ಯುವ ಜನರು ಪ್ರಶ್ನಿಸುವುದು . . .
ವಿರುದ್ಧ ಲಿಂಗದವರ ಕುರಿತು ಯೋಚಿಸುತ್ತಾ ಇರುವುದನ್ನು ನಿಲ್ಲಿಸಲು ನಾನೇನು ಮಾಡಬಲ್ಲೆ?
‘ದಿನೇದಿನೇ ವಾರ್ತಾ ಮಾಧ್ಯಮವು ಹದಿವಯಸ್ಸಿನವರ ನೈತಿಕ ಗುಣವನ್ನು ಕಾಮದ ಕುರಿತಾಗಿ ಮೂದಲಿಸುತ್ತಾ ಹಾಸ್ಯಮಾಡುತ್ತಾ ಸವೆಯಿಸುತ್ತದೆ; ಅವರ ಕಿವಿಗಳಲ್ಲಿ ರಾಕ್ ಗೀತಗಳು ಲೈಂಗಿಕ ಸಂಬಂಧಗಳ ಕುರಿತು ಕಿರಿಚಾಡುತ್ತವೆ; ಕಾಲ್ಪನಿಕ ಪ್ರೇಮ ಕಥೆಗಳ ಸುರಿಮಳೆ ಲೈಂಗಿಕ ನಿಜತ್ವವನ್ನು ಸಕ್ಕರೆಮಿಠಾಯಿಯಂತೆ ಕಬಳಿಸುವಷ್ಟು ಸಿಹಿಯಾಗಿರುವ ಮನಶ್ಚಿತ್ರಗಳಿಂದ ಹೊದಿಸುತ್ತದೆ.’ ಹೀಗೆಂದರು ಲೇಖಕಿ ಲೆಸ್ಲಿ ಜೇನ್ ನಾಂಕಿನ್. ಹೌದು, ಹದಿ ವಯಸ್ಸಿನವರಾಗಿರುವಾಗ ವಿರುದ್ಧ ಲಿಂಗದವರ ಕುರಿತು ಯೋಚಿಸುವಂತೆ ಪ್ರೋತ್ಸಾಹದ ಗುಂಡಿನ ಸುರಿಮಳೆಯೇ ನಿಮಗೆ ದೊರೆಯುತ್ತದೆ.
ವಿರುದ್ಧ ಲಿಂಗದವರ ಕುರಿತು ಸ್ವಲ್ಪ ಆಸಕ್ತಿಯಿರುವುದು ಸ್ವಾಭಾವಿಕವೆಂಬುದು ನಿಶ್ಚಯ.a ಆದರೆ ಪ್ರಣಯಾತ್ಮಕ ಯೋಚನೆಗಳು, ಹಗಲುಗನಸುಗಳು ಮತ್ತು ಕಾಲ್ಪನಿಕ ಮನಶ್ಚಿತ್ರಗಳು ನಿಮ್ಮ ನಿದ್ದೆ, ಪ್ರಾರ್ಥನೆಗಳು, ಶಾಲಾ ಮನೆಗೆಲಸ, ಬೈಬಲ್ ವಾಚನ, ಯಾ ಮನೆಯ ಕೆಲಸಗಳಿಗೆ ಅಡಬ್ಡರುವಷ್ಟು ಪ್ರಬಲವಾಗಿರುವಲ್ಲಿ, ಗಣನೀಯ ಸಮಯದಿಂದ ಪರಿಸ್ಥಿತಿಯು ಅಪಾಯಕರವಾಗಿತ್ತೆಂದು ಇದು ಸೂಚಿಸುತ್ತದೆ. ಇಂಥ ಅನಾರೋಗ್ಯಕರವಾದ ವಿಚಾರಮಗ್ನತೆಯು ಕೆಟ್ಟ ವರ್ತನೆಗೆ ನಡೆಸಸಾಧ್ಯವಿದೆ.—ಯಾಕೋಬ 1:14, 15.
ಹುಡುಗರು ಯಾ ಹುಡುಗಿಯರು ಇದ್ದಾರೆಂಬುದನ್ನು ಗಮನಿಸುವುದನ್ನು ನಿಲ್ಲಿಸಬೇಕೆಂದು ಇದರ ಅರ್ಥವಲ್ಲ. ಬದಲಿಗೆ ಜ್ಞಾನೋಕ್ತಿ 23:12, NW, ಹೇಳುವಂತೆ, ನೀವು ‘ನಿಮ್ಮ ಹೃದಯವನ್ನು ನೀತಿಶಿಕ್ಷೆಗೆ ತರುವ’ ಅಗತ್ಯವಿದೆ. ಇಲ್ಲ, ನೀವು ಇದನ್ನು ಮಾಡುವಂತೆ ಸಹಾಯಮಾಡುವ ಸುಲಭ ಪರಿಹಾರವಾಗಲಿ ತತ್ಕ್ಷಣ ವಾಸಿ ಮಾಡುವ ಔಷಧವಾಗಲಿ ಇಲ್ಲ. ಆದರೆ ಪ್ರಯತ್ನಿಸುವಲ್ಲಿ, ನಿಮ್ಮ ಯೋಚನೆಯನ್ನು ಹೆಚ್ಚು ಸಮತೂಕಕ್ಕೆ ನೀವು ತರಬಲ್ಲಿರಿ. ನೀವು ಇದನ್ನು ಮಾಡಸಾಧ್ಯವಿರುವ ಕೆಲವು ಪ್ರಾಯೋಗಿಕ ಮಾರ್ಗಗಳನ್ನು ನಾವು ನೋಡೋಣ.
ನಿಮ್ಮ ಸಹವಾಸವನ್ನು ಗಮನಿಸಿ
ನಿಮ್ಮ ಸಹವಾಸವನ್ನು ಒತ್ತಾಗಿ ಗಮನಿಸಿರಿ. ಒಬ್ಬ ಯುವಕನು ಒಪ್ಪಿಕೊಳ್ಳುವುದು: “ನಿಮ್ಮ ಸುತ್ತಲಿರುವ ಪ್ರತಿಯೊಬ್ಬರೂ ಲೈಂಗಿಕ ಅನೈತಿಕತೆಯ ಕುರಿತು, ಅದು ಹೊರಕ್ಕೆ ಊಟಕ್ಕೆ ಹೋಗುವಷ್ಟು ಸಾಮಾನ್ಯವೋ ಎಂಬಂತೆ ಮಾತಾಡುತ್ತಾರೆ.” ಇಂಥ ಮಾತುಗಳಿಗೆ ಸದಾ ಬಲಿಯಾಗುವುದು ನಿಮ್ಮ ಮೇಲೆ ಪರಿಣಾಮ ಬೀರಬಲ್ಲದೊ? ನಿಸ್ಸಂಶಯವಾಗಿ. ಯುವಜನರ ಒಂದು ಸಮೀಕ್ಷೆಗನುಸಾರ, ಮುಕ್ಕಾಲು ಅಂಶ, “ತಮ್ಮ ಸಮಾನಸ್ಥರಂತೆ ಇರುವುದು ಅಥವಾ ಇಲ್ಲದಿರುವುದು ಕಾಮಾಸಕ್ತಿಯ ಕಡೆಗಿರುವ ಅವರ ಮನೋಭಾವವನ್ನು ನಿಶ್ಚಯಿಸುತ್ತದೆ” ಎಂದು ಒಪ್ಪಿದರು.
ನಿಮ್ಮ ಮಿತ್ರರ ಕುರಿತೇನು? ಅವರ ಪ್ರತಿಯೊಂದು ಮಾತುಕತೆ ವಿರುದ್ಧ ಲಿಂಗದ ವ್ಯಕ್ತಿಯ ವಿಷಯದ ಬಲವತ್ತಾದ ಚರ್ಚೆಗೆ ಇಳಿದುಹೋಗುತ್ತದೆಯೆ? ಇಂತಹ ಮಾತುಕತೆ ನಿಯಂತ್ರಣ ತಪ್ಪಿ ತುಚ್ಫವಾದದ್ದು ಅಥವಾ ಮಾರ್ಯಾದೆಗೆಟ್ಟದ್ದು ಆಗುತ್ತದೆಯೆ? ಹಾಗಿರುವಲ್ಲಿ, ಇದರಲ್ಲಿ ಸೇರಿಕೊಳ್ಳುವುದು—ಅಥವಾ ಕೇವಲ ಕಿವಿಗೊಡುವುದು—ನಿರ್ಮಲ ವಿಷಯಗಳ ಮೇಲೆ ನಿಮ್ಮ ಮನಸ್ಸನ್ನಿಡುವುದನ್ನು ನಿಮಗೆ ಕಷ್ಟಕರವಾಗಿ ಮಾಡುವುದು. ಬೈಬಲು ಬುದ್ಧಿ ಹೇಳುವುದು: “ಕ್ರೋಧ ಕೋಪ ಮತ್ಸರ ದೂಷಣೆ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ವಿಸರ್ಜಿಸಿಬಿಡಿರಿ.”—ಕೊಲೊಸ್ಸೆ 3:8.
ನಿಮ್ಮ ಒಡನಾಡಿಗಳಿಗೆ ಬೈಬಲ್ ಮೂಲಸೂತ್ರಗಳ ಕಡೆಗೆ ಗಣ್ಯತೆ ಇಲ್ಲದಿರುವಲ್ಲಿ ಈ ಸಲಹೆಯನ್ನು ಅನ್ವಯಿಸುವುದು ನಿಮಗೆ ಕಷ್ಟವಾಗುವುದು; ಅವರ ಮನೋಭಾವ ನಿಮ್ಮನ್ನು ಕ್ರಮೇಣ ಪ್ರಭಾವಿಸುವುದು ಖಂಡಿತ. (ಜ್ಞಾನೋಕ್ತಿ 13:20) ಒಬ್ಬ ಕ್ರೈಸ್ತ ಹುಡುಗಿಯ ಅನುಭವವನ್ನು ಪರಿಗಣಿಸಿರಿ. ಅವಳು ಹೇಳಿದ್ದು: “ನಾನು ಯೆಹೋವನ ಸಾಕ್ಷಿಯೆಂದು ಶಾಲೆಯಲ್ಲಿ ಮಕ್ಕಳಿಗೆ ಹೇಳಲು ನನಗೆ ಮನಸ್ಸಿರಲಿಲ್ಲ. ಆದಕಾರಣ ಅವರು ಸದಾ ನನಗೆ ಕಾಮದ ಕುರಿತು ತಡೆಯಿಲ್ಲದೆ ಮಾತಾಡಿದರು.” ಸ್ವಲ್ಪದರಲ್ಲಿ ಅವಳು ಲೈಂಗಿಕ ದುರಾಚಾರದಲ್ಲಿ ಸಿಕ್ಕಿಕೊಂಡು ಗರ್ಭಿಣಿಯಾದಳು. ಜ್ಞಾನೋಕ್ತಿ 9:6 ವಿವೇಕದಿಂದ ಸಲಹೆ ನೀಡುವುದು: “ಬುದ್ಧಿಗೇಡಿ ಜನರ ಸಹವಾಸವನ್ನು ಬಿಟ್ಟು ಬಾಳಿರಿ. ಜ್ಞಾನದ ಮಾರ್ಗವನ್ನು ಅನುಸರಿಸಿರಿ.” (ಟುಡೇಸ್ ಇಂಗ್ಲಿಷ್ ವರ್ಷನ್) ಹೌದು, ನಿಮ್ಮನ್ನು ಜಗ್ಗಿಸುವವರಿಂದಲ್ಲ, ಆತ್ಮೋನ್ನತಿ ಮಾಡುವ ಮಿತ್ರರಿಂದ, ನಿಮ್ಮ ಕ್ರೈಸ್ತ ನೀತಿ ನಡೆವಳಿ ಮತ್ತು ಮಟ್ಟಗಳಲ್ಲಿ ಪಾಲಿಗರಾಗುವವರಿಂದ ನಿಮ್ಮನ್ನು ಆವರಿಸಿಕೊಳ್ಳಿ.
ಸಾಮಾನ್ಯವಾಗಿ ದೇವಭಕ್ತಿಯ ಮನೋಭಾವವನ್ನು ತೋರಿಸುವ ಎಳೆಯ ಕ್ರೈಸ್ತರು ಸಹ ಆಗಿಂದಾಗ್ಗೆ “ಮಾತಿನಲ್ಲಿ ತಪ್ಪು”ವುದುಂಟು. (ಯಾಕೋಬ 3:2) ಅದು ಸಂಭವಿಸುವಾಗ ಮತ್ತು ಸಂಭಾಷಣೆ ತಪ್ಪಾದ ದಿಕ್ಕಿಗೆ ಹೋಗುವಾಗ ಏನು ಮಾಡಸಾಧ್ಯವಿದೆ? ಸೊಲೊಮೋನ ರಾಜನು ಒಬ್ಬ ಎಳೆಯ ಕುರುಬಗಿತ್ತಿಯನ್ನು ಮೋಹಿಸಿದನು. ಆದರೆ ಅವಳು ಆ ಪ್ರಣಯಾಸಕ್ತಿಯನ್ನು ಪ್ರತಿಯಾಗಿ ತೋರಿಸಲಿಲ್ಲ. ಕೆಲವು ಎಳೆಯ ಒಡನಾಡಿಗಳು ಸೊಲೊಮೋನನ ಕಡೆಗೆ ಅವಳ ಅನಿಸಿಕೆಗಳನ್ನು ಕೆರಳಿಸಲು ಪ್ರಯತ್ನಿಸಿದಾಗ, ಪ್ರಣಯಾತ್ಮಕ ಮಾತುಗಳ ಸುರಿಮಳೆ ತನ್ನ ಮೇಲೆ ಬೀಳುವಂತೆ ಆಕೆ ಅನುಮತಿಸಲಿಲ್ಲ. ಅವಳು ದೃಢವಾಗಿ ಹೇಳಿದ್ದು: “ಉಚಿತಕಾಲಕ್ಕೆ ಮುಂಚೆ ಪ್ರೀತಿಯನ್ನು ಹುಟ್ಟಿಸಿ ಬೆಳೆಯಿಸಬಾರದೆಂದು . . . ನಿಮ್ಮಿಂದ ಪ್ರಮಾಣಮಾಡಿಸುತ್ತೇನೆ.” (ಪರಮ ಗೀತ 2:7) ತದ್ರೀತಿ, ಮಾತು ನಿಯಂತ್ರಣ ತಪ್ಪುವಾಗ ನೀವೂ ದೃಢವಾಗಿ ಮಾತಾಡಬೇಕಾದೀತು. ಇಲ್ಲ, ನಿಮ್ಮ ಮಿತ್ರರಿಗೆ ನೀವು ಉಪನ್ಯಾಸ ಮಾಡಬೇಕೆಂದಿರುವುದಿಲ್ಲ. ಬದಲಿಗೆ ನೀವು ವಿಷಯವನ್ನು ಕೇವಲ ಬದಲಾಯಿಸಲು, ಹೆಚ್ಚು ಹಿತಕರವಾದ ದಿಕ್ಕಿಗೆ ತಿರುಗಿಸಲು ಪ್ರಯತ್ನಿಸಬಹುದು.
ಮನೋರಂಜನೆ—ಆಯ್ಕೆ ಮಾಡುವ ಆವಶ್ಯಕತೆ
ಇನ್ನೊಂದು ಚಿಂತಾಪರ ಕ್ಷೇತ್ರವು ಮನೋರಂಜನೆ. ಅತ್ಯಾಧುನಿಕ ಚಲನಚಿತ್ರ, ವಿಡಿಯೊ ಯಾ ಡಿಸ್ಕ್ ಹಿಡಿಸುವಂತಹದ್ದಾಗಿ ಕಂಡೀತು. ಆದರೆ ಬೈಬಲು ನಮಗೆ ಜ್ಞಾಪಕ ಹುಟ್ಟಿಸುವುದು: “ಲೋಕದಲ್ಲಿರುವ ಶರೀರದಾಶೆ ಕಣ್ಣಿನಾಶೆ ಬದುಕುಬಾಳಿನ ಡಂಬ ಈ ಮೊದಲಾದವುಗಳೆಲ್ಲವು ತಂದೆಯಿಂದ ಹುಟ್ಟದೆ ಲೋಕದಿಂದ ಹುಟ್ಟಿದವುಗಳಾಗಿವೆ.” (1 ಯೋಹಾನ 2:16) ಈ ಮೊದಲು ಹೇಳಿರುವಂತೆ, ಇಂದಿನ ಮನೋರಂಜನೆಗಳಲ್ಲಿ ಹೆಚ್ಚಿನದ್ದು ಕಾಮಾಸಕ್ತಿಯನ್ನು ಕೆರಳಿಸಲು ರಚಿಸಲ್ಪಡುತ್ತದೆ. ಉದಾಹರಣೆಗೆ, ಜನಪ್ರಿಯ ಹಾಡುಗಳು ಮತ್ತು ಚಲನಚಿತ್ರಗಳು ಊಹೆಗೆ ಸ್ವಲ್ಪವೂ ಬಿಡದ, ಅನೇಕ ವೇಳೆ ಅಶ್ಲೀಲವಾಗಿರುವವುಗಳಾಗಿವೆ.
ಇಂತಹ ಮನೋರಂಜನೆಗೆ ನಿಮ್ಮನ್ನು ಒಡ್ಡಿಕೊಳ್ಳುವುದು ನಿಮ್ಮ ಮೇಲೆ ಯಾವ ಪರಿಣಾಮವನ್ನು ಮಾಡೀತು? ಲೇಖಕ ಜಾನ್ ಲ್ಯಾಂಗೊನ್ ಹೇಳುವುದು: “ಅನೇಕ ಅಧ್ಯಯನಗಳು ತೋರಿಸಿರುವುದೇನಂದರೆ . . . ನಾವು ಕಾಮಸಂಬಂಧವಾದ ವಿಷಯಗಳಿಗೆ ಒಡ್ಡಲ್ಪಡುವಾಗ, ನಾವು ಕಾಮದ ವಿಷಯ ಮಾತಾಡುವ ಪ್ರವೃತ್ತಿಯವರಾಗುತ್ತೇವೆ. ಈ ಒಡ್ಡುವಿಕೆ ಕೆಲವು ಬಾರಿ ನಾವು ಸಾಧಾರಣವಾಗಿ ಪ್ರಯತ್ನಿಸದ ವಿಷಯಗಳನ್ನು ಪ್ರಯತ್ನಿಸುವಂತೆ ನಡೆಸುತ್ತದೆ.” ಹೌದು, ‘ನಿಮ್ಮ ಮನಸ್ಸನ್ನು ಶರೀರದ ವಿಷಯಗಳ ಮೇಲಿಡುವುದು’ ನಿಮಗೆ ಕೇವಲ ಹಾನಿಯನ್ನು ಮಾಡಬಲ್ಲದು. (ರೋಮಾಪುರ 8:5) ಪ್ರೀತಿ ಮತ್ತು ಕಾಮದ ನಿಮ್ಮ ವೀಕ್ಷಣವನ್ನು ಅದು ಕೊಂಕಿಸಿ ನಿಮ್ಮ ಮನಸ್ಸನ್ನು ಅಶುದ್ಧ ಮನಶ್ಚಿತ್ರಗಳಿಂದ ತುಂಬಿಸಬಲ್ಲದು. ಬೈಬಲಿನ ಬುದ್ಧಿವಾದವೊ? “ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತವ್ವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.” (2 ಕೊರಿಂಥ 7:1) ಆದುದರಿಂದ ಪ್ರಣಯಾಸೆಯನ್ನು ಉತ್ತೇಜಿಸುವ ಚಲನಚಿತ್ರಗಳಿಂದ, ವಿಡಿಯೊಗಳಿಂದ ಮತ್ತು ಡಿಸ್ಕ್ಗಳಿಂದ ದೂರಸರಿದು ನಿಲ್ಲಿರಿ.
ಒಬ್ಬ ಅವಿವಾಹಿತ ಕ್ರೈಸ್ತ ಪುರುಷನು ಒಮ್ಮೆ ಈ ಪ್ರಾಯೋಗಿಕ ಬುದ್ಧಿವಾದವನ್ನು ಕೊಟ್ಟನು: “ನಿದ್ದೆ ಮಾಡುವ ಮೊದಲು ಅಹಿತಕರ ವಿಷಯಗಳನ್ನು ಪ್ರೇಕ್ಷಿಸಬೇಡಿ. ಅನೇಕ ರಾತ್ರಿಯ ಹೊತ್ತುಮೀರಿ ತೋರಿಸಲಾಗುವ ಟಿವಿ ದೇಖಾವೆಗಳು ತೀರ ಅಶ್ಲೀಲವಾಗಿವೆ.” ಅನೇಕ ಪುಸ್ತಕಗಳೂ ಹಾಗೆಯೆ. ಶೆರಿ ಎಂಬ ಹೆಸರಿನ ಒಬ್ಬ ಎಳೆಯ ಕ್ರೈಸ್ತಳು ಒಪ್ಪಿಕೊಳ್ಳುವುದು: “ನಾನು ಪ್ರಣಯ ಕಥೆಗಳನ್ನು ಓದುತ್ತಿದ್ದೆ. ನಾನು ಕಾಮದ ವಿಷಯ ಮನಶ್ಚಿತ್ರ ಕಟ್ಟಿಕೊಂಡು, ಉದ್ರೇಕಕಾರಕ ಜೀವನ ಮತ್ತು ವಿವಿಧ ಲೈಂಗಿಕ ಸಂಗಾತಿಗಳ ಕುರಿತು ಸ್ವಪ್ನ ಕಾಣುತ್ತಿದ್ದೆ.” ಪ್ರಣಯಾತ್ಮಕ ಮನಶ್ಚಿತ್ರ ತುಂಬಿದವಳಾಗಿ, ಅವಳು ಸುಲಭವಾಗಿ ಒಬ್ಬ ಯುವಕನೊಂದಿಗೆ ಪ್ರಣಯಚೇಷ್ಟೆಗಳಲ್ಲಿ ಸಿಕ್ಕಿಕೊಂಡಳು. ನೀವು ಹಿತಕರವಾದ ಓದುವ ವಿಷಯಗಳಿಗೆ—ಈ ಪತ್ರಿಕೆ ಮತ್ತು ಇದರ ಜೊತೆ ಪತ್ರಿಕೆಯಾದ ಕಾವಲಿನಬುರುಜುವಿನಂತಹ ವಿಷಯಗಳಿಗೆ—ಅಂಟಿಕೊಳ್ಳುವಲ್ಲಿ ಅಂತಹ ಸಮಸ್ಯೆಗಳಿಂದ ದೂರವಿರಸಾಧ್ಯವಿದೆ. ಇಂತಹ ವಾಚನ ಅನೇಕ ಯುವ ಜನರು ಪತನಗೊಂಡಿರುವ ಶರೀರದ ಬದಲಿಗೆ ‘ಆತ್ಮದ ವಿಷಯಗಳ ಮೇಲೆ ಮನಸ್ಸಿಡುವಂತೆ’ ಸಹಾಯಮಾಡಿದೆ.—ರೋಮಾಪುರ 8:5.
ಆ ಮನಶ್ಚಿತ್ರಗಳನ್ನು ತೊಲಗಿಸಿರಿ!
ಕೆಲವು ಬಾರಿ ವಿರುದ್ಧ ಲಿಂಗಜಾತಿಯ ಕುರಿತ ಯೋಚನೆ ಮುನ್ಸೂಚನೆ ಕೊಡದೆ ಥಟ್ಟನೆ ನಿಮ್ಮ ಮನಸ್ಸನ್ನು ಪ್ರವೇಶಿಸಬಹುದು. ಹದಿನೇಳು ವಯಸ್ಸಿನ ಸ್ಕಾಟ್ ಒಪ್ಪಿಕೊಳ್ಳುವುದು: “ಕೆಲವು ಬಾರಿ ಕಾಮದ ವಿಷಯ ಯೋಚಿಸುವುದನ್ನು ನಿಲ್ಲಿಸುವುದು ನನಗೆ ಬಹಳ ಕಷ್ಟವಾಗುತ್ತದೆ.” ಅಥವಾ ನೀವು ಪ್ರಾಯಶಃ ಒಬ್ಬ ಸುಂದರ ಹುಡುಗ ಯಾ ಹುಡುಗಿಯನ್ನು ಕೇವಲ ನೋಡುತ್ತೀರಿ. ಅದನ್ನು ಗ್ರಹಿಸುವ ಮೊದಲೇ ನೀವು ಅವನ ಯಾ ಅವಳ ವಿಷಯ ಯೋಚಿಸುತ್ತಿದ್ದೀರೆಂದು ಕಂಡುಕೊಳ್ಳುತ್ತೀರಿ. ಒಬ್ಬನು ಆಕರ್ಷಕನೆಂದು ಗಮನಿಸುವುದು ಒಂದು ವಿಷಯ, ಆದರೆ ಯೇಸು ಹೇಳಿದ ಎಚ್ಚರಿಕೆಯ ವಿರುದ್ಧ ಹೋಗುವುದು, ಅಂದರೆ, ‘ಒಬ್ಬ ಸ್ತ್ರೀಯನ್ನು ಆಕೆಗಾಗಿ ಕಾಮಾಸಕ್ತಿ ಇರುವ ಉದ್ದೇಶದಿಂದ ನೋಡುತ್ತಾ ಇರುವುದು’ ತೀರ ವಿಭಿನ್ನವಾದ ವಿಷಯ. (ಮತ್ತಾಯ 5:28, NW; ಹೋಲಿಸಿ ಜ್ಞಾನೋಕ್ತಿ 6:25.) ನೀವು ವಿವಾಹಕ್ಕೆ ಇನ್ನೂ ತೀರ ಚಿಕ್ಕವರಾಗಿರುವಾಗ, ಕಾಡಿಸುವ ಪ್ರಣಯ ಮನಶ್ಚಿತ್ರಗಳಲ್ಲಿ ಹೊರಳಾಡುವುದು ನಿಮ್ಮನ್ನು ಕೇವಲ ಖಿನ್ನರಾಗಿ ಮತ್ತು ನಿರುತ್ತೇಜಿತರಾಗಿ ಮಾಡಬಲ್ಲದು.—ಹೋಲಿಸಿ ಜ್ಞಾನೋಕ್ತಿ 13:12.
ಸ್ಕಾಟ್ ಈ ಕಾರಣದಿಂದ ಹೇಳುವುದು: “ವಿಷಯವನ್ನು ಬದಲಾಯಿಸುವುದು, ನನ್ನನ್ನು ಉದ್ರೇಕಗೊಳಿಸುವ ಆಲೋಚನೆಗಳನ್ನು ಮನಸ್ಸಿನಿಂದ ತೆಗೆದುಹಾಕುವುದು ನನಗೆ ಸಹಾಯ ಮಾಡುತ್ತದೆ. ತಕ್ಕ ಸಮಯದಲ್ಲಿ ಆ ಅನಿಸಿಕೆಗಳು ಮತ್ತು ಪ್ರಚೋದನೆಗಳು ಹೋಗಿಬಿಡುವುವು ಎಂದು ನಾನು ನನಗೆ ಜ್ಞಾಪಕ ಹುಟ್ಟಿಸುತ್ತೇನೆ.” (ಹೋಲಿಸಿ ಫಿಲಿಪ್ಪಿ 4:8.) ಅಪೊಸ್ತಲ ಪೌಲನು ಹೇಳಿದ್ದು: “ನನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಳ್ಳುತ್ತೇನೆ.” (1 ಕೊರಿಂಥ 9:27) ಇದೇ ರೀತಿ, ವಿರುದ್ಧ ಲಿಂಗದವರ ಕುರಿತ ಯೋಚನೆಗಳು ಬೇರೂರಲು ಪ್ರಯತ್ನಿಸುವಾಗ ನಿಮಗೆ ನಿಮ್ಮ ಮೇಲೆ ಬಿರುಸಾಗಿ ವರ್ತಿಸಬೇಕಾದೀತು. ಆ ಆಲೋಚನೆಗಳು ಪಟ್ಟುಹಿಡಿದು ಬರುವುದಾದರೆ ತುಸು ಶಾರೀರಿಕ ವ್ಯಾಯಾಮವನ್ನು ಮಾಡಿರಿ. “ದೇಹಸಾಧನೆಯು ಸ್ವಲ್ಪಮಟ್ಟಿಗೆ ಪ್ರಯೋಜನವಾಗಿದೆ,” ಮತ್ತು ಚುರುಕಾದ ನಡೆ ಅಥವಾ ಕೆಲವು ನಿಮಿಷಗಳ ಅಂಗಸಾಧನೆ—ಇವೇ ನಿಮ್ಮ ಮನಸ್ಸನ್ನು ಹಿಮ್ಮರಳಿಸುವಂತೆ ಸಹಾಯಮಾಡಲು ಬೇಕಾಗುವ ವಿಷಯವಾಗಿದ್ದೀತು.—1 ತಿಮೊಥೆಯ 4:8.
“ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕಿಯ್ತಿಂದ” ಮಾಡುವುದು ವಿಶೇಷವಾಗಿ ಸಹಾಯಕರವೆಂದು ಸಹ ಅನೇಕ ಯುವ ಜನರು ಕಂಡುಕೊಂಡಿದ್ದಾರೆ. (1 ಕೊರಿಂಥ 15:58) ಎಳೆಯಳಾದ ಡೆಬ್ರ ಅದನ್ನು ಹೀಗೆ ಹೇಳಿದಳು: “ಇದಕ್ಕಿರುವ ಪರಿಹಾರವು ಬೇರೆ ಚಟುವಟಿಕೆಗಳಿಗೆ ಶಕಿಯ್ತಿಲದ್ಲಿರುವಷ್ಟರ ವರೆಗೆ ಕಾರ್ಯಮಗ್ನರಾಗಿರುವುದೇ.” ಕ್ರೈಸ್ತ ಸಭೆಯೊಂದಿಗೆ ಮತ್ತು ಅದರ ಚಟುವಟಿಕೆಗಳಲ್ಲಿ ಪೂರ್ತಿಯಾಗಿ ಒಳಗೊಂಡಿರುವುದು, ನಿಮ್ಮ ಯೋಚನೆಯನ್ನು ಸಮತೋಲದಲ್ಲಿಡುವಂತೆ ಮಾಡಲು ಹೆಚ್ಚು ಸಹಾಯ ಮಾಡಬಲ್ಲದು.
ನೀವೆಷ್ಟೇ ಪ್ರಯತ್ನಿಸುವುದಾದರೂ, ವಿರುದ್ಧ ಲಿಂಗದವರ ಕುರಿತು ಯೋಚಿಸುವುದನ್ನು ನಿಲ್ಲಿಸುವುದು ನಿಮಗೆ ಇನ್ನೂ ಕಷ್ಟವಾಗಬಹುದು. ಹಾಗಿರುವಲ್ಲಿ, ವಯಸ್ಕರಿಂದ ತುಸು ಬೆಂಬಲವನ್ನು ಪಡೆಯಿರಿ. ಪ್ರಾಯಶಃ ನಿಮ್ಮ ಹೆತ್ತವರಲ್ಲಿ ಒಬ್ಬರೊಂದಿಗೆ ನೀವು ಈ ವಿಷಯದಲ್ಲಿ ಮಾತಾಡಬಲ್ಲಿರಿ. ಎಳೆಯ ಕಾರ್ಲ್ ಹೇಳಿದ್ದನ್ನು ಪರಿಗಣಿಸಿರಿ: “ಹೆಚ್ಚು ಪ್ರಾಯದ ಮತ್ತು ಅನುಭವವಿರುವ ಒಬ್ಬನೊಡನೆ ಮಾತಾಡುವುದು ನನಗೆ ಸಹಾಯಮಾಡಿದೆ. ಮಾತುಕತೆ ಎಷ್ಟು ಮುಚ್ಚುಮರೆಯಿಲ್ಲದ್ದಾಗಿರುತ್ತದೋ ಅಷ್ಟು ಹೆಚ್ಚು ಉತ್ತಮ.” ಎಲ್ಲಕ್ಕೂ ಮಿಗಿಲಾಗಿ, ನಿಮ್ಮ ಸ್ವರ್ಗೀಯ ಪಿತನಿಂದ ನಿಮಗೆ ದೊರೆಯಬಲ್ಲ ಸಹಾಯವನ್ನು ಅಲಕ್ಷಿಸಬೇಡಿ. ಒಬ್ಬ ಅವಿವಾಹಿತ ಕ್ರೈಸ್ತ ಪುರುಷನು ಹೇಳುವುದು: “ಕಾಮೋದ್ರೇಕದ ಅನಿಸಿಕೆ ಮೇಲಕ್ಕೆ ಬರುತ್ತಿದೆ ಎಂದು ನನಗನಿಸುವಾಗ, ನಾನು ಪ್ರಾರ್ಥಿಸುವಂತೆ ನನ್ನನ್ನು ಬಲಾತ್ಕರಿಸಿಕೊಳ್ಳುತ್ತೇನೆ.” ಬೈಬಲು ಹೇಳುವುದು: “ಆದದರಿಂದ ನಾವು ಕರುಣೆಯನ್ನು ಹೊಂದುವಂತೆಯೂ ಆತನ ದಯೆಯಿಂದ ಸಮಯೋಚಿತವಾದ ಸಹಾಯವು ನಮಗೆ ದೊರೆಯುವಂತೆಯೂ ಧೈರ್ಯದಿಂದ ಕೃಪಾಸನದ ಮುಂದೆ ಬರೋಣ.” (ಇಬ್ರಿಯ 4:16) ಇಲ್ಲ, ವಿರುದ್ಧ ಲಿಂಗದವರ ಕಡೆಗೆ ನಿಮಗಿರುವ ಆಸಕ್ತಿಯನ್ನು ದೇವರು ತೆಗೆಯುವುದಿಲ್ಲ. ಆದರೆ ಆತನ ಸಹಾಯದಿಂದ, ಯೋಚಿಸಲು ಇನ್ನೂ ಅನೇಕ ವಿಷಯಗಳಿವೆ ಎಂದು ನೀವು ಕಂಡುಕೊಳ್ಳಬಲ್ಲಿರಿ. (g94 8/8)
[ಅಧ್ಯಯನ ಪ್ರಶ್ನೆಗಳು]
a “ಯುವ ಜನರು ಪ್ರಶ್ನಿಸುವುದು. . .ವಿರುದ್ಧ ಲಿಂಗದವರ ಕುರಿತು ಆಲೋಚಿಸುವುದನ್ನು ನಿಲ್ಲಿಸುವುದು ಯಾಕೆ ಅಷ್ಟೊಂದು ಕಠಿನವಾಗಿದೆ?” ಎಂಬ ಲೇಖನವನ್ನು ನಮ್ಮ ಆಗಸ್ಟ್ 8, 1994ರ ಸಂಚಿಕೆಯಲ್ಲಿ ನೋಡಿ.
[ಪುಟ 17 ರಲ್ಲಿರುವ ಚಿತ್ರ]
ವಿರುದ್ಧ ಲಿಂಗದವರ ಕುರಿತ ಮಾತುಕತೆ ನಿಯಂತ್ರಣ ತಪ್ಪುವುದಾದರೆ, ವಿಷಯವನ್ನು ಬದಲಾಯಿಸುವ ಧೈರ್ಯವುಳ್ಳವರಾಗಿರಿ