ಬೈಬಲಿನ ದೃಷ್ಟಿಕೋನ
“ಹೆಚ್ಚು ಬಲಹೀನ ಪಾತ್ರೆ” ಸ್ತ್ರೀಯರನ್ನು ಅವಮಾನಿಸುತ್ತದೊ?
“ಸ್ತ್ರೀಯರು ತಮ್ಮ ಅನುಭವ, ಸಾಮರ್ಥ್ಯ, ಮತ್ತು ಬುದ್ಧಿವಂತಿಕೆಗೆ ಬದಲಾಗಿ, ತಮ್ಮ ಲಿಂಗಜಾತಿಯಿಂದ ಏಕೆ ತೀರ್ಪುಮಾಡಲ್ಪಡುತ್ತಾರೆ?”—ಬೆಟಿ ಎ.
“ತಾವು ಹೆಚ್ಚು ಕಡಮೆಯ ಜೀವಿಗಳಾಗಿದ್ದೇವೆಂದು ಆಲೋಚಿಸುವಂತೆ ಸ್ತ್ರೀಯರು ಒಗ್ಗಿಸಲ್ಪಟ್ಟಿದ್ದಾರೆ.”—ಲಿನ್ ಎಚ್.
ಬೈಬಲಿನ “ಹೆಚ್ಚು ಬಲಹೀನ ಪಾತ್ರೆ” ಎಂಬ ಅಭಿವ್ಯಕ್ತಿಯು ಸ್ತ್ರೀಯರನ್ನು ಕೀಳಾಗಿಮಾಡುತ್ತದೊ? ಚರ್ಚೆಗೊಳಗಾಗಿರುವ ಬೈಬಲಿನ ವಚನವು 1 ಪೇತ್ರ 3:7, NW ಆಗಿದ್ದು, ಅದು ಹೇಳುವುದು: “ಗಂಡಂದಿರೇ, ಸ್ತ್ರೀಯು ಹೆಚ್ಚು ಬಲಹೀನ ಪಾತ್ರೆ ಎಂಬುದನ್ನು ಜ್ಞಾಪಕಮಾಡಿಕೊಂಡು ನಿಮ್ಮ ಹೆಂಡತಿಯರ ಸಂಗಡ ವಿವೇಕದಿಂದ ಒಗತನಮಾಡಿರಿ, ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವುದಿಲ್ಲ.”
ಪೇತ್ರನು ಜೊತೆ ಕ್ರೈಸ್ತರಿಗೆ ಈ ಮಾತುಗಳನ್ನು ಬರೆದಾಗ, ಪುರಾತನ ವಿಧರ್ಮಿ ಲೋಕದಲ್ಲಿ ಮಾತ್ರವಲ್ಲ, ಧರ್ಮಭ್ರಷ್ಟ ಯೆಹೂದಿ ಸಮುದಾಯದಲ್ಲಿ ಸಹ ಸ್ತ್ರೀಯರಿಗೆ ಬಹಳ ಕಡಿಮೆ ಹಕ್ಕುಗಳಿದ್ದವು. ಪೇತ್ರನು ಮತ್ತು ಆರಂಭದ ಕ್ರೈಸ್ತರು ಆಗ ಚಾಲ್ತಿಯಲ್ಲಿದ್ದ ಸ್ತ್ರೀಯರ ದೃಷ್ಟಿಕೋನವನ್ನು ಸಮರ್ಥಿಸುತ್ತಿದ್ದರೊ?
ಹೆಚ್ಚು ಬಲಹೀನ ಪಾತ್ರೆಗಳೊ?
ಪೇತ್ರನ ಮಾತುಗಳ ಪ್ರಥಮ ಶತಮಾನದ ಓದುಗರು “ಹೆಚ್ಚು ಬಲಹೀನ ಪಾತ್ರೆ” ಎಂಬ ಶಬ್ದವನ್ನು ಹೇಗೆ ಅರ್ಥೈಸುತ್ತಿದ್ದರು? ಪಾತ್ರೆಗಾಗಿರುವ ಗ್ರೀಕ್ ಶಬ್ದವು (ಸ್ಕ್ಯೂಆಸ್), ಗ್ರೀಕ್ ಶಾಸ್ತ್ರವಚನಗಳಲ್ಲಿ ಅನೇಕ ಬಾರಿ ಉಪಯೋಗಿಸಲ್ಪಟ್ಟಿತ್ತು ಮತ್ತು ವಿವಿಧ ಪೆಟ್ಟಿಗೆಗಳು, ಸಲಕರಣೆಗಳು, ಪಾತ್ರೆಗಳು, ಮತ್ತು ಉಪಕರಣಗಳಿಗೆ ಅದು ಸಂಬಂಧಿಸಿದೆ. ಸ್ತ್ರೀಯರನ್ನು “ಹೆಚ್ಚು ಬಲಹೀನ ಪಾತ್ರೆ” ಎಂದು ಕರೆಯುವುದರಿಂದಾಗಿ, ಪೇತ್ರನು ಸ್ತ್ರೀಯರನ್ನು ಕೀಳುಮಾಡುತ್ತಿರಲಿಲ್ಲ, ಏಕೆಂದರೆ ಗಂಡನು ಸಹ ಒಂದು ದುರ್ಬಲ ಅಥವಾ ಬಲಹೀನ ಪಾತ್ರೆಯಾಗಿದ್ದನೆಂದು ಅಭಿವ್ಯಕ್ತಿಯು ಸೂಚಿಸಿತು. “ಭೂಮಿಯ ಪಾತ್ರೆಗಳು” (2 ಕೊರಿಂಥ 4:7, NW) ಮತ್ತು “ಕರುಣಾ ಪಾತ್ರೆ”ಗಳಂತಹ (ರೋಮಾಪುರ 9:23) ಇತರ ಬೈಬಲ್ ವಚನಗಳು, ಸ್ತ್ರೀಯರನ್ನು ಮತ್ತು ಪುರುಷರನ್ನು ನಿರ್ದೇಶಿಸುವುದರಲ್ಲಿ ತದ್ರೀತಿಯ ಉಪಮೆಗಳನ್ನು ಉಪಯೋಗಿಸುತ್ತವೆ. ಲಿಂಗಜಾತಿಗಳಲ್ಲಿ ಸ್ತ್ರೀಯರನ್ನು “ಹೆಚ್ಚು ಬಲಹೀನ” ಎಂದು ಪೇತ್ರನು ವರ್ಣಿಸುತ್ತಾನೆ ನಿಜ. ಆದರೆ ರೋಮಾಪುರ 5:6 “ಬಲಹೀನ” ಎಂಬ ಶಬ್ದವನ್ನು ಎಲ್ಲಾ ಮಾನವರಿಗೆ—ಗಂಡು ಮತ್ತು ಹೆಣ್ಣು—ಅನ್ವಯಿಸಲಿಕ್ಕಾಗಿ ಉಪಯೋಗಿಸುತ್ತದೆ. ಆದುದರಿಂದ, ಆರಂಭದ ಕ್ರೈಸ್ತರು “ಹೆಚ್ಚು ಬಲಹೀನ ಪಾತ್ರೆ” ಎಂಬ ಶಬ್ದವನ್ನು ಸ್ತ್ರೀಯರಿಗೆ ಘನತೆ ಕುಂದಿಸುವಂತಹದ್ದಾಗಿ ಪರಿಗಣಿಸಿರಲಿಕ್ಕಿಲ್ಲ.
ಬದಲಾಗಿ, ಪೇತ್ರನ ಮಾತುಗಳು ಸ್ತ್ರೀಯರ ಸ್ಥಾನವನ್ನು ಮೇಲಕ್ಕೇರಿಸುವಂತಹವುಗಳಾಗಿ ವೀಕ್ಷಿಸಲ್ಪಡುತ್ತಿದ್ದವು. ಪೇತ್ರನ ದಿನದಲ್ಲಿ ಸ್ತ್ರೀಯರಿಗೆ ಗೌರವವು ಅಸ್ತಿತ್ವದಲ್ಲಿರಲಿಲ್ಲ. ದೇವರು ಬಹಳ ಸಮಯದ ಮುಂಚೆಯೇ ಮುಂಗಂಡಿದ್ದಂತೆ, ಅನೇಕವೇಳೆ ಗಂಡಂದಿರು, ತಮ್ಮ ಹೆಂಡತಿಯರ ಮೇಲೆ ಶಾರೀರಿಕವಾಗಿ, ಲೈಂಗಿಕವಾಗಿ, ಮತ್ತು ಭಾವನಾತ್ಮಕವಾಗಿ ಅಧಿಕಾರ ನಡೆಸಿದರು ಮತ್ತು ಅವರನ್ನು ದುರುಪಯೋಗಿಸಿದರು. (ಆದಿಕಾಂಡ 3:16) ಹೀಗೆ, ಕಾರ್ಯತಃ, ಕ್ರೈಸ್ತ ಗಂಡಂದಿರಿಗೆ ಪೇತ್ರನ ಸಲಹೆಯು ಈ ಅಭಿಪ್ರಾಯವನ್ನು ಕೊಟ್ಟಿತು: ಲೌಕಿಕ ಸಮಾಜವು ಪುರುಷರಿಗೆ ಕೊಟ್ಟಿರುವ ಅಧಿಕಾರವನ್ನು ಸ್ವಪ್ರಯೇಜನಕ್ಕಾಗಿ ಉಪಯೋಗಿಸಿಕೊಳ್ಳಬೇಡಿ.
“ಹೆಚ್ಚು ಬಲಹೀನ” ಎಂಬ ಶಬ್ದದ ಕಡೆಗೆ ಹೆಚ್ಚು ನಿಕಟವಾದ ಗಮನವನ್ನು ಹರಿಸೋಣ. ಪೇತ್ರನು ಇಲ್ಲಿ ಭಾವನಾತ್ಮಕವಾದ ಗುಣಲಕ್ಷಣಗಳಿಗಲ್ಲ, ಶಾರೀರಿಕ ಗುಣಲಕ್ಷಣಗಳಿಗೆ ನಿರ್ದೇಶಿಸುತ್ತಿದ್ದನು. ಪುರುಷರು ಬಲಹೀನ ಪಾತ್ರೆಗಳಾಗಿದ್ದಾರೆ; ಒಂದು ತುಲನಾತ್ಮಕ ಭಾವದಲ್ಲಿ, ಸ್ತ್ರೀಯರು ಹೆಚ್ಚು ಬಲಹೀನ ಪಾತ್ರೆಗಳಾಗಿದ್ದಾರೆ. ಅದು ಹೇಗೆ? ಮೂಳೆ ಮತ್ತು ಸ್ನಾಯುವಿನ ರಚನಾಕ್ರಮವು ಹೇಗಿದೆಯೆಂದರೆ, ಸಾಮಾನ್ಯವಾಗಿ ಪುರುಷರಿಗೆ ಹೆಚ್ಚು ಶಾರೀರಿಕ ಬಲವು ಕೊಡಲ್ಪಟ್ಟಿದೆ. ಆದಾಗ್ಯೂ, ಪೇತ್ರನು ನೈತಿಕ, ಆತ್ಮಿಕ, ಅಥವಾ ಮಾನಸಿಕ ಬಲದ ತುಲನೆಯನ್ನು ಮಾಡುತ್ತಿದ್ದನು ಎಂಬ ಅಭಿಪ್ರಾಯವು ಇಲ್ಲಿಲ್ಲ. ನೈಜವಾಗಿ, ಸಂಭವಿಸುವ ಘಟನೆಗಳಿಗೆ ಭಾವನಾತ್ಮಕ ಪ್ರತಿಕ್ರಿಯೆಗಳ ಮಟ್ಟಿಗೆ ಹೇಳುವುದಾದರೆ, ಸ್ತ್ರೀಯರು ಪುರುಷರಿಂದ ಭಿನ್ನರು—ಹೆಚ್ಚು ಬಲಹೀನರು ಅಥವಾ ಹೆಚ್ಚು ಬಲಶಾಲಿಗಳು ಆಗಿರಬೇಕೆಂದಿಲ್ಲ—ಎಂದು ಅವರನ್ನು ಅತ್ಯುತ್ತಮವಾಗಿ ವರ್ಣಿಸಬಹುದು. ಕೆಲವರನ್ನು ನಾವು ಹೆಸರಿಸುವುದಾದರೆ, ಸಾರಾ, ದೆಬೋರಾ, ರೂತ್, ಮತ್ತು ಎಸ್ತೇರ್—ಇವರಂತಹ ದೇವರ ಮಾರ್ಗವನ್ನು ಅನುಸರಿಸಿದ ಸ್ತ್ರೀಯರ ಪ್ರಬಲವಾದ ನೈತಿಕ ಗುಣ, ತಾಳ್ಮೆ, ಮತ್ತು ವಿವೇಚನಾಶಕ್ತಿಯನ್ನು ಬೈಬಲ್ ವಿವರಿಸುತ್ತದೆ. ತಮಗಿಂತಲೂ ಸ್ತ್ರೀಯರು ಹೆಚ್ಚು ಬುದ್ಧಿಶಕ್ತಿಯುಳ್ಳವರಾಗಿರಸಾಧ್ಯವಿದೆ ಎಂಬುದನ್ನು ಗ್ರಹಿಸುವುದರಲ್ಲಿ ನಮ್ರರಾದ ಪುರುಷರಿಗೆ ಯಾವ ಕಷ್ಟವೂ ಇರುವುದಿಲ್ಲ.
ಆದಾಗ್ಯೂ, ಸ್ತ್ರೀಯರನ್ನು “ಹೆಚ್ಚು ಬಲಹೀನರು” ಎಂದು ನಿರ್ದೇಶಿಸಿರುವುದು, ಅವರು ಕೆಳದರ್ಜೆಯ ವ್ಯಕ್ತಿಗಳೆಂಬದಾಗಿ ಸೂಚಿಸುತ್ತದೆಂದು ಕೆಲವರು ನಂಬುತ್ತಾರೆ. ಆದರೆ ಈ ಉದಾಹರಣೆಯನ್ನು ಪರಿಗಣಿಸಿ. ಒಬ್ಬ ವ್ಯಕ್ತಿಯ ಬಳಿ ಪ್ರಯೋಜನಕಾರಿಯಾದ ಎರಡು ಪಾತ್ರೆಗಳಿವೆ. ಒಂದು ಪ್ರಬಲವಾದದ್ದೂ, ಇನ್ನೊಂದು ಕಡಿಮೆ ಪ್ರಬಲವಾದದ್ದೂ ಆಗಿವೆ. ಎರಡನೆಯ ಪಾತ್ರೆಯು ಅಷ್ಟು ಪ್ರಬಲವಾಗಿರದ ಕಾರಣದಿಂದ ಅದಕ್ಕೆ ಹೇಗೋ ಕಡಿಮೆ ಮೌಲ್ಯವು ಕೊಡಲ್ಪಡುತ್ತದೊ? ನಿಜಕ್ಕೂ, ಪ್ರಬಲವಾದ ಒಂದಕ್ಕಿಂತಲೂ, ಕಡಿಮೆ ಪ್ರಬಲವಾದದ್ದು ಸಾಮಾನ್ಯವಾಗಿ ಹೆಚ್ಚು ಜಾಗ್ರತೆಯಿಂದ ಮತ್ತು ಗೌರವದಿಂದ ಉಪಚರಿಸಲ್ಪಡುತ್ತದೆ. ಆದುದರಿಂದ, ಸ್ತ್ರೀಯೊಬ್ಬಳು ಪುರುಷನೊಬ್ಬನಿಗಿಂತಲೂ ಕಡಿಮೆ ಶಾರೀರಿಕ ಬಲವನ್ನು ಹೊಂದಿರುವುದರಿಂದ, ಅವಳು ಕಡಿಮೆ ಮೌಲ್ಯವುಳ್ಳವಳಾಗಿದ್ದಾಳೊ? ನಿಶ್ಚಯವಾಗಿ ಇಲ್ಲ! ಪೇತ್ರನು “ಹೆಚ್ಚು ಬಲಹೀನ ಪಾತ್ರೆ” ಎಂಬ ಶಬ್ದವನ್ನು ಸ್ತ್ರೀಯರಿಗೆ ಕಳಂಕ ತರಲಿಕ್ಕಾಗಿ ಅಲ್ಲ, ಆದರೆ ಗೌರವವನ್ನು ಪ್ರೋತ್ಸಾಹಿಸಲಿಕ್ಕಾಗಿ ಉಪಯೋಗಿಸುತ್ತಾನೆ.
‘ಅದೇ ರೀತಿಯಾಗಿ . . . ಜ್ಞಾನಾನುಸಾರವಾಗಿ’
“ಅದೇ ರೀತಿಯಾಗಿ ಅವರೊಂದಿಗೆ [ತಮ್ಮ ಹೆಂಡತಿಯರು] ಜ್ಞಾನಾನುಸಾರವಾಗಿ ಒಗತನಮಾಡುವುದನ್ನು ಮುಂದುವರಿಸು”ವಂತೆ, ಪೇತ್ರನು ಗಂಡಂದಿರನ್ನು ಪ್ರೋತ್ಸಾಹಿಸಿದನು. ಯಾರ ‘ರೀತಿಯಂತೆ’? ಹಿಂದಿನ ವಚನಗಳಲ್ಲಿ ಪೇತ್ರನು, ತನ್ನ ಹಿಂಬಾಲಕರಿಗಾಗಿ ಯೇಸುವಿನ ಪ್ರೀತಿಯ ಆರೈಕೆಯ ಕುರಿತು ಚರ್ಚಿಸುತ್ತಿದ್ದನು, ಮತ್ತು ತಮ್ಮ ಹೆಂಡತಿಯರನ್ನು “ಅದೇ ರೀತಿಯಾಗಿ” ಆರೈಕೆ ಮಾಡುವಂತೆ ಅವನು ಗಂಡಂದಿರಿಗೆ ಉಪದೇಶಿಸಿದನು. (1 ಪೇತ್ರ 2:21-25; 3:7, NW) ಕ್ರಿಸ್ತನು ಸದಾ ತನ್ನ ಸ್ವಂತ ವೈಯಕ್ತಿಕ ಅಪೇಕ್ಷೆಗಳು ಮತ್ತು ಆದ್ಯತೆಗಳಿಗಿಂತಲೂ ತನ್ನ ಶಿಷ್ಯರ ಕ್ಷೇಮ ಮತ್ತು ಅಭಿರುಚಿಗಳನ್ನು ಮುಂದಾಗಿಟ್ಟನು. ಅವನು ಅವರ ಆತ್ಮಿಕ ಮತ್ತು ಶಾರೀರಿಕ ಕ್ಷೇಮದಲ್ಲಿ ಆಸಕ್ತಿಯುಳ್ಳವನಾಗಿದ್ದನು, ಮತ್ತು ಅವನು ಅವರ ದೌರ್ಬಲ್ಯಗಳನ್ನು ಗಣನೆಗೆ ತೆಗೆದುಕೊಂಡನು. ತಮ್ಮ ಹೆಂಡತಿಯರೆಡೆಗೆ “ಅದೇ ರೀತಿಯಾಗಿ” ವರ್ತಿಸಲಿಕ್ಕಾಗಿ, ಗಂಡಂದಿರು ಕ್ರಿಸ್ತನ ಪ್ರೀತಿಪೂರ್ಣ ಮಾದರಿಯನ್ನು ಅನುಸರಿಸಬೇಕು.
ಶಾಂತವಾಗಿ ಸಾಗುವ ವಿವಾಹವು ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ವಿವಾಹದ ಯಶಸ್ಸಿಗೆ ಹೇಗೆ ನೆರವಾಗಬೇಕೆಂಬುದನ್ನು ಗಂಡ ಮತ್ತು ಹೆಂಡತಿ ಇಬ್ಬರೂ ತಿಳಿದವರಾಗಿರಬೇಕು. ಆದುದರಿಂದ, ಗಂಡಂದಿರಿಗೆ ಪೇತ್ರನ ಬುದ್ಧಿವಾದವೇನಂದರೆ, ಅವರು ತಮ್ಮ ಹೆಂಡತಿಯರೊಂದಿಗೆ “ಜ್ಞಾನಾನುಸಾರವಾಗಿ” ಒಗತನಮಾಡುವುದನ್ನು ಮುಂದುವರಿಸಬೇಕು. ಯೆಹೋವನು ಮತ್ತು ಆತನ ಮಗನಾದ ಯೇಸು ಕ್ರಿಸ್ತನು, ಸ್ತ್ರೀಯರೊಂದಿಗೆ ಹೇಗೆ ವ್ಯವಹರಿಸಿದರೆಂದು ಗಂಡಂದಿರು ಅಭ್ಯಸಿಸುವ ಅಗತ್ಯವಿದೆ. ತಮ್ಮ ಹೆಂಡತಿಯರನ್ನು ಹೇಗೆ ಉಪಚರಿಸುವಂತೆ ಯೆಹೋವನು ಅವರಿಂದ ಬಯಸುತ್ತಾನೆಂಬುದನ್ನು ಅವರು ತಿಳಿದುಕೊಳ್ಳಬೇಕಾದ ಅಗತ್ಯವಿದೆ.
ಇದರೆ ಜೊತೆಗೆ, ಗಂಡಂದಿರು ತಮ್ಮ ಹೆಂಡತಿಯರನ್ನು—ಅವರ ಭಾವನೆಗಳು, ಸಾಮರ್ಥ್ಯಗಳು, ದೌರ್ಬಲ್ಯಗಳು, ಇಷ್ಟಗಳು, ಮತ್ತು ಅನಿಷ್ಟಗಳನ್ನು—ಚೆನ್ನಾಗಿ ಅರಿತುಕೊಳ್ಳುವ ಅಗತ್ಯವಿದೆ. ತಮ್ಮ ಹೆಂಡತಿಯರ ಬುದ್ಧಿಶಕ್ತಿ, ಅನುಭವ, ಮತ್ತು ಘನತೆಯನ್ನು ಗೌರವಿಸುವ ವಿಧಾನವನ್ನು ಅವರು ತಿಳಿಯಬೇಕಾದ ಅಗತ್ಯವಿದೆ. ಬೈಬಲ್ ಹೇಳುವುದು: “ಗಂಡಂದಿರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿ, ಅದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟ ಪ್ರಕಾರವೇ, ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸುವುದನ್ನು ಮುಂದುವರಿಸಿರಿ. ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ. ತನ್ನ ಹೆಂಡತಿಯನ್ನು ಪ್ರೀತಿಸುವವನು ತನ್ನನ್ನೇ ಪ್ರೀತಿಸಿಕೊಳ್ಳುವವನಾಗಿದ್ದಾನೆ. ಯಾರೂ ಎಂದೂ ಸ್ವಶರೀರವನ್ನು ಹಗೆಮಾಡಿದ್ದಿಲ್ಲ; ಎಲ್ಲರೂ ತಮ್ಮ ಶರೀರಗಳನ್ನು ಪೋಷಿಸಿ ಸಂರಕ್ಷಿಸುತ್ತಾರೆ.”—ಎಫೆಸ 5:25, NW, 28, 29.
ಅವರಿಗೆ ಮಾನವನ್ನು ಸಲ್ಲಿಸಿರಿ
ಪೇತ್ರನು ಸ್ತ್ರೀಯರಿಗೆ “ಹೆಚ್ಚು ಬಲಹೀನ ಪಾತ್ರೆ” ಎಂದು ನಿರ್ದೇಶಿಸಿದಾಗ, ಗಂಡಂದಿರು “ಅವರಿಗೆ ಮಾನವನ್ನು ಸಲ್ಲಿಸು”ವವರಾಗಿರಬೇಕು ಎಂದೂ ಹೇಳಿದನು. ಗ್ರೀಕ್ ಭಾಷೆಯಲ್ಲಿ, ನಾಮ ಪದವಾದ ಟೈಮೆ ಮಾನ, ಗಣ್ಯತೆ, ಮೌಲ್ಯ, ಅಮೂಲ್ಯತೆಯ ಭಾವನೆಯನ್ನು ಕೊಡುತ್ತದೆ. ಬೇರೆ ಮಾತುಗಳಲ್ಲಿ, ಮಾನವನ್ನು ಸಲ್ಲಿಸುವುದು ಕೇವಲ ಮೆಚ್ಚಿಕೆಯ ಪ್ರದರ್ಶನವಲ್ಲ, ಆದರೆ ಅವರಿಗೆ ಸಲ್ಲತಕ್ಕ ವಿಷಯದ ಅಂಗೀಕಾರವೇ ಆಗಿದೆ. ಪೌಲನು ಎಲ್ಲಾ ಕ್ರೈಸ್ತರಿಗೆ—ಪುರುಷರಿಗೆ ಹಾಗೂ ಸ್ತ್ರೀಯರಿಗೆ ಇಬ್ಬರಿಗೂ—ಈ ರೀತಿಯಾಗಿ ಉಪದೇಶ ಮಾಡಿದನು: “ಕ್ರೈಸ್ತ ಸಹೋದರರು ಅಣ್ಣತಮ್ಮಂದಿರೆಂದು ಒಬ್ಬರನ್ನೊಬ್ಬರು ಪ್ರೀತಿಸಿರಿ. ಮಾನಮರ್ಯಾದೆಯನ್ನು ತೋರಿಸುವದರಲ್ಲಿ ಒಬ್ಬರಿಗಿಂತ ಒಬ್ಬರು ಮುಂದಾಗಿರಿ.”—ರೋಮಾಪುರ 12:10.
ಯೆಹೋವ ದೇವರು ಸ್ತ್ರೀಯರನ್ನು ಕೇವಲ ಪ್ರದರ್ಶನದ ವಸ್ತುಗಳೋಪಾದಿ ಪರಿಗಣಿಸುವುದಿಲ್ಲ ನಿಶ್ಚಯ. ಇಸ್ರಾಯೇಲಿನಲ್ಲಿ, ವ್ಯಭಿಚಾರ, ಹಾದರ, ಪಶುಸಂಭೋಗ, ಮತ್ತು ಇತರ ಅಪರಾಧಗಳ ದೋಷಿಗಳಾಗಿದ್ದ ಪುರುಷರು ಹಾಗೂ ಸ್ತ್ರೀಯರಿಗೆ—ಇಬ್ಬರಿಗೂ—ದೇವರ ನಿಯಮಗಳು ಒಂದೇ ಸಮನಾಗಿ ಅನ್ವಯವಾಗುತ್ತಿದ್ದವು. (ಯಾಜಕಕಾಂಡ 18:6-17, 23, 29; 20:10-12) ಸ್ತ್ರೀಯರು ಸಬ್ಬತ್ತುಗಳು, ನಾಜೀರರನ್ನು ಆಳುತ್ತಿದ್ದ ನಿಯಮಗಳು, ಹಬ್ಬಗಳು, ಮತ್ತು ನಿಯಮಶಾಸ್ತ್ರದ ಇನ್ನಿತರ ಅನೇಕ ಒದಗಿಸುವಿಕೆಗಳ ಪ್ರಯೋಜನಗಳನ್ನು ಅನುಭವಿಸಬಹುದಿತ್ತು. (ವಿಮೋಚನಕಾಂಡ 20:10; ಅರಣ್ಯಕಾಂಡ 6:2; ಧರ್ಮೋಪದೇಶಕಾಂಡ 12:18; 16:11, 14) ತಾಯಿ ಹಾಗೂ ತಂದೆಗೆ ಮಾನಸಲ್ಲಿಸಬೇಕಿತ್ತು ಮತ್ತು ವಿಧೇಯತೆ ತೋರಿಸಬೇಕಿತ್ತು.—ಯಾಜಕಕಾಂಡ 19:3; 20:9; ಧರ್ಮೋಪದೇಶಕಾಂಡ 5:16; 27:16; ಜ್ಞಾನೋಕ್ತಿ 1:8.
ಅವಳ ನಂಬಿಗಸ್ತಿಕೆ, ಉದ್ಯೋಗಶೀಲತೆ, ಮತ್ತು ತನ್ನ ಅನೇಕ ಜವಾಬ್ದಾರಿಗಳನ್ನು ನೋಡಿಕೊಳ್ಳುವುದರಲ್ಲಿ ವಿವೇಕದ ಕಾರಣದಿಂದ, ಜ್ಞಾನೋಕ್ತಿಗಳು ಅಧ್ಯಾಯ 31ರ 10ರಿಂದ 31 ವಚನಗಳು “ಒಬ್ಬ ಗುಣವತಿಯಾದ ಸತಿ”ಯನ್ನು ಘನಪಡಿಸುತ್ತವೆ. ಕುಟುಂಬ ವ್ಯವಹಾರ, ಹಾಗೂ ಹಣಕಾಸಿನ ಇತರ ವಿಷಯಗಳನ್ನು ನಿರ್ವಹಿಸುವುದರಲ್ಲಿ ಅವಳ ಪಾಲ್ಗೊಳ್ಳುವಿಕೆಗಾಗಿ ಅವಳು ಯಥೋಕ್ತವಾಗಿ ಅಂಗೀಕರಿಸಲ್ಪಟ್ಟಿದ್ದಳು. ಸ್ತ್ರೀಯರನ್ನು ಕೇವಲ ಅಲಂಕಾರದ ವಸ್ತುಗಳೆಂದು ಅಭಿಪ್ರಯಿಸುವ ಕೆಲವು ಪುರುಷರ ಮನೋಭಾವಕ್ಕಿಂತ ಇದು ಎಷ್ಟು ಭಿನ್ನವಾಗಿತ್ತು! ತದನಂತರ, ಆದಿ ಕ್ರೈಸ್ತ ಸಭೆಯಲ್ಲಿ, ಕ್ರಿಸ್ತನ ಸಾಕ್ಷಿಗಳೋಪಾದಿ ಸ್ತ್ರೀಯರಿಗೆ ಪವಿತ್ರಾತ್ಮದಿಂದ ಶಕ್ತಿಯು ಕೊಡಲ್ಪಟ್ಟಿತ್ತು. (ಅ. ಕೃತ್ಯಗಳು 1:14, 15; 2:3, 4; ಹೋಲಿಸಿ ಯೋವೇಲ 2:28, 29.) ಹೀಗೆ, ಕೆಲವು ಸ್ತ್ರೀಯರು, ಪುರುಷರ, ಸ್ತ್ರೀಯರ, ಮತ್ತು ದೇವದೂತರ ಸ್ವರ್ಗೀಯ ನ್ಯಾಯಾಧಿಪತಿಗಳಾಗಿ ಪರಿಣಮಿಸುವಂತೆ ಪೂರ್ವ ನಿರ್ಧಾರಿತರಾಗಿದ್ದಾರೆ. (1 ಕೊರಿಂಥ 6:2, 3) ಸ್ತ್ರೀಯರಿಗೆ ಸಭಾ ಕೂಟದಲ್ಲಿ ಬೋಧಿಸಲಿಕ್ಕಿರಲಿಲ್ಲ ನಿಜ; ಆದಾಗ್ಯೂ, ಕ್ರೈಸ್ತ ಸ್ತ್ರೀಯರು ಪ್ರಾರ್ಥಿಸಬಹುದಾದ ಅಥವಾ ಪ್ರವಾದಿಸಬಹುದಾದ ಸನ್ನಿವೇಶಗಳು ಇದ್ದವು. ಅವರು ಯುವತಿಯರು, ಮಕ್ಕಳು, ಮತ್ತು ಸಭೆಯ ಹೊರಗಿರುವವರಿಗೆ ಬೋಧಕರಾಗಿ ನೇಮಿಸಲ್ಪಟ್ಟಿದ್ದರು.—ಮತ್ತಾಯ 24:14; 1 ಕೊರಿಂಥ 11:3-6; ತೀತ 2:3-5; ಹೋಲಿಸಿ ಕೀರ್ತನೆಗಳು 68:11.
ಅವರಿಗೆ ಮಾನವನ್ನು ಸಲ್ಲಿಸುವಂತೆ ಪೇತ್ರನು ಹೇಳಿದಾಗ, ಅವನ ಮನಸ್ಸಿನಲ್ಲಿದ್ದಂತಹ ವಿಷಯದ ಕುರಿತು ಇನ್ನೊಂದು ಒಳ್ಳೆಯ ನಿರ್ದೇಶಕವು 2 ಪೇತ್ರ 1:17 ರಲ್ಲಿ ಕಂಡುಬರುತ್ತದೆ. ಅಲ್ಲಿ “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ಮೆಚ್ಚಿದ್ದೇನೆ” ಎಂದು ಹೇಳುವುದರಿಂದ ಇತರರ ಸಮ್ಮುಖದಲ್ಲಿ, ಅವನ ಕುರಿತು ಒಪ್ಪಿಗೆಯನ್ನು ಅಭಿವ್ಯಕ್ತಿಸುವ ಮೂಲಕ ಯೆಹೋವನು ಯೇಸುವಿಗೆ ಘನಮಾನವನ್ನು ನೀಡಿದನು ಎಂದು ನಾವು ಓದುತ್ತೇವೆ. ತದ್ರೀತಿಯಲ್ಲಿ, ತನ್ನ ಹೆಂಡತಿಗೆ ಮಾನವನ್ನು ಸಲ್ಲಿಸುತ್ತಾನೆಂಬುದನ್ನು ಒಬ್ಬ ಗಂಡನು ತನ್ನ ಕಾರ್ಯಗಳ ಮೂಲಕ—ಸಾರ್ವಜನಿಕವಾಗಿ ಮತ್ತು ಖಾಸಗಿಯಾಗಿ—ತೋರಿಸಬೇಕು.
ಜೀವದ ಬಾಧ್ಯಸ್ಥರು
ಇತಿಹಾಸದ ಉದ್ದಕ್ಕೂ, ಸ್ತ್ರೀಯರು ಕಡಿಮೆ ಮಾನ ಅಥವಾ ಗೌರವಕ್ಕೆ—ಒಬ್ಬ ಸೇವಕಳೋಪಾದಿ, ಅಥವಾ ಪುರುಷರನ್ನು ತೃಪ್ತಿಪಡಿಸಲಿಕ್ಕಾಗಿರುವ ಕೇವಲ ಒಂದು ಸಾಧನದೋಪಾದಿ—ಅರ್ಹರೆಂದು ಪುರುಷರು ಅನೇಕವೇಳೆ ಅವಲೋಕಿಸಿದ್ದಾರೆ. ಸ್ತ್ರೀಯರಿಗೆ ಮಾನ ಸಲ್ಲಿಸುವುದರ ಕುರಿತಾದ ಕ್ರೈಸ್ತ ಭಾವನೆಯು, ಅವರನ್ನು ಗೌರವದ ಹೆಚ್ಚು ಉನ್ನತವಾದ ಮಟ್ಟಕ್ಕೆ ಏರಿಸುತ್ತದೆ ನಿಶ್ಚಯ. ಪೇತ್ರನ ಬುದ್ಧಿವಾದವು “ಸ್ತ್ರೀ ಜಾತಿಗೆ ಸಂಬಂಧಿಸಿ ಒಂದು ಬಹಳ ಪ್ರಾಮುಖ್ಯವಾದ ಸತ್ಯವನ್ನು ಒಳಗೊಂಡಿದೆ. ಕ್ರೈಸ್ತ ವ್ಯವಸ್ಥೆಯನ್ನು ಹೊರತು, ಧರ್ಮದ ಇತರ ಪ್ರತಿ ವ್ಯವಸ್ಥೆಯ ಕೆಳಗೆ, ಪ್ರತಿಯೊಂದು ರೀತಿಯಲ್ಲೂ ಸ್ತ್ರೀಯು ಪುರುಷನಿಗೆ ಕೆಳಗಿನವಳಾಗಿ ಎಣಿಸಲ್ಪಟ್ಟಿದ್ದಾಳೆ. ಕ್ರೈಸ್ತಧರ್ಮವು ಬೋಧಿಸುತ್ತದೇನಂದರೆ . . . ಧರ್ಮವು ತಿಳಿಸುವ ಎಲ್ಲಾ ನಿರೀಕ್ಷೆಗಳು ಮತ್ತು ವಾಗ್ದಾನಗಳಿಗೆ ಅವಳು ಅರ್ಹಳಾಗಿದ್ದಾಳೆ. . . . ಈ ಸರಳ ಸತ್ಯವು ಸ್ತ್ರೀ ಜಾತಿಯನ್ನು ಎಲ್ಲೆಡೆಯಲ್ಲೂ ಮಾನಹಾನಿಯಿಂದ ಮೇಲಕ್ಕೇರಿಸುವುದು, ಮತ್ತು ಮಾನವಕುಲದ ಸಾಮಾಜಿಕ ಅರ್ಧ ಭಾಗ ಕೆಡುಕಿಗೆ ತತ್ಕ್ಷಣದ ಅಂತ್ಯವನ್ನು ತರುವುದು” ಎಂದು ಬಾರ್ನೆಸ್ ನೋಟ್ಸ್ ಆನ್ ದ ನ್ಯೂ ಟೆಸ್ಟಮೆಂಟ್ ಗಮನಿಸುತ್ತದೆ.
ಪುರುಷರ ಮತ್ತು ಸ್ತ್ರೀಯರ ಒಡೆತನವು ಕ್ರಿಸ್ತನಿಗೆ ಇರುವುದರಿಂದ, ಗಂಡಂದಿರು ತಮ್ಮ ಹೆಂಡತಿಯರನ್ನು ಕ್ರಿಸ್ತನ ಸ್ವತ್ತಿನೋಪಾದಿ ಪೋಷಿಸಿ ಸಂರಕ್ಷಿಸುವುದಕ್ಕೆ ಗಂಭೀರವಾದ ಕಾರಣವಿದೆ. ಸ್ತ್ರೀಯರಿಗೆ “ಹೆಚ್ಚು ಬಲಹೀನ ಪಾತ್ರೆ” ಎಂದು ನಿರ್ದೇಶಿಸಿದ ಬಳಿಕ ಕೂಡಲೆ ಪೇತ್ರನ ಮಾತುಗಳು ಮುಂದುವರಿಯುವುದು: “ಅವರು ಜೀವವರಕ್ಕೆ ನಿಮ್ಮೊಂದಿಗೆ ಬಾಧ್ಯರಾಗಿದ್ದಾರೆಂದು ತಿಳಿದು ಅವರಿಗೆ ಮಾನವನ್ನು ಸಲ್ಲಿಸಿರಿ. ಹೀಗೆ ನಡೆದರೆ ನಿಮ್ಮ ಪ್ರಾರ್ಥನೆಗಳಿಗೆ ಅಡ್ಡಿಯಿರುವದಿಲ್ಲ.” (1 ಪೇತ್ರ 3:7ಬಿ) ಒಬ್ಬ ಗಂಡನು, ತನ್ನ ಹೆಂಡತಿಯನ್ನು ತಪ್ಪಾಗಿ ಉಪಚರಿಸುವುದು, ದೇವರೊಂದಿಗಿನ ಅವನ ಸಂಬಂಧಕ್ಕೆ—ಅವನ ಪ್ರಾರ್ಥನೆಗಳಿಗೆ ಅಡಿಯ್ಡನ್ನುಂಟುಮಾಡುವ ಮೂಲಕ—ಹಾನಿಯನ್ನುಂಟುಮಾಡುವುದು.
“ಹೆಚ್ಚು ಬಲಹೀನ ಪಾತ್ರೆ” ಎಂಬ ಶಬ್ದವು ಸ್ತ್ರೀಯರನ್ನು ಹೀನೈಸಲಿಕ್ಕಾಗಿದೆಯೆಂದು ಅರ್ಥೈಸಲು ಯಾವುದೇ ಆಸ್ಪದವಿಲ್ಲ. ಯೆಹೋವನು ಗಂಡಂದಿರನ್ನು ಮನೆವಾರ್ತೆಯ ಶಿರಸ್ಸಾಗಿ ನೇಮಿಸಿರುವಾಗ್ಯೂ, ಪುರುಷರು ಸ್ತ್ರೀಯರನ್ನು ತಪ್ಪಾಗಿ ಉಪಚರಿಸುವುದನ್ನು ಆತನು ಸಮ್ಮತಿಸುವುದಿಲ್ಲ. ಬದಲಾಗಿ, ಸ್ತ್ರೀಯು ಬಲಹೀನಳೆಂಬುದನ್ನು ತಿಳಿದುಕೊಂಡು, ಅವಳಿಗೆ ಆರೈಕೆ ಮತ್ತು ಮಾನವನ್ನು ವಿಸ್ತರಿಸಬೇಕೆಂದು, ಆತನು ಪುರುಷನಿಗೆ ಮಾರ್ಗದರ್ಶಿಸುತ್ತಾನೆ.
ಅವರನ್ನು ಕಡಿಮೆ ದರ್ಜೆಯ ವ್ಯಕ್ತಿಗಳೋಪಾದಿ ಉಪಚರಿಸದೆ, ಸ್ತ್ರೀಯರಿಗೆ ಮಾನವನ್ನು ಸಲ್ಲಿಸುವಂತೆ, ಬೈಬಲು ವಿವಾಹಿತರೂ ಒಂಟಿಗರೂ ಆದ ಪುರುಷರಿಗೆ ಮಾರ್ಗದರ್ಶನವನ್ನು ಕೊಡುತ್ತದೆ. ದೇವರನ್ನು ಶ್ರದ್ಧಾಪೂರ್ವಕವಾಗಿ ಆರಾಧಿಸುವ ಮತ್ತು ಒಬ್ಬರನ್ನೊಬ್ಬರು ಗೌರವಿಸುವ ಪುರುಷರು ಮತ್ತು ಸ್ತ್ರೀಯರು, ಯೆಹೋವನ ಕೈಯಿಂದ ಹೇರಳವಾದ ಆಶೀರ್ವಾದಗಳನ್ನು ಪಡೆಯುವರು.—ಹೋಲಿಸಿ 1 ಕೊರಿಂಥ 7:16. (g94 10⁄8)
[ಪುಟ 26 ರಲ್ಲಿರುವ ಚಿತ್ರ ಕೃಪೆ]
Miss G. E. K. / Artist: Alice D. Kellogg 1862-1900
Courtesy of Joanne W. Bowie