ನಮ್ಮ ಮಾರ್ಪಡುತ್ತಿರುವ ಜಗತ್ತು ಭವಿಷ್ಯತ್ತು ನಿಜವಾಗಿಯೂ ಏನು ಕಾದಿರಿಸಿದೆ?
ನಮ್ಮ ಜಗತ್ತು ಉತ್ತಮಗೊಳ್ಳಬೇಕಾದರೆ ನಮಗಿರುವ ಆಯ್ಕೆಗಳಾವುವು? ಲೋಕದ ಪ್ರಭುಗಳು ಮತ್ತು ನಾಯಕರು ಕ್ರಮೇಣ ಪರಹಿತಚಿಂತಕರಾಗಿ ಮಾನವರನ್ನು ಪರಸ್ಪರ ಸಹನೆ, ಒಮ್ಮನಸ್ಸು, ಮತ್ತು ಶಾಂತಿಗೆ ನಡೆಸುವರೆಂದು ನಂಬುವುದು ಒಂದು ಆಯ್ಕೆ.
ಇದರ ಅರ್ಥವು ಬಣ ಪದ್ಧತಿ ಮತ್ತು ರಾಷ್ಟ್ರೀಯತೆ ತೆಗೆದು ಹಾಕಲ್ಪಟ್ಟು, ಜಗತ್ತಿಗೆ ಸಾಮರಸ್ಯವನ್ನು ತರಬಲ್ಲ ರಾಷ್ಟ್ರಾತೀತ ಭಾವನೆ ಭರ್ತಿಯಾಗುತ್ತದೆ ಎಂದು ನಂಬುವುದೆಂದು ಅರ್ಥ.
ಭಾರಿ ನಿರುದ್ಯೋಗ, ಬಿಡಾರರಾಹಿತ್ಯ, ಮತ್ತು ರೋಗ ಚಿಕಿತ್ಸೆಗೆ ಭಾರಿ ವೆಚ್ಚ ತಗಲುವ ಲೋಕದಲ್ಲಿ, ಬಂಡವಾಳಶಾಹಿ ಆರ್ಥಿಕ ಪದ್ಧತಿಯ ನಾಯಕರು, ಲಾಭದ ಉದ್ದೇಶವೊಂದೇ ಅಯೋಗ್ಯ ನೀತಿಯೆಂದು ಒಪ್ಪಿಕೊಳ್ಳುವರು ಎಂದು ನಂಬುವುದೆಂದೂ ಇದರ ಅರ್ಥ.
ಇದಲ್ಲದೆ, ಲೋಕದ ಎಲ್ಲ ಶಸ್ತ್ರ ತಯಾರಕರು ಲೋಕಶಾಂತಿಯನ್ನು ಹಾತೊರೆಯಲಾರಂಭಿಸಿ ತಮ್ಮ ಖಡ್ಗಗಳನ್ನು ಗುಳಗಳನ್ನಾಗಿ ಬಡಿಯುವರು ಎಂದು ನಂಬುವುದೆಂದೂ ಇದರ ಅರ್ಥ.
ಅಲ್ಲದೆ, ಮಾಫೀಯದ ಮುಖ್ಯಸ್ಥರು, ಪ್ರಾಚ್ಯ ಪಾತಕ ತಂಡಗಳ ಧಣಿಗಳು, ಮತ್ತು ದಕ್ಷಿಣ ಅಮೆರಿಕದ ಮಾದಕ ಪದಾರ್ಥ ವ್ಯಾಪಾರದ ಯಜಮಾನರು ಪಶ್ಚಾತ್ತಾಪಪಟ್ಟು, ಉತ್ತಮವಾಗಿ ವರ್ತಿಸಲು ತೊಡಗುವರೆಂದೂ ಇದರ ಅರ್ಥ!
ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಮಾನವ ನಿರ್ಮಿತ ಆದರ್ಶ ರಾಜ್ಯ—ಒಂದು ಅಸಾಧ್ಯವಾದ ಸ್ವಪ್ನ—ವೊಂದರಲ್ಲಿ ನಂಬುವುದೆಂದು ಇದರ ಅರ್ಥ. ಇದೆಲ್ಲ ದೇವರ ಸಹಾಯವಿಲ್ಲದೆ ನಡೆಯಬಹುದೆಂದು ನಾವು ಭಾವಿಸುವುದಾದರೆ, ನಾವು ಇತಿಹಾಸಗಾರ ಪೌಲ್ ಜಾನ್ಸನ್, ತನ್ನ ಎ ಹಿಸ್ಟರಿ ಆಫ್ ದ ಮಾಡರ್ನ್ ವರ್ಲ್ಡ್ ಪುಸ್ತಕದಲ್ಲಿ ವರ್ಣಿಸಿರುವುದಕ್ಕೆ ಹೋಲಿಕೆಯಾದ ಪರಿಸ್ಥಿತಿಯಲ್ಲಿದ್ದೇವೆ. ನಮ್ಮ ಶತಮಾನದ “ವಿಪತ್ಕಾರಕ ವೈಫಲ್ಯ ಮತ್ತು ದುರಂತಗಳಿಗೆ” ಸಹಾಯ ಮಾಡುವ ಮುಖ್ಯ ಕೆಡುಕುಗಳಲ್ಲಿ ಒಂದು, “ಇತರರ ಸಹಾಯವಿಲ್ಲದ ತಮ್ಮ ಸ್ವಂತ ಬುದ್ಧಿಶಕ್ತಿಯಿಂದ ಸ್ತ್ರೀ, ಪುರುಷರು ವಿಶ್ವದ ಸಕಲ ರಹಸ್ಯಗಳನ್ನೂ ಪರಿಹರಿಸಬಲ್ಲರೆಂಬ ದುರಹಂಕಾರದ ನಂಬಿಕೆಯೇ” ಎಂದು ಅವರು ಬರೆದರು.—ಯೆಶಾಯ 2:2-4 ಹೋಲಿಸಿ.
ಆದರೂ, ಸಕಾರಾತ್ಮಕ ಬದಲಾವಣೆಗೆ ಒಂದು ನ್ಯಾಯಸಮ್ಮತವಾದ ಆಯ್ಕೆಯಿದೆ. ಅದು, ಈ ಭೂಮಿಯ ಸೃಷ್ಟಿಕರ್ತನು, ನಮ್ಮ ಗ್ರಹದ ಧಣಿ, ಮತ್ತು ಬದಲಾವಣೆಯ ಮಹಾ ವಾಸ್ತುಶಿಲ್ಪಿಯಾದ ಯೆಹೋವ ದೇವರು, ತನ್ನ ಕೈಕೆಲಸವನ್ನು ರಕ್ಷಿಸಲು ಮಾನವ ವಿಚಾರಗಳಲ್ಲಿ ಕೈ ಹಾಕುವನು ಎಂದು ನಂಬುವುದೇ. ದೇವರು ಗತಕಾಲಗಳಲ್ಲಿ ತಮ್ಮ ಉದ್ದೇಶಗಳನ್ನು ಮುಂದುವರಿಸಲು ಕ್ರಮ ಕೈಗೊಂಡನೆಂದು ಬೈಬಲ್ ಇತಿಹಾಸ ತೋರಿಸುತ್ತದೆ, ಮತ್ತು ಮಾನವಕುಲ ಮತ್ತು ಈ ಭೂಮಿಯ ಕಡೆಗಿರುವ ತನ್ನ ಮೂಲ ಉದ್ದೇಶವನ್ನು ನೆರವೇರಿಸಲು ಆತನು ಪುನಃ ಬೇಗನೆ ಕ್ರಮ ಕೈಕೊಳ್ಳುವನೆಂದು ಬೈಬಲ್ ಪ್ರವಾದನೆ ಸೂಚಿಸುತ್ತದೆ.—ಯೆಶಾಯ 45:18.
ಭರವಸಾರ್ಹ ಮಾಹಿತಿಯ ಒಂದು ಅದ್ವಿತೀಯ ಮೂಲ
ಭವಿಷ್ಯತ್ತು ಮಾನವ ಸಂತತಿಗೆ ಏನು ಕಾದಿರಿಸಿದೆ ಎಂಬುದರ ಕುರಿತ ನಿಜ ಜ್ಞಾನದ ಅದ್ವಿತೀಯ ಮೂಲನನ್ನು ಬೈಬಲ್ ಪ್ರವಾದಿ ಯೆಶಾಯನ ಮಾತುಗಳು ವರ್ಣಿಸುತ್ತವೆ: “ಪುರಾತನದ ಹಳೇ ಸಂಗತಿಗಳನ್ನು ಜ್ಞಾಪಿಸಿಕೊಳ್ಳಿರಿ; ನಾನೇ ದೇವರು, ಇನ್ನು ಯಾರೂ ಅಲ್ಲ; ನಾನೇ ಪರಮ ದೇವರು, ನನಗೆ ಸರಿಸಮಾನರಿಲ್ಲ. ಆರಂಭದಲ್ಲಿಯೇ ಅಂತ್ಯವನ್ನು ತಿಳಿಸಿದ್ದೇನೆ; . . . ಇನ್ನೂ ನಡೆಯದಿರುವ ಕಾರ್ಯಗಳನ್ನು ಪುರಾತನಕಾಲದಲ್ಲಿಯೇ ಅರುಹಿದ್ದೇನೆ.”—ಯೆಶಾಯ 46:9-11.
ಮಾನವ ಸಂತತಿಯನ್ನು ತಟ್ಟಲಿರುವ ಸಂಗತಿಗಳ ಮುನ್ನರಿವು ಯೆಹೋವ ದೇವರಿಗೆ ಏಕಿರಬೇಕು? ಪುನಃ ಯೆಶಾಯನು ಉತ್ತರಿಸುವುದು: “ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೂ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಳಿಗಿಂತ ನನ್ನ ಆಲೋಚನೆಗಳೂ ಅಷ್ಟು ಉನ್ನತವಾಗಿವೆ.” ಮಾನವ ಸಂತತಿಯ ಭವಿಷ್ಯತ್ತಿನ ಕುರಿತ ದೇವರ ಆಲೋಚನೆಗಳು ಬೈಬಲಿನಲ್ಲಿ ವ್ಯಕ್ತವಾಗಿವೆ.—ಯೆಶಾಯ 55:9.
“ನಿಭಾಯಿಸಲು ಕಷ್ಟಕರವಾದ ಕಠಿಣ ಕಾಲಗಳು”
ದೇವರ ವಾಕ್ಯವಾದ ಬೈಬಲು ನಮ್ಮ ಸಂತತಿಗಾಗಿ ಏನು ಮುಂತಿಳಿಸಿದೆ? ಕ್ರೈಸ್ತ ಅಪೊಸ್ತಲ ಪೌಲನು ಎಚ್ಚರಿಸಿದ್ದು: “ಆದರೆ ಇದನ್ನು ತಿಳಿದುಕೋ, ಏನಂದರೆ ಕಡೆಯ ದಿವಸಗಳಲ್ಲಿ ನಿಭಾಯಿಸಲು ಕಷ್ಟಕರವಾದ ಕಠಿಣ ಕಾಲಗಳು ಇಲ್ಲಿರುವುವು.” (2 ತಿಮೊಥೆಯ 3:1, NW) ಇಸವಿ 1914 ಮತ್ತು Iನೆಯ ಲೋಕ ಯುದ್ಧದಿಂದ ಹಿಡಿದು, ನಾವು ಹೆಚ್ಚೆಚ್ಚು ಕಠಿಣವಾಗುತ್ತಿರುವ ಸಮಯಗಳಲ್ಲಿ ಜೀವಿಸುತ್ತಿದ್ದೇವೆ. ಮಾನವನ ಸ್ವಾರ್ಥ, ಲೋಭ, ಮತ್ತು ಅಧಿಕಾರಲಾಲಸೆ, ಅವನು ತನ್ನ ನೆರೆಯವನ ಎದುರಾಗಿ ಮಾತ್ರವಲ್ಲ, ಪ್ರಕೃತಿಗೆದುರಾಗಿಯೂ ಹೆಚ್ಚೆಚ್ಚು ಕೆಟ್ಟದಾದ ಅತ್ಯಾಚಾರಗಳನ್ನು ನಡೆಸುವಂತೆ ಮಾಡಿದೆ. ತನ್ನ ಪರಿಸರಕ್ಕೆ ಮಾನವನು ತೋರಿಸುವ ಔದಾಸೀನ್ಯವು ಅವನ ಮಕ್ಕಳ ಮತ್ತು ಮೊಮ್ಮಕ್ಕಳ ಭಾವೀ ಅಸ್ತಿತ್ವವನ್ನು ಅಪಾಯಕ್ಕೊಳಪಡಿಸುತ್ತಿದೆ.
ಈ ತೀವ್ರ ಅಪಾಯವನ್ನು, ಚೆಕೊಸ್ಲೊವಾಕಿಯದ ಪರಿಸ್ಥಿತಿಗಳ ಕುರಿತು ಬರೆದ ಆ ದೇಶದ ಮಾಜಿ ಅಧ್ಯಕ್ಷ ವಾಟ್ಸ್ಲಾಫ್ ಹ್ಯಾಫೆಲ್ ಎತ್ತಿ ಹೇಳಿದರು. ಕಾರ್ಯತಃ ಅವರ ಮಾತುಗಳು ಲೋಕವ್ಯಾಪಕವಾಗಿ ಅನ್ವಯಿಸುತ್ತವೆ: “ಇವು ಕೇವಲ . . . ಲೋಕದ, ನಿಸರ್ಗದ, ಇತರ ಮಾನವರ, ಮತ್ತು ಜೀವದ ಕಡೆಗೆ ಸಹ ಇರುವ ಮಾನವನ ಮನೋಭಾವದ ಪರಿಣಾಮಗಳು. ಇವು . . . ತನಗೆ ಎಲ್ಲವೂ ತಿಳಿದಿದೆ, ಸಕಲವೂ ಗೊತ್ತಿದೆ ಎಂದು ನಂಬುವ ಮತ್ತು ತನ್ನನ್ನು ನಿಸರ್ಗ ಮತ್ತು ಲೋಕದ ಯಜಮಾನನೆಂದು ಹೆಸರಿಸುವ ಆಧುನಿಕ ಮನುಷ್ಯನ ದುರಹಂಕಾರದ ಪರಿಣಾಮಗಳು. . . . ತನಗಿಂತ ಮೇಲಿದ್ದ . . . ಯಾವುದನ್ನೂ ಒಪ್ಪಿಕೊಳ್ಳಲು ನಿರಾಕರಿಸಿದ ಮಾನವನ ಯೋಚನೆ ಹೀಗಿತ್ತು.”
ಈ ಹಿಂದೆ ಉಲ್ಲೇಖಿಸಿರುವ ಆ್ಯಲ್ ಗೋರ್ ಬರೆದುದು: “ಅನೇಕ ಜನರು ಭವಿಷ್ಯತ್ತಿನಲ್ಲಿ ತಮ್ಮ ನಂಬಿಕೆಯನ್ನು ಕಳೆದುಕೊಂಡಿದ್ದಾರೆಂದು ನನ್ನ ನಂಬಿಕೆ, ಏಕೆಂದರೆ ನಮ್ಮ ನಾಗರಿಕತೆಯ ಕಾರ್ಯತಃ ಪ್ರತಿಯೊಂದು ಮುಖದಲ್ಲಿ, ನಾವು ನಮ್ಮ ಭವಿಷ್ಯತ್ತು ಈಗ ತೀರಾ ಸಂದೇಹಾಸ್ಪದವಾಗಿದೆಯೋ ಎಂಬಂತೆ, ನಮ್ಮ ಪ್ರಸ್ತುತದ ಆವಶ್ಯಕತೆಗಳಿಗೆ ಮತ್ತು ಅಲ್ಪಾವಧಿಯ ಸಮಸ್ಯೆಗಳಿಗೆ ಮಾತ್ರ ಗಮನ ಕೊಡುವುದು ಹೆಚ್ಚು ಅರ್ಥಭರಿತವೋ ಎಂಬಂತೆ ವರ್ತಿಸ ತೊಡಗಿದ್ದೇವೆ.” (ಅರ್ತ್ ಇನ್ ದ ಬ್ಯಾಲೆನ್ಸ್) ಭವಿಷ್ಯತ್ತಿನ ಕುರಿತ ನಿರಾಶಾವಾದ ಹೆಚ್ಚು ಬಳಕೆಯಲ್ಲಿರುವಂತೆ ತೋರುವುದು ನಿಶ್ಚಯ.
ಪೌಲನ ಮುಂದಿನ ಮಾತುಗಳು ನೆರವೇರಿರುವುದರಿಂದಲೇ ಅಂಶಿಕವಾಗಿ ಈ ಪರಿಸ್ಥಿತಿ ಬಂದೊದಗಿದೆ: “ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರ ನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಶವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು; ಇಂಥವರ ಸಹವಾಸವನ್ನು ಮಾಡದಿರು.”—2 ತಿಮೊಥೆಯ 3:2-5.
ಹೆಚ್ಚು ಉತ್ತಮವಾದ ಮಾರ್ಗ
ಆದರೆ ದೇವರು ಈ ಭೂಮಿಯ ಸಂಗತಿಗಳು ಉತ್ತಮಗೊಳ್ಳುವ ರೀತಿಯಲ್ಲಿ ಮಾರ್ಪಡುವಂತೆ ಉದ್ದೇಶಿಸಿದ್ದಾನೆ. ತಾನು, “ನೂತನಾಕಾಶಮಂಡಲವನ್ನೂ ನೂತನ ಭೂಮಂಡಲವನ್ನೂ” ಉಂಟುಮಾಡುವೆನೆಂದೂ, ಅವುಗಳಲ್ಲಿ “ನೀತಿಯು ವಾಸವಾಗಿರುವುದು” ಎಂದೂ ಆತನು ವಾಗ್ದಾನಿಸಿದ್ದಾನೆ. (2 ಪೇತ್ರ 3:13) ಈ ಮಲಿನವಾಗಿರುವ ಭೂಮಿಯನ್ನು ಪ್ರಮೋದವನದ ಸ್ಥಿತಿಗೆ ಪುನಃಸ್ಥಾಪಿಸಲು, ಯೆಹೋವ ದೇವರು ಮೊದಲಾಗಿ, “ಲೋಕನಾಶಕರನ್ನು ನಾಶ” ಮಾಡಬೇಕು. (ಪ್ರಕಟನೆ 11:18) ಇದು ಹೇಗೆ ನಡೆಯುವುದು?
ಸಾಂಕೇತಿಕ ಭಾಷೆಯನ್ನು ಉಪಯೋಗಿಸುತ್ತಾ ಬೈಬಲು, ದೇವರು ಬೇಗನೆ ಸಂಯುಕ್ತ ರಾಷ್ಟ್ರ ಸಂಘವನ್ನು ಸೇರಿರುವ, ರಾಜಕೀಯ ಶಕ್ತಿಗಳ ಹೃದಯದಲ್ಲಿ, ಅವರು ಪ್ರಾಯಶಃ ಮಾನವ ಇತಿಹಾಸದ ಅತಿ ನಕಾರಾತ್ಮಕ ಶಕ್ತಿ—ಭೂವ್ಯಾಪಕ ಧರ್ಮದ ರಾಷ್ಟ್ರೀಯ ಹಾಗೂ ವಿಭಾಜಕ ಪ್ರಭಾವದ ಶಕ್ತಿ ಮತ್ತು ಪ್ರತಿಷ್ಠೆಯನ್ನು ನಾಶಗೊಳಿಸುವ ಅಪೇಕ್ಷೆಯನ್ನು ಹಾಕುವನು.a ದ ಟ್ರಾನ್ಸ್ಫರ್ಮೇಷನ್ ಆಫ್ ವಾರ್ ಎಂಬ ಮಾರ್ಟಿನ್ ಫನ್ ಕ್ರೇಫೆಲ್ಡ್ ಅವರ ಪುಸ್ತಕಕ್ಕನುಸಾರ, “ಧಾರ್ಮಿಕ ಮನೋಭಾವ, ನಂಬಿಕೆ ಮತ್ತು ಮತಾಂಧತೆಗಳು, ಪಾಶ್ಚಾತ್ಯ ದೇಶಗಳಲ್ಲಿಯಾದರೂ, ಸಶಸ್ತ್ರ ಹೋರಾಟಗಳ ಪ್ರಚೋದನೆಯಲ್ಲಿ ಕಳೆದ 300 ವರ್ಷಗಳಿಗಿಂತ ಹೆಚ್ಚು ದೊಡ್ಡ ಪಾತ್ರವನ್ನು ವಹಿಸುವುವು ಎಂದು ನಿರೀಕ್ಷಿಸಲು ಸಕಾರಣವಿರುವಂತೆ ಕಾಣುತ್ತದೆ.” ಪ್ರಾಯಶಃ ರಾಜಕೀಯದಲ್ಲಿ ತಲೆಹಾಕುವ ಕಾರಣ, ಧರ್ಮವು ರಾಜಕೀಯ ಶಕ್ತಿಗಳ ಕೈಯಿಂದ ಕಷ್ಟಕ್ಕೀಡಾಗುವುದು. ಆದರೂ, ಈ ಶಕ್ತಿಗಳು ಉದ್ದೇಶಪೂರ್ವಕವಾಗಿ ಅಲ್ಲದಿದ್ದರೂ ದೇವರ ಚಿತ್ತವನ್ನು ನೆರವೇರಿಸುವುವು.—ಪ್ರಕಟನೆ 17:16, 17; 18:21, 24.
ದೇವರು ಆ ಬಳಿಕ ಸೈತಾನನ ಭ್ರಷ್ಟ ಲೋಕ ವ್ಯವಸ್ಥೆಯ ಸ್ವಪ್ರಯೇಜನವನ್ನು ಅಪೇಕ್ಷಿಸುವ, ಮೃಗಸದೃಶ ರಾಜಕೀಯ ಮೂಲಾಂಶಗಳ ಕಡೆ ತಿರುಗಿ ಅವರನ್ನು ತನ್ನ ಅಂತಿಮ ಯುದ್ಧದಲ್ಲಿ ಯಾ ಅರ್ಮಗೆದೋನ್ ಯುದ್ಧದಲ್ಲಿ ತೊಡಗಿಸುವನು. ಈ ನಿರ್ದಯ ಭಾವದ ರಾಜಕೀಯ ವ್ಯವಸ್ಥೆಗಳನ್ನೂ ಅವುಗಳ ಕುಶಲ ಚಾಲಕನಾದ ಸೈತಾನನನ್ನೂ ತೊಲಗಿಸಿದ ಬಳಿಕ, ದೇವರು ವಾಗ್ದಾನಿಸಿರುವ ಶಾಂತಿಭರಿತ ನೂತನ ಲೋಕಕ್ಕೆ ದಾರಿಯು ಸಿದ್ಧವಾಗಿರುವುದು.b—ಪ್ರಕಟನೆ 13:1, 2; 16:14-16.
ಸುಮಾರು 80 ವರ್ಷಗಳಿಂದ ಯೆಹೋವನ ಸಾಕ್ಷಿಗಳು ಈ ಬರಲಿರುವ ಬದಲಾವಣೆಗಳ ಕುರಿತು ಮನೆಯಿಂದ ಮನೆಗೆ ಸಾರುತ್ತಿದ್ದಾರೆ. ಆ ಸಮಯದಲ್ಲಿ ಮನುಷ್ಯ ಸಂತತಿಯು ಮಾಡಿರುವ ಅನೇಕ ಬದಲಾವಣೆಗಳನ್ನು ಅವರೂ ನೋಡಿ ಅನುಭವಿಸಿದ್ದಾರೆ. ಅವರು ತಮ್ಮ ಬೈಬಲಾಧಾರಿತ ಮೂಲಸೂತ್ರಗಳ ಕಾರಣ ನಾಸೀ ಸೆರೆಮನೆ ಮತ್ತು ಕೂಟ ಶಿಬಿರಗಳನ್ನು ಅನುಭವಿಸಿದ್ದಾರೆ. ಅವರು ಆಫ್ರಿಕದ ಅನೇಕ ಭಾಗಗಳಲ್ಲಿ, ಆಂತರಿಕ ಯುದ್ಧ ಮತ್ತು ಬಣಗಳ ನಡುವಿನ ಹೋರಾಟಗಳು ಸೇರಿರುವ ಜೀವನಗಳ ಸಂಕಟ ಮತ್ತು ಕಷ್ಟಗಳನ್ನು ಅನುಭವಿಸಿದ್ದಾರೆ. ಅವರ ತಾಟಸ್ಥ್ಯ ಮತ್ತು ಹುರುಪಿನ ಸಾರುವ ಚಟುವಟಿಕೆಯ ಕಾರಣ ಬಹುತೇಕ ರಾಜಕೀಯ ಮತ್ತು ಧಾರ್ಮಿಕ ಪದ್ಧತಿಗಳಿಂದ ಬರುವ ಹಿಂಸೆಯನ್ನು ತಾಳಿದ್ದಾರೆ. ಆದರೂ ಇವೆಲ್ಲವುಗಳ ಎದುರಿನಲ್ಲಿ, 1914ರಲ್ಲಿದ್ದ ಕೇವಲ ಕೆಲವೇ ಸಾವಿರದಿಂದ 1993ರ ಸುಮಾರು 45 ಲಕ್ಷಕ್ಕೆ ಬೆಳೆದಿರುವ ಅವರು ತಮ್ಮ ಲೋಕವ್ಯಾಪಕ ಶಿಕ್ಷಣ ಕಾರ್ಯದ ಮೇಲೆ ದೇವರ ಆಶೀರ್ವಾದವನ್ನು ನೋಡಿದ್ದಾರೆ.
ಆಶಾವಾದಕ್ಕೆ ಕಾರಣಗಳು
ನಿರಾಶಾಪರವಶರಾಗುವ ಬದಲಿಗೆ, ಸಾಕ್ಷಿಗಳಿಗೆ ಆಶಾವಾದದ ಹೊರನೋಟವಿದೆ. ಏಕೆಂದರೆ ಸರ್ವೋತ್ತಮವೂ ಮಹತ್ತಾದುದೂ ಆಗಿರುವ ಮಾರ್ಪಾಟುಗಳು ಈ ಭೂಮಿಯ ಮೇಲೆ ಬೇಗನೆ ಸಂಭವಿಸುವುವೆಂದು ಅವರಿಗೆ ಗೊತ್ತು. ಇಸವಿ 1914ರಿಂದ ನಡೆದಿರುವ ಘಟನೆಗಳು ಯೇಸು ಕೊಟ್ಟ ಪ್ರವಾದನೆಗಳನ್ನು ನೆರವೇರಿಸಿವೆ. ಅವು ರಾಜ್ಯಾಧಿಕಾರದಲ್ಲಿ ಅವನ ಅದೃಶ್ಯ ಸಾನ್ನಿಧ್ಯದ ಸಮಯವನ್ನು ಗುರುತಿಸಿ, ಅತಿ ಸನಿಹದ ಭವಿಷ್ಯತ್ತಿನ ಪ್ರತೀಕ್ಷೆಯನ್ನು ಒಬ್ಬ ಫ್ರೆಂಚ್ ಲೇಖಕನು ಲೆ ಮೋಂಡ್ನಲ್ಲಿ ವರ್ಣಿಸಿದಂತೆ, ಮಾನವ ಪ್ರೇರಿತ “ನೂತನ ಲೋಕ ಅವ್ಯವಸ್ಥೆಯ” ಅಂತ್ಯಕಾಲದಲ್ಲಿ ನಾವಿದ್ದೇವೆಂದು ಸೂಚಿಸಿವೆ. ಯೇಸು ಹೇಳಿದ್ದು: “ನೀವು ಸಹ ಇವುಗಳಾಗುವದನ್ನು ನೋಡುವಾಗ ದೇವರ ರಾಜ್ಯವು ಹತ್ತಿರವದೆ ಎಂದು ತಿಳುಕೊಳ್ಳಿರಿ.”—ಲೂಕ 21:7-32.
ಮಾನವನ “ನೂತನ ಲೋಕ ವ್ಯವಸ್ಥೆ” ಮಾನವನ ಪ್ರಕೃತಿಯ ನ್ಯೂನತೆ—ಹೆಬ್ಬಯಕೆ, ಅಧಿಕಾರಲಾಲಸೆ, ಲೋಭ, ಭ್ರಷ್ಟತೆ, ಮತ್ತು ಅನ್ಯಾಯ—ಗಳಿಗೆ ಭೇದ್ಯವಾಗಿರುತ್ತದೆ. ಆದರೆ ದೇವರ ನೂತನ ಜಗತ್ತು ನ್ಯಾಯದ ಖಾತರಿಯನ್ನು ಕೊಡುತ್ತದೆ. ಆತನ ವಿಷಯದಲ್ಲಿ ಬರೆಯಲಾಗಿರುವುದು: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.”—ಧರ್ಮೋಪದೇಶಕಾಂಡ 32:4.
ಮನುಷ್ಯನ “ನೂತನ ಲೋಕ ವ್ಯವಸ್ಥೆ,” ಅಮೆರಿಕದ ವಿದೇಶ ನೀತಿ ನಿಪುಣ ಮೆಕ್ಜಾರ್ಜ್ ಬಂಡಿ ಕರೆದಂತೆ, “ಜನಜಂಗುಳಿ ನಾಯಕರು ಮೊರೆಯಿಡುವ ಸಂಕುಚಿತ ರಾಷ್ಟ್ರೀಯತೆಯ ಭಾವನೆಗಳಿಗೆ” ಅವಕಾಶ ಕೊಡುತ್ತದೆ. ಅವರು ಮುಂದುವರಿಸುತ್ತಾ ಹೇಳಿದ್ದು: “ಆರ್ಥಿಕ ಮತ್ತು ಸಾಮಾಜಿಕ ವೈಫಲ್ಯವು ಇಂಥ ಉಗ್ರಗಾಮಿಗಳಿಗೆ ಹೇಗೆ ಬಲ ಕೊಡುತ್ತದೆಂದು ನಮಗೆ ಇತಿಹಾಸದಿಂದ ತಿಳಿದು ಬರುತ್ತದೆ. ಅದು ಎಲ್ಲಿಯೇ ನಡೆಯಲಿ, ಆ ರೀತಿಯ ರಾಷ್ಟ್ರೀಯತೆ ಅಪಾಯಕಾರಿಯಾಗಿದೆ ಎಂಬುದೂ ನಮಗೆ ಗೊತ್ತು.”
ದೇವರ ನೂತನ ಲೋಕ ಎಲ್ಲ ಬಣ ಮತ್ತು ರಾಷ್ಟ್ರಗಳ ಜನರ ಮಧ್ಯೆ ಸಾಮರಸ್ಯ ಮತ್ತು ಶಾಂತಿಯ ಖಾತರಿಯನ್ನು ಕೊಡುತ್ತದೆ, ಏಕೆಂದರೆ ಅವರು ದೇವರ ನಿಷ್ಪಕ್ಷಪಾತ ಮತ್ತು ಪ್ರೀತಿಯಲ್ಲಿ ಶಿಕ್ಷಿತರಾಗುವರು. ಯೆಶಾಯನು ಪ್ರವಾದಿಸಿದ್ದು: “ನಿನ್ನ ಮಕ್ಕಳೆಲ್ಲರೂ ಯೆಹೋವನಿಂದ ಶಿಕ್ಷಿತರಾಗಿರುವರು, ಅವರಿಗೆ ಅಧಿಕ ಸುಕ್ಷೇಮವಾಗುವದು.” (ಯೆಶಾಯ 54:13) ಮತ್ತು ಕ್ರೈಸ್ತ ಅಪೊಸ್ತಲ ಪೇತ್ರನು ಹೇಳಿದ್ದು: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆಂದು ಈಗ ಸಂದೇಹವಿಲ್ಲದೆ ನನಗೆ ತಿಳಿದುಬಂದಿದೆ.”—ಅಪೊ. ಕೃತ್ಯಗಳು 10:34, 35.
ಅತಿ ಸಮೀಪದ ಭವಿಷ್ಯತ್ತಿನಲ್ಲಿ, ನಮಗೆ ಪರಿಚಯವಿರುವ ಲೋಕದಲ್ಲಿ ನಾಟಕೀಯವಾದ ಬೆಳವಣಿಗೆಗಳಾಗುವುದು ನಿಸ್ಸಂದೇಹ. ಆದರೂ, ಅತಿ ಮಹತ್ತಾದ ಮಾರ್ಪಾಟುಗಳು, ಕಾಯಂ ಮತ್ತು ಪ್ರಯೋಜನಕರವಾದ ಮಾರ್ಪಾಟುಗಳು, ದೇವರು ತರುತ್ತೇನೆಂದು ವಾಗ್ದಾನಿಸಿರುವವುಗಳೇ ಆಗಿವೆ, ಮತ್ತು ಆತನು “ಸುಳ್ಳಾಡದ” ದೇವರು.—ತೀತ 1:2. (g93 1/8)
[ಅಧ್ಯಯನ ಪ್ರಶ್ನೆಗಳು]
a ಸುಳ್ಳುಧರ್ಮದ ಲೋಕ ಸಾಮ್ರಾಜ್ಯವನ್ನು ಬೈಬಲಿನಲ್ಲಿ, “ಬಾಬೆಲೆಂಬ ಮಹಾ ನಗರಿ, . . . ಜಾರಸ್ತ್ರೀಯರಿಗೂ . . . ತಾಯಿ,” ಎಂದೂ “ಪಾಪಗಳು . . . ಆಕಾಶದ ಪರ್ಯಂತರಕ್ಕೂ ಬೆಳೆದ” ರಕ್ತ ಕಲುಷಿತ ರಾಣಿಯೆಂದೂ ಗುರುತಿಸಲಾಗಿದೆ. (ಪ್ರಕಟನೆ 17:3-6, 16-18; 18:5-7) ಈ ಮಹಾ ಬಾಬೆಲಿನ ಗುರುತಿಸುವಿಕೆಯ ಸವಿವರ ವಿವರಣೆಗೆ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್. ಪ್ರಕಾಶಿಸಿರುವ ಮ್ಯಾನ್ಕೈಂಡ್ಸ್ ಸರ್ಚ್ ಫಾರ್ ಗಾಡ್, ಪುಟ 368-71 ನೋಡಿ.
b ಬೈಬಲಲ್ಲಿ ಪ್ರವಾದಿಸಿರುವ ಈ ಸಂಭವಗಳ ಹೆಚ್ಚು ವಿವರವಾದ ವಿವರಣೆಗೆ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಇನ್ಕ್, 1988ರಲ್ಲಿ ಪ್ರಕಾಶಿಸಿರುವ ರೆವೆಲೇಷನ್—ಇಟ್ಸ್ ಗಾಡ್ ಕ್ಲೈಮ್ಯಾಕ್ಸ್ ಎಟ್ ಹ್ಯಾಂಡ್! ಎಂಬ ಪುಸ್ತಕದ 30-42 ಅಧ್ಯಾಯಗಳನ್ನು ನೋಡಿ.