ವಿಕಾಸವೇ? ವಿನ್ಯಾಸವೇ?
ಆನೆ ಸೊಂಡಿಲು
● ರೋಬೋಟ್‌ಗಳನ್ನು ತಯಾರಿಸುತ್ತಿರುವ ಕಂಪೆನಿ ಹೆಚ್ಚಿನ ನೈಪುಣ್ಯದಿಂದ ಕೆಲಸಮಾಡುವ ಹಾಗೂ ಕೆಲಸಕ್ಕೆ ತಕ್ಕ ಹಾಗೆ ಹೊಂದಿಕೊಳ್ಳುವ ‘ರೋಬೋಟ್ ಕೈ’ ಅನ್ನು ವಿನ್ಯಾಸಿಸುತ್ತಿದೆ. ಈ ಹೊಸ ‘ಕೈ’ “ಈಗ ಲಭ್ಯವಿರುವ ಕೈಗಾರಿಕಾ ಯಂತ್ರಗಳನ್ನು ಮೀರಿಸಲಿದೆ” ಎಂದರು ಆ ಕಂಪೆನಿಯ ಮ್ಯಾನೇಜರರೊಬ್ಬರು. ಈ ಯಂತ್ರವನ್ನು ತಯಾರಿಸುವ ವಿಚಾರ ಹೊಳೆದದ್ದು ಹೇಗೆ? “ಆನೆ ಸೊಂಡಿಲಿನ ಸಾಮರ್ಥ್ಯ ನೋಡಿ” ಎನ್ನುತ್ತಾರವರು.
ಪರಿಗಣಿಸಿ: ಸುಮಾರು 140 ಕೆ.ಜಿ. ತೂಕದ ಸೊಂಡಿಲನ್ನು “ಈ ಗ್ರಹದಲ್ಲೇ ಬಹೂಪಯೋಗಿ ಅಂಗ” ಎಂದು ಕರೆಯಲಾಗಿದೆ. ಈ ಬಹೂಪಯೋಗಿ ಸಾಧನ ಮೂಗಿನಂತೆ, ಸ್ಟ್ರಾದಂತೆ, ತೋಳಿನಂತೆ, ಕೈಯಂತೆ ಕಾರ್ಯನಿರ್ವಹಿಸಬಲ್ಲದು. ಅದರಿಂದ ಆನೆ ಉಸಿರಾಡುತ್ತದೆ, ಮೂಸುತ್ತದೆ, ಕುಡಿಯುತ್ತದೆ, ಕೀಳುತ್ತದೆ, ಎತ್ತುತ್ತದೆ, ಹಿಡಿಯುತ್ತದೆ. ಕಿವಿಗಡಚಿಕ್ಕುವಂಥ ರೀತಿಯಲ್ಲಿ ಘೀಳಿಡುತ್ತದೆ ಸಹ!
ಅಷ್ಟುಮಾತ್ರವಲ್ಲ ಆನೆಯ ಸೊಂಡಿಲಿನಲ್ಲಿ 40,000 ಸ್ನಾಯುತಂತುಗಳಿವೆ. ಇದರಿಂದಾಗಿ ಆನೆ ತನ್ನ ಸೊಂಡಿಲನ್ನು ಹೇಗೆ ಬೇಕೊ ಹಾಗೆ ಆಡಿಸಬಲ್ಲದು. ಸೊಂಡಿಲಿನ ತುದಿಯಿಂದ ಒಂದು ಚಿಕ್ಕ ನಾಣ್ಯವನ್ನೂ ಹೆಕ್ಕಬಲ್ಲದು. ಹಾಗೆಯೇ ಸುಮಾರು 270 ಕೆ.ಜಿ. ಭಾರವನ್ನೂ ಎತ್ತಬಲ್ಲದು!
ಆನೆಯ ಸೊಂಡಿಲಿನ ರಚನೆ, ಸಾಮರ್ಥ್ಯಗಳನ್ನು ನಕಲುಮಾಡುವುದರಿಂದ ಗೃಹಪಯೋಗಕ್ಕೆ ಹಾಗೂ ಕೈಗಾರಿಕಾ ಬಳಕೆಗೆ ಶ್ರೇಷ್ಠ ಗುಣಮಟ್ಟದ ಕೈಗಳುಳ್ಳ ರೋಬೋಟ್‌ಗಳನ್ನು ತಯಾರಿಸಲು ಸಾಧ್ಯವಾಗುವುದೆಂಬ ಆಶಯ ಸಂಶೋಧಕರದ್ದು. “ಮಾನವರಿಗೆ ನೆರವಾಗುವಂಥ ಪೂರ್ತಿ ಹೊಸದಾದ ರೀತಿಯ ಯಂತ್ರವನ್ನು ತಯಾರಿಸುತ್ತಿದ್ದೇವೆ. ಇದರಿಂದಾಗಿ ಮನುಷ್ಯರೂ ಯಂತ್ರಗಳೂ ಒಟ್ಟಿಗೆ ದಕ್ಷತೆಯಿಂದ ಯಾವುದೇ ಅಪಾಯವಿಲ್ಲದೆ ಕೆಲಸಮಾಡಲು ಮೊತ್ತಮೊದಲ ಬಾರಿ ಸಾಧ್ಯವಾಗಲಿದೆ” ಎಂದು ಆರಂಭದಲ್ಲಿ ತಿಳಿಸಲಾದ ಕಂಪೆನಿಯ ಪ್ರತಿನಿಧಿಯೊಬ್ಬರು ಹೇಳಿದರು.
ನೀವೇನು ನೆನಸುತ್ತೀರಿ? ಆನೆಯ ಸೊಂಡಿಲು ವಿಕಾಸವಾಗಿ ಬಂತೇ? ಸೃಷ್ಟಿಕರ್ತನು ವಿನ್ಯಾಸಿಸಿದನೇ? (g12-E 04)