ನೀವು ಯಾವ ರೀತಿಯ ಲೋಕವನ್ನು ಬಯಸುತ್ತೀರಿ?
ನಿಮಗೆ ಶಕ್ತಿ ಇದ್ದಿದ್ದರೆ, ನೀವು ಒಂದು ಹೊಸ ಲೋಕವನ್ನು—ಇಂದು ಮಾನವರನ್ನು ಬಾಧಿಸುತ್ತಿರುವ ಎಲ್ಲಾ ಸಮಸ್ಯೆಗಳಿಂದ ಮುಕ್ತವಾಗಿರುವ ಒಂದು ಲೋಕವನ್ನು ಸೃಷ್ಟಿಸುವಿರೊ? ನೀವು ಮಾಡುವಿರಾದರೆ, ಶಕ್ತಿಯನ್ನು ಹೊಂದಿರುವ ನಮ್ಮ ಪ್ರೀತಿಯ ಸೃಷ್ಟಿಕರ್ತನಾದ ಯೆಹೋವ ದೇವರು, ನೀತಿಯ ಒಂದು ಹೊಸ ಲೋಕವನ್ನು ಸೃಷ್ಟಿಸುವನೆಂದು ನಿರೀಕ್ಷಿಸುವುದು ತರ್ಕಬದ್ಧವಾಗಿಲ್ಲವೊ?
ಬೈಬಲ್ ಹೇಳುವುದು: “ಯೆಹೋವನು ಸರ್ವೂಪಕಾರಿಯೂ ತಾನು ನಿರ್ಮಿಸಿದವುಗಳನ್ನೆಲ್ಲಾ ಕರುಣಿಸುವಾತನೂ ಆಗಿದ್ದಾನೆ. ನೀನು ಕೈದೆರೆದು ಎಲ್ಲಾ ಜೀವಿಗಳ ಇಷ್ಟವನ್ನು ನೆರವೇರಿಸುತ್ತೀ.” (ಕೀರ್ತನೆ 145:9, 16) ನಿಮ್ಮ ಕೆಲವು ಬಯಕೆಗಳು ಯಾವುವು? ಯಾವ ರೀತಿಯ ಲೋಕಕ್ಕಾಗಿ ನೀವು ಹಂಬಲಿಸುತ್ತೀರಿ?
ವಿವೇಕಯುಕ್ತ ಮತ್ತು ಸಂತೋಷಕರ ಜೀವನ: ಒಂದು ಕುಟುಂಬ ಮಾರ್ಗದರ್ಶಕ (ಎ ಸೇನ್ ಆ್ಯಂಡ್ ಹ್ಯಾಪಿ ಲೈಫ್: ಎ ಫ್ಯಾಮಿಲಿ ಗೈಡ್) ಎಂಬ ಅವರ ಪುಸ್ತಕದಲ್ಲಿ, ಅಬ್ರಹಾಮ್ ಮತ್ತು ರೋಜ್ ಫ್ರಾಂಟ್ಸ್ಬಾವ್ಲ್ ಬರೆದದ್ದು: “ಲೋಕ ಜನಸಂಖ್ಯೆಯ ಅಭಿಪ್ರಾಯವೇನೆಂಬುದನ್ನು ನಾವು ಕಂಡುಹಿಡಿಯುವುದಾದರೆ ಮತ್ತು ನಾವೆಲ್ಲರೂ ಜೀವಿಸಲು ಬಯಸುವ ಲೋಕದ ರೀತಿಯ ಕುರಿತು ಮಾನವಕುಲವನ್ನು ವಿಚಾರಿಸುವುದಾದರೆ, ಕೆಲವು ನಿರ್ದಿಷ್ಟವಾದ ಕನಿಷ್ಠ ಆವಶ್ಯಕತೆಗಳ ಬಗ್ಗೆ ನಾವೆಲ್ಲರೂ ಒಪ್ಪಬಹುದಾದ ಸಾಧ್ಯತೆಗಳು ಹೆಚ್ಚು.”
ಈ ಡಾಕ್ಟರುಗಳಿಂದ ಪಟ್ಟಿಮಾಡಲಾದ ಆವಶ್ಯಕತೆಗಳನ್ನು ನಾವು ಪರೀಕ್ಷಿಸಿ, ನೀವು ಬಯಸಿದ್ದು ಅದೇ ವಿಷಯಗಳಾಗಿದ್ದವೊ ಇಲ್ಲವೊ ಎಂಬುದನ್ನು ನೋಡೋಣ. ಇದನ್ನು ಮಾಡುವಾಗ, ಅದೇ ವಿಷಯಗಳನ್ನು ಒದಗಿಸಲು ನಮ್ಮ ಪ್ರೀತಿಯ ಸೃಷ್ಟಿಕರ್ತನು ವಾಗ್ದಾನಿಸಿದ್ದಾನೊ ಎಂಬುದನ್ನು ಕೂಡ ನಾವು ನೋಡುವೆವು.
ಮೊದಲನೆಯ ಆವಶ್ಯಕತೆ
“ಯುದ್ಧರಹಿತವಾದ ಒಂದು ಲೋಕವನ್ನು” ಡಾಕ್ಟರರು ಪಟ್ಟಿಯಲ್ಲಿ ಮೊದಲನೆಯದಾಗಿ ಬರೆದರು. ಅನೇಕ ಭಯಂಕರ ಯುದ್ಧಗಳ ಕಷ್ಟಾನುಭವಗಳ ಅನಂತರ, ಜನರು ಪುನಃ ಎಂದಿಗೂ ಹೋರಾಡದೆ ಮತ್ತು ಒಬ್ಬರನ್ನೊಬ್ಬರು ಕೊಲ್ಲದೆ ಇರುವ ಒಂದು ಲೋಕಕ್ಕಾಗಿ ಅನೇಕರು ಹಾತೊರೆಯುತ್ತಾರೆ. ಅವರ ನಿರೀಕ್ಷೆಯು, ನ್ಯೂ ಯಾರ್ಕ್ ನಗರದಲ್ಲಿ, ಸಂಯುಕ್ತ ರಾಷ್ಟ್ರಗಳ ಚೌಕದ ಗೋಡೆಯ ಮೇಲೆ ಇರುವ ಒಂದು ಕೆತ್ತನೆಯಲ್ಲಿ ಅಭಿವ್ಯಕ್ತ ಪಡಿಸಲಾಗಿದೆ. ಅದು ಓದುವುದು: ಅವರೋ ತಮ್ಮ . . . ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.
ಆ ಮಾತುಗಳು ಯೆಹೋವ ದೇವರಿಂದ ಮಾಡಲಾದ ಒಂದು ವಾಗ್ದಾನದ ಭಾಗವಾಗಿವೆ ಎಂದು ನಿಮಗೆ ಗೊತ್ತಿತ್ತೊ? ಆ ಮಾತುಗಳನ್ನು ಪವಿತ್ರ ಬೈಬಲಿನಲ್ಲಿ, ಕಿಂಗ್ ಜೇಮ್ಸ್ ವರ್ಷನ್ನಲ್ಲಿ ಯೆಶಾಯ 2ನೆಯ ಅಧ್ಯಾಯ 4ನೇ ವಚನದಲ್ಲಿ ದಾಖಲು ಮಾಡಲಾಗಿದೆ. ಕೀರ್ತನೆ 46:8, 9 ವಚನಗಳನ್ನು ಓದುವ ಮೂಲಕ ಕೂಡ, ದೇವರ ಉದ್ದೇಶವು ಎಲ್ಲಾ ಶಸ್ತ್ರಗಳನ್ನು ನಾಶಮಾಡಿ “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿ” ಬಿಡುವುದಾಗಿದೆ ಎಂಬುದನ್ನು ನೀವು ನೋಡುವಿರಿ. ದೇವರ ನಿರ್ಮಾಣದ ಶಾಂತಿಭರಿತ, ಯುದ್ಧರಹಿತ ಲೋಕದಲ್ಲಿ, ಈ ಹರ್ಷಭರಿತ ಬೈಬಲ್ ಪ್ರವಾದನೆಯು ನೆರವೇರುವುದು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಮೀಕ 4:4.
ನೀವು ಬಯಸುವ ರೀತಿಯ ಲೋಕದ ಮೂಲಭೂತ ಆವಶ್ಯಕತೆಯೋಪಾದಿ “ಯುದ್ಧರಹಿತವಾದ ಒಂದು ಲೋಕವನ್ನು” ನೀವು ಪಟ್ಟಿಯಲ್ಲಿ ಬರೆಯುತ್ತಿರಲಿಲ್ಲವೊ? ಸ್ವಲ್ಪ ಯೋಚಿಸಿರಿ, ನಮ್ಮ ಮಹಾ ಸೃಷ್ಟಿಕರ್ತನು ಅದನ್ನು ವಾಗ್ದಾನಿಸಿದ್ದಾನೆ!
ಸಮೃದ್ಧಿಯ ಒಂದು ಲೋಕ
ನಿಮ್ಮ ಎರಡನೆಯ ಆವಶ್ಯಕತೆಯು ಏನಾಗಿರುವುದು? ಮುಂದೆ ಕೊಡಲ್ಪಟ್ಟ ಅದೇ “ಹಸಿವು ಇಲ್ಲದ, ಬರ ಮತ್ತು ಅಭಾವವು ಎಂದೆಂದಿಗೂ ತೊಲಗಿಸಲ್ಪಟ್ಟ ಒಂದು ಲೋಕ”ವಾಗಿರುವುದೊ? ಹೊಟ್ಟೆಗಿಲ್ಲದ ಮಗು ಪುನಃ ಎಂದಿಗೂ ಇಲ್ಲದಿರುವುದಾದರೆ, ಅದು ಅದ್ಭುತಕರವಾಗಿರುವುದಿಲ್ಲವೊ? ಖಂಡಿತವಾಗಿ, ಸಮೃದ್ಧಿಯ ಒಂದು ಲೋಕದಲ್ಲಿ ಜೀವಿಸಲು ನೀವು ಇಷ್ಟಪಡುವಿರಿ. ಆದರೆ ಇದರ ಖಾತರಿಯನ್ನು ಯಾರು ಕೊಡಬಲ್ಲರು?
ದೇವರು ವಾಗ್ದಾನಿಸುವುದನ್ನು ಪರಿಗಣಿಸಿರಿ: “ಭೂಮಿಯು ಒಳ್ಳೇ ಬೆಳೆಯನ್ನು ಕೊಟ್ಟಿರುತ್ತದೆ.” “ದೇಶದಲ್ಲಿ . . . ಬೆಳೆಯು ಸಮೃದ್ಧಯಾಗಲಿ.” (ಕೀರ್ತನೆ 67:6; 72:16) ಹೌದು, ದೇವರ ಹೊಸ ಲೋಕದಲ್ಲಿ, ಉತ್ತಮ ಆಹಾರವು ಯಥೇಷ್ಟವಾಗಿರುವುದು. ಯೆಹೋವನು “ಸಕಲಜನಾಂಗಗಳಿಗೂ ಸಾರವತಾದ್ತ ಮೃಷ್ಟಾನ್ನದಿಂದಲೂ ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು,” ಎಂದು ಬೈಬಲ್ ಆಶ್ವಾಸನೆ ನೀಡುತ್ತದೆ.—ಯೆಶಾಯ 25:6.
ಹಸಿವಿಲ್ಲದ ಒಂದು ಲೋಕವನ್ನು ಒದಗಿಸುವುದು ಮನುಷ್ಯರ ಸಾಮರ್ಥ್ಯವನ್ನು ಮೀರಿ ಇರುವುದಾದರೂ, ಅದನ್ನು ತರುವುದು ದೇವರ ಶಕ್ತಿಯನ್ನು ಮೀರಿ ಇರುವುದಿಲ್ಲ. ಆತನ ಮಗನಾದ ಯೇಸು ಕ್ರಿಸ್ತನು, ದೇವರ ರಾಜ್ಯದ ಕೆಳಗೆ ಎಲ್ಲರಿಗೆ ಆಹಾರವನ್ನು ಒದಗಿಸುವುದು ಸಮಸ್ಯೆಯಾಗಿರುವುದಿಲ್ಲ ಎಂಬುದನ್ನು ಪ್ರದರ್ಶಿಸಿದನು. ತಾನು ಭೂಮಿಯ ಮೇಲೆ ಇದ್ದಾಗ, ಕೆಲವು ರೊಟ್ಟಿಗಳನ್ನು ಮತ್ತು ಕೆಲವು ಮೀನುಗಳನ್ನು ಅದ್ಭುತಕರವಾಗಿ ಹೆಚ್ಚಿಸುವ ಮೂಲಕ, ಯೇಸು ಸಾವಿರಾರು ಜನರನ್ನು ಉಣಿಸಿದನು.—ಮತ್ತಾಯ 14:14-21; 15:32-38.
ಒಂದು ರೋಗರಹಿತ ಲೋಕ
ನಮ್ಮೆಲ್ಲರಿಗೂ ಬೇಕಾದ ರೀತಿಯ ಲೋಕದಲ್ಲಿ ಎಲ್ಲಿಯೂ ಒಬ್ಬ ಅಸ್ವಸ್ಥ ವ್ಯಕ್ತಿಯನ್ನು ನೀವು ಕಂಡುಹಿಡಿಯುವುದಿಲ್ಲ. ಆದುದರಿಂದ ಮೂರನೆಯ ಆವಶ್ಯಕತೆಯು ಆಶ್ಚರ್ಯವನ್ನು ಉಂಟುಮಾಡುವಂಥದ್ದಲ್ಲ. “ಅದೊಂದು ರೋಗರಹಿತವಾದ ಜಗತ್ತು, ಎಲ್ಲರೂ ಆರೋಗ್ಯದಲ್ಲಿ ಬೆಳೆದು ತಮ್ಮ ಉಳಿದ ದಿನಗಳನ್ನು ತಡೆಯಸಾಧ್ಯವಿರುವ ಮತ್ತು ಗುಣಪಡಿಸಸಾಧ್ಯವಿರುವ ಕಾಯಿಲೆಗಳಿಂದ ಮುಕ್ತವಾಗಿ ಕಳೆಯುವ ಜಗತ್ತು ಅದಾಗಿರುವುದು,” ಎಂಬುದಾಗಿ ಡಾಕ್ಟರರು ಬರೆದರು.
ಯಾರಿಗೂ ಇನ್ನೆಂದೂ ಶೀತ ಯಾ ಯಾವುದೇ ಬೇರೆ ಬಾಧೆಯಾಗಲಿ ತಟ್ಟದಿದ್ದಲ್ಲಿ, ಇರುವ ಉಪಶಮನದ ಕುರಿತು ಯೋಚಿಸಿರಿ! ಮಾನವರು ರೋಗವನ್ನು ತೆಗೆದುಹಾಕಲು ಶಕ್ತರಲ್ಲ, ಆದರೆ ಯೆಹೋವ ದೇವರು ಶಕ್ತನು. ಆತನ ಹೊಸ ಲೋಕದಲ್ಲಿ “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂಬುದಾಗಿ ಆತನು ವಾಗ್ದಾನಿಸುತ್ತಾನೆ. ಬದಲಾಗಿ, “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆ ಹರ್ಷಧ್ವನಿಗೈಯುವದು.” (ಯೆಶಾಯ 33:24; 35:5, 6) ಹೌದು, ದೇವರು “ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”—ಪ್ರಕಟನೆ 21:4.
ಯೇಸು ಕ್ರಿಸ್ತನು ಭೂಮಿಯ ಮೇಲೆ ಇದ್ದಾಗ, ದೇವರ ಹೊಸ ಲೋಕದಲ್ಲಿ ಒಂದು ದೊಡ್ಡ ಪ್ರಮಾಣದಲ್ಲಿ ನಾವು ಏನನ್ನು ನಿರೀಕ್ಷಿಸಬಲ್ಲೆವೊ ಅದನ್ನು ಅವನು ಪ್ರದರ್ಶಿಸಿದನು. ಅವನು ಕುರುಡರಿಗೆ ದೃಷ್ಟಿಯನ್ನು ಪುನಃ ಸ್ಥಾಪಿಸಿದನು, ಕಿವುಡರ ಕಿವಿಗಳನ್ನು ತೆರೆದನು, ಮೂಕರ ನಾಲಿಗೆಗಳನ್ನು ಸಡಿಲಗೊಳಿಸಿದನು, ಕುಂಟರು ನಡೆಯುವಂತೆ ಮಾಡಿದನು, ಮತ್ತು ಸತ್ತವರಿಗೆ ಕೂಡ ಜೀವವನ್ನು ಹಿಂದಕ್ಕೆ ಕೊಟ್ಟನು.—ಮತ್ತಾಯ 15:30, 31; ಲೂಕ 7:21, 22.
ಎಲ್ಲರಿಗೆ ತೃಪ್ತಿದಾಯಕ ಕೆಲಸ ಮತ್ತು ನ್ಯಾಯ
ನಿಸ್ಸಂದೇಹವಾಗಿ, ನೀವು ಮತ್ತು ಬಹುಮಟ್ಟಿಗೆ ಪ್ರತಿಯೊಬ್ಬರೂ ಬಯಸುವ ಲೋಕದಲ್ಲಿ ಎಲ್ಲರಿಗೆ ತೃಪ್ತಿದಾಯಕ ಕೆಲಸ ಮತ್ತು ನ್ಯಾಯವು ಅಸ್ತಿತ್ವದಲ್ಲಿರುವುದು. ಆದುದರಿಂದ ಡಾಕ್ಟರರು ಹೀಗೆ ಬರೆದರು: “ನಾಲ್ಕನೆಯದು, ತಮಗಾಗಿ ಮತ್ತು ತಮ್ಮ ಕುಟುಂಬಗಳಿಗಾಗಿ ಒದಗಿಸಲಿಕ್ಕಾಗಿ ಒಂದು ಜೀವನೋಪಾಯವನ್ನು ಗಳಿಸಲು ಬಯಸುವವರಿಗೆ ಕೆಲಸವಿರುವ ಒಂದು ಲೋಕ ಅದಾಗಿರುವುದು.” ಮತ್ತು ಅವರು ಕೂಡಿಸಿದ್ದು: “ಐದನೆಯದು, ನಿಯಮದ ಕೆಳಗೆ ಪ್ರತಿಯೊಬ್ಬ ಮನುಷ್ಯನು ಸ್ವಾತಂತ್ರ್ಯವನ್ನು ಅನುಭವಿಸುವ, ಎಲ್ಲರಿಗೆ ನ್ಯಾಯವಿರುವ ಒಂದು ಲೋಕ ಅದಾಗಿರುವುದು.”
ಮಾನವ ಆಳಿಕೆಯು ಸಂತೋಷಕರ ಜೀವನಕ್ಕಾಗಿ ಈ ಆವಶ್ಯಕತೆಗಳನ್ನು ಎಂದಿಗೂ ನೆರವೇರಿಸಲು ಶಕ್ತರಿರಲಿಲ್ಲ. ಆದರೆ ದೇವರ ಹೊಸ ಲೋಕವು ಹಾಗೆ ಮಾಡಲು ಶಕ್ತವಾಗುವುದು. ಆ ಸಮಯದಲ್ಲಿ ಜನರು ಮಾಡಲಿರುವ ಲಾಭದಾಯಕ ಕೆಲಸದ ಕುರಿತು ಬೈಬಲ್ ವಾಗ್ದಾನಿಸುವುದು: “ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. . . . ನನ್ನ ಆಪ್ತರು ತಮ್ಮ ಕೈಕೆಲಸದ ಆದಾಯವನ್ನು ಪೂರಾ ಅನುಭವಿಸುವರು. ಅವರು ವ್ಯರ್ಥವಾಗಿ ದುಡಿಯರು.”—ಯೆಶಾಯ 65:21-23.
ಎಲ್ಲರಿಗೆ ಸ್ವಾತಂತ್ರ್ಯ ಮತ್ತು ನ್ಯಾಯದ ಕುರಿತೇನು? ಮಾನವ ಅಧಿಪತಿಗಳು ಎಷ್ಟು ಶ್ರದ್ಧಾಪೂರ್ವಕವಾಗಿ ಪ್ರಯತ್ನಿಸಿದರೂ, ಎಲ್ಲರಿಗಾಗಿ ಇವುಗಳನ್ನು ಒದಗಿಸುವಲ್ಲಿ ಅವರು ತಪ್ಪಿಹೋಗಿದ್ದಾರೆ. ಅನ್ಯಾಯ ಮತ್ತು ಪೀಡನೆ ಲೋಕವ್ಯಾಪಕವಾಗಿ ಪ್ರಭುತ್ವ ನಡಿಸುವುದನ್ನು ಮುಂದುವರಿಸಿದೆ. ಆದುದರಿಂದ ಮಾನವರು ಈ ಅಗತ್ಯವನ್ನು ಎಂದಿಗೂ ಈಡೇರಿಸಲು ಶಕ್ತರಾಗುವುದಿಲ್ಲ. ಆದರೆ ಸರ್ವಶಕ್ತ ದೇವರಿಗೆ ಇದು ಸಾಧ್ಯವಿದೆ. ಆತನ ನೇಮಿತ ಅರಸನು ಪುನರುತಿತ್ಥ ಯೇಸು ಕ್ರಿಸ್ತನಾಗಿದ್ದಾನೆ, ಮತ್ತು ಅವನ ಕುರಿತು ಯೆಹೋವನು ಹೇಳುವುದು: “ಇವನು ನನ್ನ ಇಷ್ಟನು, ನನ್ನ ಪ್ರಾಣ ಪ್ರಿಯನು. ಇವನು ಅನ್ಯಜನಗಳಲ್ಲಿಯೂ ಸದ್ಧರ್ಮವನ್ನು ಪ್ರಚುರಪಡಿಸುವನು.”—ಯೆಶಾಯ 42:1; ಮತ್ತಾಯ 12:18.
ಹೌದು, ದೇವರ ರಾಜ್ಯದ ಕೆಳಗೆ “ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದು” ಎಂದು ಬೈಬಲ್ ವಾಗ್ದಾನಿಸುತ್ತದೆ. (ರೋಮಾಪುರ 8:21) ಎಲ್ಲರಿಗೆ ಸ್ವಾತಂತ್ರ್ಯ ಮತ್ತು ನ್ಯಾಯ ಇರುವಾಗ ಅದು ಎಂತಹ ಒಂದು ಸಂತೋಷಕರ ಹೊಸ ಲೋಕವಾಗಿರುವುದು!
ಅವಕಾಶಗಳು ಮತ್ತು ಬಿಡುವು
ನಿಜವಾಗಿಯೂ ನೀವು ಬಯಸುವ ರೀತಿಯ ಲೋಕದಲ್ಲಿ, ಎಲ್ಲಾ ಪ್ರಜೆಗಳು ಅವರ ಕುಲ ಯಾ ಜನಾಂಗ ಏನೇ ಆಗಿರಲಿ ಸರಿಸಮಾನವಾದ ಅವಕಾಶಗಳಲ್ಲಿ ಆನಂದಿಸುವರು. ಆದುದರಿಂದ, ಡಾಕ್ಟರರಿಂದ ಪಟ್ಟಿಮಾಡಲಾದ ಆರನೆಯ ಕನಿಷ್ಠ ಆವಶ್ಯಕತೆಯು ಆಶ್ಚರ್ಯಕರವಾಗಿಲ್ಲ. “ಪ್ರತಿಯೊಬ್ಬ ಮಾನವ ಜೀವಿಗೆ ತನ್ನ ಸಾಮರ್ಥ್ಯಗಳನ್ನು ಮತ್ತು ಪ್ರಜ್ಞಾಶಕ್ತಿಗಳನ್ನು ಪೂರ್ತಿಯಾಗಿ ವಿಕಸಿಸಲು ಅವಕಾಶವಿರುವ ಮತ್ತು ಅವನ ಪ್ರಯತ್ನಗಳಿಗಾಗಿ ಅವಿಚಾರಾಭಿಪ್ರಾಯವಿಲ್ಲದೆ ಪ್ರತಿಫಲ ನೀಡಲಾಗುವ ಒಂದು ಲೋಕ ಅದಾಗಿರುವುದು.”
ಎಲ್ಲಾ ಜನರು ನ್ಯಾಯವಾದ ಉಪಚಾರದಲ್ಲಿ ಆನಂದಿಸುವ ಒಂದು ಲೋಕವನ್ನು ಸ್ಥಾಪಿಸಲು ಮಾನವರು ಎಂದಿಗೂ ಶಕ್ತರಾಗಿಲ್ಲ. ಜನಪ್ರಿಯವಲ್ಲದ ಅಲ್ಪಸಂಖ್ಯಾತರ ಅವಿಚಾರಾಭಿಪ್ರಾಯ ಮತ್ತು ಹಿಂಸೆಯು ಕೂಡ ಕಡಮೆಯಾಗದೆ ಮುಂದುವರಿದಿದೆ. ಆದರೂ, ದೇವರ ಹೊಸ ಲೋಕದ ಅರಸ ಯೇಸು ಕ್ರಿಸ್ತನು, “ದಾಕ್ಷಿಣ್ಯ ನೋಡುವವನಲ್ಲ, ಲಂಚ ತೆಗೆದುಕೊಳ್ಳುವವನಲ್ಲ”ವಾಗಿರುವ ತನ್ನ ತಂದೆ ಯೆಹೋವನ ಮಾದರಿಯನ್ನು ಅನುಕರಿಸುವನು. (ಧರ್ಮೋಪದೇಶಕಾಂಡ 10:17; ರೋಮಾಪುರ 2:11) ಬರುವಂತಹ ಹೊಸ ಲೋಕವನ್ನು ಇಷ್ಟು ಅದ್ಭುತಕರವಾಗಿ ಮಾಡುವ ವಿಷಯವೇನಾಗಿರುವುದೆಂದರೆ, ಯೆಹೋವ ದೇವರ ನಿಷ್ಪಕ್ಷಪಾತವನ್ನು ಅನುಸರಿಸುವಂತೆ ಎಲ್ಲಾ ಜನರಿಗೆ ಕಲಿಸಲಾಗುವುದು ಮಾತ್ರವಲ್ಲ ಅವರು ಅದನ್ನು ಆಚರಿಸುವರು.—ಯೆಶಾಯ 54:13.
ಅನೇಕ ವೇಳೆ ಸ್ವಲ್ಪ ಯಾ ಸ್ವಲ್ಪವೂ ಬಿಡುಗಡೆ ಇಲ್ಲದ ಗುಲಾಮ ಚಾಕರಿಗೆ ಜನರ ಜೀವಿತಗಳು ಸಮರ್ಪಿಸಲ್ಪಟ್ಟಿವೆ. ಆದುದರಿಂದ ಖಂಡಿತವಾಗಿ ನೀವು ಮುಂದಿನ ಕನಿಷ್ಠ ಆವಶ್ಯಕತೆಯೊಂದಿಗೆ ಒಪ್ಪಿಕೊಳ್ಳುವಿರಿ. ಏನೆಂದರೆ: “ಏಳನೆಯದು, ಎಲ್ಲಾ ಮನುಷ್ಯರಿಗೆ ಜೀವನದಲ್ಲಿ ಒಳ್ಳೆಯ ವಿಷಯಗಳೆಂದು ತಾವು ಲೆಕ್ಕಿಸುವ ಆ ವಿಷಯಗಳನ್ನು ಆನಂದಿಸಲು ಸಾಕಷ್ಟು ಬಿಡುವು ಇರುವ ಒಂದು ಲೋಕ ಅದಾಗಿರುವುದು.”
ಆರಾಮ ಮತ್ತು ವಿಶ್ರಾಂತಿಯ ಅವಧಿಗಳಿಗಾಗಿ ಮಾನವನ ಅಗತ್ಯವನ್ನು ಗುರುತಿಸುತ್ತಾ, ಆತನ ಪ್ರಾಚೀನ ನಿಯಮದಲ್ಲಿ ಯೆಹೋವ ದೇವರು ವಾರಕ್ಕೊಮ್ಮೆ ವಿರಾಮ ದಿನಕ್ಕಾಗಿ ಒದಗಿಸುವಿಕೆ ಮಾಡಿದ್ದನು. (ವಿಮೋಚನಕಾಂಡ 20:8-11) ಆದುದರಿಂದ, ಆತನ ಹೊಸ ಲೋಕದಲ್ಲಿ ವಿಶ್ರಾಂತಿ ಮತ್ತು ಮನೋರಂಜನೆಯ ಆರೋಗ್ಯಕರ ರೀತಿಗಳಿಗಾಗಿರುವ ನಮ್ಮ ಅಗತ್ಯವು ನೆರವೇರಲ್ಪಡುವಂತೆ ದೇವರು ನೋಡುವನೆಂದು ನಾವು ಖಚಿತವಾಗಿರಬಲ್ಲೆವು.
ನಿವಾಸಿಗಳ ಸ್ವಭಾವ
ಡಾಕ್ಟರರಿಂದ ಕೊಡಲ್ಪಟ್ಟ ಕೊನೆಯ ಆವಶ್ಯಕತೆಯು, “ನಾವೆಲ್ಲರೂ ಜೀವಿಸಲು ಬಯಸುವ ರೀತಿಯ ಲೋಕದಲ್ಲಿ” ನೆಲೆಸುವವರು ಹೊಂದಿರುವ ಗುಣಗಳನ್ನು ವರ್ಣಿಸುತ್ತದೆ. ಅವರು ಪಟ್ಟಿಮಾಡುವ ಗುಣಗಳನ್ನು ನೀವು ಕೂಡ ಪ್ರಾಮುಖ್ಯವೆಂದು ಪರಿಗಣಿಸುತ್ತೀರೊ ಎಂಬುದಾಗಿ ನೋಡಿರಿ. “ಎಂಟನೆಯದು, ಬುದ್ಧಿ ಮತ್ತು ಸೃಜನಶೀಲತೆ, ಮಾನ ಮತ್ತು ಸಮಗ್ರತೆ, ಪ್ರೀತಿ ಮತ್ತು ನಿಷ್ಠೆ, ಸ್ವ ಗೌರವ ಮತ್ತು ನಿಸ್ವಾರ್ಥತೆ, ಮತ್ತು ಅವನ ಜೊತೆ ಮನುಷ್ಯರಿಗಾಗಿ ಚಿಂತೆಯಂಥ, ಪ್ರಾಣಿಗಳಿಂದ ಮನುಷ್ಯನನ್ನು ವಿಂಗಡಿಸುವ ಗುಣಗಳ ಮೇಲೆ ಅತಿ ಹೆಚ್ಚಿನ ಮೌಲ್ಯವನ್ನು ಇರಿಸಲಾದ ಒಂದು ಲೋಕ ಅದಾಗಿರುವುದು.”
ಸಮಗ್ರತೆ, ಪ್ರೀತಿ, ನಿಷ್ಠೆ, ನಿಸ್ವಾರ್ಥತೆ, ಮತ್ತು ಜೊತೆ ಮಾನವರಿಗಾಗಿ ಚಿಂತೆಯಂಥ ನೈತಿಕ ಗುಣಗಳನ್ನು ಪ್ರತಿಯೊಬ್ಬರೂ ಪ್ರದರ್ಶಿಸುವ ಒಂದು ಲೋಕದಲ್ಲಿ ಜೀವಿಸಲು ನೀವು ಆನಂದಿಸುವುದಿಲ್ಲವೊ? ನಿಜವಾಗಿಯೂ ನಿಮಗೆ ಬೇಕಾದ ರೀತಿಯ ಲೋಕವು ಈ ರೀತಿಯದ್ದಾಗಿದೆ! ಯಾವ ಮಾನವ ಅರಸರಿಗೂ ಇದನ್ನು ಎಂದಿಗೂ ಒದಗಿಸಸಾಧ್ಯವಿಲ್ಲ. ಯೆಹೋವ ದೇವರು ಮಾತ್ರ ಇದನ್ನು ಮಾಡಬಲ್ಲನು. ಆತನು ಹಾಗೆ ಮಾಡುವನು ಏಕೆಂದರೆ ಆತನ ಹೊಸ ಲೋಕವು ಒಂದು ನೈಜವಲ್ಲದ, ಮರಣಾನಂತರ ಪ್ರತಿಫಲಕೊಡುವ ಸ್ವಪ್ನವಲ್ಲ.—ಕೀರ್ತನೆ 85:10, 11.
ಅದು ಯಾವಾಗ ಬರುವುದು?
ಹಿಂದಿನ ಲೇಖನದಲ್ಲಿ ಗಮನಿಸಿದಂತೆ, ಯೇಸು ಕ್ರಿಸ್ತನ ಒಬ್ಬ ನಿಕಟ ಸಂಗಾತಿಯು ಬರೆದದ್ದು: “ಆದರೆ ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವದು.” (2 ಪೇತ್ರ 3:13) ಯೇಸು ಗಮನಿಸಿದಂತೆ, “ಹೊಸ ಸೃಷ್ಟಿಯಲ್ಲಿ ಮನುಷ್ಯಕುಮಾರನು ತನ್ನ ಮಹಿಮೆಯ ಸಿಂಹಾಸನದ ಮೇಲೆ ಕೂತುಕೊಳ್ಳುವಾಗ,” ಈ ವಾಗ್ದಾನದ ನೆರವೇರಿಕೆಗಾಗಿ ಸಮಯವು ಅದಾಗಿರುವುದು.—ಮತ್ತಾಯ 19:28.
ಮೊದಲನೆಯ ಮಾನವ ಜೋಡಿಯಾದ ಆದಾಮ ಮತ್ತು ಹವ್ವರಿಗೆ, ಅವರನ್ನು ಇರಿಸಿದ ಪರದೈಸ ತೋಟವನ್ನು ವಿಸ್ತರಿಸಲು ದೇವರು ಮೂಲದಲ್ಲಿ ಆಜ್ಞಾಪಿಸಿದನು. ಅವರು ಮಕ್ಕಳನ್ನು ಪಡೆದು ಅವರೊಂದಿಗೆ ಇಡೀ ಭೂಮಿಯನ್ನು ಏದೆನ್ನ ಸುಂದರ ತೋಟವನ್ನಾಗಿ ಮಾಡಬೇಕೆಂದು ಆತನು ಬಯಸಿದನು. (ಆದಿಕಾಂಡ 1:26-28; 2:7-9, 15) ಆದಾಮ ಮತ್ತು ಹವ್ವರು ಈ ಉದ್ದೇಶವನ್ನು ನಿರ್ವಹಿಸಲು ತಪ್ಪಿಹೋದರೂ, ರಾಜ್ಯದಲ್ಲಿ ಕ್ರಿಸ್ತನು ಆಳುವುದರೊಂದಿಗೆ, ಹೊಸ ಸೃಷ್ಟಿಯಲ್ಲಿ ಭೂ ಪರದೈಸದ ಪುನಃಸ್ಥಾಪನೆಯಾಗುವುದು. ಅಂತಿಮವಾಗಿ, ಏದೆನಿನಂತಹ ಪರಿಸ್ಥಿತಿಗಳು ಭೂವ್ಯಾಪಕವಾಗಿ ವಿಸ್ತರಿಸುವವು. ಹೀಗೆ ನಮ್ಮ ಪ್ರೀತಿಯ ಶಾಂತಿಭರಿತ, ನೀತಿಯ ಲೋಕವನ್ನು ಹೊಂದಲು ಇದ್ದ ತನ್ನ ಮೂಲ ಉದ್ದೇಶವನ್ನು ಸೃಷ್ಟಿಕರ್ತನು ನೆರವೇರಿಸುವನು. ಆದರೆ ಅದು ಯಾವಾಗ ಬರುವುದು?
‘ಓಹ್, ಅದು ಎಂದಾದರೂ ಬರುವುದು ಆದರೆ ನಮ್ಮ ಜೀವಮಾನದಲ್ಲಲ್ಲಾ’ ಎಂಬುದಾಗಿ ಹೇಳುವ ಅನೇಕರಂತೆ ನೀವು ಯೋಚಿಸುತ್ತೀರೊ? ಆದರೂ, ನಿಮಗೆ ಹೇಗೆ ಗೊತ್ತು? ಅಭೂತಪೂರ್ವ ಲೋಕ ಸಂಕಟದ ನಮ್ಮ ಸಮಯವು ದೇವರ ಹೊಸ ಲೋಕವು ಹತ್ತಿರವಿದೆ ಎಂಬುದರ ಸೂಚನೆಯಾಗಿರಬಲದ್ಲೊ? ನಾವು ಹೇಗೆ ತಿಳಿಯಬಲ್ಲೆವು?
[ಪುಟ 7 ರಲ್ಲಿರುವ ಚಿತ್ರ]
ಹೊಸ ಲೋಕದಲ್ಲಿ, ಶಾಂತಿ, ಪರಿಪೂರ್ಣ ಆರೋಗ್ಯ, ಮತ್ತು ಸಮೃದ್ಧಿ ಇರುವುದು
[ಕೃಪೆ]
Cubs: Courtesy of Hartebeespoortdam Snake and Animal Park
[ಪುಟ 8 ರಲ್ಲಿರುವ ಚಿತ್ರ]
ಹೊಸ ಲೋಕದಲ್ಲಿ, ಜನರು ಉತ್ಪನ್ನಕಾರಕ ಕೆಲಸದಲ್ಲಿ ಆನಂದಿಸುವರು
[ಪುಟ 9 ರಲ್ಲಿರುವ ಚಿತ್ರ]
ಹೊಸ ಲೋಕದಲ್ಲಿ, ಸಾವಕಾಶವಾದ ಚಟುವಟಿಕೆಗಳಿಗಾಗಿ ಸಮಯವಿರುವುದು