ಕರಾವಳಿಯ ಬೃಹತ್ ವೃಕ್ಷಗಳ ತಳಿ ಬೆಳೆಸುವುದು
ಎಚ್ಚರ!ದ ಕೆನಡದ ಸುದ್ದಿಗಾರರಿಂದ
ಎತ್ತರವಾಗಿ ಬೆಳೆದಿರುವ ವೃಕ್ಷಗಳ ತೋಪಿನಲ್ಲಿ ನಡೆದಾಡುವುದು ಒಬ್ಬನಿಗಾಗಬಲ್ಲ ಅತಿ ಮನಮುಟ್ಟುವ,—ಭಯಭಕ್ತಿಯನ್ನೂ ಹುಟ್ಟಿಸುವ—ಅನುಭವಗಳಲ್ಲಿ ಒಂದು. ಬೆಳಕು ಮತ್ತು ಬಣ್ಣಗಳ ಹೊನಲನ್ನು ನೋಡುವುದು, ತಂಪಾದ, ಚೈತನ್ಯದಾಯಕ ಗಾಳಿಯ ಸೇವನೆ, ಮತ್ತು ನಿಶ್ಶಬ್ದತೆ ಮತ್ತು ಶಾಂತಿಯನ್ನು ಅನುಭವಿಸುವುದು ನಿಶ್ಚಯವಾಗಿಯೂ ಸ್ಫೂರ್ತಿದಾಯಕ.
ಉತ್ತರ ಅಮೆರಿಕದ ವಾಯುವ್ಯ ಶಾಂತ ಸಾಗರ ಪ್ರದೇಶ ಅದರ ವಿಶಾಲವಾದ ಕಾಡುಗಳಿಗೆ ಸುಪ್ರಸಿದ್ಧ. ಪರ್ವತ, ಕಣಿವೆ ಮತ್ತು ಕಾಲುಹೊಳೆಗಳು ಕರಾವಳಿಯ ಪ್ರಸಿದ್ಧ ಬೃಹತ್ ವೃಕ್ಷಗಳ—ಕಾಯಿ ಬಿಡುವ ಮೃದು ಮರಗಳ— ಸಮೃದ್ಧ ಬೆಳೆಯಿಂದ ತುಂಬಿದೆ. ಹೆಮ್ಲಾಕ್, ಗುಗಲ್ಗ ಮರ, ಪೈನ್, ದೇವದಾರು, ಸ್ಪೂಸ್ರ್, ಮತ್ತು ಶಂಕು ಫಲಿ—ಇವೆಲ್ಲ ಇಲ್ಲಿ ಎತ್ತರವಾಗಿ ಬೆಳೆಯುತ್ತವೆ. ಪ್ರಸಿದ್ಧವಾದ ಡಗ್ಲಸ್ ಶಂಕು ಮರ 300 ಅಡಿ ಎತ್ತರವಾಗಿಯೂ ಬೆಳೆಯಬಲ್ಲದು.
ಆದರೆ, ಶೋಭಾಯಮಾನವಾಗಿರುವುದಕ್ಕಿಂತಲೂ ಎಷ್ಟೋ ಹೆಚ್ಚು ವಿಷಯಗಳು ಈ ಮರಗಳಲ್ಲಿವೆ. ಇವು ಮರ ಕಡಿಯುವವರ, ಟ್ರಕ್ ಚಾಲಕರ, ರಸ್ತೆ ಮಾಡುವವರ, ಮರ ಕೊಯ್ಯುವ ಕಾರ್ಮಿಕರ, ಎಳೆದೋಣಿ ಚಾಲಕರ, ಮತಿತ್ತರರ ಜೀವನೋಪಾಯಕ್ಕೆ ಪ್ರಾಮುಖ್ಯ. ಮತ್ತು ಬಳಕೆದಾರರನ್ನು ತೃಪ್ತಿಪಡಿಸುವ ಸಾವಿರಾರು ತಯಾರಿಸಿದ ವಸ್ತುಗಳಿಗೆ ಬೇಕಾಗುವ ಕಚ್ಚಾ ಪದಾರ್ಥವನ್ನು ಈ ಮರಗಳಿಂದ ಉತ್ಪಾದಿಸಲಾಗುತ್ತದೆ. ಮರಗಳು ಎಷ್ಟು ಪ್ರಾಮುಖ್ಯವೆಂದರೆ ವಿಜ್ಞಾನಿಗಳು ಮತ್ತು ಅರಣ್ಯ ನಿರ್ವಾಹಕರು ಅವುಗಳ ಬೆಳವಣಿಗೆಯ ವೇಗ ಹೆಚ್ಚಿಸುವ ವಿಧಗಳನ್ನು ಕಂಡುಹಿಡಿಯಲು ಮತ್ತು ಅರಣ್ಯದ ಉತ್ಪಾದನೆಯನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಮಾಡಲಿಕ್ಕಾಗಿ, ಅವರು ಮರಗಳ ತಳಿ ಬೆಳೆಸುವ ವಿಜ್ಞಾನ ಮತ್ತು ಕಲೆಗೆ ತಿರುಗಿದ್ದಾರೆ.
ಮರಗಳ ತಳಿ ಬೆಳೆಸುವುದೇಕೆ?
ಒಂದು ಕಾಡಿನಲ್ಲಿರುವ ಮರಗಳು, ಜನಸ್ತೋಮದಲ್ಲಿರುವ ಮುಖಗಳಂತೆ ವಿಭಿನ್ನವಾಗಿವೆ. ಎತ್ತರ, ಎಲೆಗುಂಪಲು, ಮತ್ತು ಕೊಂಬೆಗಳಲ್ಲಿ ಪ್ರತಿಯೊಂದು ಮರ ಇನ್ನೊಂದಕ್ಕಿಂತ ತುಸು ವಿಭಿನ್ನ. ಮತ್ತು ನೀವು ನೋಡಲಾಗದ ವಿಧಗಳಲ್ಲಿಯೂ ಅದು ವಿಭಿನ್ನವಾಗಿರಬಹುದು.
ಕೆಲವು ಮರಗಳು ಬೇರೆ ಕೆಲವು ಮರಗಳಿಗಿಂತ ಹೆಚ್ಚು ವೇಗವಾಗಿ ಬೆಳೆಯುತ್ತವೆ. ಕೆಲವು ಮರಗಳು ಇನ್ನು ಕೆಲವು ಮರಗಳಿಗಿಂತ ಹೆಚ್ಚು ಶಕ್ತಿ, ಸಾಂದ್ರತೆ, ಮತ್ತು ವೈಶದ್ಯ (ಗಂಟಿಲ್ಲದ) ಉಳ್ಳವುಗಳಾಗಿರುತ್ತವೆ. ಮತ್ತು ಕೆಲವು, ಕೀಟ ಮತ್ತು ರೋಗ ಸೋಂಕಿಗೆ ಹೆಚ್ಚು ನಿರೋಧಕವಾಗಿವೆ. ಅರಣ್ಯ ಉದ್ಯಮಕ್ಕೆ ಈ ಎಲ್ಲ ವಿಷಯಗಳು ತೀರಾ ಪ್ರಾಮುಖ್ಯ.
ಅರಣ್ಯ ನಿರ್ವಾಹಕರಿಗೆ ವೇಗವಾಗಿ ಬೆಳೆಯುವ, ರೋಗ ನಿರೋಧಕ, ಮತ್ತು ಶ್ರೇಷ್ಠ ಗುಣಮಟ್ಟದ ಮರವನ್ನೊದಗಿಸುವ ಮರಗಳು ಬೇಕಾಗುವುದು ಸ್ವಾಭಾವಿಕ. ಮತ್ತು ಕಡಿಯುವ, ರವಾನಿಸುವ, ಮತ್ತು ಕೊಯ್ಯುವ ಸೌಲಭ್ಯದ ಕಾರಣ ಹೆಚ್ಚು ಕಡಮೆ ಒಂದೇ ಗಾತ್ರದ ಮರಗಳು ಅತಿ ಅಪೇಕ್ಷಣೀಯ. ಆದರೆ ಇದಕ್ಕೆ ಯೋಗ್ಯತೆಯಿರುವ ಮರಗಳು—ಮೊದಲನೆಯ ಮರ ಕಡಿಯುವವರು 19ನೆಯ ಶತಮಾನದ ಮಧ್ಯಭಾಗದಲ್ಲಿ ಬಂದಾಗ ಇಲ್ಲಿ ಬೆಳೆದಿದ್ದ ಹಳೆಯ ಮರಗಳು—ಆಗಲೆ ಕಡಿಯಲ್ಪಟ್ಟಿವೆ. ಇಂದು ಕಡಿಯಲ್ಪಡುತ್ತಿರುವ ಎರಡನೆಯದಾಗಿ ಬೆಳೆದಿರುವ ಮರಗಳು ಸಣ್ಣ ಗಾತ್ರದವುಗಳೂ ಹೆಚ್ಚು ನಿಧಾನವಾಗಿ ಬೆಳೆಯುವಂಥವುಗಳೂ ಮರದ ಪ್ರಮಾಣ ಕಮ್ಮಿ ಇರುವುವುಗಳೂ ಸಮತೆಯಿಲ್ಲದ ಗುಣಮಟ್ಟದವುಗಳೂ ಆಗಿವೆ. ಅಪೇಕ್ಷಣೀಯ ಲಕ್ಷಣಗಳಿರುವ ಮರಗಳನ್ನು ಉತ್ಪಾದಿಸುವುದು ಮರದ ತಳಿ ಬೆಳೆಸುವವನ ಕೆಲಸ. ಇದು ಈಗ ವಾಯುವ್ಯ ಶಾಂತಸಾಗರ ಪ್ರದೇಶದಲ್ಲಿ ನಡೆಯುತ್ತಿರುವ ವೃಕ್ಷಾಭಿವೃದ್ಧಿ ಕಾರ್ಯಕ್ರಮಗಳಿಗೆ ನಡೆಸಿದೆ.
ಅದು ಮಾಡಲ್ಪಡುವ ವಿಧ
ಮರದ ತಳಿ ಬೆಳೆಸುವಿಕೆ ಆಯ್ಕೆಯಿಂದ ಪ್ರಾರಂಭವಾಗುತ್ತದೆ. ಪುನರರಣ್ಯೀಕರಣ ಯೋಜಿಸಲ್ಪಡುವ ಕ್ಷೇತ್ರದಲ್ಲಿ ಪ್ರಯೋಗಜ್ಞರ ಒಂದು ತಂಡವು ಮರಗಳ ಗುಂಪುಗಳ ಮಧ್ಯೆ ಪ್ಲಸ್ ಮರ—ತಳಿ ಬೆಳೆಸಲು ಅತಿ ಹೆಚ್ಚು ತಳಿಶಾಸ್ತ್ರೀಯ ಸಾಮರ್ಥ್ಯವಿದೆಯೆಂದು ಕಂಡು ಬರುವ—ಮರಗಳನ್ನು ಅನ್ವೇಷಿಸುತ್ತಾ ಹೋಗುತ್ತದೆ.
ಈ ಮರ ಗುಂಪುಗಳ ಆನ್ವೇಷಣೆಯು, ಅರಣ್ಯದಲ್ಲಿ ಹಾಯಾದ ಒಂದು ವಾಹನ ಪ್ರಯಾಣವೆಂಬಂತೆ ಕೇಳಿ ಬರುವುದಾದರೆ, ಹೆಚ್ಚೆಂದರೆ ಅದು ಅರ್ಧ ಸತ್ಯವೇ ಸರಿ. ಇದೊಂದು ಪ್ರಯಾಸಕರವಾದ ಆನ್ವೇಷಣೆ. ಪ್ರತಿಯೊಂದು ಭಾವೀ ಪ್ಲಸ್ ಮರವು ಒಂದು ಲಕ್ಷಣ ಪರೀಕ್ಷಾ ಪಟ್ಟಿ—ಉತ್ತಮ ಕಾಯಿ ಉತ್ಪಾದನೆ, ನೆಟ್ಟಗಾಗಿರುವ ಕಾಂಡ, ರೋಗದ ಇಲ್ಲಮೆ, ಇತ್ಯಾದಿ—ಗೆ ಹೊಂದಿಕೆಯಾಗಿರಬೇಕು. ಆದರೆ ಈ ಕೆಲಸದಲ್ಲಿ ತೋರಿಕೆಗಳು ದಾರಿ ತಪ್ಪಿಸಬಲ್ಲವು. ಆ ಭವ್ಯವೂ ಆರೋಗ್ಯಕರವೂ ಆದ 40 ಮೀಟರ್ ಎತ್ತರದ ಫರ್ ಮರ ಎತ್ತರವಿರಬಹುದು ನಿಜ, ಆದರೆ ಅದು ಹೆಚ್ಚು ವೇಗವಾಗಿ ಬೆಳೆದಿದೆಯೆ ಯಾ ಅದು ಕೇವಲ ಹೆಚ್ಚು ವಯಸ್ಸಾಗಿರುವ ವೃಕ್ಷವೆ? ಅದಕ್ಕೆ ಹೆಚ್ಚು ಉತ್ತಮವಾದ ನೆಲೆ ಯಾ ನೀರ್ಗಾಲುವೆ ಇದೆಯೆ ಯಾ ಅದರ ಗಾತ್ರ ನಿಜವಾಗಿಯೂ ಅದರ ಅನುವಂಶೀಯತೆಯ ಶ್ರೇಷ್ಠತೆಯ ಕಾರಣವೆ?
ಇಂಥ ತೃಪ್ತಿಕರವಾದ ಒಂದು ನಮೂನೆ ದೊರೆತಾಗ, ಅದಕ್ಕೆ ಲೋಹಕಟ್ಟು ಬಿಗಿದು ಅದನ್ನು ಅಂಕಿಸಲಾಗುತ್ತದೆ. ಆದರೆ, ಅದು ಇತರ ಶ್ರೇಷ್ಠ ಮರಗಳ ತಳಿ ಬೆಳೆಸುವಂತೆ ಮಾಡುವುದು ಹೇಗೆ ಸಾಧ್ಯ? ಅದನ್ನು ಬೇರುಸಹಿತ ಕಿತ್ತು ಇನ್ನೊಂದು ಕಡೆಯಲ್ಲಿ ಪುನಃ ನೆಡುವುದರಿಂದ ಯಾವ ಲಾಭವೂ ಇಲ್ಲ. ಅದರ ಬೀಜಗಳನ್ನು ತೆಗೆದು ಬಿತ್ತುವುದರಿಂದಲೂ ಪ್ರಯೋಜನವಿಲ್ಲ. ಏಕೆಂದರೆ ಸುತ್ತುಮತ್ತಲಲ್ಲಿರುವ ಮರಗಳಲ್ಲಿ ಯಾವುದು ಈ ಬೀಜಗಳಿಗೆ ಪರಾಗಾಧಾನ ಮಾಡಿದೆಯೆಂದೂ, ಹೀಗೆ ಅವುಗಳನ್ನು ತಳಿಶಾಸ್ತ್ರೀಯವಾಗಿ ಅಶುದ್ಧವಾಗಿಸಿದೆಯೆಂದೂ ತಿಳಿಯುವ ಮಾರ್ಗವೇ ಇಲ್ಲ. ಇದಕ್ಕೆ ಬೇಕಾಗಿರುವುದು ಮರದಿಂದ ಕತ್ತರಿಸಿದ ಒಂದು ರೆಂಬೆಯೆ. ಆದರೂ ಇದನ್ನು ಪಡೆಯುವುದು ಹೇಗೆ?
ಆ ಮರದ ಅತಿ ಕೆಳಭಾಗದ ಕೊಂಬೆಯೂ ನೆಲದಿಂದ ಎಷ್ಟೋ ಎತ್ತರದಲ್ಲಿದೆ. ಆದುದರಿಂದ ಒಬ್ಬ ಒಳ್ಳೆಯ ಗುರಿಯಿರುವ ಬಂದೂಕುಗಾರನು ತನ್ನ ರೈಫಲನ್ನೆತ್ತಿ ಗುಂಡು ಹೊಡೆಯುತ್ತಾನೆ. ಆಗ ಒಂದು ಆರೋಗ್ಯಕರವಾದ ಕೊಂಬೆಯ ತುದಿ ಕೆಳಗೆ ತೇಲಿಕೊಂಡು ಬರುತ್ತದೆ. ಈ ಕತ್ತರಿಸಿದ ಸೈಅನ್ ಎಂದು ಕರೆಯಲ್ಪಡುವ ಕಸಿಕೊಂಬೆಯನ್ನು ತೆಗೆದು ಆ ಬಳಿಕ ಬೀಜದ ತೋಟದಲ್ಲಿರುವ ಒಂದು ಎಳೆಯ ಮರದ ಬೇರುಕಾಂಡಕ್ಕೆ ಕಸಿಕಟ್ಟಲಾಗುತ್ತದೆ. ಅಲ್ಲಿ ಈ ಕಸಿಕಟ್ಟಿದ ಸೈಅನ್ ಅದರ ಮೂಲ ಮರದ ತಳಿಶಾಸ್ತ್ರೀಯ ಪ್ರತಿರೂಪವಾಗಿ—ಅಬೀಜ ಸಂತಾನವಾಗಿ—ಬೆಳೆಯುವುದು.
ಆ ಬೀಜ ತೋಟದ ನಿವೇಶನವನ್ನು, ಕಸಿಕಟ್ಟಿದ ಅಬೀಜ ಸಂತಾನಗಳು ಕಾಡಿನ ಮರಗಳಿಂದ ಪರಾಗಾಧಾನ ಮಾಡಿಕೊಳ್ಳದಂತೆ, ಜಾಗರೂಕತೆಯಿಂದ ಆರಿಸಲಾಗುತ್ತದೆ. ಈ ಅಬೀಜ ಸಂತಾನಗಳು ಬಲಿತವುಗಳಾಗುವಾಗ, ಗಾಳಿಯಲ್ಲಿರುವ ಪರಾಗದಿಂದ ಕಾಗದದ ಲಕೋಟೆಗಳ ಮೂಲಕ ರಕ್ಷಿಸಲ್ಪಟ್ಟಿರುವ ಅದರ ಹೂವಿನ ಅಂಡಗಳಿಗೆ ಒಂದು ಚುಚ್ಚು ಮದ್ದಿನ ಸೂಜಿಯ ಮೂಲಕ ಕೃತಕವಾಗಿ ಪರಾಗಾಧಾನ ಮಾಡಲ್ಪಡುತ್ತದೆ. ಇದರ ಪರಿಣಾಮವಾಗಿ ಬರುವ ಬೀಜಗಳಿಂದ ಬೀಜಾಂಕುರಗಳ, ಯಾ ಎಳೆಯ ಸಸಿಗಳ ಒಂದು ಹೊಸ ಸಂತತಿ ಎದ್ದು ಬರುತ್ತದೆ. ಪ್ಲಸ್ ಮರದ ಮೂಲ, ಅದರ ಪರಾಗದ ಮೂಲ ಮತ್ತು ಇತರ ಅನೇಕ ಮಾಹಿತಿಗಳು ಕಂಡುಹಿಡಿಯಲ್ಪಡುವಂತೆ, ಈ ಕಾರ್ಯವಿಧಾನದ ಪ್ರತಿಯೊಂದು ಹೆಜ್ಜೆಯ, ಮತ್ತು ಪ್ರತಿ ಬೀಜಾಂಕುರದ ಸವಿವರವಾದ ಮಾಹಿತಿಯು ಇಡಲ್ಪಡಬೇಕು.
ಆ ಬಳಿಕ ಈ ಬೀಜಾಂಕುರಗಳು, ಪ್ಲಸ್ ಮರದ ಸಮೀಪದ ಒಂದು ನಿವೇಶನಕ್ಕೆ ಕೊಂಡು ಹೋಗಿ, ಅವು ಹೇಗೆ ಬೆಳೆಯುತ್ತವೆಂದು ನೋಡಲಿಕ್ಕಾಗಿ ನೆಡಲ್ಪಡುತ್ತವೆ. ಮಾನವ ಸಂತಾನದಂತೆಯೇ, ಈ ಮರಗಳು ತಮಗೆ ಹುಟ್ಟು ಕೊಟ್ಟವುಗಳನ್ನು ಹಿತಕರವಾಗಿ ಯಾ ಅಹಿತಕರವಾಗಿ ಪ್ರತಿಬಿಂಬಿಸಬಹುದು. ಅವು ಉತ್ತಮವಾಗಿ ಬೆಳೆಯುವಲ್ಲಿ, ಅವುಗಳ ಸೈಅನ್ ಕಸಿಕೊಂಬೆಗಳು ಎರಡನೆಯ ಸಂತತಿಯ ಬೀಜ ತೋಟಕ್ಕೆ ಆಸ್ತಿವಾರವನ್ನು ಕಲ್ಪಿಸಬಹುದು. ಈ ಕಸಿಕೊಂಬೆಗಳಿಂದ ಬರುವ ಬೀಜಗಳನ್ನು ಒಂದು ಗ್ರ್ಯಾಮ್ಗೆ ಸುಮಾರು 18 ರೂಪಾಯಿಗಳಿಗೆ ಮಾರಬಹುದು. ಆದರೆ ಅವು ನ್ಯೂನವಾಗಿ ಬೆಳೆಯುವಲ್ಲಿ, ಅವುಗಳನ್ನು ಹುಟ್ಟಿಸಿದ ಅಬೀಜ ಸಂತಾನವನ್ನು ತೋಟದಿಂದ ಕಿತ್ತೊಗೆದು, ಯಾವ ಪ್ಲಸ್ ಮರಗಳಿಂದ ಅವು ಬಂದಿವೆಯೋ ಅವನ್ನು ಕಾರ್ಯಕ್ರಮದಿಂದ ರದ್ದುಗೊಳಿಸಲಾಗುವುದು. ಈಗ ಹೊಸ ಪ್ಲಸ್ ಮರಗಳು ಕಂಡುಹಿಡಿಯಲ್ಪಡಬೇಕು, ಮತ್ತು ಈ ಪ್ರಯಾಸಕರವಾದ ಕಾರ್ಯವಿಧಾನ ಪುನಃ ತೊಡಗಬೇಕು.
ಇದಕ್ಕೆಲ್ಲ ತುಂಬಾ ಸಮಯ ಹಿಡಿಯುತ್ತದೆ. ಮರಗಳ ತಳಿ ಬೆಳೆಸುವವನು ತನ್ನ ಕೆಲಸದಿಂದ ಒಂದೇ ಒಂದು ಪೂರ್ಣ ಬೆಳೆದಿರುವ ಸಂತತಿಯು ಸಹ ಫಲಿಸುತ್ತದೆಂದು ನಿರೀಕ್ಷಿಸದೆ ಇರಬಹುದು. ಒಂದು ಬೀಜದ ತೋಟಕ್ಕೆ ಉಪಯೋಗಿಸಬಹುದಾದ ಪರಿಮಾಣದಲ್ಲಿ ಬೀಜಗಳನ್ನು ಉತ್ಪಾದಿಸಲು ಹತ್ತು ವರ್ಷಗಳಷ್ಟು ಸಮಯ ಹಿಡಿಯುತ್ತದೆ. ಆ ತೋಟದ ಮರಗಳ ಸಂತಾನವನ್ನು ಪರೀಕ್ಷಿಸಲು ಇನ್ನು ಹತ್ತು ವರ್ಷಗಳು ಬೇಕು. ಅಂತಿಮವಾಗಿ, ಆ ಮರಗಳು ಕಡಿಯಲು ಯೋಗ್ಯವಾಗುವ ಗಾತ್ರಕ್ಕೆ ಮುಟ್ಟಲು ಇನ್ನು 50ರಿಂದ 60 ವರ್ಷಗಳು ಹಿಡಿಯುತ್ತವೆ.
ಅಪಾಯಗಳಿವೆ
ಈ ಮೊದಲು ಗಮನಿಸಿರುವಂತೆ, ಕಸಿಕೊಂಬೆಗಳು ನ್ಯೂನವಾಗಿ ಬೆಳೆಯುವಲ್ಲಿ, ಅನೇಕ ವರ್ಷಗಳ ಕೆಲಸವು ನಷ್ಟವಾಗಿ ಹೋಗಬಲ್ಲದು. ಹೀಗೆ, ಅತಿ ಉತ್ಕೃಷ್ಟವಾದ ಹಾಗೂ ಪ್ಲಸ್ ಮರಗಳೆಂದು ರುಜುವಾಗಿರುವ ಕೇವಲ ಕೆಲವೇ ಸಂಖ್ಯೆಯ ಮರಗಳಲ್ಲಿ ಮಾತ್ರ ಪ್ರಯೋಗ ನಡೆಸುವ ಶೋಧನೆ ದೊಡ್ಡದಾಗಿರುತ್ತದೆ. ಆದರೆ ಇದನ್ನು ಮಾಡುವುದರಲ್ಲಿ ಅಪಾಯಗಳಿವೆ. ಅವು ಯಾವುವು?
ಪ್ರತಿಯೊಂದು ಮರ, ಪ್ರತಿಯೊಬ್ಬ ವ್ಯಕ್ತಿಯಂತೆ (ಸಾಮ್ಯ ಅವಳಿ ಯಾ ತ್ರಿವಳಿ ಮಕ್ಕಳನ್ನು ಬಿಟ್ಟು) ತಳಿಶಾಸ್ತ್ರೀಯವಾಗಿ ಅನನ್ಯ—ನಿದರ್ಶನ ಜಾತಿ—ವಾಗಿದೆ. ಒಬ್ಬ ಮರ ಬೆಳೆಸುವವನ ತಳಿ ಸಂಗ್ರಹದಲ್ಲಿ ನಿದರ್ಶನ ಜಾತಿಗಳು ಎಷ್ಟು ಕಡಮೆಯೊ, ಆ ಸಂಗ್ರಹದಲ್ಲಿ ವಿಭಿನ್ನ ವಂಶವಾಹಿಗಳು ಎಷ್ಟು ಕಡಮೆಯೊ, ಅಷ್ಟು ಜಾಸ್ತಿಯಾಗಿ ಮರಗಳ ಒಂದು ಪೂರ್ತಿ ಸಂತಾನವನ್ನು, ಇಡೀ ಕಾಡನ್ನು ಸಹ, ಯಾವುದೋ ಒಂದು ರೋಗ ಯಾ ವಿನಾಶಕ ಕೀಟವು ನಿರ್ನಾಮ ಮಾಡುವ ಅಪಾಯವಿದೆ.
ಆದುದರಿಂದ, ಬಳಸಲ್ಪಡುವ ಕೆಲವು ಪ್ಲಸ್ ಮರಗಳು ಎಣಿಸುವಷ್ಟು ಬೇಗನೆ ಬೆಳೆಯದಿದ್ದರೂ ಇಲ್ಲವೆ ಅಷ್ಟು ನೆಟ್ಟಗಿಲ್ಲದಿದ್ದರೂ ಒಂದು ಹೆಚ್ಚು ದೊಡ್ಡ ವಂಶವಾಹಿ ಸಂಗ್ರಹವನ್ನು ಇಟ್ಟುಕೊಳ್ಳುವುದು ವಿವೇಕಪ್ರದ. ಅನೇಕಾನೇಕ ಪ್ಲಸ್ ಮರಗಳನ್ನು ಬಳಸುವುದು ಸಂಪೂರ್ಣ ನಾಶದ ಅಪಾಯವನ್ನು ಕಡಮೆ ಮಾಡುತ್ತದೆ.
ಮರದ ತಳಿಬೆಳೆಯ ಭವಿಷ್ಯ
ಇಂದು ಮಾಡುತ್ತಿರುವ ಮರಗಳ ತಳಿಬೆಳೆಯ ಪರಿಣಾಮವು ದೊರೆಯಲು ಇನ್ನೂ ಐವತ್ತು ವರ್ಷಗಳು ಹಿಡಿಯಬಹುದಾದರೂ, ಇದರಲ್ಲಿರುವ ಲಾಭವೇನಂದರೆ, ಈ ಅಭಿವೃದ್ಧಿಗೊಳಿಸಲ್ಪಟ್ಟ ಬೀಜಗಳಿಂದ ನೆಡಲ್ಪಟ್ಟ ಕಾಡುಗಳು ಸಾಮಾನ್ಯ ಬೀಜಗಳಿಂದ ನೆಡಲ್ಪಟ್ಟ ಕಾಡುಗಳಿಗಿಂತ 10ರಿಂದ 20 ಪ್ರತಿಶತ ಕಡಮೆ ಸಮಯದಲ್ಲಿ ಮಾರಲ್ಪಡಬಲ್ಲವು. ಮತ್ತು ಕೆಲವು ನಿಪುಣರು ಮುಂತಿಳಿಸುವುದೇನಂದರೆ ಮರಗಳ ತಳಿ ಬೆಳೆಸುವಿಕೆಯು ಒಂದು ನಿರ್ದಿಷ್ಟ ಜಮೀನಿನಲ್ಲಿ ಕಡಿಯಲ್ಪಡುವ ಮರಗಳ ಗಾತ್ರವನ್ನು 25 ಪ್ರತಿಶತದ ತನಕವೂ ಹೆಚ್ಚಿಸಬಲ್ಲದು. ಈ ಪ್ರಯೋಜನ, ರೋಗ ಮತ್ತು ವಿನಾಶಕ ಕೀಟಗಳ ಹೆಚ್ಚು ಉತ್ತಮ ರೀತಿಯ ತಡೆಯುವಿಕೆ, ಹೆಚ್ಚು ಶಕ್ತಿಯ ಮತ್ತು ನಿರ್ಮಲವಾದ ಮರ, ಹೆಚ್ಚು ಉತ್ತಮವಾದ ಬೀಜ ಉತ್ಪಾದನೆಗಳೊಂದಿಗೆ, ಮರಗಳ ತಳಿ ಬೆಳೆಸುವಿಕೆಯನ್ನು ವಾಯುವ್ಯ ಶಾಂತ ಸಾಗರ ಪ್ರದೇಶದಲ್ಲಿ ಅರಣ್ಯ ನಿರ್ವಹಣೆಯ ಮಹತ್ವದ ಭಾಗವಾಗಿ ಮಾಡುತ್ತದೆ.
ಸಮಯವೇ ಮರದ ತಳಿ ಬೆಳೆಸುವವರ ಶತ್ರುವಾಗಿ ನಿಂತಿದೆ. ಫಲಿತಾಂಶವನ್ನು ನೋಡಲು, ನಿರ್ಣಯಗಳನ್ನು ಮಾಡಲು ಮತ್ತು ಮುಂದಿನ ಹೆಜ್ಜೆಯಿಟ್ಟು ಮುನ್ನಡೆಯಲು ಹಿಡಿಯುವ ಕಾಲ ತೀರಾ ದೀರ್ಘ. ಮರಗಳು, ಅದರಲ್ಲೂ ಶಂಕುವಿನಾಕಾರದ ಮರಗಳು ಯಾವಾಗಲೂ ನಮಗಿಂತ ಜಾಸ್ತಿ ಕಾಲ ಬದುಕಿವೆ. ಆದರೆ ವಿಷಯವು ಹೀಗಿರದ ಮುಂದಿರುವ ಒಂದು ಸಮಯಕ್ಕೆ ಬೈಬಲು ಕೈ ತೋರಿಸುತ್ತದೆ. “ನನ್ನ ಜನರ ಆಯುಸ್ಸು ವೃಕ್ಷದ ಆಯುಸ್ಸಿನಂತಿರುವದು,” ಎಂದು ಅದು ವಚನ ಕೊಡುತ್ತದೆ. ವಾಸ್ತವವಾಗಿ, ತನ್ನ ಜನರು ಸದಾ ಜೀವಿಸುವರೆಂದು ದೇವರು ವಾಗ್ದಾನಿಸುತ್ತಾನೆ. (ಯೆಶಾಯ 65:22; ಪ್ರಕಟನೆ 21:3, 4) ಆಗ ಮಾನವರಿಗೆ, ಸಸ್ಯ ಮತ್ತು ಪ್ರಾಣಿಗಳಲ್ಲಿ ಅಡಗಿರುವ ಮನಮೋಹಕವಾದ ತಳಿಶಾಸ್ತ್ರೀಯ ಸಾಮರ್ಥ್ಯವನ್ನು ಅನ್ವೇಷಿಸಲು ಸಮಯವಿರುವುದು. (g92 10/22)
[ಪುಟ 16 ರಲ್ಲಿರುವ ಚಿತ್ರಗಳು]
ಗುಂಡಿಕ್ಕಿ ಒಂದು ಮರದಿಂದ ರೆಂಬೆಯ ತುದಿಯನ್ನು ಕೆಳತರುವುದು