ಬೈಬಲಿನ ದೃಷ್ಟಿಕೋನ
ನೀವು ಒತ್ತಡವನ್ನು ನಿಭಾಯಿಸುವಂತೆ ಯಾವುದು ಸಹಾಯ ಮಾಡಬಲ್ಲದು?
ನೀವು ಒತ್ತಡದ ಒಂದು ಬಲಿಪಶುವಾಗಿದ್ದೀರೊ? ಹಾಗಿರುವಲ್ಲಿ, ನಿಮಗೆ ಅನೇಕ ಸಂಗಾತಿಗಳಿದ್ದಾರೆ. ಇವು “ವ್ಯವಹರಿಸಲು ಕಷ್ಟವಾದ ಕಠಿನ ಕಾಲ”ಗಳಾಗಿವೆ, ಮತ್ತು ಎಲ್ಲಾ ವಯೋವರ್ಗಗಳ ಮತ್ತು ಜೀವಿತ ಪಥಗಳ ಜನರು ಒತ್ತಡವನ್ನು ಅನುಭವಿಸುತ್ತಿದ್ದಾರೆ. (2 ತಿಮೊಥೆಯ 3:1) ಒತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳು, ವೈದ್ಯರಿಗೆ ನೀಡುವ ಭೇಟಿಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಭೇಟಿಗಳಿಗೆ ಕಾರಣವಾಗಿವೆ ಎಂದು ಕೆಲವು ಪರಿಣತರು ಹೇಳುತ್ತಾರೆ.
ಆದರೂ ಒತ್ತಡವು ತನ್ನಲ್ಲೇ ಆವಶ್ಯಕವಾಗಿ ಒಂದು ಕೆಟ್ಟ ವಿಷಯವಾಗಿಲ್ಲ. “ವಾಸ್ತವವಾಗಿ, ನಮ್ಮ ಉತ್ತೇಜನ, ಜೀವಿಸಲಿಕ್ಕಾಗಿ ಉತ್ಸಾಹ, ಕೆಲಸಗಳನ್ನು ಮಾಡಲು ಶಕ್ತಿಯನ್ನು ಅದು ನಮಗೆ ಕೊಡುತ್ತದೆ. ನಾವು ಅದನ್ನು ನಿರ್ವಹಿಸಬಲ್ಲೆವಾದಲ್ಲಿ ನಾವು ಅದರಲ್ಲಿ ಆನಂದಿಸುತ್ತೇವೆ” ಎಂದು ಒತ್ತಡ-ಚಿಕಿತ್ಸಾಲಯದ ನಿರ್ದೇಶಕರೊಬ್ಬರು ಹೇಳುತ್ತಾರೆ.
ಇನ್ನೊಂದು ಕಡೆಯಲ್ಲಿ, ಒತ್ತಡವು ವಿನಾಶಕರವೂ, ವಿಧ್ವಂಸಕವೂ ಆಗಿರಸಾಧ್ಯವಿದೆ. ಒತ್ತಡವು ನಿಮಗೆ ಸಮಸ್ಯೆಗಳನ್ನು ಉಂಟುಮಾಡುತ್ತಿರುವುದಾದರೆ ಆಗೇನು? ಅದರ ವಿಧ್ವಂಸಕ ಪರಿಣಾಮಗಳನ್ನು ನೀವು ಕಡಮೆ ಮಾಡಲು ನಿಮಗೆ ಸಹಾಯ ಮಾಡಬಹುದಾದ, ಬೈಬಲಿನ ವಿವೇಕದ ಮೇಲಾಧಾರಿತವಾದ ಕೆಲವು ಸಲಹೆಗಳು ಇಲ್ಲಿವೆ.
ಅನುಚಿತವಾದ ನಿರೀಕ್ಷಣೆಗಳನ್ನು ತ್ಯಜಿಸಿರಿ
“ಕೋರಿದ್ದಕ್ಕೆ ತಡವಾದರೆ ಮನಸ್ಸು ಬಳಲುವದು” ಎಂದು ಬೈಬಲ್ ಹೇಳುತ್ತದೆ. (ಜ್ಞಾನೋಕ್ತಿ 13:12) ನಿರೀಕ್ಷಣೆಗಳು ನೆರವೇರದಿರುವಾಗ, ಒತ್ತಡವು ಸಹಿಸಲಾಗದಷ್ಟು ತೀವ್ರವಾಗಿರಸಾಧ್ಯವಿದೆ. ನಾವು ನಮ್ಮ ನಿರೀಕ್ಷಣೆಗಳನ್ನು ಅವಾಸ್ತವಿಕವಾಗಿ ಉನ್ನತವಾಗಿಟ್ಟಾಗ ಇದು ಬಹುಮಟ್ಟಿಗೆ ಸಂಭವಿಸುತ್ತದೆ.
ಉದಾಹರಣೆಗೆ, ಪ್ರಾಪಂಚಿಕ ಸಂಪತ್ತನ್ನು ಗಳಿಸುವುದರ ಮೇಲೆ ಅವರ ಸಂತೋಷವು ಅವಲಂಬಿಸಿದೆಯೆಂದು ಅನೇಕರು ನಂಬುವಂತೆ ಜಾಹೀರಾತು ಮಾಧ್ಯಮಗಳು ವಂಚಿಸಿವೆ. ಒಬ್ಬನು ಪೂರೈಸಲಸಾಧ್ಯವಾದ ವಸ್ತುಗಳಿಗಾಗಿ ಹಾತೊರೆಯುವಾಗ, ಅದರ ಪರಿಣಾಮಗಳು ಒತ್ತಡ ಮತ್ತು ಆಶಾಭಂಗವಾಗಿರಸಾಧ್ಯವಿದೆ. ಹೀಗೆ ಬೈಬಲ್ ಈ ಬುದ್ಧಿವಾದವನ್ನು ಕೊಡುತ್ತದೆ: “ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.” (1 ತಿಮೊಥೆಯ 6:8) ಹೌದು, ನೀವು ಪಡೆದಿರಲು ಬಯಸುವ ಕಾರು, ಮನೆ, ಅಥವಾ ಪೀಠೋಪಕರಣವು ನಿಮಗೆ ಇಲ್ಲದಿರಬಹುದಾದರೂ, ನಿಮಗೆ ಇರುವುದನ್ನು ಗಣ್ಯಮಾಡಿರಿ. ಪ್ರಾಪಂಚಿಕ ನಿರೀಕ್ಷಣೆಗಳನ್ನು ಮಿತವಾಗಿಡಿರಿ.
ಜನರನ್ನು ಒಳಗೊಂಡಿರುವ ಅನುಚಿತವಾದ ನಿರೀಕ್ಷಣೆಗಳು ಸಹ ಒತ್ತಡವನ್ನು ತರಬಲ್ಲವು. ಉದಾಹರಣೆಗೆ, ತನ್ನ ಮೇಲ್ವಿಚಾರಣೆಯ ಕೆಳಗಿರುವವರಿಂದ ಕೆಲಸದ ಸಮಂಜಸವಾದ ಮಟ್ಟವನ್ನು ನಿರೀಕ್ಷಿಸುವ ಹಕ್ಕು ಒಬ್ಬ ಯಜಮಾನ ಅಥವಾ ಮೇಲ್ವಿಚಾರಕನಿಗಿರುವಾಗ, ಅವರಿಂದ ಪರಿಪೂರ್ಣತೆಯನ್ನು ನಿರೀಕ್ಷಿಸುವುದು ಮೂರ್ಖತನವಾಗಿದೆ. ಬ್ರೆಜಿಲ್ನ ಒಬ್ಬ ಫ್ಯಾಕ್ಟರಿ ಮೇಲ್ವಿಚಾರಕನಾದ ಕಾರ್ಲೋಸ್ ಹೇಳುವುದು: “ಜನರು ಹೇಗಿದ್ದಾರೋ ಹಾಗೆಯೇ ಅವರನ್ನು ನಾವು ಸ್ವೀಕರಿಸಬೇಕು. ಅವರು ಕೊಡಸಾಧ್ಯವಿರುವುದಕ್ಕಿಂತಲೂ ಹೆಚ್ಚನ್ನು ನೀವು ನಿರೀಕ್ಷಿಸುವುದಾದರೆ, ಅದು ಪ್ರತಿಯೊಬ್ಬರೂ ಅಸಂತೋಷಿಗಳಾಗುವಂತೆ ಮಾಡುವ ಮೂಲಕ ಒತ್ತಡದ ಮಟ್ಟವನ್ನು ಮೇಲೆತ್ತುವುದು.”—ಹೋಲಿಸಿರಿ ಯೆರೆಮೀಯ 17:5-8.
ಸಾಧನೆಯ ಒತ್ತಡವನ್ನು ನಿಯಂತ್ರಿಸಿರಿ
‘ಸಾಧನಾಭಿಮುಖವಾದ, ಸ್ಪರ್ಧಾತ್ಮಕ ನಡವಳಿಕೆಯು ಹೃದಯ ರೋಗದಲ್ಲಿ ಒಂದು ಗಮನಾರ್ಹವಾದ ಅಪಾಯದ ಅಂಶವಾಗಿದೆ’ ಎಂದು ಹೇಳುತ್ತಾ, ಒತ್ತಡದ ಇನ್ನೊಂದು ಮೂಲವನ್ನು ಲ್ಯಾಟಿನ್ ಅಮೆರಿಕ ಡೆಯ್ಲಿ ಪೋಸ್ಟ್ ಪ್ರಕಟಿಸುತ್ತದೆ. ಒಬ್ಬ ಯುವ ಅಕೌಂಟೆಂಟನು ಒಪ್ಪಿಕೊಳ್ಳುವುದು: “ಆಫೀಸಿನಲ್ಲಿ ಯಾವುದೇ ಬಲಹೀನತೆಗಳನ್ನು ಹೊರಪಡಿಸಲು ನಾನು ಹೆಚ್ಚು ಉದ್ವಿಗ್ನನೂ ಭಯಪಡುವವನೂ ಆಗಿದ್ದೇನೆ. ನಾನು ಅತ್ಯಾಸಕಿಯ್ತಿಂದ ಕೆಲಸ ಮಾಡುತ್ತೇನೆ ಮತ್ತು ಇತರರಿಂದ ಅಂಗೀಕಾರವನ್ನು ಪಡೆಯದಿರುವುದಕ್ಕಾಗಿ ನಾನು ಆಶಾಭಂಗಪಡುತ್ತೇನೆ.”
ಅಂಗೀಕಾರ ಮತ್ತು ಸಾಧನೆಗಾಗಿ ಅಂತಹ ಅನ್ವೇಷಣೆಗಳ ಕುರಿತು, ಸೊಲೊಮೋನನು ಹೇಳಿದ್ದು: “ಸಮಸ್ತಪ್ರಯಾಸವನ್ನೂ ಕೈಗೂಡುವ ಸಕಲ ಕಾರ್ಯವನ್ನೂ ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದೂ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ.”—ಪ್ರಸಂಗಿ 4:4.
ವಾಸ್ತವಿಕತೆಯೇನಂದರೆ, ಉದ್ಯೋಗ ಅಭಿವೃದ್ಧಿ ಅಥವಾ ಅಂಗೀಕಾರದ ವಿಷಯದಲ್ಲಿ ‘ವೇಗಿಗಳಿಗೆ ಯಾವಾಗಲೂ ಓಟದಲ್ಲಿ ಗೆಲವಿಲ್ಲ.’ (ಪ್ರಸಂಗಿ 9:11) ಬ್ರೆಜಿಲ್ನ ಆಫೀಸ್ ಕೆಲಸಗಾರ್ತಿಯಾದ ಮಾರಿಯ ಇದನ್ನು ಈ ರೀತಿಯಲ್ಲಿ ವಿವರಿಸುತ್ತಾಳೆ: “ಒಬ್ಬ ವ್ಯಕ್ತಿಗೆ ಸಾಮರ್ಥ್ಯವಿರಬಹುದು, ಆದರೆ ಸನ್ನಿವೇಶಗಳು, ಮತ್ತು ಬಹುಶಃ ಸ್ವಪಕ್ಷಪಾತವು ಸಹ ಬಡತಿಯನ್ನು ಅಡ್ಡಗಟ್ಟಬಲ್ಲವು.”—ಹೋಲಿಸಿ ಪ್ರಸಂಗಿ 2:21; 10:6.
ನಿಮ್ಮ ನಿರೀಕ್ಷಣೆಗಳನ್ನು ಮಿತವಾಗಿಡಿರಿ ಮತ್ತು ನಿಮ್ಮ ಪರಿಮಿತಿಗಳನ್ನು ಗ್ರಹಿಸಿರಿ. ಕೇವಲ ಅಭಿವೃದ್ಧಿಯನ್ನು ಹೊಂದಲಿಕ್ಕಾಗಿ ಕೆಲಸ ಮಾಡುವ ಬದಲಾಗಿ ಕೆಲಸವು ಸ್ವತಃ ತರಬಲ್ಲ ಆನಂದಕ್ಕಾಗಿ ಕೆಲಸ ಮಾಡಿರಿ. (ಪ್ರಸಂಗಿ 2:24) ನಿಜವಾಗಿಯೂ, ಸಾಧನೆಯ ಬೆನ್ನುಹತ್ತಿರುವ ವ್ಯಕ್ತಿಯು ಜೀವಿತದ ಅತ್ಯಧಿಕ ಆನಂದವನ್ನು ಕಳೆದುಕೊಳ್ಳುತ್ತಾನೆ ಮಾತ್ರವಲ್ಲ, ಯಶಸ್ಸನ್ನು ಗಳಿಸಲಿಕ್ಕಾಗಿ ತನ್ನ ಸ್ವಂತ ಪ್ರಯತ್ನಗಳನ್ನು ಶಿಥಿಲಗೊಳಿಸುವಷ್ಟೂ ಒತ್ತಡಕ್ಕೆ ಒಳಗಾಗಬಲ್ಲನು. ಹೀಗೆ ಡಾ. ಆರ್ನಲ್ಡ್ ಫಾಕ್ಸ್ ಸಲಹೆ ನೀಡಿದ್ದು: “ನಿಮ್ಮ ಕ್ಷೇತ್ರದಲ್ಲಿ ಅಅತ್ಯುತ್ಕೃಷ್ಟರಾಗಬೇಕೆಂದು ಬಯಸುವುದು ಪ್ರಶಂಸನೀಯ ಗುರಿಯಾಗಿದೆ, ಆದರೆ ಆ ಒಂದು ಆಲೋಚನೆಯು ನಿಮ್ಮ ಜೀವಿತವನ್ನು ಆಳುವಂತೆ ಅನುಮತಿಸದಿರಿ. ಪ್ರೀತಿಯ ಭಾವನೆಗಳನ್ನು, ನಗುವನ್ನು, ಮತ್ತು ಜೀವಿತದ ಆನಂದವನ್ನು ನೀವು ಅಲಕ್ಷಿಸುವುದಾದರೆ, ಅಥವಾ ಜೀವಿತವನ್ನು ಆನಂದಿಸಲು ನೀವು ಮರೆಯುವಷ್ಟು ಯಶಸ್ವಿಯ ಬೆನ್ನುಹತ್ತಿರುವುದಾದರೆ, ನೀವು ನಿಮ್ಮನ್ನೇ ಒತ್ತಡಕ್ಕೆ ಒಳಪಡಿಸಿಕೊಳ್ಳುತ್ತಿದ್ದೀರಿ.”
ನೀವು ಮಾಡಬಲ್ಲ ವಿಷಯಗಳು
ದೈನಂದಿನ ಒತ್ತಡಗಳನ್ನು ಪ್ರಯತ್ನಪಟ್ಟು ಓಡಿಸಲಿಕ್ಕಾಗಿ ಇನ್ನೊಂದು ಮಾರ್ಗವು ಹಾಸ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳುವುದೇ ಆಗಿದೆ. (ಪ್ರಸಂಗಿ 3:4) ಪ್ರಸನ್ನ ಮನೋಭಾವವನ್ನು ಹೊಂದಿರಲಿಕ್ಕಾಗಿ ನೀವು ವಿದೂಷಕರಾಗಿರಬೇಕಾಗಿಲ್ಲ. “ಹರ್ಷಿಸುವ ಹೃದಯವು ಒಂದು ಔಷಧದೋಪಾದಿ ಒಳಿತನ್ನು ಮಾಡುತ್ತದೆ, ಆದರೆ ಕುಗ್ಗಿರುವ ಆತ್ಮವು ಎಲುಬುಗಳನ್ನು ಒಣಗುವಂತೆ ಮಾಡುತ್ತದೆ.”—ಜ್ಞಾನೋಕ್ತಿ 17:22, NW.
ವಿಷಯಗಳನ್ನು ನಾಳಿನ ತನಕ ವಿಳಂಬಿಸುವ ಪ್ರವೃತ್ತಿಯು ನಿಮಗಿದೆಯೊ? ಕಟ್ಟಕಡೆಗೆ, ಕಾಲಹರಣಮಾಡುವಿಕೆಯು ಒತ್ತಡವನ್ನು ಕಡಿಮೆಗೊಳಿಸುವುದರ ಬದಲಾಗಿ ಅದನ್ನು ಅಧಿಕಗೊಳಿಸುತ್ತದೆ. ಬೈಬಲು ಸಲಹೆ ಕೊಡುವುದು: “ನಿಮ್ಮ ಕೆಲಸದಲ್ಲಿ ಅಲೆದಾಡಿ ಕಾಲಹರಣ ಮಾಡಬೇಡಿರಿ.” (ರೋಮಾಪುರ 12:11, NW) ನೀವು ಮಾಡಬೇಕಾಗಿರುವ ವಿಷಯಗಳ ಕುರಿತಾಗಿ ಬರಹದಲ್ಲಿ ಅಥವಾ ಮನಸ್ಸಿನಲ್ಲಿ ಒಂದು ಪಟ್ಟಿಯನ್ನು ಮಾಡಿರಿ. (ಜ್ಞಾನೋಕ್ತಿ 21:5) ತದನಂತರ ಯಾವ ವಿಷಯಗಳನ್ನು ಪ್ರಥಮವಾಗಿ ಮಾಡಬೇಕಾದ ಅಗತ್ಯವಿದೆಯೆಂಬುದನ್ನು ನಿರ್ಧರಿಸಿರಿ—ಮತ್ತು ಅವುಗಳನ್ನು ಮಾಡಲಾರಂಭಿಸಿರಿ.
ಆದರೂ, ನಿಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ, ನೀವಿನ್ನೂ ಉದ್ವೇಗ ಅಥವಾ ಒತ್ತಡವನ್ನು ಅನುಭವಿಸುವಲ್ಲಿ ಆಗೇನು? ನಿಮ್ಮ ಆಲೋಚನೆಯನ್ನು ಬದಲಾಯಿಸಲಿಕ್ಕಾಗಿ ನೀವು ಯೋಜಿಸಿದ ಒಂದು ಪ್ರಯತ್ನವನ್ನು ಮಾಡಬೇಕಾಗಬಹುದು. ಗತಿಸಿದ ತಪ್ಪುಗಳ ಕುರಿತು ಸತತವಾಗಿ ಚಿಂತಿಸದಿರಿ. ಪ್ರಸ್ತುತಕ್ಕೆ ಇದು ಅಧಿಕ ಒತ್ತಡವನ್ನು ಕೂಡಿಸಬಲ್ಲದು. ಒಬ್ಬ 19ನೆಯ ಶತಮಾನದ ತತ್ವಜ್ಞಾನಿಯು ಬರೆದದ್ದು: “ಜೀವಿತವನ್ನು ವಿಮುಖವಾಗಿ ಮಾತ್ರವೇ ಅರ್ಥಮಾಡಿಕೊಳ್ಳಸಾಧ್ಯವಿದೆ; ಆದರೆ ಅದು ಭವಿಷ್ಯತ್ತನ್ನು ಮನಸ್ಸಿನಲ್ಲಿಡುವುದರೊಂದಿಗೆ ಜೀವಿಸಲ್ಪಡಬೇಕು.” ನಮ್ಮ ಅಪಜಯಗಳಿಂದ ನಾವು ಕಲಿಯಬಲ್ಲೆವಾದರೂ, ನಮ್ಮ ಪ್ರಸ್ತುತ ಕ್ರಿಯೆಗಳು ನಮ್ಮ ಭವಿಷ್ಯವನ್ನು ರೂಪಿಸುತ್ತವೆ.
“ನನ್ನ ಮನೋವ್ಯಥೆಗಳನ್ನು ನಿವಾರಿಸು; ಸಂಕಟಗಳಿಂದ ನನ್ನನ್ನು ಬಿಡಿಸು” ಎಂದು ರಾಜ ದಾವೀದನು ಯೆಹೋವನಿಗೆ ಪ್ರಾರ್ಥಿಸಿದಾಗ, ಅವನು ಒತ್ತಡದ ಅತ್ಯುತ್ಕೃಷವ್ಟಾದ ಪರಿಹಾರಕ್ಕೆ ನಿರ್ದೇಶಿಸಿದನು. (ಕೀರ್ತನೆ 25:17) ಹೌದು, ತನ್ನ ಚಿಂತೆಗಳನ್ನು ಪರಿಹರಿಸಲಿಕ್ಕಾಗಿ ದಾವೀದನು ದೇವರಲ್ಲಿ ಭರವಸವನ್ನಿಟ್ಟನು. ದೇವರ ವಾಕ್ಯದ ಕುರಿತು ಓದಲು ಮತ್ತು ಮನನ ಮಾಡಲು ನೀವು ಸಮಯವನ್ನು ತೆಗೆದುಕೊಳ್ಳುವುದಾದರೆ, ನೀವು ದೇವರಿಗೆ ನಿಕಟವಾಗಿದ್ದೀರಿ ಎಂಬ ಭಾವನೆಯನ್ನು ತದ್ರೀತಿಯಲ್ಲಿ ಕಂಡುಕೊಳ್ಳುವಿರಿ. ದೇವರ ಉದ್ದೇಶಗಳನ್ನು ನೀವು ಗ್ರಹಿಸಲಾರಂಭಿಸಿದಂತೆ, ಅನೇಕ ಅನಗತ್ಯ ಚಿಂತೆಗಳಿಂದ ನಿಮ್ಮನ್ನು ಬಿಡಿಸುವಂತಹ, ಆತನ ಅಭಿರುಚಿಗಳನ್ನು ನಿಮ್ಮ ಜೀವಿತದಲ್ಲಿ ಪ್ರಥಮವಾಗಿಡುವಂತೆ ಪ್ರಚೋದಿಸಲ್ಪಡುವಿರಿ. (ಮತ್ತಾಯ 6:31, 33) ಒಂದು ಸಮಯದಲ್ಲಿ ಒಂದು ದಿನದ ಕುರಿತು ಚಿಂತಿಸಲು ಕಲಿಯಿರಿ. ಈ ದಿನದ ಚಿಂತೆಗಳಿಗೆ ನಾಳಿನ ಚಿಂತೆಗಳನ್ನು ಯಾಕೆ ಕೂಡಿಸಬೇಕು? ಯೇಸು ಇದನ್ನು ಈ ರೀತಿ ಸೂಚಿಸಿದನು: “ಆದುದರಿಂದ ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.”—ಮತ್ತಾಯ 6:34. (g94 9/8)
[ಪುಟ 27 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಒಬ್ಬ ವ್ಯಕ್ತಿಗೆ ಸಾಮರ್ಥ್ಯವಿರಬಹುದು, ಆದರೆ ಸನ್ನಿವೇಶಗಳು, ಮತ್ತು ಬಹುಶಃ ಸ್ವಪಕ್ಷಪಾತವು ಸಹ ಬಡತಿಯನ್ನು ಅಡ್ಡಗಟ್ಟಬಲ್ಲವು”
[ಪುಟ 26 ರಲ್ಲಿರುವ ಚಿತ್ರ ಕೃಪೆ]
The Metropolitan Museum of Art, Funds given by the Josephine Bay Paul and C. Michael Paul Foundation, Inc., and the Charles Ulrick and Josephine Bay Foundation, Inc., and the Fletcher Fund, 1967.