ಯೆಹೋವನ ಸಾಕ್ಷಿಗಳು ಮತ್ತು ವೈದ್ಯಕೀಯ ವೃತ್ತಿಯವರು ಸಹಕರಿಸುತ್ತಾರೆ
ಇಸವಿ 1945ರಲ್ಲಿ, ರಕ್ತ ಪೂರಣವು ರಕ್ತದ ಅಶಾಸ್ತ್ರೀಯ ಉಪಯೋಗವಾಗಿತ್ತೆಂದು ಯೆಹೋವನ ಸಾಕ್ಷಿಗಳು ಗ್ರಹಿಸಿದರು. ಮೋಶೆಯ ಧರ್ಮಶಾಸ್ತ್ರದಲ್ಲಿ ಒಟ್ಟುಗೂಡಿಸಲ್ಪಟ್ಟ ಆ ನಿರ್ಬಂಧವು ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳೊಳಗೆ ಸಾಗಿಸಲ್ಪಟ್ಟಿತು. ಅ. ಕೃತ್ಯಗಳು 15:28, 29 ಹೇಳುವುದು: “ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ಹಾದರವನ್ನೂ ವಿಸರ್ಜಿಸುವದು ಅವಶ್ಯವಾಗಿದೆ. ಇದಕ್ಕೆ ಹೆಚ್ಚಿನ ಭಾರವನ್ನು ನಿಮ್ಮ ಮೇಲೆ ಹಾಕಬಾರದೆಂದು ಪವಿತ್ರಾತ್ಮನಿಗೂ ನಮಗೂ ವಿಹಿತವಾಗಿ ತೋರಿತು. ನೀವು ಎಚ್ಚರವಾಗಿದ್ದು ಇವುಗಳ ಗೊಡವೆಗೆ ಹೋಗದಿದ್ದರೆ ನಿಮಗೆ ಒಳ್ಳೇದಾಗುವದು. ಶುಭವಾಗಲಿ.” (ನೋಡಿ ಯಾಜಕಕಾಂಡ 17:10-12.) ರಕ್ತ ಪೂರಣಗಳನ್ನು ಸ್ವೀಕರಿಸಲು ಸಾಕ್ಷಿಗಳ ನಕಾರವು ವೈದ್ಯಕೀಯ ವೃತ್ತಿಯಲ್ಲಿ ಕೆಲವರೊಂದಿಗೆ ಅನೇಕ ಮುಕಾಬಿಲೆಗೆ ನಡೆಸಿತು.
ಹಾಸ್ಪಿಟಲ್ ಲಿಯೆಸಾನ್ ಕಮಿಟಿಗಳು
ರಕ್ತವನ್ನು ಸ್ವೀಕರಿಸಲು ತಮ್ಮ ನಿರಾಕರಣೆಯಲ್ಲಿ ಸಾಕ್ಷಿಗಳನ್ನು ಬೆಂಬಲಿಸಲು, ವೈದ್ಯರಲ್ಲಿ ಮತ್ತು ಆಸ್ಪತ್ರೆಗಳಲ್ಲಿರುವ ಅಪಾರ್ಥಗಳನ್ನು ತೆಗೆದು ಹಾಕಲು, ಮತ್ತು ವೈದ್ಯಕೀಯ ಸಂಸ್ಥೆಗಳು ಹಾಗೂ ಸಾಕ್ಷಿ ರೋಗಿಗಳ ನಡುವೆ ಹೆಚ್ಚಿನ ಸಹಕಾರ ಮನೋಭಾವವನ್ನು ಸೃಷ್ಟಿಸಲು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಮೂಲಕ ಹಾಸ್ಪಿಟಲ್ ಲಿಯೆಸಾನ್ ಕಮಿಟಿಗಳು ಸ್ಥಾಪಿತಗೊಂಡವು. ವೈದ್ಯರು ಮತ್ತು ಆಸ್ಪತ್ರೆಗಳೊಂದಿಗೆ ವಿವೇಚನೆಯಿಂದ ವ್ಯವಹರಿಸಲು ತರಬೇತಿ ಹೊಂದಿದ ಪ್ರೌಢ ಸಾಕ್ಷಿಗಳಿಂದ ರಚಿತವಾದ ಈ ಕಮಿಟಿಗಳು, ಮುಖಾಬಿಲೆಗಳನ್ನು ಶಾಂತವಾಗಿಸಿ, ಹೆಚ್ಚಿನ ಸಹಕಾರ ಮನೋಭಾವವನ್ನು ಸ್ಥಾಪಿಸಿದವು. ಇಸವಿ 1979ರಲ್ಲಿದ್ದ ಇಂತಹ ಕಮಿಟಿಗಳ ಸಣ್ಣಸಂಖ್ಯೆಯಿಂದ ಅವುಗಳ ಸಂಖ್ಯೆಯು ಈಗ 65 ದೇಶಗಳಲ್ಲಿ 850ಕ್ಕೆ ಬೆಳೆದಿದೆ. ಅದರ ಅರ್ಥವು, ಅವುಗಳ ಸಹಾಯಕಾರಿ ಸೇವೆಗಳು ಈಗ ಸುಮಾರು 35 ಲಕ್ಷ ಯೆಹೋವನ ಸಾಕ್ಷಿಗಳಿಗೆ ಲಭ್ಯವಿದೆ.
ರಕ್ತ ಪೂರಣಗಳನ್ನು ಆಶ್ರಯಿಸದೆ ಮಾಡಸಾಧ್ಯವಿರುವ ಎಲ್ಲಾ ವಿಷಯಗಳನ್ನು ವೈದ್ಯಕೀಯ ಸಾಹಿತ್ಯದಿಂದಲೇ ನೋಡುವಂತೆ ಸಹಾಯಮಾಡಲು, ಯೆಹೋವನ ಸಾಕ್ಷಿಗಳ ಸಭೆಗಳಲ್ಲಿನ 4,500ಕ್ಕಿಂತಲೂ ಹೆಚ್ಚಿನ ಹಿರಿಯರು ವೈದ್ಯರೊಂದಿಗೆ ಮಾತಾಡುವಂತೆ ತರಬೇತಿ ಹೊಂದಿದ್ದಾರೆ. ವಿಶೇಷವಾಗಿ ಅಗತ್ಯವಿರುವ ಕೆಲವು ಸಂದರ್ಭಗಳಲ್ಲಿ, ರಕ್ತವನ್ನು ಉಪಯೋಗಿಸದೆ ಸಾಕ್ಷಿಗಳ ಚಿಕಿತ್ಸೆ ಮಾಡಲು ವೈದ್ಯರಿಗೆ ಸಹಾಯವಾಗುವಂತೆ, ಸೂಕ್ತವಾದ ಲೇಖನಗಳು ನೇರವಾಗಿ ಆಸ್ಪತ್ರೆಗೆ ಫ್ಯಾಕ್ಸ್ ಮೂಲಕ ಕಳುಹಿಸಲಾಗುತ್ತವೆ. ಅಥವಾ ರಕ್ತರಹಿತವಾದ ಚಿಕಿತ್ಸೆ ಯಾ ಶಸ್ತ್ರ ಚಿಕಿತ್ಸೆಗಾಗಿ ಉಪಾಯಗಳನ್ನು ವಿಕಸಿಸಲು ಸಹಕಾರವನ್ನೀಯುವ ಬೇರೆ ವೈದ್ಯರೊಂದಿಗೆ ಸಮಾಲೋಚನೆಗಳನ್ನು ಕಮಿಟಿಗಳು ಏರ್ಪಡಿಸುತ್ತವೆ.
ಉದಾಹರಣೆಗೆ, ತೀವ್ರವಾದ ಅನೀಮ್ಯದಲ್ಲಿ ಪರಿಣಮಿಸುವ ರಕ್ತ ನಷ್ಟದ ಹಲವಾರು ವಿದ್ಯಮಾನಗಳಲ್ಲಿ, ಕೆಂಪು-ಕಣ ಎಣಿಕೆಯನ್ನು ಹೆಚ್ಚಿಸಲು ಪೂರಣವೊಂದರ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಲ್ಲ, ಅದೇ ವಿಷಯವನ್ನು ಮಾಡಲು ರಿಕಾಂಬಿನೆಂಟ್ ಇರಿತ್ರೋಪಾಯಟಿನ್ (ಇಪಿಒ)ಗೆ ಇರುವ ಕಾರ್ಯಕಾರಿತ್ವವನ್ನು ತೋರಿಸುವ ಲೇಖನಗಳನ್ನು ವೈದ್ಯಕೀಯ ಸಾಹಿತ್ಯದಿಂದ ಹಂಚಿಕೊಳ್ಳಲು ಹಾಸ್ಪಿಟಲ್ ಲಿಯೆಸಾನ್ ಕಮಿಟಿಯ ಸದಸ್ಯರಿಗೆ ಸಾಧ್ಯವಾಗಿದೆ. ಈ ಕೃತಕ ಹಾರ್ಮೋನ್, ನಮ್ಮ ಮೂತ್ರಪಿಂಡಗಳಲ್ಲಿರುವ ಸ್ವಾಭಾವಿಕ ಇರಿತ್ರೋಪಾಯಟಿನ್ನಂತೆ ಕೆಲಸಮಾಡುತ್ತದೆ ಮತ್ತು ಹೊಸ, ನವೀನ ಕೆಂಪು ಕಣಗಳನ್ನು ರಕ್ತ ಪ್ರವಾಹದಲ್ಲಿ ಕಳುಹಿಸುವಂತೆ ಎಲುಬಿನ ಮಜ್ಜೆಯನ್ನು ಪ್ರಚೋದಿಸುತ್ತದೆ.
ಬೇಕಾದ ಅಗತ್ಯವನ್ನು ಪೂರೈಸಲು ಇಪಿಒ ತ್ವರಿತವಾಗಿ ಕೆಲಸಮಾಡಲಾರದೆಂದು ಕೆಲವು ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ, ಆದರೆ ಫಲಿತಾಂಶಗಳನ್ನು ಅದು ಎಷ್ಟು ಶೀಘ್ರವಾಗಿ ಪಡೆಯುತ್ತದೆಂದು ಯೆಹೋವನ ಸಾಕ್ಷಿಗಳನ್ನು ಒಳಗೊಂಡಿದ್ದ ಅನೇಕ ವಿದ್ಯಮಾನಗಳು ದೃಷ್ಟಾಂತಿಸಿವೆ. ಒಂದು ಸಂದರ್ಭದಲ್ಲಿ, ಇಪಿಒ ಕೊಡಲಾದ ಅದೇ ದಿನದಂದು, ಹೊಸ ಕೆಂಪು ಕಣಗಳ ಎಣಿಕೆಯು ಆವಾಗಲೇ ಸಾಮಾನ್ಯ ಎಣಿಕೆಗಿಂತ ನಾಲ್ಕು ಪಟ್ಟು ಹೆಚ್ಚಾಗಿತ್ತು! ಇನ್ನೊಂದು ದಿನದಲ್ಲಿ ರೋಗಿಯು ಸ್ಥಿರವಾದನು, ಮತ್ತು ನಾಲ್ಕನೆಯ ದಿನದೊಳಗೆ ಕೆಂಪು ಕಣ ಎಣಿಕೆಯು ಮೇಲೇರಲು ಪ್ರಾರಂಭಿಸಿತು. ಇನ್ನು ಕೆಲವು ದಿನಗಳಲ್ಲಿ ಅದು ತ್ವರಿತವಾಗಿ ಏರುತಿತ್ತು. ರೋಗಿಯು ಬದುಕಿ ಉಳಿದನು. ಈ ರೀತಿಯಲ್ಲಿ ಈ ಹಾಸ್ಪಿಟಲ್ ಲಿಯೆಸಾನ್ ಕಮಿಟಿಗಳ ಚಟುವಟಿಕೆಗಳಿಂದ ವೈದ್ಯರೂ ರೋಗಿಗಳೂ ಪ್ರಯೋಜನ ಹೊಂದಿದರು.
ವಿರಳವಾದೊಂದು ಉಷ್ಣವಲಯ ರೋಗದ ಚಿಕಿತ್ಸೆ ಮಾಡಲಿಕ್ಕಾಗಿ ರಕ್ತವನ್ನು ಉಪಯೋಗಿಸದೆ ಸಾಕ್ಷಿ ರೋಗಿಯ ಜೀವವನ್ನು ರಕ್ಷಿಸಲು ತಮಗೆ ಸಾಧ್ಯವಿಲ್ಲವೆಂದು ಆಸ್ಟ್ರೇಲಿಯದಲ್ಲಿದ್ದ ವೈದ್ಯರು ಹೇಳಿದಾಗ, ರಕ್ತವಿಲ್ಲದ ವೈದ್ಯಕೀಯ ನಿರ್ವಹಣೆಯ ಬಗ್ಗೆ ಮಾಹಿತಿಯನ್ನು ಕಂಡುಹಿಡಿಯುವುದರಲ್ಲಿ ಅವರಿಗೆ ಕಮಿಟಿಯು ಕೊಡಬಹುದಾದ ಯಾವುದೇ ಸಹಾಯಕ್ಕಾಗಿ ಅವರು ಸ್ಥಳಿಕ ಹಾಸ್ಪಿಟಲ್ ಲಿಯೆಸಾನ್ ಕಮಿಟಿಯನ್ನು ಕೋರಿದರು. ಯೆಹೋವನ ಸಾಕ್ಷಿಗಳ ಆಸ್ಟ್ರೇಲಿಯ ಶಾಖಾ ಆಫೀಸಿಗೆ ಆ ಅಗತ್ಯದ ಕುರಿತು ತಿಳಿಸಲಾಯಿತು. ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಅಂತಾರಾಷ್ಟ್ರೀಯ ಮುಖ್ಯಕಾರ್ಯಾಲಯದ ಆಫೀಸುಗಳಲ್ಲಿನ ಹಾಸ್ಪಿಟಲ್ ಇನ್ಫರ್ಮೆಶನ್ ಸರ್ವಿಸೆಸ್ನೊಂದಿಗೆ ಅವರು ಸಂಪರ್ಕ ಬೆಳೆಸಿದರು. ಈ ಸರ್ವಿಸೆಸ್ ಒಂದು ದತ್ತಾಂಶ ಸಂಗ್ರಹವನ್ನು ಸಂಶೋಧಿಸಿತು. ಸಹಾಯಕರ ಲೇಖನಗಳನ್ನು ಆಸ್ಟ್ರೇಲಿಯಕ್ಕೆ ಫ್ಯಾಕ್ಸ್ ಮಾಡಲಾಯಿತು. ವೈದ್ಯರ ಆಫೀಸನ್ನು ಬಿಟ್ಟುಬಂದ ಕೇವಲ 11 ತಾಸುಗಳಲ್ಲಿ, ಆಸ್ಟ್ರೇಲಿಯದ ಹಾಸ್ಪಿಟಲ್ ಲಿಯೆಸಾನ್ ಕಮಿಟಿಯ ಸದಸ್ಯನು, ಬೇಕಾಗಿದ್ದ ಲೇಖನಗಳೊಂದಿಗೆ ಹಿಂದಿರುಗಿದ್ದನು. ಇವು ಪರಿಣಾಮಕಾರಿಯಾಗಿ ಪರಿಣಮಿಸಿದವು, ಮತ್ತು ರೋಗಿಯು ಗುಣಹೊಂದಿದನು. ಫ್ಯಾಕ್ಸ್ ಮಾಡಲಾದ ವೈದ್ಯಕೀಯ ವಿಷಯವನ್ನು ನ್ಯೂ ಯಾರ್ಕ್ನಿಂದ ನೇಪಾಲದಷ್ಟು ದೂರವಿರುವ ಸ್ಥಳಗಳಿಗೆ ಕಳುಹಿಸಲಾಗಿದೆ.
ಗುಣಮಟ್ಟ ಸಂಶೋಧನೆ ಮತ್ತು ನೆರವು
ಯೆಹೋವನ ಸಾಕ್ಷಿಗಳಿಂದ ವೈದ್ಯಕೀಯ ಸಾಹಿತ್ಯದಲ್ಲಿ ಮಾಡಲಾದ ಸಂಶೋಧನೆಯ ಗುಣಮಟ್ಟವು ಯುಕ್ತವಾಗಿಯೂ ಸದ್ಯೋಚಿತವಾಗಿಯೂ ಇದೆ. ಅಮೆರಿಕದ ಆರಿಗನ್ನ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸಾ ಸೇವೆಗಳ ಸಹನಿರ್ದೇಶಕಿಯಾಗಿರುವ ಒಬ್ಬಾಕೆ ರೆಜಿಸರ್ಡ್ಟ್ ನರ್ಸ್, ಶಸ್ತ್ರಕ್ರಿಯಾ ಕೋಣೆಯ ನಿರ್ವಾಹಕರಿಗಾಗಿದ್ದ ವೈದ್ಯಕೀಯ ಪ್ರಕಾಶನವೊಂದರ ಲೇಖನದಲ್ಲಿ ಹೇಳಿದ್ದು: “ಯೆಹೋವನ ಸಾಕ್ಷಿ[ಗಳು] . . . ನಮಗಿಂತ ಹೆಚ್ಚು ಪ್ರಗತಿಪರರಾಗಿದ್ದಾರೆ. ರಕ್ತ ಮತ್ತು ರಕ್ತದ ಉತ್ಪಾದನೆಗಳಿಗೆ ಬದಲಿಯ ಕುರಿತು ಅವರು ಅತ್ಯಂತ ಜ್ಞಾನವುಳ್ಳವರಾಗಿದ್ದಾರೆ ಮತ್ತು ಅನೇಕ ವೇಳೆ ನಾವು ಅದರ ಕುರಿತು ಕೇಳುವ ಮೊದಲೇ ಅವರು ನಮಗೆ ಸಾಹಿತ್ಯವನ್ನು ಒದಗಿಸುತ್ತಾರೆ.”—ಓಆರ್ ಮ್ಯಾನೆಜರ್, ಜನವರಿ 1993, ಪುಟ 12.
ಅನುರೂಪವಾದ ರಕ್ತವನ್ನು ಉಪಯೋಗಿಸದೆ ಚಿಕಿತ್ಸೆ ಮಾಡಬಲ್ಲ ಕೆಲವು ಬಹಳ ಪ್ರಖ್ಯಾತ ವೈದ್ಯರು ಮತ್ತು ವೈದ್ಯಕೀಯ ಕೇಂದ್ರಗಳು, ತಮ್ಮ ಮಾರ್ಗಗಳ ಮತ್ತು ಕಾರ್ಯವಿಧಾನಗಳ ಕುರಿತು ಸಮಾಲೋಚನೆಗಳಿಗಾಗಿ ತಮ್ಮನ್ನು ಲಭ್ಯವಾಗಿಸಿಕೊಂಡಿದ್ದಾರೆ. ಲೂಕೀಮಿಯಾ ಮತ್ತು ವಿಭಿನ್ನ ರೀತಿಯ ಶಸ್ತ್ರಕ್ರಿಯೆಗಳ ಯಶಸ್ವಿಕರ ಚಿಕಿತ್ಸೆಯ ಘಟನೆಗಳಲ್ಲಿ ಕಂಡಂತೆ, ಈ ಅಗತ್ಯಕ್ಕೆ ಅವರ ಉದಾರ ಪ್ರತಿಕ್ರಿಯೆಯು ಜೀವಗಳನ್ನು ರಕ್ಷಿಸುವಲ್ಲಿ ನೆರವು ನೀಡಿದೆ. ಈ ವೈದ್ಯಕೀಯ ಸಮಾಲೋಚನೆಗಳು ಅನೇಕ ವೇಳೆ ಅಂತಾರಾಷ್ಟ್ರೀಯ ದೂರವಾಣಿ ಕರೆಗಳ ಮೂಲಕ ನಡೆಸಲಾಗುತ್ತಿದ್ದವು.
ನಂಬಿಕೆಗೆ ಸವಾಲೊಡ್ಡುವ ವೈದ್ಯಕೀಯ ಸನ್ನಿವೇಶವೊಂದನ್ನು ಒಬ್ಬ ರೋಗಿಯು ಎದುರಿಸುವಾಗ, ಅವನನ್ನು ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ, ದೇಶದ ಒಂದು ಭಾಗದಿಂದ ಇನ್ನೊಂದಕ್ಕೆ, ಮತ್ತು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಕೂಡ ಸ್ಥಳಾಂತರಿಸಲಿಕ್ಕಿರುವ ಏರ್ಪಾಡು, ಅಗತ್ಯವಿರುವವರಿಗೆ ನೆರವು ನೀಡಲು ಯೆಹೋವನ ಸಾಕ್ಷಿಗಳು ಎಷ್ಟರ ಮಟ್ಟಿಗೆ ಹೋಗಿದ್ದಾರೆ ಎಂಬುದನ್ನು ಸಹ ಸೂಚಿಸುತ್ತದೆ. ಕೆಲವು ಉದಾಹರಣೆಗಳು: ಒಬ್ಬಾಕೆ ವಯಸ್ಕ ರೋಗಿಯು ಸುರಿನಾಮ್ನಿಂದ ಪೋರ್ಟೊ ರಿಕೊಗೆ ವಿಮಾನದಲ್ಲಿ ತರಲ್ಪಟ್ಟಳು; ಇನ್ನೊಬ್ಬ ರೋಗಿಯು ಸಮೋವದಿಂದ ಹವಾಯಿಗೆ ತರಲ್ಪಟ್ಟನು; ಶಿಶುವೊಂದು ಆಸ್ಟ್ರಿಯದಿಂದ ಅಮೆರಿಕದ ಫ್ಲೋರಿಡಕ್ಕೆ ತರಲ್ಪಟ್ಟಿತು.
ಹೆಚ್ಚೆಚ್ಚು ವೈದ್ಯರು ಸಹಕರಿಸುತ್ತಿದ್ದಾರೆ
ಈ ವಿಷಯದಲ್ಲಿ ಅವರೊಂದಿಗೆ ಸಹಕರಿಸಲು ಮನಸ್ಸುಳ್ಳ ವೈದ್ಯರ ಬೆಳೆಯುತ್ತಿರುವ ಸಂಖ್ಯೆ—ಐದು ವರ್ಷಗಳ ಹಿಂದೆ ಸುಮಾರು 5,000ದಿಂದ ಈಗ 65 ದೇಶಗಳಲ್ಲಿ 30,000ಕ್ಕಿಂತಲೂ ಅಧಿಕ—ಯಿಂದ ಕೂಡ ಯೆಹೋವನ ಸಾಕ್ಷಿಗಳ ಸನ್ನಿವೇಶದಲ್ಲಿ ಅಭಿವೃದ್ಧಿಯನ್ನು ಕಂಡುಕೊಳ್ಳಸಾಧ್ಯವಿದೆ. ಸಮರ್ಥ ವೈದ್ಯರ ಆ ಸಂಖ್ಯೆಯು ಇನ್ನೊಂದು ಅನುಕೂಲವಾದ ಬೆಳವಣಿಗೆಯನ್ನು—ವಿಭಿನ್ನ ದೇಶಗಳಲ್ಲಿ 30ಕ್ಕಿಂತಲೂ ಅಧಿಕ ರಕ್ತರಹಿತ ವೈದ್ಯಕೀಯ ಮತ್ತು ಶಸ್ತ್ರಕ್ರಿಯಾ ಕೇಂದ್ರಗಳ ರಚನೆಯನ್ನು—ಸಾಧ್ಯಗೊಳಿಸಿದೆ.
ಹೀಗೆ, ಇಂದಿನ ದಿನಗಳಲ್ಲಿ, ಕಡಿಮೆ ಪಕ್ಷ ಉತ್ತರ ಅಮೆರಿಕದಲ್ಲಾದರೂ, ಒಬ್ಬ ವಯಸ್ಕನ ಮೇಲೆ ರಕ್ತ ಪೂರಣವೊಂದನ್ನು ಒತ್ತಾಯಿಸುವ ಪ್ರಯತ್ನಗಳ ಬಗ್ಗೆ ವಿರಳವಾಗಿ ಕೇಳುತ್ತೇವೆ, ಮತ್ತು ಬೇರೆ ಅನೇಕ ದೇಶಗಳು ಅದೇ ಮಟ್ಟಕ್ಕೆ ಬೆಳೆಯುತ್ತಿವೆ. ಹೆಚ್ಚಿನ ಸಮಸ್ಯೆಗಳು ಈಗ ಹೊಸದಾಗಿ ಜನಿಸಿದ ಶಿಶುಗಳೊಂದಿಗೆ ಮತ್ತು ವಿಶೇಷವಾಗಿ ಅಪಕ್ವ ಜನನಗಳೊಂದಿಗೆ ಜೊತೆಗೂಡಿವೆ. ಸಾಧಾರಣವಾಗಿ ಕಾರ್ಯಮಾಡದ ಶ್ವಾಸಕೋಶ ಮತ್ತು ಮೂತ್ರಪಿಂಡಗಳಂತಹ ಸರಿಯಾಗಿ ವಿಕಸಿಸಿದ ಅಂಗಗಳೊಂದಿಗೆ ಜೊತೆಗೂಡಿರುವ ಅನೇಕ ಸಮಸ್ಯೆಗಳೊಂದಿಗೆ ಈ ಅಪಕ್ವ ಶಿಶುಗಳು ಹುಟ್ಟುತ್ತವೆ. ಆದರೆ ರಕ್ತ ಪೂರಣಗಳಿಲ್ಲದೆ ಈ ಪರಿಸ್ಥಿತಿಗಳ ಚಿಕಿತ್ಸೆ ಮಾಡಲು ವೈದ್ಯರು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಉದಾಹರಣೆಗೆ, ಕಷ್ಟಕರ ಉಸಿರಾಟಕ್ಕೆ ನೆಮ್ಮದಿ ತರಲು ಕೃತಕ ಮಿಶ್ರಣವೊಂದು ಲಭ್ಯವಿದೆ. ಅಪಕ್ವತೆಯ ಅನೀಮ್ಯದೊಂದಿಗೆ ವ್ಯವಹರಿಸಲು ಇಪಿಒ ಉಪಯೋಗವು ವ್ಯಾಪಕವಾಗಿ ಸ್ವೀಕರಿಸಲ್ಪಡುತ್ತಿದೆ.
ವೈದ್ಯಕೀಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸಹಾಯ
ರಕ್ತ ಪೂರಣಗಳಿಲ್ಲದೆ ಯೆಹೋವನ ಸಾಕ್ಷಿಗಳ ಮಕ್ಕಳ ಚಿಕಿತ್ಸೆಯನ್ನು ಮಾಡಲು, ಶಿಶುವೈದ್ಯ ಮತ್ತು ನವಶಿಶು ವೈದ್ಯರುಗಳಿಗೆ ಸಹಾಯ ಆಗುವಂತೆ, ನವಶಿಶುವಿನ ಸಮಸ್ಯೆಗಳ ಸಮೂಹಕ್ಕೆ ರಕ್ತವಿಲ್ಲದೆ ಏನನ್ನು ಮಾಡಸಾಧ್ಯವಿದೆ ಎಂಬುದನ್ನು ವೈದ್ಯಕೀಯ ಸಾಹಿತ್ಯದಿಂದ ಪ್ರದರ್ಶಿಸುವ 55 ಲೇಖನಗಳ ಮೂರು-ವಿಷಯಸೂಚಿ ಸಂಪುಟವನ್ನು ಹಾಸ್ಪಿಟಲ್ ಇನ್ಫರ್ಮೆಶನ್ ಸರ್ವಿಸೆಸ್ ತಯಾರಿಸಿದೆ.
ನ್ಯಾಯಾಧೀಶರನ್ನು, ಸಮಾಜ ಸೇವಕರನ್ನು, ಮಕ್ಕಳ ಆಸ್ಪತ್ರೆಗಳನ್ನು, ನವಶಿಶುವೈದ್ಯರನ್ನು, ಮತ್ತು ಶಿಶುವೈದ್ಯರನ್ನು ಲಭ್ಯವಿರುವ ರಕ್ತರಹಿತ ವೈದ್ಯಕೀಯ ಬದಲಿಗಳ ಮಾಹಿತಿಯೊಂದಿಗೆ ತಲಪಲು, ಕುಟುಂಬ ಆರೈಕೆ ಮತ್ತು ಯೆಹೋವನ ಸಾಕ್ಷಿಗಳಿಗಾಗಿ ವೈದ್ಯಕೀಯ ನಿರ್ವಹಣೆ (ಫ್ಯಾಮಿಲಿ ಕೇರ್ ಆ್ಯಂಡ್ ಮೆಡಿಕಲ್ ಮ್ಯಾನೇಜ್ಮೆಂಟ್ ಫಾರ್ ಜೆಹೋವಸ್ ವಿಟ್ನೆಸಸ್) ಎಂಬ 260 ಪುಟಗಳ ಸಂಪುಟವನ್ನು ನಿರ್ದಿಷ್ಟವಾಗಿ ಈ ವೈದ್ಯಕೀಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗಾಗಿಯೇ ಯೆಹೋವನ ಸಾಕ್ಷಿಗಳು ತಯಾರಿಸಿದ್ದಾರೆ.a ಅದನ್ನು ಸದ್ಯೋಚಿತವಾಗಿ ಇಡಲು ಸಾಧ್ಯವಾಗುವಂತೆ ಅದು ಕಟ್ಟು ಕಳಚಿದ ಕೈಪಿಡಿಯಾಗಿದೆ. ಯೆಹೋವನ ಸಾಕ್ಷಿಗಳೊಳಗೆ ಕುಟುಂಬ ಜೀವಿತದ ಕುರಿತು ಕೊಂಚ ಅಪಾರ್ಥ ಇರುವುದರಿಂದ, ಬೈಬಲ್ ಬೋಧನೆಯಿಂದ ಉಂಟಾಗುವ ಜೀವನ ಶೈಲಿಯಿಂದ ತಯಾರಾಗುವ ನಿಷ್ಕರ್ಷೆಯ ಪ್ರಯೋಜನಾತ್ಮಕ, ಆರೈಕೆಯ ವಾತಾವರಣದಲ್ಲಿ ತಮ್ಮ ಮಕ್ಕಳಿಗಾಗಿ ಹೆತ್ತವರಿಗೆ ಇರುವ ಪ್ರೀತಿಯನ್ನು ಕೂಡ ಅದು ಸೃಷ್ಟಗೊಳಿಸುತ್ತದೆ.
ಆ ಪ್ರಕಾಶನವನ್ನು ಹೇಗೆ ಅಂಗೀಕರಿಸಲಾಗುತ್ತಿದೆ? ಅದರ ಒಳವಿಷಯವನ್ನು ಪರಿಶೀಲಿಸಿದ ತರುವಾಯ, ತನ್ನ ಸಿಬ್ಬಂದಿಗಳು ಅದನ್ನು ಮಾನಸಿಕವಾಗಿ ಜೀರ್ಣಿಸಿ ಉಪಯೋಗಿಸುವರೆಂದು ತಾನು ನಿರೀಕ್ಷಿಸುವೆನು ಎಂಬುದಾಗಿ ಅಮೆರಿಕದ ಪೆನ್ಸಿಲೇನ್ವಿಯದಲ್ಲಿರುವ ಮಕ್ಕಳ ಆಸ್ಪತ್ರೆಯೊಂದರ ಉಪಾಧ್ಯಕ್ಷನು ಹೇಳಿದನು. ಅವನು ಕೂಡಿಸಿದ್ದು: “ಸಿಬ್ಬಂದಿ ವರ್ಗದೊಳಗೆ ಸುತ್ತು ತಿರುಗಿ, ಅದನ್ನು ಅಭ್ಯಾಸಿಸಲಾಗಿತ್ತು ಎಂಬ ಸೂಚನೆಗಳೊಂದಿಗೆ ಪ್ರಕಾಶನವು ನನಗೆ ಹಿಂದಿರುಗದಿದ್ದರೆ, ಕಾರಣವೇನೆಂದು ನಾನು ತಿಳಿದುಕೊಳ್ಳಲು ಬಯಸುವೆ!” ರಕ್ತವನ್ನು ಉಪಯೋಗಿಸುವ ಮುಂಚೆ ರಕ್ತರಹಿತ ಎಲ್ಲಾ ಬದಲಿಗಳನ್ನು ವೈದ್ಯರು ಉಪಯೋಗಿಸಿಬಿಡುವಂತೆ ಆವಶ್ಯಪಡಿಸಲು, ತಮ್ಮ ನ್ಯಾಯಾಲಯದ ಆಜ್ಞೆಗಳನ್ನು ಕೆಲವು ನ್ಯಾಯಾಧೀಶರು ಈಗಾಗಲೇ ತಿದ್ದುಪಡಿ ಮಾಡಿದ್ದಾರೆ. ಮಕ್ಕಳಿಗೆ ರಕ್ತವಿಲ್ಲದೆಯೆ ಚಿಕಿತ್ಸೆ ಮಾಡಲಾಗಿದೆ ಮತ್ತು ಅವರು ಶಾರೀರಿಕವಾಗಿ ಗುಣಹೊಂದಿ ಮನೆಗೆ ಹೋಗಿದ್ದಾರೆ.
ಪ್ರತಿನಿಧಿರೂಪವಾದೊಂದು ಪ್ರತಿಕ್ರಿಯೆಯು, ಅಮೆರಿಕದ ಒಹೈಒನಲ್ಲಿ, ಮಕ್ಕಳ ವಿಷಯಗಳ ಒಬ್ಬ ನ್ಯಾಯಾಧೀಶನದ್ದಾಗಿತ್ತು. ಕುಟುಂಬ ಆರೈಕೆ ಎಂಬ ಸಂಪುಟದಿಂದ ಅವನು ಎಷ್ಟು ಪ್ರಭಾವಿತನಾದನೆಂದರೆ, ತನ್ನ ಸಹೋದ್ಯೋಗಿಗಳಿಗಾಗಿ ಹೆಚ್ಚಿನ ಏಳು ಪ್ರತಿಗಳನ್ನು ಅವನು ಆರ್ಡರ್ ಮಾಡಿದನು. ವೈದ್ಯರ ಚಿಂತೆಗಳನ್ನು ಹೆತ್ತವರ ಹಕ್ಕುಗಳೊಂದಿಗೆ ಸರಿದೂಗಿಸಲು ಈಗ ಅವನು ತನ್ನ ನ್ಯಾಯಾಲಯದ ಆಜ್ಞೆಗಳನ್ನು ಬದಲಾಯಿಸುತ್ತಾನೆ, ಮತ್ತು ಇದನ್ನು ಎರಡು ವಿಧಗಳಲ್ಲಿ ಸಾಧಿಸುತ್ತಾನೆ. (1) ರಕ್ತವನ್ನು ಉಪಯೋಗಿಸುವ ಮೊದಲು ಎಲ್ಲಾ ಬದಲಿ ಚಿಕಿತ್ಸೆಯನ್ನು ವೈದ್ಯರು ಪ್ರಥಮವಾಗಿ ತೀರಿಸಬೇಕು; ಮತ್ತು (2) ಅವರು ಉಪಯೋಗಿಸಲಿರುವ ರಕ್ತವು ಪರೀಕ್ಷಿಸಲ್ಪಟ್ಟಿದೆ ಮತ್ತು ಏಯ್ಡ್ಸ್ ಹಾಗೂ ಹೆಪಟೈಟಿಸ್ನಿಂದ ಮುಕ್ತವಾಗಿದೆ ಎಂದು ವೈದ್ಯರು ತನಗೆ ಮಾತು ಕೊಡಬೇಕು ಎಂದು ತನ್ನ ಆಜ್ಞೆಯಲ್ಲಿ ಅವನು ವಿವರಿಸುತ್ತಾನೆ. ಅವುಗಳನ್ನು ಬದಲಾಯಿಸಲು ಆರಂಭಿಸಿದಂದಿನಿಂದ ಪ್ರಕಟಿಸಿದ ಮೂರು ಆಜ್ಞೆಗಳಲ್ಲಿ, ಮೂವರು ಮಕ್ಕಳೂ ರಕ್ತ ಪೂರಣವಿಲ್ಲದೆ ಯಶಸ್ವಿಯಾಗಿ ಚಿಕಿತ್ಸೆ ಹೊಂದಿದರು.
ಬಾಸ್ಟನ್ ಕಾಲೇಜ್ ಲಾ ಸ್ಕೂಲ್ನಲ್ಲಿ ಕಾನೂನಿನ ಪ್ರೊಫೆಸರ್ರಾದ, ಡಾ. ಚಾರ್ಲ್ಸ್ ಎಚ್. ಬ್ಯಾರನ್, ಕಳೆದ ವರ್ಷ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಸದಸ್ಯರ ಒಂದು ಕೂಟದಲ್ಲಿ ಪ್ರಬಂಧವೊಂದನ್ನು ಮಂಡಿಸಿದರು. ಅವರ ವಿಷಯವು, “ರಕ್ತ, ಪಾಪ ಮತ್ತು ಮರಣ: ಯೆಹೋವನ ಸಾಕ್ಷಿಗಳು ಮತ್ತು ಅಮೆರಿಕನ್ ರೋಗಿಗಳ ಹಕ್ಕುಗಳ ಚಳುವಳಿ.” ಪ್ರಬಂಧದಲ್ಲಿ, ಸಾಕ್ಷಿಗಳ ಹಾಸ್ಪಿಟಲ್ ಲಿಯೆಸಾನ್ ಕಮಿಟಿಗಳ ಕೆಲಸದ ಕುರಿತು ಮುಂದಿನ ಪ್ಯಾರಗ್ರಾಫ್ ಹೇಳಿದ್ದು:
“ಹೆಚ್ಚಿನ ರುಜುವಾತಿನ ಬೆಳಕಿನಲ್ಲಿ ಅಮೆರಿಕನ್ ಔಷಧಿ ಅದರ ಕೆಲವೊಂದು ನಂಬಿಕೆಗಳನ್ನು ಮತ್ತೆ ಪರಿಗಣಿಸುವಂತೆ ಮಾಡುವುದರಲ್ಲಿ ಕೂಡ ಅವರು ಸಫಲರಾಗಿದ್ದಾರೆ. ಈ ಕಾರ್ಯವಿಧಾನದಲ್ಲಿ, ಇಡೀ ಅಮೆರಿಕನ್ ಸಮಾಜವು ಪ್ರಯೋಜನ ಪಡೆದಿದೆ. ಸಾಕ್ಷಿಗಳ ಹಾಸ್ಪಿಟಲ್ ಲಿಯೆಸಾನ್ ಕಮಿಟಿಗಳ ಕೆಲಸದಿಂದಾಗಿ, ಯೆಹೋವನ ಸಾಕ್ಷಿಗಳಿಗೆ ಮಾತ್ರವಲ್ಲ, ಆದರೆ ಸಾಮಾನ್ಯವಾಗಿ ರೋಗಿಗಳಿಗೆ, ಅನಾವಶ್ಯಕವಾದ ರಕ್ತ ಪೂರಣಗಳನ್ನು ಕೊಡುವ ಸಾಧ್ಯತೆಗಳು ಇಂದು ಕಡಿಮೆಯಾಗಿವೆ. ರೋಗಿಗಳ ಹಕ್ಕುಗಳ ಆದ್ಯಂತ ಚಳುವಳಿಯ ಒಂದು ಭಾಗದಂತೆ ಸಾಕ್ಷಿಗಳಿಂದ ಮಾಡಲಾದ ಕೆಲಸದಿಂದಾಗಿ ರೋಗಿಗಳು ಆರೋಗ್ಯ ಆರೈಕೆಯ ನಿರ್ಣಯಗಳ ಸಂಪೂರ್ಣ ವ್ಯಾಪ್ತಿಯ ಮೇಲೆ ಹೆಚ್ಚಿನ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ತಮ್ಮ ಧಾರ್ಮಿಕ ನಂಬಿಕೆಗಳಿಗೆ ಅಸಂಗತವಾದ ಕ್ರಿಯೆಗೈಯಲು ಅವರನ್ನು ಒತ್ತಾಯಿಸುವ ಪ್ರಯತ್ನಗಳಿಗೆ ಸಾಕ್ಷಿಗಳ ಸಮರ್ಪಿತ ಪ್ರತಿರೋಧದಿಂದ, ಸ್ವಾತಂತ್ರ್ಯದ ಮತ್ತು ಪ್ರತ್ಯೇಕವಾಗಿ ಧಾರ್ಮಿಕ ಸ್ವಾತಂತ್ರ್ಯದ ಸಾಮಾನ್ಯ ಉದ್ದೇಶಗಳು ಪ್ರಗತಿ ಹೊಂದಿವೆ.”
ಹಾಸ್ಪಿಟಲ್ ಲಿಯೆಸಾನ್ ಕಮಿಟಿಗಳಿಂದ ಮಾಡಲಾದ ಈ ಎಲ್ಲಾ ಚಟುವಟಿಕೆಯು ದೇವರ ರಾಜ್ಯದ ಸುವಾರ್ತೆಯನ್ನು ನೇರವಾಗಿ ಸಾರುತ್ತಾ ಇರಲಾರದು, ಆದರೆ ಪ್ರಥಮ ಶತಮಾನದ ಆಡಳಿತ ಮಂಡಲಿಯು, ನಮ್ಮ ಪವಿತ್ರ ಸೇವೆಯ “ಅವಶ್ಯವಾದ ವಿಷಯಗಳಲ್ಲಿ” ಒಂದೆಂದು ಕರೆದ ನಮ್ಮ ಆರಾಧನೆಗೆ ಮಾಡಲಾದ ನೇರ ಸವಾಲನ್ನು ಅದು ಖಂಡಿತವಾಗಿ ಉತ್ತರಿಸುತ್ತಿದೆ. (ಅ. ಕೃತ್ಯಗಳು 15:28, 29) ಆಶ್ಚರ್ಯಕರವಾಗಿ, ಸಂಸರ್ಗ ಮಾಡಲು ನಮ್ಮ ಸುದೃಢ ಆದರೂ ಗೌರವವುಳ್ಳ ಪ್ರಯತ್ನವು ರಾಜ್ಯದ ಸಂದೇಶಕ್ಕೆ ಕೆಲವು ವೈದ್ಯಕೀಯ ಕಸಬಿನವರು ಪ್ರತಿಕ್ರಿಯಿಸುವಂತೆ ಮಾರ್ಗವನ್ನು ತೆರೆದಿದೆ. ಕಮಿಟಿ ಚಟುವಟಿಕೆಯ ಮುಖಾಂತರ ಅವರು ಭೇಟಿಯಾದ ವೈದ್ಯರೊಂದಿಗೆ ಹಾಸ್ಪಿಟಲ್ ಲಿಯೆಸಾನ್ ಕಮಿಟಿಗಳ ಹಲವಾರು ಸದಸ್ಯರು ಬೈಬಲ್ ಅಧ್ಯಯನಗಳನ್ನು ಪ್ರಾರಂಭಿಸಿದ್ದಾರೆ, ಮತ್ತು ಅಂತಹ ಇಬ್ಬರು ವೈದ್ಯರು ಇತ್ತೀಚೆಗೆ ದೀಕ್ಷಾಸ್ನಾನ ಪಡೆದರು.
ಹೀಗೆ ಹಾಸ್ಪಿಟಲ್ ಲಿಯೆಸಾನ್ ಕಮಿಟಿಯ ಏರ್ಪಾಡಿನ ಸಹಾಯದಿಂದ, ತಮ್ಮ ಸಮಗ್ರತೆಯ ಒಪ್ಪಂದ ಮಾಡಿಕೊಳ್ಳದೆ ಬೇಕಾದ ವೈದ್ಯಕೀಯ ಆರೈಕೆಯನ್ನು ಇನ್ನೂ ಪಡೆಯುತ್ತಾ, ರಕ್ತವನ್ನು ವಿಸರ್ಜಿಸುವುದರ ಕುರಿತು ಯೆಹೋವನ ಪರಿಪೂರ್ಣ ನಿಯಮಕ್ಕೆ ವಿಧೇಯರಾಗಲು ಯೆಹೋವನ ಸಾಕ್ಷಿಗಳು ಸಹಾಯಿಸಲ್ಪಡುತ್ತಿದ್ದಾರೆ. (ಕೀರ್ತನೆ 19:7) ಒಮ್ಮೆ ಅಸ್ತಿತ್ವದಲ್ಲಿದ್ದ ಅಂತರವನ್ನು ಕಡಿಮೆ ಮಾಡುವುದರಲ್ಲಿ ಖಂಡಿತವಾಗಿಯೂ ಸತತವಾದ ಒಳ್ಳೆಯ ಸಫಲತೆ ಇದೆ. ಲಭ್ಯವಿರುವ ರಕ್ತರಹಿತ ವೈದ್ಯಕೀಯ ನಿರ್ವಹಣೆಯನ್ನು ತಾವು ಹೇಗೆ ಒದಗಿಸಬಲ್ಲರು ಎಂಬುದರ ಕುರಿತು ವೈದ್ಯರಿಗೆ ಮತ್ತು ಆಸ್ಪತ್ರೆಗಳಿಗೆ ಈಗ ಹೆಚ್ಚು ಉತ್ತಮವಾದ ಮಾಹಿತಿ ಇದೆ. ರೋಗಿಗಳು, ಸಂಬಂಧಿಕರು, ಧಾರ್ಮಿಕ ಸಹವಾಸಿಗಳು, ಮತ್ತು ಆಸ್ಪತ್ರೆಯ ಸಿಬ್ಬಂದಿಯವರು, ಎಲ್ಲರೂ ಬಯಸುವಂಥದ್ದನ್ನು—ರೋಗಿಯ ಆರೋಗ್ಯಕರ ಪುನರುದ್ಧಾರವನ್ನು—ಅದು ಉಂಟುಮಾಡುತ್ತದೆ.—ವಾಚ್ ಟವರ್ ಸೊಸೈಟಿಯ ಲೋಕ ಮುಖ್ಯಕಾರ್ಯಾಲಯದಲ್ಲಿನ ಹಾಸ್ಪಿಟಲ್ ಇನ್ಫರ್ಮೆಶನ್ ಸರ್ವಿಸೆಸ್ನಿಂದ ದತ್ತಲೇಖನ. (g93 11/22)
[ಅಧ್ಯಯನ ಪ್ರಶ್ನೆಗಳು]
a ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಲಭ್ಯವಿದೆ.
[ಪುಟ 27 ರಲ್ಲಿರುವ ಚಿತ್ರ]
ಲಿಯೆಸಾನ್ ಕಮಿಟಿ ಒಬ್ಬ ವೈದ್ಯನೊಂದಿಗೆ ಸಮಾಲೋಚಿಸುತ್ತಿರುವುದು
[ಪುಟ 28 ರಲ್ಲಿರುವ ಚಿತ್ರ]
“ಕುಟುಂಬ ಆರೈಕೆ”