆ ನಾನು ಅವನನ್ನು ನಂಬಲಿಲ್ಲ. ಆದರೆ ನಿರೀಕ್ಷಿಸುತ್ತಾ ಇದ್ದೆ. ಅದೇನೂ ವಿಪರೀತ ಸೆಕೆಯ ದಿನವಾಗಿರಲಿಲ್ಲವಾದರೂ ಡಿಕ್ಕಿಯೊಳಗೆ ಇಕ್ಕಟ್ಟಾಗಿ ಉಸಿರು ಕಟ್ಟಿಸುತ್ತಿತ್ತು ಮತ್ತು ಕಾವು ಹೆಚ್ಚು ಜಾಸ್ತಿಯಾಗುತ್ತಿತ್ತು. ನಾನು ತುಂಬಾ ಬೆವರುತ್ತಿದ್ದೆ ಮತ್ತು ನನಗೆ ಉಸಿರಾಡುವುದು ಹೆಚ್ಚು ಕಷ್ಟವಾಗುತ್ತಿತ್ತು. ನಾನು ಪುನರುತ್ಥಾನದ ವಿಷಯ ಪ್ರಾರ್ಥಿಸತೊಡಗಿದೆ, ಏಕೆಂದರೆ ನನಗೆ ಇನ್ನೆಷ್ಟು ಕಾಲ ಉಸಿರಾಡಲು ಸಾಧ್ಯವಾಗಬಹುದೆಂಬ ವಿಷಯ ನಿಶ್ಚಯವಿರಲಿಲ್ಲ.
ನಾನು ಸತ್ತರೆ, ನನ್ನ ಕುಟುಂಬ ಅದನ್ನು ನಿಭಾಯಿಸುವರೆ ಯೆಹೋವನು ಸಹಾಯ ಮಾಡುವನೆಂದು ನಾನು ನಿರೀಕ್ಷಿಸಿದೆ. ನನಗೆ ನನ್ನ ಕುಟುಂಬ ಹಾಗೂ ನನ್ನ ವಿಷಯ ಚಿಂತೆ ಇತ್ತು. ನಾನು ಸತ್ತರೆ, ಯೆಹೋವನು ಪುನರುತ್ಥಾನದಲ್ಲಿ ನನ್ನನ್ನು ಹಿಂದೆ ತರುವನೆಂದೂ ಆತನ ವಾಗ್ದಾನಿತ ನೀತಿಯ ನೂತನ ಲೋಕದಲ್ಲಿ ನನ್ನ ಕುಟುಂಬದೊಂದಿಗೆ ನಾನು ಪುನಃ ಸೇರುವೆನೆಂದೂ ನನಗೆ ತಿಳಿದಿತ್ತು. (ಯೋಹಾನ 5:28, 29; 2 ಪೇತ್ರ 3:13) ಯೆಹೋವನ ಮತ್ತು ಆತನ ವಾಗ್ದಾನಗಳ ಕುರಿತ ನನ್ನ ಯೋಚನೆಗಳೇ ನನ್ನನ್ನು ಆಗ ಬಲಪಡಿಸಿದವು.
ಡ್ರೈವರನು ಪುನಃ ಡಿಕ್ಕಿಯನ್ನು ತೆರೆದ. ಆಗ ಕತ್ತಲಾಗಿತ್ತು—ಕತ್ತಲಾಗಿ ಅನೇಕ ತಾಸುಗಳಾಗಿದ್ದವು. ಅವನು ಹೆಚ್ಚು ಫೋನ್ ಕರೆಗಳನ್ನು ಮಾಡಿದ್ದ. ಬಿಡುಗಡೆಯ ಮೌಲ್ಯವನ್ನು ಪಡೆಯುವುದರಲ್ಲಿ ಅವನ ಯಾವ ಪ್ರಯತ್ನಗಳೂ ಸಫಲಗೊಂಡಿರಲಿಲ್ಲ. ತಾನು ಪ್ರಯತ್ನಮಾಡಿ ಸುಸ್ತಾಗಿದ್ದೇನೆಂದೂ ನನ್ನನ್ನು ಕೊಲಂಬಸಿಗೆ ಕೊಂಡುಹೋಗಿ ಅಲ್ಲಿ ಬಿಟ್ಟುಬಿಡುತ್ತೇನೆಂದೂ ಅವನು ಹೇಳಿದ. ನಾವು ಹಿಂದೆ ಹೋಗುವಷ್ಟರಲ್ಲಿ ನಾನು ಪೂರ್ತಿ ಬಳಲಿ ಹೋಗಿದ್ದೆ. ಎಲ್ಲವೂ ತೀರಿ ಹೋಗುತ್ತಿದ್ದರೆ ಎಂದು ಅಪೇಕ್ಷಿಸುತ್ತಾ ನಾನು ಡಿಕ್ಕಿಯಲ್ಲಿ ಕೇವಲ ಬಿದ್ದುಕೊಂಡಿದ್ದೆ. ಆದರೆ ನನ್ನನ್ನು ಚೇತನಗೊಳಿಸುತ್ತಾ, ‘ಇಲ್ಲ, ನಾನು ಎಚ್ಚರಿಕೆಯಿಂದಿರಬೇಕು. ನಾನು ನನ್ನನ್ನು ಎಚ್ಚರವಾಗಿಟ್ಟುಕೊಳ್ಳಬೇಕು. ಎಲ್ಲವೂ ಬೇಗನೆ ಮುಗಿಯಲಿದೆ. ಅವನು ತನ್ನ ಪ್ರಯತ್ನವನ್ನು ಬಿಟ್ಟು ನನ್ನನ್ನು ಮನೆಗೆ ಕೊಂಡೊಯ್ಯುತ್ತಿದ್ದಾನೆ,’ ಎಂದು ಯೋಚಿಸತೊಡಗಿದೆ.
ನನ್ನ ಕಾರಿನ ಬಳಿ ನನ್ನನ್ನು ಬಿಡಲು ಅವನು ಹೋಗುತ್ತಿದ್ದ, ಆದರೆ ಅವನು ನೆನಸಿದ ಸ್ಥಳದಲ್ಲಿ ಅದಿರಲಿಲ್ಲ. ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಕ್ಕೆ ಅವನು ನನ್ನನ್ನು ಒಯ್ದಾಗ ನಮ್ಮ ಸಂಚಾರ ಪ್ರತಿನಿಧಿ ಉಳುಕೊಳ್ಳುತ್ತಿದ್ದ ಬಿಡಾರದಲ್ಲಿ ಬೆಳಕಿತ್ತು. “ಜನರಿರುವಲ್ಲಿ ನಾನು ನಿನ್ನನ್ನು ಬಿಡುವುದಿಲ್ಲ!” ಆದರೆ ಅವನು ಪ್ರಥಮ ಬಾರಿ ನನ್ನನ್ನು ಡಿಕ್ಕಿಯಿಂದ ಹೊರಗಿಳಿಸಿದ. ನನ್ನ ಕಣ್ಣುಗಳು ಇನ್ನೂ ಮುಚ್ಚಲ್ಪಟ್ಟಿದ್ದವು, ನನ್ನ ಕೈಗಳು ಇನ್ನೂ ಬೆನ್ನ ಹಿಂದೆ ಬಿಗಿಯಲ್ಪಟ್ಟಿದ್ದವು. ಆದರೆ ಅವನು ನನ್ನ ಬಾಯಿಯ ಟೇಪನ್ನು ಬಿಚ್ಚಿದ. ನನ್ನ ಬುದ್ಧಿಭ್ರಮಣೆಯಾದಂತಾಗಿ ನಡೆಯಲಿಕ್ಕಾಗಲಿಲ್ಲ—ನನ್ನ ಕಾಲುಗಳು ಅಷ್ಟು ಜಡವಾಗಿದ್ದವು. ಅವನು ನನ್ನನ್ನು ಪುನಃ ಡಿಕ್ಕಿಯೊಳಗೆ ಹಾಕಿ, ಅದೇ ರಸ್ತೆಯಲ್ಲಿ ಸ್ವಲ್ಪ ದೂರ ಒಯ್ದು ಒಂದು ಬ್ಯಾಪ್ಟಿಸ್ಟ್ ಚರ್ಚಿನ ಹಿಂಭಾಗ ಬಿಟ್ಟು ಕಾರನ್ನು ನಡೆಸಿಕೊಂಡು ಹೋದ. ಆಗ ಶುಕ್ರವಾರ ಬೆಳಿಗ್ಗೆ, 1:30.
ನನಗೆ ತೀರ ಬುದ್ಧಿಭ್ರಮಣೆಯಾಗಿತ್ತು, ನಾನು ಕುಳಿತು ಮೂರ್ಛೆ ಹೋದೆ. ಅವನ ಕಾರ್ ಹೊರಟುಹೋಗುವ ಸದ್ದೇ ನನ್ನ ಕೊನೆಯ ನೆನಪು. ಮೂರು ತಾಸುಗಳ ಬಳಿಕ ನನಗೆ ಮೂರ್ಛೆ ಬಂದಾಗ ನಾನು ಹುಲ್ಲಿನ ಮೇಲೆ ಕೆಸರಿನಲ್ಲಿ ಮಲಗಿದ್ದೆ. ನಾನು ನನ್ನ ಮಣಿಕಟ್ಟಿನ ಟೇಪನ್ನು ಸಡಲಿಸಿ ಕಣ್ಣುಗಳ ಮೇಲಿದ್ದ ಟೇಪನ್ನು ತೆಗೆದೆ. ನನ್ನ ವಾಚ್ ನೋಡಿದೆ. 5ಕ್ಕೆ 15 ನಿಮಿಷವಿತ್ತು. ನಾನು 17 ತಾಸು ಡಿಕ್ಕಿಯಲ್ಲಿಯೂ 3 ತಾಸು ಮೂರ್ಛೆ ಹೋಗಿ ನೆಲದ ಮೇಲೆಯೂ ಇದ್ದೆ. ಕಂಪಿಸುವ ಮತ್ತು ಜಡವಾದ ಕಾಲುಗಳಲ್ಲಿ ನಾನು ನಡೆದು ಹೋದೆ. ಒಬ್ಬ ಪುರುಷನು ತನ್ನ ಮನೆಯ ಪ್ರವೇಶರಸ್ತೆಯಿಂದ ಟ್ರಕ್ಕನ್ನು ಹೊರಗೆ ನಡೆಸುತ್ತಿದ್ದ. ನನ್ನನ್ನು ಬಲಾತ್ಕಾರಹರಣ ಮಾಡಲಾಗಿತ್ತು, ಆದುದರಿಂದ ನನ್ನ ಕುಟುಂಬಕ್ಕೂ ಪೊಲೀಸರಿಗೂ ಫೋನ್ ಮಾಡಬೇಕೆಂದು ಹೇಳಿದೆ. ಹತ್ತು ನಿಮಿಷಗಳಲ್ಲಿ ಪೊಲೀಸರು ಅಲ್ಲಿಗೆ ಬಂದರು. ಎಲ್ಲವೂ ಮುಗಿದು ಹೋಗಿತ್ತು.
ನನ್ನನ್ನು ಪರೀಕೆಗ್ಷಾಗಿ ಮೆಡಿಕಲ್ ಸೆಂಟರಿಗೆ ಕೊಂಡೊಯ್ಯಲಾಯಿತು. 20 ತಾಸುಗಳಲ್ಲಿ ನನಗೆ ತಿನ್ನಲು, ಕುಡಿಯಲು ಏನೂ ಸಿಕ್ಕಿರಲಿಲ್ಲ. ಶೌಚಾಲಯದ ಸೌಕರ್ಯಗಳೂ ಇರಲಿಲ್ಲ. ನಾನು ಕೇವಲ ಮೂರು ತಾಸು ಮಲಗಿದ್ದೆ. ನನ್ನ ದೇಹದಲ್ಲಿ ಜಜ್ಜುಗಾಯಗಳಿದ್ದವು, ನನ್ನ ಉಡುಪು ಕೆಸರಾಗಿತ್ತು, ನನ್ನ ಕೇಶ ಅಸ್ತವ್ಯಸ್ತವಾಗಿತ್ತು, ನನ್ನ ಮುಖ ಕೊಳೆಯಾಗಿಯೂ ಟೇಪ್ ಹಚ್ಚಿದ್ದ ಗುರುತುಗಳ ಕಾರಣ ವಿಕಾರವಾಗಿಯೂ ಕಾಣುತ್ತಿತ್ತು. ಆದರೆ ನನ್ನ ಗಂಡ ಬ್ರ್ಯಾಡ್, ನನ್ನ ತಾಯಿ ಗ್ಲೆಂಡ, ಮತ್ತು ನನ್ನನ್ನು ಸ್ವಾಗತಿಸಲು ನೆರೆದು ಬಂದಿದ್ದ ಇತರ ಪ್ರಿಯ ಸಂಬಂಧಿಗಳು ಮತ್ತು ಪ್ರಿಯರೊಂದಿಗೆ ಆದ ಪುನರ್ಮಿಲನವನ್ನು ಇದಾವುದೂ ಕೆಡಿಸಲಿಲ್ಲ. ಅವರ ಕಾಯುವ ಮತ್ತು ವ್ಯಾಕುಲದ ಉಗ್ರಪರೀಕ್ಷೆ ನನ್ನದಕ್ಕಿಂತ ಭಿನ್ನವಾಗಿತ್ತು, ಅದು ಪ್ರಾಯಶಃ ಹೆಚ್ಚು ಯಾತನೆಯದ್ದಾಗಿತ್ತು.
ಮೆಡಿಕಲ್ ಸೆಂಟರಿನಿಂದ ನಾನು ಪ್ರಶ್ನೆಗಳನ್ನು ಉತ್ತರಿಸಲು ಮತ್ತು ಹೇಳಿಕೆಗಳನ್ನು ಮಾಡಲು ಪೊಲೀಸ್ ಸೇಶ್ಟನಿಗೆ ಹೋದೆ. ಕೊಲಂಬಸ್ ಲೆಡರ್ಜ್-ಇನ್ಕ್ವಾಯರರ್, ಮೇ 25, 1991, ವರದಿಸಿದಂತೆ, ಈಗ ಹಿಡಿಯಲ್ಪಟ್ಟಿರುವ ಅಪಹರಣಗಾರನ ಮೇಲೆ, “ಕಳೆದ ವಾರಾಂತ್ಯದಲ್ಲಿ ಸಂಭವಿಸಿದ ಬಲಾತ್ಕಾರ ಸಂಭೋಗ ಮತ್ತು ಹೆಚ್ಚು ಗುರುತರವಾದ ಪುರುಷ ಮೈಥುನದ ದೋಷಾರೋಪಣೆಯನ್ನೂ ಹೊರಿಸಲಾಗುವುದು.” ಇದು ನನ್ನನ್ನು ಅಪಹರಣಕ್ಕೆ ತುಸು ಮೊದಲಾಗಿತ್ತು. ಈ ಪತ್ರಿಕಾ ಲೇಖನದಲ್ಲಿ ವರದಿಯಾಗಿದ್ದ ಇನ್ನೊಂದು ವಿಷಯವು ಸುದ್ದಿಯನ್ನು ಮುಚ್ಚಿಡಬೇಕೆಂಬ ಪೊಲೀಸ್ ಮುಖ್ಯಸ್ಥ ವೆದರಿಂಗ್ಟನ್ಅವರ ವಿನಂತಿಯ ವಿವರಣೆ: “ನಮಗೆ ಲೀಸಳ ಜೀವದ ವಿಷಯ ನಿಜವಾದ ಚಿಂತೆ ಇದೆ.” ಇದೆಲ್ಲ, ಯೆಹೋವನ ಮೇಲೆ ನಾನಿಟ್ಟ ಭರವಸೆ ನನ್ನನ್ನು ರಕ್ಷಿಸಿತೆಂದು ನನಗೆ ಇನ್ನೂ ಹೆಚ್ಚು ದೃಢವಾಯಿತು.
ನಾನು ನನ್ನ ಜೀವನದ ಅತ್ಯುತ್ತಮ ಬಿಸಿ ಸ್ನಾನಕ್ಕೆ, ಸುಖವಾದ ಪುನರಾರೋಗ್ಯದಾಯಕ ನಿದ್ರೆಗಾಗಿ ಮನೆಗೆ ಹೋದೆ. ನಾನು ಗಾಢವಾದ ನಿದ್ರೆಯೊಳಗೆ ಮಂದವಾಗಿ ಪ್ರವೇಶಿಸಿದಾಗ ಈ ಹೃದಯೋಲ್ಲಾಸದ ಯೋಚನೆ ನನಲ್ಲಿತ್ತು: ಮತ್ತಾಯ 6:13ರ ದಿನವಚನ ನನಗೆ ಇನ್ನೂ ದುಃಖಶಾಮಕವಾಗಿತ್ತು, ಮತ್ತು ಕೀರ್ತನೆ 146:7ಕ್ಕೆ ಹೊಂದಿಕೆಯಾಗಿ, ‘ಸೆರೆಯಲ್ಲಿರುವವರಿಗೆ ಬಿಡುಗಡೆಯಾಗುವ’ ಅನುಭವ ನನಗಾಗಿತ್ತು. —ಲೀಸ ಡ್ಯಾವನ್ಪೋರ್ಟ್ ಹೇಳಿರುವಂತೆ. (g91 11/22)
[ಅಧ್ಯಯನ ಪ್ರಶ್ನೆಗಳು]
[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರಣೆ]
“ನೀನು ನಿನ್ನ ಪ್ರಾರ್ಥನೆಯನ್ನು ಮೌನವಾಗಿ ಮಾಡುತ್ತಿರು. ನಾನು ಅದನ್ನು ಕೇಳಬಯಸುವುದಿಲ್ಲ”
[ಪುಟ 21ರಲ್ಲಿರುವ ಸಂಕ್ಷಿಪ್ತ ವಿವರಣೆ]
ಅವನು ಡಿಕ್ಕಿಯ ಬಾಗಿಲನ್ನು ತೆರೆದು, ಅದರೊಳಗೆ ನನ್ನನ್ನು ಹಾಕಿ, ಬಾಗಿಲು ಮುಚ್ಚಿ ಕಾರು ನಡೆಸಿಕೊಂಡು ಹೋದ
[ಪುಟ 22ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಾನು ನೆಲದಿಂದ ಮೇಲಕ್ಕೆ ಎಸೆಯಲ್ಪಡುತ್ತಿದ್ದೆ, ನನ್ನ ತಲೆ ಡಿಕ್ಕಿಯ ಬದಿಗಳಿಗೆ ಬಡಿಯುತ್ತಿತ್ತು
[ಪುಟ 23ರಲ್ಲಿರುವ ಸಂಕ್ಷಿಪ್ತ ವಿವರಣೆ]
ಎಲ್ಲವೂ ತೀರಿಹೋಗುತ್ತಿದ್ದರೆ ಎಂದು ಅಪೇಕ್ಷಿಸುತ್ತಾ ನಾನು ಡಿಕ್ಕಿಯಲ್ಲಿ ಹಾಗೆಯೇ ಬಿದ್ದುಕೊಂಡಿದ್ದೆ
[ಪುಟ 24ರಲ್ಲಿರುವ ಸಂಕ್ಷಿಪ್ತ ವಿವರಣೆ]
ಮೂರು ತಾಸುಗಳ ಬಳಿಕ ನನಗೆ ಮೂರ್ಛೆ ಬಂದಾಗ ನಾನು ಹುಲ್ಲಿನ ಮೇಲೆ ಕೆಸರಲ್ಲಿ ಮಲಗಿದ್ದೆ
[Picture of Lisa Davenport on page 20]